ಚಂದ್ರನಿಲ್ಲದ ರಾತ್ರಿ ಆಕಾಶ. ಮೋಡಗಳ ಹೆಸರಿಲ್ಲ. ನಕ್ಷತ್ರಗಳು ಕಣ್ಣು ಮಿಟಕಿಸುತ್ತಿವೆ. ಬಾನಿನ ಒಂದು ಮೂಲೆಯಲ್ಲಿ ಹಠಾತ್ತಾಗಿ ಜೀವಸ್ಪಂದನವಾಗುತ್ತದೆ. ಆ ಮೊದಲು ನಾವು ಕಂಡಿರದಿದ್ದ ಒಂದು ಬೆಳಕಿನ ತುಣುಕು ಚಲಿಸಲು ಆರಂಭಿಸುತ್ತದೆ. ನೋಡುನೋಡುತ್ತಿದ್ದಂತೆಯೇ ಅದರ ವೇಗ, ಪ್ರಕಾಶ ಎರಡೂ ಏರುತ್ತದೆ. ಅಷ್ಟರಲ್ಲಿಯೇ ಅದು ನಂದಿ ಮರೆಯಾಗಿಯೂ ಹೋಗುತ್ತದೆ. ಇದು ಉಲ್ಕೆಯ ಅಲ್ಪ ಆದರೂ ಜಾಜ್ವಲ್ಯಮಾನ ಜೀವನ. ಎಲ್ಲಿಂದಲೋ ಹುಟ್ಟಿ ಬಂದು ತನ್ನನ್ನೇ ಉರಿಸಿಕೊಂಡು ಪ್ರಪಂಚಕ್ಕೆ ಶಕ್ತಿಮೀರಿ ಬೆಳಕು ಬೀರಿ ಹೊಸ ದಾರಿಯಲ್ಲಿ ಸಾಗಿ ಎಲ್ಲಿಯೋ ಮರೆಯಾಗಿ ಹೋಗುವ ಕ್ಷಿಪ್ರ ಬಾಳು. ಗಣಿತ ಪ್ರಪಂಚಕ್ಕೆ ಆಧುನಿಕ ಭಾರತದ ಶ್ರೇಷ್ಠತಮ ಕೊಡುಗೆಯಾದ ಶ್ರೀನಿವಾಸ ರಾಮಾನುಜನ್ ಬಾಳಿದ್ದು, ಕಾಂತಿ ಬೀರಿದ್ದು, ಮಾಯವಾಗಿ ಹೋದದ್ದು ಹೀಗೆ, ಬಹು ಕಾಂತಿಯ ಉಲ್ಕೆಯ ಹಾಗೆ.

ಅಸಾಧಾರಣ ಬುದ್ಧಿಶಕ್ತಿಬಡತನದ ಪಂಜರದಲ್ಲಿ

ನಮ್ಮ ಕತೆ ಆರಂಭವಾಗುವುದು ತಮಿಳುನಾಡಿನ ಕುಂಭಕೋಣ ಪಟ್ಟಣದಲ್ಲಿ. ಕಾಲ ೧೮೫೦ರ ಅನಂತರ. ಶ್ರೀನಿವಾಸ ಅಯ್ಯಂಗಾರ್ ಎನ್ನುವವರು ಅಲ್ಲಿನ ಒಂದು ಖಾಸಗಿ ಬಟ್ಟೆ ಅಂಗಡಿಯಲ್ಲಿ ಗುಮಾಸ್ತರಾಗಿ ಬಡತನದ ಜೀವನ ನಡೆಸುತ್ತಿದ್ದರು. ಕೋಮಲಮ್ಮಾಳ್‌ಇವರ ಹೆಂಡತಿ, ರಂಗಮ್ಮಾಳ್ ಈಕೆಯ ತಾಯಿ. ನಾಮಕ್ಕಲ್ಲಿನ ನಾಮಗಿರಿದೇವಿಯ ಪರಮಭಕ್ತೆಯಾಗಿದ್ದ ರಂಗಮ್ಮಾಳ್ ಮಹಾ ಅನುಭಾವಸ್ಥೆ. ಪದೇ ಪದೇ ಈಕೆಗೆ ಸಮಾಧಿ ಬರುತ್ತಿತ್ತಂತೆ. ಅಂಥ ಸ್ಥಿತಿಯಲ್ಲಿ ತಾನು ನಾಮಗಿರಿ ದೇವಿಯೆಂದೇ ಉದ್ಗರಿಸುತ್ತಿದ್ದಂತೆ. ತಮಗೊಬ್ಬ ಸತ್ಪುತ್ರನನ್ನು ಅನುಗ್ರಹಿಸಬೇಕೆಂದು ಅಯ್ಯಂಗಾರ್ ದಂಪತಿಗಳು ನಾಮಗಿರಿದೇವಿಗೆ ಪ್ರಾರ್ಥನೆ ಸಲ್ಲಿಸಿದರು. ಮುಂದೆ ರಾಮಾನುಜನ್‌ಹುಟ್ಟಿದಾಗ (ಡಿಸೆಂಬರ್ ೨೨, ೧೮೮೭) ಆ ದೇವಿಯ ವರಪ್ರಸಾದವೇ ಈತ ಎಂದು ಈ ಸಾತ್ವಿಕ ದಂಪತಿಗಳು ನಂಬಿದ್ದು ಸಹಜವೇ.

ರಾಮಾನುಜನ್‌ಹುಟ್ಟಿ ಬೆಳೆದದ್ದು ಸಂಪ್ರದಾಯ ನಿಷ್ಠ ಶ್ರೀ ವೈಷ್ಣವ ಬ್ರಾಹ್ಮಣ ಪರಿಸರದಲ್ಲಿ; ಹಿಂದಿನಿಂದ ನಡೆದು ಬಂದ ಸಂಪ್ರದಾಯವನ್ನೇ ಚಾಚೂ ಬಿಡದೆ ಮನುಷ್ಯ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದ ಕಾಲದಲ್ಲಿ. ಹಾಗಿದ್ದರೂ ಆಗ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪಾಶ್ಚಾತ್ಯ ವಿದ್ಯಾಭ್ಯಾಸದ ಆಸೆ. ಇದಕ್ಕೆ ಮುಖ್ಯ ಕಾರಣ ಈ ವಿದ್ಯಾಭ್ಯಾಸದ ಮೂಲಕ ಒಳ್ಳೆಯ ಕೆಲಸ ಸಿಕ್ಕುತ್ತಿತ್ತು ಎನ್ನುವುದು. ಬ್ರಿಟಿಷ್ ಚಕ್ರಾಧಿಪತ್ಯದ ಆಳ್ವಿಕೆಯಲ್ಲಿದ್ದ ದಾಸರಾಷ್ಟ್ರ ಭಾರತದ ಬಡ, ಆದರೆ ಧೀಮಂತ ತರುಣರು ಮುಂದೆ ಬರುವುದಕ್ಕೆ ರಹದಾರಿ ಇಂಗ್ಲಿಷ್ ವಿದ್ಯಾಭ್ಯಾಸ. ಸಮಪ್ರಾಯದ ಇತರ ಹುಡುಗರೊಂದಿಗೆ ರಾಮಾನುಜನ್ನರನ್ನು ಸಹ ಶಾಲೆಗೆ ಸೇರಿಸಿದರು. (ಟೌನ್‌ಹೈಸ್ಕೂಲ್, ಕುಂಭಕೋಣಂ). ಹನ್ನೆರಡನೆಯ ವಯಸ್ಸಿನಲ್ಲಿ ರಾಮಾನುಜನ್‌ಮೂರನೆಯ ಫಾರಂ ವಿದ್ಯಾರ್ಥಿ. ಆಗ ಇವರ ಎದುರಿದ್ದ ತೀವ್ರ ಸಮಸ್ಯೆ ಎಲ್ಲಕ್ಕಿಂತ ದೊಡ್ಡ ಸತ್ಯ ಯಾವುದು ಎಂಬುದು. ಮೇಲು ತರಗತಿಯ ಒಬ್ಬ ವಿದ್ಯಾರ್ಥಿಯನ್ನು ಪ್ರಶ್ನಿಸಿದಾಗ ಫೈಥಾಗೊರಸನ ಪ್ರಮೇಯ ಮತ್ತು ಸ್ಟಾಕ್ ಹಾಗೂ ಷೇರುಗಳ ಸಮಸ್ಯೆಯೇ ಪರಮೋಚ್ಛ ಸತ್ಯ ಎಂದು ಉತ್ತರ ದೊರೆಯಿತು. (ಸ್ಟಾಕ್ ಮತ್ತು ಷೇರುಗಳೆಂದರೆ ದೊಡ್ಡ ಕಂಪನಿಗಳ ಬಂಡವಾಳದಲ್ಲಿ ಪಾಲು ಹಾಕುವ ರೀತಿ.) ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ರಾಮಾನುಜನ್ನರ ಚಿಂತನೆ ಯಾವ ದಿಶೆಯಲ್ಲಿ ಸಾಗುತ್ತಿತ್ತು ಎನ್ನುವುದಕ್ಕೆ ಇದೊಂದು ನಿದರ್ಶನ.

ಅದೇ ಸುಮಾರಿಗೆ ಅವರ ತರಗತಿಯಲ್ಲೇ ನಡೆದ ಒಂದು ಘಟನೆ ಸ್ವಾರಸ್ಯಕರವಾಗಿದೆ. ಅಂಕಗಣಿತ ಪಾಠ. ಉಪಾಧ್ಯಾಯರ ವಿವರಣೆ ಸಾಗಿದ ಬಗೆ ಹೀಗೆ: “೫ ಹಣ್ಣುಗಳನ್ನು ೫ ಜನರಿಗೆ ಹಂಚಿದರೆ ತಲಾ ೧ ಹಣ್ಣು ದೊರೆಯುತ್ತದೆ. ೧೦೦ ಹಣ್ಣುಗಳನ್ನು ೧೦೦ ಜನರಿಗೆ ಹಂಚಿದರೂ ದೊರೆಯುವ ಹಣ್ಣು ತಲಾ ೧. ಆದ್ದರಿಂದ ಯಾವುದೇ ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಭಾಗಿಸಿದಾಗ ದೊರೆಯುವ ಭಾಗಲಬ್ಧ ೧.” ಈ ಸಾರ್ವತ್ರಿಕ ಫಲಿತಾಂಶವನ್ನು, ಎಂದರೆ ಯಾವಾಗಲೂ ತಪ್ಪುವುದಿಲ್ಲ ಎನ್ನುವ ನಿಯಮವನ್ನು, ಉಪಾಧ್ಯಾಯರು ಘೋಷಿಸಿದೊಡನೆ ರಾಮಾನುಜನ್‌ಒಂದು ಕಿರು ಸಂಶಯವನ್ನು ವ್ಯಕ್ತಪಡಿಸಿದರು; “ಹಾಗಾದರೆ ಇಲ್ಲದ ಹಣ್ಣುಗಳನ್ನು ಇಲ್ಲದ ಜನರಲ್ಲಿ ಹಂಚಿದಾಗ ಒಬ್ಬೊಬ್ಬನೂ ಒಂದು ಹಣ್ಣನ್ನೇ ಪಡೆಯುವನೇ? ಅಂದರೆ ೦ನೆಯನ್ನು ೦ಯಿಂದ ಭಾಗಿಸಿದಾಗ ೧ ಭಾಗಲಬ್ಧವಾಗಿ ದೊರೆಯುವುದೇ?” ಈ ಪ್ರಶ್ನೆಗೆ ಏನು ವಿಚಾರಣೆಯನ್ನು ಉಪಾಧ್ಯಾಯರು ಕೊಟ್ಟರೆಂಬುದು ಇಲ್ಲಿ ಮುಖ್ಯವಲ್ಲ. ಸಂಖ್ಯಾ ಪ್ರಪಂಚದಲ್ಲಿ ರಾಮಾನುಜನ್ನರ ಎಳೆಮನಸ್ಸು ಅದೆಷ್ಟು ತಡೆಯಿಲ್ಲದೆ ವಿಹರಿಸುತ್ತಿತ್ತು ಎನ್ನುವುದು ಈ ಮೂಲಭೂತ ಸಂಶಯ ಎತ್ತಿ ತೋರಿಸುತ್ತದೆ. (೦/೦ ಎಂಬುದಕ್ಕೆಸಾಮಾನ್ಯ ಅಂಕಗಣಿತದ ವ್ಯಾಪ್ತಿಯಲ್ಲಿ ಅರ್ಥವಿಲ್ಲ. ಹೊಸ ಹಾದಿ ಹಿಡಿದು ಇದಕ್ಕೆ ಅರ್ಥ ಕೊಡಬಹುದು. ಇದು ಗಣಿತವಿಜ್ಞಾನದಲ್ಲಿನ ಕಲನಶಾಸ್ತ್ರ ಎಂಬ ವಿಭಾಗಕ್ಕೆ ಸೇರಿದ್ದು.)

