ಕಂದ

ಈ ವಿಧಮಂ ಕಂಡಾ ವಸು |
ದೇವಂ ನಡನಡುಗುತಿಳಿವ ಕಂಬನಿಯಿಂದಂ ||
ಹಾ ವಿಧಿಯೆಯೆಂದು ಸುಯ್ವು |
ತ್ತಾ ವೀರನ ಕರೆದು ಖಡ್ಗಮಂ ಪಿಡಿದೆಂದಂ ||

ರಾಗ ನೀಲಾಂಬರಿ ರೂಪಕತಾಳ

ತಾಳು ತಾಳೈ ಕಂಸ | ಸುಮ್ಮನೇತಕೆ ನೀನೀ | ಬಾಲೆಯನಿರಿವೆ ಕೋಪದಲಿ ||
ಗಾಳಿಗೊಡ್ಡಿದ ದೀಪ | ದಂತಿರ್ಪುದೀದೇಹ | ಬಾಳ್ವಿಕೆ ನಿಜವಲ್ಲ ನರರ      || ೧ ||

ಎಂದಿಗಾದರು ಸಾವು | ಬಂದಲ್ಲದಿಹುದೆ ನೀ | ನಿಂದು ಸ್ತ್ರೀ ಹತ್ಯೆಯನೆಸಗಿ ||
ಕೊಂದನೀ ಪಾಪಿ ತಂ | ಗಿಯನೆಂಬ ಮಾತನ್ನು | ತಂದು ಕೊಳ್ಳಲು ಬೇಡ ವ್ಯರ್ಥ || ೨ ||

ಅಂಗವಲ್ಲಿದು ಹಿಂಸೆ | ಯೆಂಬುದೆ ಬಹುಪಾಪ | ಹೆಂಗೊಲೆಯದರಿಂದಲಧಿಕ ||
ತಂಗಿಯನಿರಿದ ಪಾ | ತಕಕೇನು ಪ್ರಾಯಶ್ಚಿ | ತ್ತಂಗಳಿಲ್ಲಿದು ಸಿದ್ಧ ಜಗದಿ   || ೩ ||

ಹುಟ್ಟಿದಾಗಲೆ ಸಾವ | ದಿನವನೆಣಿಸಿ ಬರೆ | ದಿಟ್ಟಿಪ್ಪನಜನು ಭಾಳದಲಿ ||
ಎಷ್ಟು ಪ್ರಯತ್ನವ | ಗೆಯ್ದರು ವಿಧಿಗೆಯ್ದ | ಕಟ್ಟಳೆಯನು ಮೀರಲರಿದು      || ೪ ||

ಇವಳ ಕೊಂದರೆ ಮುಂದೆ | ನಿನಗಿನ್ನು ಮರಣವಿ | ಲ್ಲವೆ ಪೇಳು ಮನದ ನಿಶ್ಚಯವ ||
ಅವಿವೇಕದಲಿ ಪಾಪ | ಕೆಳಸಿ ನರಕದಲ್ಲಿ |  ಭವಣೆಬಡುವುದೇಕೆ ವ್ಯರ್ಥ    || ೫ ||

ರಾಗ ಮಾರವಿ ಏಕತಾಳ

ಎನಲಾ ಕಂಸನು | ಕನಲುತಲೆಂದನು | ನಿನಗೀ ಧರ್ಮವನು ||
ವಿನಯದಿ ಕಲಿಸಿದ | ನಾವನದಾರಿಗೆ | ಯೆನೆತಿಹೆ ನೀನದನು    || ೧ ||

ಆರು ಕೊಲುವರಾ | ರಿಂದಾರಳಿವರು | ಬೇರ ಬಲ್ಲರಿಗೆಲೆಯ ||
ತೋರುವುದುಚಿತವೆ | ಸಾರತ್ತಲು ನಾ | ತೀರಚುವೆನು ಸತಿಯ || ೨ ||

ಮರೆಯದೆ ಲಾಲಿಸು | ವರಗುಸಿರುವುದೀ | ಪರಮ ರಹಸ್ಯವನು ||
ಒರೆಯದಿರೈ ಸಾ | ಕರಿತಿಹೆ ನಾನೀ | ಪರಿ ಯತ್ನಗಳನ್ನು        || ೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎನಲು ಮರುಗುತಲೆಂದನಕಟಾ | ವನಿತೆಯನು ಕೊಲ್ಲದಿರು ತನ್ನಯ |
ತನುವಿಗಂತಕನಾಗು ಬಿಡು ಸಾ | ಕೆನಲು ಕೇಳಿ        || ೧ ||

ಕಿಡಿಗರೆವ ಕಂಗಳಲಿ ಕಂಸನು | ನುಡಿದನೆಲವೋ ಕಾಲಗಾಯಕೆ |
ಸುಡುವರೇ ದಂತವನು ಜಾಣುವೆ | ನುಡಿಯದೇಕೈ     || ೨ ||

