ಭಾಮಿನಿ
ಫಡೆಯೆನುತ ಖಳ ಕಂಸನನುಜೆಯ |
ನುಡಿಯ ಮನ್ನಿಸದಾ ಶಿಶುವ ಸೆಳೆ |
ದೊಡನೆ ಬಡೆವೆನೆನುತ್ತ ಕಾಲ್ಪಿಡಿದೆತ್ತಲಾ ಕ್ಷಣಕೆ ||
ನಡುದಲೆಯ ತುಳಿದಿರದೆ ಚಿಗಿದಳು |
ತಡೆಯದಂಬರಕಷ್ಟಭುಜದಲಿ |
ಮಡದಿ ನಿಂದಿಂತೆಂದಳಾ ನಭಮಧ್ಯಮಾರ್ಗದಲಿ || ೧ ||
ಖಳನೆ ಲಾಲಿಸು ನಿನ್ನ ಗಂಟಲ |
ಬಳೆಯ ಬಿಡಿಸುವ ವೀರನಿಳೆಯಲಿ |
ಬಳೆವುತಯ್ದನೆ ತನ್ನ ಕೊಲಲೇಸರವ ನೀನೆನುತ ||
ಲಲನೆಯಡಗಿದಳತ್ತ ಖೂಳರ |
ಕುಲಶಿರೋಮಣಿ ಶಿರಕೆ ಸಿಡಿಲ |
ಪ್ಪಳಿಸಿದಂತಳವಳಿವುತಿರ್ದನು ಬಿಗಿದ ಬೆರಗಿನಲಿ || ೨ ||
ರಾಗ ಭೈರವಿ ಝಂಪೆತಾಳ
ಚಂಡಿಕೆಯ ನುಡಿಗೆ ಭ್ರಮೆ | ಗೊಂಡು ಮರುಗುತ ಮನದೊ |
ಳಂಡಲೆವ ಚಿಂತೆಯಲಿ | ಬೆಂಡಾಗಿ ಖಳನು || ೧ ||
ಅಂಬರದ ನುಡಿಯು ಪುಸಿ | ಯೆಂಬುದಾಯಿತು ಮುನಿಪ |
ನೆಂಬವನ ಮಾತನಾ | ನಂಬಿ ಮರುಳಾದೆ || ೨ ||
ಅಳಲಿಸಿದೆ ತಂಗಿಯನು | ಬಳಲಿಸಿದೆ ಭಾವನನು |
ಕೊಲೆಗೆಡುಕನೆನಿಸಿ ಮ | ಕ್ಕಳ ಕೊಂದೆ ವ್ಯರ್ಥ || ೩ ||
ಎಂದಳುತ ಖಳನವರ | ಬಂಧನವ ಪರಿಹರಿಸಿ |
ಕಂದುಮೊಗದಿಂದ ಮಣಿ | ದಂದು ಪೇಳಿದನು || ೪ ||
ರಾಗ ಕಾಂಭೋಜ ಝಂಪೆತಾಳ
ಲಾಲಿಸೈ ವಸುದೇವ ನಿನ್ನ ನಾನಿನಿತು ದಿನ | ಖೂಳತನದಲಿ ಬಾಧಿಸಿದೆನು ||
ತಾಳದಿರು ದುಗುಡವನ್ನು ಮನದೊಳಗೆ ಬಹಳಿತ ಕೃ | ಪಾಳು ನೀನೆನುತ ಮರುಗಿದನು || ೧ ||
ಮರುಗದಿರು ಕಂಸ ನಿನ್ನಿಂದಾದುದೇನು ವಿಧಿ | ಬರೆದ ಬರೆಹವಿದಯ್ಸೆ ನಮಗೆ ||
ತೆರಳು ನೀ ಮನಕೆ ನೋವಿಲ್ಲೆನುತ ಶೌರಿಯುಪ | ಚರಿಸಿ ಬೀಳ್ಗೊಟ್ಟನಾತನನು || ೨ ||
ಬಂದು ಮನೆಗವನುದಯದಲಿ ದುಷ್ಟ ಮಂತ್ರಿಗಳೊ | ಳೆಂದನಿರುಳಾದ ಸಂಗತಿಯ ||
ಮುಂದೇನುಪಾಯವನು ಕಂಡಿರೆನೆ ಖಳರು ಜಡಿ | ದೆಂದರುಬ್ಬಣವನುಬ್ಬಿರಿದು || ೩ ||
ರಾಯಚಿಂತೆಯಿದೇಕೆ ಸಿಕ್ಕನಾ ವಿಷ್ಣು ಬಲು | ಮಾಯಾವಿಯಾಗಲದಕೇನು ||
ನೋಯಿಸಲು ನಿಜವ ತೋರಿಸದವನ ಕೊಲ್ಲುವ ಉ | ಪಾಯ ಬೇರುಂಟು ನಮ್ಮೊಳಗೆ || ೪ ||
