ರಾಗ ಸಾಂಗತ್ಯ ರೂಪಕತಾಳ

ರಾಜಾಧಿರಾಜ ರಾಜೇಂದ್ರಾ ಶ್ರೀರಾಮನ | ತೇಜಿಯನಿದಕೊ ಪ್ರೇಮದೊಳೂ ||
ರಾಜೀವಾಕ್ಷನ ಪಾದಾಂಬುಜವ ನೋಳ್ಪೆವು ನಾವು | ಆ ಜಗತ್ಪತಿಯೆಡೆ ಕಳುಹೂ   || ೧೬೦ ||
ಸರಸಿಜಾಕ್ಷಿಯರಿವರೆಲ್ಲರ ದಶಕಂಠ | ನಿರಿಸಿಹ ಕಾರಾಮಂದಿರದಿ ||
ಕರೆತಂದೆ ಪರತರ ಮೋಕ್ಷಸಂಪದ ಮಾರ್ಗ | ಒರೆದಿಹೆನಿವರಿಂಗೆ ನಾನೂ || ೧೬೧ ||
ತೆರಳುವೆವೀಗ ಸಾಕೇತಕೆ ವಹಿಲದಿ | ಕರುಣಿಸಪ್ಪಣೆಯ ಸೌಮಿತ್ರಿ ||
ಪರಮಾತ್ಮ ದರ್ಶನೋತ್ಸಕವು ಬಾಧಿಪುದೀಗ | ಪರಮ ಸಾಯುಜ್ಯ ಸಂಪದಕೆ      || ೧೬೨ ||

ರಾಗ ಕೇತಾರಗೌಳ ಅಷ್ಟತಾಳ

ಹರುಷದಿ ಶತ್ರುಘ್ನ ಬೆರಳ ಮುದ್ರಿಕೆಯನ್ನು | ಕರುಣಿಸಿ ಯೋಗಿನಿಗೆ |
ಕರದೊಳಗಿದರನ್ನು ಪಿಡಿದು ಸಾಕೇತವ | ಸ್ಮರಿಸಲು ತೆರಳುವಿರಿ          || ೧೬೩ ||
ತೆರಳಿರಿ ವೇಗದೊಳೆಂದಾಜ್ಞಾಪಿಸಲಾಗಿ | ಎರಗುತ್ತಾ ಕುಮುದಿನಿಯೂ |
ಒರೆವೆ ಕೇಳ್ಮುಂದೆ ನಿಮ್ಮಯ ವಾಜಿ ಪೋಗಲು | ಬರುವ ವಿಪತ್ತುಗಳಾ    || ೧೬೪ ||

ಹರನ ಕಿಂಕರನೊಲು ಧುರವು ಸಂಘಟಿಪುದು | ಪರಮ ಬಲಾಢ್ಯನಾತ
ಕರುಣಿಸುತಿಹೆದಿವ್ಯ ಶಕ್ತಿಯಸ್ತ್ರವನಿದ | ಪರಿಗ್ರಹಿಸಯ್ಯ ನೀನೂ   || ೧೬೫ ||

ಭರದೊಳೀಯಸ್ತ್ರವನೆಸೆಯಲು ಹರನೊಳ | ಗಿರುವ ಭಕ್ತಿಯ ತೊರೆದೂ |
ಪರಮಾತ್ಮ ರಾಮಚಂದ್ರನ ಭಕ್ತಿಯವನಿಂಗೆ | ಬರುವದೆನುತಲಿತ್ತಳು      || ೧೬೬ ||

ಭಾಮಿನಿ

ಪಡೆದ ಶಕ್ತಿಯನಾಗ ಶತ್ರುಹ |
ಮಡದಿಯರ ಕಳುಹುತ್ತಯೋಧ್ಯಕೆ |
ಒಡನೆ ಮಾಯಾಪುರವ ತನ್ನೊಶಗೊಂಡು ವೇಗದಲಿ ||
ಪಡೆಸಹಿತ ಪೊರಮಟ್ಟು ಯಮುನಾ |
ತಡಿಗೆ ಬಂದಲ್ಲಿಂದ ಮುಂದಕೆ |
ಪೊಡವಿಪರನರಸುತ್ತ ನಡೆದನು ತುರಗ ಬೆಂಬಳಸಿ    || ೧೬೭ ||

