ಭಾಮಿನಿ

ಪರಿಕಿಸುತ ನಾಲ್ದೆಸೆಯ ಪುರಹರ |
ತೆರಳಿತೆಲ್ಲಿಗೆ ಪ್ರಮಥಸೇನೆಯು |
ಅರರೆ ಯೇನಾಶ್ಚರ್ಯವೆನ್ನುತ ಲರಿತು ವೇಗದಲಿ ||
ಧುರವು ಸಂಘಟಿಸಿಹುದು ನಾನೀ |
ಪುರದೊಳೀರ್ದುದಕೇನು ಸಾರ್ಥಕ |
ಬರುವದಪಕೀರ್ತಿಗಳೆನುತ್ತಲಿ ಪೊರಟು ಘರ್ಜಿಸುತಾ   || ೩೧೪ ||

ರಾಗ ಭೈರವಿ ಝಂಪೆತಾಳ

ಏರಿ ವೃಷಭನ ಚಂದ್ರಚೂಡ ಭಾಗೀರಥಿಯು |
ತೋರ ಜಟೆಯೊಳಗೆ ರಂಜಿಸಲು ||
ಭಾರಿ ಶೂಲವ ಧರಿಸಿ ಗಜಚರ್ಮದೊಸನದೊಳು |
ಭೋರನೈತಂದನಾ ಹವಕೆ || ೩೧೫ ||

ಶರಣನಾಗಿಹ ವೀರಮಣಿಯೊಡನೆ ಸಂಗರಕೆ |
ಹರಿತಂದನ್ಯಾರು ಪಟುಭಟನು ||
ಅರಿಯನೇ ನಾನೀತನಳಿಯನೀ ಪುರವರದಿ |
ಸ್ಥಿರದಿ ನೆಲಸಿಹನೆಂಬ ಪರಿಯಾ     || ೩೧೬ ||

ಯಾವ ಭಟನೆನಗಿದಿರು ಮಾರಾಂತು ನಿಲ್ಲುವನು |
ಕೇವಲ ಮದಾಂಧ ಶತ್ರುಹನೂ ||
ಸಾವ ನಿಶ್ಚೈಸೀರ್ಪನರರೆಯೆನ್ನೊಡನೀತ |
ನ್ಯಾವಕಾಲಕು ಗೆಲುವದುಂಟೆ        || ೩೧೭ ||

ತುರಗ ಮೇಧದ ಕಪ್ಪಕೆನುತ ಬಂದವನೆನ್ನೊ |
ಳ್ವರಿಯದೆ ತಾ ಬಂದ ಸ್ಥಿತಿಯಾ |
ಧುರಗೈದು ಎಮ್ಮವರ ಕೆಡಹಿದನೆ ವೀರಮಣಿ |
ಹರನೀರ್ಪನೆಂದು ನಂಬೀರ್ದ       || ೩೧೮ ||

ಶರಣನಾಗಿಹ ವೀರಮಣಿಗೆಯಪಜಯಮಾಗೆ |
ಧರೆಯೊಳಾರೆನ್ನ ನಂಬುವರು ||
ಬರಿದೆಯಪವಾದಪೊಂದಿದೆನರರೆ ಸಂಗರದಿ |
ಕೊರವೆನೀತನ ಕಂಠವೆನುತಾ      || ೩೧೯ ||

ಕಾಲಾಗ್ನಿ ರುದ್ರನಾಗುತ್ತ ಫಣೆಗಣ್ಣಿನೊಳು |
ಜ್ವಾಲೆ ಧಗಧಗಿಸೆ ಹೂಂಕರಿಸಿ ||
ಕಾಳಗಕೆ ಮಾರಾಂತು ಶತ್ರುಹನ ಕರೆದೆಂದ |
ಶೂಲವನು ತಿರುಹಿ ಖಾತಿಯಲಿ      || ೩೨೦ ||

ರಾಗ ಮಾರವಿ ಏಕತಾಳ

ಎಲೆಲೇ ಶತ್ರುಹ ನಾನ್ಯಾರೆಂಬುದ | ಘಳಿಲನೆ ಪರಿಕಿಸೆಲಾ ||
ಕಲಹದಿ ಮಮ ಕಿಂಕರನನು ಮಡುಹಿದ | ಬಲವತಿಕೆಯ ತೋರೊ        || ೩೨೧ ||

ಅರಿತಿಹೆ ನಿನ್ನನು ಶ್ರೀ ರಘುರಾಮನ | ತುರಗವ ಬಂಧಿಸುತಾ ||
ಧುರಕೈತಂದಿಹ ಖೂಳನ ಮಡುಹಿದೆ | ಹರ ನಿನಗಂಜುವೆನೆ     || ೩೨೨ ||

ಮೊದಲೆನ್ನೊಡನಿದನರುಹಿರೆ ನೃಪನೊಳು | ಕದನಗಳಿರುತಿಹುದೆ ||
ಮುದದೊಳು ಕಪ್ಪವ ಕೊಡಿಸುತಲೀರ್ದೆನು | ಮದಮುಖನಾದೆಯಲಾ    || ೩೨೩ ||

ಶರಣರ ಪೊರೆಯುವ ಬಿರುದಿರೆ ನಿನ್ನಲಿ | ಹರಿತಂದಾದಿಯೊಳು ||
ದರುಶನವೀಯುತ ಕರವನು ಕೊಡಿಸಿರೆ | ಧುರಕನುವಾಗುವೆನೆ  || ೩೨೪ ||

