ಲಾವಣಿ
ಜೀಯ ಸಲಾಂ ತಕ್ಕೊ ಸಾಮಿ | ರಿಪು |
ರಾಯ ವಿಪಿನ ದಾವಾನಲನೆ ಸುಪ್ರೇಮಿ || ಪಲ್ಲ ||
ತುರಗವ ಕಟ್ಟಿದಿರೇಕೆ | ಬಿಡ |
ದಿರಲು ಕೆಟ್ಟಿತು ಕಾರ್ಯ ಕೇಳು ಪರಾಕೆ |
ಧುರಧೀರ ಶತ್ರುಹಪುರಕೆ | ಮುತ್ತಿ
ಯುರುಳಿಸಿದನು ಕೋಟೆಗಳನೆಲ್ಲ ನೆಲಕೆ || ೨೩೦ ||
ಪುಂಡು ಹುಡುಗನೋರ್ವನಿಹನೂ | ಎನ್ನ |
ದಂಡಿಸಿ ಕರಗಳ ಬಿಗಿದು ಲತ್ತೆಯನೂ |
ಮಂಡೆ ಮಂಡೆಗೆ ಯಿತ್ತನವನೂ | ಬೇಡ |
ಖಂಡಿತ ಚಾಕರಿಯಿದಕೊ ಲಕ್ಡಿಯನೂ || ೨೩೧ ||
ಶರಧಿಸಮಾನ ಸೇನೆಯನೂ | ಭಯಂ |
ಕರಮಾಗಿ ಕೂಡುತ್ತಲರಿ ನೃಪವರನೂ |
ತಿರುಹುತ್ತ ಮಿಸೆ ನಿಂದಿಹನೂ | ಜಯ |
ಬರದು ಸಾಮಿಗೆ ನಾನು ಸಾರಿ ಪೇಳಿಹೆನೂ || ೨೩೨ ||
ರಾಗ ಭೈರವಿ ಝಂಪೆತಾಳ
ಚಾರಕನ ನುಡಿ ಕೇಳಿ ವೀರಮಣಿ ಹೂಂಕರಿಸಿ |
ಸಾರು ಸಾರೆಲೊ ಪೊಗಳಬೇಡಾ ||
ಭೋರನೀ ದಿನವವನ ಪಿಡಿತಂದು ಬಂಧಿಸುವೆ |
ತೋರಿಸಲಿ ವಿಕ್ರಮವನೀಗಾ || ೨೩೩ ||
ಎಲೆಲೆ ರುಗ್ಮಾಂಗದನೆ ಎಲ್ಲಿಪೋದ ಶುಭಾಂಗ |
ಘಳಿಲನೀ ಕ್ಷಣ ಕರೆಸು ಬಲವಾ ||
ಛಲದಂಕನೆನ್ನನುಜ ವೀರಕೇಸರಿ ಬರಲಿ |
ಕೊಳುಗುಳಕೆ ಪೊರಡಬೇಕೀಗ || ೨೩೪ ||
ಸೇತುತುಹಿನಾಚಲದ ಮಧ್ಯದೊಳಗಿರುತೀರ್ಪ |
ಭೂತಳದಿ ಖ್ಯಾತಿಗೊಂಡಿಹೆನೂ ||
ಭೂತನಾಥನ ಪಾದಕಿಂಕರನು ಪರಬಲದ |
ಭೀತಿಯಿಲ್ಲೆನಗೆ ನಿಶ್ಚಯವೂ || ೨೩೫ ||
ಏರುವುದು ಸ್ಯಂದನವ ತಡಗಳ್ಯಾಕೆಂದೆನುತ |
ವೀರಮಣಿ ಧನು ಶರವ ಧರಿಸಿ ||
ಭೋರನರಮನೆಯಿಂದ ಪೊರಡೆ ರುಗ್ಮಾಂಗದನು |
ಭೂರಿಸೇನೆಗಳಿಂದ ಬರಲೂ || ೨೩೬ ||
ಭಾಮಿನಿ
ಭೋರಿಡಲು ಕಹಳಾದಿ ವಾದ್ಯವು |
ಭೇರಿ ದುಂದುಭಿರವದಿ ಸೇನಾ |
ವಾರುಧಿಯ ಕೂಡುತ್ತ ದ್ವಾರದಿ ನಿಂದು ಪರಿಕಿಸಲೂ ||
ಶೂರತನದಲಿ ನಿಂದ ರಿಪುಪರಿ |
ವಾರವನು ಪುಡಿಗೈವೆನೆನುತಲಿ |
ವೀರಮಣಿಪದಕೆರಗಿ ರುಗ್ಮಾಂಗದನು ಪೊರವಂಟಾ || ೨೩೭ ||
ರಾಗ ಮಾರವಿ ಏಕತಾಳ
ಧುರಕೈತಹನನು ಕಾಣುತಲಾ ಕ್ಷಣ | ಭರತನ ಸುಕುಮಾರ ||
ಕರದೊಳುಧನು ಝೇಂಕರಿಸುತಲವನೊಳು | ಕೆರಳುತಲಿಂತೆಂದ || ೨೩೮ ||
