ಶ್ರೀಕೃಷ್ಣ ಬಾಲಲೀಲೆ
ಶಾರ್ದೂಲವಿಕ್ರೀಡಿತಂ
ಶ್ರೀಗೋಪೀಜನಜಾಲಮೋಹನಮಹಾಮಂತ್ರೌಷಧಂ ಸೌಖ್ಯದಂ
ವಾಗೀಶಾದಿಸುರೌಘವಂದಿತಪದಂ ವಾತಾಸಿಗೇಹಂ ಹರಿಮ್ |
ಯೋಗೀಂದ್ರಾರ್ಚಿತಪಾದಪದ್ಮಯುಗಳಂ ಯೋಗೇಶ್ವರಂ ಈಶ್ವರಂ
ಗೋಗೋಪಾಲಕಪಾಲನೀವುದೆಮಗಂ ಸುಜ್ಞಾನಸೌಭಾಗ್ಯಮಮ್ ||
ವಾರ್ಧಿಕ
ಶಿವನಂ ಶಿವಾಕಾಂತನಂ ಸದಾಶಾಂತಂ |
ಭವದೂರನಂ ಭರ್ಗನಂ ಭೂತವರ್ಗನಂ |
ರವಿಕೋಟಿಸಂಕಾಶನಂ ಸರ್ಪಭೂಷನಂ ಭೀಮನಂ ಜಿತಕಾಮನಂ ||
ಭುವನಪಾವನಚರಿತನಂ ಜಗದ್ಭರಿತನಂ |
ದಿವಿಜೇಶನುತಿ ಪಾತ್ರನಂ ಫಾಲನೇತ್ರನಂ |
ಶವಭಸ್ಮಲಿಪ್ತಾಂಗನಂ ಮಹಾಲಿಂಗನಂ ನುತಿಸಿ ಸನ್ಮತಿ ಪಡೆವೆನು || ೧ ||
ಭಾಮಿನಿ
ಕರಿವದನ ಕರುಣಾಳು ಕಲ್ಮಷ |
ಹರ ಕಲಾಸಂಪೂರ್ಣ ಕಾಮಿತ |
ವರದ ಕಂಜದಳಾಕ್ಷಮಿತ್ರ ಪವಿತ್ರತರಗಾತ್ರ ||
ಪರಮಮಂಗಳಮೂರ್ತಿ ಪಾವನ |
ಚರಿತ ಪದ್ಮಜವಂದ್ಯ ಪರಮೇ |
ಶ್ವರಕುಮಾರಕ ಮಾಳ್ಕೆಮಗೆ ನಿರ್ವಿಘ್ನತೆಯನೊಲಿದು || ೧ ||
ಕಂದ
ಕಮಲಜಗೆರಗಿದು ಪಾರ್ವತಿ |
ರಮೆಶಾರದೆಯರಿಗೆ ಮಣಿವುತ್ತತಿಭಕ್ತಿಯೊಳಂ ||
ಸುಮನಸರಿಗೆ ತಲೆವಾಗಿಯೆ |
ನಮಿಸುವೆ ಸದ್ಗುರುವಿನಂಘ್ರಿಕಮಲದ್ವಯಕಂ || ೧ ||
ದ್ವಿಪದಿ
ಮುನಿಪ ವೇದವ್ಯಾಸನನು ಮನದಿ ನೆನೆದು |
ಘನಮಹಿಮ ಶುಕಯೋಗಿಯಂಘ್ರಿಗಾಂ ಮಣಿದು || ೧ ||
ವರ ಭಾಗವತಕಥನದೊಳಗೆ ಮಾಧವನು |
ಧರೆಗೆ ಕೃಷ್ಣಾಭಿಧಾನದೊಳುದಿಸಿದುದನು || ೨ ||
ಎಲ್ಲರಿಂಗರಿವಂತೆ ಯಕ್ಷಗಾನದಲಿ |
ಸೊಲ್ಲಿಸುವೆನಜಪುರೇಶ್ವರನ ಕರುಣದಲಿ || ೩ ||
ಲಾಲಿಸುತ ಸಂತಸದಿ ಸುಜನರೀಕಥೆಯ |
ಕೇಳಿ ತಪ್ಪಿರೆ ತಿದ್ದಿ ಮೆರೆಸುವುದು ಕೃತಿಯ || ೪ ||
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಧರಣಿಪಾಲಪರೀಕ್ಷಿತಗೆ ಶುಕ | ವರಮುನೀಂದ್ರನು ಹರಿಯ ಲೀಲಾ |
ಚರಿತವಹ ಭಾಗವತಕಥನವ | ನೊರೆವುತಿರಲು || ೧ ||