ಶೂಲದಿ ಹೃದಯವ ಭೇದಿಪೆನೀ ಕ್ಷಣ | ಜಾಲತ್ವದ ನುಡಿಯಾ ||
ಪೇಳುವದ್ಯಾತಕೊ ಸಲಿಗೆಗಳಾದುದೆ | ತಾಳೆನು ಕ್ಷಮೆಗಳನೂ  || ೩೨೫ ||

ದಶಶಿರ ಮಥನನ ಕರುಣಗಳಿರುತಿರೆ | ವ್ಯಸನಗಳೇನಿಹುದು ||
ಶಶಿಜೂಟನೆ ತಾಳೆನ್ನುತ ಪರಿಪರಿ | ವಿಶಿಖವ ತೂರಿದನೂ       || ೩೨೬ ||

ರಾಗ ಶಂಕರಾಭರಣ ಮಟ್ಟೆತಾಳ

ಹರಿಯ ನಾದದೊಳ್ಕಪರ್ದಿ | ಬರುವ ಶರವ ತುಂಡಿಸುತ್ತ |
ಮರುಳೆ ತೋರು ನಿನ್ನ ಸಹಸ | ನೋಳ್ಪೆನೆಂದನೂ    || ೩೨೭ ||

ಭರದಿ ಬ್ರಹ್ಮಾಸ್ತ್ರವನ್ನು | ತಿರುಹಿನೊಳಗೆ ಪೂಡುತಾಗ |
ಗುರಿಯನೋಡುತೆಸೆಯೆ ಭರ್ಗ | ಮುರಿದು ಕೆಡಹಿದ    || ೩೨೮ ||

ಸ್ಮರಿಸಿ ರಾಮತಾರಕಾಖ್ಯ | ಪರಮ ಮಂತ್ರವನ್ನು ದಿವ್ಯ |
ಶರದೊಳೈಕ್ಯಗೊಳಿಸಿ ಚಂದ್ರ | ಚೂಡಗೆಸದನೂ       || ೩೨೯ ||

ಉರಿಯಸೂಸಿ ತ್ರಿಪುರಮಥನ | ಶರವ ಶೂಲದೊಳಗೆ ಮುರಿದು |
ಪರಿಘದಿಂದಲೆರಗೆ ಶಿರಕೆ | ಧರಣಿಗುರುಳಿದ   || ೩೩೦ ||

ಭಾಮಿನಿ

ಬರಿದೆ ಗರ್ವದಿ ತರಳತನದೊಳು |
ಧುರಕೆ ನಿಂದುದಕಾಯ್ತ ವಿಧಿ ನಾ |
ಪರಿಕಿಪೆನು ಮತ್ತಾರು ಬಹರೆಂದೆನುತಲಿರೆ ಹರನು ||
ಮರುತಸುತನೈತಂದು ಮುಂದೆಸೆ |
ಧರೆಯೊಳಗೆ ಬಿದ್ದಿರುವ ಶತ್ರುಹ |
ಭರತಜನ ಕಂಡಾಗ ಹಮ್ಮೈಸುತ್ತಲಿಂತೆಂದ   || ೩೩೧ ||

ರಾಗ ಘಂಟಾರವ ಅಷ್ಟತಾಳ

ಆರು ಎಮ್ಮಯ ಪುಷ್ಕಳ ಶತ್ರುಹ |
ವೀರರೀರ್ವರ ಕೆಡಹಿದಾತನ | ಭೋರನಸುವನೆ ತೊಲಗಿಪೆ     || ೩೩೨ ||

ತುರಗ ಬೆಂಬಲಕಾಗಿ ಎಮ್ಮೆಲ್ಲರ |
ತೆರಳಿಸುವ ಕಾಲದಲಿ ರಾಘವ | ಕರೆದು ಪೇಳಿಹನೆನ್ನೊಳು      || ೩೩೩ ||

ಜನಕ ಜಾತೆಯನರಸಿ ಲಂಕೆಯಸುಟ್ಟು |
ದನುಜಕೋಟಿಯ ತರಿದವನು ನೀ | ನೆನಗೆ ಪ್ರಿಯತಮ ಭಕ್ತನೂ || ೩೩೪ ||

ನಿನ್ನ ವಿಕ್ರಮನಂಬಿ ಶತ್ರುಹ ಮುಖ್ಯ |
ರನ್ನು ಕಳುಹುವೆ ಪೊರೆವುದೆಂದನು | ಎನ್ನದೇವ ದಯಾನಿಧೆ    || ೩೩೫ ||

ಅನುಜನೇನಾದನೆಂದೆನ್ನ ಕೇಳ್ದರೆ |
ಚಿನುಮಯಾತ್ಮನಿಗೇನನುಸುರಲಿ | ಘನವೆ ಎನ್ನಯ ಬಾಳ್ವೆಗೆ   || ೩೩೬ ||

ಭಾಮಿನಿ

ಕುಟ್ಟಿ ಬ್ರಹ್ಮಾಂಡವನೆ ಚೂರ್ಣಿಪೆ |
ದುಷ್ಟನಾರೆಲ್ಲಿಹನು ನಮ್ಮಯ |
ದಿಟ್ಟ ಶತ್ರುಹರನ್ನು ಕೆಡಹಿದನಸುವ ಹಿಂಡುವೆನು ||
ದೃಷ್ಟಿಗೋಚರಮಾಗೆ ಬಿಡೆನೆಂ |
ದಟ್ಟಹಾಸದೊಳಿರಲು ತ್ರಿನಯನು |
ದುಷ್ಟ ಕೋಡಗ ನಿಲ್ಲು ನಿಲ್ಲೆಂದೆನುತಲಿದಿರಾದ || ೩೩೭ ||

ರಾಗ ಭೈರವಿ ಅಷ್ಟತಾಳ

ಎಲವೋ ಮದಾಂಧ ನೀನು | ನಿಷ್ಕಾರಣ | ದೊಳಗೀಗ ದ್ವೇಷವನ್ನು |
ಗಳಿಸಿಕೊಂಡಿಹುದೇಕೆ ಪೇಳು ಪೇಳೆಲೊ ಬೇಗ | ಫಲವನುಭವಿಸುವೆಯಾ || ೩೩೮ ||

ಧುರಕೆ ಶತ್ರುಹನೆನ್ನೊಳು | ಮಾರ್ಮಲೆತಿಹ | ಪರಿಗಾಗಿ ವೇಗದೊಳು |
ಧರೆಯೊಳು ಕೆಡಹಿದ ಶೂರನಾಗಿಹೆ ನಾನು | ಪರಿಕಿಸೆಲವೊ ಧೂರ್ತನೆ    || ೩೩೯ ||

ಸೀತಾವಲ್ಲಭಗೆ ನೀನೂ | ದುಃಖವನಿತ್ತು | ಘಾತವ ಗೈದವನು |
ಖ್ಯಾತವಾಗಿಹ ತ್ರೈಮೂರ್ತಿಯೊಳಿಹೆನೆಂದು | ಈತೆರ ಗೈದಿಹೆಯಾ        || ೩೪೦ ||

ವನದೊಳು ಮೆರೆದಿರುವ | ಕೋಡಗನಿಂಗೆ | ಮನುಜರೊಳ್ ಸುಸ್ನೇಹವಾ |
ಎಣಿಸಲಾಶ್ಚರ್ಯವು ರಾಮನೊಳ್ ನಿನಗಿಂಥ | ಕನಿಕರವ್ಯಾತಕೀಗ       || ೩೪೧ ||

ಅರಿಯೆಯ ರಘುವರನಾ | ಸದ್ಭಕ್ತನಾ | ಗಿರುತಿಹ ಹನುಮಂತನಾ |
ಪರಿಕೆಸೆಲವೊ ನಾನೆಯಾತನ ಕಿಂಕರ | ಬರಿದ್ಯಾತಕಿಂತು ಪೇಳ್ವೆ         || ೩೪೨ ||

ರೂಢಿಯೊಳಗೆ ಶೂರನೂ | ಅನ್ಯರ ಸೇವೆ | ಮಾಡಲು ನಿಂದೆಯನ್ನೂ |
ಗಾಢದಿ ಪೊಂದುವನದಕೆನೀ ಷಂಡನೊ | ಕೋಡಗ ಪೇಳೆನಗೆ   || ೩೪೩ ||

ವೀರಮಣಿಯ ಪುರದಿ | ನಿನ್ನಯ ಪರಿ | ವಾರದೊಡನೆ ಮೋದದಿ |
ಯಾರ ಸೇವೆಯಗೈವ | ನೆವದೊಳು ವಸತಿಯು | ಭೋರನೆ ಪೇಳೆನಗೆ   || ೩೪೪ ||

ಶರಣವತ್ಸಲನಹೆನು | ಈ ಪುರವರ | ದರಸನೆನ್ನಯ ಭಕ್ತನು |
ವರವ ಕೊಟ್ಟಿಹೆ ನಿನ್ನ ಪುರದೊಳಗಿಹೆನೆಂದು | ತೆರಳಿ ಬಂದಿಹೆನದಕೆ      || ೩೪೫ ||

ರಾಗ ಮಾರವಿ ಏಕತಾಳ

ಪರಮಾತ್ಮನ ಸದ್ಭಕ್ತನು ಎಂಬುವ | ಬಿರುದಿಹ ಕಾರಣದಿ ||
ಸ್ಥಿರಗೊಳಿಸಲು ರಘುನಾಥನ ಪಾದವ | ಪರಿಸೇವಿಸುತಿಹೆನೂ   || ೩೪೬ ||

ಆರಕಿಂಕರ ನೀನಾದರೇನಾಯಿತು | ಕ್ರೂರತ್ವದೊಳೀಗ ||
ಮಾರಾಂತಿಹ ಕಾರಣಗಳ ಪೇಳೆಲೊ | ಭೋರನೆ ಮರ್ಕಟನೆ    || ೩೪೭ ||

ದಿವನಿಶಿಯೊಳುನೀ ಭಜಿಸುವೆ ರಾಮನ | ಭವರದಿ ಶತ್ರುಹನಾ ||
ಅವನಿಯೊಳ್ಕೆಡಹಿದ ಕಾರಣ ಶಿಕ್ಷಿಪ | ನೆವದೊಳು ನಿಂದಿಹೆನು   || ೩೪೮ ||

ಅತಿಬಲ ತ್ರಿಪುರರ ಪಿಂದಕೆ ಧ್ವಂಸೀ | ಕೃತವನೆ ಗೈದಿರುವ ||
ಶಿತಿಕಂಠನ ಪರಿಯರಿಯೆಯ ಕೋಡಗ | ಮತಿಹೀನನೆ ಭಲರೆ    || ೩೪೯ ||