ಶಾಲೆಯ ಕೆಳಗಿನ ತರಗತಿಗಳಲ್ಲಿದ್ದಾಗಲೇ ರಾಮಾನುಜನ್‌ಪ್ರೌಢಗಣಿತದ ಪರಿಚಯವನ್ನು ಸ್ವಂತಾಭ್ಯಾಸದಿಂದ ಮಾಡಿಕೊಂಡರು. ಅಂದಿನ ಬಿ.ಎ. ತರಗತಿಗೆ ಬೋಧಿಸುತ್ತಿದ್ದ ತ್ರಿಕೋಣಮಿತಿಶಾಸ್ತ್ರದ ಪೂರ್ಣಜ್ಞಾನ ಇವರಿಗೆ ಹದಿಮೂರನೆಯ ವಯಸ್ಸಿನಲ್ಲೇ ಪ್ರಾಪ್ತವಾಗಿತ್ತು. ಇಷ್ಟು ಮಾತ್ರವಲ್ಲ, ಬಿ.ಎ. ತರಗತಿಯ ವಿದ್ಯಾರ್ಥಿಗಳಿಗೆ ಈ ಶಾಸ್ತ್ರದಲ್ಲಿನ ಪ್ರಶ್ನೆಗಳನ್ನು ಬಿಡಿಸಲು ನೆರವನ್ನು ಸಹ ನೀಡುತ್ತಿದ್ದರು! ಲೋನಿ ಎಂಬ ಆಂಗ್ಲ ಲೇಖಕ ಬರೆದಿದ್ದ “ಟ್ರಿಗೊನೊಮೆಟ್ರಿ” ಎಂಬ ಗ್ರಂಥದ ಎರಡು ಭಾಗಗಳನ್ನು ಕೂಡ ಅರಗಿಸಿಕೊಂಡು ಆ ಎಳೆವೆಯಲ್ಲೇ ಸ್ವತಂತ್ರವಾಗಿ ಒಂದು ಸಂಶೋಧನೆಯನ್ನು ಸಹ ಮಾಡಿದ ಕೀರ್ತಿ ರಾಮಾನುಜನ್ನರದು. (ಇವನ್ನು ತ್ರಿಕೋಣಮಿತೀಯ ಉತ್ಪನ್ನಗಳಿಗೆ ಆಯ್ಲರನ ವಿಸ್ತರಣೆಗಳು ಎಂದು ಕರೆಯುತ್ತಾರೆ. ೧೮ನೆಯ ಶತಮಾನದಲ್ಲಿಯೇ ಇವನ್ನು ಕಂಡುಹಿಡಿಯಲಾಗಿತ್ತು.) ಪ್ರಾಯ ಹದಿನೈದು ತುಂಬುವ ವೇಳೆಗೆ ಕಾರ್ ಎಂಬ ಇನ್ನೊಬ್ಬ ಆಂಗ್ಲ ಲೇಖಕ ಬರೆದಿದ್ದ “ಸಿನಾಪ್ಸಿಸ್‌ಆಫ್ ಪ್ಯೂರ್ ಅಂಡ್ ಅಪ್ಲೈಡ್ ಮ್ಯಾಥ್ ಮ್ಯಾಟಿಕ್ಸ್‌” ಎಂಬ ಪುಸ್ತಕದ ಎರಡು ಸಂಪುಟಗಳು ರಾಮಾನುಜನ್ನರ ಲಕ್ಷ್ಯಕ್ಕೆ ಬಂದುವು. ಇವುಗಳಲ್ಲಿ ಬೀಜಗಣಿತ, ಕಲನಶಾಸ್ತ್ರ, ತ್ರಿಕೋಣಮಿತಿ ಮತ್ತು ವಿಶ್ಲೇಷಣ ಜ್ಯಾಮಿತಿ ಎಂಬ ಗಣಿತ ವಿಭಾಗಗಳನ್ನು ಕುರಿತು ಟಿಪ್ಪಣಿಗಳು ಸೇರಿದ್ದವು. ಆ ಪುಸ್ತಕಗಳಲ್ಲಿ ನಿರೂಪಿತವಾಗಿದ್ದ ಸುಮಾರು ೬,೦೦೦ ವಿವಿಧ ಪ್ರಮೇಯಗಳು ರಾಮಾನುಜನ್ನರ ಮಾನಸಿಕ ಹಸಿವಿಗೆ ಬೇಕಾದಷ್ಟು ಆಹಾರ ಒದಗಿಸಿದುವು. ಇವರ ಸಂಪ್ರದಾಯಿಕ ಮಾರ್ಗ (ಎಂದರೆ ನಿಯಮಿತ ಕ್ರಮದಲ್ಲಿ ಮೆಟ್ಟಲುಮೆಟ್ಟಲಾಗಿ ವಿಷಯವನ್ನು ತಿಳಿದುಕೊಳ್ಳುತ್ತ ಮೇಲಕ್ಕೆ ಸಾಗುವುದು) ತುಳಿಯುವುದು ಒತ್ತಟ್ಟಿಗಿರಲಿ, ಒಂದು ಖಚಿತ ಮಾರ್ಗವನ್ನು ರೂಪಿಸಿಕೊಳ್ಳುವುದು ಸಹ ಸಾಧ್ಯವಿರಲಿಲ್ಲ. ಸ್ವಂತಾಭ್ಯಾಸ ಮತ್ತು ಚಿಂತನೆಗಳಿಂದ ರಾಮಾನುಜನ್‌ತೀರ ಚಿಕ್ಕ ಪ್ರಾಯದಲ್ಲೇ ಬಹಳ ಎತ್ತರ ಏರಿದ್ದರು.

ರಾಮಾನುಜನ್‌ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದದ್ದು ಡಿಸೆಂಬರ್ ೧೯೦೩ರಲ್ಲಿ. ಮದರಾಸು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಪ್ರಥಮ ಶ್ರೇಣಿ ಪಡೆದ ಕೆಲವೇ ವಿದ್ಯಾರ್ಥಿಗಳಲ್ಲಿ ಇವರೂ ಒಬ್ಬರು. ಈ ಅಪೂರ್ವ ಯಶಸ್ಸು ಅವರಿಗೆ “ಸುಬ್ರಹ್ಮಣ್ಯಂ ವಿದ್ಯಾರ್ಥಿ ವೇತನವನ್ನು ದೊರಕಿಸಿಕೊಟ್ಟಿತು. ಇದರಿಂದ ಕಾಲೇಜು ತರಗತಿಯ ಪ್ರವೇಶ ಅವರಿಗೆ ಸಾಧ್ಯವಾಯಿತು. ೧೯೦೪ ತರುಣದಲ್ಲಿ ರಾಮಾನುಜನ್‌ಕುಂಭಕೋಣಂನಲ್ಲಿದ್ದ ಸರ್ಕಾರೀ ಕಾಲೇಜಿನ ಪ್ರಥಮ ಎಫ್‌.ಎ. ತರಗತಿಯನ್ನು ಸೇರಿದರು. ಅಲ್ಲಿ ಓದಬೇಕಾಗಿದ್ದ ವಿಷಯಗಳು-ಗಣಿತ, ದೇಹವಿಜ್ಞಾನ, ಗ್ರೀಸ್ ಮತ್ತು ರೋಂ ದೇಶಗಳ ಇತಿಹಾಸ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳು. ಆದರೆ ಈ ಮಹಾಪ್ರತಿಭೆಗೆ ಬೇಕಾಗಿದ್ದುದು ಗಣಿತ, ಇನ್ನಷ್ಟು ಗಣಿತ, ಮತ್ತಷ್ಟು ಗಣಿತ. ಹೀಗಾಗಿ ಉಳಿದ ವಿಷಯಗಳಿಗೆ ಸಲ್ಲಬೇಕಾಗಿದ್ದ ಕನಿಷ್ಠ ಲಕ್ಷ್ಯವನ್ನೂ ಅವರು ಕೊಡಲಿಲ್ಲ. ವರ್ಷದ ಕೊನೆಯಲ್ಲಿ ಕಾಲೇಜು ಪರೀಕ್ಷೆಯಲ್ಲಿ ರಾಮಾನುಜನ್ ಅನುತ್ತೀರ್ಣರಾದರು. ಪರೀಕ್ಷೆಯ ಕುರುಡುಯಂತ್ರಕ್ಕೆ ಅಸಾಧಾರಣ ಬುದ್ಧಿಶಕ್ತಿಯ ಪ್ರಕಾಶ ಕಾಣುವುದುಂಟೇ? ರಾಮಾನುಜನ್ನರಿಗೆ ದೊರೆಯುತ್ತಿದ್ದ ವಿದ್ಯಾರ್ಥಿವೇತನ ಕೈತಪ್ಪಿಹೋಯಿತು. ಮನೆಯ ಬಡತನದ ಪರಿಸ್ಥಿತಿಯಲ್ಲಿ ಸ್ವಂತ ಖರ್ಚಿನಿಂದ ಎರಡನೆಯ ವರ್ಷದ ಎಫ್‌.ಎ. ಅಭ್ಯಾಸವನ್ನು ಮುಂದುವರಿಸುವುದು ಸಾಧ್ಯವಿರಲಿಲ್ಲ. ಉದ್ಯೋಗ ಸೋರೋಣವೆಂದರೆ ಕುಂಭಕೋಣಂನಲ್ಲಿ ಅಂಥ ಅವಕಾಶವೇನು ಬಂತು? ಸ್ನೇಹಿತನೊಬ್ಬನ ಒತ್ತಾಸೆ ಮೇರೆಗೆ ರಾಮಾನುಜನ್‌ಉತ್ತರಕ್ಕೆ ಪ್ರಯಾಣ ಬೆಳೆಸಿ ಆಂಧ್ರಪ್ರದೇಶದಲ್ಲಿ ಒಂದಷ್ಟು ಕಾಲ ಅಲೆದಾಡಿ ಕುಂಭಕೋಣಂಗೆ ಮರಳಿದರು. (೧೯೦೫). ಪುನಃ ಕಾಲೇಜನ್ನು ಸೇರಿದರೂ ಎಫ್‌.ಎ. ಅಂತಿಮ ಪರೀಕ್ಷೆಗೆ ಕೂರಲು ಇವರು ಅರ್ಹತೆ ಪಡೆಯಲಿಲ್ಲ. ಮರುವರ್ಷ (೧೯೦೬) ಮದರಾಸು ನಗರಕ್ಕೆ ಹೋಗಿ ಪಚ್ಚಯ್ಯಪ್ಪ ಕಾಲೇಜಿನಲ್ಲಿ ಎರಡನೆಯ ವರ್ಷದ ಎಫ್.ಎ. ತರಗತಿಯನ್ನು ಪುನಃ ಸೇರಿದರು. ಆ ಮಹಾನಗರದ ಕಿರುಗಲ್ಲಿಯೊಂದರಲ್ಲಿ ಹಳೆಯ ವಠಾರದಲ್ಲಿ ಅಜ್ಜಿಯೊಡನೆ ಇವರ ವಾಸ. ಈ ಜಗತ್ಪ್ರಸಿದ್ಧ ಮೇಧಾವಿ ಖಾಸಗಿಯಾಗಿ ಪಾಠಗಳನ್ನು ಹೇಳಿಕೊಟ್ಟು ಬಲು ಕಷ್ಟದಿಂದ ಹೊಟ್ಟೆಯ ಬವಣೆಯನ್ನು ಎದುರಿಸಬೇಕಾಯಿತು. ಹೆಚ್ಚಿನ ಕಾಲವನ್ನು ರಾಮಾನುಜನ್‌ಕಾಲೇಜಿನಲ್ಲಿಯೇ ಕಳೆಯುತ್ತಿದ್ದರು. ಸದಾ ಗಣಿತದ ಗೀಳೇ. ಪರೀಕ್ಷೆಗೋಸ್ಕರ ಕಡ್ಡಾಯವಾಗಿ ಅಭ್ಯಾಸ ಮಾಡಲೇಬೇಕಾಗಿದ್ದ ಇತರ ವಿಷಯಗಳಲ್ಲಿ ಇವರ ಆಸಕ್ತಿ ಈಗಲೂ ಕುದುರಲಿಲ್ಲ. ಗಣಿತ ಪ್ರಾಧ್ಯಾಪಕರಿಗೆಲ್ಲ ರಾಮಾನುಜನ್‌ಅಚ್ಚುಮೆಚ್ಚಿನ ಶಿಷ್ಯ; ಒಬ್ಬ ಪವಾಡ ಪುರುಷ.

ತರಗತಿಯಲ್ಲಿ ಉಪಾಧ್ಯಾಯರು ಒಂದು ಗಣಿತದ ಸಮಸ್ಯೆಯನ್ನು ಬಿಡಿಸಿದ ಬಳಿಕ ರಾಮಾನುಜನ್ನರ ಮುಖ ನೋಡುತ್ತಿದ್ದುದು ವಾಡಿಕೆ. ಒಡನೆಯೇ ಇವರು ಗುರುಗಳ ಅನುಮತಿ ಮೇರೆಗೆ ಕರಿಹಲಗೆಯ ಬಳಿ ಹೋಗಿ ಅದೇ ಪ್ರಶ್ನೆಯನ್ನು ಯಾವುದೋ ಒಂದುಹೊಸ ವಿಧಾನದಿಂದ ಮತ್ತು ನವಕೌಶಲದಿಂದ ಎಷ್ಟೋ ಕಡಿಮೆ ಘಟ್ಟಗಳಲ್ಲಿ ಬಿಡಿಸಿ ತೋರಿಸುತ್ತಿದ್ದರು. ಎಲ್ಲ ಮಹಾಮಿದುಳುಗಳಂತೆ ಇವರಿಗೆ ಸಹ ಮನಸ್ಸಿನ ಆಳದಲ್ಲಿ ನೂತನ ಗಣಿತ ಪರಿಕಲ್ಪನೆಗಳು ಸದಾ ಸ್ಫುರಿಸುತ್ತಿದ್ದುದಾಗಿರಬೇಕು. ಗಣಿತಶಾಸ್ತ್ರದ ಪ್ರೌಢ ಸಂಶೋಧನ ಪತ್ರಿಕೆಗಳಲ್ಲಿ ಅಂದು ಬರುತ್ತಿದ್ದ ನೂತನ ಪ್ರಶ್ನೆಗಳನ್ನು ಬಿಡಿಸುವಲ್ಲಿ ಪ್ರಾಧ್ಯಾಪಕರು ರಾಮಾನುಜನ್ನರ ನೆರವನ್ನು ಪದೇ ಪದೇ ಬಯಸುತ್ತಿದ್ದರು.