ಎಲೆ ಮುನೀಶ್ವರ ಕೇಳು ಹರಿಯದು | ಕುಲದೊಳುದಿಸಿದು ಬಾಲಕತ್ವವ |
ತಳೆದು ಲೀಲೆಯನೆಸಗಿದಂದವ | ತಿಳಿಯಪೇಳೈ || ೨ ||
ಎಂದು ತನ್ಮುನಿಯಂಘ್ರಿಗೆರಗಿದ | ಇಂದು ಕುಲಜನನೆತ್ತಿ ಮನ್ನಿಸು |
ತೆಂದನಾ ಗೋವಿಂದಚರಿತವ | ನಂದು ಮುದದಿ || ೩ ||
ಭಾಮಿನಿ
ಕೇಳು ಪಾಂಡವಪೌತ್ರ ಕೃಷ್ಣನ |
ಬಾಲಲೀಲೆಯ ವರ್ಣಿಸುವಡಾ |
ಭಾಳಲೋಚನಗರಿದು ಮತ್ತುಳಿದವರ ಪಾಡೇನು ||
ಆಲಿಸಾದರೆ ಹರಿಯ ಕರುಣದಿ |
ಪೇಳುವೆನು ತಿಳಿದಂತೆ ದುರಿತ |
ವ್ಯಾಳವಿಷಗಾರುಡವಿದೆಂದರಿತಿಹುದು ನೀವೆಂದ || ೧ ||
ರಾಗ ಭೈರವಿ ಝಂಪೆತಾಳ
ಎಲೆ ಧರಾಧಿಪ ಕೇಳು | ಖಳರ ಭಾರವನವನಿ |
ತಳೆಯಲಾರದೆ ಬಾಡಿ | ಬಳಲಿ ಬೆಂಡಾಗಿ || ೧ ||
ಹಸುವಿನಾಕಾರದಲಿ | ಬಸಿವ ಕಂಬನಿಯಿಂದ |
ಬಸವಳಿವುತುಸಿರಿಡುತ | ಕುಸಿದ ಕೊರಳಿಂದ || ೨ ||
ಅಳಲುತ್ತ ಮನದೊಳಗೆ | ಹಲವನೆಣಿಸುತ ಧರಾ |
ಲಲನೆ ನಡೆತಂದಳಾ | ನಳಿನಭವನೆಡೆಗೆ || ೩ ||
ಶ್ರುತಿಗಳುಗ್ಘಡಣೆಯಲಿ | ಶತಮಖಾದ್ಯಮರಸಂ |
ತತಿಯ ಸಂಸ್ತುತಿಯಿಂದ | ಅತುಳವಿಭವದಲಿ || ೪ ||
ಸುರುಚಿರದ ರತ್ನಭಾ | ಸುರಸಿಂಹಪೀಠದಲಿ |
ಸರಸಿಜೋದ್ಭವನಿರ್ದ | ಹರಿಯ ಧ್ಯಾನದಲಿ || ೫ ||
ಕಂದ
ಇಂತಬ್ಜಭವಂ ತನ್ನಯ | ಕಾಂತೆಯ ಸಮ್ಮೇಳದಿಂದೊಪ್ಪಿರಲಿತ್ತಂ ||
ಸಂತಾಪಂ ವೆತ್ತವನೀ | ಕಾಂತೆಯು ನಡೆತಂದು ಮಣಿದಳು ದುಃಖಿಸುತಂ || ೧ ||
ರಾಗ ಕೇದಾರಗೌಳ ಅಷ್ಟತಾಳ
ಸುರಿವ ಕಂಬನಿಯಿಂದ ಚರಣದೊಳಗೆ ಬಿದ್ದು | ಪೊರಳುತಿರಲು ಕಾಣುತ ||
ಧರಣಿಯ ಶಿರವಿಡಿದೆತ್ತಿ ಮೆಯ್ದಡವಿ ಮ | ತ್ತರವಿಂದಾಸನನೆಂದನು || ೧ ||
ತಾಯೆ ಕೇಳೌ ನಿನ್ನ ನೋಯಿಸಿದವರಾರು | ಬಾಯಾರ ಬೇಡವಿನ್ನು ||
ಆಯಸಗೊಳಲೇಕೇನಾಯಿತೆಂದೆಮ್ಮೊಳು | ಪ್ರಿಯದೊಳುಸಿರೆಂದನು || ೨ ||
ಜೀಯ ಲಾಲಿಪುದು ದಾನವರು ಕ್ಷತ್ರಿಯ ಸಮು | ದಾಯವಾಗಿಯೆ ಜನಿಸಿ ||
ನೋಯಿಸುವರು ಭಾರ ಘನವಾಯಿತದರಿಂದ | ಲೀಯವಸ್ಥೆಗೆ ಸಂದೆನು || ೩ ||