ರಾಗ ಕಾಂಭೋಜಿ ಝಂಪೆತಾಳ

ಇತ್ತ ಜೋತಿರ್ಮೇಧ ಪುರದರಸ ವೀರಮಣಿ |
ಪುತ್ರನಾಗಿಹ ಪಿರಿಯ ರುಗ್ಮಾಂಗದಾಖ್ಯಾ ||
ಮತ್ತೆ ಕಿರಿಯ ಶುಭಾಂಗದೆಂಬೀರ್ವರೋಲಗಕೆ |
ಅರ್ತಿಯೊಳ್ಬಂದು ಮಂಡಿಸುತಾ     || ೧೬೮ ||
ಅನುಜಾತ ಕೇಳೆಮ್ಮ  ಉಪವನದಿ ರಂಜಿಸುವ |
ಘನತರದ ಪಣ್ಣು ಫಲವನು ಕೊವರೀಗಾ ||
ಮನದೊಳಾತುರವಿಹುದು ಯೇಳೆನುತ ರುಗ್ಮಾಂಗ |
ವನಕೆ ಪೊರಟನು ತೋಷದಿಂದಾ   || ೧೬೯ ||

ಭರದೊಳೈತಂದಾಗ  ಪರಿಪರಿಯ ತರುಲತೆಯೊಳ್ |
ಇರುವ ಸುಮಫಲ ಪಣ್ಣಪರಿಕಿಸುತ ಮುದದಿ ||
ಸುರಪನುದ್ಯಾವನವೊ  ವರವಸಂತ ಜಯಂತ |
ನುರು ವಿಲಾಸಸ್ಥಾನವೆನೆ ಭ್ರಾಂತಿಗೊಳುತಾ  || ೧೭೦ ||

ರಾಗ ಪುನ್ನಾಗ ಏಕತಾಳ

ಪರಿಕಿಸು ಸಹಜನೀ ಯುಪವನ ಸಿರಿಯಾ |
ತರುಗಳ ಮಧ್ಯದಿ ಝೋಂಪಿನ ಲತೆಯಾ || ಪಲ್ಲ ||
ಭರಿತ ಸುಮಗಳ್ಮಕರಂದ ಪೂರಿತೆಯಾ |
ಸರಸದಿ ಸವಿಯುವ  ಷಟ್ಪದತತಿಯಾ || ಅನುಪಲ್ಲ ||
ಚೂತ ಪ್ರಿಯಾಳ ವಾಮ್ರಾತ ಕದ್ರುಮವೂ |
ಮಾತರಂಗವು ಪಾರಿಜಾತ ಕ್ರಮುಕವೂ |
ಕೇತಕಿ ಬದರಿ ಕಪಿತ್ಥ ಮಾದಲವೂ |
ಈ ತರುಗಳ ಶೋಭೆ ಮನಕೆ ವಿಸ್ಮಿತವೂ     || ೧೭೧ ||

ಮಂದಾರಶೋಕ ತಮಾಲ ಕಿಂಶುಕವೂ |
ಕುಂದ ಪನಸ ಕೋವಿದಾರ ಪಾಟಲವೂ |
ಚಂದನವಗರು ಶ್ರೀಗಂಧ ಪಾದಪವು |
ಸುಂದರಕರಮಾಗಿ ತೋರ್ಪುದೀ ವನವೂ    || ೧೭೨ ||

ವಾರ್ಧಕ

ಕುಮುದ ಕಲ್ಹಾರ ಶತಪತ್ರ ಶೋಭಿತಮಾದ |
ವಿಪುಲ ಜಲದಿಂದೊಪ್ಪುತೀರ್ಪ ಸರಸಿಯೊಳೀಗ |
ಗಮಿಸುತಿಹ ಹಂಸ ಕಾರಂಡ ತಿತ್ತಿರಿ ನಿಚಯ ಕಲಕಲಸ್ವನದಿಂದಲಿ ||
ಅಮಮವೆನ್ನಯ ಮನವ ಸೆಳೆದಪುದುವಾರಾಮ |
ವಮರೇಂದ್ರ ನಂದನವ ಧಿಕ್ಕರಿಪುದೆಂದೆನುತ |
ಭ್ರಮಿಸಿ ರುಗ್ಮಾಂಗದನು ಚರಿಸುತಿರಲೈತರುವ ಹಯವ ಕಂಡಾ ಕ್ಷಣದೊಳೂ      || ೧೭೩ ||

ಭಾಮಿನಿ

ಕನಕಮಯದಾಭರಣ ಶೋಭಿತ |
ಘನತರದ ವಾಜಿಯನು ಪರಿಕಿಸೆ |
ಘಣೆಯೊಳಗೆ ಬಿಗಿದೀರ್ದ ಲೇಖನವನ್ನು ಕಾಣುತಲಿ ||
ಅನುಜ ವಾಚಿಸು ಬರಹವೇನದು |
ವನದೊಳೇತಕೆ ಬಂದುದೀ ಹಯ |
ವೆನಲು ವೇಗ ಶುಭಾಂಗ ಲೇಖನ ತೆಗೆದು ವಾಚಿಸಿದ  || ೧೭೪ ||

