ಶಾರ್ದೂಲವಿಕ್ರೀಡಿತ ವೃತ್ತ

ಶ್ರೀರಾಮಂ ಕರುಣಾಕರಂ ಗುಣನಿಧಿಂ | ಲೋಕೇಶ್ವರಂ ಧಾರ್ಮಿಕಂ |
ಶ್ರೀ ಕಲ್ಯಾಣಗುಣಾರ್ಣವಂ ರಘುಪತಿಂ | ಸೀತಾಪತಿಂ ಸುಂದರಂ ||
ಶ್ರೀ ಸಾಕೇತಪುರಾಧಿಪಂ ಖಳರಿಪುಂ | ಕೋದಂಡಪಾಣಿಂ ವಿಭುಂ |
ರಾಕಾಚಂದ್ರ ಸಹಸ್ರತೇಜವಪುಷಂ | ಧ್ಯಾಯಾಮಿ ವಿಶ್ವಾತ್ಮಕಂ || ೧ ||

ರಾಗ ನಾಟಿ ಝಂಪೆತಾಳ

ಜಯ ಜಯತು ಗಜವದನ | ಜಯತು ಪನ್ನಗಭರಣ |
ಜಯತು ಧೂಮಲವರ್ಣ | ಜಯ ಶೂರ್ಪಕರ್ಣಾ ||
ಜಯ ಜಯತು | ಜಯತೂ || ೨ ||

ಸುರನರೋರುಗ ನಮಿತ | ಕರಿಮುಖನೆ ಮಾಂ ಪಾಹಿ |
ದುರಿತದೂರ ನಮೋಸ್ತು | ಗಿರಿಜಾತೆಯಣುಗಾ ||
ಜಯ ಜಯತು | ಜಯತೂ || ೩ ||

ವಿಘ್ನಾರಣ್ಯದವಾಗ್ನಿ | ವಿಘ್ನಾದ್ರಿಕುಲಿಶ ಜಯ |
ವಿಘ್ನಾಂಧಕಾರ ರವಿ | ವಿಘ್ನೇಶ ಪಾಹೀ ||
ಜಯ ಜಯತು | ಜಯತೂ || ೪ ||

ಭಾಮಿನಿ

ಗಿರಿಕುಮಾರಿ ಮಹೇಶಿ ಶಾಕಂ |
ಬರಿ ಲಲಿತೆ ತ್ರಿಪುರೇಶಿ ಭಗವತಿ |
ಸ್ತಿರಚರಾತ್ಮಿಕೆ ದೇವಿ ಭ್ರಾಮರಿ ಚಂಡಿ ವಾರಾಹಿ ||
ದುರಿತದೂರೆ ಕುಮಾರಿ ವಿಶ್ವಂ |
ಬರೆ ಕಪಾಲಿನಿ ದುರ್ಗಿ ರಾಜೇ |
ಶ್ವರಿ ಜಯತು ಶ್ರೀಚಕ್ರವಾಸಿನಿ ವರದೆ ಮಾಂ ಪಾಹಿ    || ೫ ||

ದ್ವಿಪದಿ

ಹರಿಹರಬ್ರಹ್ಮ ದಿಕ್ಪಾಲರನು ನುತಿಸಿ ||
ಸಿರಿಗೌರಿ ವಾಗ್ದೇವಿ ಕವಿಗಳನು ಭಜಿಸಿ        || ೬ ||

ಜನಕ ಜನನಿಯರಡಿಗೆ ತಲೆವಾಗಿ ಮುದದಿ ||
ಮನುಮುನಿ ನವಗ್ರಹರಿಗೆರಗಿ ಸಂತಸದಿ      || ೭ ||

ಅರಿತತೆರ ಕೃತಿಗೈವೆನೆಕ್ಷಗಾನದಲಿ ||
ನರಹರಿಯ ಸತ್ಕರುಣದಿಂದ ವಹಿಲದಲಿ      || ೮ ||

ಪಿಂದೆ ಮಹಶೇಷ ವಾತ್ಸಾಯನಾಖ್ಯನಿಗೆ ||
ಚೆಂದದಿಂ ಪೇಳ್ದ ಶ್ರೀರಾಮಕಥೆಯೊಳಗೆ      || ೯ ||

ದಶಶಿರಾದ್ಯರನರಿದು ದುರಿತವೆಂದೆಣಿಸಿ ||
ದಶರಥಾತ್ಮಜ ವಾಜಿಮೇಧವನು ಕರಿಸಿ       || ೧೦ ||

ಧರೆಯೊಳಖಿಳ ನೃಪಾಲರನು ಗೆಲಿದ ಕಥೆಯಾ ||
ಅರುಹಿದಂದವ ಪೇಳ್ವೆ ಪುಣ್ಯ ಕೀರ್ತನೆಯಾ  || ೧೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹಿಂದೆ ವಾತ್ಸಾಯನ ಮುನೀಶನು | ಬಂದು ಮಹಶೇಷನಿಗೆ ವಂದಿಸು |
ತೆಂದ ಮಹಿಮನೆ ಪೇಳು ಭವಹರಿ | ಪಂದಗಳನೂ     || ೧೨ ||