ಧರ್ಮನಾಶನವಾಯ್ತು ದಾಕ್ಷಿಣ್ಯವಡಗಿ ಸ | ತ್ಕರ್ಮವಡಗಿಪೋಯಿತು ||
ದುರ್ಮತಿಗಳ ದೆಸೆಯಿಂದ ಲೋಕದಲಿ ದು | ಷ್ಕರ್ಮವೆಗ್ಗಳವಾಯಿತು || ೪ ||
ಸತ್ಯ ಶೌಚಾಚಾರ ಯಮನಿಯಮಗಳೆಂಬ | ನಿತ್ಯ ವಡಗಿಹೋಯಿತು ||
ಅತ್ಯಂತ ಕಪಟಕಲ್ಮಷವಾಯ್ತು ಜಗದೊಳೌ | ಚಿತ್ಯವಧಿಕವಾಯಿತು || ೫ ||
ಭಾಮಿನಿ
ವಾರಿಜಾಸನ ಕೇಳು ಕೊರಳಿಗೆ |
ಭಾರವತಿಶಯವಾಯ್ತು ಧರಿಸಲು |
ತೀರದದರಿಂ ಬಂದೆ ನೀ ಜಗದೊಡೆಯನೆಂದೆನುತ ||
ನಾರಿ ನಾನೇಂ ಗೆಯ್ವೆಕಾಲದಿ |
ದೂರಿದೆನು ದೇವರಿಗೆ ನೀವೆ ವಿ |
ಚಾರಿಸಲು ಬೇಕೆನುತ ಮಗುಳೆರಗಿದಳು ತತ್ಪದಕೆ || ೧ ||
ವಾರ್ಧಿಕ
ಧರಣಿಯಿಂತೆಂದಜನ ಚರಣದೊಳ್ ಮಣಿದಿರಲ್ |
ಕರುಣದಿಂದಾಧರೆಯ ಶಿರವನುಂ ನೆಗಪಿ ನೀ |
ಮರುಗದಿರ್ ನೋಳ್ಪೆನೆಂದರವಿಂದಭವನಭವ ಸುರಪಮುಖ್ಯಾಮರರನು ||
ಕರೆನೆಂದ ನಮ್ಮೊಳಗೆ ಹರಿವುದಲ್ಲಿದು ಜಗ |
ದ್ಭರಿತನಹ ವಿಷ್ಣುವಿಂಗರುಹವೇಳ್ಕೆಂದು ದಿ |
ಗ್ವರರನೊಡಗೊಂಡತುಳ ಹರುಷದಿಂದಯ್ದಿದಂ ಭರದೊಳಿಂಗಡಲತಡಿಗೆ || ೧ ||
ತರತರದಿ ನೆರೆದು ಬಹು ತೆರೆಗಳಿಂನೊರೆಗಳಿಂ |
ದುರುತರದಿ ಭೋರ್ಗರೆವ ಘೋಷದಿಂ ಭಾಸದಿಂ |
ಧರೆಗುರುಳ್ದೊಡನೆ ಸೀರ್ವನಿಗಳಿಂ ಧ್ವನಿಗಳಿಂದಧಿಕತರ ರಭಸದಿಂದ
ಸುರುಚಿರದ ವಿದ್ರುಮಲತಾಳಿಯಿಂ ಗಾಳಿಯಿಂ |
ದಿರದಭ್ರಕೇಳ್ವ ಗಂಭೀರದಿಂ ಪೂರದಿಂ |
ಹರಿಯಳಿಯನೆನಗೆಂಬ ಕೊಬ್ಬಿನಿಂದುಬ್ಬಿನಿಂದಿಂಗಡಲ್ ಕಣ್ಗೆಸೆದುದು || ೨ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇಂತು ಮೆರೆವಮೃತಾಬ್ಧಿಯನು ಸುರ | ಸಂತತಿಯು ಸಹಿತಜನುಕಾಣುತ |
ಲಂತರಂಗದಿ ಹರಿಯ ನೆನೆವುತ | ಸಂತಸದಲಿ || ೧ ||
ಸುರರಿಗೆಂದನು ಶರನಿಧಿಯನು | ತ್ತರಿಸಲಳವಲ್ಲೀ ದಡದಲಾ |
ಪರಮಪುರುಷನ ಭಜಿಸುವೆನ್ನುತ | ಲೊರೆದು ಮುದದಿ || ೨ ||