ಸುರನರ ವಂದಿತ ರಾಮನ ಮೇಧದ | ತುರಗವ ಬಂಧಿಸುತಾ ||
ಧುರಕೈತಂದೆಯ ನಿನಗೆಂದಿಗು ಜಯ | ಬರದೆಲೊ ಸಾರಿದೆನೂ || ೨೩೯ ||
ವಿರಚಿಸಲೆಜ್ಞವನೆನ್ನಯ ಪಿತನಿಗೆ | ಸರಿಸಮನಾಗುವನೆ ||
ಅರಿಯದೆ ಗೈದುದಕೀ ತುರಗವ ನಾ | ಭರದೊಳು ಬಂಧಿಸಿಹೆ || ೨೪೦ ||
ಯಾವ ಪರಾಕ್ರಮಗೈದಿಹ ತವಪಿತ | ನೀ ವಸುಧಾತಲದಿ ||
ಕೇವಲ ಮದಹಂಕೃತಿಯೊಳು ಜೀವವ | ನೀವಿರಿಯಂತಕಗೆ || ೨೪೧ ||
ಹರನನು ಮೆಚ್ಚಿಸಿ ತಪದೊಳಗೆಮ್ಮಯ | ಪುರದೊಳು ನಿಲಿಸಿಹನೂ ||
ಧರೆಯೊಳು ನಿನ್ನಯ ರಾಮನು ಕೀರ್ತಿಯ | ಧರಿಸಿಹುದೇನೆಲವೊ || ೨೪೨ ||
ಜನಕನ ನೇಮದಿ ವಿಪಿನಕೆ ಪೋಗುತ | ದನುಜರ ಕುಲವಳಿದೂ ||
ಮುನಿವರ್ಗವ ಪರಿಪಾಲನೆಗೈದಿಹ | ಚಿನುಮಯ ಶ್ರೀರಾಮಾ || ೨೪೩ ||
ರಾಗ ಭೈರವಿ ಅಷ್ಟತಾಳ
ಅರಿತಿಹೆ ಚರಿತೆಯನೂ | ಸ್ತ್ರೀ ಭ್ರಾಂತಿಯೊ | ಳಿರುತಿಹ ದಶರಥನೂ |
ತೆರಳಿಸೆ ವನಕವ ಷಂಡರಂದದಿ ನಿಂತು | ತರಿದ ವಾಲಿಯ ರಾಮನೂ || ೨೪೪ ||
ಧುರದೊಳು ಸಮ್ಮುಖದಿ | ನಿಂದಗೆ ಜಯ | ಬರದಂತೆ ವರದರ್ಪದಿ |
ಮೆರೆದು ವೇದಾಂಗವನರಿತನುಜನ ಸತಿ | ಬೆರೆದ ದ್ರೋಹಿಯ ಕೊಂದನೂ || ೨೪೫ ||
ಪರಮ ಪರಾಕ್ರಮರೂ | ನಮ್ಮಂದದಿ | ಧರಣಿಯೊಳಾರಿಹರೂ |
ಧುರದೊಳು ಗೆಲ್ದು ಪ್ರಖ್ಯಾತಿ ಪಡೆವೆನೆಂದು | ತುರಗವ ಬಂಧಿಸಿಹೆ || ೨೪೬ ||
ಬಿಟ್ಟುನೀ ತುರಗವನ್ನೂ | ಕಪ್ಪವನೀಗ | ಕೊಟ್ಟರೆ ಜೀವವನ್ನೂ |
ತಟ್ಟನುದ್ಧರಿಪೆನೂ ದಿಟ್ಟ ಪುಷ್ಕಳನೆನ್ನೊ | ಳಟ್ಟಹಾಸಗಳ್ಯಾತಕೊ || ೨೪೭ ||
ರಾಗ ಶಂಕರಾಭರಣ ಮಟ್ಟೆತಾಳ
ಧುರಕೆ ಭಯಗಳಿರಲು ಪಿಂದೆ | ತಿರುಗಿ ಪೋಗು ಹಯವನೀಗ |
ಮರುಳರಂತೆ ಕೇಳಬೇಡೆಂ | ದೆಚ್ಚ ಶರಗಳ || ೨೪೮ ||
ಭರತ ತನಯ ಕೆರಳುತಾಗ | ಬರುವ ಶರವ ಮುರಿದು ಕೆಡಹಿ |
ಪರಿಕಿಸುವೆನು ತೋರು ಸಹಸ | ವೆನುತ ನಿಂದಿರೆ || ೨೪೯ ||
ಕೆರಳಿ ರುಗ್ಮಾಂಗನಾಗ | ಪರಮ ಮಂತ್ರಾಸ್ತ್ರಗಳನು |
ತಿರುಹಿನೊಳಗೆ ಪೂಡುತೆಸೆದ | ಗುರಿಯ ನೋಡುತಾ || ೨೫೦ ||
