ರಾಗ ಕಾಂಭೋಜಿ ಝಂಪೆತಾಳ
ಕೇಳಯ್ಯಾ ಶತ್ರುಘ್ನ ಮಾರೀಚ ದಾನವನ |
ಬಾಲೆ ಕುಮುದಿನಿಯೆಂಬ ಶೀಲೆ ಸದ್ಗುಣಳೂ ||
ತಾಳಿ ವೈರಾಗ್ಯವನು ತಪಿಸುತಿರೆ ಮಾರೀಚ |
ಪೇಳಿದನು ಶ್ರೀರಾಮ ವಿಶ್ವಾತ್ಮನೆಂದೂ || ೭೫ ||
ಪರಮಾತ್ಮನೊಲಿಸೆಂದು ಮಾರೀಚನವಳಿಂಗೆ |
ಸುರಶಿಲ್ಪಿಯಿಂ ಪುರವ ರಚಿಸಿ ಕೊಟ್ಟಿಹನೂ ||
ತರುಣಿ ಪಿತನಾಜ್ಞೆಯಲಿ ಬಂದು ನೆಲಸಿಹಳಿಲ್ಲಿ |
ಧುರದಿ ರಾವಣ ಮುಖ್ಯರಳಿದಾ ನಂತರದಿ || ೭೬ ||
ಮದನಾಕ್ಷಿ ಮತ್ತೆ ತಾರಾವಳಿಯರೆಂಬವರು |
ಚದುರೆಯರು ಪ್ರಹಸ್ತನಂದನೆಯರಿವರೂ ||
ಮುದದಿ ಕುಮುದಿನಿಯನೋಲೈಸಿಕೊಂಡಿಹರಿಲ್ಲಿ |
ಪದುಮಾಕ್ಷ ರಾಮನನು ಒಲಿಪೆವೆಂದೆನುತಾ || ೭೭ ||
ಪಿಂದೆ ರಾವಣ ಸೆರೆಯೊಳ್ಬಂಧಿಸಿಹ ಸುದತಿಯರು |
ತಂದೆ ಪತಿ ಸುತಶೂನ್ಯರಾದನಾಥೆಯರೂ ||
ಬಂದು ಕುಮುದಿನಿಯ ಸೇವಿಸುತೀರ್ಪರೀಪುರದಿ |
ಚಂದ್ರಬಿಂಬಾನನೆಯರೊಂದು ಸಾಸಿರವೂ || ೭೮ ||
ಭಾಮಿನಿ
ತರುಣಿ ಕುಮುದಿನಿ ತಪದೊಳೀರ್ಪಳು |
ದೊರೆತನದಿ ಮದನಾಕ್ಷಿ ಮಾಯಾ |
ಪುರವ ಪೊರೆವಳು ಬಂಧಿಸಿದಳೀ ಹಯವ ಬಲುಮೆಯೊಳೂ ||
ವರುಣ ಮಂತ್ರವ ಜಪಿಸಿ ನೀರೊಳು |
ತೆರಳಿದರೆ ತತ್ಪುರಿಯು ಕಾಂಬುದು |
ತ್ಪರಿತವೆಂದಂಬರಕೆ ನಾರದ ಮುನಿಪ ಗಮಿಸಿದನೂ || ೭೯ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಚರಿತೆಯೆಲ್ಲವ ಕೇಳಿ ಶತ್ರುಹ | ಭರತ ಸುತನೊಡನೆಂದ ವೇಗದಿ |
ತೆರಳಬೇಕಾ ಪುರಿಗೆ ಪೊರಡಿರಿ | ತ್ವರಿತವೆಂದ || ೮೦ ||
ಅಸ್ತೆನುತಲೊಂದಿಸುತ ಪುಷ್ಕಳ | ಮತ್ತೆ ದಮನ ಸುಬಾಹು ಮುಖ್ಯರು |
ಚಿತ್ತದಲಿ ಖತಿಯಾಂತು ಪೊರಮಡೆ | ಶತ್ರುಹಾಖ್ಯ || ೮೧ ||
ತೆರಳಿ ಯಮುನಾನದಿಯ ಜಲದೊಳು | ವರುಣಮಂತ್ರವ ಜಪಿಸಿ ಸರ್ವರು |
ಭರದಿ ಮುಳುಗಲ್ಕಾಗ ಮಾಯಾ | ಪುರಕೆ ಪೋಗೆ || ೮೨ ||
ಏಳುಸುತ್ತಿನ ಕೋಟೆ ಕೊತ್ತಳ | ನೀಲ ಮೌಕ್ತಿಕ ವಜ್ರಮಯದೊಳು |
ಸಾಲುಗೇರಿಯ ಮನೆಯು ಸತಿಯರ | ಜಾಲಗಳಲಿ || ೮೩ ||
ಸುರಪನಮರಾವತಿಯೊ ಪಂಕಜ | ಭವನ ಶಿರಿಯರಮನೆಯೊಯೆಂಬುವ |
ಪರಿಯು ಕಂಡುದು ನಗರ ವಿಸ್ಮಯ | ಕರದೊಳಾಗ || ೮೪ ||
ಭಾಮಿನಿ