ಆಸನವ ಬಲಿದೇಕಚಿತ್ತದಿ | ನಾಸಿಕಾಗ್ರದ ದೃಷ್ಟಿಯಲಿ ಕಮ |
ಲಾಸನನು ಕುಳ್ಳಿರ್ದನಧಿಕ | ವಿ | ಲಾಸದಿಂದ || ೩ ||
ವರಸಮಾಧಿಯೊಳಯ್ದೆ ಮೇಲ್ಮೊಗ | ವಿರಿಸಿ ಸುರಪಾದ್ಯಮರ ಸಂಕುಲ |
ವೆರಸಿ ಭಕ್ತಿಯೊಳಬ್ಜನಾಭನ | ಸ್ಮರಿಸುತಿರ್ದ || ೪ ||
ಭಾಮಿನಿ
ಪರಮಪುರುಷ ಪರೇಶ ಪಾವನ |
ಚರಿತ ಪಂಕಜನಾಭ ಪರಮೇ |
ಶ್ವರನ ಮಿತ್ರ ಪವಿತ್ರಗಾತ್ರ ವಿಚಿತ್ರತರಸ್ತೋತ್ರ ||
ಸರಸಿಜಾಕ್ಷ ಸದಾವಿನೋದಾ |
ದ್ಯುರುತರಾನಂದೈಕವಿಗ್ರಹ |
ಸರಸಯುತ ಸರ್ವೇಶ ಶರಣಾಗೆಂದನಬುಜಭವ ||
ರಾಗ ಯರಕಲಕಾಂಭೋಜ ಝಂಪೆತಾಳ
ಮತ್ತೆ ಕೇಳರಸ ಶರಧಿಗೆ ಪ್ರತಿ ಸಮುದ್ರವೆನೆ | ತತ್ತೀರದಲ್ಲಿ ಸುಮನಸರ ||
ಮೊತ್ತ ಜಯಜಯವೆನುತ ಪೊತ್ತು ಕರಸಂಪುಟವ | ನುತ್ತಮಾಂಗದಿ ಹರಿಯ ಗುಣವ || ೧ ||
ಶರಧಿಘೋಷದಿ ಪೊಗಳುತಿರೆ ಮೆಚ್ಚಿ ಶ್ರೀವರನು | ಕರುಣದಿಂದಭ್ರಮಂಡಲದಿ |
ಗರುಡವಾಹನನಾಗಿಯರಿಶಂಖಗದೆಪದ್ಮ | ಧರನಾಗಿಪೊಳೆಪೊಳೆವುತಾಗ || ೨ ||
ತರಣಿಶತಕೋಟಿದೀಧಿತಿಯಿಂದ ವಾಮದಲಿ | ಮೆರೆವ ಶ್ರೀ ರಮಣಿಸಹಿತೊಲಿದು ||
ಸರಸಿಜೋದ್ಭವಗೆ ಕಾಣಿಸಿಕೊಂಡನೇನೆಂಬೆ | ನುರು ಕೃಪಾನಿಧಿಯ ಮಹಿಮೆಯನ್ನು || ೩ ||
ಕಂಡು ಹರುಷಿತನಾಗಿ ಪುಂಡರೀಕಾಸನನು | ಕಂಡಚಿನ್ಮಯನ ಮೂರ್ತಿಯನು ||
ಕೊಂಡಾಡುತಲೆ ಶಿರವ ಮಂಡೆಯಲಿ ಸೂಡಿ ಮಿಗೆ | ದಂಡದಂತೆರಗಿ ನುತಿಸಿದನು || ೪ ||
ವಾರ್ಧಿಕ
ಜಯ ಜಯ ಜಗನ್ನಾಥ ವೈನತೇಯವರೂಥ |
ಜಯ ಜಯ ಸದಾಮೋದ ಸಾಮಗಾನವಿನೋದ |
ಜಯ ಜಯ ಚಿದಾನಂದ ದನುಜಾರಿ ಗೋವಿಂದ ಸುಂದರಾನನ ಮುಕುಂದ ||
ಜಯಜಯ ರಮಾಲೋಲ ಮುನಿ ಜಾಲಪರಿಪಾಲ |
ಜಯ ಜಯ ಸುರಾಧೀಶ ಖಳನಾಶ ರವಿಭಾಸ |
ಜಯ ಜಯ ನಿರಾಕಾರ ಭವದೂರ ಸುವಿಚಾರ ಜಯ ಜಯೆಂದೆರಗಿದನು || ೧ ||
ಕಂದ
ಕಮಲಜನೀಪರಿಯಿಂದಂ | ನಮಿಸಿದು
ನುತಿಗೆಯ್ಯುತಿರ್ಪುದಂ ಕಾಣುತ್ತಂ ||
ರಮೆಯಾಳ್ದಂ ತನುಜನೊಳತಿ |