ರಾಗ ಕೇತಾರಗೌಳ ಅಷ್ಟತಾಳ

ಸ್ವಸ್ತಿ ಶ್ರೀ ಸಾಕೇತಪುರಪತಿ ಜಗತಿ ಸ | ಮಸ್ತರೊಡೆಯ ರಾಮನು |
ಉತ್ತುಮ ಹಯಮೇಧವನು ಗೈವ ದೇವದೇ | ವೋತ್ತುಮ ತವಕದಲಿ      || ೧೭೫ ||

ಧರೆಯೊಳು ತುರಗವ ಶತ್ರುಹನೊಂದಿಗೆ | ಚರಿಸಲು ಬಿಟ್ಟಿಹನೂ |
ಧುರಪರಾಕ್ರಮರು ಹಯವ ಕಟ್ಟಿ ಸಂಗರ | ವಿರಚಿಪುದೆಮ್ಮೊಡನೆ || ೧೭೬ ||

ಬಲಹೀನರಾಗಿಹ ನೃಪರು ಕಾಣಿಕೆಯಿತ್ತು | ಬಲಸಹಾಯಕೆ ಬಹುದು |
ಕೊಳುಗುಳವನುಗೈದು ಸೋತಡೆಯಪಹಾಸ್ಯ | ಇಳೆಯೊಳು ಖಂಡಿತವೂ          || ೧೭೭ ||

ರಾಗ ಮಾರವಿ ಏಕತಾಳ

ಎನುತೀ ಪರಿಯೊಳು ಬರದಿಹ ಲೇಖನ | ವನು ವಾಚಿಸಲಾಗ ||
ಘನತರ ಕ್ರೋಧದಿ ರುಗ್ಮಾಂಗದ ತ | ನ್ನನುಜನೊಳಿಂತೆಂದ     || ೧೭೮ ||

ಹರನೋರ್ವನೆ ಬ್ರಹ್ಮಾಂಡಕೆ ಒಡೆಯನು | ಚರನಂದದೊಳೀಗ ||
ಇರುತಿಹನೆಮ್ಮರಮನೆಯನು ಕಾಯುತ | ಲರಿಯರು ಈ ಪರಿಯಾ       || ೧೭೯ ||

ಬರೆದಿದೆ ಜಗತೀಗೊಡೆಯನು ರಾಮನು | ಪರದೇವತೆಯೆನುತ ||
ಧುರವಿಕ್ರಮಿಗಳು ಹಯ ಬಂಧಿಪುದೆಂ | ದಿರುತಿದೆ ನೋಡಿದೆಯಾ         || ೧೮೦ ||

ಕರವೀವುದು ಬಲ ಹೀನರೆಂದಿರುತಿದೆ | ಅರಿವರೆ ಎಮ್ಮೊಲವಾ ||
ಧುರದೊಳು ಶತ್ರುಹ ರಾಮರನೀ ಕ್ಷಣ | ಶರಣೆಂದೆನಿಸುವೆನೂ   || ೧೮೧ ||

ಬರುತಿಹರಾರೈ ನೋಳ್ಪೆನು ತಾನೆಂ | ದ್ವರಿಯುತ ರುಗ್ಮಾಂಗ ||
ತುರಗವತಂದಾ ಕ್ಷಣದಲಿ ಬಂಧಿಸಿ | ಧುರ ನಿಶ್ಚಯ ಗೈದೂ      || ೧೮೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತೆರಳಿ ಸಿಂಹಾಸನದಿ ಕುಳಿತಿಹ | ಧರಣಿಪಾಲಕ ವೀರಮಣಿ ಪದ |
ಕೆರಗಲುಭಯರನಪ್ಪಿ ಮುದ್ದಿಸಿ | ಹರುಷದಿಂದ || ೧೮೩ ||

ಆವಕಡೆಗೈದಿದಿರಿ ನಿಮ್ಮಯ | ಹಾವಭಾವವ ನೋಡೆ ವದನದಿ |
ಪಾವಕನೆ ಜ್ವಲಿಪಂತೆ ಕಾಂಬುದಿ | ದ್ಯಾವ ಪರಿಯೂ   || ೧೮೪ ||

ಸರಸ ಸವಿನುಡಿಯಾಟಪಾಟದಿ | ಹರುಷದಿಂ ಪೂರ್ಣಿಮದ ಚಂದಿರ |
ಸರಿಸಮೋಪಮ ವದನ ಕಂಡಿಹ | ತೆರನಿದೇಕೆ         || ೧೮೫ ||

ಕರಮುಗಿದು ರುಗ್ಮಾಂಗನೀ ದಿನ | ತೆರಳೆಯುಪವನದಲ್ಲಿ ನಡೆದಿಹ |
ಪರಿಯ ಪೇಳ್ವೆನು ಜನಕ ಚಿತ್ತವ | ನಿರಿಸಿಕೇಳೈ         || ೧೮೬ ||