ವರ್ಷಾಂತ್ಯದಲ್ಲಿ (೧೯೦೬) ರಾಮಾನುಜನ್ನರ ಆರೋಗ್ಯ ಹದಗೆಟ್ಟಿದುದರಿಂದ ಅವರಿಗೆ ಎಫ್‌.ಎ. ಅಂತಿಮ ಪರೀಕ್ಷೆಗೆ ಕೂರಲಾಗಲಿಲ್ಲ. ಆಗ ಅವರು ಕುಂಭಕೋಣಂಗೆ ಮರಳಿದರು. ಡಿಸೆಂಬರ್ ೧೯೦೭ರಲ್ಲಿ ಖಾಸಗಿಯಾಗಿ ಆ ಪರೀಕ್ಷೆಯನ್ನು ಬರೆದುದಾಯಿತು; ಗಣಿತ ಪತ್ರಿಕೆಯಲ್ಲಿ ಉತ್ತಮ ಅಂಕಗಳು ಬಂದುವು. ಆದರೆ ಇತರ ಕಡ್ಡಾಯ (ಆದರೆ ರಾಮಾನುಜನ್ನರಿಗೆ ನಿರಾಸಕ್ತ) ಪತ್ರಿಕೆಗಳಲ್ಲಿ ಕನಿಷ್ಠ ಅಂಕಗಳೂ ಬರಲಿಲ್ಲ. ಎಫ್‌.ಎ. ಪರೀಕ್ಷೆಯಲ್ಲಿ “ಫೇಲ್” ಎಂಬ ಪದವಿ ಈ ತರುಣ ಮೇಧಾವಿಗೆ ಲಭಿಸಿದ ಗೌರವ! ಹೀಗೆ ರಾಮಾನುಜನ್ನರ ಸಂಪ್ರದಾಯಿಕ ವಿದ್ಯಾಭ್ಯಾಸದ ದೋಣಿ ನಿರಾಸಕ್ತ ವಿಷಯಗಳ ಬಂಡೆಗೆ ಬಡಿದು ನುಚ್ಚುನೂರಾಯಿತು.ಆದರೆ ಅವರ ಗಣಿತ ವಿಹಾರಗಳು – ಬಡತನ, ಅನಾರೋಗ್ಯ, ಜೀವನದ ದಂದುಗಗಳು ಯವುದನ್ನೂ ಲೆಕ್ಕಿಸದೆ- ಅವ್ಯಾಹತವಾಗಿ ಮುಂದುವರಿಯುತ್ತಲೇ ಇದ್ದುವು. ಆವರ ಹೇಳಿಕೆಯ ಪ್ರಕಾರ ನಾಮಗಿರಿದೇವಿ ಅವರಿಗೆ ಕನಸಿನಲ್ಲಿ ಕಾಣಿಸಿಕೊಂಡು ಗಣಿತಸೂತ್ರಗಳನ್ನು ಉಸುರುತ್ತಿದ್ದಳಂತೆ. ಎಚ್ಚರವಾದೊಡನೆ ಇವರು ಮಾಡುತ್ತಿದ್ದ ಮೊದಲ ಕೆಲಸವೆಂದರೆ ನೆನಪಾದಷ್ಟು ಸೂತ್ರಗಳನ್ನು ಒಂದು ಖಾಲಿ ಪುಸ್ತಕದಲ್ಲಿ ಗುರುತು ಮಾಡಿಡುವುದು. ತತ್‌ಕ್ಷಣವೇ ಇವು ಸರಿಯೇ ಅಲ್ಲವೇ ಎಂದು ತಾಲೆನೋಡುತ್ತಿದ್ದರು. ಸೂತ್ರಗಳ ನಿರೂಪಣೆ ಅದೆಷ್ಟೇ ಅಚ್ಚುಕಟ್ಟಾಗಿರಲಿ, ತಾಳೆ ಮಾಡಿನೋಡುವಾಗ ಅವು ಎಷ್ಟೇ ಸಮರ್ಪಕ ಫಲಿತಾಂಶಗಳನ್ನು ಕೊಡಲಿ ಗಣಿತದ ನಿಷ್ಕೃಷ್ಟ ಶಿಸ್ತಿಗೆ ಒಳಪಡುವ ಸಾರ್ವತ್ರಿಕ ಸಾಧನೆಯನ್ನು ಅವುಗಳಿಗೆ ಒದಗಿಸದಿದ್ದರೆ ಅವು ಅಪೂರ್ಣವೆನಿಸುತ್ತವೆ. ಉದಾಹರಣೆಗೆ, ೨ಕ್ಕಿಂತ ಅಧಿಕವಾಗಿರುವ ಪ್ರತಿಯೊಂದು ಸರಿಸಂಖ್ಯೆಯನ್ನೂ ಎರಡು ಮೂಲಸಂಖ್ಯೆಗಳ ಮೊತ್ತವಾಗಿ ಬರೆಯಬಹುದು ಎಂಬ ನಿರೂಪಣೆ ಉಂಟು. ೪, ೬, ೮, ೧೦, ೧೨ ಮುಂತಾದವು ಎರಡಕ್ಕಿಂತ ಹೆಚ್ಚಾದ ಸರಿಸಂಖ್ಯೆಗಳು. ೨ ರಿಂದ ಇವನ್ನು ಭಾಗಿಸಿದಾಗ ಶೇಷ ಉಳಿಯುವುದಿಲ್ಲ. ಉದಾಹರಣೆಗೆ, ೭೧ ಸರಿಸಂಖ್ಯೆ ಅಲ್ಲ; ೮೮ ಸರಿಸಂಖ್ಯೆ ಹೌದು. ೧, ೨, ೩, ೫, ೭, ೧೧, ೧೩, ೧೭, ೧೯, ೨೩, ೨೯, ೩೧ ಮುಂತಾದವು ಪ್ರಾರಂಭದ ಕೆಲವು ಮೂಲ ಸಂಖ್ಯೆಗಳು. ಇವುಗಳಲ್ಲಿ ಪ್ರತಿಯೊಂದಕ್ಕೂ ೧ ಮತ್ತು ಅದೇ ಸಂಖ್ಯೆ ಅಲ್ಲದೆ ಬೇರೆ ಅಪವರ್ತನಗಳಿರುವುದಿಲ್ಲ. ಉದಾಹರಣೆಗೆ, ೧೧೧ ಮೂಲ ಸಂಖ್ಯೆ ಅಲ್ಲ (೧೧೧=೩ x ೩೭); ೧೧೩ ಮೂಲ ಸಂಖ್ಯೆ ಹೌದು.

ಈಗ
೧೪ = ೩+ ೧೧ ಇಲ್ಲಿ ೩ ಮತ್ತು ೧೧ ಮೂಲ ಸಂಖ್ಯೆಗಳು;
೬೪ = ೧೭ + ೪೭, ಇಲ್ಲಿ ೧೭ ಮತ್ತು ೪೭ ಮೂಲ ಸಂಖ್ಯೆಗಳು;
೧೦೦ = ೪೭ + ೫೩ ಇಲ್ಲಿ ೪೭ ಮತ್ತು ೫೩ ಮೂಲ ಸಂಖ್ಯೆಗಳು.

ಮೇಲೆ ಬರೆದಿರುವ, ಇವುಗಳಂತೆಯೇ ನಾವು ರಚಿಸಬಹುದಾದ, ಎಲ್ಲ ಉದಾಹರಣೆಗಳೂ ನಿಜ. ಆದರೆ ಇಂಥ ತಾಳೆ ನೋಡುವಿಕೆ ಗಣಿತಸಾಧನೆ ಎನ್ನಿಸದು. ಅದಕ್ಕೆ ಬೇರೆಯೇ ಒಂದು ಸಾರ್ವತ್ರಿಕ ವಿಧಾನವನ್ನು ನೀಡಬೇಕು. ಹಾಗೆ ನೀಡುವುದು ಸಾಧ್ಯವಾದಾಗ (ಅದು ಇಂದಿನವರೆಗೂ ಸಿದ್ಧಿಸಿಲ್ಲ, ೧೯೭೨) ಮೇಲೆ ಬರೆದಿರುವ ಎಲ್ಲ ಉದಾಹರಣೆಗಳೂ ವಿಶೇಷ ಸಂದರ್ಭಗಳು ಎನ್ನಿಸಿಕೊಳ್ಳುತ್ತವೆ.

ರಾಮಾನುಜನ್ನರ ನಿರಂತರ ಸೃಷ್ಟಿಶೀಲ ಮನಸ್ಸು ಗಣಿತಸೂತ್ರಗಳನ್ನೂ ನಿರೂಪಣೆಗಳನ್ನೂ ಸದಾ ಪ್ರಕಟಿಸುತ್ತಲೇ ಇತ್ತು. ಇದೊಂದು ವಿಧದ ಗಣಿತದಲ್ಲಿ ಕನಸುಕಾಣುವಿಕೆ! ಅವುಗಳಿಗೆ ನಿಷ್ಕೃಷ್ಟ ಸಾಧನೆಗಳನ್ನು ಒದಗಿಸಲು ಅನೇಕ ವೇಳೆ ರಾಮಾನುಜನ್ನರಿಗೆ ಆಗುತ್ತಿರಲಿಲ್ಲ. ಬಹುಶಃ ಸೃಷ್ಟಿಶೀಲ ಮನಸ್ಸುಗಳ ಮಾರ್ಗವೇ ಹೀಗೆ.

ಬಿಡುಗಡೆಯ ದಾರಿ

ಆ ದಿವಸಗಳ ಸಂಪ್ರದಾಯಾನುಸಾರ ರಾಮಾನುಜನ್ನರ ಮದುವೆಯನ್ನು ೧೯೦೯ರಲ್ಲಿ (ವಯಸ್ಸು ೨೨) ಜಾನಕಿ ಎಂಬ ಒಂಬತ್ತು ವರ್ಷದ ವಧು (ಮಗು)ವಿನೊಡನೆ ಮಾಡಿದರು. (ಈ ದಂಪತಿಗಳಿಗೆ ಮಕ್ಕಳಾಗಲಿಲ್ಲ.) ಕುಂಭಕೋಣಂನಲ್ಲಿಯೋ ಅದರ ಆಸುಪಾಸಿನಲ್ಲಿಯೋ ಒಂದು ಕೆಲಸ ಹಿಡಿದು ಜೀವನ ನಡೆಸುವುದೊಂದೇ ಎದುರಿದ್ದ ಮಹಾವಕಾಶ. ಬಡತನ, ಹಸಿವು ಕಹಿ ವಾಸ್ತವಿಕತೆಗಳು. ಅವುಗಳಿಂದ ತಪ್ಪಿಸಿಕೊಳ್ಳಲು ಗಣಿತದ ಕನಸುಗಳು ಸಹಾಯಕವಾಗವು. ರಾಮಾನುಜನ್ನರ ವಿಚಾರದಲ್ಲಿಯೂ ಈ ನಿಯಮ ಅಷ್ಟೇ ಸರಿ.

“ಇಂಡಿಯನ್‌ಮ್ಯಾಥ್‌ಮ್ಯಾಟಿಕಲ್‌ಸೊಸೈಟಿ” ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ (೧೯೦೭) ಪ್ರೊ|| ವಿ. ರಾಮಸ್ವಾಮಿ ಅಯ್ಯರರು ಅಂದಿನ ಮದ್ರಾಸು ಸರ್ಕಾರದ ಆಡಳಿತ ವಿಭಾಗದಲ್ಲಿ ಒಬ್ಬ ದೊಡ್ಡ ಅಧಿಕಾರಿಗಳಾಗಿದ್ದರು. ರಾಮಾನುಜನ್‌ಅವರನ್ನು ಭೇಟಿಯಾಗಿ ತಾನೊಬ್ಬ ಗಣಿತದ ವಿದ್ಯಾರ್ಥಿ, ತನಗೆ ಜೀವನಯಾಪನೆ ಮಾಡಲು ನೆರವಾಗುವಂಥ ಒಂದು ಕಿರಿಹುದ್ದೆಯನ್ನು ಕರುಣಿಸಬೇಕು ಎಂದು ನಿವೇದಿಸಿಕೊಂಡರು. ಇವರ ಟಿಪ್ಪಣಿ ಪುಸ್ತಕದ ಹಾಳೆಗಳನ್ನು ಅಯ್ಯರ್ ತಿರುವಿಹಾಕಿದಾಗ ಅಲ್ಲಿ ಕಂಡದ್ದೇನು? ಒಂದೊಂದು ಪುಟವೂ ಹೊಸ ಕಳೆಯಿಂದ ಸ್ಪಂದಿಸುತ್ತಿದ್ದ ಜೀವಂತ ವ್ಯಕ್ತಿ. ತಾಲ್ಲೂಕು ಕಛೇರಿಯ ಬೆಂಗಾಡಿನಲ್ಲಿ ಈ ತರುಣ ಪ್ರತಿಭೆ ಕಮರಿ ಹೋಗಬಾರದೆಂಬುದು ಅವರ ಖಚಿತ ಅಭಿಪ್ರಾಯ. ಮದರಾಸು ನಗರದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಗಣಿತ ಪ್ರಾಧ್ಯಾಪಕರಾಗಿದ್ದ ಪ್ರೊ|| ಪಿ.ವಿ. ಶೇಷು ಅಯ್ಯರರನ್ನು ಹೋಗಿ ಕಾಣುವಂತೆ ಅವರು ಸಲಹೆ ನೀಡಿದ್ದು ಮಾತ್ರವಲ್ಲ, ಒಂದು ಶಿಫಾರಸು ಪತ್ರವನ್ನು ಸಹ ಬರೆದುಕೊಟ್ಟರು. ಶೇಷು ಅಯ್ಯರರು ಆ ಮೊದಲು ರಾಮಾನುಜನ್ನರಿಗೆ ಕುಂಭಕೋಣಂ ಕಾಲೇಜಿನಲ್ಲಿ ಸ್ವಲ್ಪ ಕಾಲ ಗುರುಗಳಾಗಿದ್ದು ಇವರ ಸಾಮರ್ಥ್ಯವನ್ನು ಬಲ್ಲವರಾಗಿದ್ದುದರಿಂದ ಮುಂದಿನ ದಾರಿ ಸುಗಮವಾಯಿತು. ಶೇಷು ಅಯ್ಯರರ ಶಿಫಾರಸಿನ ಮೇರೆಗೆ ರಾಮಾನುಜನ್ನರಿಗೆ ಆ ನಗರದಲ್ಲಿದ್ದ ಅಕೌಂಟೆಂಟ್ ಜನರಲ್ಲರ ಕಛೇರಿಯಲ್ಲಿ ಹಂಗಾಮಿ ಗುಮಾಸ್ತಿಕೆ ದೊರೆಯಿತು. ಕಣ್ಣಿಗೆ ಕಾಣಿಸದ, ಗಣಿತದ ಬಲು ಎತ್ತರದ ಶಿಖರಗಳಲ್ಲಿ ವಿಹರಿಸುತ್ತಿದ್ದ ಈ ಮಹಾ ಮನಸ್ಸು “ಇಂದ”-“ಗೆ” ರಿಜಿಸ್ಟರಿನಲ್ಲಿ ಕಛೇರಿಗೆ ಬಂದ ಮತ್ತು ಕಛೇರಿಯಿಂದ ಹೋದ ಕಾಗದಗಳ ಲೆಕ್ಕವಿಡುವುದರಲ್ಲಿ ಮಗ್ನವಾಗಿರಬೇಕಾಯಿತು. ಈ ಮಹಾನುಭಾವನ ಅಲೌಕಿಕ ಗಣಿತಸಾಮರ್ಥ್ಯವನ್ನು ಗಣಿತವಿದ್ವಾಂಸರೆಲ್ಲರೂ ಚೆನ್ನಾಗಿ ಅರಿತಿದ್ದರು. ಅದನ್ನೂ ಅವರ ಸಚ್ಚಾರಿತ್ರ್ಯವನ್ನೂ ಕುರಿತು ಅವರೆಲ್ಲರೂ ಸದ್ಭಾವನೆಯನ್ನೇ ತಳೆದಿದ್ದರು. ರಾಮಾನುಜನ್ನರಿಗೆ ಮುಕ್ತಕರಗಳ ನೆರವನ್ನು ನೀಡಬೇಕು ಎನ್ನುವುದರಲ್ಲಿ ಯಾರಿಗೂ ಸಂದೇಹವಿಲ್ಲ. ಅದಕ್ಕಾಗಿ ಶ್ರಮಿಸಲು ಎಲ್ಲರೂ ಸಿದ್ಧರಿದ್ದರು. ಆದರೆ ದುರ್ದೈವವೆಂದರೆ ಪ್ರಯೋಜನವಾಗುವ ಕಾಲದಲ್ಲಿ ಈ ಒಳ್ಳೆಯ ಉದ್ದೇಶದಂತೆ ಯಾರೂ ನಡೆಯಲಿಲ್ಲ ಎನ್ನುವುದು. ರಾಮಾನುಜನ್ನರಂಥ ಅಪೂರ್ವ ವ್ಯಕ್ತಿ ಹುಟ್ಟುವುದೇ ನೂರಾರು ವರ್ಷಗಳಿಗೆ ಒಂದು ಸಲ. ಅಂಥವರು ಯಾವಾಗ ಎಲ್ಲಿ ಹುಟ್ಟುತ್ತಾರೋ ಯಾರಿಗೂ ತಿಳಿಯದು. ಒಂದು ಹೊಸ ಯುಗವನ್ನೇ ಪ್ರಾರಂಭಿಸಿಬಿಡುವ ಪ್ರಚಂಡ ಬುದ್ಧಿವಂತರಿವರು. ದಾಸರಾಷ್ಟ್ರವಾಗಿದ್ದ ಭಾರತದಲ್ಲಿ ರಾಮಾನುಜನ್ನರಂಥ ಮಹಾ ಮೇಧಾವಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಚೈತನ್ಯವೇ ಇರದಿದ್ದ ಕಾಲ ಅದು.