ಪೊಡವಿಯೊಳು ಗೋದ್ವಿಜರ ಬಡೆದು ಶಿಶುಗಳನಿರಿದು | ತಡೆಯದ್ಯಜ್ಞಾದಿಕರ್ಮವನು ||
ಕೆಡಿಸಿದರೆ ತಾಳಲಾರದೆ ಬರ್ಪನಾಗವನ | ಕಡಿದು ಹರಹುವೆವೆಂದರವರು || ೫ ||
ವಾರ್ಧಿಕ
ಅಹುದು ತಪ್ಪಲ್ಲಮೀ ನುಡಿಯೆಂದೊಡಂಬಟ್ಟು |
ಅಹಿತನಂ ಕೊಲ್ವುದೀ ತೆರದಿಂದಲೆಂದವರ |
ಸಹಿತ ಸಂತೋಷದಿಂ ಬೀಳ್ಗೊಟ್ಟು ಕಂಸನಿರಲಿತ್ತಲಾ ಗೋಕುಲದೊಳು ||
ಮಹಿಳೆಯರ್ ಕಂಡಳುವ ಬಾಲನಂ ಕೊಂಡಾಡು |
ತಹಹ ಸಿರಿವಂತೆಯೊಮ್ಮೊಡತಿಯೆಂದೊಸಗೆಯಂ |
ಬಹಳಿತಾನಂದದಿಂ ನಂದಗುಸಿರಲ್ ಕೇಳುತತಿ ಸಂತಸಂ ಪಟ್ಟನು || ೧ ||
ಕಂದ
ಹರುಷದಿನಾ ನಂದಂ ದ್ವಿಜ | ವರರಂ ನಿಶಿಯೊಳಗೆ ಕರೆಸುತತುಲಿತ ಧನಮಂ ||
ಕರೆಕರೆದಿತ್ತಾನಂದದಿ | ಭರದಿಂದೋಲಾಡುತಿರ್ದನುತ್ಸಹದಿಂ || ೧ ||
ದ್ವಿಪದಿ
ಇಂತು ಮಹದುತ್ಸವದಿ ದಾನಗಳನಿತ್ತು |
ಅಂತರಂಗದಿ ಗೋಪ ಮನದಿ ಮುದವೆತ್ತು || ೧ ||
ಪುರಜನವ ಪರಿಜನವ ಮನ್ನಿಸುತಲಾಗ |
ಹರುಷದಲಿ ಜೋಯಿಸರ ಕರೆಸಿದನು ಬೇಗ || ೨ ||
ಅಣುಗನುದಿಸಿದ ವೇಳೆಯೆಂತೆನಲಿ ಕವರು |
ಗುಣಿಸಿ ನೋಡುತಲೆಂದರಧಿಕ ಕೋವಿದರು || ೩ ||
ನಂದ ಲಾಲಿಸು ನಿನ್ನ ಮಗನು ಲೋಕದಲಿ |
ಇಂದಿರಾಧವನಂತೆ ಮೆರೆವ ಗುಣಗಳಲಿ || ೪ ||
ಎನಲು ಕಳುಹಿದನವರಿಗುಡುಗೊರೆಯನಿತ್ತು |
ಮನದೊಳುಬ್ಬುತಲಿರ್ದ ಘನ ಹರುಷವೆತ್ತು || ೫ ||
ಸುದತಿಯರು ಕಮ್ಮೆಣ್ಣೆಯೊತ್ತಿ ಬಾಲಕಗೆ |
ಹದವೆಚ್ಚನುದಕದಲಿ ಮಜ್ಜನವನೆಸಗೆ ||೬||
ರೋಹಿಣಿಯು ಮೃದು ವಸನವನು ಹಾಸಿ ಮಗುವ |
ಮೋಹದಲಿ ಮಲಗಿಸಿದು ನೋಡುತಾನನವ || ೭ ||
ತನುಜ ತನ್ನವನಿಂಗೆ ತಕ್ಕನುಜನಿವನು |
ಎನುತ ಮುದ್ದಿಸುತಿರ್ದಳಾ ಬಾಲಕನನು || ೮ ||
ಭಾಮಿನಿ
ನಂದಗೋಪನು ಜಾತಕರ್ಮವ |
ನಂದನಗೆ ರಚಿಸಿದು ಮಹೋತ್ಸವ |
ದಿಂದ ಮಧುರಾಪುರಕೆ ನಡೆದನು ವರ್ಷವರ್ಷದಲಿ ||
ಸಂದು ಬರುತಿಹ ಕಷ್ಟವನು ನಲ |