ರಾಗ ಕಾಂಭೋಜಿ ಅಷ್ಟತಾಳ

ಅನುಜನೊಡನೆಯುಪ | ವನಕೆ ಪೋಗಿರೆ ನಾನು | ತಂದೆ ಕೇಳೂ ||
ಫಣೆಯೊಳ್ ಲೇಖನವಿದ್ದ | ತುರಗವೈತಂದಿತು | ತಂದೆ ಕೇಳೂ || ೧೮೭ ||

ಸಾಕೇತಪುರವಂತೆ | ರಾಮನೆಂಬವನಂತೆ | ತಂದೆ ಕೇಳೂ ||
ಲೋಕೇಶ ತಾನು ಯಜ್ಞವ ಮಾಳ್ಪೆನೆನುತಲೆ | ತಂದೆ ಕೇಳೂ   || ೧೮೮ ||

ಬಲವಂತರೀ ಹಯ ಕಟ್ಟಿ ಕಾದುವದಂತೆ | ತಂದೆ ಕೇಳೂ ||
ಬಲಹೀನರ್ಕಪ್ಪವ ಕೊಡಲೆಂದು ಬರೆದಿದೆ | ತಂದೆ ಕೇಳೂ       || ೧೮೯ ||

ತುರಗವ ಬಲ್ಮೆಯೊಳ್ಕಟ್ಟಿಹೆ ನಾನೀಗ | ತಂದೆ ಕೇಳೂ ||
ಧುರಗೈದು ಮೂರ್ಖರ  ಸೆರೆಯೊಳಗಿಕ್ಕುವೆ | ತಂದೆ ಕೇಳೂ     || ೧೯೦ ||

ರಾಗ ಕೇತಾರಗೌಳ ಝಂಪೆತಾಳ

ಕಂದ ಭಾಪುರೆ ನಿನ್ನನೂ | ಸುಕೃತ ಫಲ | ದಿಂದನಾ ಪಡೆದಿರ್ಪೆನೂ |
ಚೆಂದವಾಯಿತು ಹಯವನೂ | ನೀನೀಗ | ಬಂಧಿಸಿದು ಒಳಿತೆಂಬೆನೂ     || ೧೯೧ ||

ಆರಿಹರು ರಣರಂಗದಿ | ಎಮ್ಮಿದಿರು | ಸಾರುವರು ತ್ರೈಭುವನದಿ |
ಧೀರರಿಹರೆಂಬ ಬಗೆಯಾ | ರಾಮನಿಗೆ | ತೋರುತಿಹೆನಾ ನಿಶ್ಚಯಾ       || ೧೯೨ ||

ಪಾವನಾತ್ಮಕ ಭರ್ಗನೂ | ಎಮ್ಮ ಕುಲ | ದೇವನಾ ಪೂಜಿಸುವೆನೂ |
ಆವ ಭಟ ಬಹನೆನ್ನುತಾ | ಸಂಗರದ | ಠೀವಿಯೊಳಗಿರೆ ಸಂತತಾ         || ೧೯೩ ||

ಭಾಮಿನಿ

ಇತ್ತ ತುರಗವನರಸಿ ಕಾಣದೆ |
ಚಿತ್ತದಲಿ ಚಂಚಲಿಸಿ ಚಾರರು |
ಶತ್ರುಹನ ಪದಕೆರಗಿ ಬಿನ್ನೈಸಿದರು ದೈನ್ಯದಲಿ ||
ಎತ್ತ ಪೋದುದೊ ಮುಂದೆ ಕಂಗೊಳಿ |
ಸುತ್ತಿರುವ ಪುರವ್ಯಾವುದಿದನೀ |
ವಿಸ್ತರಿಸಬೇಕೆಂದು ಸುಮತಿಯಕೇಳಲವನೆಂದ         || ೧೯೪ ||

ರಾಗ ಜಂಜೂಟಿ ಅಷ್ಟತಾಳ

ಚರಣಕೆ ಬಿನ್ನೈಸುತಿಹೆನೂ | ಮುಂ |
ದಿರುತಿಹ ಪುರಿಯ ನಾಮವನೂ |
ಅರಿತಿಹೆ ಜೋತಿರ್ಮೇದಾಖ್ಯವೆಂಬುದು ಪುರ |
ಹರನ ಕಿಂಕರ ವೀರಮಣಿತಾ | ಹರುಷದಲಿ ಪಾಲಿಪನು ಕೇಳೈ  || ೧೯೫ ||