ದ್ವಾರಪಾಲಕಿಯೊಡನೆ ಶತ್ರುಹ |
ಸಾರಿ ನಿನ್ನಯ ದೊರೆಗೆ ಪೇಳ್ವುದು |
ನೀರಜಾಂಬಕ ರಾಮನಧ್ವರ ತುರಗ ಒಪ್ಪಿಸುತಾ |
ಭೋರನೀ ಕ್ಷಣ ಕರವ ಕೊಡದಿರೆ |
ದಾರುಣದಿ ಶಿರವರಿವ ಶತ್ರುಹ |
ಭೂರಿ ಸೇನೆಗಳೊಡನೆ ಬಂದಿಹನೆನುತ ಪೇಳೆಂದ || ೮೫ ||
ಕಂದ
ತೆರಳುತ ವೇಗದಿ ದೂತಿಯು |
ಹರುಷದೊಳೋಲಗದೊಳಗಿಹ ರಾಣಿಯ ಪದಕಂ |
ಎರಗುತ ನಿಂದಿರೆ ಕಾಣುತ |
ಬರವೇಂಕಾರಣವರುಹೆನೆ ತವಕದೊಳೆಂದಳ್ || ೮೬ ||
ರಾಗ ಕಾಂಭೋಜಿ ಆದಿತಾಳ
ಮಾತೆ ಮದನಾಕ್ಷಿ ಕೇಳು | ಖಾತಿಯಿಂದಲಶ್ವವನ್ನೂ |
ಯಾತಕೆ ನೀ ಬಂಧೀಸಿರ್ಪೆ | ಘಾತಕವಾಪುದು ಪೇಳ್ವೆ || ೮೭ ||
ಶತ್ರುಹನೆಂಬಾತನಂತೆ | ಬಿತ್ತರಿಪ ಸೈನ್ಯದಿಂದ |
ಮುತ್ತಿಹನೀ ಪುರಿಯನೀಗ | ಚಿತ್ತಶುದ್ಧದಿಂದ ಕೇಳೂ || ೮೮ ||
ತುರಗವನೊಪ್ಪಿಸಿ ಕಪ್ಪ | ಚರಣಕಿತ್ತು ಪೋಗದಿರಲು |
ಶಿರವನರಿವೆನೆಂದನವ್ವಾ | ತ್ವರಿತದಿಂದ ಬಂದೆ ನಾನೂ || ೮೯ ||
ರಾಗ ಕೇತಾರಗೌಳ ಝಂಪೆತಾಳ
ದೂತಿಯಿಂತೆನೆ ಕೇಳುತಾ | ಮದನಾಕ್ಷಿ | ಖಾತಿಯೊಳು ಖಿಡಿಸೂಸುತಾ |
ಈ ತತೂಕ್ಷಣ ಸಮರದಿ | ಶತ್ರುಹನ | ಖ್ಯಾತಿಯಡಗಿಪೆ ಶೌರ್ಯದಿ || ೯೦ ||
ಎಲೆ ಮಂತ್ರಿ ತಾರಾವಳಿ | ಧುರಕೀಗ | ಬಲವ ಸೇರಿಸು ತ್ವರೆಯಲೀ |
ಕಲಹ ಸಾಕೆಂದೆನಿಪೆನು | ಶತ್ರುಹನ | ಗೆಲಿದು ರಾಮನ ನೋಳ್ಪೆನೂ || ೯೧ ||
ಪರಮಾತ್ಮ ಶ್ರೀರಾಮನು | ಎಮ್ಮ ಪುರ | ವರಕೆ ತಾನೇ ಬರುವನೂ |
ಚರಣ ಪೂಜೆಯ ಮಾಡುತಾ | ಕಪ್ಪ ಹಯ | ಭರದೊಳೀವೆನು ನಲಿಯುತಾ || ೯೨ ||
ಎನುತ ಪೌರುಷವಾಡುತಾ | ಮದನಾಕ್ಷಿ | ಧನುಶರವ ಕೈಕೊಳ್ಳುತಾ |
ಘನತೆಯಿಂ ಪೊರಡಲಾಗ | ಪಿಂದೆಸೆಯ | ವನಿತೆಯರು ಬರಲು ಬೇಗಾ || ೯೩ ||
ಭಾಮಿನಿ
ಕರಿ ತುರಗ ರಥ ಪತ್ತಿ ಸೇನಾ |
ಶರಧಿಯಿಂದೊಡಗೂಡಿ ಸತಿಯರು |
ಭರದಿ ಬಂದಾ ಶತ್ರುಹನ ಮೋಹರಕೆ ಇದಿರಾಗೆ ||
ಅರರೆ ಸತಿಯರೊಳೆಮಗೆ ಸಂಗರ |
ದೊರಕಿದುದೆ ಎಂದೆನುತ ಶತ್ರುಹ |
ಪರಿಪರಿಯ ನೆನಯುತಿರೆ ಪುಷ್ಕಳನಧಿಕ ಕ್ರೋಧದಲಿ || ೯೪ ||
ರಾಗ ಮಾರವಿ ಏಕತಾಳ
ಕಿರಿಯಯ್ಯನೆ ನೀ ಕರುಣಿಸು ನೇಮವ | ತರುಣಿಯರನು ಧುರದಿ ||
ಸೆರೆಪಿಡಿದೀ ಕ್ಷಣ ಪದಕೊಪ್ಪಿಸುವೆನು | ಪರಿಕಿಸು ಸಾಹಸವಾ || ೯೫ ||