ಪುಡಿಯಗೈದು ವಿಶಿಖಗಳನು | ದಡಿಗ ಪುಷ್ಕಳಾಖ್ಯನಿರಲು |
ಖಿಡಿಯಸೂಸಿ ನೃಪಕುಮಾರ | ಭಳಿರೆಯೆನ್ನುತಾ || ೨೫೧ ||
ರಾಗ ಭೈರವಿ ಏಕತಾಳ
ತ್ವರಿತದಿ ಮರುತಾಸ್ತ್ರವನೂ | ಹೆದೆ | ಗಿರಿಸುತ ರುಗ್ಮಾಂಗದನು |
ಹರಿಸಲು ಪುಷ್ಕಳ ರಥವಾ | ಪಿಂ | ತಿರುಗಿಸೆ ಶತಯೋಜನವಾ || ೨೫೨ ||
ಸ್ಯಂದನವನು ಪರಿತ್ಯಜಿಸೀ | ನಡೆ | ತಂದನು ಪುಷ್ಕಳ ಸಹಸಿ |
ಕೊಂದುರುಳಿಪೆ ನಾನೀಗ | ಗೆಲು | ವಂದವ ತೋರಿಪೆ ಬೇಗಾ || ೨೫೩ ||
ತ್ವರೆಯೊಳ್ ಭ್ರಾಮಕ ಶರವಾ | ಬೊ | ಬ್ಬಿರಿಯುತಬಿಡೆ ಸ್ಯಂದನವಾ |
ಬರಸೆಳೆದಿನಮಂಡಲದಿ | ರಥ | ಉರಿಯಲು ಕಾಣುತೆ ಭರದಿ || ೨೫೪ ||
ಹರನಡಿಯನು ಧ್ಯಾನಿಸುತಾ | ರಥ | ತೊರೆಯುತಲುರುಳೆ ಮೂರ್ಛಿಸುತಾ |
ಧರೆಯೊಳು ಬೀಳಲ್ಕಾಗ | ಖತಿ | ವೆರಸಿ ಶುಭಾಂಗನು ವೇಗ || ೨೫೫ ||
ರಾಗ ಘಂಟಾರವ ಅಷ್ಟತಾಳ
ಬಾರೆಲೊ ಮೂರ್ಖ ಎನ್ನಗ್ರಭವನನ್ನು |
ಶೂರತನದಲಿ ಗೆಲಿದ ಸಾಹಸ | ತೋರು ತೋರೆಂದೆಚ್ಚನೂ || ೨೫೬ ||
ತರಳನೀನಹೆ ಬೇಡ ಸಂಗರವೀಗ |
ಭರದಿ ನಿನ್ನಯ ಪಿತನ ಕಳುಹೆಂ | ದೊರೆದು ಮುರಿದನು ವಿಶಿಖವಾ || ೨೫೭ ||
ಧುರದಿ ನಿನ್ನಯ ಶಿರವ ಚಂಡಾಡಿದ |
ಪರಿಯ ಕಾಂಬರೆ ಬಹನು ಜನಕನು | ಶರವ ನೋಡೆನುತೆಸೆದನೂ || ೨೫೮ ||
ತುಂಡು ತುಂಡನೆಗೈದು ಪುಷ್ಕಳ ಕೋಪ |
ಗೊಂಡು ಚಾಪವನಾಗ ಭರದಲಿ | ಖಂಡಿಸುತ ಬೊಬ್ಬಿರಿದನೂ || ೨೫೯ ||
ರಾಗ ಮಾರವಿ ಏಕತಾಳ
ಝಳಝಳಿಸುತ ಖಡ್ಗವನು ಶುಭಾಂಗದ | ನಿಳೆಗುರುಳಿಪೆ ಶಿರವಾ ||
ಛಲವಿದ ನೋಡೆಂದೆರಗಲು ಪುಷ್ಕಳ | ಘಳಿಲನೆ ಖಂಡಿಸಿದ || ೨೬೦ ||
ವೀರಾವೇಶದಿ ತಿರುಹುತ ಗದೆಯನು | ಶೂರತ್ವದಿ ಬರಲು ||
ಭೋರನೆ ತುಂಡಿಸಿಯೊಂದೇ ಹತಿಯೊಳು | ಧಾರುಣಿಗಿಕ್ಕಿದನೂ || ೨೬೧ ||
ಮಲ್ಲಯುದ್ಧಕೆ ಮಾರ್ಮಲೆಯೆ ಶುಭಾಂಗನು | ಖುಲ್ಲನೆ ತಾಳೆನುತಾ ||
ಬಿಲ್ಲಿನ ಹತಿಯೊಳು ತಿವಿಯಲು ಮೂರ್ಛನೆ | ಗೊಳ್ಳುತ ಪವಡಿಸಿದ || ೨೬೨ ||
ಭಾಮಿನಿ