ಮಮತೆಯೊಳಿಂತೆಂದನಯ್ದೆ ನಮ್ರತೆಯಿಂದಂ || ೧ ||
ರಾಗ ಮಧುಮಾಧವಿ ಏಕತಾಳ
ಸಾರಸಾಸನ ಪೇಳಭಿಮತವ || ಭೂರಿಸನ್ನುತಿ ಗೆಯ್ದ |
ಕಾರಣವೇನೆಂದು || ಸಾರಸಾಸನ ಪೇಳಿಭಿಮತವ || ಪ ||
ಮನದ ದುಗುಡವೇನು ಮಾಜದೆ ಪೇಳಿನ್ನು | ದನುಜರಟ್ಟುಳಿಯುಂಟೆ ಧರಣಿಯಲ್ಲಿ ||
ಅನಿಮಿಷರೀಪರಿಯಳುತಿರ್ಪ ಬಗೆಯೇನೆಂ | ದೆನೆ ಲಾಲಿಸುತ್ತೆಂದನಜನತಿ ಮುದದಿಂದ || ೧ ||
ಜೀಯ ಲಾಲಿಸು ದುಷ್ಟರಾಗಿಹ ದೈತ್ಯನಿ | ಕಾಯವು ಕ್ಷಾತ್ರಕುಲದೊಳುದಿಸಿ ||
ಮಾಯಾ ಮೋಹಿತರಾಗಿ ಮದದಿಂದ ಸೊಕ್ಕಿ ಧರ್ಮ | ದಾಯತವನು ಮೀರಿ ನಡೆವುತಿಪ್ಪರುಬ್ಬೇರಿ || ೨||
ಧರಣಿದೇವಿಯು ಬಂದು ಧರಿಸಲಾರೆನು ಎಂದು | ದೂರಿದಳೆನಗತಿ ದುಗುಡದಿಂದ ||
ಕಾರಣಕರ್ತು ನಿನ್ನ ಸಾರಿ ಬಿನ್ನಯಿಸಿದೆನು | ಭೋರನಯ್ತಂದು ವಿಚಾರಿಸು ದಯಾಸಿಂಧು || ೩ ||
ದೇವ ನಿನ್ನಾಜ್ಞೆಯೊಳಾವಿರ್ಪುದಲ್ಲದೆ | ಭಾವಿಸಲೆಮಗೆ ಸ್ವಾತಂತ್ರ್ಯವುಂಟೆ ||
ಸಾವಿರ ಮಾತೇನು ಸಲಹುತ ಕರ್ತು ನೀ | ಕಾವೆನೆಂದಭಯವನೀಯೊ ಮಹಾನುಭಾವ || ೪ ||
ಭಾಮಿನಿ
ಎನಲು ಲಾಲಿಸುತಯ್ದೆ ತ್ರಿಜಗ |
ಜ್ಜನಕನೆಂದನು ಯದುಕುಲದಿ ತಾ |
ಜನಿಸುವೆನು ವಸುದೇವನಲಿ ದೇವಕಿಯ ಗರ್ಭದಲಿ ||
ಘನ ಮದಾಂಧರನೊರಸಿಯಚಲ |
ಸ್ತನೆಯ ಭಾರವ ಕಳೆವೆ ಭಯಬೇ |
ಡೆನುತಲಸುರಾರಾತಿಯಡಗಿದನಭ್ರಮಾರ್ಗದಲಿ || ೧ ||
ರಾಗ ಭೈರವಿ ಝಂಪೆತಾಳ
ಇಂತಭಯಗೊಟ್ಟು ಶ್ರೀ | ಕಾಂತ ತೆರಳಲ್ಕಿತ್ತ |
ಸಂತಸದೊಳಜನು ಸುರ | ಕಾಂತನನು ನೋಡಿ || ೧ ||
ನಗುತೆಂದನಿಂದ್ರ ಕೇ | ಳಗಧರನು ದಯವಾದ |
ಬಗೆಯನಿನ್ನೇನೆಂಬೆ | ಜಗದೊಡೆಯನಯ್ಸೆ || ೨ ||
ವಸುದೇವನೆಂಬವಗೆ | ಶಿಶುವಾಗಿ ತಾನುದಿಸಿ |
ಯಸುರರನು ಗೆಲುವಗಡ | ವಸುಧೆಯೊಳಗಿರ್ದು || ೩ ||
ಉರಗೇಂದ್ರಸಹಿತ ತಾ | ನರನಾಗಿ ಜನಿಸುವನು |
ಸುರರೆಲ್ಲ ಯದುಕುಲದಿ ಧರೆಯೊಳುದಿಸುವುದು || ೪ ||
ಎಂದಮರರನು ಕಳುಹಿ | ಮಂದಹಾಸದಲವನಿ |