ವಿಂದ ಕಂಸಂಗಿತ್ತು ಬೀಳ್ಗೊಂ |
ಡಂದು ಶೌರಿಯ ನುಡಿಸಿ ಕಳುಹಿಸಿಕೊಂಡನುಚಿತದಲಿ || ೧ ||
ರಾಗ ಮಾಧ್ಯಮಾವತಿ ತ್ರಿವುಡೆತಾಳ
ಇತ್ತ ಕಂಸನ ನೇಮದಲಿ ಮದ | ವೆತ್ತು ಪೂತನೆಯೆಂಬ ದಾನವಿ |
ಕೃತ್ರಿಮದಿ ಊರೂರ ಶಿಶುಗಳ | ಮೊತ್ತವನು ಸಂಹರಿಸುತ || ೧ ||
ಘೋರರೂಪವನುಳಿದು ಸುಂದರ | ನಾರಿಯಾಗಿ ಮನೋಜನುರುವ ಕ |
ಠಾರಿಯೆನೆ ಗೋಕುಲಕೆ ಬಂದಳು | ಭೂರಿಜನ ಬೆರಗಾಗಲು || ೨ ||
ಬರುತ ನೋಡಿದಳೆವೆಯನೊಯ್ಯನೆ | ಕುರುಹಿದೆನುತೊಳಪೊಕ್ಕು ನಂದನ |
ತರುಣಿಯಾಕಾರದಲಿ ಕಾವವ | ರರಿಯದಂದದಿ ಸಾರ್ದಳು || ೩ ||
ನಿಳೆಯದೊಳಗೆ ಯಶೋದೆಯಿಲ್ಲದ | ನೆಲೆಯರಿತು ಬಂದೆತ್ತಿಕೊಂಡಳು |
ಖಳರ ಕುಲಕಿವ ಮೃತ್ಯುವೆಂಬುದ | ತಿಳಿಯದಿದು ಮಗುವೆನ್ನುತ || ೪ ||
ತಿಂಬೆನೋ ಮೊಲೆಗೊಟ್ಟು ಜೀವವನ | ಕೊಂಬೆನೋಯೆನುತವಳು ಯೋಚಿಸು |
ತಂಬುಜಾಕ್ಷಗೆ ಘೋರತರ ವಿಷ | ದುಂಬಿರಿವ ಮೊಲೆಗೊಟ್ಟಳು || ೫ ||
ವಾರ್ಧಿಕ
ಅರಸ ಕೇಳಚ್ಯುತಂ ನೋಡುತವಳಾನನವ |
ನರಿಯದವನಂತೆ ಮೊಲೆಯುಣುತಿಳಾಭಾರಾಪ |
ಹರಣಕಾದಿಯಿದಾಗಲೂರರ್ಭಕರನಳಿವಳೆಂದುರು ಕಠೋರಮಾದ ||
ಗರಳಮಂ ಕಟವಾಯೊಳೊಸರಿಸುತ್ತವಳಸುವ |
ನಿರದೆ ಹೀರಿದರೊಡನೆ ಕಣ್ತಿರುಗಿ ಕಾಲ್ನಿಗುಚು |
ತೊರಲಿದಳ್ ದೂಡಿದಳ್ ನೋಡಿದಳ್ ಬೇಡಿದಳ್ ಬಾಡಿದಳ್ ಬಿದ್ದಳಿಳೆಗೆ || ೧ ||
ಕಂದ
ಘೋರಾರ್ಭಟೆಯಿಂದೊರಲು | ತ್ತಾ ರಕ್ಕಸಿಯಯ್ದೆ ಸಾರ್ದಳಚ್ಯುತ ನಡಿಯಂ ||
ನಾರಿಯರೆಲ್ಲರ್ ಬಂದು ಕು | ಮಾರನನೀಕ್ಷಿಸಿದರಸುರೆಯುರದೊಳ್ ಭಯದಿಂ || ೧ ||
ದಾನವಿ ದಾನವಿ ಹೋ ಹೋ | ಮಾನವಿಯಲ್ಲಿದೆ ಕೋ ಬಿದ್ದಳರೆ ಗಾವುದಕೈ ||
ಯೇನದ್ಭುತಮೆಂದೆತ್ತಿದ | ಳಾ ನಂದನ ರಾಣಿಯಣುಗನಂ ಮುದ್ದಿಸುತಂ || ೨ ||
ರಾಗ ತೋಡಿ ಅಷ್ಟತಾಳ
ಎತ್ತಿಕೊಂಡುರದೊಳಂಜಿತು ಮಗುವೆಂದಳ | ಲುತ್ತ ಯಶೋದೆಯಂದು ||
ಉತ್ತಮ ಮಂತ್ರಾವಾದಿಗಳಿಂದ ರಕ್ಷೆಗೆ | ಯ್ಯುತ್ತಿರ್ದಳಚ್ಯುತಗೆ || ೧ ||
