ಭಾಮಿನಿ
ಲಲನೆಯರು ತಾವಿಂತು ಕೃಷ್ಣನ |
ಚೆಲುವ ಮೂರ್ತಿಯ ಸಂಗಸುಖವೆಮ |
ಗಳವಡುವುದೆಂತೆನುತ ನಿಚ್ಚವು ಬಯಸಿ ಮನದೊಳಗೆ ||
ಮಳಲ ಗೌರಿಯ ಮಾಡಿ ಯಮುನಾ |
ಪುಳಿನದಲಿ ಪೂಜಿಸಿ ಮಹಾವ್ರತ |
ಫಲವಪಡೆವೆವೆನುತ್ತ ನಿಶ್ಚಯಿಸಿದರು ತಮ್ಮೊಳಗೆ || ೧ ||
ಕಂದ
ಎಂದಾ ಸತಿಯರ್ ತಮ್ಮೊಳ | ಗೊಂದೇ ಮತದಿಂದಮೆಲ್ಲರೊಡಬಟ್ಟಾಗಳ್ ||
ಚಂದದಿ ಗೌರಿಯನರ್ಚಿಸ | ಲೆಂದಯ್ದಿದರೊಬ್ಬರೊಬ್ಬರಂ ಕರೆವುತ್ತಂ || ೧ ||
ರಾಗ ಘಂಟಾರವ ಆದಿತಾಳ
ಬಾರಮ್ಮ ಸುಪ್ರವೀಣೆ | ಕಾಳಿಂದಿಯ | ತೀರಕಯ್ದುವ ಕಾಣೆ || ಪ ||
ಜಲಜಾತನೇತ್ರೆ ಬಾರೆ | ಸುಂದರಿ ಬಾರೆ | ಸುಲಲಿತಗಾತ್ರೆ ಬಾರೆ ||
ಕಳೆವೆತ್ತ ಕನ್ನೆ ಬಾ ಕಾಂತೆ ಸಂಪನ್ನೆ ಬಾ | ಚೆಲುವಿನ ಚೆನ್ನೆ ಬಾರೆ ವಯ್ಯಾರೆ || ೧ ||
ಅರಸಿನೆಣ್ಣೆಯನು ಕೊಂಡು | ನೋಹಿಗೆಬಲ್ಲ | ಹಿರಿಯ ಬ್ರಾಹ್ಮಣನ ಕಂಡು ||
ತರುಣಿಯನೊಡಗೊಂಡು ಬರಹೇಳೆ ಕರಕೊಂಡು | ನೆರೆದೆಲ್ಲ ಪೋಪೆವೇನೆ ತಡವೇನೆ || ೨ ||
ಮುಪ್ಪಿನ ಮುತ್ತಯ್ದೆಗೆ | ಬಾಯನ ಕೊಟ್ಟು | ವಪ್ಪಪಡಿಸಿದ ಮೆಯ್ಗೆ |
ಅಪ್ಪ ಮಂಡಿಗೆ ಹಾಲು ತುಪ್ಪಸಕ್ಕರೆಯಿಕ್ಕಿ | ಕುಪ್ಪಸವನು ಕೊಡುವ ಪೊಡಮಡುವ || ೩ ||
ವಾರ್ಧಿಕ
ಎನುತಲಾ ನೀರೆಯರ್ ನೆರೆದು ಶೃಂಗಾರೆಯರ್ |
ಕನಕನಿಭಗಾತ್ರೆಯರ್ ಕಾಮಶರನೇತ್ರೆಯರ್ |
ಘನತರನಿತಂಬೆಯರ್ ಗಮನದಿ ವಿಳಂಬೆಯರ್ ಭೃಂಗನಿಭಕುಂತಳೆಯರು ||
ವನಜನಿಭವದನೆಯರ್ ಕುಂದೇಭರದನೆಯರ್ |
ಜಯಮನೋಲ್ಲಾಸೆಯರ್ ಚಂಪಕಸುನಾಸೆಯರ್ |
ವಿನಯಗುಣ ಶೀಲೆಯರ್ ಗೋಪಾಲಬಾಲೆಯರ್ ಮುದದೊಳಂದಯ್ತಂದರು || ೧ ||
ರಾಗ ಮಾರವಿ ಏಕತಾಳ
ತರುಣಿಯರಿಂದೀಪರಿಯಲಿ ಗೌರಿಯ | ಚರಣವನರ್ಚಿಪ ಭರವಸದಲಿ ಪರಿ |
ಪರಿಯ ವಸ್ತುಚಯವೆರಸುತ್ತೆಲ್ಲರು | ನೆರೆದು ಪಾಡುತ ಘನ ಹರುಷದೊಳೊಲಿದು | ವೇಗದಿಂದ || ೧ ||
ಬಂದೆಲ್ಲರು ಕಾಳಿಂದಿಯ ತೀರದಿ | ನಿಂದವನೀಸುರರೆಂದ ವಿಧಿಗಳಲಿ |
ಮಿಂದು ಮಡಿಯನುಟ್ಟಂದದ ಭೂಷಣ | ದಿಂದ ರಚಿಸುತಾನಂದದೊಳಾಗ | ವೇಗದಿಂದ || ೨ ||
ಹಲವು ವಿಚಿತ್ರದ ಚೆಲುವಿನ ಪುಷ್ಪಾ | ವಳಿಯಲಿ ಮಂಟಪಗಳನು ರಚಿಸಿ ನು |
ಣ್ಮಳಲಲಿ ಗೌರಿಯನೊಲಿದರ್ಚಿಸಿ ದ್ವಿಜ | ಲಲನೆಯರಂದತಿವೇಗದಿಂದ | ವೇಗದಿಂದ || ೩ ||
ಭಾಮಿನಿ
ಲಲನೆಯರು ವಿಪ್ರೋಕ್ತದಲಿ ಪರಿ |
ಮಳ ಸುಗಂಧಾಕ್ಷತೆ ಸುಪುಷ್ಪಾಂ |
ಜಲಿಗಳಿಂದರ್ಚಿಸಿದು ದೇವಿಯನಧಿಕಭಕ್ತಿಯಲಿ ||