ಧರೆಯೊಳಗೆ ಮೂರ್ಛಿಸಿದ ತರಳರ |
ಪರಿಕಿಸುತಲಾ ವೀರಮಣಿ ಕಾ |
ತರಿಸಿಹಂ ಮೈಸುತ್ತದೊಪ್ಪನೆ ಬೀಳುತವನಿಯಲಿ ||
ಪರಿಪರಿಯ ಚಿಂತಿಸುತ ಮೋಹದ |
ಶರಧಿಯೊಳಗಾಳುತ್ತ ಭೂಪತಿ |
ಸುರಿವ ನೇತ್ರೋದಕದಿ ಮಜ್ಜನಗೈದು ಬೆಂಡಾಗಿ || ೨೬೩ ||
ರಾಗ ನೀಲಾಂಬರಿ ರೂಪಕತಾಳ
ತರಳರೆ ನಿಮ್ಮನು ತೊರೆಯುತ | ಧರೆಯೊಳಗಾನೆಂತಿರುವೆನೊ |
ಧುರದೊಳು ನಿಮಗೆಣೆಗಾಣೆಂ | ದಿರುತೀರ್ದೆನು ಶಿವನೆ || ೨೬೪ ||
ಕಟ್ಟಿದನ್ಯಾತಕೆ ತುರಗವ | ಧಿಟ್ಟನು ರುಗ್ಮಾಂಗದನಿವ |
ಕುಟ್ಟುವೆನಹಿತರನೆನ್ನುತ | ಸೃಷ್ಟಿಯೊಳ್ಮಲಗಿಹನು || ೨೬೫ ||
ಬಾಲರ ನುಡಿಗಳ ಕೇಳುತ | ಕಾಳಗಕೊಪ್ಪಿದೆನೇತಕೆ |
ಶೂಲಿಯು ಕೈಬಿಡನೆನುತಲಿ | ತಾಳಿದೆ ಧೈರ್ಯವನೂ || ೨೬೬ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಮರುಗುತಿಹನನು ಕಂಡು ಪುಷ್ಕಳ | ಕೆರಳಿ ವೀರಾವೇಶದಿಂದಲಿ |
ಧುರಕೆನಿಂದೀ ಪರಿಯ ಶೋಕಿಪೆ | ತರುಣಿಯಂತೆ || ೨೬೭ ||
ತುರಗವನು ಬಿಟ್ಟೀಗ ಕಪ್ಪವ | ಚರಣಕರ್ಪಿಸೆ ನಿನ್ನನೀ ಕ್ಷಣ |
ಪೊರೆಯುವೆವು ಮೂರ್ಖತ್ವವೇತಕೊ | ತೆರಳು ಪುರಕೆ || ೨೬೮ ||
ಧೀರರಾವ್ ಧುರಗೈವೆವೆನ್ನುತ | ಮಾರುತಿಯೊಳುಸುರುತ್ತ ಕಳುಹಿದೆ |
ಮೂರುಕಣ್ಣವನೆಲ್ಲಿ ಪೋದನು | ದಾರ ಭಟನು || ೨೬೯ ||
ಕ್ಷತ್ರಿಯನು ರಣರಂಗ ಮಧ್ಯದೊ | ಳತ್ತು ಶಿರಬಾಗಿಪುದು ಲಂಡಿಯ |
ಕೃತ್ಯವೆನ್ನರೆ ಧುರಕೆ ಧನು ನೆಗ | ಹುತ್ತ ಲೇಳೂ || ೨೭೦ ||
ರಾಗ ಮಾರವಿ ಏಕತಾಳ
ಖಿಡಿಖಿಡಿಯಾಗುತ ಪೊಡವಿಪ ರೋಷದಿ | ಘಡುಘುಡಿಸುತಲಾಗ ||
ದಡಿಗತನವನಾ ನೋಳ್ಪೆನು ತನುಜರ | ಮಡುಹಿದ ಪಾತಕಿಯೆ || ೨೭೧ ||
ಕರಚಮತ್ಕಾರವನೆನ್ನೊಳು ತೋರೆಂ | ದುರವಣಿಸುತ ಭರದಿ ||
ಎರಗಿದ ವಿಶಿಖಾವಳಿಯೊಳು ಪುಷ್ಕಳ | ನುರುತರ ಕ್ರೋಧದಲಿ || ೨೭೧ ||
ಫಡ ಫಡ ಬಾಲಕನಿನ್ನೆಸುಗೆಗೆ ಹಿಂ | ದಿಡುವೆನೆ ಚರಣವನು ||
ಕಡುವಿಕ್ರಮ ನೋಡೆನುತಲಿ ವಿಶಿಖವ | ಪುಡಿಗೈದುರುಳಿಸಿದ || ೨೭೨ ||