ಗೋರೋಜನವ ತೇದು ತೊಡೆದು ಗೋಮೂತ್ರದೊ | ಳೋರಂತೆಮೆಯ್ದೊಳೆಸಿ ||
ನಾರಿಯರರಿತೌಷಧಿಯ ಮಾಡುತಿರ್ದರ | ಪಾರಮಹಿಮಗೊಲಿದು || ೨ ||
ನಾವೊಬ್ಬರಿಲ್ಲದ ವೇಳೆಯೊಳಸುರೆ ಬಂ | ದೀ ವಿಘಾತವನೆಸಗಿ ||
ಸಾವುದಾಶ್ಚರ್ಯವಲ್ಲವೆ ಕಂದನುಳಿದನು | ದೇವರ ದಯೆಯಿಂದಲಿ || ೩ ||
ಎನುತ ದೇವರಿಗೆ ವಿಶೇಷ ಪೂಜೆಗಳನಾ | ದಿನವೆ ಮಾಡಿಸುತೊಲಿದು ||
ತನಯಗೆ ಮೊಲೆಗೊಟ್ಟು ಮುದ್ದಿಸುತಿರುತಿರ್ದ | ಳೆನಿತು ಜನ್ಮದ ಫಲವೊ || ೪ ||
ಭಾಮಿನಿ
ನಂದನಿತ್ತಲು ಮಧುರೆಯಿಂದೆ |
ಯ್ತಂದು ಕಂಡತಿ ವಿಸ್ಮಯಂ ಪಡು |
ತೆಂದನಾ ವಸುದೇವನುತ್ಪಾತಗಳು ಗೋಕುಲದಿ ||
ಮುಂದೆ ಭರದಿಂದೆಚ್ಚರಿತು ನೀ |
ನಂದನನ ಸಲಹೆಂದನೆನ್ನೊಡ |
ನಿಂದು ನಿಜಮಾಯ್ತೊಮ್ಮೆಗುಳಿದನು ನಮ್ಮ ಪುಣ್ಯದಲಿ || ೧ ||
ಕಂದ
ಎನುತಾರಕ್ಕಸಿಯೊಡಲಂ | ಘನವೇಗದಿನಾಳ್ಗಳಿಂದೆ ತೆಗೆಸಿದು ನಂದಂ ||
ತನಯಗೆ ಶುಭಕರಮಾಗ | ಲ್ಕನುಪಮ ದಾನಗಳನಿತ್ತನತಿಮುದದಿಂದಂ || ೧ ||
ವಾರ್ಧಿಕ
ಮತ್ತೆ ಕೇಳೈ ಭೂಪನಾ ನಂದನಾನಂದ |
ವೆತ್ತಣುಗನಂ ಕೊಂಡು ಮುಂಡಾಡಿ ಮುದ್ದಾಡಿ |
ನೆತ್ತಿಯಂ ವಾಸನಿಸುತಪ್ಪಿದಂ ತಪ್ಪಿದಂ ರಕ್ಕಸಿಯ ಕಯ್ಯೊಳೆನುತ ||
ಪತ್ತುದಿನಮಾಗೆ ಶಾಸ್ತ್ರೋಕ್ತದಿಂ ಯುಕ್ತದಿಂ |
ಸ್ವಸ್ತಿವಾಚನವಗೆಯ್ದಂದದಿಂ ಚಂದದಿಂ |
ದುತ್ತಮಬುಧರ್ಗನ್ನಪಾನದಿಂ ದಾನದಿಂಸಾಕೆನಿಸಿ ಮನ್ನಿಸಿದನು || ೧ ||
ಕಂದ
ಆದಿನದಿರುಳಂಗನೆಯರ್ | ಮಾಧವನಂ ರನ್ನದೊಟ್ಟಿಲೊಳ್ ಮಲಗಿಸುತಂ ||
ಮೋದದೊಳಂ ಮಗುವೆಂದು ವಿ | ನೋದದೊಳಂ ತೂಗಿ ಪಾಡಿದರ್ ಮುದದಿಂದಂ || ೧ ||
ಜೋಗುಳಪದ
ಚಿನ್ನದ ಸರಣಿಪಣಿಗಳನು ತೂಗಿಕ್ಕಿ |
ರನ್ನ ಕೆತ್ತಿಸಿದ ತೊಟ್ಟಿಲ ತಂದು ಸಿಕ್ಕಿ ||
ಪನ್ನಗಶಯನನ ಮೆಲ್ವಾಸಿಗೊರಗಿಸಿ |
ಕನ್ನೆಯರೆಲ್ಲ ತೂಗಿದರೋಲಯಿಸಿ || ಜೋ ಜೋ || ೧ ||
ಜೋ ಜೋ ಕೋಮಲತರಂಕಾಯ ಜೋ ಜೋ |