ಬಳಸುತೆಲ್ಲರು ಧೂಪದೀಪವ |
ಸಲಿಸೆ ನೈವೇದ್ಯವ ಸಮರ್ಪಿಸಿ |
ಬೆಳಗಿದರು ನೀರಾಜನವ ತಾಂಬೂಲದೊತ್ತಿನಲಿ || ೧ ||
ರಾಗ ನಾದನಾಮಕ್ರಿಯೆ ತ್ರಿವುಡೆತಾಳ
ಮಂಗಳ ಶ್ರೀಗೌರೀದೇವಿಗೆ ಮಹಾ | ಲಿಂಗನರ್ಧಾಂಗಿಗಾರತಿಯೆತ್ತಿರೆ || ಪಲ್ಲವಿ ||
ಮದಗಜಗಮನೆಗೆ ಮೌಕ್ತಿಕರದನೆಗೆ | ಮಧುಕೈಟಭಾಂತಕಿ ಮಂಗಲೆಗೆ ||
ಮದನನ ಪೋಷೆಗೆ ಮೃಗಮದಭೂಷೆಗೆ | ಮಧುರವಾಣಿಯರಾರತಿಯೆತ್ತಿರೆ || ೨ ||
ಅಂಬುಜನೇತ್ರೆಗೆ ಅಮರೇಂದ್ರಸ್ತೋತ್ರೆಗೆ | ಶುಂಭಸಂಹಾರೆ ಸುಂದರರೂಪೆಗೆ ||
ಕುಂಭಕುಚೆಗೆ ಕಂಬುಕಂಠೆಗೆ ತ್ರೈಜಗ | ದಾಂಬೆಮುಕಾಂಬೆಗಾರತಿಯೆತ್ತಿರೆ || ೩ ||
ಸುರನುತಚರಣೆಗೆ ಸುರುಚಿರಾಭರಣೆಗೆ | ಕರುಣಾಕರೆಕಾಮಿತದಾತೆಗೆ ||
ಗಿರಿರಾಜಜಾತೆಗೆ ಗಾನಸಂಪ್ರೀತೆಗೆ | ಪರಮೇಶ್ವರಿಗಾರತಿಯೆತ್ತಿರೆ || ೪ ||
ಭಾಮಿನಿ
ತರುಣಿಯರು ಪಾಡುತಲಿ ವರಕ |
ರ್ಪುರದ ಆರತಿಯೊಳಗೆ ಪುಷ್ಪವ |
ಚರಣಕರ್ಪಿಸಿ ನಮಿಸಿ ದೇವಿಗೆ ಭಕ್ತಿಭಾವದಲಿ ||
ಕರೆದು ವಿಪ್ರರ ಮಿಥುನಗಳನಾ |
ದರಿಸಿ ವಾಯನವಿತ್ತು ವಸ್ತ್ರಾ |
ಭರಣದಕ್ಷಿಣೆಗಳಲಿ ಮನ್ನಿಸಿದರು ವಿನೋದದಲಿ || ೧ ||
ಕಂದ
ಲಲನೆಯಂದಂಬಿಕೆಗಂ | ಬಲವಂದಡಿಗೆರಗಿ ಮಗುಳೆ ಮುಕುಳಿತ ಕರದಿಂ ||
ನಲವಿಂ ತಂತಮ್ಮ ಮನೋರಥ | ದೊಲವಂ ಮಿಗೆ ಬೇಡುತಿರ್ದರತಿ ಭಕ್ತಿಯೊಳಂ || ೧ ||
ರಾಗ ಭೈರವಿ ಝಂಪೆತಾಳ
ಲಾಲಿಸೌ ಭೂಲೋಕ | ಪಾಲೆ ಮೌಕ್ತಿಕಮಾಲೆ ||
ಲೋಲಲೋಚನೆ ಚಾರು | ಶೀಲೆ ಸುಕಪೋಲೆ || ೧ ||
ನಂದನಂದನನೊಳಾ | ನಂದದಿಂದೊಡಗೂಡು ||
ವಂದವನು ಪಾಲಿಸೌ | ಇಂದೀವರಾಕ್ಷಿ || ೨ ||
ಪೊಂಗೊಳಲ ಮೊಳಗಿಸುವ | ರಂಗನೊಲಿದರೆ ನಮಗೆ ||
ಮಂಗಳದಿ ಮಾಳ್ಪೆವೌ | ರಂಗ ಪೂಜೆಯನು || ೩ ||
ಸುಲಭದಲಿ ಕೃಷ್ಣ ನಮ | ಗೊಲಿದನಾದರೆ ಕೂಡಿ |
ಯಲೆಯ ಪೂಜೆಯ ಮಾಳ್ಪೆ | ಯಲಸದೊಂದಾಗಿ || ೪ ||
ರಾಮನನುಜನು ನಮ್ಮ | ಕಾಮಿತಕೆ ದೊರಕಿದರೆ |
ಸೋಮವಾರದ ವ್ರತದ | ನೇಮದಿಂದಹೆವು || ೫ ||
ವಾರಿಜಾಕ್ಷನ ಸಂಗ | ಸೇರಿತಾದರೆ ನಮಗೆ ||
ವಾರವಾರಕೆ ಕಪ್ಪು | ರಾರತಿಯ ಬೆಳಗಿ ||೬||
ಧಾರಿಣೀಸುರಸತಿಯ | ವಾರವನು ಬರಹೇಳಿ |
ಸೀರೆಗುಪ್ಪಸವಿತ್ತು | ಭೂರಿ ಹರುಷದಲಿ || ೭ ||
ಭಾಮಿನಿ
ಭೂಪ ಕೇಳಾ ಮಳಲಗೌರಿಯ |
ನೀಪರಿಯ ಪ್ರಾರ್ಥಿಸುತಲಂದಾ |
ಗೋಪಿಯರು ದಿನದಿನದೊಳಿಂತರ್ಚಿಸುತಲಚ್ಯುತನ ||
ರೂಪಲಾವಣ್ಯಗಳ ನೆನೆದುರು |