ಸರಸಿಜಾಕ್ಷನ ಚರಿತೆಯೊಳು ರಘು | ವರನು ಹಯಮೇಧವನು ಗೈದಿಹ |
ಪರಕೆ ಮೋಕ್ಷವ ನೀವುದನು ವಿ | ಸ್ತರಿಪುದೆನಲೂ       || ೧೩ ||

ಅಸ್ತೆನುತ ಮಹಶೇಷ ಮುನಿಪನ | ಉತ್ತಮಾಸನವಿತ್ತು ಮನ್ನಿಸಿ |
ಅರ್ತಿಯೊಳು ಶ್ರೀರಾಮನನು ನೆನ | ಯುತ್ತ ಪೇಳ್ದ     || ೧೪ ||

ಧುರದಿ ರಾವಣ ಕುಂಭಕರ್ಣರ | ತರಿದು ಸಾಕೇತಕ್ಕೆ ವಹಿಲದಿ |
ತೆರಳಿ ನೃಪತನ ವಹಿಸಿ ರಾಘವ | ನಿರಲು ಸುಖದಿ     || ೧೫ ||

ರಾಗ ಕೇತಾರಗೌಳ ಅಷ್ಟತಾಳ

ಹರುಷದೊಳನುಜಾತರೊಡಗೂಡಿ ರಘುರಾಮ | ಹರಿತಂದೋಲಗದೊಳಗೆ |
ಪರಮ ಸಿಂಹಾಸನವೇರಿ ಸಾಮಂತರ | ನೆರವೀಯ ಮನ್ನಿಸುತಾ         || ೧೬ ||

ಕುಶಲಿಗಳೆ ನೃಪವರರು ಕುಳ್ಳಿರಿ ನೀವೆಂ | ದುಸುರುತ್ತ ಪ್ರೀತಿಯೊಳು |
ಎಸೆವ ಸಭಿಕರ ಕ್ಷೇಮವ ಕೇಳಿಹನುಜರೊ | ಳುಸುರಿದ ಕಾರುಣ್ಯದಿ        || ೧೭ ||

ಆಳಿದ ಪೂರ್ವರಾಯರ ಸತ್ಕೀರ್ತಿಗಳನ್ನು | ಪಾಳು ಮಾಡದೆ ಧರ್ಮದಿ |
ಪಾಲನೆಮಾಳ್ಪುದಿದೆಮ್ಮ ಕರ್ತವ್ಯಗಳ್ | ಮೇಲಾದ ಸಂಪದವು  || ೧೮ ||

ಆದಿಯೊಳ್ ವರ್ಣಧರ್ಮಗಳ ವಿಚಾರವು | ಕ್ರೋಧ ಮತ್ಸರವನೀಗಿ |
ಮೇದಿನಿಯೊಳು ಸರ್ವರೊಮ್ಮನದೊಳು ನಿತ್ಯ | ಮೋದದೊಳಿರಿಸುವದೂ          || ೧೯ ||

ಹಿತದಿಂದ ಪ್ರಜೆಯನಾತ್ಮಜರಂತೆ ಕಾಣುತ್ತಾ | ಪೃಥಿವಿಯುತ್ಪನ್ನದೊಳು |
ಮಿತವರಿದಾರನೆಯೊಂದಂಶ ಕೊಂಬುದು | ಸ್ಮೃತಿ ಸಿದ್ಧವಾಗಿಹುದು       || ೨೦ ||

ದುಷ್ಟರ ದಂಡಿಸಿ ಶಿಷ್ಟಪಾಲನೆಗೈದ | ಸೃಷ್ಟಿಪ ರಾಷ್ಟ್ರದೊಳು |
ವೃಷ್ಟಿಗಳಾಗಿ ದುರ್ಭಿಕ್ಷ ದುರಾಚಾರ | ನಿಟ್ಟಿಸಿ ನೋಡದೈಸೆ      || ೨೧ ||

ಭಾಮಿನಿ

ಕ್ಷತ್ರಿಯೋದ್ಭವನಿಂಗೆ ದೇವರು |
ಪೃಥ್ವಿಯಮರರೆ ಮಾನ್ಯವೀಯುತ |
ಲರ್ತಿಯೊಳು ಪೂಜಿಪುದು ಮನನೋಯಿಸದೆ ಸಂತಸದಿ ||
ಮತ್ತೆ ದ್ವಿಜರಾಶಿಷವೆ ಯೋಗ್ಯವೆ |
ನುತ್ತ ರಾಘವ ವಿಶ್ರವಸು ಮುನಿ |
ಪುತ್ರರೊಧೆಗಳುಕುತ್ತ ತನ್ನಯ ಮನದಿ ಚಂಚಲಿಸೆ      || ೨೨ ||