ಬಲ್ಲೆನೆಲ್ಲವ ಸಾಕು ನಿನ್ನಯ | ಬಲ್ಲವಿಕೆಯನು ಸೊರಹದಿರು ತ |
ನ್ನಲ್ಲಿ ಬಿಡೆನೀ ಸತಿಯನೆನುತ | ಖುಲ್ಲನಂದು || ೩ ||

ಜಡಿವುತಿರೆ ಖಂಡೆಯವ ಕಾಣುತ | ನಡುಗುತಾ ವಸುದೇವನಬಲೆಯ |
ಬಿಡಿಸುವೆನು ಎಂತೆನುತ ದುಗುಡವ | ಪಿಡಿದು ಮನದಿ || ೪ ||

ನೆನೆದನೊಂದಾಲೋಚನೆಯನೀ | ಘನವಿನಾಶಿಗೆ ತನ್ನಲುದಿಸಿದ |
ತನುಜರನು ಕೊಟ್ಟಾದರುಳುಹುವೆ | ವನಿತೆಯನ್ನು     || ೫ ||

ಭಾಮಿನಿ

ಸತಿಯನಿಂದಿಂಗುಳುಹೆವನು ನಿಜ |
ಸುತರನೀವೆನೆನುತ್ತಲಲ್ಲದೆ |
ಮತವಿಹೀನನು ಪಾಪಕಂಜುವನಲ್ಲ ಬಿಡನಿವಳ |
ಯತುನ ಬೇರಿನ್ನಿಲ್ಲ ವಿಧಿಕ |
ಲ್ಪಿತವೆನಗೆನುತ್ತೊಯ್ಯನಳಲು |
ತ್ತತುಳಗುಣಯುತನೆಂದನಾ ಕಂಸಂಗೆವಿನಯದಲಿ     || ೧ ||

ರಾಗ ಭೈರವಿ ಝಂಪೆತಾಳ

ಎಲೆ ಕಂಸ ಕೇಳು ನೀ | ಕೊಲದಿರನುಜೆಯ ನಿನ್ನ |
ಕೊಲುವಳಿವಳಲ್ಲಸುತ | ರಲಿ ಮರಣವೈಸೆ   || ೧ ||

ಪಡೆದ ಮಕ್ಕಳನೆಲ್ಲ | ಕೊಡುವೆನೈ ನಾ ನಿನಗೆ |
ನುಡಿಯಿದಕೆ ಹುಸಿಹೊಗದು | ದೃಢವಚನವೆನಲು      || ೨ ||

ತರುಣಿಯನು ಕೊಲ್ವೆನೆನೆ | ಒರಲುತಿಹೆ ನೀ ನಾಳೆ |
ತರಳರನು ತಂದೀವ | ಭರವಸಿಗನಹುದು    || ೩ ||

ಮರುಳು ಮಾತೇಕಿವಳ | ನಿರಿದು ಕಳೆಯದೆ ಬಿಡೆನು |
ಬರೆಯಾಸೆಯೇಕೆನುತ | ದುರುಳ ಕೋಪಿಸಲು         || ೪ ||

ಹುಸಿಯೆಂದು ಬಗೆಯದಿರು | ನುಸುಳಗಂಡಿಯ ಮಾತ |
ನುಸಿರಿ ಜಾರುವನಲ್ಲ | ಪಶುಪತಿಯಸಾಕ್ಷಿ     || ೫ ||

ನುಡಿದಾನು ತಪ್ಪಿದಡೆ | ಕಡಿದು ಕೆಡೆ ನಿನ್ನ ಕಯ್ |
ತಡೆವರಿಲ್ಲಿಂದೆನ್ನ | ಬಿಡು ಮಹೋತ್ಸವದಿ     ||೬||

ಭಾಮಿನಿ

ನಂಬು ನಿಶ್ಚಯವಿನ್ನು ಹಲವನು |
ಹಂಬಲಿಸಬೇಡೆಂದು ಕಂಸಗೆ |
ನಂಬುಗೆಯ ನೀಡಿದರೆ ಬಿಟ್ಟನು ಸತಿಯ ಮುಂದಲೆಯ ||
ತುಂಬನುಗಿದಂತಿಳಿವ ಕಂಗಳ |
ಕಂಬನಿಯಲಾ ಖಳನ ಬೀಳ್ಗೊಂ |
ಡಂಬುಜಾನನೆ ದೇವಕಿಗೆ ವಸುದೇವನಿಂತೆಂದ         || ೧ ||

ರಾಗ ಮಾಧುಮಾದವಿ ತ್ರಿವುಡೆತಾಳ

ತರುಣಿಯಳಲುವೆಯೇಕೆ ಸುಮ್ಮನೆ | ಹರಿಯ ಕೃಪೆಯೆಂತಿರ್ಪುದೆಂಬುದ |
ನರಿವರಾರುಂಟಂಜಬೇಡೆನು | ತೊರಸಿದನು ಕಂಬನಿಯನು     || ೧ ||

