ಉತ್ತರ ಕರ್ನಾಟಕ ಹಿಂದುಸ್ಥಾನಿ ಸಂಗೀತ ವಲಯದಲ್ಲಿ ಎತ್ತರದಲ್ಲಿ ಗುರುತಿಸಲ್ಪಡುತ್ತಿರುವ ಗಾಯಕರಲ್ಲಿ ಹುಬ್ಬಳ್ಳಿಯ ಪಂ. ಶ್ರೀಪತಿ ಪಾಡಿಗಾರರು ಒಬ್ಬರು. ೧೯೨೯ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದ ಶ್ರೀಪತಿ ಪಾಡಿಗಾರ ಅವರು ಮೂಲತಃ ಉಡುಪಿಯವರು. ಇವರ ಹಿರಿಯರು ಹುಬ್ಬಳ್ಳಿಯಲ್ಲಿ ನೆಲೆಸಿದ್ದರಿಂದ ಶ್ರೀಪತಿಯ ಹುಟ್ಟು, ವಿದ್ಯಾಭ್ಯಾಸ ಎಲ್ಲ ನಡೆದದ್ದೂ ಹುಬ್ಬಳ್ಳಿಯಲ್ಲಿಯೇ. ಮನೆಯ ಸುತ್ತಮುತ್ತಲ ಪರಿಸರವೆಲ್ಲ ಸಂಗೀತಮಯ. ಇವರ ಪಕ್ಕದ ಮನೆಯಿಂದ ಕೇಳಿ ಬರುತ್ತಿದ್ದ ಗಾನ ಲಹರಿ ಸಹಜವಾಗಿ ಹುಡುಗನನ್ನು ಆಕರ್ಷಿಸಿತು. ಹಾಡುತ್ತಿದ್ದವರು ಬೇರಾರೂ ಅಲ್ಲ. ಪದ್ಮಭೂಷಣ ಡಾ. ಗಂಗೂಬಾಯಿ ಹಾನಗಲ್ಲ ಅವರು. ಆ ಗಾನ ಮಾಧುರ್ಯವನ್ನು ಸದಾ ಸವಿಯುತ್ತಿದ್ದ ಶ್ರೀಪತಿಗೆ ತಾನೂ ಅವರಂತೇ ಸಂಗೀತ ಕಲಿತು ಹಾಡಿ, ವಿದ್ವಾಂಸನಾಗಬೇಕೆಂಬ ಬಯಕೆ ಉಂಟಾಗಿ ಅದು ಬಲಿತು ಹೆಮ್ಮರವಾಯಿತು. ಈ ಉತ್ಸಾಹದಲ್ಲಿ ಲೌಕಿಕ ವಿದ್ಯಾಭ್ಯಾಸ ಕುಂಠಿತವಾಯಿತು. ಓದುವುದರ ಕಡೆ ಆಸಕ್ತಿ ಕಡಿಮೆಯಾಗಿ ಸಂಗೀತ ಕಲಿಯುವಾಸೆ ಬೆಳೆಯುತ್ತಾ ಹೋಯಿತು. ಮಗನ ವಿಮನಸ್ಕತೆಯನ್ನು ಕಂಡು ಕೊಂಡ ತಂದೆ ತಾಯಿಗಳು ಅವರ ಸಂಗೀತದ ಗೀಳನ್ನು ಅರಿತು ಸವಾಯಿ ಗಂಧರ್ವರ ಶಿಷ್ಯರಾಗಿದ್ದ ವೆಂಕಟೇಶ ರಾಮದುರ್ಗ ಅವರಿಂದ ಪ್ರಾರಂಭಿಕ ಶಿಕ್ಷಣ ಕೊಡಿಸಿದರು. ಸಾಕಷ್ಟು ತಾಲೀಮು ಮಾಡಿ ಅನಂತರ ಪಂಡಿತ ಭೀಮಸೇನ ಜೋಶಿಯವರಲ್ಲಿ ಉನ್ನತ ಶಿಕ್ಷಣ ಪಡೆದರು. ಶಿಷ್ಯನಲ್ಲಿ ಸುಪ್ತವಾಗಿದ್ದ ಸಂಗೀತಾಸಕ್ತಿ, ಅದಕ್ಕಾಗಿ ಆತ ಪಡುತ್ತಿದ್ದ ಶ್ರಮ ಮುಂತಾದುವನ್ನು ಕಂಡುಕೊಂಡ ಜೋಶಿಯವರು ತುಂಬ ಮುತುವರ್ಜಿಯಿಂದ ತಮ್ಮಲ್ಲಿದ್ದ ಸಂಗೀತದ ಸರಕನ್ನೆಲ್ಲ ಶಿಷ್ಯನಿಗೆ ಧಾರೆಯೆರೆದರು. ಸುಮಾರು ನಾಲ್ಕು ವರ್ಷಗಳ ಕಾಲ ಅವರಲ್ಲಿ ಶಿಷ್ಯ ವೃತ್ತಿ ಮಾಡಿ ಕಿರಾಣಾ ಘರಾಣೆ ಶೈಲಿಯ ಎಲ್ಲಾ ಸೂಕ್ಷ್ಮ ವಿಚಾರಗಳನ್ನು ಮನನ ಮಾಡಿಕೊಂಡದ್ದೇ ಅಲ್ಲದೇ ಭೀಮಸೇನ ಜೋಶಿಯವರ ಭಕ್ತಿ ಪಂಥಗಾನವನ್ನೂ ಕರಗತ ಮಾಡಿಕೊಂಡು ಅದರಲ್ಲೂ ಪರಿಣತರೆನಿಸಿದರು.