ವೀರಮಣಿಯೆ ನಾ ಪೇಳುವೆ ಸಮರದಿ | ಬಾರದು ಜಯ ನಿನಗೆ ||
ಭಾರಿ ವಿರೋಧವ ಬೆಳಸುವೆ ವ್ಯರ್ಥದಿ | ಸಾರಿದೆ ಕೆಡಬೇಡ || ೨೭೩ ||
ಭಾಮಿನಿ
ಧರೆಯೊಳಾವತಿ ಬಲರುಯೆನ್ನುತ |
ಬರೆದು ಲೇಖನ ಹಯದ ಫಣೆಯೊಳು |
ಧುರ ಬಲಾಢ್ಯರು ಕಟ್ಟಿ ಕಾದುವದೆನುತ ಬಿಗಿದುದಕೆ ||
ಶರದೊಳೆಮ್ಮಯ ಸತ್ವ ತೋರ |
ಲ್ಕರಿಗಳಾದೆವು ಸೋಲು ಗೆಲುನೀ |
ನೊರೆಯೆ ವಿಧಿಯಲ್ಲೆಲವೊ ಪೇಳುವದೇಕೆ ಫಡ ಮರುಳೆ || ೨೭೪ ||
ರಾಗ ಭೈರವಿ ಅಷ್ಟತಾಳ
ವಿಧಿಗಂಜದಿಹ ಭಟರೂ | ಕೀರ್ತಿಯಗೊಂಡ | ತರಣಿವಂಶದ ಭೂಪರು |
ಧುರದೊಳಾರಿಗು ಸೋಲ್ವದುಂಟೆ ಗರ್ವಿಪುದೇಕೊ |
ಮರುಳು ನೀನೆ ಸಹಜ || ೨೭೫ ||
ಧುರದೊಳಗೀವರೆಗೆ | ಬಲಾಢ್ಯರು | ದೊರಕಲಿಲ್ಲೈ ನಿಮಗೆ |
ನಿರುತ ನಾನೊದಗಿಹೆ ತರಣಿವಂಶದ ಗರ್ವ |
ಮುರಿವೆನು ಕ್ಷಣದೊಳಗೆ || ೨೭೬ ||
ನೋಡೆನೀ ಪ್ರಾಜ್ಞನೆಂದೂ | ಕಾಂಬುದು ಛಲ | ಮಾಡಬೇಡವೊ ನೀನಿಂದೂ |
ಗಾಢದಿ ತುರಗವನೊಹಿಸಿ ಕಪ್ಪವನಿತ್ತು |
ಬೇಡಿಕೊ ಸಖ್ಯವನ್ನು || ೨೭೭ ||
ಪರಿಕಿಸೆ ಶೂರನೆಂದೂ | ಕಾಂಬೆಯ ನೀನು | ಧುರಕೀಗಲೆದುರು ನಿಂದು |
ತುರಗವ ಕೇಳುವೆ ಸೆರಗೊಡ್ಡಿ ಬೇಡಲು |
ಕರುಣದಳೀಯುವೆನೂ || ೨೭೮ ||
ರಾಗ ಕೇತಾರಗೌಳ ಝಂಪೆತಾಳ
ಇಷ್ಟು ಪೌರುಷವಿರುತಿರೆ | ನಿನ್ನ ಶಿರ | ಕುಟ್ಟಿ ಕೆಡಹುವೆನಾ ಖರೆ |
ದುಷ್ಟ ಇದಿರಾಗೆನ್ನುತಾ | ಪುಷ್ಕಳನು | ಬಿಟ್ಟ ಶರಗಳ ಗಜರುತಾ || ೨೭೯ ||
ಪುಡಿಗೈದು ಭೂಪನಾಗ | ಬಹ ಶರವ | ಪಡವಿಯೊಳ್ ಕೆಡಹಿ ಬೇಗಾ |
ಪಿಡಿದು ಧನುವನು ಚೂರ್ಣಿಸಿ | ಶರಗಳನು | ಬಿಡು ಬಿಡೆಂದನು ಘರ್ಜಿಸಿ || ೨೮೦ ||
ತ್ವರಿತದಿಂದನ್ಯ ಧನುವಾ | ಪುಷ್ಕಳನು | ಕರದಿ ಕೊಳ್ಳುತಲಸ್ತ್ರವಾ |
ಗುರಿಯ ಪೂಡುತಲೆಸೆಯಲು | ಚಾಪಮಂ | ಮುರಿಯೆ ಮತ್ತೆರಡನೆಯೊಳು || ೨೮೧ ||
ಖಿಡಿಗೆದರುತಾಗ ಭರದಿ | ಪುಷ್ಕಳನು | ಪಿಡಿದು ಖಡ್ಗವ ರೋಷದಿ |
ಕಡಿವೆ ಶಿರವೆಂದೆನುತಲಿ | ಬರಲದನು | ಪುಡಿಗೈದನರೆ ಕ್ಷಣದಲಿ || ೨೮೨ ||