ಹಂಗಾಮಿ ಗುಮಾಸ್ತಿಕೆ ಮುಗಿದ ತರುವಾಯ ಮುಂದೇನು? ಪುನಃ ಶೇಷು ಅಯ್ಯರರು ನೆರವು ನೀಡಲು ಮುಂದೆ ಬಂದರು. ಅವರಿಂದ ಒಂದು ಪರಿಚಯ ಪತ್ರವನ್ನು ತೆಗೆದುಕೊಂಡು ರಾಮಾನುಜನ್ ನಲ್ಲೂರಿಗೆ ಹೋದರು. ಇಂಡಿಯನ್ ಮ್ಯಾಥ್‌ಮ್ಯಾಟಿಕಲ್ ಸೊಸೈಟಿಯ ಅಧ್ಯಕ್ಷರೂ ನಲ್ಲೂರಿನ ಜಿಲ್ಲಾಧಿಕಾರಿಗಳೂ ಆಗಿದ್ದ ದಿವಾನ್ ಬಹದೂರ್ ಆರ್. ರಾಮಚಂದ್ರರಾಯರನ್ನು ನೋಡಿ ನೌಕರಿ ಪಡೆಯಲೆಂದು (ಡಿಸೆಂಬರ್ ೧೯೧೦). ಈ ಭೇಟಿಯನ್ನು ರಾಮಚಂದ್ರರಾಯರು ಬಹಳ ಸ್ವಾರಸ್ಯವಾಗಿ ವರ್ಣಿಸಿದ್ದಾರೆ: “ಕೆಲವು ವರ್ಷಗಳ ಹಿಂದಿನ ಪ್ರಸಂಗ. ಗಣಿತ ಜ್ಞಾನದಲ್ಲಿ ತೀರ ಎಳೆಮಗುವಿನಂತಿದ್ದ ನನ್ನ ಸಂಬಂಧಿ ಹುಡುಗನೊಬ್ಬ, “ಕಕ್ಕಾ” ಗಣಿತವಿಚಾರವನ್ನೇ ಮಾತನಾಡುತ್ತಿರುವ ಒಬ್ಬ ಆಗಂತುಕ ನನ್ನಲ್ಲಿಗೆ ಬಂದಿದ್ದಾನೆ. ಅವನು ಹೇಳುವುದು ನನಗೆ ಅರ್ಥವಾಗುತ್ತಿಲ್ಲ. ಅವನ ಮಾತಿನಲ್ಲೇನಾದರೂ ಹುರುಳಿದೆಯೇ ಎಂದು ನೀವು ನೋಡುತ್ತೀರಾ? ಎಂದು ಕೇಳಿದ. ಗಣಿತ ಧೀಮಂತಿಕೆಯಲ್ಲಿ ಪರಿಪೂರ್ಣನಾಗಿದ್ದ ನಾನು ರಾಮಾನುಜನ್ನನಿಗೆ ನನ್ನನ್ನು ಬಂದು ನೋಡಲು ಅಪ್ಪಣೆಯನ್ನು ಅನುಗ್ರಹಿಸಿದೆ. ಬಂದವನು ಕುಳ್ಳ, ಒರಟ, ದಪ್ಪಗಿದ್ದ, ಗಡ್ಡ ಕರೆದಿರಲಿಲ್ಲ, ಅಷ್ಟೇನೂ ಮಡಿಯಾಗಿಯೂ ಇರಲಿಲ್ಲ. ಆದರೆ ಒಂದು ಗಮನಾರ್ಹ ವೈಲಕ್ಷಣ್ಯ ನನ್ನನ್ನು ಆಕರ್ಷಿಸಿತು. ಅವನ ಉಜ್ವಲ ಕಣ್ಣುಗಳು. ಸವೆದುಹೋಗಿದ್ದ ಒಂದು ಟಿಪ್ಪಣಿ ಪುಸ್ತಕವನ್ನು ಕುಂಕುಳಡಿಯಲ್ಲಿ ಅಮುಕಿ ಹಿಡಿದಿದ್ದ. ಅವನ ಬಡತನ ಅತಿ ಧಾರುಣವಾಗಿತ್ತು. ಅವನು ಕುಂಭಕೋಣಂನಿಂದ ಮದರಾಸಿಗೆ ಓಡಿಹೋಗಿದ್ದ – ಅಲ್ಲಿ ತನ್ನ ಅಧ್ಯಯನಗಳನ್ನು ಮುಂದುವರಿಸಲು ಬೇಕಾಗುವ ಬಿಡುವು ದೊರೆತೀತೆಂಬ ಆಸೆಯಿಂದ. ಯಾವ ವಿಧವಾದ ಮನ್ನಣೆಗೂ ಅವನು ಹಾತೊರೆದವನಲ್ಲ. ಅವನಿಗೆ ಬೇಕಾದದ್ದು ಬಿಡುವು. ಬೇರೆ ಮಾತುಗಳಲ್ಲಿ ಹೇಳುವುದಾದರೆ ಅವನಿಗೆ ಯಾವ ಶ್ರಮವೂ ಆಗದೆ ಸರಳ ಆಹಾರ ಅವನಿಗೆ ಒದಗಿಸಲ್ಪಡಬೇಕು ಮತ್ತು ಕನಸುಗಳನ್ನು ಕಾಣಲು ಅವನಿಗೆ ಅವಕಾಶ ಕಲ್ಪಿಸಿಕೊಡಬೇಕು. ಅವನು ಟಿಪ್ಪಣಿ ಪುಸ್ತಕವನ್ನು ತೆರೆದು ತನ್ನ ಕೆಲವು ಆವಿಷ್ಕಾರಗಳನ್ನು ನನಗೆ ವಿವರಿಸಲು ತೊಡಗಿದ. ಇಲ್ಲೇನೋ ಅಸಾಮಾನ್ಯವಾದುದ್ದು ಇದೆ ಎಂದು ತತ್‌ಕ್ಷಣ ನನಗೆ ಹೊಳೆಯಿತು. ಆದರೆ ಅವನು ಹೇಳುತ್ತಿರುವುದು ಸುಬದ್ಧವೇ ಅಬದ್ಧವೇ ಎಂಬುದನ್ನು ತೀರ್ಮಾನಿಸಲು ನನ್ನ ಜ್ಞಾನ ಸಾಲದಾಗಿತ್ತು. ತೀರ್ಪನ್ನು ತಡೆಹಿಡಿದು ಅವನಿಗೆ ಪುನಃ ಬರುವಂತೆ ನಾನು ಹೇಳಿದೆ. ಅವನು ಮರಳಿ ಬರುವ ವೇಳೆಗೆ ನನಗೆ ಎಷ್ಟು ಸ್ವಲ್ಪ ತಿಳಿದಿತ್ತು ಎಂಬುದನ್ನು ಕಂಡುಕೊಂಡಿದ್ದ. ಹೀಗಾಗಿ ಕೆಲವು ಸರಳ ಫಲಿತಾಂಶಗಳನ್ನು ನನಗೆ ತೋರಿಸಿದ. ಇವು ಪ್ರಚಲಿತ ಗ್ರಂಥಗಳನ್ನು ಮೀರಿದಂಥವಾಗಿದ್ದುವು. ಈತ ಒಬ್ಬ ವಿಲಕ್ಷಣ ಪುರುಷ ಎನ್ನುವುದರಲ್ಲಿ ನನಗೆ ಸಂದೇಹವೇ ಉಳಿಯಲಿಲ್ಲ. ಮುಂದೆ ಅವನು ಹಂತ ಹಂತ ನನ್ನನ್ನು ಎಲ್ಲಿಪ್ಟಿಕ್ ಅನುಕಲನಾಂಕಗಳು ಹಾಗೂ ಹೈಪರ್ ಜೋಮೆಟ್ರಿಕ್ ಶ್ರೇಣಿಗಳಿಗೆ ಕರೆದೊಯ್ದ. ಕೊನೆಯಲ್ಲಿ ಅಪಸರಣ ಶ್ರೇಣಿಗಳನ್ನು ಕುರಿತು ಅವನ (ಪ್ರಪಂಚಕ್ಕೆ ಇನ್ನೂ ಪ್ರಕಟಗೊಳಿಸದಿದ್ದ) ಸಿದ್ಧಾಂತ ನನ್ನ ಮನಸ್ಸನ್ನೇ ಬದಲಾಯಿಸಿಬಿಟ್ಟಿತು. ಅವನಿಗೆ ಏನು ಬೇಕಾಗಿದೆಯೆಂದು ನಾನು ಕೇಳಿದೆ. ನನ್ನ ಸಂಶೋಧನೆಗಳನ್ನು ಮುಂದುವರಿಸಿಕೊಂಡು ಹೋಗುವಷ್ಟರಮಟ್ಟಿಗೆ ಬದುಕಿಕೊಂಡಿರಲು ಸಾಕಾಗುವಷ್ಟು ಆಹಾರ ತನಗೆ ಬೇಕೆಂದು ಅವನು ಕೋರಿದ.”

ಬರೆದುದನ್ನು ಅಳಿಸಲು ಬಳಸಿ ಬಳಸಿ ರಾಮಾನುಜನ್ನರ ಮೊಳಕೈ ದೊರಗಾಯಿತು.

ಸರಕಾರೀ ಖಾತೆಯೊಂದರಲ್ಲಿ ರಾಮಾನುಜನ್ನರನ್ನು ಕೊಳೆಸಬಾರದೆಂದು ರಾಮಚಂದ್ರರಾಯರು ನಿರ್ಧರಿಸಿ ತಾವು ಪ್ರತಿ ತಿಂಗಳೂ ಹಣದ ನೆರವನ್ನೂ ನೀಡುವುದಾಗಿಯೂ ರಾಮಾನುಜನ್ ಅದನ್ನು ಸ್ವೀಕರಿಸಿ ಮದರಾಸು ನಗರದಲ್ಲಿಯೇ ತನ್ನ ಸಂಶೋಧನೆಗಳನ್ನು ಮುಂದುವರಿಸಬೇಕಾಗಿಯೂ ಹೇಳಿದರು. ಇದು ತಾತ್ಕಾಲಿಕ ಏರ್ಪಾಡಾಗಬಹುದೇ ವಿನಃ ಶಾಶ್ವತ ಪರಿಹಾರವಾಗದು ಎಂದು ರಾಮಾನುಜನ್, ಅವರಂತೆಯೇ ಶೇಷು ಅಯ್ಯರ್ ಕೂಡ ಭಾವಿಸಿದರು. ಆದರೂ ರಾಮಾನುಜನ್ನರ ಗಣಿತಾಧ್ಯಯನ ಅವಿಚ್ಛಿನ್ನವಾಗಿ ಮುಂದುವರಿಯಲು ಈ ಔದಾರ್ಯಪೂರಿತ ಬೆಂಬಲ ಸಹಕಾರಿಯಾಯಿತು.

ಆ ದಿವಸಗಳಲ್ಲಿ ರಾಮಾನುಜನ್ನರ ಮಿತ್ರನೊಬ್ಬ ಅವರನ್ನು ಕಂಡು “ನಿನ್ನನ್ನು ಎಲ್ಲರೂ ಅತಿಮಾನುಷ ಮೇಧಾವಿ ಅನ್ನುತ್ತಾರೆ!” ಎಂದು ಮೆಚ್ಚುಗೆಯ ಮಾತನ್ನಾಡಿದ.

ರಾಮಾನುಜನ್ನರಿಗೆ ಸಹಜ ಮತ್ತು ಮುಗ್ಧ ಆಶ್ಚರ್ಯ. “ನಾನೊಬ್ಬ ಅತಿಮಾನುಷ ಮೇಧಾವಿ? ನನ್ನ ಮೊಣಕೈಯನ್ನು ನೋಡು. ಅದು ಕತೆ ಹೇಳುತ್ತದೆ.”

“ಇದೆಲ್ಲ ಏನು ರಾಮಾನುಜನ್? ಇದೇಕೆ ಇಷ್ಟು ಕಪ್ಪಾಗಿಯೂ ದೊರಗಾಗಿಯೂ ಉಂಟು?”

“ನನ್ನನ್ನು ಅತಿಮಾನುಷ ಮೇಧಾವಿಯನ್ನಾಗಿ ಮಾಡುವಲ್ಲಿ ನನ್ನ ಮೊಣಕೈ ದೊರಗು ಮತ್ತು ಕಪ್ಪಾಗಿದೆ! ರಾತ್ರಿ ಹಗಲು ಲೆಕ್ಕವನ್ನು ನಾನು ಬಳಪದ ಹಲಗೆಯ ಮೇಲೆ ಮಾಡುತ್ತೇನೆ. ಬರೆದುದನ್ನು ಉಜ್ಜಲು ಒಂದು ಚಿಂದಿಯನ್ನು ಹುಡುಕುವುದು ಬಲು ನಿಧಾನದ ಕೆಲಸ. ಪ್ರತಿ ಕೆಲವೇ ನಿಮಿಷಗಳಿಗೊಮ್ಮೆ ನನ್ನ ಮೊಣಕೈಯಿಂದಲೇ ನಾನು ಹಲಗೆ ಅಳಿಸುತ್ತೇನೆ.”

“ಅಂದರೆ ನೀನು ಉದ್ಯಮಶೀಲತೆಯ ಒಂದು ಪರ್ವತವೇ! ಅಷ್ಟೊಂದು ಲೆಕ್ಕವನ್ನು ಮಾಡಬೇಕಾಗಿರುವಾಗ ಬಳಪದ ಹಲಗೆಯನ್ನು ಬಳಸುವುದೇಕೆ? ಕಾಗದವನ್ನೇಕೆ ಉಪಯೋಗಿಸಬಾರದು?”

“ಆಹಾರಕ್ಕೇ ಕಷ್ಟವಾಗಿರುವಾಗ ಕಾಗದ ಕೊಳ್ಳಲು ನಾನು ಹಣವನ್ನು ಎಲ್ಲಿಂದ ತರಲಿ? ಪ್ರತಿ ತಿಂಗಳೂ ನನಗೆ ನಾಲ್ಕು ರೀಮುಗಳಷ್ಟು ಕಾಗದ ಬೇಕಾದೀತು.”