ನೆರೆದ ಬಂಧುಗಳೆಲ್ಲ ಗೋಳಿಡು | ತಿರಲು ಕಂಡನಿದೇನು ಫಣೆಯಲಿ |
ಬರೆದ ಬರೆಹವಿದೆಮಗೆ ನೀವ್ ಮಂ | ದಿರಕೆ ತೆರಳುವುದೆಂದನು || ೨ ||

ಎನುತಲೊಡಬಡಿಸುತ್ತಲವರನು | ಮನೆಗೆ ಕಳುಹಿದು ತನ್ನ ನಿಳೆಯಕೆ |
ವನಿತೆ ಸಹಿತಯ್ತಂದು ಮನದಲಿ | ನೆನೆವುತಿರ್ದನು ಹರಿಯನು  || ೩ ||

ವಾರ್ಧಿಕ

ಅರಸ ಕೇಳಿಂತಿರುತಿರಲ್ ಕೆಲವು ಕಾಲಕಾ |
ತರುಣಿ ಪಡೆದಳ್ ಕುವರನೊರ್ವನಂ ಕಂಡು ಸ |
ಚ್ಚರಿತನಹ ವಸುದೇವನುರೆ ಸತ್ಯಭಾಷೆಯಂ ಮೀರಲರಿಯದೆ ಮರುಗುತ ||
ತರಳನಂ ತೆಗೆದೆತ್ತಿಕೊಂಡು ಬಂದಾ ಕಂಸ |
ನರಮನೆಗೆಯಣುಗನಂ ಕೊಳ್ಳೆನಲ್ ಕಾಣುತಾ |
ದುರುಳನಚ್ಚರಿಯಿಂದಲಧಿಕ ವಿಸ್ಮಿತನಾಗಿ ತಲೆದೂಗುತಿಂತೆಂದನು       || ೧ ||

ರಾಗ ಶಂಕರಾಭರಣ ತ್ರಿವುಡೆತಾಳ

ಲಾಲಿಸೈ ವಸುದೇವ ನಿನ್ನ ವಿ | ಶಾಲ ಸತ್ಯಕೆ ಮೆಚ್ಚಿದೆನು ನಿ |
ನ್ನಾಲಯಕೆ ನಡೆ ತೆಗೆದುಕೊಂಡೀ | ಬಾಲಕನನು       || ೧ ||

ಅಳಲಿಸುವುದೇಕನುಜೆಯನು ತಾ | ನುಳಿದ ಮಕ್ಕಳ ಕೊಂದು ಫಲವೇ ||
ನಳಿವು ತನಗೆಂಟನೆಯ ಮಗನಲಿ | ತಿಳಿದೆವೈಸೆ       || ೨ ||

ಆ ಶಿಶುವ ತಾ ಹೋಗು ಬರಿದೇ | ಬೇಸರಿಕೆಗೊಳ್ಳದಿರು ಮಕ್ಕಳ |
ನೀ ಸಲಹಿಕೊಂಡಿಹುದು ಘನ ಸಂ | ತೋಷದಿಂದ     || ೩ ||

ಎನುತ ಬೀಳ್ಗೊಡಲತುಳ ಹರುಷದಿ | ಮನೆಗೆ ಬಂದಾ ಶೌರಿ ನಿಜನಂ |
ದನರ ಸಲಹುತ್ತಿರ್ದ ತನ್ನಯ | ವನಿತೆಸಹಿತ  || ೪ ||

ಭಾಮಿನಿ

ಎಲೆ ಪರೀಕ್ಷಿತ ಕೇಳು ಮತ್ತಾ |
ಲಲನೆ ಕೆಲವುದಿನಕ್ಕೆ ದಂಡಕೆ |
ಗಳಿಸಿದರ್ಥದ ವೋಲು ಪಡೆದಳು ಕುವರರೈವರನು
ಸಲಹಿಕೊಂಡಿರಲಿತ್ತ ನಾರದ |
ನಿಳಿದನಂಬರದಿಂದ ಕಂಸನ |
ನಿಳೆಯಕಮಲಪ್ರಭೆಯ  ಚಂದ್ರಮನಂತೆ ಥಳಥಳಿಸಿ   || ೧ ||

ಕಂದ

ಸುರಮುನಿಯಂ ದೂರದೊಳಂ |
ಪರಿಕಿಸುತಿದಿರೆದ್ದು ಮಣಿವುತಾ ಋಷಿಯಡಿಗಂ ||
ಕರವಿಡಿದಾಸನದೊಳ್ ಕು |
ಳ್ಳಿರಿಸಿದು ತತ್ಪದವನರ್ಚಿಸಿದನಾಕಂಸಂ      || ೧ ||