ಪೃಥಿವಿಪಾಲನ ಸುಕುಮಾರೀ | ಇಕ್ಷು |
ಮತಿಯ ತಪಕೆ ದಯದೋರಿ |
ಅತಿ ವ್ಯಾಮೋಹದೊಳವಳೊರಿಸಿಕೊಂಡಾ ಪಶು |
ಪತಿಯು ಪ್ರಮಥರಗೂಡಿ ಸಂತತ | ಹಿತದಿ ನೆಲಸಿಹ ನಗರವಿದರೊಳು   || ೧೯೬ ||

ತರಳರೀರ್ವರು ವೀರಮಣಿಗೆ | ಸೈನ್ಯ |
ವಿರುವದಸಂಖ್ಯಾಕದೊಳಗೆ |
ತುರಗವ ಕಟ್ಟಿಹರಿವರನ್ನು ಗೆಲುವರೆ |
ಪರಮ ದುರ್ಘಟ ಹರನ ಬಲದೊಳು | ಪರಿಭವಗಳೆಂತಹುದೊ ಕಾಣೆನೂ || ೧೯೭ ||

ರಾಗ ಮಧುಮಾಧವಿ ತ್ರಿವುಡೆತಾಳ

ಎನಲು ಕೇಳುತಲಾಗ ಶತ್ರುಹ | ಇನಕುಲದ ನೃಪಧರ್ಮವಹಿತರೊ |
ಳನುವರಕೆ ಸಂಧಾನವಾದಿಯೊ | ಳನುಕರಿಪುದೊಳಿತೀಗಳೂ   || ೧೯೮ ||

ವಿಹಿತದಿಂ ಕಪ್ಪಗಳನರ್ಪಿಸೆ | ಮಹಿಪನೊಳು ಧುರವೆಲ್ಲ ಮುಳಿದರೆ |
ಯಹಿತನಿವನನು ಗೆಲುವೆ ನಿಮಿಷದೊ | ಳಹಿ ವಿಭೂಷಣಗಂಜೆನೂ        || ೧೯೯ ||

ಪೊರಟಿಹೆವು ಶ್ರೀರಾಮಕಾರ್ಯಕೆ | ಬರದು ಎಮಗಪಜಯಗಳೆಂದಿಗು |
ಪರಮ ದುರ್ಘಟ ಸುಲಭವಾಪುದು | ಬರಿದೆ ಯೋಚಿಪುದೇತಕೆ  || ೨೦೦ ||

ಭಾಮಿನಿ

ಮರುತಸುತ ಬಾ ಚತುರನೀನಹೆ |
ತೆರಳು ಸಂಧಾನಕ್ಕೆ ನೃಪನೊಡ |
ನರುಹು ತುರಗವ ಬಿಟ್ಟು ಕಪ್ಪವನೀಯದಿರಲವನೂ ||
ತರುಬಿ ಸೇನೆಯ ಬಂಧು ಬಾಂಧವ|
ತರಳರೊಡಗೂಡುತ್ತ ಶೈಮುನಿ |
ಪುರಕೆ ಪೋಪರೆ ಪೊರಡು ಧುರಕೆಂದೆನುತ ಪೇಳೆಂದ  || ೨೦೧ ||

ಕಂದ

ಅಸ್ತೆಂದೆನುತಲೆ ಮಾರುತಿ |
ಶತ್ರುಹನಡಿಗಭಿವಂದಿಸಿ ಜವದಿಂ ಪೊರಡುತೆ |
ಪೃಥ್ವಿಪನೆಡೆಗಾ ಕ್ಷಣದೊಳ್ ||
ಅರ್ತಿಯೊಳೈತರೆ ರಘುಪತಿ ಭಜನೆಯೊಳಾಗಳ್       || ೨೦೨ ||

ರಾಗ ಕೇತಾರಗೌಳ ಝಂಪೆತಾಳ

ವೀರಮಣಿಯಾಸ್ಥಾನದಿ | ವಿಷ್ಟರವ | ನೇರಿ ಕುಳಿತಿರೆ ಮೋದದಿ |
ಮಾರುತಿಯು ಬರೆ ಕಾಣುತಾ | ಬಂದನಿವ | ನ್ಯಾರೆಂದು ಬೆರಗಾಗುತಾ   || ೨೦೩ ||

ತರುಚರನು ಇವನೆನುತಲಿ | ಮನ್ನಿಸದೆ | ಇರಲು ವಾಲಾಸನದಲಿ |
ಧರಣಿಪಾಲನ ಇದಿರೊಳು | ಮಂಡಿಸಿದ | ಮರುತಾತ್ಮಭವ ಮುದದೊಳೂ         || ೨೦೪ ||

ಪರಿಕಿಸುತ ರುಗ್ಮಾಂಗನೂ | ವನಚರನೆ | ಬರವೇನು ಮದಮೂರ್ಖನೂ |
ಧರಣಿಪಾಲಕನೆದುರೊಳು | ಮಂಡಿಸಿದೆ | ಸರಿಸಮನೆ ವಿಕ್ರಮದೊಳೂ    || ೨೦೫ ||