ತಾಪದಲಿ ಬೆದೆಬೆಂದು ವಿರಹಕ |
ಲಾಪದಲಿ ಪಾಡುತ್ತಲಿರ್ದರು ಹರಿಯ ಗುಣಗಳನು
ಕೆಲವು ದಿನವೀತೆರದಿ ಕೃಷ್ಣನ |
ಚೆಲುವಿಕೆಗೆಮಿಗೆ ಸೋತು ನೋಹಿಯ |
ನೊಲಿದು ಮಾಡುತಲೊಂದು ದಿನವಾ ಸತಿಯರೊಗ್ಗಿನಲಿ ||
ತಳುವದೆಲ್ಲರು ಬಂದು ಯಮುನಾ |
ಪುಳಿನದಲಿ ನಿಂದುಟ್ಟವಸನವ |
ನುಳಿದಿರಿಸಿ ಜಲಕೇಳಿಗಿಳಿದು ವಿರಹತಪ್ತೆಯರು || ೨ ||
ರಾಗ ಸಾರಂಗ ಆದಿತಾಳ
ಬಾಲೆಯರೆಲ್ಲರು ನಲಿದು | ವಾರಿ | ಕೇಳಿಗೆನುತ ಮನವೊಲಿದು ||
ಕಾಳಿಂದಿಯುದಕವನಿಳಿದು ನಿರ್ವಾಣದಿ | ಲೀಲೆಯೊಳಾಡುತಿರ್ದರು ತೋಷದಳೆದು || ೧ ||
ಕೊರಳುದ್ದ ನೀರಿಲಿ ನಿಂದು | ರಸ | ಭರಿತ ಯೌವನವೆಣ್ಗಳಂದು ||
ಸ್ಮರನ ಮದ್ದಾನೆಗಳೆಂಬಂತೆ ಕದಡುತ | ಭರದೊಳೀಸಾಡುತ ಸರಸವನಾಡುತ || ೨ ||
ಒಬ್ಬರೊಬ್ಬರ ಮೊಗ ನೋಡಿ | ಮನ | ವುಬ್ಬಿ ವಾರಿಯನು ಚೆಲ್ಲಾಡಿ ||
ಒಬ್ಬರಟ್ಟುತಲೊಬ್ಬರೋಡುತಲಡಗುತ | ತಬ್ಬಿ ಹಿಡಿವುತ ತಪ್ಪಿಸಿಸಿಕ್ಕದೋಡುತ || ೩ ||
ಹರಿಯ ಪಾಡುತ ಮುದದಿಂದ | ಪೂ | ಶರನ ಭಾಧೆಗೆ ಭ್ರಮೆಯಿಂದ ||
ತರುಣಿಯೊರ್ವಳ ಕೃಷ್ಣನೆಂದು ಬಲ್ಮೊಲೆಯಿಂದ | ಲಿರಿದಪ್ಪಿ ಚುಂಬಿಸಿ ಮುದ್ದುಗೆಯ್ವುತ್ತ || ೪ ||
ವಾರ್ಧಿಕ
ಸ್ತನಮುಖಾಕ್ಷಿಗಳನೀಕ್ಷಿಸುತೋರ್ವಳೊಳ್ |
ವನಜಕುಟ್ಮಳವನಾ ಸುಮವನಾ ದಳವನೊಯ್ |
ಯನೆಯಡಗಿಸಿರ್ಪೆಯಂಗಳದೊಳೇಕೆ ಗೌರಿಯರ್ಚನೆಗೀಯದೆನೆ ಕೇಳುತ ||
ವನಿತೆ ನೀನರಿಯೆ ಕೃಷ್ಣಾರ್ಪಣಮಿದೆಂದೆನ್ನ |
ಮನದಿ ಸಂಕಲ್ಪಿಸಿದೆನದರಿನಿದು ನಿರ್ಮಾಲ್ಯ |
ವೆನುತೀಯದಾದೆ ವಂಚನೆಯಿಂದಲ್ಲೆಂದುಸಿರಲಂದವಳ್ ಜಾಣ್ಮೆಯಿಂದ || ೧ ||
ಅಂಬುಜಾನನೆಯೊರ್ವಳೆಂದಳೆಲೆ ನಾರಿ ನೀಂ |
ಕುಂಭೇಂದ್ರ ಕುಂಭನಿಭಕುಚೆ ಸಿಂಹಮಧ್ಯೆ ನಾ |
ನಿಂಬುಗೊಂಡುದು ವೈರಮೆನಗೆ ನಿನಗಾವೀರ್ವರೆಂತೊರ್ವನೊಳಗಿರ್ಪುದು |
ಎಂಬ ನುಡಿಗವಳೆಂದಳೆಲಗೆ ಹರಿಯಹಿತಲ್ಪ |
ನೆಂಬವಂ ಗರುಡ ವಾಹನ ಮಗುಳೆ ವೈರಂಗ |
ಳೆಂಬವೇಗುವವಾತನೊಳಗಿರಲ್ ಕೆನಲೊಡಂಬಟ್ಟುಸಿರದಿರುತಿರ್ದಳು || ೨ ||
ಭಾಮಿನಿ
ಎಂದು ನಾನಾ ವಿಧದ ಚೇಷ್ಟೆಗೆ |
ಳಿಂದಲಂಬುಕ್ರೀಡೆಯಲಿ ಸೊಬ |
ಗಿಂದ ಸತಿಯರಿರಲ್ಕೆ ಹರಿಯದನರಿತು ಮನದೊಳಗೆ ||
ಇಂದಿವರ ವಾಂಛಿತವ ಸಲಿಸುವೆ |
ನೆಂದು ಬಂದವರುಡುವ ವಸನವ |
ನಂದು ಕೊಂಡೇರಿದನು ಕಡಹದ ಮರನ ವಹಿಲದಲಿ || ೧ ||
ರಾಗ ಭೈರವಿ ತ್ರಿವುಡೆತಾಳ
ಅರಸ ಕೇಳೀಪರಿಯ ಮೆಲ್ಲನೆ | ಬರುತ ದಡದಲಿ ತರುಣಿಯರು ತೆಗೆ |