ರಾಗ ಸಾಂಗತ್ಯ ರೂಪಕತಾಳ

ಚರಣಪೂಜೆಯ ಮಾಡಿ ಮಣಿದಿರ್ಪ ಕಂಸನ | ಶಿರವಿಡಿದೆತ್ತಿ ನಾರದನು ||
ಹರುಷದಿ ಕುಶಲವ ಬೆಸಗೊಂಡಾತನನು ಕು | ಳ್ಳಿರಿಸಿಕೊಂಡಿಂತೆಂದನಾಗ         || ೧ ||

ಎಂಟನೆ ಗರ್ಭದಳಿಯನಿಂದ ಬಹುದೈಸೆ | ಕಂಟಕವೆಂದು ನಿಶ್ಚಯಿಸಿ ||
ನೆಂಟನ ಮರಳಿ ಬೀಳ್ಗೊಟ್ಟೆ ಬಲ್ಲವರಾ | ರುಂಟಚ್ಯುತನ ಮಹಿಮೆಯನು   || ೨ ||

ಎಂದು ಪುಟ್ಟುವನೆಂಬ ನಿಜವಾರಿಗಿಹುದೆ ಗೋ | ವಿಂದನತ್ಯಧಿಕ ಮಾಯಾವಿ ||
ಕಂದನನಿತ್ತು ಶೌರಿಯ ಬೀಳುಗೊಟ್ಟುದು | ಚಂದವಾಗಿರದಯ್ಯ ನೋಡು  || ೩ ||

ಭುವನದಲ್ಲಣ ಕಾಲನೇಮಿಯೆಂಬಸುರ ಮುಂ | ಭವದಲ್ಲಿ ನೀನಿದು ಸಹಜ ||
ಅವನಿಯೊಳಿದನರಿತವರಿಲ್ಲ ಬಲ್ಲೆನೀ | ಹವಣವನದರಿಂದ ನುಡಿದೆ         || ೪ ||

ಹಿತವಂತರೆನಗೆ ಯಾದವರೆಂದು ನಂಬಿ ನೀ | ಮತಿಗೆಟ್ಟಿರುವೆಯವರೆಲ್ಲ ||
ಹಿತಶತ್ರುಗಳು ನಿನಗಮರರು ನಿನ್ನೊಳ | ಗತಿ ವೈಭವದಿಂದ ಸೇರಿಹರು ||         || ೫ ||

ಹರಿಯ ನೇಮದಿ ಬಂದೀ ಧರೆಯೊಳುದಿಸಿ ನಿನ್ನ | ಮರಣವ ಹಾರಯಿಸುತಿಹರು ||
ಒರೆದಿರ್ಪೆನಂತರಂಗವನೆಂದು ಬೀಳ್ಗೊಂಡು | ಸುರಮುನಿಯಂದು ಸಾರಿದನು      ||೬||

ರಾಗ ಭೈರವಿ ಆದಿತಾಳ

ಸುರಮುನಿಯಿಂತೆನುತತ್ತ | ತಾ | ತೆರಳಲು ಖಳ ಗಜರುತ್ತ ||
ಪೊರೆಯುರ್ಚಿದ ಭುಜಗನನು | ಪೋ | ಲ್ದುರೆ ಕೋಪವ ತಾಳಿದನು        || ೧ ||

ಕರೆಸಿದು ವಸುದೇವನನು | ತಾ | ತರಿಸಿದು ತತ್ಪುತ್ರರನು ||
ತರುಣಿ ಮರುಗಲಾರ್ವರನು | ಬಡಿ | ದುರುಳಿಸಿದನು ಖಳವರನು         || ೨ ||

ಸೆರೆ ಸಂಕಲೆಯೊಳಗವರ | ತಾ | ನಿರಿಸಿಯುಳಿದ ಯಾದವರ ||
ಪರಿಪರಿ ವಿಧದಾಜ್ಞೆಯಲಿ | ಬಲು | ಮರುಗಿಸಿದನು ಖಾತಿಯಲಿ  || ೩ ||

ಭಾಮಿನಿ

ಅರಸ ಕೇಳಿಂತುಗ್ರಸೇನಾ |
ದ್ಯರನು ಸಂಕಲೆಯಿಂದ ಸೆರೆಯೊಳ |
ಗಿರಿಸಿದನು ಬರಿಸಿದನು ಬೆಂಬಲಕಖಿಳ ದಾನವರ ||
ದುರುಳ ಬಕ ಚಾಣೂರ ಶಕಟಾ |
ಸುರನಘಾಸುರ ಕೇಶಿ ಮೊದಲಾ |
ದರನು ನೆರಹಿದು ಕಂಸನಿರ್ದನುಗಾಢ ಗರ್ವದಲಿ       || ೧ ||