ಜೋ ಜೋ ಸೋಮಸನಿಭವಕ್ತ್ರ ಜೋ ಜೋ ||
ಜೋ ಜೋ ರಾಮಣೀಯಕತೇಜ ಜೋ ಜೋ |
ಜೋ ಜೋ ರಾಮನನುಜ ಕೃಷ್ಣ ಜೋ ಜೋ || ಜೋ ಜೋ || ೨ ||
ಜೋ ಜೋ ನಂದಗೋಪನ ಮುದ್ದು ಕಂದ |
ಜೋ ಜೋ ತರುಣಿಯಶೋದೆಯಾನಂದ ||
ಜೋ ಜೋ ಸುಲಲಿತವದನಾರವಿಂದ |
ಜೋ ಜೋಯೆನುತ ತೂಗಿದರೊಲವಿಂದ || ಜೋ ಜೋ || ೩ ||
ನೀಲವರ್ಣದ ಮೋಹನಾಂಗನೆ ಜೋ ಜೋ |
ಲೋಲಲೋಚನದ ಸುಂದರರೂಪ ಜೋ ಜೋ ||
ಬಾಲಕತನದ ಪುಗೋಲನೆ ಜೋ ಜೋ |
ಶೀಲಸಂಪನ್ನ ಲಕ್ಷಣವಂತ ಜೋ ಜೋ || ಜೋ ಜೋ || ೪ ||
ಈ ರೀತಿಯಲಿ ನಾರಿಯರೆಲ್ಲ ಕೂಡಿ |
ನಾರಾಯಣನನು ಮಗುವೆಂದು ಮಾಡಿ ||
ಭೂರಿ ಸಂತಸದಿಂದ ದೇವರ ಬೇಡಿ |
ಓರಂತೆ ಪರಸಿದರುಲಿವುತ್ತ ಪಾಡಿ || ೫ ||
ಹರಕೆ ಹಾಡು
ಬಾಲ ಬಲ್ಲಿದನಾಗಿ ಶೀಲಸದ್ಗುಣನಾಗಿ |
ಬಾಲಕರಿಗೆ ಶಿರೋಮಣಿಯಾಗಿ ||
ಬಾಲಕರಿಗೆ ಶೀರೋಮಣಿಯಾಗಿ ನಲವಿಂದ |
ಶ್ರೀಲಕ್ಷ್ಮಿಯರಸನ ಕೃಪೆಯಿಂದ | ಸುಖಿಯಾಗು || ೧ ||
ಊರಿಗಧಿಕನಾಗಿ ಕೇರಿಗೆ ಹಿತವಾಗಿ |
ಸಾರಿ ಬಾಳುವರಿಗೊಡೆಯನಾಗಿ ||
ಸಾರಿ ಬಾಳುವರಿಗೊಡೆಯನಾಗಿ ಬಹುಗಾಲ |
ನಾರಾಯಣನ ಕರುಣದಿಂದ | ಸುಖಿಯಾಗು || ೨ ||
ತಾತನನೊಲಿಸುತ್ತ ಮಾತೆಯ ಸಲಹುತ್ತ |
ಭೂತಳಕೆಲ್ಲ ನೀ ದೊರೆಯಾಗು ||
ಭೂತಳಕೆಲ್ಲ ನೀ ದೊರೆಯಾಗಿ ಬಹುಗಾಲ |
ಸೀತಾರಾಮನ ದಯದಿಂದ ನೀ | ಸುಖಿಯಾಗು || ೩ ||
ವೇದಪಾಲಕನಾಗಿ ವಾದರಹಿತವಾಗಿ |
ಸಾಧುಸಜ್ಜನರಿಗೊಳ್ಳಿದೆನಾಗಿ ||
ಸಾಧುಸಜ್ಜನರಿಗೊಳ್ಳಿದನಾಗಿ ನಲವಿಂದ |
ಕೋದಂಡರಾಮನ ಕೃಪೆಯಿಂದ | ಸುಖಿಯಾಗು || ೪ ||
ದುಷ್ಟಮರ್ದನನಾಗಿ ಶಿಷ್ಟಪಾಲಕನಾಗಿ |
ಅಷ್ಟ ಐಶ್ವರ್ಯಭಾಗ್ಯವನುಂಡು ||
ಅಷ್ಟ ಐಶ್ವರ್ಯಭಾಗ್ಯವನುಂಡು ಬಹುಗಾಲ |
ಪಟ್ಟಾಭಿರಾಮನ ದಯದಿಂದ | ಸುಖಿಯಾಗು || ೫ ||
ಕಂದ
ಇಂತೆಂದು ಪಾಡಿ ಪರಸಿದ | ಕಾಂತೆಯರಂ ಮನ್ನಿಸುತಲತಿ ವೈಭವದಿಂ ||
ಅಂತರಿಸದೆ ರೋಹಿಣಿಯುರೆ | ಸಂತಸದಿಂ ವೀಳ್ಯಗೊಟ್ಟು ಬೀಳ್ಗೊಳಲುಂ || ೧ ||