ದಿರಿಸಿರುವ ಪರಿಪರಿಯ ವಸನವ | ಹರಿಯು ತಾನಪಹರಿಸಿ ಕಡಹದ |
ಮರನ ನೇರಿದು ತರತರದೊಳದ | ನಿರಿಸಿ ನೋಡುತ ನೆರೆದು ಬತ್ತಲೆ |
ಯಿರುವ ಸತಿಯರ ನೆರವಿಯನು ಮುದ | ವೆರಸಿ ಕುಳಿತನು ಕಿರುನಗೆಯೊಳಿ |
ನ್ನೇನನೆಂಬೆ | ಲೀಲೆಯ | ನೇನನೆಂಬೆ || ೧ ||
ಕಂದ
ಕಂಡಾ ಸತಿಯರ್ ಕೃಷ್ಣನ | ಪುಂಡಾಟವನಯ್ದೆ ಲಜ್ಜೆಯಿಂ ಮಾನಗಳಂ ||
ಅಂಡಿಸುತುದಕದೊಳೆಲ್ಲರ್ | ಭಂಡಾದೆವೆನುತಲೊಯ್ಯನಾಲೋಚಿಸಿದರ್ || ೧ ||
ರಾಗ ಆನಂದಭೈರವಿ ಆದಿತಾಳ
ಏನಮ್ಮ | ಮುಂದಿ | ನ್ನೇನಮ್ಮ || ಪಲ್ಲವಿ ||
ಹೀನಬುದ್ಧಿಯಿಂದ ಕೃಷ್ಣ | ತಾನಿಂತು ಚೇಷ್ಟೆಯನೆಸಗಿ |
ಮಾನಗೊಂಡನೇನಮಾಳ್ಪೆ || ೧ ||
ಸೀರೆಗಳೆಲ್ಲವ ಕೊಂಡು | ವಾರಿಜಾಕ್ಷನದಕೊ ಮರವ |
ನೇರಿ ಕುಳಿತನಾರಿಗೆಂಬೆವಾವಿನ್ನೇ ನಮ್ಮ || ೨ ||
ಗೌರಿಯಾರ್ಚನೆಗೆ ಹೊತ್ತು | ಮೀರಿಹೋಯಿತಲ್ಲೆ ಮತ್ತು |
ನೀರೊಳಿರ್ದರಾರು ಕೇಳ್ವರಿದನಿನ್ನೇನಮ್ಮ || ೩ ||
ತಡಿಗೆ ಪೋಪರಿಲ್ಲವೆಮಗೆ | ನಡುಕ ಪುಟ್ಟಿತೀ ನೀರಿನೊಳಗೆ |
ತಡೆವೆವೆಂತು ಲಜ್ಜೆಯ ನುಡಿವೆವೆಯೇ ನಮ್ಮ || ೪ ||
ನೋಡುವರೇನಿವನ ಮಾತ | ನಾಡಿಸಿ ನಮ್ಮ ವಸ್ತ್ರಗಳ |
ನೀಡೆನುತ ಬೇಡಿಕೊಂಬ ಯತ್ನವದೇನಮ್ಮ || ೫ ||
ರಾಗ ಮಾರವಿ ಏಕತಾಳ
ತರುಣಿಯರಂದೀ | ಪರಿಯಲಿ ನಾಚುತ | ಶಿರವನು ನಸುಬಾಗಿ ||
ಕರೆದೆಂದರು ಶ್ರೀ | ಹರಿಯೆನುತೆಲ್ಲರು | ವರ ಲಜ್ಜೆಯ ನೀಗಿ || ೧ ||
ಅಕುಲಿತ ಗುಣಗಣ | ಮತಿಯುತ ನೀನಿಂ | ತತಿಶಯ ಚೇಷ್ಟೆಯಲಿ ||
ವ್ರತನಿಷ್ಠೆಯಲಿಹ | ಸತಿಯರನೀಪರಿ | ಗತಿಗೆಡಿಸುವರೇನೈ || ೨ ||
ಆರೊಡನೆಂಬೆವು | ನಾರಿಯರೆಮ್ಮಯ | ಸೀರೆಗಳೆಲ್ಲವನು ||
ಭೋರನೊಯ್ದು ಮರ | ನೇರಿದ ನೀ ಸುವಿ | ಚಾರವ ಬಲ್ಲವನು || ೩ ||
ಪೊಡಮಡುವೆವು ಚಳಿ | ವಿಡಿದೆಲ್ಲರು ನಡ | ನಡುಗುತಲಿಹೆವಿನ್ನು ||
ತಡೆಯದೆ ವಸನವ | ಕೊಡಿಸೈ ನಾಚಿಕೆ | ಗೆಡಿಸದಿರೆಮ್ಮುವನು || ೪ ||
ಕಂದ
ಬಾಲೆಯರಿಂತುಸಿರಲದಂ | ಲಾಲಿಸುತಾ ನಂದನಂದನನು ಮುದದಿಂದಂ ||
ಲೀಲೆಯೊಳಾಮರದೊಳ್ ಕುಳಿ | ತಲ್ಲಾಡುತಲಂಬುಜಾಕ್ಷಿಯರೊಳಿಂತೆಂದಂ || ೧ ||
ರಾಗ ಶಂಕರಾಭರಣ ಆದಿತಾಳ
ನಾರಿಯರೇಕೆ ನೀವೆನ್ನ | ದೂರುವಿರಿ ಚಳಿಗೆ ನಡುಗಿ |
ನೀರೊಳಿರ್ಪುದೇಕೆ ಬರಿದೆ | ಸಾರಿರೆ ತಡಿಗೆ || ೧ ||
ಸಾರುವೆವೆಂತು ನಾವುಡುವ | ಸೀರೆಯನೆಲ್ಲವ ನೀ ಕೊಂ |