ಭಳಿರೆ ಭಾಪುರೆಯೆನ್ನುತಾ | ಕರದಿ ಗದೆ | ಗೊಳುತ ವಿಕ್ರಮ ತಾಳುತಾ |
ಘಳಿಲನೈತರಲದರನು | ಕಸಿದು ಶಿರ | ಕೊಲೆದು ಭೂಮಿಪನೆಚ್ಚನೂ || ೨೮೩ ||
ಭಾಮಿನಿ
ಶಿರವ ಕಂಪಿಸುತಾಗ ಪುಷ್ಕಳ |
ಧರೆಯೊಳಗೆ ಪವಡಿಸಲು ಶತ್ರುಹ |
ಕೆರಳಿ ವೀರಾವೇಶದಿಂದಲಿ ಸಿಂಹನಾದದೊಳು ||
ದುರುಳನೀತನ ಮಡುಹದಿರೆ ರಘು |
ವರನ ಸೋದರನಲ್ಲ ತಾನೆಂ |
ದುರುತರಾಸ್ತ್ರವ ಪೂಡಿ ಮುಸುಕಿದನರಿಭಟಾಗ್ರಣಿಯಾ || ೨೮೪ ||
ರಾಗ ಶಂಕರಾಭರಣ ಮಟ್ಟೆತಾಳ
ಕಣೆಯ ಮುರಿದುವೇಗ ವೀರ | ಮಣಿಯು ಕ್ರೋಧದಿಂದ ಪೇಳ್ದ |
ನೆಣಿಸಬೇಡ ಬಡ ನೃಪಾಲ | ರಣವಿದೆನ್ನುತಾ || ೨೮೫ ||
ಇರಲು ಶ್ರೀರಾಮ ಕರುಣ | ಧುರದೊಳೇನು ಗಣ್ಯ ನಿನ್ನ |
ನರಿವೆನಣುವಿನಂತೆ ಧೂರ್ತ | ಪರಿಕಿಸೆಂದನೂ || ೨೮೬ ||
ನರನು ನಿನ್ನ ರಾಮನವನ | ಕರುಣದಿಂದಲಾಪುದೇನು |
ನಿರುತ ದೈವಬಲಗಳಿರಲು | ಗೆಲುವೆನೆನ್ನೆಲಾ || ೨೮೭ ||
ನರಗೆ ಪೌರುಷಂಗಳಧಿಕ | ಬರದು ವಿಧಿಗಳಿಂದ ಜಯವು |
ಮರೆಯಬೇಕು ಶೌರ್ಯ ಧೈರ್ಯ | ನುರು ಪ್ರತಾಪದಿ || ೨೮೮ ||
ರಾಗ ಭೈರವಿ ಅಷ್ಟತಾಳ
ಹಿಂದೆ ದಶಾಸ್ಯನನ್ನೂ | ದೈವದ ಬಲ | ದಿಂದರಿದಿಹ ರಾಮನು |
ಎಂದಿಗು ಪೌರುಷದಿಂದಲ್ಲವನ ಚರ | ಮಂದಿಗಳೊಡಗೂಡುತ್ತಾ || ೨೮೯ ||
ಕೇಳೊ ಕೌಶಿಕ ಪೂರ್ವದಿ | ಪೌರುಷದಿ | ಮೇಲಾಗಿಹ ಋಷಿಪದದಿ |
ಮೂಲೋಕದೊಳು ಖ್ಯಾತಿಗೊಂಡಿಹ ಶೌರ್ಯವೆ | ಕಾಳಗಕಧಿಕವೆಂದ || ೨೯೦ ||
ಬಲ್ಲೆಯ ನಹುಷನನ್ನೂ | ಪೌರುಷ ಬಲ | ದಲ್ಲಿ ಭೂಲೋಕವನ್ನೂ |
ಉಲ್ಲಾಸದೊಳಗಾಳಿ ವಿಧಿಯಿಂದ ದುರ್ಗತಿ | ಯಲ್ಲಿ ಬಿದ್ದಿಹನಂತ್ಯದಿ || ೨೯೧ ||
ಒರೆವೆ ಕೇಳ್ನಿನ್ನಂದದಿ | ದುರ್ವಿಷಯಾದಿ | ಚರಿಸುವ ಮನ ಶೌರ್ಯದಿ |
ತಿರುಗಿಸಲುತ್ತುಮ ಕಾರ್ಯದೊಳಾ ವಿಧಿ | ಬರದೀತನೆಡಬಲಕೆ || ೨೯೨ ||
ದುಷ್ಟ ನಿನ್ನಯ ರಾಮನು | ಪತಿವ್ರತೆ | ಪಟ್ಟದ ರಾಣಿಯನ್ನೂ |
ಕೆಟ್ಟ ಜನರ ಮಾತಿಗಾಗಿಯರಣ್ಯಕೆ | ಅಟ್ಟಿದನ್ಯಾಕವನೂ || ೨೯೩ ||