ವಾರ್ಧಕ

ಅನಿತರೊಳ್ ರಾಘವನ ದರ್ಶನೋತ್ಸಕದಿಂದ |
ಮುನಿಕುಂಭಸಂಭವಂ ಶಿಷ್ಯಜನರೊಡಗೂಡಿ |
ಘನತೆಯೊಳಗೈತರಲ್ ದ್ವಾರಪಾಲಕರರಿತು ಹರಿತಂದು ಬಿನ್ನೈಸಲು ||
ಚಿನುಮಯಾತ್ಮಕ ರಾಮನಧಿಕ ಸಂಪ್ರೀತಿಯಿಂ |
ಘನ ಜವದೊಳೈತಂದು ಋಷಿವರಂಗಭಿನಮಿಸಿ |
ವಿನಯದಿಂ ಹಸ್ತಲಾಘವದಿಂದಲೊಳೆಯಿಂಕೆ ಕರೆತಂದು ಕುಳ್ಳಿರಿಸುತಾ   || ೨೩ ||

ರಾಗ ಸಾಂಗತ್ಯ ರೂಪಕತಾಳ

ಹರುಷದೊಳರ್ಘ್ಯಪಾದ್ಯೋಪಚಾರವ ಗೈದು | ಸರಸಿಜಾಂಬಕ ಭಕ್ತಿಯಿಂದ ||
ಬರವೇನುಯಪರೂಪ ದರ್ಶನವಿತ್ತೆನ್ನ | ಪರಮಧನ್ಯನ ಗೈದಿರೆಂದಾ      || ೨೪ ||

ಇರದು ಕಾರ್ಯಗಳೇನು ದರ್ಶನೋತ್ಸಕದಿಂದ | ಹರಿತಂದೆ ರಘುಕುಲನಾಥ ||
ಪರಮಾತ್ಮ ನಿನ್ನಂತರಂಗದೊಳ್ ಕೊರತೆಗ | ಳಿರುವಂತೆ ಕಾಂಬುದಿದೇನು        || ೨೫ ||

ನುಡಿನಡೆ ಮುಖಭಾವಂಗಳ ನೋಡಿ ಪ್ರಾಜ್ಞರು | ಒಡಲೊಳಗಿರುವ ಚಿತ್ತವನೂ ||
ಪುಡುಕುವರೈಸೆ ನಾನರಿತುದ ಪೇಳಿಹೆ | ಜಡಜಾಕ್ಷ ಕೇಳು ಸಂತಸದಿ     || ೨೬ ||

ಕೊರತೆಗಳಂತರಂಗದೊಳಿರೆ ಪ್ರಾಜ್ಞನು | ಮರೆಮಾಚೆ ಪೊಸನುಡಿಗಳನೂ ||
ಕೊರಳ ಮೇಲಿನ ಪುಸಿನಗೆಯಿಂದ ಪರರಿಂಗೆ | ಅರಿಯದಂದವ ಮಾಳ್ಪೆನಯ್ಯಾ    || ೨೭ ||

ಭಾಮಿನಿ

ಬೇರ ಕತ್ತರಿಸೀರ್ಪ ಮಲ್ಲಿಕ |
ಚಾರು ಕೋಮಲ ಲತೆಯ ಪರಿಕಿಸೆ |
ನೀರಜಾಕ್ಷನೆಯದರ ವಿಭ್ರಮ ತೋರುತಿಹುದೈಸೆ ||
ಪಾರಮಾರ್ಥವ ಪೇಳು ಕೊರತೆಯ |
ಕಾರಣವ ನೀನೆನಲು ರಘುಕುಲ |
ವೀರಕುಂಭೋದ್ಭವಗೆ ಬಿನ್ನೈಸಿದನು ವಿನಯದಲಿ       || ೨೮ ||

ರಾಗ ಕಾಂಭೋಜಿ ಝಂಪೆತಾಳ

ಕೇಳು ಮುನಿಪತಿ ದಯದಿ | ಮಾನವನು ಸಂಸಾರ |
ಕಾಳಸರ್ಪದ ವಿಷದಿ | ಜ್ವಲಿಪ ದೇಹದೊಳು ||
ಕಾಲಕರ್ಮದೊಳಧಿಕ ವಲ್ವವಹುದೊಮ್ಮೆಯೊಳು |
ಪೇಳಲ್ಯಾಕೀ ವ್ಯಥೆಯ | ಶೀಲ ಸದ್ಗುಣನೆ      || ೨೯ ||