ಮದಮುಖರು ನೀವೀಗಳೂ | ಶ್ರೀರಾಮ | ಪದಿನಾಲ್ಕು ಜಗತೀಯೊಳೂ |
ಅಧಿಕನಶ್ವವ ಪಿಡಿದಿರಿ | ಬರಿದೇಕೆ | ಕದನ ಕಾರಣರಾದಿರಿ       || ೨೦೬ ||

ರಾಗ ಮಾರವಿ ಏಕತಾಳ

ವೀರಮಣಿಯು ಹೂಂಕರಿಸುತಲಾ ಕ್ಷಣ | ಸಾರೆಲೊ ಮರ್ಕಟನೆ ||
ಆರೆಲೊ ನಿನ್ನಯ ರಾಮನ ಬೆದರಿಕೆ | ದೋರುವೆ ಕಲಿಯಹನೆ   || ೨೦೭ ||

ಕಲಿಗವ ಕಾಲಾಂತಕನಹನಬ್ಧಿಗೆ | ಬಲಿಯುತ ಸೇತುವೆಯಾ ||
ಕಲಹದಿ ದಶಶಿರ ಕುಂಭಶ್ರವಣರ | ಕುಲವನೆ ತರಿದಿಹನೂ       || ೨೦೮ ||

ಅರಿತಿಹೆ ಖಳ ನೊದಿರುತಿಹ ಸತಿಯನು | ತೊರೆದುರೆ ನಾಚಿಕೆಯಾ ||
ಕರೆತಂದಿಹನವನ್ಯಾತಕೆ ಪೊಗಳುವೆ | ಧರೆಯೊಳಗಪಹಾಸ್ಯ     || ೨೦೯ ||

ರಾಗ ತುಜಾವಂತು ಮಟ್ಟೆತಾಳ

ಯಾತಕಿಂತು ನುಡಿವೆ ಮೂರ್ಖನೆ | ಲೋಕಮಾತೆ ಸೀತೆ ಭುವನ |
ಖ್ಯಾತೆಯಾದಿಶಕ್ತಿ ಮೂಢನೆ || ಪಲ್ಲ ||

ಮೂಲಪ್ರಕೃತಿಯಿವಳ ದೆಸೆಯಲಿ | ಖಳರ ನಿ |
ರ್ಮೂಲಗೈವ ನೆವನದಿಂದಲಿ |
ತಾಳಿ ರಾಮಾವತಾರ | ಮೂಲಪುರುಷ ವಿಶ್ವಮೂರ್ತಿ |
ಖೂಳ ದನುಜರರಿದುಯಗ್ನಿ |
ಜ್ವಾಲೆಯೊಳಗೆ ಪರಿಕಿಸೀರ್ಪನೂ | ಸತಿಯನಾ |
ಮೇಲೆ ಕೂಡಿ ಮುದವ ತಾಳ್ದನೂ    || ೨೧೦ ||

ಹರನು ಬ್ರಹ್ಮಾಂಡಕೊಡೆಯನೂ | ಇವನ ಬಿ |
ಟ್ಟಿರದು ವಿಶ್ವಮೂರ್ತಿ ಭರ್ಗನೂ |
ಗಿರಿಜೆ ಮೂಲಪ್ರಕೃತಿಯಾದಿ | ಪುರುಷ ಚಂದ್ರಚೂಡ ಗಂಗಾ |
ಧರನು ಯಮ್ಮ ಪುರದೊಳಿಹನು |
ಪರಮಮಹಿಮನಿವನ ಪೋಲುವಾ | ರುಂಟೆ ಕೀಶ |
ಮರುಳು ನಿನಗೆ ಮುಚ್ಚು ವದನವಾ || ೨೧೧ ||

ಧರೆಯೊಳಖಿಳ ಕ್ಷಾತ್ರಿವರ್ಗವಾ | ನಾಶಗೈದ |
ಪರಶುರಾಮ ಗರ್ವದಹನವಾ |
ಹರುಷದಿಂದ ಗೈದು ಇಂದ್ರ | ತರಳ ವಾಲಿಯನ್ನು ವಧಿಸಿ |
ಧರೆಯೊಳಖಿಳ ಖಳರ ತರಿದ |
ಪರಮಪುರುಷ ರಾಮಚಂದ್ರನೂ | ಹರನೊಳಿವನು |
ಪರಿಪರಿಯ ಪೂಜೆಗೊಂಡನೂ       || ೨೧೨ ||