ಭಾಮಿನಿ
ನಿರತ ಮಹದುತ್ಸವವಿನೋದದ |
ಲಿರುತಲಿಂತು ಯಶೋದೆ ತನ್ನಯ |
ತರುಣನನು ಮಲಗಿಸಿದು ಮನೆಗೆಲಸದೊಳಗೊಂದು ದಿನ ||
ವಿರಲು ಹರಿಯೆಚ್ಚರಿತವೋಲ್ ಮೆಯ್ |
ಮುರಿದು ನಿಗುಚುತ ಕೆಡಹಿದನು ಕಾ |
ಲ್ಬೆರಳುದಾಗಿಲಿ ಭಂಡಿಯಂತಿಹ ಘೋರದಾನವನ || ೧ ||
ವಾರ್ಧಿಕ
ಸಿಡಿಲ ಗರ್ಜನೆಯಂತೆ ಪೂಡಿರ್ದ ಭಂಡಿಯಡಿ |
ರಡಿ ಮಗುಚುತಿಳೆಗೊರಗೆ ಕೇಳ್ದು ಬಂದಬಲೆಯರ್ |
ನಡನಡುಗುತೇನಿದಚ್ಚರಿಯೆನಲ್ ಮಗುವಂ ಯಶೋದೆಯಂದೆತ್ತಿಕೊಂಡು ||
ಕಡುಭಯಂ ಕೊಂಡಿದೇತಕೆ ಬಿದ್ದುದಣುಗನಿದ |
ರಡಿಯಾಗದುಳಿದನೆಮ್ಮಯ ಪುಣ್ಯದಿಂದೆನು |
ತ್ತೊಡನಿರಲ್ ನಂದಾದಿಗಳ್ ಬೆರಗುದಾಳಿದರ್ ದೇವರುಳಿಸಿದನೆನ್ನುತ || ೧ ||
ಮಗುಳೊಂದು ದಿನಮರ್ಭಕಂಗೆ ಮೊಲೆಯೂಡುತ |
ಮುಗುದೆಯಿರೆ ಬೆಳೆದನಂಕದಲಿದಾಕಸ್ಮಿಕದ |
ಮಗುವೆನ್ನು ತಿಳುಹಿ ಪೋದಳು ಕೆಲಸಕಿತ್ತಂ ತೃಣಾವರ್ತನೆಂಬಸುರನು ||
ನಗವನಲ್ಲಾಡಿಸುತ್ತನಿಲನಾಕಾರದಿಂ |
ದಗಣಿತೋಪನನಂಬರಕ್ಕೊಯಿದನಿತ್ತಲೆವೆ |
ದೆಗೆಯದಂತೂರ್ಗೆ ಧೂಳ್ಗವಿದುದುರೆ ಬೀಸಿದುದು ಬಿರುಗಾಳಿಯೆಣ್ದೆಸೆಯೊಳು || ೨ ||
ಏನಿದುತ್ಪಾತಮೆಂದೆಲ್ಲವರ್ ಭೀತಿಯಿಂ |
ಮೌನದಿಂದಿರಲತ್ತಲಂಬರದೊಳಚ್ಯುತಂ |
ದಾನವನ ಗೋಣನಂಜಿದವೋಲ್ ಬಗೊತ್ತಲಾ ಗಾಳಿಯ ಜವಂ ತಣಿಯಲು ||
ಮಾನಿನಿ ನಿಜಾರ್ಭಕನನಿರಿಸಿದೆಡೆಯಲಿ ಕಾಣ |
ದೇನಾದನಣುಗನೆಂದಳುತಿರಲತ್ತಲವ |
ಸಾನಮಾಯ್ತಸುರಂಗೆ ಹರಿಯನುರದೊಳಗಾಂತು ಧರೆಗೆ ಧೊಪ್ಪನೆ ಕೆಡೆದನು || ೩ ||
ಕಂದ
ಕೆಡೆದಸುರನನಾತನ ಕೊರ | ಳೆಡೆಯಂ ಬಿಗಿದುರದೊಳಿರ್ಪ ನಿಜನಂದನನಂ ||
ಕಡುಭಯದಿಂ ನಂದಂ ಕಂ | ಡೊಡನೆತ್ತಿ ಮುದ್ದುಗೆಯ್ಯುತಿರ್ದಂ ಮಗನಂ || ೧ ||
ನೆತ್ತಿಯನಾಘ್ರಾಣಿಸುತ್ತೆನಿ | ತತ್ತು ಬೆದರ್ದನೊ ಕುಮಾರನವನುಪಟಳಕಂ ||
ಸತ್ತುಳಿದನೆಮ್ಮಯ ಭಾಗ್ಯದ | ಬಿತ್ತಿದೆ ಮೊಲೆ ಯೂಡೆನುತಲರಸಿಯೊಳಿತ್ತಂ || ೨ ||