ನಸುನಗುತ ಮುನಿವರನು | ವಸುಧೆ ಭಾರವ ಹರಿಸೆ |
ಅಸುರಹರ ಜನಿಸೀರ್ಪೆ | ವ್ಯಸನ ನಿನಗಿಹುದೆ ||
ಪಸರಿಸಿದ ಲೋಕಜನಕಿದುವೆ ದುಃಖಗಳಿಹುದು |
ಬಿಸಜಾಕ್ಷ ನಿನಗಲ್ಲ ಪೇಳ್ವುದೇಕಿನಿತೂ        || ೩೦ ||

ಪರಮ ಪೂಜ್ಯರೆ ನಾನು ನರನಾದಮೇಲೆನಗೆ |
ಕೊರತೆ ತಪ್ಪುವದುಂಟೆ | ನೃಪತಿಯಾಗಿಹೆನೂ ||
ಪರಿಜನರ ಪುರಜನರ | ಪೊರೆವ ಚಿಂತೆಗಳಿಹುದು |
ಹರುಷವೆಂದಿಗೊ ಕಾಣೆ | ಪರಿಗ್ರಹಿಸಿ ನೋಡೂ         || ೩೧ ||

ರಾಗ ಬೇಗಡೆ ಆದಿತಾಳ

ಬಲ್ಲೆ ವಿಶ್ವಾಧೀಶ ರಘುವರನೇ | ನರ ನೀನು ಧಾತ್ರಿಯ |
ವಲ್ಲಭನು ಚೈತನ್ಯ ವಿಗ್ರಹನೆ |
ಎಲ್ಲರರಿವರು ಚಕ್ರಪತಿಕರ | ಸಲ್ಲಿಪರು ಸಾಮಂತ ಭೂಪರು |
ಇಲ್ಲ ನಿನಗೆಣೆ ಧನಪಸಿರಿಯೊಳು | ಉಲ್ಲಸದಿ ಧರೆ ಬಯಸಿದೀವುದು       || ೩೨ ||

ಮಾರಿಯಾದರು ಪಲ್ಲ ಕೀಳುವರು | ಕಂಕಾಲಭೈರವ |
ಬಾರಲಾತನ ಜಡೆಯನೆಳೆಯುವರೂ |
ಭೋರನೆ ಮೃತ್ಯುವಿನ ರುಧಿರವ | ಹೀರುತಿಹ ಸೇನೆಗಳು ನಿನಗಿವೆ |
ಧೀರ ಶುಕ್ರ ಬೃಹಸ್ಪತಿಗೆ ಸಮ | ತೋರುತಿಹ ಸಚಿವೇಂದ್ರರೀರ್ಪರು       || ೩೩ ||

ಮುರಿದು ಕೇಸರಿಶೃಂಗ ತರುತಿಹರೂ | ನೀರೊಳು ಮತ್ಸ್ಯದ |
ಚರಣವಾದರು ತಂದು ಕೊಡುತಿಹರೂ |
ಭರದಿ ಮಳಲನು ಮಥಿಸಿ ಘೃತವನು | ಪೊರಡಿಸುವರನುಜಾತರೀರ್ಪರು |
ಇರುವ ಬ್ರಹ್ಮಾಂಡವನೆ ಗೆಲಿದಿಹ | ಪರಮ ಪೌರೋಹಿತ ವಸಿಷ್ಠರು        || ೩೪ ||

ಧುರದೊಳಗೆ ತ್ರೈಭುವನವೆಲ್ಲವನು | ಗೆಲಿದೀರ್ಪ ಕಂಟಕ |
ಕರರೆನಿಪ ದಶಕಂಠ ಮುಖ್ಯರನೂ |
ತರಿದಿಹೆಯ ದಾನವರ ಮೂಲವ | ನರರೆನುವ ಷಟ್ಪದಕೆ ಮೋಕ್ಷದ |
ತರುಣಿ ಮುಖಪಂಕಜದ ಮಧುವನು | ಪರಿಗ್ರಹಿಸಲಿತ್ತಿರುವೆ ಮಾರ್ಗವ    || ೩೫ ||

ಭಾಮಿನಿ

ಸುರನರರ ಕಿನ್ನರರ ಮುನಿಗಳ |
ಗರುಡ ವಿದ್ಯಾಧರರ ಮನದಲಿ |
ಉರಿಯಧಿಕಮಾಗವರ ದುಷ್ಕರ್ಮಗಳ ಫಲದಿಂದ ||
ಸಿರಿಯು ಕೈಬಿಡಲಾಯು ಕ್ಷಯಿಸಲು |
ದುರುಳರಳಿದಿಹುದಲ್ಲದವರನು |
ಶರದಿ ಕೊಲ್ಲುವ ಬಲ್ಮೆ ಎನ್ನೊಳಗುಂಟೆ ಮುನಿನಾಥ    || ೩೬ ||