ಒಳಿತು ನಿನಗೆ ದೇವನಾಗಲಿ | ನಿನ್ನನಿಲ್ಲಿ |
ಕಳುಹಿಕೊಟ್ಟರಾರು ತ್ವರೆಯಲಿ |
ತಿಳುಹು ಬಂದ ಕಾರ್ಯವೇನೂ | ವಲಿಮುಖ್ಯಾಖ್ಯ ಮಾಜದುಸುರು |
ಪಲವುಮಾತಿನಿಂದ ಲೇನು |
ಅಳುಕಲ್ಯಾಕೆ ಪೇಳು ಪೇಳೆಲಾ | ಉತ್ತರವನು |
ಘಳಿಲನೀವೆ ಪೋಗು ಪೋಗೆಲಾ     || ೨೧೩ ||

ರಾಗ ತೋಡಿ ಅಷ್ಟತಾಳ

ತರಣಿವಂಶ ಪ್ರದೀಪ ರಾಮನ | ತುರಗವನು ಬಿಟ್ಟೀಗ ವೇಗದಿ |
ಕರವನರ್ಪಿಸು ಶತ್ರುಹಾಖ್ಯನಿಗೆ ||
ದುರುಳತನವನು ಗೈಯೆ ನಿನ್ನಯ | ಶಿರವ ಚಂಡಾಡುತ್ತಲಂತಕ |
ಪುರವ ಪೊಗಿಸುವೆವೀಗ ಸಂಗರದಿ  || ೨೧೪ ||

ಬಂಧಿಸಿದ ಹಯವನ್ನು ಬಿಡೆ ನಾ | ನೆಂದಿಗಾದರು ನಿನ್ನ ಶತ್ರುಹ |
ನಿಂದಲಾಗುವ ಧುರವ ಕಾಂಬುವೆನೂ ||
ಚೆಂದದೊಳು ನಿಮ್ಮೆಲ್ಲರನು ಎಳೆ | ತಂದು ಸೆರೆಯೊಳಗೆಕ್ಕಿ ಕೀರ್ತಿಯ |
ಪೊಂದುವೆನು ಪೋಗೀಗ ಪೇಳೆಂದಾ         || ೨೧೫ ||

ಭಾಮಿನಿ

ವೀರಮಣಿಯಿಂತೆನಲು ಕನಲುತ |
ಮಾರುತಾತ್ಮಜನೆಂದ ಧೂರ್ತನೆ |
ತಾರದಿಹೆ ನೇಮವನು ನಿನ್ನೊಧೆಗೀಗ ಬಿಟ್ಟಿಹೆನೂ ||
ದಾರುಣಕೆ ಮಾರ್ಬಲವ ನೆರಹುತ |
ಭೋರನೈತಹುದೆನುತ ಪಿಂದಕೆ |
ಸಾರಿ ಶತ್ರುಹನಡಿಗೆ ವಂದಿಸುತಾಗಲಿಂತೆಂದ || ೨೧೬ ||

ವಾರ್ಧಕ

ಲಾಲಿಸೆಲೆ ದೇವನಾಂ ಪೋಗಿಯೊಡ್ಡೋಲಗದಿ |
ಖೂಳನಹ ವೀರಮಣಿ ಕುಳ್ಳಿರಲು ಬಹುಪರಿಯ |
ಪೇಳಿದೆನು ಕರವನೀಯೆಂದು ಕೇಳದೆ ಮೂರ್ಖ ನಿಂದಿಸುತ ರಘುರಾಮನ ||
ಕಾಳಗಕೆ ಬಹೆನೆಂದು ಧಿಕ್ಕರಿಸಿ ಕಳುಹಿದನು |
ಸೀಳುವೆನು ನಾನವನ ಪಾಲಿಸಪ್ಪಣೆಯೆನಲ್ |
ತಾಳೆನುತ ಶತ್ರುಘ್ನ ಮನ್ನಿಸುತ ಹನುಮನಂ ಪುಷ್ಕರಾದ್ಯರೊಳೆಂದನು   || ೨೧೭ ||

ರಾಗ ಸುರುಟಿ ಏಕತಾಳ

ಧುರವಿಕ್ರಮನಿವನೂ | ಎಂಬುವ | ಪರಿಗಳನರಿತಿಹೆನೂ |
ಹರನಿಹಬೆಂಬಲ ಕೊಳುಗುಳ ಕಠಿಣವು |
ಭರಿತದಿ ಸೇನೆಗಳಿರುತಿಹುದೀತಗೆ   || ೨೧೮ ||

ದುರಿತಾಂತಕನೊಳಗೆ | ವೈರವ | ವಿರಚಿಪ ಮಾನವಗೆ |
ಬರದೆಂದಿಗು ಜಯವಿವನನು ಸಮರದಿ |
ಪರಿಪರಿಯತ್ನದಿ ಸೆರೆವಿಡಿದೊವೆನು  || ೨೧೯ ||