ತರಳನೆ ಒಳಿತೆಂದೆನುತಲಿ ಶತ್ರುಹ | ಕರುಣಿಸೆ ನೇಮವನೂ ||
ಕರದೊಳು ಚಾಪವ ತೂಗುತ ಭರತಜ | ನುರವಣಿಸುತಲಾಗ || ೯೬ ||
ಆರೆಲೆ ಸಂಗರ ಕೈತಂದಿಹ ಸತಿ | ಸಾರಿದೆ ಕೆಡಬೇಡ ||
ಭೋರನೆ ತುರಗವನೊಪ್ಪಿಸು ಜಯ ಕೈ | ಸೇರದು ಎಮ್ಮೊಡನೆ || ೯೭ ||
ಎರಗುತ ತಾರಾವಳಿ ಮದನಾಕ್ಷಿಗೆ | ಧುರಕೈದುವೆನೀಗಾ ||
ಭರದೊಳು ಕಳುಹೆನಲಾಜ್ಞೆಯನೀಯಲು | ಪೊರಡುತ ಶೌರ್ಯದಲಿ || ೯೮ ||
ಆರೆಲೊ ನಿನ್ನಯ ಪೆಸರೇನಿರುತಿದೆ | ತೋರಿಸು ವಿಕ್ರಮವಾ ||
ಸಾರುವದೊಳ್ಳಿತು ಪಿಂದಕೆ ವಿಜಯವು | ಬಾರದು ಪೇಳಿಹೆನೂ || ೯೯ ||
ರಾಗ ಶಂಕರಾಭರಣ ಮಟ್ಟೆತಾಳ
ತರುಣಿ ಕೇಳಯೋಧ ನಗರ | ದರಸ ರಾಮನನುಜ ಭರತ |
ತರಳ ಪುಷ್ಕಳಾಖ್ಯನೆನ್ನ | ಶರವ ಪರಿಕಿಸು || ೧೦೦ ||
ಬರದು ನಿನಗೆ ಸೃಷ್ಟಿಕ್ರಮವು | ಸ್ಥಿರಚರಾತ್ಮ ಸ್ಥಿತಿಯನರಿಯೆ |
ಧುರದಿ ಲಯವಗೊಳಿಸಲಾರೆ | ಬರಿದೆ ಗರ್ವಿಪೆ || ೧೦೧ ||
ಮೂಢೆ ನಿನ್ನ ಗೆಲಲು ಯೆನಗೆ | ಬೇಡ ತ್ರೈಮೂರ್ತಿ ಸಹಸ |
ನೋಡಿದೊಂದೆ ಶರದೊಳೆಮನ | ನಾಡ ಪೊಗಿಸುವೆ || ೧೦೨ ||
ಪುರುಷ ನೀನಾಗಿ ಸತಿಯ | ಶರದಿ ಹತಿಸಲೆಮನ ಪುರದಿ |
ನರಕದೊಳಗೆ ಪೊರಳಿಸುವರು | ಸರಳ ಬಿಡು ಬಿಡು || ೧೦೩ ||
ರಾಗ ಭೈರವಿ ಅಷ್ಟತಾಳ
ತರುಣಿಯರಿಂಗಿನಿತು ಪೌರುಷವಿರೆ | ಪುರುಷಂಗೆ ನ್ಯೂನವೆಂತೂ |
ಕೊರೆಯುವೆ ಕಂಠವ ಕ್ಷಣದೊಳಗೆನ್ನುತ್ತ | ಹರಿನಾದ ಗೈದನಾಗ || ೧೦೪ ||
ಧುರ ಪರಾಕ್ರಮಗಳನ್ನೂ | ಮಾತಿನೊಳೀಗ | ಮೆರಸಲು ಫಲಗಳೇನೂ ||
ಕರಚಿತ್ಕಾರದಿ ಶಸ್ತ್ರಮೊನೆಯೊಳು ಕೀರ್ತಿಯ | ಧರಿಸಲು ಸಾರ್ಥಕವೂ || ೧೦೫ ||
ತಿರುಹಿನೊಳ್ ಶರವನಾಗ | ಪೂಡುತ ಬಿಡೆ | ತರುಣಿಯು ಕಂಡು ಬೇಗಾ |
ಮುರಿದು ವೀರಾವೇಶದಿಂದ ನಿಂದಿರೆ ಮತ್ತಾ | ಕೆರಳುತ್ತಾ ಪುಷ್ಕಳನೂ || ೧೦೬ ||
ಪರಮ ಮಂತ್ರಾಸ್ತ್ರವನ್ನೂ | ಪೂಡುತಲಾಗ | ಗುರಿಯೊಳು ತೆಗೆದೆಚ್ಚನೂ |
ಭರದೊಳಗದರನ್ನು ಚೂರ್ಣಿಸಿ ನಲಿಯುತ್ತ | ಲಿರಲು ತಾರಾವಳಿಯೂ || ೧೦೭ ||
ಭಳಿರೆ ಶಭಾಸೆನ್ನುತ್ತಾ | ಅಕ್ಷಯ ಶರ | ವೆಳೆದಾಗ ಘರ್ಜಿಸುತ್ತಾ |