ರಾಮಚಂದ್ರರಾಯರ ಔದಾರ್ಯದಿಂದ ಬಿಡುಗಡೆಯಾಗಲು ಇದ್ದ ಸರಿಯಾದ ಶಾಶ್ವತ ದಾರಿ ಒಂದೇ-ರಾಮಾನುಜನ್ನರಿಗೆ ಮದರಾಸು ವಿಶ್ವವಿದ್ಯಾಲಯದಿಂದ ಒಂದು ಸಂಶೋಧನ ವಿದ್ಯಾರ್ಥಿ ವೇತನವನ್ನು ದೊರಕಿಸಿ ಕೊಡುವುದು. ಆದರೆ ಈ ದಿಸೆಯಲ್ಲಿ ಮಾಡಿದ ಪ್ರಯತ್ನ ಫಲಿಸಲಿಲ್ಲ.

ಶೇಷು ಅಯ್ಯರ್ ಮತ್ತು ರಾಮಸ್ವಾಮಿ ಅಯ್ಯರ್ ಈ ಮಹನೀಯರ ಪ್ರಭಾವದಿಂದ ಮದರಾಸು ಪೋರ್ಟ್‌‌ಟ್ರಸ್ಟಿನಲ್ಲಿ (ಬಂದರು) ರಾಮಾನುಜನ್ನರಿಗೆ ಗುಮಾಸ್ತಿಕೆ ಕೆಲಸ ಸಿಕ್ಕಿತು. (ಮಾರ್ಚ್‌೧, ೧೯೧೨). ಸಂಬಳ ತಿಂಗಳಿಗೆ ಇಪ್ಪತ್ತೈದು ರೂಪಾಯಿಗಳು! ಆ ಖಾತೆಯ ಅಧ್ಯಕ್ಷರಾಗಿದ್ದ ಸರ್ ಫ್ರಾನ್ಸಿಸ್‌ಸ್ಟ್ರಿಂಗ್ ಅವರಿಗೆ ರಾಮಾನುಜನ್ನರ ಮೇಲೆ ವಿಶೇಷ ಆದರವಿತ್ತು. ಸಂಸ್ಥೆಯ ಮ್ಯಾನೇಜರರಾಗಿದ್ದ ಎಸ್‌.ನಾರಾಯಣ ಅಯ್ಯರರು ಸ್ವತಃ ಗಣಿತ ಪ್ರೇಮಿಗಳು ಹಾಗೂ ಇಂಡಿಯನ್ ಮ್ಯಾಥ್ಮ್ಯಾಟಿಕಲ್ ಸೊಸೈಟಿಯ ಕೋಶಾಧಿಕಾರಿಗಳು. ಹೀಗೆ ಒಂದು ಗೊತ್ತಾದ ಹುದ್ದೆ, ಸಂಬಳ, ಜೀವನಯಾಪನೆಗೆ ಅನುಕೂಲ ಪರಿಸರ ಸ್ಥಿರವಾದದ್ದರಿಂದ ರಾಮಾನುಜನ್ ನಿರಾಡಂಬರವಾಗಿ ಜೀವನವನ್ನು ಸಾಗಿಸುವುದು ಸಾಧ್ಯವಾಯಿತು. ಅದರೊಂದಿಗೆ ಸಿಕ್ಕಷ್ಟು ಬಿಡುಸಮಯದಲ್ಲಿ ಗಣಿತಾಧ್ಯಯವನ್ನು ಹೆಚ್ಚಿನ ಉತ್ಸಾಹದಿಂದ ಮುಂದುವರಿಸಲು ಅನುಕೂಲವಾಯಿತು.

ಮದರಾಸು ವಿಶ್ವವಿದ್ಯಾಲಯಕ್ಕೆ

ಇದೇ ಸುಮಾರಿಗೆ “ಜರ್ನಲ್‌ಆಫ್‌ದಿ ಇಂಡಿಯನ್ ಮ್ಯಾಥಮ್ಯಾಟಿಕಲ್ ಸೊಸೈಟಿ” ಎಂಬ ಪತ್ರಿಕೆ ರಾಮಾನುಜನ್ನರ ಗಣಿತ ಪ್ರಬಂಧಗಳನ್ನು ಪ್ರಕಟಿಸಲು ತೊಡಗಿತು. ಮೊದಲ ಪ್ರಬಂಧ ಪ್ರಕಟವಾದದ್ದು ಫೆಬ್ರವರಿ ೧೯೧೧ರ ಸಂಚಿಕೆಯಲ್ಲಿ. ಈ ವೇಳೆಗಾಗಲೇ ಶೇಷು ಅಯ್ಯರ್ ಆದಿಯಾಗಿ ಎಲ್ಲ ಹಿರಿಯ ಗಣಿತ ವಿದ್ವಾಂಸರೂ ಒಂದು ತೀರ್ಮಾನಕ್ಕೆ ಬಂದಿದ್ದರು: ರಾಮಾನುಜನ್ನರ ನಿಜಯೋಗ್ಯತೆಯನ್ನು ಅಳೆಯಲು ಸಮರ್ಥರಾದವರು ಇಂಗ್ಲೆಂಡಿನ ಕೇಂಬ್ರಿಜಿನ ಟ್ರಿನಿಜ ಕಾಲೇಜಿನಲ್ಲಿ ಗಣಿತಾದ್ಯಾಪಕರೂ ಅಂತರಾಷ್ಟ್ರೀಯ ಖ್ಯಾತಿಯ ಗಣಿತ ವಿದ್ವಾಂಸರೂ ಆಗಿರುವ ಪ್ರೊ|| ಜಿ.ಎಚ್. ಹಾರ್ಡಿಯವರೇ ಸರಿ ಎಂಬುದೇ ಆ ತೀರ್ಮಾನ. ಈ ಹಿರಿಯ ಮಿತ್ರರ ಒತ್ತಾಯದ ಮೇರೆಗೆ ರಾಮಾನುಜನ್ ಹಾರ್ಡಿಯವರಿಗೆ ಒಂದು ಪತ್ರವನ್ನು ಬರೆದರು (ಜನವರಿ ೧೬,೧೯೧೩). ಈ ಕಾಗದದಲ್ಲಿ ರಾಮಾನುಜನ್ ತನ್ನ ಗಣಿತಾಸಕ್ತಿಗಳನ್ನು ವಿವರಿಸಿದ್ದಲ್ಲದೇ ಹೇಗೆ ತನಗೆ ಹೇಳಿಕೊಳ್ಳುವಂಥ ಯಾವ ವಿಶ್ವವಿದ್ಯಾಲಯ ವಿದ್ಯಾಭ್ಯಾಸವಾಗಲೀ ಪದವಿಯಾಗಲೀ ಲಭಿಸಿಲ್ಲ ಎಂಬುದನ್ನೂ ಸೂಚಿಸಿದರು. ತನ್ನ ಸಂಶೋಧನ ಪ್ರಬಂಧಗಳಲ್ಲಿ ಏನಾದರೂ ಹುರುಳಿದ್ದರೆ ಅವನ್ನು ಪ್ರಕಟಿಸಲು ದಾರಿ ತೋರಿಸಬೇಕೆಂದು ಕೋರಿ, ತಮ್ಮ ಸಂಶೋಧನೆಗಳಿಂದ ಆಯ್ದ ಸುಮಾರು ನೂರಿಪ್ಪತ್ತು ಗಣಿತ ಪ್ರಮೇಯಗಳ ನಿರೂಪಣೆಗಳನ್ನು ಲಗತ್ತಿಸಿದರು.

ಭಾರತದ ಹವಾಮಾನ ಇಲಾಖೆಯ ಮುಖ್ಯಸ್ಥರೂ ಸ್ವತಃ ಉನ್ನತ ಮಟ್ಟದ ಗಣಿತವಿದ್ವಾಂಸರೂ ಆಗಿದ್ದ ಡಾ|| ಗಿಲ್ಬರ್ಟ್‌ವಾಕರ್ ಎನ್ನುವವರು ಇದೇ ಸುಮಾರಿಗೆ (ಫೆಬ್ರವರಿ ೨೫, ೧೯೧೩) ಮದರಾಸಿಗೆ ಭೇಟಿ ನೀಡಿದರು. ಸ್ಟ್ರಿಂಗರ ಶಿಫಾರಸು ಮೇರೆ ಈ ಮಹನೀಯರು ರಾಮಾನುಜನ್ನರ ಕೆಲವು ಬರಹಗಳನ್ನು ಪರಿಶೀಲಿಸಿದರು. ಅವುಗಳಲ್ಲಿ ಸ್ವಂತತ್ವದಿಂದಲೂ ನೂತನತೆಯಿಂದಲೂ ಚಕಿತರಾದ ವಾಕರ್ ಆ ಬರಹಗಳ ಮೇಲೆ ತೀರ್ಪನ್ನು ನೀಡುವುದು ತನ್ನ ಯೋಗ್ಯತೆಗೆ ಮೀರಿದ್ದು, ಹಾರ್ಡಿಯವರೊಬ್ಬರೇ ಈ ಕೆಲಸ ಮಾಡಲು ಸಮರ್ಥರೆಂದು ಹೇಳಿದರು. ಇಂಥ ಮೇಧಾವಿಗೆ ಮದರಾಸು ವಿಶ್ವವಿದ್ಯಾಲಯ ಸಂಶೋಧನ ವಿದ್ಯಾರ್ಥಿ ವೇತನ ನೀಡಿ, ಆತನ ಅಸಾಧಾರಣ ಬುದ್ಧಿಶಕ್ತಿ ಯಾವ ಅಡ್ಡಿಯೂ ಇಲ್ಲದೆ ಅರಳುವುದಕ್ಕೆ ಯೋಗ್ಯ ಪರಿಸರ ಒದಗಿಸಬೇಕೆಂಬ ಶಿಫಾರಸು ಪತ್ರವನ್ನು ಆ ಸಂಸ್ಥೆಗೆ ವಾಕರ್ ಬರೆದರು. ಬ್ರಿಟಿಷ್ ಅಧಿಕಾರಿಗಳೇ ಸಾಮಾನ್ಯವಾಗಿ ಎಲ್ಲ ಸಂಸ್ಥೆಗಳ ವರಿಷ್ಠ ಸ್ಥಾನಗಳಲ್ಲಿದ್ದ ದಿವಸಗಳು. ಅವರೆಲ್ಲರೂ ವೈಯಕ್ತಿಕ ಮಿತ್ರರು ಕೂಡ. ಆದ್ದರಿಂದ ಲಗುಬಗೆಯಿಂದ ಕಾಗದಗಳು ಚಲಿಸಿದವು. ವಿಶ್ವವಿದ್ಯಾಲಯದ ಸಿಂಡಿಕೇಟಿನ ಮುಂದೆ ಈ ವಿಷಯ ಚರ್ಚೆಗೆ ಬಂದಾಗ ರಾಮಾನುಜನ್ನರಿಗೆ ವಿದ್ಯಾರ್ಥಿ ವೇತನ ನೀಡಬೇಕೆನ್ನುವ ಠರಾವನ್ನು ಸ್ವತಃ ಕುಲಪತಿಗಳೇ ಮಂಡಿಸಿ ಅನುಮೋದಿಸಿದರು. ಆದರೆ ಕಾನೂನಿನ ಸಲಾಕಿ ಈ ಚಕ್ರದ ಆರಿಗಳ ನಡುವೆ ಸಿಕ್ಕಿ ಹಾಕಿಕೊಂಡಿತು: ವಿಶ್ವವಿದ್ಯಾಲಯ ರೂಪಿಸಿಕೊಂಡಿದ್ದ ನಿಯಮಾವಳಿ ಪ್ರಕಾರ ಸಂಶೋಧನ ವಿದ್ಯಾರ್ಥಿ ವೇತನವನ್ನು ಸ್ನಾತಕೋತ್ತರ ಪದವೀಧರರಿಗೆ ಮಾತ್ರ ನೀಡಬಹುದಷ್ಟೆ: ರಾಮಾನುಜನ್ನರಿಗೆ ಇಂಥ ಯಾವ ಪದವಿಯೂ ಇಲ್ಲದಿರುವುದರಿಂದ ಅವರಿಗೆ ವೇತನವನ್ನು ಮಂಜೂರಿಸುವುದು ಹೇಗೆಂಬುದೇ ಕಾನೂನಿ ಸಬೂಬು. ಒಂದುಕ್ಷಣ ಎಲ್ಲರಿಗೂ ಕಳವಳ. ಬಹುದೊಡ್ಡ ಉದ್ದೇಶ ಹೊಂದಿದ್ದ ಈ ಠರಾವು ಕಾನೂನಿನ ಅಡ್ಡಗೋಡೆ ದಾಟಲಾಗದೆ ಕುಸಿದು ಬಿದ್ದುಹೋಗುತ್ತದೆಂಬ ನಿರಾಶೆ. ನ್ಯಾಯಮೂರ್ತಿಗಳೂ ಸಿಂಡಿಕೇಟ್ ಸದಸ್ಯರೂ ಆಗಿದ್ದ ಪಿ.ಆರ್.ಸುಂದರಂ ಅಯ್ಯರವರು ಆಗ ಈ ಸಿಕ್ಕನ್ನು ಕಾನೂನು ಬದ್ಧವಾಗಿಯೇ ಬಿಡಿಸಿದರು: ಸಂಶೋಧನೆಯನ್ನು ಪ್ರೋತ್ಸಾಹಿಸುವುದು ವಿಶ್ವವಿದ್ಯಾಲಯದ ಕರ್ತವ್ಯಗಳಲ್ಲಿ ಒಂದು ಎಂದು ಅದರ ಕಾಯಿದೆಯಲ್ಲಿಯೇ ಹೇಳಿದೆ: ವಿಶ್ವವಿದ್ಯಾಲಯದ ಕೆಲಸ ನಡೆಸಲು ಮಾಡಿಕೊಂಡಿರುವ ಯಾವುದೇ ನಿಯಮ ಇದಕ್ಕೆ ವಿರುದ್ಧವಾಗಿದ್ದರೆ ಆ ನಿಯಮ ನಿಲ್ಲಲಾರದು; ಆದ್ದರಿಂದ ವಿಶ್ವವಿದ್ಯಾಲಯದ ಕಾಯಿದೆಯ ಅನುಸಾರ ರಾಮಾನುಜನ್ನರಿಗೆ ಸಂಶೋಧನ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಬಹುದು ಎಂಬುದು ಅವರ ವಾದದ ತಿರುಳು. ಆಗ ಮಂಜೂರಾದ ಸಂಶೋಧನ ವಿದ್ಯಾರ್ಥಿವೇತನದ ಮೊಬಲಗು ತಿಂಗಳೊಂದರ ಎಪ್ಪತ್ತೈದು ರೂಪಾಯಿಗಳು; ಅವಧಿ ಎರಡು ವರ್ಷಗಳವರೆಗೆ. ಏಪ್ರಿಲ್ ೩೦, ೧೯೧೩ರಂದು – ಅಂದರೆ ಪೋರ್ಟ್‌ಟ್ರಸ್ಟನ್ನು ಸೇರಿ ಹದಿಮೂರು ತಿಂಗಳುಗಳ ತರುವಾಯ-ರಾಮಾನುಜನ್ ಗುಮಾಸ್ತಿಕೆಯನ್ನು ಅಧಿಕೃತವಾಗಿ ತ್ಯಜಿಸಿ ಮೇ ೧, ೧೯೧೩ರಂದು ಮದರಾಸು ವಿಶ್ವವಿದ್ಯಾನಿಲಯವನ್ನು ಒಬ್ಬ ಸಂಶೋಧನ ವಿದ್ಯಾರ್ಥಿಯಾಗಿ ಸೇರಿಕೊಂಡರು. ಅಂದಿನಿಂದ ಮುಂದೆ ಅವರೊಬ್ಬ ಗಣಿತೋದ್ಯಮಿಯಾಗಿಯೇ ಬಾಳಿದರು.

