ಒಟ್ಟಿನಲ್ಲಿ ಶ್ರೀಪಾದರಾಜರು ಕೀರ್ತನೆಯೆಂಬ ಹೊಸ ಸಾಹಿತ್ಯ ಪ್ರಕಾರವನ್ನು (-ಸುಳಾದಿ, ಉಗಾಭೋಗ, ವೃತ್ತನಾಮ, ದಂಡಕಗಳು ಸೇರಿದಂತೆ) ಕನ್ನಡ ಭಾಷೆಯಲ್ಲಿ ತಂದು ಕನ್ನಡ ಸಾಹಿತ್ಯಕ್ಕೇ ಒಂದು ಹೊಸ ಆಯಾಮವನ್ನಿತ್ತರು. ಸರಳ ಸುಂದರ ಆಡುಮಾತುಗಳ ಬಳಕೆಯಿಂದ, ಭಾವಮಾರ್ದವತೆ ಬಂಧುರತೆಗಳಿಂದ, ಮಧುರ ವಾತ್ಸಲ್ಯಾದಿ ಭಾವಗಳ ಕಲ್ಪನೆ-ಅಭಿವ್ಯಕ್ತಿಗಳಿಂದ ಕೀರ್ತನೆಯ ಮಧುರಶೈಲಿಯನ್ನು ಮುಕ್ತವಾಗಿ ವ್ಯಾಪಕವಾಗಿ ಬಳಸಿ, ಒಂದು ಪರಂಪರೆಯನ್ನೇ ನಿರ್ಮಿಸುವ ಮೂಲಕ ‘ದಾಸಸಾಹಿತ್ಯ ಪ್ರವರ್ತಕ’ರೆನ್ನಿಸಿಕೊಂಡರು. ಭಕ್ತರಿಗೆ ಸಾಹಿತ್ಯಾಸಕ್ತರಿಗೆ ಅವರ ಆಡುನುಡಿಯಲ್ಲಿ ಅಪಾರ ಭಕ್ತಿಸಾಹಿತ್ಯವನ್ನು ರಚಿಸಿಕೊಟ್ಟು, ಶಿವಶರಣರಂತೆ ಇವರೂ ಕನ್ನಡ ಭಾಷೆಯನ್ನು ಭಕ್ತಿಯ ಧರ್ಮದ ತತ್ತ್ವದ ಹಾಗೂ ಆಧ್ಯಾತ್ಮಿಕ ಭಾಷೆಯನ್ನಾಗಿ ಮಾಡಿದರು. ಮಾತ್ರವಲ್ಲ, ಮುಂದೆ ವ್ಯಾಸರಾಯರು – ವಾದಿರಾಜರಂಥ ಯತಿಗಳು ಪುರಂದರ – ಕನಕರಂಥ ಹರಿದಾಸರು ಅಪಾರಸಂಖ್ಯೆಯಲ್ಲಿ ಕೀರ್ತನಸಾಹಿತ್ಯ ರಚಿಸಲು ಸ್ಫೂರ್ತಿ, ಪ್ರೇರಣೆಗಳನ್ನಿತ್ತರು. ರಾಮಾಯಣ ಮಹಾಭಾರತ ಭಾಗವತಗಳಂತಹ ಜನಪ್ರಿಯ ಪುರಾಣಗಳನ್ನು ಅತ್ಯಂತ ಶಕ್ತಿಯುತವಾದ ಉಪದೇಶ ಮಾಧ್ಯಮಗಳಾಗಿ ಬಳಸಿಕೊಂಡರು. ರಾಮಾಯಣದ ಹನುಮಂತ, ಮಹಾಭಾರತದ ಕೃಷ್ಣಭೀಮರು, ಭಾಗವತ ದಶಮಸ್ಕಂಧದ ಬಾಲಕೃಷ್ಣ ಶ್ರೀಪಾದರಾಜರ ಹರಿಭಕ್ತಿಯ ಅಭಿವ್ಯಕ್ತಿಗೆ ಸ್ಫೂರ್ತಿಯ ಸೆಲೆಗಳು. ಆ ಮೂಲಕ ವೈದಿಕ ಧರ್ಮ ಸಂಸ್ಕೃತಿ ಸಂಪ್ರದಾಯಗಳನ್ನು, ಪರಂಪರೆಯನ್ನು ಎತ್ತಿ ಹಿಡಿದಿರುವರು. ಹರಿದಾಸ ಸಾಹಿತ್ಯಕ್ಕೆ ಶ್ರೀಕಾರ ನುಡಿದು ಖ್ಯಾತರಾದ ಶ್ರೀಪಾದರಾಜರು ವ್ಯಾಸ-ದಾಸಕೂಟಗಳೆರಡರಲ್ಲೂ ಸಮಾನ ಗೌರವ ಪ್ರಸಿದ್ಧಿ ಹೊಂದಿರುವರು. ಸಂಸ್ಕೃತ ಕನ್ನಡಗಳೆರಡರಲ್ಲೂ ಕೃತಿ ರಚನೆ ಮಾಡಿ ದ್ವೈತ ತತ್ತ್ವಪ್ರಸಾರ ಮಾಡಿರುವ ಸವ್ಯಸಾಚಿಗಳು. ಸಂಗೀತವನ್ನು ಮೊತ್ತಮೊದಲು ವೈದಿಕತತ್ವ ಪ್ರಸಾರಕ್ಕೆ ಬಳಸಿರುವ ಹರಿದಾಸರಿವರು. ಹರಿದಾಸ ಸಾಹಿತ್ಯದ ವೈವಿಧ್ಯಗಳೂ ವೈಶಿಷ್ಟ್ಯಗಳೂ ಆಗಿರುವ ಸುಳಾದಿ ಕೀರ್ತನೆ ಉಗಾಭೋಗಗಳನ್ನು ವ್ಯಾಪಕವಾಗಿ ಬಳಸಿ ಪುರಂದರಾದಿ ಹರಿದಾಸರಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟವರು. ಮಠಾಧಿಪತಿಗಳಾಗಿದ್ದು ಕೊಂಡೇ ದೇಶಭಾಷೆಯಲ್ಲಿ ಭಕ್ತಿಗೀತೆಗಳನ್ನು ರಚಿಸಿ, ಅವುಗಳಲ್ಲಿ ತತ್ವ ಸಂಗೀತ ಹರಿಭಕ್ತಿ ನೀತಿಬೋಧೆಗಳೆಲ್ಲವನ್ನೂ ಮೇಳೈಸಿ ಅವನ್ನು ತಮ್ಮ ಪೂಜಾ ಕಾಲದಲ್ಲಿ ಹಾಡಿ ಶಿಷ್ಯರಿಗೆ ಮೇಲ್ಪಂಕ್ತಿಯಾದವರು. ಆ ಮೂಲಕ ತಾವೂ ಒಳ್ಳೆಯ ಬದುಕನ್ನು ಬಾಳಿದ್ದಲ್ಲದೆ ಸಮಾಜಕ್ಕೂ ಉತ್ತಮ ಬಾಳ್ವೆಯ, ಆದರ್ಶ ಬದುಕಿನ ದಾರಿಯನ್ನು ತೋರಿಕೊಟ್ಟವರು, ಶ್ರೀಪಾದರಾಜರು.

ಮೌಲ್ಯಯುತ ಬದುಕನ್ನು ಎತ್ತಿ ಹಿಡಿಯುವ ಮೂಲಕ ನೊಂದ ಮನಸ್ಸುಗಳನ್ನು ಸಾಂತ್ವನಗೊಳಿಸಿ ಜೀವನ ಪ್ರೀತಿಯನ್ನು ಬೆಳೆಸುವಲ್ಲಿ ಶ್ರೀಪಾದರಾಜರು ಸಫಲರಾಗಿರುವರೆಂಬುದಕ್ಕೆ ಇಂದಿಗೂ ಉಳಿದುಬಂದು ಜನರ ಮನಸ್ಸನ್ನು ಸಂತಯಿಸಿ ಸಮಾಧಾನಕೊಡುತ್ತಿರುವ ಅವರ ಕೀರ್ತನೆಗಳೇ ಸಾಕ್ಷಿ. ಅಂತರಂಗದ ಶೋಧನೆಗೆ ಹೆಚ್ಚು ಒತ್ತುಕೊಟ್ಟು ತೋರಿಕೆಯ ಆಚಾರವನ್ನು, ಕಂದಾಚಾರಗಳನ್ನು ಖಂಡಿಸಿದಂಥವು ಅವರ ಆ ಕೀರ್ತನೆಗಳು. ಮನುಷ್ಯನ ದುರಾಸೆ, ಸ್ವಾರ್ಥ, ಅಹಂಕಾರಾದಿಗಳನ್ನು, ಸಣ್ಣತನಗಳನ್ನು ನರಕಾಸುರ, ಕೌರವಾದಿ ಪುರಾಣ ಪಾತ್ರಗಳ ಮೂಲಕ ಎತ್ತಿತೋರಿಸಿ, ಬದುಕಿನ ಕಟು ಸತ್ಯಗಳತ್ತ ಬೊಟ್ಟುಮಾಡಿ ‘ನೂರಾರು ಸಾವಿರ ದಂಡವ ತೆತ್ತರೆ ರಂಗವಿಠಲನೆ ಸರಿಯೆಂಬೊರಯ್ಯ’ – ಎನ್ನುವ ವಾಸ್ತವವನ್ನು ನಮಗೆ ಮನದಟ್ಟು ಮಾಡಿಸಿರುವರು.