ಡೇರಿರುವೆ ವೃಕ್ಷವನ್ನು | ವಾರಿಜನೇತ್ರ || ೨ ||
ಮರವನೇರಿದರೇನು ನಿಮಗೆ | ಕೊರತೆಯಾಕೆ ನೀವ್ ನಿಮ್ಮಂತೆ |
ತೆರಳಿ ಮನೆಗೆತನ್ನೊಳಿಂಥಾ | ಸರಸವಿನ್ನೇಕೆ || ೩ ||
ಸರಸವಿನ್ನು ವಿರಸವಕ್ಕು | ತರವಲ್ಲ ನಮ್ಮನೀರೀತಿ |
ಹುರುಳುಗೆಡಿಸಬೇಡವಯ್ಯ | ಕರುಣಿಸು ಕೃಷ್ಣ || ೪ ||
ಕರುಣಿಸುವೆನೇನ ನಾನು | ಪುರದೊಳಿರ್ಪೆ ನಿಮ್ಮ ತಗಲು |
ಬರುವದಿಲ್ಲದಿದ್ದರೆನ್ನ | ಕರುಬುವಿರೇಕೆ || ೫ ||
ಮರದ ಮೇಲಿರ್ದ ಜಟ್ಟಿಗ | ನಿರುವನೇರ್ದ ಮನುಜರನ್ನು |
ಮುರಿದು ಮೆಲುವ ಇಳಿಯೊ ಸಾಯ | ದಿರು ಕಂಡ್ಯ ಕೃಷ್ಣ ||೬||
ನೀರೊಳು ಬತ್ತಲೆ ನಿತ್ತ | ನಾರಿಯ ಕಾಣುತ್ತ ಬಂದ |
ನೂರೊಂದುಂಟಲ್ಲಿ | ಘೋರ ಪಿಶಾಚಿ || ೭ ||
ವಾರಿಜಾಕ್ಷ ಕಡೆಗು ನಮ್ಮ | ಸೀರೆಯ ನೀನೀಯದಿರಲು |
ದೂರುವೆವೆಲ್ಲರು ತಳ | ವಾರರಿಗೆ ಕಂಡ್ಯ || ೮ ||
ಈಗಲೆ ತಳವಾರರಿಗೆ | ಪೋಗಿ ಪೇಳಿಯವರನಿಲ್ಲಿ |
ಗಾಗಿಕೊಂಡು ಬನ್ನಿರೀಗ | ಬೇಗನೀವೆಲ್ಲ || ೯ ||
ಪೋಗುವೆವೆಂತು ಬತ್ತಲೆ | ಯಾಗಿರ್ಪೆವು ನಾವೆಲ್ಲರ್ ನಮ್ಮ |
ಮೇಗೆ ದಯವ ಮಾಡೋ ಕರುಣಾ | ಸಾಗರ ಕೃಷ್ಣ ||೧೦||
ಭಾಷೆಯ ಪೇಳುವಿರಿ ತನ್ನೊ | ಳೀಸು ಪಂಥವಾದ ಮೇಲೆ |
ನಾ ಸೀರೆಯನೀವೆನೆಂಬೀ | ಆಸೆಯಿನ್ನೇಕೆ ||೧೧||
ಭಾಷೆಯಾಡೆವಯ್ಯಾ ನಿನ್ನ | ದಾಸಿಯರಾವು ದಮ್ಮಯ್ಯ |
ಮೀಸಅಳಿದೆವ್ ನಮ್ಮೊಳಿಂಥಾ | ವಾಸಿಯೆ ಕೃಷ್ಣ ||೧೨||
ಭಾಮಿನಿ
ಇಂತು ದೈನ್ಯದಿ ನುಡಿದ ತನ್ನೇ |
ಕಾಂತಭಕ್ತರನೀಕ್ಷಿಸುತ ಮನ |
ದಂತರಂಗದಿ ನಗುತ ಬಳಲಿಸಬಾರದೆಂದೆನುತ ||
ಕಾಂತೆಯರು ನೀವ್ ತಡಿಗೆ ಬಂದೋ |
ರಂತೆ ಬೇಡಿದಡೀವೆ ವಸನವ |
ನೆಂತೆನಲು ಲಜ್ಜಿಸುತ ತಮ್ಮೊಳಗೆಂದರಬಲೆಯರು || ೧ ||
ರಾಗ ನೀಲಾಂಬರಿ ರೂಪಕತಾಳ
ಏನ ಮಾಡುವೆಮ್ಮ | ಈ ವಿಧ ವಿಧದಲಿ ನಮ್ಮ |
ಮಾನವ ಕೊಂಡನು ರಂಗ | ಮಾಡುವುದಾವಂಗ || ಪಲ್ಲವಿ ||
ಮಾನಿನಿಯರು ಬತ್ತಲೆ ಮೀ | ವೀನಡತೆಯು ಸಾಕೆಂದಿಗು |
ತಾನೆಂದನು ಮೇಲಕೆ ಬರ | ಲಾನೀವೆನೆನುತ್ತ || ೧ ||
ನಾನಾ ಬಗೆಯಲಿ ಮೊದಲೆ ನಿ | ಧಾನಿಸಿಕೊಳ್ಳದೆ ಬುದ್ಧಿವಿ |
ಹೀನೆಯರಾದೆವು ಮುಂದಿ | ನ್ನೇನೌ ಗತಿ ನಮಗೆ || ೨ ||
ತಡಿಗಡರದೆ ಶಾಲೆಗಳನು | ಕೊಡುವವನಲ್ಲಿದು ನಿಜಮಿಗೆ |
ಕಡೆಗೂ ನಾವೀನೀರಲಿ | ನಡುಗುವುದೇಕಿನ್ನು || ೩ ||
ಒಡೆಯನು ನಮಗೆಂದೆನುತಲಿ | ದೃಢದಲಿ ನಂಬಿಹೆವೆಮ್ಮನು |