ರಾಗ ಮಧುಮಾಧವಿ ತ್ರಿವುಡೆತಾಳ

ಯಾತಕೀಪರಿ ಪೇಳ್ವೆ ರಘುಕುಲ | ನಾಥ ನಿನ್ನಿಂದಲ್ಲದನ್ಯರೊಳ್ |
ಯಾತುದಾನರ ವಧಿಸಲಪ್ಪುದೆ | ಭೂತಳದಿನಾ ಕಾಣೆನೂ       || ೩೭ ||

ವಿವರಿಪುದು ದಶಶಿರನು ಕುಂಭ | ಶ್ರವಣರೆಂಬವರಾರು ದುರ್ಧರ |
ರಿವರು ಪುಟ್ಟಿಹುದೇಕೆ ಮೂರ್ಖರಾ | ಗವನಿಯಲಿ ಮುನಿಪಾಲನೆ || ೩೮ ||

ಅಹಹ ರವಿ ಕುಲಶರಧಿ ಚಂದಿರ | ನಹುದಕೇಳೀ ಕುಲಕೆ ಸದ್ಗುಣ |
ಸಹನಕೀ ನುಡಿ ಸಹಜ ರತ್ನವ | ನೊಹಿಸಿ ಬಣ್ಣವ ಕೇಳ್ವೆಯಾ     || ೩೯ ||

ಅರಿಯದವನೀನೀಗಲೆಲ್ಲವ | ನರಿತವನು ನಾನಹುದು ದಶರಥ |
ತರಳನೀನಹುದ್ಯಾತುಧಾನರ | ಚರಿತೆಗಳನಾ ಪೇಳ್ವೆನೂ       || ೪೦ ||

ವಾರ್ಧಕ

ಕರುಣನಿಧಿ ಕೇಳ್ ವಿಷ್ಣುವನುಚರರ್ ಜಯ ವಿಜಯ |
ರಿರಲು ಸನಕಾದಿಗಳ ತಡೆಯೆ ದ್ವಾರದೊಳಾಗ |
ಕೆರಳಿ ಶಪಿಸಲು ದೈತ್ಯರಾಗೆನುತ ಲದರಿಂದ ಮೂರು ಜನ್ಮಗಳೊಪ್ಪುತಾ |
ತೆರಳಿದುದು ಮೊದಲನೆಯ ಜನ್ಮ ಕೃತಯುಗದೊಳಗೆ |
ವರಹ ನರಸಿಂಹರೂಪದಿ ನೀನೆ ಮಡುಹೀರ್ಪೆ |
ಎರಡನೆಯೊಳಿವರೀಗ ಪುಟ್ಟೀರ್ದ ವಿವರಮಂ ಸರಸಿಜಾಂಬಕ ಲಾಲಿಸು   || ೪೧ ||

ಸರಸಿಜೋದ್ಭವನಿಂಗೆ ಪೌಲಸ್ತ್ಯನೀತಗಂ |
ತರಳನಾಗಿಹ ವಿಶ್ರವಸುಗೀರ್ವ ಪತ್ನಿಯರು |
ಪಿರಿಯ ಮಂದಾಕಿನಿಗೆ ಧನದ ಮತ್ತೆರಡನೆಯ ತರುಣಿ ಕೈಕಸೆಯು ಧುರದಿ ||
ದುರುಳ ದಶಶಿರ ಕುಂಭಕರ್ಣಾದ್ಯರುದಿಸಿಹರು |
ಸರಸಿಜೋದ್ಭವ ಕುಲಜರೆನೆ ಕೇಳಿರಾಘವಂ |
ಸೊರಗಿಹಂ ಮೈಸುತ್ತ ಚಿಂತಾಗ್ನಿಯೊಳಗಾಳಿ ಮುನಿಲಲಾಮನೊಳೆಂದನೂ        || ೪೨ ||