ಬಲಿವರೆ ಸೇತುವ ಕೈಲಾಸವನಾ | ನಲುಗಿಸಿ ಕಿತ್ತಿರಲು ||
ಘಳಿಲನೆ ನೀ ಬಂದೆನ್ನನು ಸ್ತುತಿಸಿದ | ನೊಲವನೆ ಮರೆತಿಹೆಯ || ೩೫೦ ||

ರಾಗ ಕೇತಾರಗೌಳ ಝಂಪೆತಾಳ

ಪಿಂದೆ ರಾಮನ ಕಾರ್ಯದಿ | ದೂತತ್ವ | ಕೆಂದು ಲಂಕೆಗೆ ಗರ್ವದಿ |
ಮಂದಮತಿ ಪೋಗಿರ್ದೆಯಾ | ಬಾಲ ಸುಡ | ಲಂದು ಬಲ್ಲೆನು ಶಕ್ತಿಯಾ   || ೩೫೧ ||

ದುರುಳ ಭಸ್ಮಾಸುರನಿಗೆ | ವರವಿತ್ತು | ಭರದೊಳೋಡಿದ ಲಂಡಿಗೆ |
ಸಿರಿಯರಸನುಪಕೃತಿಯನೂ | ಗೈದಿಹುದ | ನರಿತೀರ್ಪೆನಲ್ಲೊ ನಾನು     || ೩೫೨ ||

ವನದೊಳಗೆ ತರುವಡರುತಾ | ಫಲಪಣ್ಣ | ಘನತೆಯಿಂದಲಿ ಮೆಲ್ಲುತಾ |
ಕುಣಿದು ಕೂಗುವ ಪ್ಲವಗನೂ | ಮಾರ್ಮಲೆತು | ರಣಗೈವದುಂಟೆ ನೀನೂ || ೩೫೩ ||

ಕೊಳೆತು ನಾರುವ ಚರ್ಮವಾ | ವಸನವಾ | ಗಳವಟ್ಟು ಬಹುಭಸ್ಮವಾ |
ಬಳಿದುಕೊಂಡು ಸ್ಮಶಾನದಿ | ಬಿದ್ದಿರುವ | ಕಲಿಯು ನೀನಹೆ ಶೌರ್ಯದಿ   || ೩೫೪ ||

ಅಂಧಕಾಸುರನೆಂಬನೂ | ದೇವರ್ಕ | ಳಂದಗೆಡಿಸಿದ ಧೂರ್ತನೂ |
ಕೊಂದಿಹೆನು ಕ್ಷಣಮಾತ್ರದೀ | ನಿನಗರಿದು | ಮಂದಮತಿ ಪೇಳ್ವೆ ಮದದಿ  || ೩೫೫ ||

ಬಲ್ಲೆ ಮೂರ್ಖತ್ವದೊಳಗೆ | ಇರುವ ಪ್ರಿಯ | ವಲ್ಲಭೆಯ ನೆತ್ತಿಯೊಳಗೆ |
ಮೆಲ್ಲನಾಸನವೀಯುತಾ | ಕುಳ್ಳಿರಿಸಿ | ಮಲ್ಲನಂಬೆಯ ನಲಿಯುತಾ       || ೩೫೬ ||

ಭಾಮಿನಿ

ಅರಸನಾದ ಭಗೀರಥಾಖ್ಯನ |
ಪರಮ ತಪಸಿಗೆ ಮೆಚ್ಚಿ ಗಂಗೆಯು |
ಸುರನಗರಪಥದಿಂದ ಬೀಳುವ ಭರಕೆ ಧಾರುಣಿಯು ||
ಬಿರಿದು ಪೋಪುದೆನುತ್ತ ದೃಢವಹ |
ಶಿರವನೊಡ್ಡಿಹೆನಿದರನರಿಯದೆ |
ಮರುಳೆ ನಿಂದಿಪುದೇಕೆನುತ್ತಲಿ ಗಜರಿ ಘರ್ಜಿಸಿದಾ      || ೩೫೭ ||

ರಾಗ ಶಂಕರಾಭರಣ ಮಟ್ಟೆತಾಳ

ಬರಿದೆ ಮಾತಿನೊಳಗೆ ಸ್ವಾರ್ಥ | ವಿರದು ತಾಳೆನುತ್ತ ಹನುಮ |
ತರುವನೊಂದ ತೂಗಿ ಬಡಿದ | ಗಿರಿಜೆಯರಸನಾ      || ೩೫೮ ||

ಕೆರಳಿ ಭೂತನಾಥ ತರುವ | ಮುರಿದು ಕೆಡಹಿ ಶೂಲದಿಂದ |
ಲಿರಿಯೆ ಮರುತ ತನಯ ಕಸಿದು | ಬಿಸುಟನಾ ಕ್ಷಣ    || ೩೫೯ ||

ಕೃತ್ತಿವಾಸನಾಗ ಪರಶು | ವೆತ್ತಿ ಪೊಯ್ಯಲಾಗ ಹನುಮ |
ಪೃಥ್ವಿಯೊಳಗೆ ಚೂರ್ಣಗೈದು | ಕೆಡೆದ ಭರದಲಿ         || ೩೬೦ ||

ಖತಿಯ ತಾಳುತಂಧಕಾರಿ | ಯತಿಬಲಾಢ್ಯನಹುದೊ ಭಳಿರೆ |
ಹತಿಯ ತಾಳೆನುತ್ತ ಖೇಟ | ದಿಂದ ತಿವಿದನೂ          || ೩೬೧ ||