ವಾರ್ಧಿಕ

ಇಂತಾ ಖಳಂ ಬಾಣ ನರಕ ಮಾಗಧ ಸಾಲ್ವ |
ರಂ ತನಗೆ ಸಖ್ಯರಂ ಮಾಡಿಕೊಂಡಯ್ದೆ ಯದು |
ಸಂತತಿಯನಳಲಿಸುತ್ತಿರೆ ಭಯಂ ಕೊಂಡಯ್ದಿದರ್ ಕಂಡಕಡೆಗೆ ಹಾಯ್ದು ||
ಕಾಂತೆಯೊಂದೆಸೆ ರಮಣರೊಂದೆಸೆಯಲಾದುದೋ |
ರಂತೆ ಯಾದವರತ್ತಲಿತ್ತಲುಂ ಸೆರೆಯೊಳತಿ |
ಚಿಂತೆಯಿಂದಿರುತಿಪ್ಪ ದೇವಕಿಗೆ ಸಪ್ತಮದ ಗರ್ಭವೀಕ್ಷಿಸಲಾದುದು         || ೧ ||

ತರುಣಿ ದೇವಕಿಯ ಜಠರದೊಳಾಳ್ದನಾಜ್ಞೆಯಿಂ |
ದುರಗೇಂದ್ರನಂಶವಿರಲತ್ತಲಾ ಮಾಧವಂ |
ಕರೆದು ನಿಜಮಾಯೆಯೊಡಗಾ ಗರ್ಭಪಿಂಡಮಂ ಕೊಂಡಾಕೆಯರಿಯದಂತೆ ||
ಹಿರಿಯರಸಿ ರೋಹಿಣಿಯೆನಿಪ್ಪಳಾ ವಸುದೇವ |
ಗಿರುವಳಾ ಗೋಕುಲದೊಳಡಗಿಯವಳುದರದೊಳ |
ಗಿರಿಸದಂ ನೀನಾ ಯಶೋದೆಯುದರದೊಳುದಿಸಿ ಯನುಜೆಯಾಗೆನಗೆಂದನು      || ೨ ||

ನೀನಿಂತು ದುರ್ಗೆಯೆಂಬಭಿದಾನದೊಳ್ ಪುಟ್ಟಿ |
ಕಾನನನಗಂಗಳೊಳ್ ನೆಲಸಿರ್ದು ಪೂಜಿಸುವ |
ಮಾನವರಭೀಷ್ಟಮಂ ಕೊಡುತಲಿರು ದೇವಕಿಯ ಗರ್ಭದಿಂದವನಿಯೊಳಗೆ ||
ತಾನುದಿಸುವೆಂ ಕೃಷ್ಣನೆಂಬ ಪೆಸರಿಂದೆ ನಿ |
ದಾನಮಿದು ಪುಸಿಯಲ್ಲೆನಲ್ಕೊಡೆಯನಾಜ್ಞೆಯಂ |
ತಾನಾಂತು ಮಸ್ತಕದೊಳೆಂದಂತೆ ಮಾಡಿದಳ್ ಭೂಪ ಕೇಳ್ ಕೌತುಕವನು        || ೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇತ್ತ ಕಂಸನು ಗರ್ಭವಡೆದಾ | ವೃತ್ತವನು ಕೇಳುತ್ತ ತನ್ನಯ |
ಚಿತ್ತದಲಿ ಭಯವೆತ್ತು ಚಿಂತೆಗೆ | ತೆತ್ತು ಮನವ || ೧ ||

ಹರಿಯು ಬಲು ಕಪಟಿಗನು ಮೆರ್ಯರೆ | ದಿರಲು ಬಾರದೆನುತ್ತ ತಾನೇ |
ಸೆರೆಮನೆಯೊಳಿರ್ದಂತೆ ತಾ ಕಾ | ದಿರುಳು ಹಗಲು    || ೨ ||

ಹಸಿವು ತೃಷೆಗಳನುಳಿದು ನಿದ್ರೆಯ | ಘಸಣಿಯನು ಬಿಟ್ಟವನು ಚಿಂತೆಯ |
ಮುಸುಕಿನಿಂದಿರುತಿರ್ದನಾ ರ | ಕ್ಕಸರುಸಹಿತ         || ೩ ||

ಅತ್ತಲಾ ಮಾಧವನು ತನ್ನಯ | ಚಿತ್ತದಲಿ ಕಮಲಜಭವಾದ್ಯರಿ |
ಗಿತ್ತ ಭಾಷೆಯ ಸಲಿಸಬೇಹುದೆ | ನುತ್ತಲಾಗ  || ೪ ||

ತರುಣಿ ದೇವಕಿಯುದರದಲಿ ತಾ | ನಿರದೆ ನೆಲಸಿದನೇನೆಂಬೆನು ||
ಪರಮಪುರುಷನ ಮಹಿಮೆಯನು ಕೇಳ್ | ಧರಣಿಪಾಲ  || ೫ ||

