ತಮ್ಮ ಕಲಾ ಪ್ರೌಢಿಮೆ, ಸೃಜನಶೀಲತೆಗಳಿಂದ ನೃತ್ಯ ಮಾಧ್ಯಮದಲ್ಲಿ ಅಂತರರಾಷ್ಟ್ರೀಯ ಮನ್ನಣೆ ಪಡೆದ ಕಲಾವಿದರಾಗಿ ರೂಪುಗೊಂಡವರು ಶ್ರೀಧರ್ ಭರತನಾಟ್ಯದಲ್ಲಿ ಶ್ರೀಧರ್ ಅವರಿಗೆ ಪ್ರಾರಂಭಿಕ ಶಿಕ್ಷಣ ದೊರೆತದ್ದು ಬೆಂಗಳೂರಿನ ವೆಂಕಟೇಶ ನಾಟ್ಯಮಂದಿರದ ಗುರು ಶ್ರೀಮತಿ ರಾಧಾ ಶ್ರೀಧರ್ ಅವರಲ್ಲಿ ನಂತರ ಚೆನ್ನೈನ ಕಲಾಕ್ಷೇತ್ರದ ಗುರು ಪ್ರೊ. ಎಂ. ಆರ್. ಕೃಷ್ಣಮೂರ್ತಿ ಮತ್ತು ಗುರು ಶ್ರೀಮತಿ ಕೃಷ್ಣವೇಣಿ ಲಕ್ಷ್ಮಣನ್ ಅವರಲ್ಲಿ ಶ್ರೀಧರ್ ಭರತನಾಟ್ಯದ ಉನ್ನತ ಶಿಕ್ಷಣ ಪಡೆದರು. ಕಲಿಕೆಯ ಹಂತದಿಂದಲೇ ತಮ್ಮ ಪ್ರತಿಭಾವಪೂರ್ಣ ಕಾರ್ಯಕ್ರಮಗಳ ಮೂಲಕ ಜನಾನುರಾಗವನ್ನು ಗಳಿಸಿಕೊಂಡಿದ್ದ ಶ್ರೀಧರ್ ನೃತ್ಯ ಕಲಾವಿದೆ ಅನುರಾಧಾ ಅವರನ್ನು ಮದುವೆಯಾದ ಮೇಲೆ, ಜೋಡಿ ಕಾರ್ಯಕ್ರಮಗಳ ಮೂಲಕ ತಮ್ಮ ನೃತ್ಯ ಯಾತ್ರೆಯನ್ನು ಇನ್ನೊಂದು ಹಾದಿಯಲ್ಲಿ ಮುಂದುವರಿಸಿದರು.

ಶ್ರೀಧರ್ ಅವರ ನೃತ್ಯ ಸಂಯೋಜನೆಗಳು ಎಂದೂ ಶಾಸ್ತ್ರದ ಚೌಕಟ್ಟನ್ನು ಮೀರದ ಅಸಾಧಾರಣ ಸೃಜನ ಶೀಲತೆಯ ಪ್ರಬುದ್ಧ ರೂಪಕಗಳು. ಸಾಹಿತ್ಯ ಮತ್ತು ಸಂಗೀತದ ಪ್ರಜ್ಞೆಯಿರುವುದರಿಂದ ಶ್ರೀಧರ್ ಅವರ ರೂಪಕಗಳು ವಿಶ್ವಾದ್ಯಂತ ಜನಮನ್ನಣೆ ಗಳಿಸಿವೆ. ತಮ್ಮ ಪತ್ನಿ ಅನುರಾಧಾ ಅವರೊಂದಿಗೆ ಶ್ರೀಧರ್ ವೇದಿಕೆಗೆ ತಂದಿರುವ ರಾಮಾಯಣ, ಕಾಳಿದಾಸನ ಕುಮಾರ ಸಂಭವಂ, ಜೈನಧರ್ಮದ ಸಾರವನ್ನು ತಿಳಿಸುವ ಸಮ್ಯಕ್ ಜ್ಞಾನಂ, ಕನ್ನಡ ಕಾವ್ಯ ದರ್ಶನ, ಸನಾತನ ಧರ್ಮದ ತಳಹದಿಯ ಮೇರೆಗೆ ಗಂಡು ಹೆಣ್ಣಿನ ಸಂಬಂಧವನ್ನು ಕಟ್ಟಿಕೊಡುವ ನಾತಿಚರಾಮಿ ಶ್ರೀಧರ್ ಒಬ್ಬರೇ ಸಾದರಪಡಿಸುವ ಭರತ ಶಪಥಂ ಇವೆಲ್ಲ ಶ್ರೀಧರ್ ಅವರಲ್ಲಿನ ಸೃಜನಶೀಲತೆ ಮತ್ತು ಚಿಂತನೆಗೆ ಸಾಕ್ಷಿಯಾಗಿವೆ.