ರಾಗ ಭೈರವಿ ಏಕತಾಳ

ಎಲೆ ಜಂಗಮ ನಿನ್ನೀಗಾ | ನಾ | ಕೊಲುವೆನು ನೋಡೆನುತಾಗ |
ಬಲಿಯುತ ಮುಷ್ಟಿಯ ಭರದಿ | ಖತಿ | ಗೊಳುತಲೆಯೆರಗಿದ ರವದಿ        || ೩೬೨ ||

ಸಿಡಿಲಂದದಿ ಭೋರ್ಗುಡಿಸೀ | ಆ | ಮೃಡನಕ್ಷಿಯೊಳ್ ಖಿಡಿವೆರಸಿ |
ಬಡಿದನು ಖಟ್ವಾಂಗದೊಳು | ಪ | ಲ್ಗಡಿಯುತ ಹೂಂಕಾರದೊಳು         || ೩೬೩ ||

ಮರುತಜ ಕನಲುತಲಾಗ | ಮಹ | ಗಿರಿಯನೆ ಕೀಳುತ ಬೇಗಾ |
ಪುರಹರಗೆಸೆಯಲು ಭರದಿ | ಧೂ | ಳೆರಗಿತು ರಣಮಂಡಲದಿ    || ೩೬೪ ||

ಭಾಮಿನಿ

ಪುರಹರನು ಮನದೊಳಗೆ ಯೋಚಿಸಿ |
ಧುರವೆಸಗೆ ನಾವುಭಯರೆಂದಿಗು |
ಬರದು ಜಯವೀರ್ವರಿಗೆ ಸಾಸಿರ ವರುಷ ಹೆಣಗಿದಡೆ ||
ಸರಿಯಿದಲ್ಲವೆನುತ ಕ್ಷಮೆಯನು |
ಧರಿಸಿ ಪವನಜನನ್ನು ವಿನಯದಿ |
ಕರೆದು ಪೇಳಿದನಾಗಲತಿ ಮಾಧುರ್ಯ ವಚನದಲಿ     || ೩೬೫ ||

ರಾಗ ಮಧುಮಾಧವಿ ತ್ರಿವುಡೆತಾಳ

ವೀರ ಬಾ ಶ್ರೀರಾಮ ಕಿಂಕರ | ಮಾರುತಾತ್ಮಜ ತಾಳು ಸೈರಣೆ |
ವೀರಮಣಿ ಶತ್ರುಹನವಾಹಿನಿ | ಧಾರುಣಿಯೊಳೀಗೊರಗಿದೆ       || ೩೬೬ ||

ಆರಿಗೋಸುಗವೆಮ್ಮ ಕದನವು | ಬಾರದೆಂದಿಗು ನಮ್ಮೊಳಗೆ ಜಯ |
ಮೂರು ಕಲ್ಪವು ಹೆಣಗಿದರು ಕೇಳ್ | ಸಾರುವೆನುನಾ ನಿಶ್ಚಯಾ ||೩೬೭||

ಒಲಿದಿರುವೆ ನಾ ನಿನಗೆ ವರವನು | ಘಳಿಲನೀಕ್ಷಣ ಕೇಳು ಕೊಡುತಿಹೆ |
ಕಲಹಬೇಡೆನಲಾಗ ಸೈರಣೆ | ಗೊಳುತಲೆಂದ ||೩೬೮||

ರಾಗ ಸುರುಟಿ ಏಕತಾಳ

ವರವ್ಯಾತಕೊ ಎನಗೆ | ರಾಮನ | ಕರುಣಾರಸದೊಳಗೆ |
ಇರುತಿಹೆ ನಿನ್ನಯ ಹಂಗೆನಗೇತಕೆ | ತೆರಳೆಲೊ ಬಂದಿಹ ಪಥವನೆ ಪಿಡಿಯುತ     ||೩೬೯||

ಮರುತಜ ಖತಿಬೇಡಾ | ಕೇಳೈ | ವರವನುನೀ ಗಾಢಾ |
ಬಿರುದಿದೆ ಮೆಚ್ಚಿದ ಮೇಲಕೆ ವಾಂಛವ | ಕರುಣಿಪುದೆನ್ನೊಳು ಕಪಿಕುಲಪುಂಗವ      ||೩೭೦||

ಒಲಿದಿರೆ ಬೇಡುವೆನು | ದ್ರೋಣಾ | ಚಲದೆಡೆಗೈದುವೆನೂ |
ಘಳಿಲನೆ ಸಂಜೀವನವನು ತರುತಿಹೆ | ನೆಲದೊಳಗುರುಳಿಹ ಪೆಣಗಳ ಕಾದಿರು     ||೩೭೧||

ಅಳಿದಿಹ ಸೇನೆಯೊಳು | ನ್ಯೂನತೆ | ಗೊಳಿಸದೆ ಜತನದೊಳು |
ನಿಲಬೇಕೀಯೆಡೆ ನಿನ್ನಯ ವರವಿದು | ಚಲಿಸಲು ಬಿಡೆನಾನೆಂದಿಗು ತಿಳಿದಿರು        ||೩೭೨||

ಹರನದಕಸ್ತೆನುತಾ | ನಿಂದಿರೆ | ಮರುತಜ ಪೊರಮಡುತಾ |
ಭರದೊಳು ದ್ರೋಣಾಚಲಕುಪ್ಪರಿಸುತ | ಹರುಷದಿ ಸಂಜೀವನವನೆ ತಂದನು       ||೩೭೩||