ಘಳಿಲನೆ ಬಿಡೆ ಸ್ತಂಭನಾಸ್ತ್ರದಿ ಮುಂದಕೆ | ಚಲಿಸದಂದವ ಗೈದಳೂ || ೧೦೮ ||
ರಾಗ ಕೇತಾರಗೌಳ ಝಂಪೆತಾಳ
ಪೂಡಿದಸ್ತ್ರವು ಧನುವನೂ | ಬಿಟ್ಟು ಮುಂ | ದೋಡದಿರುತಿಹ ಪರಿಯನೂ |
ನೋಡಿ ಪುಷ್ಕಳ ಕನಲುತಾ | ಶರವನೆಳ | ದಾಡಿ ಖಿಡಿ ಖಿಡಿ ಸೂಸುತಾ || ೧೦೯ ||
ಇಳುಹಿ ಧನುವನು ತ್ವರೆಯಲೀ | ಖಡ್ಗಮಂ | ನೆಳೆಯೆ ಬರದಿರೆ ಕರದಲಿ |
ಲಲನೆ ಮಾಯಕವೆನ್ನುತಾ | ಪುಷ್ಕಳನು | ತಲೆಯ ತಗ್ಗಿಸಿ ನಾಚುತಾ || ೧೧೦ ||
ಧುರದೊಳಖಿಳರ ಗೆಲಿದೆನೂ | ಮಾರ್ಮಲೆತು | ತರುಣಿಯೊಳು ಹಗುರಾದೆನೂ |
ಬರದ್ಯಾಕೆ ಶಸ್ತ್ರಾಸ್ತ್ರವು | ಎನ್ನ ಕರ | ಕಿರದೀಗ ಬಲ ದರ್ಪವೂ || ೧೧೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಘಳಿಲನಿದ ಕಾಣುತ್ತ ತಾರಾ | ವಳಿಯು ನಸುನಗೆಯಿಂದ ಪೌರುಷ |
ದೊಲವ ತೋರೈ ಧುರದೊಳ್ಯಾತಕೆ | ನೆಲನ ನೋಳ್ಪೆ || ೧೧೨ ||
ಪುರುಷನಾಗಿಹೆ ನೀನು ಸತಿ ನಾ | ಮೆರಸುವೆನೆ ನಿನ್ನೊಡನೆ ಸಹಸವ |
ಶರವ ಬಿಡು ಬಿಡು ನಾಚದಿರು ನಿಂ | ದಿರುವೆ ಧುರಕೆ || ೧೧೩ ||
ಎನಲು ಖಿಡಿ ಖಿಡಿಸೂಸಿ ಪುಷ್ಕಳ | ಘನ ಮದೋನ್ಮತದಿಂದ ನುಡಿವೆಯ |
ಹನನ ಗೈವೆನು ಮುಷ್ಟಿಯೊಳಗೀ | ಕ್ಷಣದೊಳೆನುತಾ || ೧೧೪ ||
ಮುಂದ್ವರಿವ ಪರಿಯನ್ನು ಕಾಣತ | ಲೆಂದನಾಕ್ಷಣ ದಮನನಲ್ಪಳೊ |
ಳಿಂದು ನೀವ್ಯಾಕೈದಿದಿರಿ ತಡಿ | ರೆಂದು ಭರದಿ || ೧೧೫ ||
ಕತ್ತರಿಪೆನಿವಳಸುವನೆನ್ನುತ | ಲೆತ್ತಿ ಧನುವನು ದಮನ ಭೋರ್ಮರ |
ವುತ್ತ ತೂರಿದ ಶರವ ಪರಿಕಿಸೆ | ನುತ್ತಲಾಗ || ೧೧೬ ||
ರಾಗ ಶಂಕರಾಭರಣ ಮಟ್ಟೆತಾಳ
ಭಳಿರೆ ಭಾಪೆನುತ್ತ ತಾರಾ | ವಳಿಯು ಬರುವ ಶರವ ತರಿದು |
ಕಲಿಸಮಾನಳಾಗಿ ನಿಲಲು | ಕಂಡು ಗಜರುತಾ || ೧೧೭ ||
ಧೀರೆ ನೀನಹುದು ವಿಶಿಖ | ವಾರವಿದನು ಪರಿಕಿಸೆನುತ |
ಕ್ರೂರಕೋಪದಿಂದ ದಮನ | ಮುಚ್ಚಿ ಮುಸುಕಿದ || ೧೧೮ ||
ದಿಟ್ಟತನವ ನಿಲಿಪೆನೆನುತ | ಕುಟ್ಟಿ ಕೆಡಹಿ ಬರುವ ಶರವ |
ನಟ್ಟಹಾಸದಿಂದ ತಾರಾ | ವಳಿಯು ಘರ್ಜಿಸೆ || ೧೧೯ ||
ಸೆಳದು ಸ್ವರ್ಣಪುಂಖ ಶರವ | ಘಳಿಲನೆಸಯಲಾಗ ದಮನ |
ಇಳೆಗೆ ಕೆಡಹಿ ಧನುವ ಮುರಿದ | ಳೊಂದೆ ಶರದಲಿ || ೧೨೦ ||