ದ್ವಿಪದಿ

ದೇವಕೀದೇವಿಯುದರದೊಳಗಚ್ಯುತನು |
ಆವಾಸವಾದನೆಂದರಿತು ಕಮಲಜನು         || ೧ ||

ಶತಮಖಾದ್ಯಮರಸಂದೋಹಸಹಿತಂದು |
ನುತಿಗೆಯ್ವುತಿರ್ದರಾ ಗಗನದಲಿ ನಿಂದು      || ೨ ||

ಸ್ಫಟಿಕಕಲಶದ ದೀಪದಂತೆ ದೇವಕಿಯ |
ಜಠರದಲಿ ಹೊಳೆವುತಿರ್ದುದು ಬಿಂಬ ಹರಿಯ || ೩ ||

ಖಳ ಕಂಸನನುಜೆಯಂಗಚ್ಛವಿಯ ನೋಡಿ |
ತಿಳಿದನೀತನೆ ವೈರಿಯೆಂದು ಭಯಗೂಡಿ     || ೪ ||

ಅರೆನಿಮಿಷವೆಡೆಬಿಡದೆ ದುಷ್ಟಬಲಸಹಿತ |
ಸೆರೆಮನೆಯ ಕಾದಿರ್ದದಿನವ ಲೆಕ್ಕಿಸುತ      || ೫ ||

ವಾರ್ಧಿಕ

ಅರಸ ಕೇಳಿಂತಿರಲ್ ದೇವಕಿಯ ಬಸಿರಿಂಗೆ |
ತೆರಳಿದುದು ನವಮಾಸವನಿತರೊಳ್ ಶ್ರಾವಣಾ |
ಪರಪಕ್ಷದಷ್ಟಮಿಯೊಳಿಂದು ರೋಹಿಣಿಯೊಳಿದ್ದಿ ರುಳುದಯಿಸುವ ಸಮಯದಿ ||
ಧರಣಿಗವತರಿಸಿದಂ ಪುರುಷೋತ್ತಮಂಸುರರ್ |
ನೆರೆದಭ್ರದೊಳಗೆ ಜಯವೆಂದು ಸುಮವೃಷ್ಟಿಯಂ |
ಕರೆದಂಬುಜಭವಾದಿಗಳೆರಗಿ ನುತಿಸಿದರ್ ಜಗಕೆ ಮಂಗಲಮಾದುದು     || ೧ ||

ಭಾಮಿನಿ

ಹರಿಯ ಮಾಯಾಮಹಿಮೆಗಳನಾ |
ರರಿವರೈ ಕಂಸಾದಿ ಖಳರು |
ಬ್ಬರದ ನಿದ್ರೆಯಲಿರ್ದರಿತ್ತಲು ಜನಿಸಿದಾಕ್ಷಣವೆ ||
ಕರಚತುಷ್ಟಯದಿಂದ ಪೀತಾಂ |
ಬರನು ರವಿಶತಕೋಟಿತೇಜದಿ |
ಮೆರೆದಿರಲು  ವಸುದೇವ ಕಂಡಡಗೆಡೆದನಂಘ್ರಿಯಲಿ    || ೧ ||

ಕಂದ

ಭಾವಜಪಿತನಂಘ್ರಿಗೆ ವಸು | ದೇವಂ ಪೊಡಮಟ್ಟು ಹರುಷಪುಳಕದಿನಾಗಳ್ ||
ಪಾವನಚರಿತನ ಗುಣನಾ | ಮಾವಳಿಯಂ ನುತಿಸುತಿರ್ದನತಿಭಕ್ತಿಯೊಳಂ          || ೧ ||

ವಾರ್ಧಿಕ

ಜಯ ಜಯ ಮುಕುಂದ ನಿತ್ಯಾನಂದ ಗೋವಿಂದ
ಜಯ ಜಯ ಮುರಾರಿ ಭುವನೋದ್ಧಾರಿ ಭವದೂರಿ
ಜಯ ಜಯ ರಮೇಶ ರವಿಸಂಕಾಶ ಖಲನಾಶ ಜಯ ಕಾಮಜನಕ ರಾಮ
ಜಯ ಜಯ ಸುರೇಶಸನ್ನುತಿತೋಷ ಜಗದೀಶ
ಜಯ ಜಯ ಸುವೇದನಾದವಿನೋದ ನಿರ್ವಾದ
ಜಯ ಜಯ ವಿಹಂಗಪುಂಗವತುರಂಗ ಶುಭಾಂಗ ಜಯ ಜಯೆಂದೆರಗಿರ್ದನು      || ೧ ||

ರಾಗ ಮಾಧ್ಯಮಾವತಿ ತ್ರಿವುಡೆತಾಳ

ಇಂತು ಮಣಿದಿಹ ಶೌರಿಯನು ನೆಗೆ | ದಂತರಾತ್ಮಕನೆತ್ತಿ ತೋಷದಿ |
ದಂತಕಾಂತಿಯ ಬೆಳಕು ಥಳಥಳಿ | ಪಂತೆ ನಗುತಿಂತೆಂದನು   || ೧ ||