ಕುಂದಗೋಳದಲ್ಲಿ ನಡೆದ ಸವಾಯಿ ಗಂಧರ್ವರ ಪುಣ್ಯತಿಥಿಯ ಸಂದರ್ಭದಲ್ಲಿ ನೆರೆದಿದ್ದ ಹಿಂದೂಸ್ಥಾನಿ ಸಂಗೀತ ದಿಗ್ಗಜಗಳ ಸಮ್ಮುಖದಲ್ಲಿ ಪ್ರಥಮ ಕಛೇರಿ ಮಾಡಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾದರು. ಅದು ಅವರ ಏಳಿಗೆಗೆ ನಾಂದಿಯಾಯಿತು. ಮುಂದೆ ಮುಂಬೈ, ಹೈದರಾಬಾದ್‌, ಮದರಾಸು, ಪುಣೆ, ಇಂದೋರು, ಝಾನ್ಸಿ ಮುಂತಾದೆಡೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಕೀರ್ತಿಗಳಿಸಿದ್ದಾರೆ. ಮಲ್ಲಿಕಾರ್ಜುನ ಮನ್ಸೂರ್, ಭೀಮಸೇನ ಜೋಶಿ, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್ಲ ಮುಂತಾದ ಸಂಗೀತ ದಿಗ್ಗಜಗಳ ನಂತರದ ಬರುವ ಗಾಯಕರ ಸಾಲಿನಲ್ಲಿ ಶ್ರೀಪತಿಯವರಿಗೆ ಅಗ್ರಸ್ಥಾನ.

ಉಡುಪಿಯಲ್ಲಿ, ೧೯೯೦ರಲ್ಲಿ ನಡೆದ ವಾದಿರಾಜ ಕನಕದಾಸ ಉತ್ಸವದಲ್ಲಿ ಇವರು ‘ರಾಗ ರಾಗಿಣಿ ರಸಲೋಲ’ ಎಂಬ ಬಿರುದಿನೊಂದಿಗೆ ಸನ್ಮಾನಿಸಲ್ಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ತಮ್ಮದೇ ಆದ ಸಂಗೀತ ಶಿಕ್ಷಣ ಶಾಲೆಯ ಮೂಲಕ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ. ಇವರುಗಳಲ್ಲಿ ಜಯತೀರ್ಥ ಮೇವುಂಡಿ, ರಾಜೇಂದ್ರ, ದೇಶಪಾಂಡೆ, ಕೃಷ್ಣೇಂದ್ರ ವಾಡಿಕರ್ ಹಾಗೂ ಅರುಣಾ‌ ನೆಗಳೂರು ಮುಂತಾದವರು ಹೆಸರುಗಳಿಸಿದ್ದಾರೆ.

ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ತಮ್ಮ ವಿಶಿಷ್ಠ ಸ್ಥಾನವನ್ನು ಗಳಿಸಿ ಉಳಿಸಿಕೊಂಡಿರುವ ಶ್ರೀಪತಿ ಪಾಡಿಗಾರ ಅವರ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೨ನೇ ವರ್ಷದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.