ಎತ್ತಿ ಖಡ್ಗವನ್ನು ಭರದಿ | ಧೂರ್ತೆ ತಾಳೆನುತ್ತಲೆರಗೆ |
ಕತ್ತರಿಸಿ ಬಿಸುಟಳಾಗ | ಮತ್ತಕಾಶಿನಿ || ೧೨೧ ||
ತಿರುಹಿ ಗದೆಯನೆತ್ತಿ ದಮನ | ಚದುರೆ ನೋಡೆನುತ್ತ ಬರಲು |
ಕುದಿವ ಕೋಪದಿಂದ ಕಸಿದು | ಸದಯೆ ಗಜರುತಾ || ೧೨೨ ||
ವಾರ್ಧಕ
ಶಿರವ ಕಂಪಿಸಿ ದಮನನಾಗ ಮೂರ್ಛಿತನಾಗೆ |
ಪರಿಕಿಸುತ ಶತ್ರುಘ್ನನಕ್ಷಿಯೊಳ್ ಖಿಡಿಗೆದರಿ |
ಶಿರವರಿವೆನಿವಳ ತಾನೆಂದು ಭೋರ್ಗುಡಿಸುತ್ತ ಧುರಕೆಬರಲಾ ಕ್ಷಣದೊಳೂ ||
ಕರೆದು ತಾರಾವಳಿಯ ಪಿಂದಿರಿಸಿ ಮದನಾಕ್ಷಿ |
ಕರದಿ ಧನು ಶರವಾಂತು ಕ್ರೋಧದಿಂ ಪಲ್ಗಡಿದು |
ಧುರದೊಳೀವರಿಗೆನೀ ಪಡೆದಿರ್ದ ಖ್ಯಾತಿಯಂ ಪರಿಹರಿಪೆ ಕ್ಷಣಮಾತ್ರದಿ || ೧೨೩ ||
ರಾಗ ಮಾರವಿ ಏಕತಾಳ
ಅರರೇ ಕಪಟ ನಿಶಾಚರಿಯರು ನಿ | ಮ್ಮುರವನೆ ಭೇದಿಸುವೆ ||
ಕರ ಸಹಿತೀ ಕ್ಷಣ ತುರಗವನೊಪ್ಪಿಸೆ | ಕರುಣದಿ ಕಾಯುವೆನೂ || ೧೨೪ ||
ಶೂರನು ಧುರಕೆದುರಾಗಿಹೆ ಸಾಮವಿ | ಚಾರಗಳೇಕೆಲವೊ ||
ನಾರಿಯರಿವರೆಂದೆನುತಲೆ ಬೆದರಿಕೆ | ತೋರುವೆ ವ್ಯರ್ಥದೊಳೂ || ೧೨೫ ||
ಪುರುಷರ ಸರಿಸದಿ ನಾರಿಯರೆಂದಿಗು | ಧುರದೊಳು ಜಯಸುವರೆ ||
ಸರಸಿಜನಾಭನ ಸೋದರ ನಾನಹೆ | ಧರಿಸಿಹೆ ಖ್ಯಾತಿಯನೂ || ೧೨೬ ||
ಜಲಜಾಂಬಕನಿಗೆ ಸೋದರನಾದಡೆ | ಒಳಿತೆಂಬೆನು ನಾನೂ ||
ಕಲಹದಿ ನಿನ್ನನು ಸೆರೆಪಿಡಿಯಲು ಜಗ | ದೊಳಗೆನಗಿದಿರಾರೈ || ೧೨೭ ||
ಬೇಡೆಲೆ ಪೌರುಷ ಕೊಡುನೀ ಹಯವನೂ | ನೋಡರೆ ಕ್ಷಣದೊಳಗೆ ||
ಮೂಢೆಯೆ ಧುರ ಸಾಕೆನಿಸುವೆ ಎನ್ನೊಳು | ಮಾಡದಿರಹಿತವನೂ || ೧೨೮ ||
ಗಳಹದಿರೆಲೊ ವಿಕ್ರಮವನು ರಾಮನ | ಘಳಿಲನೆ ಕರೆಸೀಗ ||
ಜಲಜಾಂಬಕನಡಿಗೊಪ್ಪಿಪೆ ತುರಗವ | ಬೆಳಸೆನು ವೈರವನೂ || ೧೨೯ ||
ದುರುಳತ್ವದ ಖಳ ಸತಿಯರಿಗೆಂದಿಗು | ಪರತರವಸ್ತುವಿನಾ ||
ದರುಶನವಾಗದು ಯೋಗಿಗಗೋಚರ | ವಿರುವದು ನೀನರಿಯೆ || ೧೩೦ ||
ರಾಗ ತುಜಾವಂತು ಮಟ್ಟೆತಾಳ
ಪರಮಪುರುಷ ವಿಶ್ವಮೂರ್ತಿಯಾ | ಚರಿತೆಗಳನು ಬಲ್ಲೆ ನಾನು |
ಪರಮಪುರುಷ ವಿಶ್ವಮೂರ್ತಿಯಾ || ಪಲ್ಲ ||
ಸ್ಥಿರಚರಾದಿ ಪ್ರಾಣಿ ಹೃದಯದೀ | ವಾಸವಾ | ಗಿರುವ ಭಜಕರಂತರಂಗದಿ |