ಕೃಷ್ಣ – ಗೋಪಿಯರ, ಯಶೋದೆ – ಕೃಷ್ಣರ, ಕೃಷ್ಣ – ಸುದಾಮರ ನಡುವಣ ಭಾವಸ್ಪಂದನ ಶ್ರೀಪಾದರಾಜರ ಕೀರ್ತನೆಗಳಲ್ಲಿ ಅನುರಣನಗೊಂಡಿದೆ. ಅಲ್ಲಿ ಅವರು ಕೃಷ್ಣನ ಮುರಳೀಗಾನಕ್ಕೆ ಮನಸೋತ ಗೋಪಿಯಾಗಿ, ಕೃಷ್ಣ ಮಧುರೆಗೆ ಹೋಗುವ ಸುದ್ಧಿಯರಿತ ವಿರಹಿಣಿಯಾಗಿ, ಅವನ ಗುಣ – ರೂಪುಗಳಿಗೆ ಮಾರುಹೋದ ಮುಗುದೆಯಾಗಿ ಪ್ರಣಯಿನಿಯಗಿ ಮೈಮರೆತಿದ್ದಾರೆ. ಮಗು ಕೃಷ್ಣನ ಹಣೆಯ ಕಿರು ಬೆವರನ್ನು ವಾತ್ಸಲ್ಯದಿಂದ ತಮ್ಮ ಸೆರಗಿನಲ್ಲೊರೆಸುವ ತಾಯಿಯಾಗಿ ನಲಿದಿದ್ದಾರೆ. ಮಗು ಕೃಷ್ಣನಿಗೆ ದೃಷ್ಟಿ ತಾಕೀತೆಂದು ಕಳವಳ ಪಟ್ಟಿದ್ದಾರೆ. ಅಂದರೆ, ಜನಸಾಮಾನ್ಯರ ದೈನಂದಿನ ಜೀವನದ ದರ್ಶನವೇ ನಮಗಿಲ್ಲಿ ಆಗಿದೆ.

ಹರಿದಾಸ ಸಾಹಿತ್ಯದ ಎಲ್ಲ ವೈಶಿಷ್ಟ್ಯಗಳಿಗೂ ಮೊದಲಿಗರಾದ, ತಮ್ಮ ದಂಡಕ ಹಾಗೂ ಗೋಪೀ ಗೀತೆಗಳಿಂದ ವಿಶಿಷ್ಟರಾದ ಶ್ರೀಪಾದರಾಜರಿಂದ ಪ್ರಾರಂಭವಾದ ಹರಿದಾಸ ಸಾಹಿತ್ಯ ವಾಹಿನಿ ಇಂದಿಗೂ ಮೈದುಂಬಿ ಹರಿಯುತ್ತಿದೆ. ವ್ಯಾಸರಾಯರು ವಾದಿರಾಜರು ಪುರಂದರ – ಕನಕದಾಸರಾದಿಯಾಗಿ ನೂರಾರು ಹರಿದಾಸರುಗಳ ಸಾವಿರಾರು ಕೀರ್ತನೆಗಳಿಂದ ಆಳ, ಅಗಲ, ವಿಸ್ತಾರಗಳನ್ನು ಪಡೆದಿದೆ.