ಕೆಡಿಸನು ಸಂಶಯ ಮತ್ತೇ | ಕಡರುವ ತೀರವನು || ೪ ||
ಭಾಮಿನಿ
ಎಂದು ಯೋಚಿಸುತಬಲೆಯರು ಕರ |
ವೊಂದರಲಿ ನಾಣ್ವೆಡೆಯನಡಗಿಸು |
ತೊಂದರಲಿ ಪೊಂಬುಗರಿ ಮೊಲೆಗಳನುವುಕಿ ತಲೆವಾಗಿ ||
ಬಂದು ದಡದಲಿ ಮದನನುರುದೊರೆ |
ಯಿಂದುಗಿದ ಕೂರಸಿಗಳಂದದಿ |
ನಿಂದಿರಲು ಕಾಣುತ್ತ ನಗುತಿಂತೆಂದನಸುರಾರಿ || ೧ ||
ರಾಗ ಕೇದಾರಗೌಳ ಅಷ್ಟತಾಳ
ಲಲನೆಯರಿರ ನೀವು ನಿರ್ವಸನೆಯರಾಗಿ | ಇಳಿವಿರಿ ಯಮುನೆಯಲಿ ||
ಫಲವಿಲ್ಲದಾಯ್ತು ನೀವ್ ಮಾಡಿದ ವ್ರತಕೆ ನಿ | ಷ್ಫಲವಾಯಿತದರಿಂದಲಿ || ೧ ||
ಅರಿಯದಾದೆವು ನಾವು ಕ್ಷಮಿಸಬೇಕೆಂದು ದೇ | ವರಿಗತಿ ಭಕ್ತಿಯಲಿ ||
ಕರವೆತ್ತಿ ಕಯ್ ಮುಗಿದಲ್ಲದೆ ನಿಮ್ಮಿಷ್ಟ | ದೊರಕದೆಂದೆನೆ ಕೇಳುತ್ತ || ೨ ||
ರಮಣಿಯರಹುದೆಂದು ನಂಬಿ ನಾಚುತಲೊಂದು | ಕರದಿಂದ ನಮಿಸೆ ಕಂಡು ||
ಸುರರಿಗೆರಡು ಕಯ್ಯೊಳೆರಗಬೇಕೆಂಬುದ | ನರಿಯಿರೆ ನೀವೆಂದನು || ೩ ||
ದನುಜಾರಿಗಾಯ್ತೊಂದು ಕರದಲಿ ಮಣಿದರೆಂ | ದೆನೆ ಕೇಳಿ ಲಜ್ಜಿಸುತ ||
ವನಜಾಕ್ಷಿಯರ್ ತಮ್ಮೊಳೊರ್ವಳ ಮೊಗ | ವನು ಕಾಣುತೊಯ್ಯನಂದು || ೪ ||
ತೊಡೆಯೊಳಗವಚಿ ನಾಣಿನ ತಾಣವನ್ನು ಕಯ್ | ಯೆರಡೆತ್ತಿ ಮುಗಿದುನಿಂದು ||
ಕೊಡಿಸಿನ್ನಾದರೂ ಸೀರೆಗಳನು ದಮ್ಮಯ್ಯ ನಿ | ನ್ನಡಿಗೆರಗುವೆವೆಂದರು || ೫ ||
ಕಂದ
ಎಂದಾ ಸತಿಯರ್ ನಿಂದಿರು | ವಂದವನೀಕ್ಷಿಸುತಲಚ್ಯುತಂ ನಸುನಗುತಂ |
ಒಂದೊಂದಾಗಿಯೆ ಸೀರೆಗ | ಳಂದವನೀಕ್ಷಿಸಿದುಸಿರ್ದಡೀವೆನೆನಲಿಂತೆಂದರ್ || ೧ ||
ರಾಗ ಸೌರಾಷ್ಟ್ರ ಆದಿತಾಳ
ಕರುಣಾಳು ಕೃಷ್ಣ ತನ್ನದು ಕಾಗಿನ ಸೀರೆ | ಹರುಷದೊಳೀಯೆನೆ ಕೇಳಿ ||
ಸರಸಿಜಗಂಧಿನಿ ನಗುತಲಾ | ತರುಣಿಗಿತ್ತನು ನಲವಿಂದ || ೧ ||
ಕೆಂಗಾವಿಯ ಶಾಲೆ ತನ್ನದು ನೀ ಕೊಡು | ರಂಗಯ್ಯ ಎಂದೊರ್ವಳೆನೆ ||
ಅಂಗನೆಮಣಿಯೆ ಕೊಳ್ಳೆಂದು ವೇಗದಿ ಕೋಮ | ಲಾಂಗಿಗಿತ್ತನು ನಲವಿಂದ || ೨ ||
ಹಳದಿ ಪಟ್ಟಿಯ ಸೀರೆ ತನ್ನದೆಂದೊರ್ವಳು | ಗಳಿಲನೀಯೆನಲು ಕೇಳಿ ||
ಅಳಿಗುರುಳಬಲೆ ಕೊಳ್ಳೆಂದು ಗೋಪಾಲನು | ತಳುವದಿತ್ತನು ಕೃಪೆಯಿಂದ || ೩ ||
ಹೂವಿನ ಸೀರೆ ತನ್ನ ಪಾಲಿಸೆಂದೊರ್ವ | ಭಾವೆಯುಸಿರೆ ಕೇಳುತಂದು ||
ಭಾವಜಜನಕ ತಾ ಸತಿಗದನಿತ್ತನು | ಠೀವಿಯೊಳತಿ ವೇಗದಿಂದ || ೪ ||
ಪಟ್ಟೆಯಂಚಿನ ಸೀರೆ ತನ್ನದೆಂದೊರ್ವಳು | ದುಷ್ಟಮರ್ದನ ಪಾಲಿಸೆನಲು ||