ಭಾಮಿನಿ
ಮುನಿಪರಾಶ್ರಮಕೈಯ್ಯಬೇಕೆಂ |
ದೆನುತ ಸತಿಯನು ರಾಮ ಕಳುಹಿಸಿ |
ದನುವನರಿಯದೆ ಪೇಳ್ವೆ ಮೂಲ ವಿ ಚಾರ ನಿನಗಿಹುದೆ ||
ಮನುಜನಿಂಗೆ ವಿಚಾರವೆಂಬುದು |
ಮನದಿ ಬರೆಯತಿದೂರ ವಸ್ತುವ |
ಕ್ಷಣದಿ ಸಾಮಿಪ್ಯದಲಿ ಕಾಂಬನು ಹಯವ ಬಿಡು ಬೇಗಾ || ೨೯೪ ||
ರಾಗ ಮಾರವಿ ಏಕತಾಳ
ಮೊದಲೆ ವಿಚಾರದಿ ಹಯವನು ಬಂಧಿಸಿ | ಕದನಕೆ ನಿಂದಿಹೆನೂ ||
ಸದೆದೀ ಕ್ಷಣ ನಿನ್ನಸುವನೆ ತೊಲಗಿಸಿ | ಮುದದೊಳು ತೆರಳುವೆನೂ || ೨೯೫ ||
ಛಲವಿರೆ ನಿನಗೀ ಪರಿಯಲಿ ಧನುವನು | ಘಳಿಲನೆ ಧರಿಸೀಗಾ ||
ಕಳುಹುವೆನಂತಕನೆಡೆಗೀ ಕ್ಷಣವೆ | ನ್ನೊಲವನೆ ನೋಡೆಂದಾ || ೨೯೬ ||
ವೀರಮಣಿಯು ಹೂಂಕರಿಸುತಲಾ ಕ್ಷಣ | ನಾರಾಚವನುಗಿದೂ ||
ಭೋರನೆ ಶತ್ರುಹಗೆಸೆಯಲು ತುಂಡಿಸಿ | ಧಾರುಣಿಗಿಕ್ಕಿದನೂ || ೨೯೭ ||
ಕೆರಳುತಲಕ್ಷಯ ಶರವಭಿಮಂತ್ರಿಸಿ | ಗುರಿಯೊಳು ಬಿಡಲಾಗ ||
ಮುರಿದನು ಕಾಲಾಂಜನದೊಳು ಶತ್ರುಹ | ಪರಮ ಪರಾಕ್ರಮದಿ || ೨೯೮ ||
ಅರರೇ ತಾಳೆಂದೆನುತಲಿ ಭೈರವ | ಶರಮಂ ಪೂಡುತಲಿ ||
ಹರಿನಾದದಿ ಬಿಡೆ ಕಾಲಪ್ರಭಂಜನಿ | ಶರದೊಳು ತುಂಡಿಸಿದ || ೨೯೯ ||
ಜ್ವಲಿಸುವ ಘೋರ ಕಪರ್ದಿನಿ ಬಾಣವ | ಘಳಿಲನೆ ಬಿಡಲಾಗ ||
ಅರರೆ ಸಾಹಸಿಯೆನ್ನುತ ಶತ್ರುಹ | ಮುರಿದನು ಪ್ರಶಮನದಿ || ೩೦೦ ||
ಪೂಡಲು ಸಂವರ್ತದ ಮಾರ್ತಾಂಡವ | ನೋಡುತ ಶತ್ರುಹನೂ ||
ಗಾಢದಿ ಯೋಗಿನಿದತ್ತದ ಶಕ್ತಿಯ | ರೂಢಿಪನೆದೆಗೆಸೆಯೆ || ೩೦೧ ||
ಭಾಮಿನಿ
ಉರಿಯ ಸೂಸುತಲಾಗ ಶಕ್ತಿಯು |
ಧರಣಿಪನ ಉರವನ್ನೆ ಭೇದಿಸೆ |
ಸುರಿವ ರುಧಿರಾರ್ಣವದಿ ಚಲಿಸುತ ಬಿದ್ದನವನಿಯಲಿ ||
ಪರಿಕಿಸುತ ಸೇನೆಗಳು ಕಂಪಿಸಿ |
ತೆರಳೆ ದಿಗ್ದೆಸೆಗಾಗ ಶತ್ರುಹ |
ಧುರಕೆ ಬಹರಿನ್ನಾರು ಕಾಂಬೆನೆನುತ್ತ ನಿಂದಿರಲು || ೩೦೨ ||
ವಾರ್ಧಕ
ಮೃಡನ ದ್ವಾದಶಕೋಟಿ ಪ್ರಮಥಗಣ ಸೇನೆಯೊಳ್ |
ದಡಿಗರಾಗಿಹ ನಂದಿ ಭೃಂಗಿ ಘಂಟಾಕರ್ಣ |
ಕಡುಬಲಾಢ್ಯ ಸುಘೋಷದಂಡಿ ದಂಷ್ಟ್ರೋಜ್ವಲಂ ಧೂಮ್ರಕೇಶ ಕರಾಳನೂ ||