ಭಾಮಿನಿ

ಚಾರುಸಂಜೀವಿನಿಯ ತಂದಿಹ |
ಮಾರುತಿಯ ಕಾಣುತ್ತ ಪುರಹರ |
ಧೀರ ನೀನಹೆ ತಾಳು ಎನಗೊಂದುಂಟು ಸಂಶಯವು ||
ಪಾರಮಾರ್ಥದಿ ಕೇಳ್ವೆ ಮನದೊಳು |
ತಾರದಿರು ಖತಿಗಳನು ಮಡಿದಿಹ |
ಭೂರಿಸೇನೆಯನೆಲ್ಲವನು ಜೀವಿಪೆಯ ಪೇಳೆನಗೆ        ||೩೭೪||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಭರದೊಳೆಮ್ಮಯ ಸೇನೆಯನುನಾ | ಹರುಷದಿಂದೆಬ್ಬಿಸುವದಲ್ಲದೆ |
ಅರಿಬಲವ ಜೀವಿಸೆನು ಕೇಳೆಂ | ದೊರೆದನಾಗ         ||೩೭೫||

ಮಾರುತಾತ್ಮಜ ಕೇಳು ನೀನೀ | ವೀರಮಣಿ ಪಡೆಯನ್ನು ಜೀವಿಸೆ |
ಕ್ರೂರನಾದಡೆ ಕಪ್ಪತುರಗವು | ಬಾರದಯ್ಯಾ ||೩೭೬||

ಒಳಿತು ಸಕಲರನೆಬ್ಬಿಸುವೆನಾ | ಕಲಹ ಗಂಟಿಕ್ಕುವದು ಪುನರಪಿ |
ಹಳಚದಂದದಿ ಮಾಳ್ಪೆಯಾ ನೀ | ತಿಳಿದು ಪೇಳು      ||೩೭೭||

ಧರಣಿಪತಿಗಾನಿತ್ತೆ ವರವನು | ಸರಸಿಜಾಂಬಕ ರಾಮ ನಿನ್ನಯ |
ಪುರಕೆಬಹ ಪರಿಯಂತ ನಾನಿ | ಲ್ಲಿರುವೆನೆನುತಾ       ||೩೭೮||

ಇತ್ತಿಹಳು ಶಕ್ತಿಯನು ಯೋಗಿನಿ | ಶತ್ರುಹಗೆ ಪೂರ್ವದಲಿಯದರಿಂ |
ಭಕ್ತಿ ರಾಮನೊಳಹುದು ನೃಪಗೆ | ನ್ನುತ್ತವಳೂ ||೩೭೯||

ಉರುಳಿರುವನಾ ಶಕ್ತಿಯಲಿ ನೃಪ | ಮರಳಿ ಜೀವಿಸೆ ಭಕ್ತಿಭಾವವು |
ಬರುತಿಹುದು ಶ್ರೀರಾಮನಲಿ ಖತಿ | ವೆರಸನಯ್ಯಾ     ||೩೮೦||

ಬರಿಸು ರಾಮನನಿಲ್ಲಿಗೀ ಕ್ಷಣ | ಮರುತ ಸುತನೀ ಭಜಿಸು ಕಡೆಯೊಳು |
ಹರುಷದಿಂದೆಬ್ಬಿಸುವದೆಲ್ಲರ | ತ್ವರಿತವೆಂದ   ||೩೮೧||

ಎನೆಹಸಾದವೆನುತ್ತ ಮಾರುತಿ | ಮನವ ಸುಸ್ಥಿರಮಾಗಿ ನಿಲಿಸುತ |
ಘನತೆಯೊಳು ಕುಳ್ಳಿರ್ದು ವಿನಯಾ | ವನತನಾಗಿ      ||೩೮೨||

ರಾಗ ನವರೋಜು ಏಕತಾಳ

ರಾಮ ದಯಾನಿಧೆ ಪಾಹಿ | ಜಯ | ರಾಮನಿರಂಜನ ತ್ರಾಹಿ |
ಕಾಮಿತ ವರದಾಯಕ ಸೀತಾಪತೆ | ರಾಮ ರಾಮ ಭರತಾಗ್ರಜ ಜಯ ಜಯ       ||೩೮೩||

ಸರಸಿರುಹದಳ ನಯನ | ಕಡು | ದುರುಳ ರಾವಣ ಮಥನ |
ಧರಿಸಿ ಕೋದಂಡವ ಚೀರಾಂಬರದೊಳು | ತೆರಳಿ ದಂಡಕದಲಿ ಮುನಿಗಳ ಪೊರೆದಿಹೆ        ||೩೮೪||

ಸಿರಿಚರಣ ದರ್ಶನವ | ನೀ | ಕರುಣಿಸು ಕಿಂಕರ ಮನವ |
ಹರುಷವ ಪಡಿಸಲು ಬೇಡುವೆ ದೈನ್ಯದಿ | ಶಿರ ಸಾಷ್ಟಾಂಗಪ್ರಣಾಮದಿ ಜಯ ಜಯ ||೩೮೫||

ಭಾಮಿನಿ

ಮರುತ ತನಯನ ಭಕ್ತಿಗೊಲಿಯುತ |
ಭರದೊಳಗೆ ಶ್ರೀರಾಮನೈತರೆ |
ಎರಗಿದನು ಜಯರಾಮ ಜಯತೆಂದೆನುತ ಚರಣದಲಿ ||
ಪುರಮಥನ ಸನ್ನುತಿಸಿ ನಮಿಸುತ |
ಧುರದ ಕಥನವನರುಹಿ ಹನುಮನು |
ತೆರಳಿ ಸಂಜೀವನವ ತಂದಿಹನೆನುತ ಪೇಳಿದನು       ||೩೮೬||