ಗೆಂದ ನಮ್ರತೆಯೊಳರ | ವಿಂದಭವನೊಲಿದು || ೫ ||
ಧರಣಿ ಕೇಳಮ್ಮ ನಿ | ನ್ನರಸ ದಯವಾದ ನೀ |
ಮರುಗಬೇಡೆಂದು ಮಿಗೆ | ಪರಸಿ ಕಳುಹಿದನು || ೫ ||
ಕಂದ
ವಾರಿಜಭವನೀಪರಿಯಿಂ | ಧಾರಿಣಿಯಂ ಸಂತವಿಟ್ಟು ನಿಜಮಂದಿರ ಕಿತ್ತಂ ||
ಭೋರನೆ ತಾನಯ್ತಂದಸು | ರಾರಿಯನುಂ ನೆನೆವುತಿರ್ದನತಿ ಭಕ್ತಿಯೊಳಂ || ೧ ||
ಭಾಮಿನಿ
ಧರಣಿಪತಿ ಕೇಳಿತ್ತ ಮಧುರಾ |
ಪುರದೊಳಗೆ ನೃಪನುಗ್ರಸೇನನ |
ತರುಣ ಕಂಸನೆನಿಪ್ಪನೊರ್ವನುದಾರ ಗರ್ವದಲಿ ||
ದುರುಳರಿಗೆ ಗುರುವಾದ ದುಷ್ಟರ |
ನೆರವಿಯಲಿ ಧರೆಗರಸೆನಿಸಿ ತಾ |
ಮೆರೆವುತಿರ್ದನು ಭುಜಬಲೋನ್ನತಮದದ ಮೋಡಿಯಲಿ || ೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಈತೆರದೊಳಿಹ ಕಂಸನೆಂಬನ | ತಾತನಗ್ರಜ ದೇವಕನ ಸಂ |
ಜಾತೆ ದೇವಕಿಯೆಂಬವಳು ರೂ | ಪಾತಿಶಯದಿ || ೧ ||
ಮೆರೆವುತಿರ್ದಲು ಮಾತೆ ಪಿತರಿಗೆ | ಹರುಷವನು ಬೀರುತ್ತ ಸದ್ಗುಣ |
ಭರಿತೆಯಾಗಿ ಸುಶೀಲದಲಿ ಹೊಸ | ಹರೆಯದಿಂದ || ೨ ||
ನೋಡಿ ಕಂಸನು ಪಿತನನುಜ್ಞೆಯ | ಬೇಡಿ ತಂಗಿಗೆ ಪರಿಣಯವ ತಾ |
ಮಾಡಬೇಕೆಂದೆನುತ ಸಂತಸ | ಗೂಡಿ ಮನದಿ || ೩ ||
ವರನನರಸುತ್ತಿರಲು ತತ್ಪುರ | ವರದಿ ಶೂರನೃಪಾಲನಣುಗನು |
ಸ್ಮರನ ಲಾವಣ್ಯದಲಿ ಸದ್ಗುಣ | ಭರಿತನಾಗಿ || ೪ ||
ಇರಲು ವಸುದೇವಾಭಿಧಾನದ | ಲರಿತು ಕಂಸನು ತಂಗಿಗೀತನೆ |
ವರನೆನುತ ನಿಶ್ಚಯಿಸಿ ತವಗೆ | ಚ್ಚರಿಸಿಭರದಿ || ೫ ||
ಭಾಮಿನಿ
ಕರೆಸಿ ಪೌರೋಹಿತರ ಲಗ್ನವ |
ನಿರಿಸಿ ಪೃಥ್ವೀಶ್ವರರಿಗೋಲೆಯ |
ಬರೆಸಿ ಯುಡುಗೊರೆವೆರಸಿ ದೂತರ ಹರಿಸಿ ಭೂಭುಜರ ||
ಬರಿಸಿ ಬಂಧುನಿಕಾಯವನು ಸ |
ತ್ಕರಿಸಿ ವಿಪ್ರೌಘವನು ಬಹಳಾ |
ದರಿಸಿ ಮಿಗೆ ಕುಳ್ಳಿರಿಸಿ ತಾನುಪಚರಿಸಿದನು ಕಂಸ || ೧ ||
ರಾಗ ಕಾಂಬೋಧಿ ಝಂಪೆತಾಳ