ಶೌರಿ ಕೇಳ್ ನೀ ಕಾಶ್ಯಪನು ವೃಂ | ದಾರಕರ ತಾಯ್ ಇವಳು ಪೂರ್ವದಿ |
ಭೂರಿತಪದಿಂದೆನ್ನ ಪೋಲ್ವ ಕು | ಮಾರನನು ಯಾಚಿಸಿದಿರಿ     || ೨ ||

ಆರಿಹರು ತನ್ನಂತೆ ತಾನೆ ಕು | ಮಾರನಹೆನೆಂದೆನುತ ನಿಮ್ಮಲಿ |
ಮೂರು ಬಾರಿಯು ಜನಿಸಿ ತೋರಿದೆ | ತೀರಿತಿನ್ನಾವಚನವು     || ೩ ||

ಕಂದ

ಎಂದಚ್ಯುತನಾಡಿದ ನುಡಿ | ಗಂದಾ ವಸುದೇವನಮಿತಸಂತಸದಿಂದಂ ||
ವಂದಿಸುತತಿಭಕ್ತಿಯೊಳಿಂ | ತೆಂದಂ ಖಳಕಂಸನುಪಟಳಮಂ ಭಯದಿಂ  || ೧ ||

ರಾಗ ಕೇದಾರಗೌಳ ಅಷ್ಟತಾಳ

ಎನ್ನುದರದಿ ದೇವ ನೀನುದಿಸುವೆಯೆಂಬು | ದನ್ನು ಕೇಳಿದು ಕಂಸನು ||
ಮುನ್ನ ಪುಟ್ಟಿದರನ್ನು ಕೊಂದು ನಿನ್ನುದಯವ | ನಿನ್ನು ಕಾದಿರ್ಪನಿಲ್ಲಿ        || ೧ ||

ಕೇಳಿದರೀಗಲೆ ಕೊಲುವನಾ ಖಳ ನಿನ್ನ | ಬಾಳಿಸುವಂದವನು ||
ಪೇಳಿ ರಕ್ಷಿಸಬೇಕು ತನ್ನನೆಂದೆರಗಿದು | ಗೋಳಿಡುತಳಲಿದನು   || ೨ ||

ಅಳಲದಿರೇಳೇಳು ಕೊಲುವರಾರೆನ್ನನು | ತಿಳಿಯದಿರ್ದವನೆ ನೀನು ||
ಕೆಲವು ವತ್ಸರಕಾತನುಳಿ ಯಲಿಕ್ರಮದಿಂದ | ಲಳಿವೆನಾ ಖೂಳನನು       || ೩ ||

ಇಲ್ಲಿರಿಸದಿರೆನ್ನ ಕೊಂಡೊಯ್ದು ಗೋಕುಲ | ದಲ್ಲಿಗೆ ಗಮಿಸಿ ನೀನು ||
ಅಲ್ಲಿ ತನ್ನಾಜ್ಞೆಯೊಳಿಂದು ನಂದನ ರಾಣಿ | ಯಲ್ಲಿ ಪುಟ್ಟಿಹಳು ಮಾಯೆ     || ೪ ||

ಆರೊಬ್ಬರರಿಯದ ಹಾಗೆನ್ನನಲ್ಲಿಟ್ಟು | ಭೋರನಾ ಶಿಶುವ ಕೊಂಡು ||
ಸಾರಿಲ್ಲಿಗದಕೆ ನಿರ್ವಿಘ್ನವ ನಾ ಮಾಳ್ಪೆ | ಬೇರೇನು ಭೀತಿ ಬೇಡ  || ೫ ||

ಭಾಮಿನಿ

ಬಿಸಜನಾಭನು ಶೌರಿಯೊಡನಿಂ |
ತುಸಿರಿ ತದ್ರೂಪನ್ನುಳಿದು ನರ |
ಶಿಶುಗಳಂದದಿ ಮಿಡುಕುತಿರ್ದನು ಮಹಿಮೆಯಿನ್ನೆಂತೊ ||
ವಸನವನು ಮರೆಮಾಡಿ ಮತ್ತಾ |
ಶಿಶುವನುರದೊಳಗವುಕಿ ನಿಗಳದ |
ಬೆಸುಗೆ ಸಡಲಿತು ಬಾಗಿಲುಗಳರೆದೆಗೆದವಾ ಕ್ಷಣಕೆ      || ೧ ||