ರಾಗ ಸುರುಟಿ ಏಕತಾಳ

ಕರುಣದಿ ಶರಣನನು | ಮನ್ನಿಸಿ | ಸರಸಿರುಹಾಂಬಕನು |
ಹರನನು ಪರಿಪರಿ ಪೊಗಳುತ ಸ್ನೇಹದಿ | ವರದನು ಮರುತಜನೊಡನೆ ವಿನೋದದಿ         ||೩೮೭||

ಧುರದೊಳಗಳಿದರನೂ | ಎಬ್ಬಿಸು | ವರ ಸಂಜೀವವನು |
ಕರಿ ತುರಗಾದಿಗಳುಭಯ ಬಲಕೆ ನೀ | ತ್ವರೆಯೊಳು ಮುಟ್ಟಿಸಲೆನಲಭಿವಂದಿಸಿ     ||೩೮೮||

ಪವನಜ ಮೋದದೊಳು | ಯೋಜನ | ವಿವರದ ಧಾತ್ರಿಯೊಳು |
ಶ್ರವಮಯಮಾಗಿರೆ ಸಂಜೀವನಿಯನು | ತವಕದಿ ರಾಮನ ನೆನೆಯುತ ಮುಟ್ಟಿಸೆ   ||೩೮೯||

ವಾರ್ಧಕ
ಭರದೊಳುಭಯದ ಬಲಗಳೆದ್ದು ಹರಿನಾದದಿಂ |
ದರರೆ ತಮ್ಮಹಿತರ್ಯಾವೆಡೆಯಿರ್ಪರೆಂದೆನುತ |
ಲರಸುತಿರೆ ಶೌರ್ಯದೊಳ್ ಶತ್ರುಹಾದ್ಯರು ರಾಮನಿರಲು ಮುಂಗಡೆ ನಮಿಸಲು ||
ಅರಿಬಲವ ಸಂಹರಿಪೆನೆಂದಾಗ ವೀರಮಣಿ |
ಕರದಿ ಧನುಶರವಾಂತು ಮುಂದಕೈತರಲಾಗ |
ಹರನವನ ಪಿಡಿದು ಸಂತೈಸುತ್ತ ರಾಮನಂ ಪರಿಕಿಸೆನ್ನುತ ತೋರ್ದನು   ||೩೯೦||

ಭಾಮಿನಿ

ಪರಮ ತೇಜಃಪುಂಜಮೂರ್ತಿಯ |
ಪರಿಕಿಸಿದ ಮಾತ್ರದಲೆಯಂತಃ |
ಕರಣವಾವಿರ್ಭವಿಸೆ ವಿಸ್ಮಿತನಾಗಿ ಭ್ರಮಿಸುತಲಿ ||
ಧರೆ ಚತುರ್ದಶವೀತನುದರದಿ |
ಪೊರಟು ವಿಸ್ತರಿಸೀರ್ಪುದೆಂಬುವ |
ತೆರನ ಕಾಂಬುದೆನುತ್ತ ರಘುವರಗೆರಗಿ ಕೈಮುಗಿದೂ   ||೩೯೧||

ರಾಗ ಆಹೇರಿ ಆದಿತಾಳ

ದಶರಥನೃಪನಂದನಾ | ಪುಂಡರಿಕಾಕ್ಷ | ದಶಶಿರ ಖಳಭಂಜನ |
ಶಶಿ ಮುಖಿ ವೈದೇಹಿ  | ಪ್ರಾಣವಲ್ಲಭ ರಾಮ |
ವಸುದಾಧಿಪತಿ ಭವ | ದೂರ ಸರ್ವಾತ್ಮಕ    ||೩೯೨||

ಹರಿತಂದ ವಾಜಿಯನ್ನೂ | ಬಂಧಿಸಿ ನಾನು | ಧುರಕನುವಾಗಿಹೆನೂ |
ಪರಿಪರಿಯೊಳು ನಿನ್ನ | ನಿಂದೆಗೈದಿಹೆ ದೇವ |
ಚರಣಕೊಂದಿಪೆನೀಗ | ಕರುಣಿಸು ಮೋಕ್ಷವ   ||೩೯೩||

ಸ್ಥಿರಚರಂಗಳ ಮಧ್ಯದೀ | ವಿಶ್ವಾತ್ಮಕ | ನಿರುವೆಯೊ ಚೈತನ್ಯದಿ
ತರುಶಿಲ ಜಲಗಳು | ಪರಮಾಣುಂಗಳು ನೀನೆ |
ಶರಣರಕ್ಷಕನೆಂಬು | ದರಿಯದಾದೆನು ದೇವಾ ||೩೯೪||

ನೀನೆ ಗಂಗಾಧರನೂ | ದ್ರುಹಿಣನು ವಿಷ್ಣು | ನೀನೆ ಚಂದ್ರನು ಸೂರ್ಯಾನು |
ನೀನೆ ಇಂದ್ರಾದಿ ದಿಕ್ಪಾಲಕನೆಂಬುದ |
ನಾನರಿಯದೆ ಪೋದೆ ಸಲಹೊ ದಯಾನಿಧೆ   ||೩೯೫||