ಬಟ್ಟಕುಚದ ಬಾಲೆಕೊಳ್ಳೆಂದು ವೇಗದಿ | ಕೊಟ್ಟನು ಬಾಲಗೋಪಾಲ || ೫ ||
ಗಿಣಿಯ ಬಣ್ಣದ ಸೀರೆ ತನ್ನದೆಂದೊರ್ವಳು | ಮಣಿದು ಲಜ್ಜೆಯೊಳಿರೆ ಕಂಡು ||
ಗುಣವಂತ ನಾಚುವೆಯೇತಕ್ಕೆ ಕೊಳ್ಳೆಂದು | ಕ್ಷಣದೊಳಿತ್ತನು ರಂಗನಾಥ ||೬||
ಜಲತಾರಸೀರೆ ತನ್ನದು ಪಾಲಿಸೆಂದೊರ್ವ | ಲಲನೆಯುಸಿರೆ ಕೇಳುತ ||
ಚೆಲುವೆಯರರಸಿ ಕೊಳ್ಳೆಂದು ವೇಗದೊಳಾ | ಲಲನೆಗಿತ್ತನು ನಲವಿಂದ || ೭ ||
ಈ ಪರಿಯಲಿ ತಮ್ಮ ತಮ್ಮ ವಸ್ತ್ರವತೋರಿ | ಶ್ರೀಪತಿ ಕರುಣದೋರೆಂಬಾ ||
ಗೋಪಿಯರನು ಕಾಣುತೊಬ್ಬೊಬ್ಬರ್ಗಿತ್ತನ್ | ಗೋಪಾಲಕೃಷ್ಣನಿಂತೆಲ್ಲ || ೮ ||
ಭಾಮಿನಿ
ಅರಸ ಕೇಳಚ್ಯುತನು ಕೊಟ್ಟಂ |
ಬರಗಳನು ಕೊಂಡುಟ್ಟು ಸರ್ವಾ |
ಭರಣದಲಿ ರಂಜಿಸಿದರಂಗಜನಾಳ್ಗಳೆಂಬಂತೆ ||
ಸರಸವಾಡುತ ಮರನೊಳಿಹಮುರ |
ಹರನ ಕಂಡುಭ್ರಮಿಸಿ ಮೇಲ್ಮೊಗ |
ವೆರಸಿ ಮೌನಿಗಳಂತೆ ಮೆಯ್ಮರೆದಿರ್ದರಬಲೆಯರು || ೧ ||
ವಾರ್ಧಿಕ
ಇಂತಯ್ದೆ ನಾರಿಯರ್ ನಿಂತಿರಲು ಕಾಣುತೇ |
ಕಾಂತಭಕ್ತರ ಮನದ ಚಿಂತಿತಾರ್ಥವನೊಮ್ಮೆ |
ಯಂತರಂಗದಿ ಸಲಿಸುವೆಂ ತಳುವದೆಂದೊಯ್ಯದಂತರಿಸದವನಿಗಿಳಿದು ||
ಕಂತುಪಿತನಾ ವಿರಹಸಂತಾಪದಿಂ ಕುದಿವ |
ಕಾಂತೆಯರ ಹೃದ್ಭಾವಮಂ ತಿಳಿದು ಕರುಣರಸ |
ವಾಂತಿರಲ್ ಸತಿಯರತ್ಯಂತ ಮದದಿಂದಪ್ಪುವಂತರಂಗದೊಳಿರ್ದನು || ೧ ||
ರಾಗ ಭೈರವಿ ಝಂಪೆತಾಳ
ತರುಣಿಯರ ಮನದಿರವ | ನರಿತು ವೇಗದಿ ನಗುತ |
ಕರವಿಡಿವುತೆಂದನಾ | ಸರಸಿಜಾಂಬಕನು || ೧ ||
ವನಿತೆಯರು ಬಳಲಿದಿರಿ | ತನಗಾಗಿ ಬಹುವ್ರತಗ |
ಳನು ಮಾಡಿದಿರಿ ಮೆಚ್ಚಿ | ದೆನು ಮನದೊಳಿನ್ನು || ೨ ||
ಆವಪರಿಯಿಂದ ನೀ | ವೋವಿ ತನ್ನನು ಭಜಿಸ |
ಲೀವೆನಿಹಪರಗಳಲಿ | ಭಾವಿಸಿದ ವರವ || ೩ ||
ಬಲ್ಲೆ ನಿಮ್ಮಯ ಬಯಕೆ | ಯೆಲ್ಲ ನಾ ಸಲಿಸುವೆನು |
ವಲ್ಲಭನು ತಾನಾದೆ | ಇಲ್ಲ ಸಂಶಯವು || ೪ ||
ನಾರಿಯರು ನೀವ್ ಮನವ | ಸೂರೆಗೊಂಡಿರಿ ಎನ್ನೊ |
ಳೀರಾತ್ರಿಯಿಹುದೆನುತ | ಭೂರಿಹರುಷದಲಿ || ೫ ||
ಭಾಮಿನಿ
ಲಲನೆಯರು ಕೇಳುತ್ತ ಕೃಷ್ಣನ |
ಲಲಿತವಾಕ್ಯವನಂದು ಲಜ್ಜೆಯ |
ನುಳಿದು ಬಂದಪ್ಪಿದರು ಬಿಂಬಾಧರವ ಚುಂಬಿಸುತ ||
ಗಳರವದಿ ಮೊಗವೀಕ್ಷಿಸುತ ಬಲ್ |
ಮೊಲೆಗಳಿಂದೆದೆಗೊತ್ತಿ ವಾಂಛಿತ |
ಫಲವ ಪಡೆದೆವೆನುತ್ತ ಮೆಯ್ ಮರೆದಿರ್ದರೈಕ್ಯದಲಿ || ೧ ||
ವಾರ್ಧಿಕ
ತಕ್ಕೆ ಚುಂಬನ ಲಲ್ಲೆ ಸವಿನೋಟವರೆಗೋಪ |
ಸಿಕ್ಕು ಸಡಲತಿ ಜಾಣ್ವೆ ಬಿಗುಬಂಧ ಬಗೆಯಿಂದ |