ಭಾಮಿನಿ
ನಂದಗೋಪಿ ನಿಜಾರ್ಭಕಗೆ ಸಾ |
ನಂದದಲಿ ಮೊಲೆಯೂಡಿ ಮುದ್ದಿಸು |
ತಂದದಿಂದಿರಲತ್ತಲಾ ವಸುದೇವ ಮಧುರೆಯಲಿ ||
ಒಂದುದಿನ ಗಾರ್ಗ್ಯನನು ಕರೆದಾ |
ನಂದವೆಲ್ಲವನರುಹಿ ಗೋಪ್ಯದ |
ಲಂದು ಬೀಳ್ಗೊಡೆ ಗೋಕುಲಕೆನಡೆತಂದನಾ ಮುನಿಪ || ೧ ||
ರಾಗ ಶಂಕರಾಭರಣ ತ್ರಿವುಡೆತಾಳ
ಮುನಿಯ ಬರವನು ಕಂಡು ದೂರದೊ | ಳನುಪಮೋತ್ಸವದಿಂದ ತತ್ಪದ |
ವನಜಕಿದಿರೆದ್ದರಗಿ ನಂದನು | ವಿನಯದಿಂದ || ೧ ||
ಕರವಿಡಿದು ತಂದಾಸನದಿ ಕು | ಳ್ಳಿರಿಸಿ ಚರಣವ ತೊಳೆದು ತೀರ್ಥವ |
ಶಿರದೊಳಾಂತನು ಪೂಜಿಸಿದನತಿ | ಹರುಷದಿಂ || ೨ ||
ಮತ್ತೆ ಮಣಿವುತ ಪರಮಋಷಿ ನೀ | ನಿತ್ತ ಬಂದುದು ನಮ್ಮ ಪುಣ್ಯವೆ |
ನುತ್ತಲಾ ಬಾಲಕರನಡಗೆಡೆ | ವುತ್ತಲಾಗ || ೩ ||
ಭಾಮಿನಿ
ನೀವೇ ತನಯರಿಗಪ್ಪ ಕರ್ಮವ |
ನಾವುದುಂಟದ ಮಾಳ್ಪುದೆನೆ ವಸು |
ದೇವನೆಂದ ರಹಸ್ಯವನು ನಂದಂಗೆ ತಾ ತಿಳುಪಿ ||
ಭಾವದಲಿ ಹರಿಗೆರಗಿ ಮತ್ತಾ |
ಪಾವನರಿಗುರೆ ನಾಮಕರಣವ |
ನಾ ವಿಮಲಮತಿ ರಚಿಸಿದನು ವಿಧಿವಿಹಿತ ಮಾರ್ಗದಲಿ || ೧ ||
ಕಂದ
ಬಲರಾಮಂ ಹಿರಿಯವನೀ | ಚೆಲುವನಿವಂ ಕೃಷ್ಣನೆನುತ್ತಲಾಕುವರಗಂ ||
ತಳುವದೆ ಪೆಸರಿಟ್ಟು ಮುನಿ | ತಿಲಕಂ ತೆರಳಲ್ಕೆ ಸಲಹುತಿರ್ದಂನಂದಂ || ೧ ||
ರಾಗ ತೋಡಿ ಅಷ್ಟತಾಳ
ನಂದನೀಪರಿಯಲೀರ್ವರು ಬಾಲಕರ ಸಾ | ನಂದದಿ ಸಲಹುತಲಿ ||
ಚಂದದಿ ಬಾಲತೊಡುಗೆಯಾಭರಣವಿ | ಟ್ಟಂದವ ನೋಡುತಲಿ || ೧ ||
ಇರಲಂಬೆಗಾಲಿಕ್ಕಿ ಸರಿವುತ್ತಲೊಡಲನ್ನು | ಧರೆಯೊಳಿಟ್ಟೊಲೆವುತ್ತಲಿ ||
ಎರಡುಕಯ್ ವಿಡಿಯಲೇಳುತ ಬಳುಕುತ ಮೃದು | ಚರಣದಿ ನಡೆವುತಲಿ || ೨ ||
ಹಸಿದರಳುತ ಮೊಲೆಗೊಡೆ ತಾಯ ಮೊಗವ ನೀ | ಕ್ಷಿಸುತೋರೆಗಂಗಳಲಿ ||
ಪಸುಳೆಯಂದದಿ ಮೊಲೆಯುಣುತ ಕಲ್ಬೆರಳನಾ | ಡಿಸುತ ಗುಬ್ಬಿಯನಾಡುತ || ೩ ||
ತಾರಮ್ಮಯ್ಯಯೆನಲಂಗಯ್ಯನಾಡಿಸಿ | ತೋರುತ್ತ ತೋಳನಾಡಿ ||