ಅತ್ತಲಾ ವಸುದೇವನತಿಮುದದಿ ಬಂಧುಗಳ | ಮೊತ್ತ ಸಹಿತುರು ವಾದ್ಯರವದಿ ||
ವೃತ್ತನೆಯರಿಂಚರಧ್ವನಿಯೊಳಯ್ದೆ ಪಾ | ಡುತ್ತಿರಲು ಬಂದನುತ್ಸವದಿ || ೧ ||
ಮದಗಜವನೇರಿ ಸರ್ವಾಭರಣದಿಂದ ಮೃಗ | ಮದತಿಲಕದಿಂದ ರಂಜಿಸುತ ||
ಮದನನೆಂಬಂತೆ ದಿಬ್ಬಣಿಗರೊಡನಾ ಶೌರಿ | ಮದುವಣಿಗನಾಗಿ ನಡೆತಂದ || ೨ ||
ಬಂದ ದಿಬ್ಬಣಿಗರನಿದಿರ್ಗೊಂಡು ಕಂಸನಾ | ನಂದಮಿಗೆ ಶಾಸ್ತ್ರವಿಧಿಯಿಂದ ||
ಒಂದುಳಿಯದೆಲ್ಲವನು ರಚಿಸಿ ತಂಗಿಯನು ಪಿತ | ನಿಂದ ಧಾರೆಯನೆರೆಯಿಸಿದನು || ೩ ||
ಚೆಂದದಲಿ ನೃಪರಿಗುಡುಗೊರೆ ವೀಳ್ಯಪರಿಮಳದ | ಗಂಧಮಾಲ್ಯಾನುಲೇಪನದಿ ||
ನಿಂದು ತಾನುಪಚರಿಸಿ ವಿಪ್ರರನು ದಕ್ಷಿಣೆಗ | ಳಿಂದ ಸಂತೃಪ್ತಿಪಡಿಸಿದನು || ೪ ||
ಭೂರಿಯುಡುಗೊರೆಯಾಯ್ತು ದಂಪತಿಗಳಿಂಗೆ ದ್ವಿಜ | ರೋರಣದಲಕ್ಷತೆಯ ತಳಿದು ||
ಚಾರುತರ ಮಂತ್ರರವ ಮೆರೆಯೆ ಪಾಡುತ ರತುನ | ದಾರತಿಯ ತಂದರಬಲೆಯರು || ೫ ||
ಹಾಡು
ಕೋಮಲಕಾಯದ ನಳಿದೋಳಿನ | ಸಾಮಜಗಮನದ ಸುಳಿಗುರುಳಿನ |
ಕಾಮನ ಕನ್ನಡಿಯ ಕದಪಿನ ||
ಕದಪಿನ ನುಣ್ಮೊಗದುರು ಬೆಡಗಿನ | ಕಾಮಿನಿಯರಂದು ನೆರೆದರು ||
ಶೋಭಾನೆ || ೧ ||
ಮುಘಮಘಿಸುವ ಮಲ್ಲಿಗೆದುರುಬಿನ |
ಝಗಝಗಿಸುವ ರತ್ನಾಭರಣದ | ನಗುಮೊಗದ ಬೆಳಕು ತುಳುಕುವ ||
ತುಳುಕುವ ಪೊಂಬಣ್ಣದ ಸೊಬಗಿನ | ಮುಗುದೆಯರಕ್ಷತೆಯ ತಳಿದರು ||
ಶೋಭಾನೆ || || ೨ ||
ಕಂಕಣ ಝಣಕರಿಸಲು ಕಾಂಚಿಯ | ಕಿಂಕಿಣಿರವ ಮೆರೆಯಲು ಪೂರ್ಣ ಶ |
ಶಾಂಕವಕ್ತ್ರೆಯರು ಸ್ವರವೆತ್ತಿ || ಸ್ವರವೆತ್ತಿ ಶೋಭನವ ಪಾಡುತ್ತ |
ಕುಂಕುಮದಾರತಿಯ ಬೆಳಗಿರೆ || ಶೋಭಾನೆ || ೩ ||
ರವಕೆಗೆ ಮಣಿಯದ ಮರಿಯಾದೆಯ | ಅವಕಲು ಕಯ್ಗಳವಡುವಳುಕಿನ |
ಕವಕವಿಸಿ ಪೊಳೆವ ಸ್ತನವುಳ್ಳ || ಸ್ತನವುಳ್ಳತಿನೂತನ ಯವ್ವನ |
ಯುವತಿಯುರಾರತಿಯ ಬೆಳಗಿರೆ || ಶೋಭಾನೆ || ೪ ||
ಕುಸುಮಾಸ್ತ್ರನನೇಡಿಸುವಂದದಿ | ನಸುನಗುಮೊಗದುರು ಬೆಡಗು ಲಾವಣ್ಯದಿ |