ಕೇಂಬ್ರಿಜಿನ ದಾರಿಯಲ್ಲಿ

ಹಾರ್ಡಿಯವರು ಎಷ್ಟು ದೊಡ್ಡ ಗಣಿತ ಪುರುಷರೋ ಅಷ್ಟೇ ದೊಡ್ಡ ಸಹೃದಯರೂ ಉದಾರಿಗಳೂ ಹೌದು. ರಾಮಾನುಜನ್ನರ ಮೊದಲ ಕಾಗದದೊಡನೆ ಲಗತ್ತಿಸಲಾಗಿದ್ದ ಗಣಿತಸೂತ್ರಗಳನ್ನು ಪರಾಂಬರಿಸಿದ ಒಡನೆ ಅವರಿಗೆ ಈತನ ಪ್ರತಿಭೆಯ ಹರವು ಮತ್ತು ಆಳಗಳ ಅರಿವಾಯಿತು. ಇಂಥ ಪುರುಷ, ಸಮಾನ ಪ್ರತಿಭೆಯ ವ್ಯಕ್ತಿಗಳೊಡನೆ ಕೇಂಬ್ರಿಜಿನಲ್ಲಿಯೇ ಇರತಕ್ಕದ್ದೆಂದು ಅವರು ನಿರ್ಧರಿಸಿದರು. ರಾಮಾನುಜನ್ನರಿಗೆ ಹಾರ್ಡಿಯವರು ಬರೆದ ಉತ್ತರ ಬಲು ಉತ್ತೇಜನಕಾರಿಯಾಗಿತ್ತು. ಅಲ್ಲಿಂದ ಮುಂದೆ ರಾಮಾನುಜನ್ – ಹಾರ್ಡಿ ಪತ್ರವಿನಿಮಯ ಅತ್ಯಂತ ಸಹೃದಯ ವಾತಾವರಣದಲ್ಲಿ ಮುಂದುವರಿಯುತ್ತಿದ್ದಂತೆಯೇ ರಾಮಾನುಜನ್ನರನ್ನು ಕೇಂಬ್ರಿಜಿಗೆ ಕರೆಸಿಕೊಳ್ಳಲು ತಮ್ಮ ಪ್ರಯತ್ನಗಳನ್ನು ಹಾರ್ಡಿಯವರು ಬೇರೆ ಬೇರೆ ಮಿತ್ರರ ಮೂಲಕ ಮುಂದುವರಿಸಿದರು. ಎದುರಿಸಬೇಕಾಗಿದ್ದ ಸಮಸ್ಯೆಗಳು ಮುಖ್ಯವಾಗಿ ಎರಡು: ಸಮುದ್ರಯಾನ, ವಿದೇಶ ಪ್ರಯಾಣ ಮುಂತಾದವುಗಳ ವಿರುದ್ದ ರಾಮಾನುಜನ್ನರ ಮತೀಯ ನಂಬಿಕೆಗಳು; ಮತ್ತು ಹಣಕಾಸಿನ ಏರ್ಪಾಡು. ೧೯೧೪ರ ತರುಣದಲ್ಲಿ ಕಾಲ ಕೂಡಿಬಂದಿತೆಂದು ತೋರುತ್ತದೆ. ಮಿತ್ರರ ನಿರಂತರ ಉಪದೇಶ, ಹಾರ್ಡಿಯವರ ಪುನರಾವರ್ತಿತ ಆಹ್ವಾನಗಳು, ಹಾರ್ಡಿಯವರ ಅನುಯಾಯಿ ನೆವಿಲ್ ಎಂಬ ಗಣಿತವಿದ್ವಾಂಸರಿಂದ ಪ್ರತ್ಯಕ್ಷ ಆಹ್ವಾನ – ಈ ಪ್ರಭಾವಗಳ ಮುಂದೆ ತಾವು ಕೇಂಬ್ರಿಜಿಗೆ ಹೋಗುವುದನ್ನು ರಾಮಾನುಜನ್ನರ ಮನಸ್ಸು ಒಪ್ಪಿಕೊಳ್ಳಲೇಬೇಕಾಯಿತು. ಅವರ ತಾಯಿಯ ಸಮ್ಮತಿ ಅತ್ಯಾವಶಕವಾದ ಮುಂದಿನ ಹೆಜ್ಜೆ. ನಾಮಗಿರಿದೇವಿಯ ಆಜ್ಞೆ ಏನಿದೆ ಎಂದು ತಿಳಿಯಲು ಸ್ವತಃ ರಾಮಾನುಜನ್ ಮೂರು ದಿವಸಗಳ ಕಾಲ ಪೂಜೆ, ಧ್ಯಾನ ನಡೆಸಿದರು. ಆಗ ಅವರ ತಾಯಿಗೆ ಕನಸಿನಲ್ಲಿ ಒಂದು ಚಿತ್ರ ಕಟ್ಟಿತಂತೆ; ತನ್ನ ಮಗ ಬಿಳಿಜನರ ಜೊತೆಯಲ್ಲಿ ಕುಳಿತಿದ್ದಾನೆ; ಅವನ ತಲೆಯ ಸುತ್ತ ಒಂದು ಪ್ರಭಾವಲಯದ ಪಸರಿಸಿದೆ; ಆತನ ಜೀವನಯಾತ್ರೆಯ ಸಾಫಲ್ಯದ ವಿರುದ್ಧ ಅಡ್ಡಿ ಬರಬಾರದಾಗಿ ದೇವಿ ಆಜ್ಞಾಪಿಸುತ್ತಿದ್ದಾಳೆ. ತಾಯಿಯ ಅನುಮತಿ ಹೀಗೆ ಒಂದು ಅನಿರೀಕ್ಷಿತ ವಿಧಾನದಿಂದ ಲಭಿಸಿತು. ಹಣದ ಏರ್ಪಾಡು ಯಾವ ಅಡಚಣೆಯನ್ನೂ ಒಡ್ಡಲಿಲ್ಲ. ಮದರಾಸು ವಿಶ್ವವಿದ್ಯಾಲಯ ೨೫೦ ಪೌಂಡುಗಳ (ಅಂದಿನ ಸಮಾನ ಮೌಲ್ಯ ರೂ. ೩,೭೫೦) ವಾರ್ಷಿಕ ವಿದ್ಯಾರ್ಥಿವೇತನವನ್ನು ತತ್ ಕ್ಷಣ ಮಂಜೂರು ಮಾಡಿ ತನ್ನ ಕರ್ತವ್ಯವನ್ನು ಅಭಿಮಾನ ಪೂರ್ವಕವಾಗಿ ನಿರ್ವಹಿಸಿತು. ಈ ಮೊಬಲಗಿನಿಂದ ತನ್ನ ತಾಯಿಗೆ ವರ್ಷವೊಂದರ ೫೦ ಪೌಂಡುಗಳನ್ನು (ರೂ. ೭೫೦) ಕೊಡಲು ಏರ್ಪಡಿಸಿ ರಾಮಾನುಜನ್ ಕೇಂಬ್ರಿಜ್ ಪ್ರಯಾಣಕ್ಕೆ ಸನ್ನದ್ಧರಾಗತೊಡಗಿದರು.

ಮಾರ್ಚ್‌೧೭, ೧೯೧೪ರಂದು ರಾಮಾನುಜನ್ ಭಾರತದಿಂದ ಇಂಗ್ಲೆಂಡಿಗೆ ಸಮುದ್ರಯಾನ ಆರಂಭಿಸಿದರು. ಅಂದು ಭಾರತದ ಕಚ್ಚಾ ಗಣಿತಸಂಪತ್ತು ಪೂರೈಸಿದ ಶುದ್ಧ ರತ್ನಾಭರಣವಾಗಿ ಮರಳಲು ಇಂಗ್ಲೆಂಡಿಗೆ ತೆರಳಿತು.

ಎಂಥ ವಿದ್ಯಾಭ್ಯಾಸ

ಕೇಂಬ್ರಿಜಿನಲ್ಲಿ ಹಾರ್ಡಿ ಮತ್ತು ಅವರ ಸಹೋದ್ಯೋಗಿ ಲಿಟ್ಲ್‌ವುಡ್ ಅದುವರೆಗೆ ರಾಮಾನುಜನ್ನರಿಗೆ ತಮಗೆ ಬಂದಿದ್ದ ಎಲ್ಲ ಸಂಶೋಧನ ಪತ್ರಗಳನ್ನೂ ಅಮೂಲಾಗ್ರವಾಗಿ ಅಧ್ಯಯನ ಮಾಡಿ ಅವರ ಗಣಿತ ಸಾಮರ್ಥ್ಯವನ್ನೂ ದೌರ್ಬಲ್ಯವನ್ನೂ ಕುರಿತು ಒಂದು ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದರು. ಹಾರ್ಡಿಯವರು ೧೯೨೧ರಲ್ಲಿ ಬರೆದ ಒಂದು ಲೇಖನದಲ್ಲಿ ಹೀಗೆ ಹೇಳಿದ್ದಾರೆ: “ನಮ್ಮ ಎದುರಿದ್ದುದು ಒಂದು ದೊಡ್ಡ ಒಗಟು-ಈತನಿಗೆ ಆಧುನಿಕ ಗಣಿತಶಾಸ್ತ್ರವನ್ನು ಕಲಿಸುವ ವಿಧಾನ ಹೇಗೆಂಬುದು. ಅವನ ಜ್ಞಾನದ ಪರಿಮಿತಿ ಎಷ್ಟು ವಿಸ್ಮಯಕಾರಿಯೋ ಅದರ ಗಂಭೀರತೆಯೂ ಅಷ್ಟೇ.” ಹಾರ್ಡಿಯವರ ಪ್ರಕಾರ ಗಣಿತ ವಿಜ್ಞಾನದ ಕೆಲವು ಚಿರಪರಿಚಿತ ಕ್ಷೇತ್ರಗಳಲ್ಲಿ ರಾಮಾನುಜನ್ನರಿಗೆ ಏನೂ ತಿಳವಳಿಕೆ ಇರಲಿಲ್ಲ! ಆದರೆ ಹಲವಾರು ಹೊಸ ವಿಭಾಗಗಳಲ್ಲಿ ಅವರ ಹಿರಿಮೆ ದಂಗು ಬಡಿಸುವಂತಿತ್ತು. ಅವರ ಅಭಿಪ್ರಾಯದಲ್ಲಿ ಪ್ರಪಂಚದ ಯಾವ ಗಣಿತಜ್ಞನೂ ಮಾಡದಂಥ ಕಾರ್ಯವನ್ನು, ಏರದಂಥ ಎತ್ತರವನ್ನು, ರಾಮಾನುಜನ್ ಸ್ವಪ್ರತಿಭೆಯಿಂದ ಸಾಧಿಸಿದ್ದಾರೆ; ನವಸಂಶೋಧನೆಗಳನ್ನು ಮಾಡಿದ್ದಾರೆ. ಆದರೆ ಇದೇ ವೇಳೆಗೆ ಕೆಲವು ಪ್ರಾಥಮಿಕ ಗಣಿತ ವಿಚಾರಗಳಲ್ಲಿ ಕೂಡ ಇವರ ಇನ್ನೂ ಎಳೆಯ ಮಗುವಿನಂತೆ ಮುಗ್ಧರೇ. ಗಣಿತದಲ್ಲಿ ಮೆಟ್ಟಲು ಮೆಟ್ಟಲಾಗಿ ತರ್ಕದಿಂದ ಒಂದು ಹೇಳಿಕೆ ಸರಿ ಎಂದು ತೋರಿಸಿಕೊಡುವುದು ಎಷ್ಟು ಮುಖ್ಯ ಎನ್ನುವುದರ ವಿಚಾರದಲ್ಲಿ ಇವರ ತಿಳುವಳಿಕೆ ತೀರ ಮುಸುಕು. ಬಲುಗಹನವೆಂದು ಇವರು ನಂಬಿರುವ ಕೆಲವು ಗಣಿತ ಊಹೆಗಳು ದೋಷಯುಕ್ತವಾಗಿದ್ದವು. ಇಂಥ ವಿಲಕ್ಷಣ ಪುರುಷನಿಗೆ ಆಧುನಿಕ ಗಣಿತದಲ್ಲಿ ಶಿಕ್ಷಣವೀಯುವುದು ಅತ್ಯಾವಶ್ಯಕ. ಇದರಿಂದ ಅವರ ಪ್ರತಿಭೆಯ ವ್ಯಾಪ್ತಿ ಬಹುವಾಗಿ ವಿಸ್ತರಿಸಿ ಅದು ಸರಿಯಾಗಿ ಅರಳುವುದೆಂಬುದರಲ್ಲಿ ಸಂದೇಹವಿಲ್ಲ. ಆದರೆ ಸಾಂಪ್ರದಾಯಿಕ ವ್ಯವಸ್ಥಿತ ಶಿಕ್ಷಣ ಇವರ ಸ್ವಭಾವಕ್ಕೆ ಹೇಳಿದ್ದಲ್ಲ. ಅದರಿಂದ ಈ ಪ್ರತಿಭೆಯ ಸೆಲೆ ಹಿಂಗಿ ಹೋಗಬಹುದು. ಈ ರೀತಿ ಚಿಂತಿಸಿದ ಹಾರ್ಡಿಯವರು ಅಸಾಂಪ್ರದಾಯಿಕವಾದ ಹೊಸ ಶಿಕ್ಷಣ ವಿಧಾನವನ್ನು ಅನುಸರಿಸಲು ನಿರ್ಧರಿಸಿದರು. “ರಾಮಾನುಜನ್ನರಿಗೆ ಪಾಠ ಹೇಳಿಕೊಡಲು ನಾನು ಪ್ರಯತ್ನಪಡಬೇಕಾಯಿತು. ಇದರಲ್ಲಿ ನಾನುತಕ್ಕಮಟ್ಟಿಗೆ ಯಶಸ್ವಿ ಆದೇನಾದರೂ ಅವರು ನನ್ನಿಂದ ಕಲಿತುದಕ್ಕಿಂತ ಹೆಚ್ಚನ್ನು ನಾನೇ ಅವರಿಂದ ಕಲಿತೆ… ಅವರೆಂದೂ ಆಧುನಿಕ ಚಿಂತನೆಯ ಗಣಿತಜ್ಞರಾಗಿರಲಿಲ್ಲ. ಅವರನ್ನು ಹೀಗೆ ಮಾಡುವುದು ಅಪೇಕ್ಷಣೀಯವೂ ಆಗಿರಲಿಲ್ಲ. ಆದರೆ ಒಂದು ಪ್ರಮೇಯವನ್ನು ತಾನು ಯಾವಾಗ ಸಾಧಿಸಿದ್ದೇನೆ ಮತ್ತು ಯಾವಾಗ ಸಾಧಿಸಲಿಲ್ಲ ಎಂಬುದು ಅವರಿಗೆ ತಿಳಿದಿತ್ತು. ಅವರಿಂದ ಪ್ರವಹಿಸುತ್ತಿದ್ದ ಮೂಲಭೂತ ಭಾವನೆಗಳು ಎಂದೂ ಹಿಂಗುವ ಲಕ್ಷಣವನ್ನು ವ್ಯಕ್ತಪಡಿಸಲಿಲ್ಲ.”

