ಯಾವುದೇ ಒಂದು ಭಾಷೆಯ ಸಾಹಿತ್ಯವನ್ನು, ಸಾಹಿತ್ಯ ಕೃತಿಯನ್ನು ಕುರಿತು ಹೇಳುವಾಗ ಅದರ ವಸ್ತು ಸ್ವರೂಪ ಛಂದಸ್ಸು ನಿರ್ವಹಣೆ ತಂತ್ರದರ್ಶನ ಬಳಸಿರುವ ಸಂಕೇತಗಳು ಅಲಂಕಾರಗಳು ಧ್ವನಿ-ಇತ್ಯಾದಿ ಅನೇಕ ಅಂಶಗಳನ್ನು ಗಮನಿಸಿ, ವಿಶ್ಲೇಷಿಸಿ ನೋಡಬೇಕಾಗುತ್ತದೆ. ಇವುಗಳೆಲ್ಲ ಒಟ್ಟು ಸೇರಿದಗ ಓದುಗರ ಮೇಲೆ ಉಂಟಾಗುವ ಪರಿಣಾಮ ಒಂದು ಕೃತಿಯ ಮೌಲ್ಯವನ್ನು ನಿರ್ಧರಿಸುತ್ತದೆ. ಅದರಲ್ಲೂ ವಸ್ತುವಿನ ನಿರೂಪಣೆ, ನಿರ್ವಹಣೆ, ಸಂವಿಧಾನ, ತಂತ್ರಗಳು ಮುಖ್ಯ ಹಾಗೂ ನಿರ್ಣಾಯಕ ಪಾತ್ರವಹಿಸುತ್ತವೆ. ಹಾಗೂ ಒಂದು ಹಂತದಲ್ಲಿ ಅವು ಪೂರ್ವಯೋಜಿತವೂ ಆಗಿರುತ್ತವೆ.

ಆದರೆ, ಹರಿದಾಸರ ಕೀರ್ತನೆಗಳು ಉಳಿದ ಕಾವ್ಯಗಳಂತೆ ಉದ್ದೇಶಪೂರ್ವಕವಾಗಿ ಯೋಜಿಸಿ ಕುಳಿತು ಬರೆದುವಂಥವಲ್ಲ. ವಸ್ತು ಇಂಥದ್ದಿರಬೇಕು; ಇಂಥ ಛಂದಸ್ಸನ್ನು ಬಳಸಬೇಕು; ಕಥಾ ಹಂದರ ಇಷ್ಟಿದ್ದರೆ ಸಾಕು. ಯಾವ ವಿಷಯವನ್ನು ಸಾಂಕೇತಿಕವಾಗಿ ಹೇಳಿದರೆ ಹೆಚ್ಚಿನ ಪರಿಣಾಮ ಸಾಧಿಸಬಹುದು – ಇತ್ಯಾದಿ ಯೋಚನೆಗಳಿಗೆ ಇಲ್ಲಿ ಅವಕಾಶವಿಲ್ಲ. ಒಂದು ರೀತಿಯಲ್ಲಿ ಇವು ಆಶುಕವಿತೆಗಳು. ದಾಸರು ಜನರ ನಡುವೆ ಹೋಗಿ ಅವರ ನಡೆನುಡಿಗಳಿಗೆ ಸ್ಪಂದಿಸಿದಾಗ ಮೂಡಿಬಂದ ಸ್ಪಂದನಗಳು. ಬಂದ ಬಂದ ಹಾಗೇ ಭಾಷೆಯ ಮೂಲಕ ಅಭಿವ್ಯಕ್ತಿ ಪಡೆದಂಥವು. ಹಾಗೆಯೇ ಬಾಯಿಂದ ಬಾಯಿಗೆ ನೂರಾರು ವರ್ಷ ಕಾಲ ದಾಟಿ ಬಂದಿರುವ ತೋಂಡೀ ಸಾಹಿತ್ಯ (Oral Tradition) ವಿದು. ಆಸಕ್ತರು ತಮಗೆ ಇಷ್ಟವಾದುದನ್ನು ಕೇಳಿ ಬರೆದಿರಿಸಿಕೊಂಡಿರುವಂತಹ ಸ್ವಂತ ಸಂಗ್ರಹಗಳು ನಮಗೆ ಇಂದು ಹಸ್ತಪ್ರತಿಗಳ ರೂಪದಲ್ಲಿ ಸಿಕ್ಕಿರುವಂಥವು. ಆ ಕೀರ್ತನೆಗಳು ಆಯಾ ಹರಿದಾಸರ ಅಂತರಂಗದ ನೇರ ಅಭಿವ್ಯಕ್ತಿಯಾದುದರಿಂದ ಕಾವ್ಯದ, ಸಾಹಿತ್ಯದ ಅನೇಕ ಲಕ್ಷಣಗಳನ್ನು ಅವು ಪಡೆದುಕೊಂಡಿವೆ. ಆದುದರಿಂದಲೇ ಅವುಗಳನ್ನು ಕನ್ನಡ ಸಾಹಿತ್ಯದ ಒಂದು ಪ್ರಕಾರವಾಗಿ ಪರಿಗಣಿಸಿ, ‘ಕೀರ್ತನೆ’ಗಳೆಂದು ಕರೆಯಲಾಗಿದೆ. ಇಂದು ಚಂಪು, ಷಟ್ಪದಿ, ರಗಳೆ, ಸಾಂಗತ್ಯ ಇತ್ಯಾದಿಗಳಂತೆ ಕೀರ್ತನೆಯೂ ನಮ್ಮ ಕನ್ನಡದ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಹರಿದಾಸರ ಎಲ್ಲ ರಚನೆಗಳನ್ನೂ ಕೀರ್ತನೆ, ಸುಳಾದಿ, ವೃತ್ತನಾಮ, ಉಗಾಭೋಗ, ದಂಡಕ – ಒಟ್ಟಾಗಿ ‘ಕೀರ್ತನೆ’ಗಳೆಂದೇ ಕರೆಯಲಾಗಿದೆ.