ಠಕ್ಕುಠೌಳಿವಿನೋದ ಮುದ ಮೋಡಿ ಮದಗಾಡಿ ಮುಂತಾದ ಚೇಷ್ಟೆಗಳನು ||
ಸೊಕ್ಕು ಜವ್ವನೆಯರಚ್ಯುತನಂತರಂದನು |
ದಕ್ಕರಿಂದಂಗಜನ ಕಲೆದೋರಿ ನಲವೇರಿ |
ತಕ್ಕಯಿಸಿ ಮೆಯ್ಮರೆವುತಪ್ಪಿರ್ದ ರೊಪ್ಪಿರ್ದರೆರಡಿಲ್ಲದೊಂದುಗೂಡಿ || ೧ ||
ಕಣ್ಮುಚ್ಚಿ ಕಾತರದಿ ಮದವೇರಿ ಮೆಯ್ ಮರೆದು |
ಬಣ್ಮೊಲೆಗಳಿಂದೆದೆಗಮರ್ದೊತ್ತಿ ಬಿಗಿಯಪ್ಪಿ |
ನುಣ್ಮೊಗದಿ ಮೊಗಕೆ ಚುಂಬನಗೊಟ್ಟು ಚೆಂದುಟಿಯ ಸವಿಯನುಂ ಪೀರ್ದು ಪೀರ್ದು ||
ಜಾಣ್ಮೆಯಿಂದಂಗಜನ ಕಲೆನೆಲೆಗಳಿಂ ತುಡುಕಿ |
ನೊಣ್ಮೊಳಗಿಸುತ್ತಲೊಪ್ಪಿರ್ದರಾಗೋಪಾಲ |
ಪೆಣ್ಮಕ್ಕಳಚ್ಯುತನ ತನುಭೂಜಕುರೆ ತೊಡರ್ದನುಪಮಲತೆಗಳೆಂಬೊಲು || ೨ ||
ರಾಗ ಮಧುಮಾಧವಿ ತ್ರಿವುಡೆತಾಳ
ಇಂತು ಸತಿಯರೊಳತಿ ವಿನೋದದಿ |
ಕಂತುಪಿತನಾ ರಾತ್ರಿಗಳೆದುರು |
ಸಂತಸದೊಳಾ ನಾರಿಯರನೋ | ರಂತೆ ಕರೆದಿಂತೆಂದನು || ೧ ||
ತರುಣಿಯರು ನೀವಿನ್ನು ನಿಜಮಂ |
ದಿರಕೆ ತೆರಳುವುದನಿತರೆನ್ನನು |
ಮರೆಯದಿರಿ ನಿಮ್ಮಿಷ್ಟವನು ನಾ | ನಿರದೆ ಸಲಿಸುವೆ ನಿಚ್ಚವು || ೨ ||
ಎನುತ ಬೀಳ್ಗೊಟ್ಟಂದು ಗೋಕುಲ |
ಕನುಪಮನು ನಡೆತಂದನೀಪರಿ |
ದಿನದಿನದ ಲೀಲಾವಿನೋದದಿ | ವನಜಲೋಚನನಿರ್ದನು || ೩ ||
ಭಾಮಿನಿ
ಎಲೆ ಧರಾಧಿಪ ಕೇಳು ಹರಿಯದು |
ಕುಲದೊಳಿಂತುದ್ಭವಿಸಿವರಗೋ |
ಕುಲದೊಳಗೆ ತಾ ಬೆಳೆವುತಿರ್ದನು ಬಾಲಕೇಳಿಯಲಿ ||
ಕಲುಷಹರವಹ ಕಥನವಿದನಾ |
ರೊಲಿದು ಪೇಳ್ವರು ಕೇರ್ಳವರವರಿಗೆ |
ಸುಲಭದಲಿ ತಾನೊಲಿವನಚ್ಯುತನೆಂದನಾ ಮುನಿಪ || ೧ ||
ರಾಗ ಮಾರವಿ ಝಂಪೆತಾಳ
ನೀಲಮೇಘಾಂಗನಿಗೆ ನಿಜಶರಣಸಾಂಗನಿಗೆ |
ಕಾಲಭಯಶಿಕ್ಷನಿಗೆ ಕಮಲಾಕ್ಷಗೆ |
ಬಾಲಾರ್ಕಚಂದ್ರಾಗ್ನಿ ಬಲುಕೋಟತೇಜನಿಗೆ |
ಮೂಲೋಕದೊಡೆಯನಿಗೆ ಮುರವೈರಿಗೆ ||
ಜಯ ಮಂಗಲಂ | ನಿತ್ಯ | ಶುಭ ಮಂಗಲಂ || ೧ ||
ಕಾಮಪಿತನಾದವಗೆ ಕಡುಜಟ್ಟಿ ಮಾಧವಗೆ |
ಸಾಮಗಾನವಿಲೋಲ ಸರ್ವೇಶಗೆ |
ವಾಮದೇವನ ಮಿತ್ರ ವಸುದೇವಪುತ್ರನಿಗೆ |
ಶ್ರೀಮಹಾಗೋವಿಂದ ಗೋಪಾಲಗೆ ||
ಜಯ ಮಂಗಲಂ | ನಿತ್ಯ | ಶುಭ ಮಂಗಲಂ || ೨ ||
ವರಹಾವತಾರನಿಗೆ ದುರಿತಸಂಹಾರನಿಗೆ |
ಪರಮಪಾವನನಿಗೆ ಪಾಪನಾಶನಿಗೆ |
ಧರೆಯೊಳತ್ಯಧಿಕವೆನಿಸುವ ಕಣ್ವಪುರದೊಡೆಯ |
ವರಮಹಾಗೋಪಾಲ ಶ್ರೀಕೃಷ್ಣಗೆ |
ಜಯ ಮಂಗಲಂ | ನಿತ್ಯ | ಶುಭ ಮಂಗಲಂ || ೩ ||
ಯಕ್ಷಗಾನ ಶ್ರೀಕೃಷ್ಣಲೀಲೆ ಮುಗಿದುದು
Leave A Comment