ಭಾಮಿನಿ

ಪರಿಪರಿಯ ಸನ್ನುತಿಪ ಭೂಪನ |
ಶಿರವನೆಗಹುತಲಾಗ ರಘುಪತಿ |
ಪೊರೆಯುವೆನು ನಿನ್ನೆನುತಲಭಯವನೀಯಲಾ ಕ್ಷಣದಿ ||
ಹರನುಡಿದನೀವರೆಗೆ ಎನ್ನಯ |
ಶರಣನಾಗಿಹನಿನ್ನು ನಿನ್ನವ |
ಕರುಣವಿರಿಸುವದೆನಲು ನೀರಜನಯನನಿಂತೆಂದ      ||೩೯೬||

ರಾಗ ಸಾಂಗತ್ಯ ರೂಪಕತಾಳ

ಪುರಹರ ಕೇಳು ನಿನ್ನವರು ನನ್ನವರೆಂಬ | ಪರಿಭೇದವಿಲ್ಲ ಭಕ್ತರಲಿ ||
ನಿರುತಸದ್ಗುಣ ಸತ್ಯಸಂಧನೀತನ ನೋಡೆ | ಹರುಷವಾಯಿತು ಎಂದರಾಮ        ||೩೯೭||

ಅನಿತರೊಳ್‌ಪುರಹರ ಜನಪತಿಯೊಡನೆಂದ | ಘನತೆಯೊಳ್ಕಪ್ಪವನಿತ್ತು |
ಚಿನುಮಯನಶ್ವವನೊಪ್ಪಿಸೆಂದೆನುತಲೆ | ಕ್ಷಣದೊಳಂತಂರ್ಧಾನಗೈದ    ||೩೯೮||

ಹರುಷದಿ ನೃಪನು ಕಪ್ಪವನಿತ್ತು ರಾಮನ | ಪರಿಪರಿ ಪೂಜಿಸುತಾಗ ||
ತುರಗವನೊಪ್ಪಿಸೆ ಸಾಕೇತನಗರಿಗೆ | ತೆರಳಿದ ರಘುವೀರನಂದೂ        ||೩೯೯||

ಪೊರಡಲು ತುರಗ ಮುಂದೆಸೆಯೊಳು ಶತ್ರುಹ | ಭರಿತ ಮಾರ್ಬಲದೊಡಗೂಡಿ ||
ತೆರಳಿದರ್ಮುಂದೆ ದಿಗ್ವಿಜಯಕೆನ್ನುತ ಶೇಷ | ನೊರೆದನು ಮುನಿ ವಾತ್ಸಾಯನಗೆ   ||೪೦೦||

ರಾಗ ಕೇತಾರಗೌಳ ಅಷ್ಟತಾಳ

ಪರಮಾತ್ಮ ಶ್ರೀರಾಮನಧ್ವರ ಕಥನವ | ನರಿತಂತೆ ಕೃತಿಗೈದೆನು |
ಅರಿತವರಿದರೊಳು ನ್ಯೂನವಿರಲು ತಿದ್ದಿ | ಮೆರೆಸಬೇಹುದು ದಯದಿ       ||೪೦೧||

ಪನಸಾಖ್ಯಪುರದುರಗೇಂದ್ರಶಾಸ್ತ್ರಿಯ ಸುತ | ಮನುಜಕಂಠೀರವನು |
ಚಿನುಮಯ ದಯದಿ ಗೈದಿಹ ವಿಂಶತಿಯ ಕೃತಿ | ಯನು ಸರ್ವರೋದುವದು        ||೪೦೨||

ನಳ ಸಂವತ್ಸರದ ಶ್ರಾವಣ ಕೃಷ್ಣ ಪಂಚಮಿ | ಯೊಳು ಸ್ಥಿರವಾಸರದಿ |
ಜಲಜಾಕ್ಷ ರಾಮನನುಗ್ರಹದಿಂದ ಮಂ | ಗಲಗೈದೆನೀ ಕೃತಿಯಾ ||೪೦೩||

ಮಂಗಲ ಪದ

ದಶರಥ ಭೂಪನ ತನಯನಿಗೆ | ಕುಶಿಕನಧ್ವರ ಸಂರಕ್ಷನಿಗೆ |
ಶಶಿಮುಖಿ ಸೀತೆಯನೊರಿಸಿ ಸಾಕೇತದಿ | ಕುಶಲದೊಳೀರ್ದ ಶ್ರೀರಾಮನಿಗೆ |
ಮಂಗಲಂ | ಜಯ | ಮಂಗಲಂ     ||೪೦೪||

ಜನಕನಾಜ್ಞೆಯನನುಸರಿಸಿದಗೆ | ವನಿತೆಯೊಡನೆ ವನಕೈದನಿಗೆ |
ಇನಸುತ ಸಖ್ಯದಿ ಮಘವಾತ್ಮಜನನು | ಹನನ ಗೈದ ಶ್ರೀ ರಘುವರಗೆ ||
ಮಂಗಲಂ | ಜಯ | ಮಂಗಲಂ     ||೪೦೫||

ಶರಧಿಗೆ ಸೇತುವ ಕಟ್ಟಿದಗೆ | ದುರುಳ ದಶಾಸ್ಯನ ಕುಟ್ಟಿದಗೆ |
ಶರಣ ವಿಭೀಷಣಗಖಿಳ ಸಂಪದವಿತ್ತು | ಧರಣಿಯನಾಳ್ದ ಸೀತಾಪತಿಗೆ ||
ಮಂಗಲಂ | ಜಯ | ಮಂಗಲಂ     ||೪೦೬||