ವಾರ್ಧಿಕ

ಪೊಡವೀಶನಾಲಿಸಾ ಶೂರಜಂ ಬಾಲನಂ |
ಪಿಡಿದೆತ್ತಿ ಕೊಂಡಯ್ದೆ ಪೊರಡಲ್ಕೆ ಕಣ್ಗೆ ಕ |
ಪ್ಪಿಡದ ಕತ್ತಲೆಗಳಂ ಸುರಿವ ಮಳೆಯಿಂದಡಿಯಿಡಲ್ ತೀರದೆಂಬಂತಿರೆ ||
ಒಡೆಯನಾಜ್ಞೆಯೊಳಹಿಪನವನಿಗಂ ಚಾಚಿ ತ |
ನ್ನೊಡಲ ನಭ್ರಕೆ ಪೆಡೆಯನೆತ್ತಿ ಕೊಡೆವಿಡಿಯಲಾ |
ಪೆಡೆವಣಿಯವೆಳಕಿಂದಲಯ್ತಂದು ಕಂಡನುರುಭರಿತ ಯಮುನಾನದಿಯನು         || ೧ ||

ವರಯಮುನೆಯಂಜುತಿಬ್ಬಗೆಯಾಗಿ ಮಾರ್ಗಮಂ |
ತೆರವುಗೊಡಲುತ್ತರಿಸಿ ನಡೆದನಾ ಗೋಕುಲದೊ |
ಳಿರುವವರ್ ತಿಳಿಯದಂದದೊಳಿರಿಸುತೀ ಶಿಶುವನಾ ಮಗುವನೆತ್ತಿಕೊಂಡು ||

ತಿರುಗಿದಂ ಪೋದ ಬಟ್ಟೆಯೊಳಯ್ದಿ  ವೇಗದಿಂ |
ಸೆರೆಮನೆಗೆ ಬರೆ ಬಾಗಿಲವಚಿದುವು ಶೃಂಖಲಾ |
ಚರಣಮಂ ಬಂಧಿಸಿತು ಮುನ್ನಿನಂತೇನೆಂಬೆನಚ್ಯುತನ ಮಹಿಮೆಗಳನು   || ೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೇಳು ಭೂವರ ಮತ್ತೆ ಮಾಯಾ | ಬಾಲಿಕೆಯು ಬಲುರವದಿ ಚೀರಿದ |
ಳಾಲಯದೊಳೊರಗಿರ್ದ ಖಳನದ | ಕೇಳಿ ಭರದಿ      || ೧ ||

ಪುಟ್ಟಿದನು ಪಗೆಯೆಂದು ನಿಶಿಯಲಿ | ಬಿಟ್ಟ ಮಂಡೆಯೊಳಿರದೆ ಬಲು ಬುಸು |
ಗುಟ್ಟುತೇಳುತ ಬೀಳುತವೆ ಕಂ | ಗೆಟ್ಟು ಭಯದಿ        || ೨ ||

ತಡಹುತೆಡಹುತ ಬಂದು ಬಾಗಿಲ | ನೊಡೆದು ಹುಂಕರಿಸುತ್ತ ಶಿಶುವನು |
ಕೊಡು ಕೊಡೆನುತಾರ್ಭಟಿಸಿ ನಿಂದನು | ಘುಡುಘುಡಿಸುತ        || ೩ ||

ಕಂಡು ದೇವಕಿ ಮನದೊಳಗೆ ಭಯ | ಗೊಂಡಳುಕಿ ಬಾಲಿಕೆಯನವುಕಿದು |
ದಂಡದಂತಡಿಗೆರಗಿ ಪೇಳಿದ | ಳಂಡಲೆವುತ  || ೪ ||

ರಾಗ ಘಂಟಾರವ ಅಷ್ಟತಾಳ

ಅಣ್ಣಯ್ಯ ಕೊಲ್ಲಬೇಡ | ಕಡೆಯಲೊಂದು | ಹೆಣ್ಣು ಹುಟ್ಟಿಹುದು ನೋಡಾ ||
ಪುಣ್ಯವಂತನೆ ನಿನ್ನ | ಸೊಸೆಯೆಂದೆನಿಸುತೆನ್ನ | ಕಣ್ಣಮುಂದಿರೆಲೊರ್ವಳು | ದಯಾಳು       || ೧ ||

ಪಡೆದ ಮಕ್ಕಳನೆಲ್ಲ | ಬರಿದೆ ಕೊಂದೆ | ಕಡೆಗೆ ಹೆಣ್ಣುದಿಸಿತಲ್ಲ | ಕಡು ಪಾಪಿಯಾನಯ್ಸೆ |
ನುಡಿದೀಗ ಫಲವೇನೀ | ಹುಡುಗಿಯ ಪಾಲಿಸಯ್ಯ | ದಮ್ಮಯ್ಯ  || ೨ ||

ಅಶರೀರವಾಣಿಯಂದು | ಎನ್ನೆಂಟನೆ | ಬಸಿರಿನ ಮಗನು ಬಂದು ||
ಕುಸುರಿ ತರಿವ ನಿನ್ನ | ನೆಂದುಸಿರಿದ ಮಾತು | ಪುಸಿಯಾಯಿತಯ್ಯ ನೋಡು | ದಯೆಮಾಡು          || ೩ ||