ಹುಲುನರನಾಥನಿಗೆ | ಬೆದರಲು | ಜಲಜಾಂಬಕನೆನಗೆ |
ಬಲಕಧಿಪತಿತನ ಕೊಟ್ಟಿಹನ್ಯಾತಕೆ |
ಕಲಿಕಾಲಾಂತಕಗಂಜೆನು ಧುರದಲಿ  || ೨೨೦ ||

ರಾಗ ಘಂಟಾರವ ಅಷ್ಟತಾಳ

ಪಾಲಿಸಪ್ಪಣೆ ಎನುತಲೆ ಪುಷ್ಕಳ |
ಖೂಳನನು ಜವಗೆಡಿಪೆ ಸೇನಾ | ಜಾಲದೊಂದಿಗೆತ್ವರಿತದಿ       || ೨೨೧ ||

ಒಂದೇ ಮುಷ್ಟಿಯೊಳಹಿತನ ಮರ್ದಿಸಿ |
ಬಂದು ನಮಿಸುವೆನೆನುತ ಮಾರುತಿ | ನಿಂದು ವೀರಾವೇಶದಿ    || ೨೨೨ ||

ದುರುಳನೀತನ ಪುರವನ್ನೆ ವೇಗದಿ |
ಬರಸೆಳೆದು ಕಿತ್ತೊದು ರಾಮನ | ಚರಣಕರ್ಪಿಪೆನೆಂದನೂ       || ೨೨೩ ||

ಭಾಮಿನಿ

ಪೃಥ್ವಿಪನ ಪುರಿಯನ್ನು ಲಗ್ಗೆಯ |
ಮುತ್ತುವದುವೇಗೆನುತಲಾಕ್ಷಣ |
ಶತ್ರುಹನು ನೇಮಿಸಲು ವೀರಾವೇಶದಿಂದಾಗ ||
ಬಿತ್ತರಿಪ ಕೋಟೆಗಳ ಮುರಿದೊಳ |
ಗುತ್ತರಿಸಿ ರಕ್ಷಕರ ಸದೆಯುತ
ಸುತ್ತ ತರುಬಿಹ ಬಲವೆ ಕಂಡಾ  ದ್ವಾರಪಾಲಕರು      || ೨೨೪ ||

ರಾಗ ಕಮಾಚು ಏಕತಾಳ

ಆರೆಲಾ ಒಳಪೊಕ್ಕಾ ಹೊಂತ | ಕಾರಿಗಳಿರ ಜೋಕೆ |
ಧೀರರಾವ್ತ ರೆಮ್ಮಾ | ಕೆಣಕೀ | ಸಾರುವಿರೆಮನಾ ಪುರಕೆ          || ೨೨೫ ||

ಭರತ ತರಳ ಪುಷ್ಕಳಾಖ್ಯ | ಧುರಧೀರನು ನಾನೂ ||
ತೆರಳೀ ನಿಮ್ಮಪ್ಪನಿಗೆ ಪೇಳೀ | ಧುರಕೆ ಬರಲೀಗವನೂ || ೨೨೬ ||

ಬಿದ್ದಾವ್ ಕೆನ್ನೆಮ್ಯಾಗೆ ಹೊಡತಾ | ಗದ್ದಲ್ ಗಂಜಲ್ ಯೇಕೋ ||
ಬುದ್ಧಿಯುಂಟೆ ಅಗಡಸಿಘಾಗಳ | ಸುದ್ದಿ ನಿನಗೆ ಸಾಕೊ  || ೨೨೭ ||

ಸಿಟ್ಟಿನಿಂದ ತಟ್ಟಿ ಕೆನ್ನೆಗೆ | ಕಟ್ಟಿ ಕರಗಳನ್ನೂ ||
ದಿಟ್ಟ ಪುಷ್ಕಳನೆಂದನೆಲೆಲೆ | ದುಷ್ಟ ಸಾರೀಗಿನ್ನೂ       || ೨೨೮ ||

ಭಾಮಿನಿ

ತೆರಳಿ ನಿನ್ನೊಡೆಯನಿಗೆ ವೇಗದಿ |
ಧುರಕೆ ಶತ್ರುಹನೊಡನೆ ಬಹುದೆಂ |
ದರುಹು ನೀನೆನುತಾಗ ಚಂಡಿಕೆಪಿಡಿದು ನೂಕಿದನೂ ||
ಚರನುಕಾತರಿಸುತ್ತಲಾ ಕ್ಷಣ |
ತೆರಳಿಯೋಲಗದೊಳಗೆ ಕುಳಿತಿಹ |
ಧರಣಿಪಾಲಕ ವೀರಮಣಿಗೆರಗುತ್ತ ದುಗುಡದಲಿ         || ೨೨೯ ||