ಕರುಣನಿಧಿಗೆ ಭೇದವುಂಟೆ | ಶರಣಳೆಂಬ ಮಮತೆಯೊಳಗೆ |
ಬರದೆ ನಿಲನು ಕರೆಸು ವೇಗ | ತುರಗವವನಿಗರ್ಪಿಸುವೆನೂ |
ಕಪ್ಪವಿತ್ತು | ಪರಮ ಸಾಯುಜ್ಯ ಪಡೆವೆನೂ || ||೧೩೧||
ಇರುವನವನು ದೀಕ್ಷೆಯಿಂದಲಿ | ತರುಣಿಕೇ | ಳ್ಬರನು ಪೇಳ್ವೆಯಾಕೆ ಛಲದಲಿ |
ತುರಗರಕ್ಷೆಗಾಗಿ ಪಡೆಯ | ತರುಬಿ ಬಂದೀರ್ಪೆ ಸತತ |
ಕರವನೀವುದೆನ್ನೊಳೀಗ | ದುರುಳತನವ ಗಯ್ಯೆ ಹತಿಪೆನೂ |
ಬರಿದೆ ಕಲಹ | ಸರಿಯಿದಲ್ಲ ಸಾರಿ ಪೇಳ್ದೆನೂ || ೧೩೨ ||
ಕಟ್ಟಿ ನಿನ್ನ ಕರವ ಸಮರದಿ | ಸೆರೆಯೊಳೀ | ಗಿಟ್ಟಿರವನು ಬಹನು ವೇಗದಿ |
ದಿಟ್ಟ ಕೋದಂಡಪಾಣಿ | ಸೃಷ್ಟಿಸ್ಥಿತಿಲಯಾತ್ಮನನ್ನು |
ಥಟ್ಟನೀಗ ಕರೆಸಿಕೊಂಬೆ | ಯಟ್ಟ ಹಾಸ ತೋರು ಧುರದಲಿ |
ಬರಿದೆ ತುರಗ | ಬಿಟ್ಟುಕೊಡುವಳಲ್ಲ ಗುಣದಲಿ || ೧೩೩ ||
ರಾಗ ಕೇತಾರಗೌಳ ಝಂಪೆತಾಳ
ಪರಮಾತ್ಮ ಶ್ರೀರಾಮನಾ | ಅನುಜನಾ | ಖರೆಯಾದಡಾನೀ ದಿನಾ |
ಕರವ ಬಿಗಿವೆನೂ ನಿನ್ನನು | ವೇಗದಲಿ | ಸೆರೆವಿಡಿದು ಎಳೆದೊವೆನೂ || ೧೩೪ ||
ಶರಣಳಾದಡೆ ರಾಮನಾ | ನಿನ್ನನುರೆ | ಸೆರೆವಿಡಿವೆನಾನೀ ಕ್ಷಣಾ |
ಹರಿಸು ಸಾಯಕವೆನ್ನೊಳೂ | ಪೌರುಷವ | ಪರಿಕಿಸುವೆನಾ ಮುದದೊಳೂ || ೧೩೫ ||
ತರುಣಿ ಭಾಪುರೆಯೆನ್ನುತಾ | ಶತ್ರುಹನು | ಗುರಿಯೊಳಸ್ತ್ರವ ಪೂಡುತಾ |
ಭರದೊಳೆಸೆಯಲು ಸುಲಭದಿ | ವಿಶಿಖವನು | ಮುರಿದು ಕೆಡೆದಳು ಭುವನದಿ || ೧೩೬ ||
ಉರಿಶರವನಭಿಮಂತ್ರಿಸಿ | ಸೌಮಿತ್ರಿ | ಶಿರಕೆರಗಲತಿ ಸಾಹಸಿ |
ವರುಣಾಸ್ತ್ರದಿಂದದರನು | ಪರಿಹರಿಸಿ | ತರುಣಿ ನಿಂದಿರೆ ಕಂಡನೂ || ೧೩೭ ||
ಸೆಳೆದು ಪರ್ವತ ಶರವನೂ | ಶತ್ರುಹನು | ಘಳಿಲನಾ ಕ್ಷಣವೆಸೆದನೂ |
ಕುಲಿಶಾಸ್ತ್ರದಿಂ ಚೂರ್ಣಿಸಿ | ಮದನಾಕ್ಷಿ | ನಿಲಲು ಕಾಣುತ ಘರ್ಜಿಸಿ || ೧೩೮ ||
ಬೆರಗಾಗಿ ಶತ್ರುಘ್ನನೂ | ಮಂತ್ರಾಸ್ತ್ರ | ಕೆರಳಿ ಭೋರ್ಗರೆದೆಚ್ಚನೂ |
ಮುರಿಯಲದ ಕಾಣುತ್ತಲಿ | ಕಾಂಕಾಲ | ತೆರನಂತೆ ಕಿನಿಸಿಂದಲಿ || ೧೩೯ ||
ರಾಗ ಭೈರವಿ ಏಕತಾಳ
ಶ್ರೀ ರಘುರಾಮನ ಮಖಕೆ | ಈ | ಧಾರುಣಿ ತಲದೊಳು ಕರಕೆ |