ಶ್ರೀಪಾದರಾಜರೇ ಮೊದಲಾದ ಹರಿದಾಸರು ಇಂತಹ ಕೀರ್ತನೆಗಳನ್ನು ರಚಿಸಿ ಕಹಾಡುವ ಮೂಲಕ, ಹಾಡಿಕೊಂಡು ನರ್ತಿಸುವ ಮೂಲಕ ತಮ್ಮ ಸಾಧನೆಯ ಮಾರ್ಗವನ್ನು ಕ್ರಮಿಸಿದ್ದಾರೆ. ಅವರ ಭಕ್ತಿ ನಿಷ್ಠೆ, ಭಕ್ತಿಯ ವೈವಿಧ್ಯ, ಗಹನವಾದ ತಾತ್ವಿಕ ವಿಚಾರಗಳನ್ನು ಸರಳಭಾಷೆಯ ಮೂಲಕ ಹೇಳಿರುವ ರೀತಿ; ಹಾಗೆ ಹೇಳುವ ಸಂದರ್ಭದ ತೀವ್ರತೆ ಭಾವಾವೇಶಗಳಿಗೆ ತಕ್ಕ ಭಾಷೆಯ ಬೆಡಗು, ಬಳುಕು-ಬಾಗುಗಳು ಅಂತಹ ರಚನೆಗಳಿಗೆ ಕಾವ್ಯದ ಲೇಪವನ್ನಿತ್ತಿವೆ. ಮತ್ತು ದಾಸರು ಮೂಲಭೂತವಾಗಿ ಮಾನವಸಮುದಾಯದ ಉತ್ತಮಿಕೆ, ಮೇಲ್ಮೆಗಳನ್ನು ಕುರಿತು ಚಿಂತಿಸಿರುವುದರಿಂದ ಎಲ್ಲರಿಗೂ ಅವರ ರಚನೆ ಶೈಲಿ ಧಾಟಿಗಳು ಆಪ್ಯಾಯಮಾನವಾಗಿಯೇ ಇರುತ್ತವೆ. ಹೆಚ್ಚು ಹೆಚ್ಚು ಆಪ್ತವಾಗುತ್ತಾ ಹೋಗುತ್ತವೆ. ಅಷ್ಟೇ ಏಕೆ ಕೇಳುಗರಿಗೆ ತಮ್ಮ ಮನಸ್ಸಿನ ಪದರಗಳನ್ನೇ ಬಿಚ್ಚಿಟ್ಟ ಅನುಭವವಾಗುತ್ತದೆ. ಶ್ರೀಪಾದರಾಜರು ಸ್ವತಃ ಲೌಕಿಕ ಸಂಸಾರದ ಬಂಧನಕ್ಕೊಳಗಾಗದಿದ್ದರೂ ತಾವು ಬದುಕಿದ್ದ ಪರಿಸರದ, ಸಮಾಜದಲ್ಲಿಯ ಸಂಸಾರಿಗಳ ಸುಖದುಃಖಗಳನ್ನು ಕಂಡು ಕೇಳಿ ತಿಳಿದವರಾಗಿದ್ದರು. ನಶ್ವರ ಸಂಸಾರದ ಸುಖೋಪ ಭೋಗಗಳಲ್ಲೇ ಮಗ್ನರಾಗಿದ್ದ ಜನ ಅವರಿಗೆ ಸುಪರಿಚಿತರು. ಮಾನವನ ಚಿತ್ತಚಾಂಚಲ್ಯವೇ ಅವನಿಗೆ ಒಂದು ದೊಡ್ಡ ಶಾಪವೆಂಬುದು ಅವರ ಅನುಭವದ ಅರಿವು. ಅಂತೆಯೇ –

ಕಂಡಕಂಡ ಕಡೆಗೆ ಪೋಪ ಚಂಚಲ ಮನವು
ಪಿಂಡ ತಿಂಬಲ್ಲಿ ಬಹುನಿಷ್ಠತಾನು

– ಎನ್ನುವರು. ಅವರ ನುಡಿಯ ಈ ನಿಷ್ಠುರತೆ ಯಾರನ್ನು ತಾನೆ ತಟ್ಟದೆ ಬಿಡುತ್ತದೆ . ಇಂಥ ವೈಯಕ್ತಿಕ ಅನುಭವಗಳನ್ನು ಸಾರ್ವತ್ರಿಕ ನೆಲೆಯಲ್ಲಿ ಅಭಿವ್ಯಕ್ತಿಸಿದಾಗ ಅಂಥ ಕೃತಿ ತಂತಾನೇ ಕಾವ್ಯಗುಣವನ್ನು ಪಡೆದುಕೊಳ್ಳುತ್ತದೆ.

