ಶ್ರೀದೇವಿ ಉನ್ನಿ ಮೂಲತಃ ಕೇರಳದವರಾದರೂ ಕಳೆದ ಮೂರು ದಶಕಗಳಿಂದ ಬೆಂಗಳೂರಿನಲ್ಲೇ ನೆಲೆಸಿ ಇಲ್ಲಿನ ಅನೇಕ ನೃತ್ಯಪಟುಗಳಿಗೆ ಮೋಹಿನಿ ಅಟ್ಟಂ ಶೈಲಿಯ ನೃತ್ಯ ಗುರುಗಳಾಗಿ ಹೆಸರು ಮಾಡಿರುವುದೇ ಅಲ್ಲದೇ ಮೋಹಿನಿ ಅಟ್ಟಂ ನೃತ್ಯ ರೂಪಕಗಳನ್ನು ಸಂಯೋಜಿಸಿ ಆ ಸಂಪ್ರದಾಯವನ್ನು ಉಳಿಸಿಕೊಂಡು ಬಂದವರಲ್ಲಿ ದೇಶದಲ್ಲೇ ಆಗ್ರಸ್ಥಾನವನ್ನು ಗಳಿಸಿದರು.

ಶ್ರೀ ಪಿ.ಎನ್. ಮೆನನ್ ಹಾಗೂ ಶ್ರೀಮತಿ ಪಾರ್ವತಿ ಕುಟ್ಟಿ ನೇಸಿಯಾರ್ ಅವರ ಮಗಳಾಗಿ ಜನಿಸಿದ ಶ್ರೀದೇವಿಗೆ ತಾಯಿಯೇ ಪ್ರಥಮ ಗುರು. ಕೇರಳದ ಕಲ್ಲಿಕೋಟೆಯಲ್ಲಿ ಓದುತ್ತಿದ್ದ ಕಾಲದಿಂದಲೂ ಕಲಾಭಿಜ್ಞತೆ ಆಕೆಯಲ್ಲಿ ಮನೆಮಾಡಿತ್ತು. ಮುಂದೆ ಕಲಾಮಂಡಲಂ ಶ್ರೀಮತಿ ಚಂದ್ರಿಕಾ ಹಾಗೂ ಗುರು ಗೋಪಿನಾಥ್ ಅವರ ಶಿಷ್ಯರಾಗಿದ್ದ ಕೆ.ಕೆ. ಬಾಲಕೃಷ್ಣನ್ ನಾಯರ್ ಅವರಲ್ಲೂ ಮುಂದೆ ಶ್ರೀ ಕೇಳಪ್ಪನ್ ಅವರಲ್ಲೂ ಉನ್ನತ ಶಿಕ್ಷಣ ಮಾರ್ಗದರ್ಶನ ಪಡೆದು ಈ ಸಂಪ್ರದಾಯದ ನೃತ್ಯ ಶೈಲಿಯನ್ನು ಮೈಗೂಡಿಸಿಕೊಂಡವರು. ದೈವದತ್ತವಾಗಿಯೇ ಸುಪ್ತವಾಗಿದ್ದ ಈ ಕಲೆ ಆಕೆಯ ಐದು ದಶಕಗಳ ಅನುಭವದೊಂದಿಗೆ ಪಕ್ವವಾಗಿ ಬೆಳೆದು ಉತ್ತಮ ಫಲ ನೀಡಿದೆ.

ಸ್ವಾತಿ ತಿರುನಾಳ್, ಕಾಳಿದಾಸ ಶಾಕುಂತಲಮ್, ಪದ್ಮನಾಭಂ ಭಜರೆ ಹಾಗೂ ನಾರದ ಕುರುವಂಜಿ ಮುಂತಾದ ರೂಪಕಗಳು ಅನೇಕ ನೃತ್ಯೋತ್ಸವಗಳಲ್ಲಿ ರಾಷ್ಟ್ರಾದ್ಯಂತ ಪ್ರದರ್ಶನಗೊಂಡು ಪ್ರಶಂಸೆಗೆ ಪಾತ್ರವಾಗಿವೆ. ಅಷ್ಟೇ ಸಾದೆಂಬಂತೆ ಮೋಹಿನಿ ಅಟ್ಟಂ ಇತಿಹಾಸದ ಕುರಿತು ಸಾಕಷ್ಟು ಸಂಶೋಧನೆ ನಡೆಸಿದ್ದಾರೆ.

ನಾಟಕ ಕೊರವಂಜಿ ಅವರ ಪ್ರಪ್ರಥಮ ಮೋಹಿನಿ ಅಟ್ಟಂ ನೃತ್ಯ ರೂಪಕ. ಅದನ್ನು ಕನ್ನಡ ಭಾಷೆಗೆ ಅಳವಡಿಸಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪ್ರದರ್ಶಿಸಿದಾಗ ನೃತ್ಯ ಕ್ಷೇತ್ರದ ದಿಗ್ಗಜಗಳ ಮತ್ತು ಪ್ರೇಕ್ಷಕ ವೃಂದದಿಂದ ತಮಬು ಪ್ರಶಂಸೆಗೆ ಪಾತ್ರವಾದದ್ದಲ್ಲದೆ ಶ್ರೀದೇವಿ ಅವರು ಬೆಂಗಳೂರಲ್ಲೇ ನೆಲೆಸುವಂತೆ ಮಾಡಿತು. ೧೯೭೦ರ ದಶಕದಲ್ಲಿ ಬೆಂಗಳೂರಿನಲ್ಲಿ ನೆಲೆಸಿ ತಮ್ಮದೇ ಆದ ’ಮೋಹಿನಿ ಅಟ್ಟಂ ನೃತ್ಯವೇದಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ತಮ್ಮ ಕಲಾ ಜೀವನ ಆರಂಭಿಸಿದರು. ಮುಂದೆ ಅವರ ಮಗಳು ಹೆಸರಾಂತ ಚಿತ್ರನಟಿ ಮೊನಿಷಾ ಉನ್ನಿ ಅಕಾಲ ಮರಣಕ್ಕೆ ತುತ್ತಾದಾಗ ಮಗಳ ಜ್ಞಾಪಕಾರ್ಥ ಅದನ್ನು ’ಮೋನಿಷಾ ಆರ್ಟ್ಸ್’ ಎಂದು ಬದಲಾಯಿಸಿ ನೃತ್ಯ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಇವರ ನಾರದ ಕೊರವಂಜಿ ನೃತ್ಯ ರೂಪಕದ ಕುರಿತು ರಾಜ್ಯದ ಎಲ್ಲ ಪ್ರಮುಖ ಪತ್ರಿಕೆಗಳೂ ಮುಕ್ತಕಂಠದಿಂದ ಪ್ರಶಂಸಿಸಿವೆ.

ಹೀಗೆ ಕರ್ನಾಟಕದಲ್ಲಿ ಕೇರಳದ ಕಲೆಯಾದ ಮೋಹಿನಿ ಅಟ್ಟಂ ನೃತ್ಯ ಶೈಲಿಯನ್ನು ಅಭಿವೃದ್ಧಿಗೊಳಿಸಿ ಬಹುಮುಖ ಸೇವೆ ಸಲ್ಲಿಸುತ್ತಿರುವ ಶ್ರೀದೇವಿ ಉನ್ನಿ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೨ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.