ಸಿಡಿಲ ಘರ್ಜನೆಯಂತೆ ಭೋರ್ಗುಡಿಸುತೈತಂದು |
ಬಡಿದು ಭುಜಯುಗ್ಮಮಂ ಶತ್ರುಹನ ಸೈನ್ಯಮಂ |
ತಡೆದು ದಮನ ಸುಬಾಹು ಲಕ್ಷ್ಮಿನಿಧಿ ಮುಖ್ಯರಂ ಪೊಡವಿಗುರುಳಿಸೆ ಕ್ರೋಧದಿ || ೩೦೩ ||
ರಾಗ ಘಂಟಾರವ ಅಷ್ಟತಾಳ
ಕಂಡು ಮಾರುತಿ ಭೋರ್ಗರದಕ್ಷಿಯೊಳ್ |
ಕೆಂಡವನು ಸುರಿಸುತ್ತ ಕಲ್ಮರ | ಗೊಂಡು ಗಣಗಳ ಬಡಿದನೂ || ೩೦೪ ||
ಆರೆಲೊ ಕಪಿ ನಿನ್ನ ಪರಾಕ್ರಮ |
ತೋರುವೆಯ ಎಮ್ಮೊಳಗೆನುತ್ತಲಿ | ಭಾರಿ ಶೂಲದೊಳಿರಿದರೂ || ೩೦೫ ||
ಕೆರಳೆ ಶೂಲವ ಮುರಿದಿಕ್ಕಿ ಮಾರುತಿ |
ಎರಗಿದನು ಮುಷ್ಟಿಯಲಿ ಪ್ರಮಥರ | ಶಿರಕೆ ಲಂಘಿಸುತಾಗಳೂ || ೩೦೬ ||
ಕೆಟ್ಟಕೋಡಗವೆನ್ನುತ್ತ ದಮರುಗ |
ಪಟ್ಟಸವು ಮುದ್ಗರ ಶತಘ್ನಿಯೊ | ಳಟ್ಟಿ ಪೊಯ್ಯಲು ಮುರಿಯುತಾ || ೩೦೭ ||
ಸುತ್ತಿವಾಲದಿ ಗಣಗಳ ಮಾರುತಿ |
ಯೆತ್ತಿ ತೂಗುತ ರಜತಶೈಲಕೆ | ಶಕ್ತಿಯೊಳು ತೆಗದೆಸೆದನೂ || ೩೦೮ ||
ಭಾಮಿನಿ
ಧಾರುಣಿಯೆ ಸೀಳಾಗುವಂದದಿ |
ಮೇರು ಮಗಚುವತೆರದಿ ಘೋರಾ |
ಕಾರದೊಳಗಾ ವೀರಭದ್ರನು ಸಿಂಹನಾದದಲಿ ||
ಭಾರಿ ಶೂಲವ ಪಿಡಿದು ರೋಷದಿ |
ಭೋರನೈತಂದಾಗ ಮರುತಕು |
ಮಾರನನು ಮಾರ್ಮಲೆತು ತಿವಿದನು ನಿಲ್ಲು ನಿಲ್ಲೆನುತಾ || ೩೦೯ ||
ರಾಗ ಮಾರವಿ ಏಕತಾಳ
ದಿಟ್ಟತನದೊಳಾ ಮಾರುತಿ ವೇಗದಿ | ಮುಷ್ಟಿಯ ಬಲಿಯುತಲಿ ||
ಕುಟ್ಟಿದನೊಂದಕ್ಕೆಂಟರ ಸಂಖ್ಯೆಯೊ | ಳಟ್ಟಹಾಸದೊಳಾಗ || ೩೧೦ ||
ಉರಿಗಿಡಿಗಳ ನಿಟಿಲಾಕ್ಷಿಯೊಳ್ಕೆಡಹುತ | ತಿರುಹಿ ತ್ರಿಶೂಲವನೂ ||
ಮರುತಜನುದರಕೆಯಿರಿಯಲು ಪಿಡಿದದ | ಮುರಿದನು ವಿಕ್ರಮದಿ || ೩೧೧ ||
ಪಿಡಿದು ಖಟ್ವಾಂಗವ ವೀರಭದ್ರನು ಪ | ಲ್ಗಡಿಯುತ ರೋಷದಲಿ ||
ಕಡೆಗಾಲವು ನಿನಗೊದಗಿಹುದೆನ್ನುತ | ಬಡಿದನು ಭೋರ್ಗುಡಿಸಿ || ೩೧೨ ||
ಪುಡಿಗೈಯುತ ಖಟ್ವಾಂಗವ ಮಾರುತಿ | ದಡಿಗನೆ ನಿಲ್ಲೆನುತಾ ||
ಸಿಡಿಲಂದದಿ ಮುಷ್ಟಿಯೊಳೆದೆಗೆರಗಲು | ಪೊಡವಿಯೊಳುರುಳಿದನೂ || ೩೧೩ ||
Leave A Comment