ರಾಗ ಮಧ್ಯಮಾವತಿ ಏಕತಾಳ

ಮುನಿಪ ಕೇಳ್ನಾನು ದುಷ್ಕಾರ್ಯಗೈದಿಹೆನೂ ||
ವನಿತೆಗೋಸುಗ ಪಾಪಗಳಿಸಿಕೊಂಡಿಹೆನೂ   || ೪೩ ||

ಪರಮೇಷ್ಠಿಯನ್ನಾ  ಬ್ರಹ್ಮಹತ್ಯಕೋಸುಗದಿ ||
ಧರೆಯೊಳು ಸೃಜಿಸೀದನೇನೊ ಕಲ್ಮನದಿ      || ೪೪ ||

ಧರೆಯೊಳೆನ್ನನು ಖೂಳರೆನರೆ ಜೀವದೊಳೂ ||
ಇರುವಾಗ ನಿಂದೆಯು ನರಕವಂತ್ಯದೊಳೂ  || ೪೫ ||

ಖ್ಯಾತವಾಗಿಹ ರಘುಕುಲದಿ ಪುಟ್ಟಿಹೆನೂ ||
ಘಾತಕ ಗಳಿಸಿ ಕುಂದಕವ ತಂದಿಹೆನೂ       || ೪೬ ||

ಯಾವ ಹೋಮವು ತಪವ್ರತಗಯ್ಯೆ ಮುನಿಯೇ ||
ರಾವಣಹತ್ಯ ಪೋಪುದೊ ಗುಣಮಣಿಯೇ     || ೪೭ ||

ರಾಗ ನವರೋಜು ಏಕತಾಳ

ನಸುನಗುತಾ ಮುನಿವರನೂ | ಈ |
ವ್ಯಸನವ ಬಲ್ಲೆನು ನಾನು |
ಬಿಸಜೋದ್ಭವನೊಳಗೊರೆದಿಹೆ ಪೂರ್ವದಿ |
ದಶರಥನೊಳಗವತರಿಸುವೆನೆನ್ನುತಾ         || ೪೮ ||

ದುರುಳ ದಶಾಸ್ಯನ ತರಿದೂ | ಸುರ |
ನರರನು ಸೌಖ್ಯದಿ ಪೊರೆದೂ |
ಹರುಷವಪಡಿಸುವೆನೆಂದಿಹೆ ಪೂರ್ವದಿ |
ಅರಿಯರೆ ಲೋಕದೊಳಾರಿದನೆಲ್ಲವ || ೪೯ ||

ಘಾತಕ ಬಂದಿಹುದಂತೆ | ಈ |
ಮಾತಿಗೆನಾ ಬರಿ ಭ್ರಾಂತೆ |
ಜ್ಞಾತಕೆ ದೋಷವ ಜ್ಞಾತಕೇನಿರುತಿದೆ |
ರೀತಿಯ ನೋಡೆ ನೀನರಿಯದೆ ಗೈದಿಹೆ       || ೫೦ ||

ಭಾಮಿನಿ

ಕರುಣನಿಧಿ ಕೇಳರಿತೆಯಾಗಲಿ |
ಅರಿಯದೇ ಶಿಖಿಗಿಕ್ಕೆ ಕರವನು |
ಉರಿಯದಿಹುದೇ ಪೇಳು ತಿಳಿಯದೆ ಗೈದ ಹತ್ಯದೊಳು ||
ಬರದೆ ಪಾತಕ ಲೋಕನಡತೆಗೆ |
ಸರಿಯೆ ಪ್ರಾಯಶ್ಚಿತ್ತವೇನಿದೆ |
ವರೆಯಬೇಕೆಂದೆರಗೆ ತಕ್ಕೈಸುತ್ತ ಮುನಿ ನುಡಿದ        || ೫೧ ||

ವಾರ್ಧಕ

ಸರಸಿಜಾಂಬಕ ಕೇಳು ಲೋಕನಡತೆಗೆ ಪೇಳ್ವೆ |
ತುರಗಮೇಧವ ಗಯ್ಯೆ ಪೋಪುದೀ ಪಾತಕವು |
ತರಿಸು ವಾಜಿಯನೀಗ ಧರಣಿಪರ ಕಪ್ಪಮಂ ತರಲು ಸೈನ್ಯವ ಕಳುಹಿಸೂ ||
ಗುರು ವಷಿಷ್ಠರ ನೇಮದಂತೆ ಗೈಯೆಂದೆನುತ |
ಲೊರೆದು ಕುಂಭೋದ್ಭವಂ ತೆರಳೆ ತನ್ನಾಶ್ರಮಕೆ |
ಹರುಷದಿಂ ತೇಜಿಯಂ ತರಿಸಿ ರಘುವರನಾಗ  ಕಟ್ಟಿ ಲೇಖನ ಫಣೆಯೊಳು || ೫೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತುರಗವನು ಶೃಂಗರಿಸಿ ವೇಗದಿ | ಧರಣಿಪಾಲರ ಕಪ್ಪಗೊಂಬರೆ |
ಭರಿತ ಸೇನಾಜಾಲದೊಂದಿಗೆ | ಪೊರಡಿಸುತಲಿ        || ೫೩ ||

ಶತ್ರುಹಗೆ ಸೇನಾಧಿಪತ್ಯವ | ನಿತ್ತು ಮಾರುತಿ ಪುಷ್ಕಳಾದ್ಯರ |
ನರ್ತಿಯಿಂ ಬೆಂಬಲಕೆ ಪೋಗಿರೆ | ನುತ್ತ ನುಡಿದ        || ೫೪ ||

ಅಸ್ತೆನುತ ವೈದೇಹಿ ರಮಣಗೆ | ಶತ್ರುಹಾದ್ಯರು ನಮಿಸಿ ವಿಜಯಕೆ |
ಉತ್ತುಮದ ಹಯದೊಡನೆ ಪೊರಟರು | ಅರ್ತಿಯಿಂದ || ೫೫ ||