ಹಾರ್ಡಿ – ಲಿಟ್ಲ್‌ವುಡ್ – ರಾಮಾನುಜನ್ ತ್ರಯ ರಾಮಾನುಜನ್ ಗಣಿತ ಸಮಸ್ಯೆಗಳ ಮೇಲೆ ಬಿರುಸಾಗಿ ಕೆಲಸ ಮಾಡಿತು. ೧೯೦೭ ರಿಂದ ೧೯೧೧ರ ವರೆಗಿನ ನಾಲ್ಕು ವರ್ಷಗಳನ್ನು ರಾಮಾನುಜನ್ ಜೀವನದ ಅತಿ ಚಟುವಟಿಕೆಯ ಮೊದಲನೆಯ ಅವಧಿ ಎಂದೂ ೧೯೧೪ರಿಂದ ೧೯೧೮ರವರೆಗಿನ ನಾಲ್ಕು ವರ್ಷಗಳನ್ನು ಅತಿ ಚಟುವಟಿಕೆಯ ಎರಡನೆಯ ಅವಧಿ ಎಂದೂ ಬಲ್ಲವರು ವರ್ಗೀಕರಿಸಿದ್ದಾರೆ. ಈ ಎರಡನೆಯ ಅವಧಿಯಲ್ಲಿ ಪ್ರಕಟವಾದ ಸಂಶೋಧನ ಪ್ರಬಂಧಗಳ ಸಂಖ್ಯೆ ೨೪ ಇವೆಲ್ಲವೂ ಪೂರೈಸಿದ “ಉತ್ಕೃಷ್ಟ ಮಾಲುಗಳೇ. ಹಾರ್ಡಿಯವರು “ಆಧುನಿಕ ಕಾಲದಲ್ಲಿ ಇವರು ಭಾರತದ ಪರಮೋತ್ಕೃಷ್ಟ ಗಣಿತಜ್ಞ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ….. ವಿಷಯಗಳ ಆಯ್ಕೆಯಲ್ಲಿಯೂ ಅವನ್ನು ಸಾಧಿಸುವ ವಿಧಾನಗಳಲ್ಲಿಯೂ ಇವರು ಯಾವಾಗಲೂ ಬಲು ವಿಚಿತ್ರ…. ಆದರೆ ಅವರ ಅಸಾಧಾರಣ ಸಾಮರ್ಥ್ಯಗಳನ್ನು ಕುರಿತು ಸಂಶಯವೇ ಇರಲಾರದು. ಕೆಲವು ರೀತಿಗಳಲ್ಲಿ ಇವರು ನನಗೆ ತಿಳಿದಿರುವ ಎಲ್ಲ ಗಣಿತಜ್ಞರಲ್ಲಿಯೂ ಅತ್ಯಂತ ಗಮನಾರ್ಹರಾಗಿದ್ದಾರೆ” ಎಂದು ಶ್ಲಾಘಿಸಿದ್ದಾರೆ.

ಕೇಂಬ್ರಿಜ್‌ವಿಶ್ವವಿದ್ಯಾಲಯ ೧೯೧೬ರಲ್ಲಿ ರಾಮಾನುಜನ್ನರಿಗೆ ಗೌರವ ಬಿ.ಎ. ಪದವಿಯನ್ನು ನೀಡಿ ಸನ್ಮಾನಿಸಿತು.

ಕೇಂಬ್ರಿಜಿನಲ್ಲಿ ವಾಸವಾಗಿದ್ದ ಕಾಲದಲ್ಲಿ ರಾಮಾನುಜನ್ ವೈಯಕ್ತಿಕವಾಗಿ ಸಂತೋಷಿಯಾಗಿದ್ದರೇ ಎಂಬ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟ. ಗಣಿತ ಚಿಂತನ ಅವರ ಜೀವನ ಸರ್ವಸ್ವವನ್ನೂ ವ್ಯಾಪಿಸಿಬಿಟ್ಟಿತ್ತು, ನಿಜ: ಆದ್ದರಿಂದ ದಿನದ ಬಹ್ವಂಶ ಆ ಚಿಂತನೆಯಲ್ಲಿಯೇ ಮುಳುಗಿದ್ದ ಅವರಿಗೆ, ತಮ್ಮ ಆರೋಗ್ಯಕ್ಕೆ ಏನು ಬೇಕು, ಏನು ಬೇಡ, ಯಾವುದರಿಂದ ಸಂತೋಷ ಎನ್ನುವುದರ ಕಡೆಗೆ ಗಮನವೇ ಇರಲಿಲ್ಲ. ಮುಂದೆ ಭಾರತ ಸರ್ಕಾರದ ಅರ್ಥಸಚಿವರಾದ ಡಾ|| ಸಿ.ಡಿ. ದೇಶಮುಖರು ಕೇಂಬ್ರಿಜಿನಲ್ಲಿ ರಾಮಾನುಜನ್ನರ ಸಮಕಾಲೀನ ವಿದ್ಯಾರ್ಥಿಯಾಗಿದ್ದರು. ಯಾವಾಗಲಾದರೊಂದು ಆದಿತ್ಯವಾರ ಇವರು ರಾಮಾನುಜನ್ನರ ಕೊಠಡಿಗೆ ಭೇಟಿ ಕೊಡುತ್ತಿದ್ದಿತ್ತು. ಆಗೆಲ್ಲ ರಾಮಾನುಜನ್ ದೇಶಮುಖರಿಗೆ ಒತ್ತಾಯ ಮಾಡಿ ಊಟ ಬಡಿಸಿ ಉಪಚಾರ ಮಾಡಿ ಮಧ್ಯೆ ಮಧ್ಯೆ ಬೇಕಾದಷ್ಟು ಗಣಿತ ಸಮಸ್ಯೆಗಳನ್ನೂ (ಕೇಳುಗರಿಗೆ ಅರ್ಥವಾಗುವಂಥವುಗಳನ್ನು ಮಾತ್ರ) ಚಟಾಕಿಗಳನ್ನೂ ಉದುರಿಸುತ್ತ ಸಂತೋಷಗೊಳಿಸುತ್ತಿದ್ದರಂತೆ. ಅವರ ಪಾಕ ಕೌಶಲ ಅದ್ಭುತವಾಗಿತ್ತೆಂದು ದೇಶಮುಖರು ಹೇಳಿದ್ದಾರೆ.

ಇಂಗ್ಲೆಂಡಿನ ಹವೆ, ಆಹಾರ ಇವು ಅವರಿಗೆ ಸರಿಹೊಂದಲಿಲ್ಲ. ನೆಂಟರು, ಸ್ನೇಹಿತರಿಂದ ದೂರವಾಗಿದ್ದುದರಿಂದ ಮನಸ್ಸಿಗೂ ನೆಮ್ಮದಿ ಇರಲಿಲ್ಲ. ಕಷ್ಟ, ಸುಖ, ಉದ್ವೇಗಗಳನ್ನು ನೆಂಟರಿಷ್ಟರೊಂದಿಗೆ ಹೇಳಿಕೊಂಡು ಸಮಾಧಾನಪಡುವಂತಿರಲಿಲ್ಲ. ಮನಸ್ಸು ಸದಾ ಗಣಿತದ ಚಿಂತನೆಯಲ್ಲೇ ಶ್ರಮಿಸುತ್ತಿತ್ತು. ಮೊದಲೇ ಅಷ್ಟು ದೃಡಕಾಯರಲ್ಲದ ಅವರ ಆರೋಗ್ಯದ ಮೇಲೆ ಇವೆಲ್ಲ ಕ್ರಮೇಣ, ಆದರೂ ಸ್ಪಷ್ಟವಾಗಿ, ವಿನಾಶಕಾರೀ ಪರಿಣಾಮವನ್ನು ಅಚ್ಚೊತ್ತಲು ತೊಡಗಿದುವು. ಅಂದು ರಾಮಾನುಜನ್ ಬಾಳಿದ್ದು ಉಲ್ಕೆಯಂತೆ-ತಾನೇ ಉರಿದು ಪ್ರಪಂಚಕ್ಕೆ ಮಹಾಪ್ರಭೆಯನ್ನು ಬೀರುವ ಬಾಳನ್ನ.

ಸಹಜ ಪ್ರಕಾಶ

ಮೇ ೧೯೧೭ರ ಸುಮಾರಿಗೆ ಹಾರ್ಡಿಯವರು ಮದರಾಸು ವಿಶ್ವವಿದ್ಯಾಲಯಕ್ಕೆ ಕಳಿಸಿದ ವರದಿ ಎಷ್ಟು ಅನಿರೀಕ್ಷಿತವಾಗಿತ್ತೋ ಅಷ್ಟೇ ಕಳವಳಕಾರಿಯೂ ಆಗಿತ್ತು. ಅದರ ಪ್ರಕಾರ ರಾಮಾನುಜನ್ ತೀವ್ರ ವ್ಯಾಧಿಯೊಂದಕ್ಕೆ ತುತ್ತಾಗಿದ್ದಾರೆ ಎಂದಿತ್ತು. ಭಾರತಕ್ಕೆ ಕಳಿಸೋಣವೆಂದರೆ ಯುದ್ಧದ ದಿನಗಳು. ಇಲ್ಲಿ ಸಮರ್ಥ ವೈದ್ಯಕೀಯ ಸೇವೆ ಲಭಿಸುವ ಪರಿಸ್ಥಿತಿ ಆಗ ಇರಲಿಲ್ಲ. ಆದ್ದರಿಂದ ಅವರನ್ನು ಲಂಡನ್ನಿನ ಬಳಿಯಿದ್ದ ಒಂದು ಸೆನಟೋರಿಯಮ್ಮಿಗೆ ಸಾಗಿಸಲಾಯಿತು. ರಾಮಾನುಜನ್ ತೀವ್ರ ಕ್ಷಯರೋಗಗ್ರಸ್ತರಾಗಿದ್ದರು. ಔಷಧಿ, ಪಥ್ಯ, ಅನುಪಾನ ಎಲ್ಲದರಲ್ಲೂ ಇವರ ಅತೀಯ ಬಿಗಿ-ಸಸ್ಯೇತರ ಮೂಲಗಳಿಂದ ಬಂದ ಯಾವ ಪೌಷ್ಠಿಕ ಆಹಾರ ಪದಾರ್ಥವೂ (ಹಾಲು ಮತ್ತು ಅದರ ಉತ್ಪನ್ನಗಳ ಹೊರತಾಗಿ) ಔಷಧಿಯೂ ಇವರಿಗೆ ವರ್ಜ್ಯ. ದೇಹ ಇಂಥ ಕಠಿಣ ವ್ಯಾಧಿಯಿಂದ ಕ್ಷಯಿಸುತ್ತಿದ್ದಾಗಲೂ ರಾಮಾನುಜನ್ನರ ಮನಸ್ಸು ಅದೆಷ್ಟು ಹರಿತವಾಗಿ ಕ್ಷಿಪ್ರ ಗ್ರಾಹಿಯಾಗಿ ಇತ್ತು ಎನ್ನುವುದನ್ನು ಹಾರ್ಡಿ ವರ್ಣಿಸಿದ್ದಾರೆ.

ಮಾಮೂಲಿನಂತೆ ಒಂದು ದಿನ ಹಾರ್ಡಿ ರಾಮಾನುಜನ್ನರನ್ನು ನೋಡಿ ವಿಚಾರಿಸಿಕೊಂಡು ಹೋಗಲು ಬಂದರು. ತಾನು ಅಲ್ಲಿಗೆ ಬಂದಿದ್ದ ಟ್ಯಾಕ್ಸಿಯ ಫಲಕ ಸಂಖ್ಯೆ ೧೭೨೯ (=೭x೧೩ x ೧೯); ಇದೊಂದು ತೀರ ಜಡ ಮತ್ತು ಸಪ್ಪೆ ಸಂಖ್ಯೆಯಾಗಿ ತೋರುತ್ತದೆ ಎಂದು ಹಾರ್ಡಿ ಹೇಳಿದಾಗ, “ಅಲ್ಲಲ್ಲ, ಇದೊಂದು ಬಲು ಸ್ವಾರಸ್ಯಕರವಾದ ಸಂಖ್ಯೆ. ಎರಡು ಘನಗಳ ಮೊತ್ತವನ್ನು ಎರಡು ಬೇರೆ ಬೇರೆ ರೀತಿಗಳಲ್ಲಿ ನಿರೂಪಿಸಬಹುದಾದ ಕನಿಷ್ಠ ಸಂಖ್ಯೆಯೇ ೧೭೨೯” ಎಂದು ರಾಮಾನುಜನ್ ತತ್‌ಕ್ಷಣವೇ ಹೇಳಿದರು.

೧೭೨೯ = ೧+೧೨=೯x೧೦*

ಈ ರೀತಿ ನಿರೂಪಿಸಬಹುದಾದ ೧೭೨೯ಕ್ಕಿಂತ ಕಡಮೆಯಾದ ಸಂಖ್ಯೆ ಬೇರೊಂದು ಇಲ್ಲ. ಇದನ್ನು ಕೇಳಿದ ಹಾರ್ಡಿ ಹಾಗಾದರೆ ನಾಲ್ಕನೆಯ ಘಾತಗಳನ್ನು ಕುರಿತಂತೆ ಕನಿಷ್ಠ ಸಂಖ್ಯೆ ಇದೆಯೇ, ಇದ್ದರೆ ಅದು ಯಾವುದೆಂದು ರಾಮಾನುಜನ್ನರನ್ನು ಕೇಳಿದರು. ರಾಮಾನುಜನ್ ಸ್ವಲ್ಪ ಕಾಲ ಯೋಚಿಸಿ ಅಂಥ ಸಂಖ್ಯೆಗೆ ಯಾವ ಸ್ಪಷ್ಟ ಉದಾಹರಣೆಯೂ ತನಗೆ ತಿಳಿಯದು; ಅದೇನಾದರೂ ಇದ್ದರೆ ಅದು ಬೃಹತ್ತಾಗಿರುವುದೆಂದರು. ಈ ಸಂಖ್ಯೆಯನ್ನು ಆಯ್ಲರ್ (೧೭೦೭-೧೭೮೩) ಎಂಬ ಸ್ವಿಸ್ಸ್‌ಗಣಿತ ವಿಜ್ಞಾನಿ ನೀಡಿದ್ದಾನೆ.

