(ಕ್ರಿ.ಶ. ೧೮೮೭-೧೯೨೦)
(ನಂಬರ್ ಥಿಯರಿ)

ಗಣಿತಶಾಸ್ತ್ರದಲ್ಲಿ ಹೊಸ ಸಂಶೋಧನೆಗಳನ್ನು ಮಾಡಿ ಅಂಕೆಗಳ ಅದ್ಭುತ ಜಗತ್ತನ್ನು ತೆರೆದಿಟ್ಟ ಭಾರತೀಯ ಗಣಿತ ಶಾಸ್ತ್ರಜ್ಞರುಗಳಲ್ಲಿ ಚಿರಸ್ಥಾಯೀ ಸ್ಥಾನವನ್ನು ಪಡೆದ ವಿಜ್ಞಾನಿ, ಶ್ರೀನಿವಾಸ ರಾಮಾನುಜನ್ . ಇವರು ಡಿಸೆಂಬರ‍್ ೨೨, ೧೮೮೭ರಂದು ಮದರಾಸು ಸಂಸ್ಥಾನದ (ಈಗಿನ ತಮಿಳುನಾಡು) ಈರೋಡ್ ನಗರದಲ್ಲಿ ಜನಿಸಿದರು. ಕುಂಭಕೋಣಮ್ ಹೈಸ್ಕೂಲಿನಲ್ಲಿ ಮ್ಯಾಟ್ರಿಕ್ ಶಿಕ್ಷಣವನ್ನು ಮುಗಿಸಿಕೊಂಡು ಅದೇ ಊರಿನ ಸರಕಾರಿ ಕಾಲೇಜಿಗೆ ಪ್ರವೇಶ ಪಡೆದರು. ಮ್ಯಾಟ್ರಿಕ್ ನಲ್ಲಿ ಒಳ್ಳೆಯ ಗುಣಾಂಕಗಳನ್ನು ಪಡೆದದ್ದರಿಂದ ಅವರಿಗೆ ಸ್ಕಾಲರ್ ಷಿಪ್ ದೊರಕಿತು. ಮೊದಲಿನಿಂದಲೇ ಗಣಿತಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಶ್ರೀನಿವಾಸ ರಾಮಾನುಜನ್ ಟ್ರಿಗನಾಮೆಟ್ರಿ (ತ್ರಿಕೋಣಮಿತಿ) ಮತ್ತು ಇತರ ಪುಸ್ತಕಗಳನ್ನು ಮಿತ್ರರಿಂದ ಎರವಲಾಗಿ ಪಡೆದು ಗಣಿತದ ಸಮಸ್ಯೆಗಳನ್ನು ಬಿಡಿಸುವಲ್ಲಿ ಅಪಾರ ಪಾಂಡಿತ್ಯ ಸಂಪಾದಿಸಿದರು. ಆದರೆ ಗಣಿತದಲ್ಲಿನ ಈ ಅತಿ ಆಸಕ್ತಿಯಿಂದಾಗಿ ಇತರ ವಿಷಯಗಳಲ್ಲಿ ಅವರು ಹೆಚ್ಚು ಗುಣಾಂಕಗಳನ್ನು ಸಂಪಾದಿಸಲಿಲ್ಲ. ಮದರಾಸು ವಿಶ್ವವಿದ್ಯಾಲಯದ ಆರ್ಟ್ಸ್ ಪದವಿಗಾಗಿ ಹಲವು ಸಲ ಪರೀಕ್ಷೆಗೆ ಕೊಡಬೇಕಾಯಿತು.
“ಬಡತನಕ್ಕೆ ಮದುವೆ ಬೇರೆ ಕೇಡು ” ಎಂಬಂತೆ ಅವರ ಮದುವೆಯಾಗಿ ಉಪಜೀವನ ಸಮಸ್ಯೆ ಧುತ್ತೆಂದು ಅವರ ಮುಂದೆ ನಿಂತಿತು. ಮದ್ರಾಸ್ ಪೋರ್ಟ್‌ ಟ್ರಸ್ಟಿನಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿದರು. ಆದರೂ ಗಣಿತ ಶಾಸ್ತ್ರದ ಅಧ್ಯಯನವನ್ನು ಕೈಬಿಡಲಿಲ್ಲ.
ಒಮ್ಮೆ ಇವರು ಕೇಂಬ್ರಿಡ್ಜ್ ಟ್ರಿನಿಟಿ ಕಾಲೇಜಿನ ಪ್ರೊ. ಗಾಡ್ ಫ್ರೆ ಹೆರಾಲ್ಡ್ ಹಾರ್ಡಿ ಅವರಿಗೆ ಮೂಲ ರೂಪದ ಅನೇಕ ಗಣಿತೀಯ ಸಂಕೇತಗಳಿಂದ ಕೂಡಿದ ಹಾಳೆಗಳ ಕಟ್ಟು ಒಂದನ್ನು ಕಳಿಸಿದರು. ಅವುಗಳನ್ನು ಕಂಡು ಸ್ವತಃ ಗಣಿತಶಾಸ್ತ್ರಜ್ಞರಾಗಿದ್ದ ಪ್ರೊ. ಹಾರ್ಡಿ ಶ್ರೀನಿವಾಸ ರಾಮಾನುಜನ್ ರಲ್ಲಿ ಅದ್ಭುತ ಗಣಿತಶಾಸ್ತ್ರೀಯ ಪಾಂಡಿತ್ಯವನ್ನು ಗುರುತಿಸಿದರು. ಅವರನ್ನು ಇಂಗ್ಲೆಂಡಿಗೆ ಕರೆಸಿಕೊಂಡರು. ಶ್ರೀನಿವಾಸ ರಾಮಾನುಜನ್ ರೂ ಟ್ರಿನಿಟಿ ಕಾಲೇಜಿಗೆ ಸೇರಿದರು. “ನಂಬರ್ ಥಿಯರಿ ” ಎಂಬ ಸಿದ್ಧಾಂತವನ್ನು ರೂಪಿಸಿ ಶ್ರೀ ರಾಮಾನುಜನ್ ಗಣಿತಶಾಸ್ತ್ರಕ್ಕೆ ಅದ್ಭುತ ಕೊಡುಗೆಯನ್ನು ನೀಡಿದರು. ಅವರ ಈ ಕಾಣಿಕೆ ಅವರಿಗೆ ಲಂಡನಿನ ರಾಯಲ್ ಸೊಸೈಟಿಯ ಫೆಲೋಷಿಪ್ ಅನ್ನು ತಂದಿತು.
ಶ್ರೀನಿವಾಸ ರಾಮಾನುಜನ್ ಕ್ಷಯರೋಗದಿಂದಾಗಿ ಏಪ್ರಿಲ್ ೨೦, ೧೯೨೦ರಂದು ಮದರಾಸಿನಲ್ಲಿ ನಿಧನರಾದರು. ಅವರ ಗೌರವ ಸ್ಮರಣೆಗಾಗಿ ರಾಮಾನುಜನ್ ಪುರಸ್ಕಾರವನ್ನು ಸ್ಥಾಪಿಸಲಾಯಿತು.