ಸಾರಿಯುತ್ತರದೇಶ ನೃಪರೊಳು | ಭಾರಿಕಪ್ಪವಗೊಂಡು ವಹಿಲದಿ |
ಘೋರ ವಿದ್ಯುನ್ಮಾಲಿ ಮುಖ್ಯರ | ಗಾರುಗೆಡಿಸಿ || ೫೬ ||

ತೆರಳೆ ಚಕ್ರಾಂಕಿತದ ಭೂಪನ | ತರಳ ದಮನನು ಹಯವ ಬಂಧಿಸೆ |
ಧುರದಿ ವಿಜಯವ ಪೊಂದಿ ಸಖ್ಯದಿ | ಕರವಕೊಂಡೂ   || ೫೭ ||

ರಾಗ ಕೇತಾರಗೌಳ ಅಷ್ಟತಾಳ

ಹರುಷದಿ ದಮನನ ಜೊತೆಗೊಂಡು ಶತ್ರುಹ | ಭರಿತ ಮಾರ್ಬಲದೊಡನೆ |
ಪೊರಟು ಚಕ್ರಾಂಕಿತ ಪುರದಿಂದ ಜನಪರ | ನರಸುತ್ತ ತೆರಳಿದನೂ       || ೫೮ ||

ತುರಗವ ಬೆಂಬಳಿಸುತಪೋಗೆ ತವಕಾದಿ | ವರಪಲ್ವಲೋದಕದಿ |
ಪರಿಯುತ್ತ ಲೋಕಪಾವನೆಯಾದ ಯಮುನೆಯು | ಮೆರೆದಿರೆ ಮುಂದೆಸೆಯಾ      || ೫೯ ||

ಹರಿತಂದು ಕರಚರಣವ ತೊಳೆದೆಲ್ಲರು | ಪರಿಹರಿಸುತ ತೃಷೆಯಾ |
ವರಮನೋಹರಮಾದ ಪುಳಿನದಿ ಮಂಡಿಸಿ | ಭರಿತಾನಂದದೊಳಿರಲು   || ೬೦ ||

ಘಳಿಲನೆ ಯಜ್ಞಾಶ್ವ ಗಮಿಸುತ್ತ ನದಿಯೊಳು | ಮುಳುಗಿ ಗೋಚರಿಸದಿರೆ |
ವಲವರಿಯದೆ ಪುಷ್ಕಳಾದ್ಯರು ಬೆರಗಾಗಿ | ಕಳವಳಿಸಲು ಮನದಿ          || ೬೧ ||

ನೀರಿನೊಳೆತ್ತ ಪೋದುದೊ ಹಯವ್ಯಾವೆಡೆ | ಸಾರಿತಾಶ್ಚರ್ಯವೀಗ |
ನೀರಜಾಂಬಕಗೆ ಗೋಚರವೆಂದು ಶತ್ರುಘ್ನ | ಭೂರಿ ಚಿಂತೆಯ ತಾಳ್ದನು   || ೬೨ ||

ರಾಗ ಘಂಟಾರವ ಅಷ್ಟತಾಳ

ಉರಗಲೋಕವ ಸಾರಲಿಯಧ್ವರ |
ತುರಗವನು ತರದಿಹೆನೆ ತಾನೆಂ | ದೆರಗಿ ಪುಷ್ಕಳನಾಕ್ಷಣ        || ೬೩ ||

ಹರನೆ ಬಂದಿದನೊದಿರೆ ಧುರದೊಳು |
ಕರವ ಬಂಧಿಸಿ ತಹೆನು ಹಯವನು | ಕರುಣಿಸಾಜ್ಞೆಯನೆಂದನೂ || ೬೪ ||

ದಮನನಾಗ ಪಲ್ಗಡಿಯುತ್ತಲೀಕ್ಷಣ |
ಯಮುನೆಯನು ಶೋಷಿಸುತಭುವನವ | ಗಮಕದಿಂ ಬಗೆದುರುಳಿಪೆ      || ೬೫ ||

ಆವಬ್ರಹ್ಮಾಂಡದೊಳಗಿರಲಶ್ವವ |
ದೇವ ನಿನ್ನೆಡೆಗೀಗ ತಹೆ ನಿಂ | ನ್ಯಾವ ಗಣನೆಗಳೆಂದನೂ        || ೬೬ ||

ಭಾಮಿನಿ

ವೀರವಿಕ್ರಮದಿಂದಲೀರ್ವರು |
ಭೂರಿ ಕ್ರೋಧದಿ ಪೊರಡೆ ಶತ್ರುಹ |
ಸಾರಿತೆಲ್ಲಿಗೆ ತುರಗವೆಂಬುದನರಿತು ಮೊದಲೀಗ ||
ತೋರುವದು ಪೌರುಷವ ಕಡೆಯೊಳು |
ತಾಳಿರೈ ವಿಕ್ರಮದೊಳಿದರನು |
ಯಾರೊ ಒಯ್ದಿಹರರಿಯಬೇಕೆನುತೆಂದ ಸಂತೈಸಿ      || ೬೭ ||