= ೧ x ೧ x ೧ = ೧
೧೨ = ೧೨ x ೧೨ x ೧೨ x ೧೭೨೮
= ೯ x ೯ x ೯ = ೭೨೯
೧೦= ೧೦ x ೧೦ x ೧೦ x ೧೦೦೦
೬೩, ೫೩, ೧೮, ೬೫೭ = ೫೯೧೫೮ = ೧೩೩ ೧೩೪*

“ಪ್ರತಿಯೊಂದು ಧನ ಪೂರ್ಣಾಂಕ ರಾಮಾನುಜನ್ನರಿಗೆ ಸ್ವಂತ ಸ್ನೇಹಿತನಂತೆ” ಎಂದು ಲಿಟ್ಲ್‌ವುಡ್‌ಒಮ್ಮೆ ಉದ್ಗರಿಸಿದ್ದರು. ರಾಮಾನುಜನ್ನರ ಜ್ಞಾಪನಶಕ್ತಿ ಮತ್ತು ಗಣನಸಾಮರ್ಥ್ಯ ತೀರ ಅಸಾಧಾರಣವಾಗಿದ್ದುವು; ಬೀಜಗಣಿತೀಯ ಸೂತ್ರಗಳ ಅಂತರಾರ್ಥವನ್ನು ಗ್ರಹಿಸುವಲ್ಲಿ ಅನಂತ ಶ್ರೇಣಿಗಳೊಡನೆ ಸರಾಗವಾಗಿ ವ್ಯವಹರಿಸುವಲ್ಲಿ ಇವರ ಸರಿಸಮಾನರನ್ನು ತಾನು ಗಣಿತ ಚರಿತ್ರೆಯಲ್ಲೇ ಕಂಡಿಲ್ಲ ಎಂದು ಹಾರ್ಡಿಯವರು ಹೇಳಿದ್ದಾರೆ.

ಫೆಬ್ರವರಿ ೨೮, ೧೯೧೮ರಲ್ಲಿ ರಾಮಾನುಜನ್ ಇಂಗ್ಲೆಂಡಿನ ರಾಯಲ್ ಸೊಸೈಟಿಯ ಫೆಲೋ ಆಗಿ ಪ್ರಥಮ ನಾಮಕರಣದಲ್ಲೇ ಅವಿರೋಧವಾಗಿ ಆಯ್ಕೆಗೊಂಡರು.

*೫೯ = ೫೯ x ೫೯ x ೫೯ x ೫೯
೧೫೮ = ೧೫೮ x ೧೫೮ x ೧೫೮ x ೧೫೮
೧೩೩= ೧೩೩ x ೧೩೩ x ೧೩೩ x ೧೩೩
೧೩೪ = ೧೩೪ x ೧೩೪ x ೧೩೪ x ೧೩೪

(ಈ ಗುಣಲಬ್ದಗಳ ಬೆಲೆಗಳನ್ನು ಪಡೆದು ಆಯ್ಲರನ ಹೇಳಿಕೆಯ ನಿಜತನವನ್ನು ಓದುಗರೇ ತಾಳೆ ನೋಡಬಹುದು.) ಎಫ್‌.ಆರ್.ಎಸ್‌.ಎಂಬ ಈ ಉನ್ನತ ಗೌರವ ಪಡೆದ ಭಾರತೀಯರಲ್ಲಿ ಇವರು ಎರಡನೆಯವರು. (ಮೊದಲನೆಯವರ ಎ ಕಾರ್ಸೆಟ್ಜಿ, ೧೮೪೧). ಮದರಾಸು ವಿಶ್ವವಿದ್ಯಾಲಯ ಒಂದು ಗಣಿತ ಪ್ರಾಧ್ಯಾಪಕತ್ವವನ್ನು ಸಂಸ್ಥಾಪಿಸಿ ಅದಕ್ಕೆ ರಾಮಾನುಜನ್ನರನ್ನು ಆಹ್ವಾನಿಸಬೇಕೆಂಬ ಯೋಜನೆಯನ್ನು ತಯಾರಿಸಿತು.

ಆರುತ್ತಿರುವ ದೀಪ

೧೯೧೮ರ ವೇಳೆಗೆ ರೋಗ ಸ್ವಲ್ಪ ಹತೋಟಿಗೆ ಬಂದಂತೆ ತೋರಿತು. ಆಗ ಯುದ್ಧ ನಿಂತಿದ್ದುದರಿಂದ ರಾಮಾನುಜನ್ನರನ್ನು ಭಾರತಕ್ಕೆ ಕಳಿಸಿದರೆ, ಮನೆಯವರೊಡನೆ ಇರುವುದರಿಂದ ಹಾಗೂ ಉಷ್ಣವಲಯದ ವಾತಾವರಣದ ಪ್ರಭಾವದಿಂದ ಆರೋಗ್ಯ ಸುಧಾರಿಸಬಹುದೆಂದು ತೋರಿತು.

೧೯೧೯ರ ಏಪ್ರಿಲ್ ೨ರಂದು ಅವರು ಮದರಾಸು ನಗರವನ್ನು ತಲುಪಿದಾಗ ಬಂಧು ಬಾಂಧವರು ಕಂಡದ್ದು ಚರ್ಮ ಮೂಳೆ ರೂಪದ ರಾಮಾನುಜನ್ನರ ಛಾಯೆಯನ್ನು. ಬದಲಾಗದಿದ್ದುದು ಎರಡು – ಅವರ ಕಣ್ಣುಗಳಲ್ಲಿ ಮಿಂಚುತ್ತಿದ್ದ ಅಪೂರ್ವ ಕಾಂತಿ, ಅವರ ನಿಶ್ಚಿತ ಬುದ್ಧಿ. ಈ ಗಣಿತ ಶ್ರೀಮಂತನನ್ನು, ಭಾರತರತ್ನವನ್ನು ಉಳಿಸಿಕೊಳ್ಳುವ ಸರ್ವ ಪ್ರಯತ್ನವನ್ನೂ ಮಾಡಲಾಯಿತು. ಅತ್ಯುತ್ಕೃಷ್ಟವಾದ ವೈದ್ಯಕೀಯ ನೆರವು, ಯೋಗ್ಯ ಪರಿಸರ, ಬಂಧು ಬಾಂಧವರಿಂದ ಆತ್ಮೀಯ ಸೇವೆ, ಇತ್ಯಾದಿ. ಸಂಸ್ಥೆಗಳಿಂದ ಸಾರ್ವಜನಿಕರಿಂದ ತಾವೇತಾವಾಗಿ ಒದಗಿಬಂದ ಸೇವೆ ಧನಸಹಾಯಗಳು ಅವೆಷ್ಟೊ.

ಮೃತ್ಯು ಬಾಗಿಲಿನಲ್ಲಿ ಗುರುತರವಾಗಿ ತಟ್ಟುತ್ತಿದ್ದಾಗಲೂ ರಾಮಾನುಜನ್ನರ ಮಿದುಳು ಗಣಿತ ಚಿಂತನೆಗಳಿಂದ ವಿಮುಖವಾಗಿರಲಿಲ್ಲ. ಬಹುಶಃ ಈ ವಿಹಾರಗಳು ಮಾತ್ರ ಅವರಿಗೆ ದೈಹಿಕ ವೇದನೆಯನ್ನು ಉಪಶಮನಗೊಳಿಸಲು ಇದ್ದ ಸಂಮೋಹನಕಾರಿಗಳು. ಜಾನಕಿಯಮ್ಮ (ಹೆಂಡತಿ) ತನ್ನ ಪತಿಯ ಬಳಿಯಲ್ಲಿಯೇ ಕುಳಿತು ಖಾಲಿ ಕಾಗದದ ಹಾಳೆಯಗಳನ್ನೂ ಬರೆಯಲು ಸೀಸದ ಕಡ್ಡಿಯನ್ನೂ ಒದಗಿಸುತ್ತಿದ್ದರು; ಬರೆದಾದ ಹಾಳೆಯನ್ನು ಸಂಗ್ರಹಿಸಿ ಜೋಪಾನವಾಗಿ ಇಡುತ್ತಿದ್ದರು. ಅನೇಕ ವೇಳೆ ಗಣನೆಗಳನ್ನು ಮಾಡಲು ಬಳಪದ ಹಲಗೆ ಕಡ್ಡಿಗಳನ್ನು ಒದಗಿಸುವುದು ಸಹ ಇತ್ತು. ೧೯೧೮-೧೯೨೧ರ ಅವಧಿಯಲ್ಲಿ ಪ್ರಕಟವಾದ ರಾಮಾನುಜನ್ನರ ಸಂಶೋಧನ ಪತ್ರಗಳ ಸಂಖ್ಯೆ ೧೨ (೧೮೨೧ರಲ್ಲಿ ೧) ಎನ್ನುವಾಗ ಈತನ ಮನಸ್ಸಿನ ಪುಟಿಕತೆ ಅದೆಂಥ ಉನ್ನತ ಮಟ್ಟದ್ದು ಎಂದು ಅರಿವಾಗದಿರದು.

ದುರ್ದಿನ ಸಮೀಪಿಸುತ್ತಿದ್ದಂತೆ ರಾಮಾನುಜನ್ನರನ್ನು ಅವರು ಆಗ ವಿಶ್ರಾಂತಿ ಪಡೆಯುತ್ತಿದ್ದ ಕೊಡುಮುಡಿ ಎಂಬ ಕಾವೇರಿ ತೀರದ ಧಾಮದಿಂದ ತಂಜಾವೋರಿಗೆ ವರ್ಗಾಯಿಸಿದರೆ ಒಳ್ಳೆಯದಾದೀತೆಂದು ವೈದ್ಯರು ಭಾವಿಸಿದರು. ಇದನ್ನು ಕೇಳಿದ ರಾಮಾನುಜನ್ “ತಂಜಾವೋರು” ಪದವನ್ನು “ತಾನ್‌ಸಾವ್-ಊರ್” (ತಮಿಳಿನಲ್ಲಿಯೂ ಕನ್ನಡದ ಅರ್ಥವೇ – ತಾನು ಸಾವ ಊರು) ಎಂದು ಒಡೆದು, “ನನ್ನನ್ನು ತಾನ್‌ಸಾವ್-ಊರ‍್ಗೆ, ನಾನು ಸಾಯಲಿರುವ ಸ್ಥಳಕ್ಕೆ ಕೊಂಡೊಯ್ಯಬೇಕೆಂದಿದ್ದಾರೆಯೇ!” ಎಂದು ಗೇಲಿ ಮಾಡಿದರಂತೆ. ತಂಜಾವೂರಿನ ವಾಸ್ತವ್ಯ ಹಿತವಾಗಲಿಲ್ಲ. ಅಲ್ಲಿಂದ ಅವರ ಸ್ವಂತ ಊರಾದ ಕುಂಭಕೋಣಂಗೆ ಒಯ್ದರು. ಇದೂ ಒಳ್ಳೆಯದಾಗಲಿಲ್ಲ. ಸರಕಾರವೂ ಮದರಾಸು ವಿಶ್ವವಿದ್ಯಾಲಯವೂ ನಿರ್ಧರಿಸಿದ ಪ್ರಕಾರ ರಾಮಾನುಜನ್ನರನ್ನು ಮದರಾಸು ನಗರದ ಚೆಟ್‌ಪಟ್ ಎಂಬ ಬಡಾವಣೆಗೆ ಸಾಗಿಸಲಾಯಿತು. “ಓ! ಎಲ್ಲವೂ ಚಟ್‌ಪಟ್‌ಆಗುವ ಸ್ಥಳಕ್ಕೆ ಅವರು ನನ್ನನ್ನು ತಂದಿದ್ದಾರೆ” ಎಂದು ಈ ಹೆಸರಿನ ಮೇಲೆಯೂ ರಾಮಾನುಜನ್ ಗೇಲಿ ಮಾಡಿದರು.

ಆರ್ಥಿಕ ನೆಮ್ಮದಿಯಾಗಲೀ, ವೈದ್ಯಕೀಯ ಸೇವೆಯಾಗಲೀ, ಪ್ರಶಸ್ತಿ ಪರಂಪರೆಯಾಗಲೀ ಇಡೀ ವಿದ್ವತ್ಪ್ರಪಂಚದ ಪ್ರಾರ್ಥನೆಯಾಗಲೀ ರೋಗದ ಏರುತ್ತಿದ್ದ ಉಲ್ಬಣತೆಯನ್ನು ತಡೆಯಲು ಸಮರ್ಥವಾಗಲಿಲ್ಲ. ಏಪ್ರಿಲ್ ೧೬, ೧೯೨೦ರಂದು ಈ ಪಾರಲೌಕಿಕ ಪ್ರತಿಭೆ ನಂದಿಯೇ ಹೋಯಿತು. ವಯಸ್ಸು ೩೨.)

ದೇಶದ ಭಾಗ್ಯ

ಪ್ರತಿಭೆ ಒಂದು ದೇಶದ ಸಂಪತ್ತು. ಪ್ರತಿಭೆಯ ಹುಟ್ಟು, ಬೆಳವಣಿಗೆ, ಅದು ತುಳಿಯುವ ಹಾದಿ ಇವೆಲ್ಲವೂ ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡದ ಅಂಶಗಳು. ಇದು ಹೇಗೂ ಇರಲಿ. ಪ್ರತಿಭೆಯನ್ನು ತರುಣದಲ್ಲೇ ಗುರುತಿಸುವ ಪೋಷಿಸುವ ಸಂರಕ್ಷಿಸುವ ಕರ್ತವ್ಯ ಅನಿವಾರ್ಯವಾಗಿ ನಡೆಯಲೇಬೇಕಾದ ವಿಧ. ರಾಮಾನುಜನ್ನರಿಗೆ ಯುಕ್ತ ವೇಳೆಯಲ್ಲಿ ಸಹಾಯ ಒದಗಿದ್ದರೆ ಅವರು ಅಷ್ಟು ಚಿಕ್ಕ ವಯಸ್ಸಿನಲ್ಲಿ ತೀರಿಕೊಳ್ಳುತ್ತಿರಲಿಲ್ಲವೋ ಏನೋ!