ಭಾರತದ ಪ್ರಮುಖ ನಗರಗಳ ಉತ್ಕೃಷ್ಟ ಉತ್ಸವಗಳಲ್ಲಿ ನಿರಂತರ ನರ್ತಿಸುತ್ತಿರುವುದಲ್ಲದೆ ಅನೇಕ ಬಾರಿ ಅಮೇರಿಕಾ, ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ, ಸ್ವಿರ್ಜಲ್ಯಾಂಡ್, ಸಿಂಗಪೂರ್, ಕೀನ್ಯಾ ಮತ್ತು ಅರಬ್ ದೇಶಗಳ ಪ್ರವಾಸ ಮಾಡಿ ಕಾರ್ಯಕ್ರಮ, ಕಾರ್ಯಾಗಾರ ಮತ್ತು ಸೋದಾಹರಣ ಉಪನ್ಯಾಸಗಳನ್ನು ನೀಡುತ್ತಾ ಬಂದಿದ್ದಾರೆ.ತಮ್ಮ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ಖೇಚರ ಅಕಾಡೆಮಿ ಆಫ್ ಭರತನಾಟ್ಯಂ ಸಂಸ್ಥೆ ಆರಂಭಿಸಿ ಮುಂದಿನ ಪೀಳಿಗೆಯನ್ನು ತಯಾರು ಮಾಡುವ ಗುರುತರ ಜವಾಬ್ದಾರಿಯನ್ನೂ ಶ್ರೀಧರ್ ಸಮರ್ಥವಾಗಿ ಮುಂದುವರಿಸುತ್ತಿದ್ದಾರೆ.

ಚಲನಚಿತ್ರ ಮಾಧ್ಯಮದ ಸಂವೇದನಾಶೀಲ ನಟರಾಗಿಯೂ ಹೆಸರು ಮಾಡಿರುವ ಶ್ರೀಧರ್ ಸಂತ ಶಿಶುನಾಳ ಶರೀಫ ಚಿತ್ರದ್ಲಲಿನ ತಮ್ಮ ಶರೀಫರ ಪಾತ್ರಕ್ಕೆ ಕರ್ನಾಟಕ ಸರ್ಕಾರದಿಂದ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೆ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ ನೃತ್ಯಕಲಾ ಭೂಷಣ, ಚೆನ್ನೈನ ಭಾರತ್ ಕಲಾಚಾರ್ ಸಂಸ್ಥೆಯಿಂದ ಯುವ ಕಲಾಭಾರತಿ ಕರ್ನಾಟಕ ಪತ್ರಕರ್ತರ ಪರಿಷತ್ತಿನಿಂದ ಕರ್ನಾಟಕ ಚೇತನ ಪ್ರಶಸ್ತಿ ಗಳಿಸಿರುವ ಶ್ರೀಧರ್, ೨೦೦೨ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ನೃತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಶ್ರೀಧರ್ ಅವರಿಗೆ ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.