ದೂರಕೋಡುತ ಬೇಗ ಬರುತ ಮೆಯ್ಯಲಿ ಬಿದ್ದು | ಭೂರಿಮೋಹಗಳ ಮಾಡಿ || ೪ ||
ಮುತ್ತನಿಡುತ ಕೊರಳನು ತಬ್ಬಿ ಮುಂಡಾಡು | ತತ್ತಿತ್ತಲೋಲಾಡುತ ||
ಎತ್ತಲು ನಗುತಿಳುಹಿದರಳುತೀಪರಿ | ಉತ್ತಮೋತ್ತಮರೀರ್ವರು || ೫ ||
ಭಾಮಿನಿ
ನೋಡಿ ದಣಿಯರು ಮಕ್ಕಳಿಗೆ ಮೊಲೆ |
ಯೂಡಿ ದಣಿಯರು ಮುದ್ದಿಸುತ ಮುಂ |
ಡಾಡಿ ದಣಿಯುರ ರನ್ನ ತೊಟ್ಟಿಲೊಳಿಟ್ಟು ತೂಗುತಲಿ ||
ಪಾಡಿದಣಿಯರು ಮರುಗೆ ಮೇಲುದ | ನೀಡಿ ದಣಿಯರು ಸತಿಯರೀರ್ವರು |
ಮಾಡಿರುವ ಪುಣ್ಯಕ್ಕೆ ಸರಿಯಿಲ್ಲರಸ ಕೇಳೆಂದ || ೧ ||
ರಾಗ ಕೇದಾರಗೌಳ ತ್ರಿವುಡೆತಾಳ
ರಾಮಕೃಷ್ಣರಾಡುತಿರ್ದರೊಲಿದು || ಪಲ್ಲವಿ ||
ನೇಮದಿಂ ನೋಳ್ಪ ತಾಯದಿರಿಗೆ ಲೀಲೆಯ ತೋರಿ || ಅನು ಪಲ್ಲವಿ ||
ಪುಟ್ಟ ಪುಟ್ಟಂಘ್ರಿಯನಿಡುತವನಿಯ ಮೇಲೆ |
ದಟ್ಟಡಿಯಿಂದೋಡುತೆಡವಿ ಬೀಳುತ ಮತ್ತೆ
ತಟ್ಟನೆದ್ದಿರ ನೋಡುತ್ತ | ತಮ್ಮೊಳಗೊಬ್ಬ |
ರಟ್ಟುತ್ತ ಬೆರಸ್ಯಾಡುತ್ತ | ತಮ್ಮೊಳಗೊಮ್ಮೆ |
ಸಿಟ್ಟಿಂದಗಲು ತೊಮ್ಮೆಯೊಟ್ಟಾಗಿಯಾಡುತ್ತ || ೧ ||
ಗಿಲಿಗೆಜ್ಜೆಯನು ಪಿಡಿದಲುಗಿ ತತ್ಥೈಯೆಂದು |
ನಲಿವುತ್ತ ಮಾತೆಯರನು ನೋಡಿ ಹಿಗ್ಗುತ್ತ |
ಲಳುಕಿ ಬಳುಕಿ ನಿಲ್ಲುತ್ತ | ಕೊರಳೊಳಿರ್ಪ |
ಹುಲಿಯುಗುರನು ಕಚ್ಚುತ್ತ | ಮಾಡುತಲಿರ್ಪ |
ಕೆಲಸವ ಮಾಣಮ್ಮ ಮೊಲೆಯೂಡೆನ್ನುತ್ತ || ೨ ||
ಹರಿವ ಹಾವನು ಪಿಡಿವುತ ಚೇಳ ತುಡುಕುತ್ತ |
ಉರಿಗೆ ಕಯ್ಯಿಕ್ಕುತಂಗಳದ ಧೂಳಲಿ ಬಿದ್ದು |
ಹೊರಳುತಲೊಡನೇಳುತ | ಕಟ್ಟಿದ ಬಾಲ |
ಕರುಗಳ ಮೇಲೇರುತ | ಬೇಡುವರಲ್ಲಿ |
ಬರೆ ಕಂಡದಕೊ ಗುಮ್ಮ ಬರುವನೆಂದೋಡುತ್ತ || ೩ ||
ಎರೆವೆನೆಂದರೆ ಸಿಕ್ಕದೋಡುತ್ತ ಸೆಳೆಕೊಂಡು |
ಬೆರಸಿ ಯಶೋದೆಯೆಯ್ತರೆ ನಂದನೆಡೆಗಾಗಿ |
ಭರದಿಂದ ಪೋಗಿ ನಿಂದು | ಅಯ್ಯೊ ನೋಡಮ್ಮ |
ನರಿದೆ ತಾ ಕೊಲುವಳೆಂದು | ದೂರುತಲಿಂದು |
ಪರಿಪರಿವಿಧದ ಲೀಲಾವಿನೋದಗಳಿಂದ || ೪ ||
Leave A Comment