ಸಾರಿರೆ ಭಕ್ತಿಯೊಳೀಗಾ | ಈ | ನಾರಿಯ ಗೆಲುತಿಹೆ ಬೇಗಾ || ೧೪೦ ||
ಸರಸಿಜನಾಭನ ಪದವಾ | ನಾ | ನುರುತರ ಭಕ್ತಿಯೊಳ್ತಪವಾ |
ವಿರಚಿಸುತಿರಲಿವನನ್ನೂ | ಕರ | ಮುರಿಮುರಿ ಬಿಗಿದೊಯ್ಯುವೆನೂ || ೧೪೧ ||
ದುರುಳೆಯೆ ತಾಳೆಂದೆನುತಾ | ರಘು | ವರನನು ಧ್ಯಾನಿಸಿಕೊಳುತಾ |
ಶರವಭಿಮಂತ್ರಿಸಿ ಬಿಡಲು | ಖಿಡಿ | ಸುರಿಸುತಲೈತರುತಿರಲು || ೧೪೨ ||
ಭರದೊಳು ತುಂಡಿಪೆ ನೆನುತ | ಸತಿ | ಶರಗಳ ಬಿಡೆ ಗಜರುತ್ತಾ |
ಎರಗಲು ಶರಬಂದಾಗ | ಸತಿ | ಧರೆಯೊಳು ಮೂರ್ಛಿಸೆ ಬೇಗಾ || ೧೪೩ ||
ಧುರಬೇಡೆಂದುಸುರಿದೆನೂ | ಈ | ಗೊರಗಿದಳಾರಿಹರಿನ್ನೂ |
ಪರಿಕಿಪೆ ತಾನೆಂದೆನುತಾ | ನಿಂ | ದಿರುತಿರೆ ಶತ್ರುಹ ನಗುತಾ || ೧೪೪ ||
ಭಾಮಿನಿ
ಲಲನೆ ಮೂರ್ಛಿಸಲಾಗ ತಾರಾ |
ವಳಿಯು ಕಾಣುತಲಿವರ ಗೆಲುವರೆ |
ಸುಲಭವಾಗದೆನುತ್ತ ಕುಮುದಿನಿಯೆಡೆಗೆ ವೇಗದಲಿ ||
ಘಳಿಲನೈದುತ ಚರಣಕೊಂದಿಸಿ |
ಕಳವಳಿಸಿ ಕೈಮುಗಿದು ನಿಂದಿರೆ |
ತಿಳುಹು ಭಯಮೇನೆನಲು ಭಕ್ತಿಯೊಳಾಗ ಪೇಳಿದಳೂ || ೧೪೫ ||
ರಾಗ ಮಧುಮಾಧವಿ ತ್ರಿವುಡೆತಾಳ
ಮಾತೆ ಲಾಲಿಸಯೋಧ್ಯ ನಗರದಿ | ಸೀತೆವಲ್ಲಭನಶ್ವಮೇಧವ |
ತಾ ತಳದು ಬಿಟ್ಟಿಹನು ತುರಗವ | ಭೂತಳೇಶರ ಗೆಲುವರೆ || ೧೪೬ ||
ಬಂದುದೆಮ್ಮಯ ಪುರಿಗೆ ರಾಣಿಯು | ಬಂಧಿಸಿದಳೀ ಹಯವ ದಳಪತಿ |
ಯೆಂದೆನಿಪ ಶತ್ರುಹನು ಸಮರಕೆ | ನಿಂದ ರಘುವರನನುಜನೂ || ೧೪೭ ||
ಭರತಸುತ ದಮನರನು ಗೆಲಿದೆನೂ | ಧುರದಿ ಮದನಾಕ್ಷಿಯನು ಶತ್ರುಹ |
ಧರೆಯೊಳಗೆ ಮೂರ್ಛಿಸುತ ಕೆಡೆದನು | ಪರಮ ಸಾಹಸವಂತನೂ || ೧೪೮ ||
ರಾಗ ಸುರುಟಿ ಏಕತಾಳ
ಲಾಲಿಸುತಾ ಕ್ಷಣದಿ | ಶೋಕವ | ತಾಳುತಲತಿಭಯದೀ |
ಖೂಳ ತನವನೀವ್ ಗೈದಿರಿ ವ್ಯರ್ಥದಿ |
ಕಾಲಾಂತಕ ರಘುಪುಂಗವ ಕೋಪಿಪ || ೧೪೯ ||
ತ್ರಿಭುವನಪರಿಪಾಲಾ | ಜಗತೀ | ವಿಭು ಕೌಸ್ತುಭಮಾಲಾ |
ಅಭಯಪ್ರದ ಶರಣಾಗತವತ್ಸಲ | ಶುಭದಾಯಕಗೆ ವಿರೋಧಗಳಾಯಿತು || ೧೫೦ ||
ಆದಿಯೊಳೆನಗಿದನೂ | ತಿಳಿಸದೆ | ಪೋದಿರಿ ವಾರ್ತೆಯನೂ |
ಬಾಧಕಪಡಿಸಿದಿ ರಘುವರನನುಜನ | ಭೇದವನೆಣಿಸಿದಿರ್ವಿಶ್ವಾತ್ಮಕನೊಳು || ೧೫೧ ||
ಭಾಮಿನಿ