ಎಸೆದು ರಂಜಿಸುವ ವಸುದೇವ | ವಸುದೇವ ದೇವಕಿದೇವಿಗೆ |
ಕುಶಲದಾರತಿಯ ಬೆಳಗಿರೆ || ಶೋಭಾನೆ || ೫ ||
ಭಾಮಿನಿ
ಇಂತು ವಿಭವದಿ ನಾಲ್ಕು ದಿನವೋ |
ರಂತೆ ಮಹದುತ್ಸವವನೆಸಗಿದು |
ಸಂತಸದಿ ಬಂದವರಿಗವರವರುಚಿತಗಳನರಿತು ||
ಸಂತವಿಸಿಯವಭೃಥವೆಸಗಿತದ |
ನಂತರದಿ ಬಹುವಿಧದಿ ಬಾಂಧವ |
ಸಂತತಿಯನುಪಚರಿಸಿದನು ಕಂಸಾಖ್ಯನೊಲವಿನಲಿ || ೧ ||
ವಾರ್ಧಿಕ
ಅರಸ ಕೇಳಿಂತನುಜೆಯಂ ಮಹೋತ್ಸವದೊಳಂ |
ಪರಿಣಯಂ ಗೆಯ್ದು ವಸುದೇವಂಗೆ ಬಳುವಳಿಯ |
ನುರುತರ ಮದೇಭ ಹಯ ರಥಪದಾತಿಗಳನಿತ್ತ ಖಿಳತರ ವಸ್ತುಗಳನು ||
ಹರುಷದಿಂ ನಿಜಸಹೋದರಿಗಿತ್ತನೊಡನೆ ಭೋರ್ |
ಮೆರೆವ ವಾದ್ಯದಿನವರನಡರಿಸಿ ವರೂಥದೊಳ್ |
ತುರಗಮಂ ತಾನೆ ನಡೆಸುತೆ ಕಳುಪುತಯ್ತರಲ್ಕಭ್ರದೊಳ್ ನುಡಿಯಾದುದು || ೧ ||
ಭಾಮಿನಿ
ಕೇಳೆಲವೊ ಖಳ ಕಂಸ ತಂಗಿಯ |
ಮೇಲೆ ಮೋಹವ ಮಾಳ್ಪೆ ನೀನೀ |
ಲೋಲಲೋಚನೆಯುದರದೊಳಗೆಂಟನೆಯ ಗರ್ಭದಲಿ ||
ಶ್ರೀಲಲಾಮನು ಜನಿಸಿ ಬಹು ದೈ |
ತ್ಯಾಳಿಯನು ಸಂಹರಿಸಿ ನಿನ್ನನು |
ಸೀಳುವನು ಪುಸಿಯಲ್ಲೆನುತ್ತಡಗಿತು ನಭೋವಚನ || ೧ ||
ಕಂದ
ಎಂದೊದರಿದಭ್ರವಾಣಿಯ | ನಂದಾ ಖಳನಾಲಿಸುತ್ತಲುರು ಭೀತಿಯೊಳಂ ||
ನಿಂದಾಲೋಚಿಸುತಂ ತಾಂ | ನೊಂದನುಜೆಯನೀಕ್ಷಿಸುತ್ತಲತಿಖತಿಗೊಂಡಂ || ೧ ||
ರಾಗ ಭೈರವಿ ಆದಿತಾಳ
ಖಳನತಿಕೋಪವ ತಾಳ್ದು | ಕಂಗಳೊಳುರಿಗಿಡಿಗಳನುಗುಳ್ದು ||
ಝುಳಪಿಸಿ ಖಡ್ಗವನುಗಿದು | ಖತಿ | ಯೊಳು ತಾನಧರವನಗಿದು || ೧ ||
ಫಡ ತಂಗಿಯೆತನಗಿವಳು | ತ | ನ್ನೊಡಲಿಗೆ ವಿಷವಾದವಳು ||
ನುಡಿದರೆ ಫಲವೇನಿನ್ನು | ತಲೆ | ಗಡಿದೀಗಳೆ ತೀರ್ಚುವೆನು || ೨ ||
ಕೆಡೆಯೆನುತಲಿ ಬಾಲಿಕೆಯ | ಕೊರ | ಳೆಡೆಗಾನಿಸೆ ಕೂರಸಿಯ ||
ಮಿಡುಕುತಬಲೆ ಬಾಯ್ಬಿಡಲು | ಕಂ | ಡೊಡನೆಲ್ಲವರಳುತಿರಲು || ೩ ||
Leave A Comment