ರಾಗ ಸಾಂಗತ್ಯ ರೂಪಕತಾಳ

ವಾರಿಜಾಕ್ಷನ ದಿವ್ಯ ನಾಮೋಚ್ಚಾರದೊಳಾಗ | ನಾರದಮುನಿಪನೈತರಲೂ ||
ಭೂರಿ ಭಕ್ತಿಯೊಳಭಿವಂದಿಸಿ ಪಾದ್ಯೋಪ | ಚಾರದಿ ಕುಳ್ಳಿರಿಸಿದನೂ       || ೬೮ ||

ಪರಮಾತ್ಮನೆಜ್ಞದ ತುರಗ ಬೆಂಬಲಕಾಗಿ | ಪೊರಟಿಹ ಭಟರೂ ನೀವೈಸೆ ||
ತೆರಳಿತೆಲ್ಲಿಗೆ ಹಯ ಪೇಳೆಂದು ನಾರದ | ಕರುಣದಿ ಬೆಸಗೊಳಲೆಂದಾ    || ೬೯ ||

ಮುನಿಪಕೇಳ್ಯಮುನೆಯ ಜಲದೊಳು ತುರಗವು | ಕ್ಷಣದೊಳು ಮುಳುಗಿಪೋಗಿಹುದೂ ||
ಗುಣನಿಧಿ ಪೇಳು ಎಲ್ಲೀರ್ಪುದೆಂಬುದ ನೀನು | ಘನಪ್ರಾಜ್ಞನೈಸೆ ಯೋಗದೊಳೂ    || ೭೦ ||

ರಾಗ ಬೇಗಡೆ ಅಷ್ಟತಾಳ

ಅರುಹುವೆನು ಸೌಮಿತ್ರಿ ಕೇಳ್ನೀನು | ಯಜ್ಞಾಶ್ವಗಮಿಸಿದ |
ಪರಿಯ ಎನ್ನಯ ಮನದೊಳರಿತುದನೂ |
ಇರುವದೀ ನದಿಜಲದ ಮೂಲದಿ | ವರಮನೋಹರಮಾದ ಮಾಯಾ |
ಪುರವದರ ಮಧ್ಯದಲಿ ಶೋಭಿಪ | ಅರಮನೆಯು ಸೌವರ್ಣಖಚಿತದಿ      || ೭೧ ||

ಇರುವಳೋರ್ವಳು ತರುಣಿ ಕುಮುದಿನಿಯೂ | ಮಾರೀಚನಂದನೆ |
ತೊರೆದು ವಿಷಯಾಂತರವ ಯೋಗಿನಿಯೂ |
ಸರಸಿಜಾಂಬಕನನ್ನು ಸ್ಮರಿಸುತ | ಪರಮ ತೋಷದೊಳಿಹಳ ಸಖಿಯರು |
ತುರಗವಲ್ಲಿಗೆ ಬರಲು ಬಂಧಿಸಿ | ಧುರವಹಾರೈಸುತ್ತಲೀರ್ಪರು   || ೭೨ ||

ಖಳಕುಲೋದ್ಭವರಾದ ತರುಣಿಯರೂ | ಮಾಯಾದಿ ಕೃತ್ರಿಮ |
ವೆಳಸುವರು ಬಲವಂತೆಯಾಗಿಹರೂ |
ಜಲದ ಮಾರ್ಗದೊಳೈದುತಾ ಪುರ | ದೊಳಗೆ ಪೊಗುವರೆ ದುರ್ಘಟಂಗಳು |
ಲಲನೆಯರು ಸಾಹಸ್ರ ಸಂಖ್ಯೆಯು | ನೆಲಸಿಹುದು ತತ್ಪುರಿಯ ಮಧ್ಯದಿ   || ೭೩ ||

ಭಾಮಿನಿ

ಎಲೆ ಮುನಿಪ ಜಲದಂತರಾಳದಿ |
ಪೊಳಲಗೈದವರಾರು ರಕ್ಕಸ |
ಕುಲದ ಸತಿಯರಿಗೆಂತು ಸೇರಿತು ದೊರೆಗಳಾರದಕೆ ||
ಜಲಜನಾಭನ ಭಕ್ತಳೆನುತಿಹೆ |
ಸುಲಲಿತಾಂಗಿಯ ಸಖಿಯರಾರೈ |
ತಿಳುಹಬೇಹುದೆನುತ್ತ ಶತ್ರುಹನೆರಗೆ ಮುನಿ ಪೇಳ್ದಾ    || ೭೪ ||