ವಿರಚಿಸಿದ ತಪಗಳಿಗೆ ಸಾರ್ಥಕ |
ವಿರದತೆರ ಗೈದಿಹಿರಿ ವೇಗದಿ |
ತೆರಳಿ ಶತ್ರುಹನಡಿಗೆ ವಂದಿಸಿ ಬೇಡಿಕೊಂಬುವದೂ ||
ತರಳತನವಾಯ್ತೆನುತ ಕುಮುದಿನಿ |
ಭರದಿ ಮದನಾಕ್ಷಿಯನು ಚೇತನ |
ವೆರಸಿ ಬೇಗೆಬ್ಬಿಸುತಲೆಲ್ಲರು ಎರಗೆ ಶತ್ರುಹಗೆ || ೧೫೨ ||
ರಾಗ ಮಾರವಿ ಏಕತಾಳ
ಕೆರಳುತಲಾ ಕ್ಷಣ ಶತ್ರುಹ ಖಡುಗವ | ತಿರುಹುತ ವೇಗದಲಿ ||
ಅರರೆ ದುರುಳ ನಿಶಾಚರಿಯರ ನಿ | ಮ್ಮಿರಿಸೆನು ಜೀವದಲಿ || ೧೫೩ ||
ಆರಿವಳೀ ಮುದಿ ಯೋಗಿನಿಯಂದದಿ | ಸಾರಿ ಬಂದಿಹಳೀಗಾ ||
ತೋರುವಿರಾತ್ಮಜ್ಞಾನಿಗಳೆನ್ನುತ | ಕ್ರೂರ ಸ್ವಭಾವಿಕರೂ || ೧೫೪ ||
ಕೆರಳುತಲಾ ಕ್ಷಣ ಪುಷ್ಕಳ ದಮನರು | ತಿರುಹುತ ಖಡ್ಗವನೂ ||
ದುರುಳ ನಿಶಾಚರ ಸತಿಯರನೀ ಕ್ಷಣ | ಶಿರವರಿಯುವೆವೆನುತಾ || ೧೫೫ ||
ಖಿಡಿ ಸೂಸುತ ಹರಿನಾದದಿ ಮುಂದಕೆ | ಅಡಿಯಿಡುತಿರೆ ಕಂಡು ||
ನಡುಗುತ ಕುಮುದಿನಿ ಶತ್ರುಹಗೊಂದಿಸಿ | ಕಡು ದೈನ್ಯದೊಳಾಗ || ೧೫೬ ||
ರಾಗ ಕಾಂಭೋಜಿ ತ್ರಿವುಡೆತಾಳ
ಕರುಣದಿ ಪೊರವುದೆನ್ನಾ | ಹೇ ಸೌಮಿತ್ರೆ | ಚರಣಕಿಂಕರಳೂ ನಿನ್ನಾ || ಪಲ್ಲ ||
ಅರಿಯದೀಕೆಯು ಕಟ್ಟಿದಳು ಹಯ | ಧುರಕೆ ಜ್ಞಾನವಿಹೀನೆ ನಿಂದಳು |
ಪರಮ ಪಾತಕಗೈದಳೀಕೆಯ | ತರಳೆಯಂದದಿ ಸಲಹಬೇಹುದೂ || ಅನುಪಲ್ಲ ||
ಹಿಂದಿನ ಭವದಿ ನಾವು | ಗೈದಿಹ ಕರ್ಮ | ದಿಂದಲಿ ಜನಿಸಿಹೆವೂ |
ನೊಂದಿಹೆವು ಸಂಸಾರಪಾಶದ | ಬಂಧನದಿ ಭವಭಯವ ಹರಿಸಲು |
ಬಂದಿಹೆವು ನಾವಿಲ್ಲಿ ತಪಿಸುವ | ದೆಂದೆನುತ ಶ್ರೀರಾಮನಂಘ್ರಿಯ || ೧೫೭ ||
ಸುರಶಿಲ್ಪಿ ರಚಿಸಿಹನೂ | ಈ ಪುರಿಯ ಮ | ತ್ತರಮನೆಯಖಿಳವನ್ನೂ |
ಸುರುಚಿರದ ನವರತ್ನಮಯವಿದ | ಕರಕೆ ತವಪದಕರ್ಪಿಸೀರ್ಪೆನು |
ಕರುಣದಲಿ ಕೈಕೊಂಬುದೆನ್ನುತ | ಕರವ ಜೋಡಿಸುತೆರಗೆ ದೈನ್ಯದಿ || ೧೫೮ ||
ಭಾಮಿನಿ
ವನಿತೆ ಭಕ್ತಿಯೊಳೆರಗೆ ಶತ್ರುಹ |
ಕನಿಕರದಿ ಮನ್ನಿಸುತ ವೇಗದಿ |
ಮನದೊಳೇನಿದೆ ಪೇಳಲದನಾ ಗೈವೆನುಪಕೃತಿಯಾ ||
ರಣಕೆ ನಿಂದಪರಾಧ ಕ್ಷಮಿಸಿಹೆ |
ನೆನಲು ಯೋಗಿನಿ ಕರವ ಮುಗಿಯುತ |
ಗುಣಯುತನೆ ಬಿನ್ನೈಪೆ ಕೇಳ್ವುದು ಸಾವಧಾನದಲಿ || ೧೫೯ ||
Leave A Comment