ಈ ಸಮಾಜದಲ್ಲಿ ಎಲ್ಲರೂ ಒಟ್ಟಾಗಿ ಬಾಳುತ್ತಿದ್ದರೂ ಒಬ್ಬೊಬ್ಬರ ಆಸೆ ಆಕಾಂಕ್ಷೆಗಳು, ಅಭಿರುಚಿ ಆಸಕ್ತಿಗಳು ಒಂದೊಂದು ಕಡೆ. ಈ ಲೋಕಸತ್ಯ ಶ್ರೀಪಾದರಾಜರ ಒಂದು ಉಗಾಭೋಗದಲ್ಲಿ ಅರ್ಥಪೂರ್ಣವಾಗಿ, ಸಹಜವಾಗಿ ಅಭಿವ್ಯಕ್ತಗೊಂಡಿದೆ:

ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ಧನದಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ವನಿತೆಯಿಂ ಸಂತೋಷ ಕೆಲವರಿಗೆ ಲೋಕದಲ್ಲಿ
ತನಯರಿಂ ಸಂತೋಷ ಕೆಲವರಿಗೆ ಲೋಕದಲ್ಲಿ
ಇನಿತು ಸಂತೋಷ ಅವರವರಿಗಾಗಲಿ, ನಿನ್ನ
ನೆನೆವೋ ಸಂತೋಷ ಎನಗಾಗಲಿ ನಮ್ಮ ರಂಗವಿಠಲ

– ಉಗಾಭೋಗವನ್ನು ಓದುತ್ತ ಹೋದಂತೆ ಓದುಗರ ಮನಸ್ಸು ಶ್ರೀಪಾದರಾಜರೊಂದಿಗೇ ಸ್ಪಂದಿಸತೊಡಗುತ್ತದೆ. ಲೋಕಸತ್ಯದ ಸಾರ್ವತ್ರಿಕ ಹಿನ್ನೆಲೆಯಲ್ಲಿ ಭಕ್ತಿ ದೇವರುಗಳ ಬಗ್ಗೆ ತಮ್ಮ ಅಂತರಂಗದ ಆತ್ಮನಿಷ್ಠ ಬಯಕೆಯನ್ನು ತೋಡಿಕೊಳ್ಳುವ ಮೂಲಕ ಇಲ್ಲಿ ಕೃತಿಗೆ ಒಂದು ಸಹಜ ಕಾವ್ಯ ಸೌಂದರ್ಯದ ಲೇಪವೊದಗಿದೆ.

ಕನ್ನಡ ಭಾಷೆಯ ಬಳಕೆಯ ದೃಷ್ಟಿಯಿಂದ ಶ್ರೀಪಾದರಾಜರ ಕೃತಿಗಳ ಸಂದರ್ಭ ಅದ್ಭುತವಾಗಿ ಕಾಣಿಸುತ್ತದೆ. ಅದುವರೆಗೂ ಶಿಷ್ಟಕಾವ್ಯದ ತೂಕದಲ್ಲೇ ಸಂಸ್ಕೃತಮಯವಾಗಿ ಸಾಗುತ್ತಿದ್ದ ಕನ್ನಡ ಭಾಷೆ (ವಚನಗಳು ಹೊರತಾಗಿ) ಯನ್ನು ಜನಸಾಮಾನ್ಯರ ಆಡುಭಾಷೆಯನ್ನು ತಮ್ಮ ಕೃತಿಗಳಲ್ಲಿ ಬಳಸುವ ಮೂಲಕ ಶ್ರೀಪಾದರಾಜರು ಕೃತಿಗಳಿಗೆ ಪರಿಣಾಮ ರಮಣೀಯತೆಯನ್ನು ತಂದುಕೊಟ್ಟಿದ್ದಾರೆ. ಗೋಪಿಗೀತೆಯೊಂದರಲ್ಲಿ ಗೋಪಿಯೊಬ್ಬಳು ದುಂಬಿಯನ್ನು ಕುರಿತು ‘ನಿನ್ನ ನೋಡೆ ನಮ್ಮ ಅಚ್ಚುತನ್ನ ಕಂಡಂತಾಯಿತಯ್ಯ’ ಎನ್ನುತ್ತಾಳೆ! ಕೃಷ್ಣನ ವಿರಹವನ್ನು ತಾಳಲಾರದೆ ಗೋಪಿಯರು ಮನಸೋಯಿಚ್ಛೆ ಪ್ರಲಾಪಿಸುವರು:

ಹಕ್ಕಿಯ ಮ್ಯಾಲುಳ್ಳ ದಯ ನಮ್ಮ ಮ್ಯಾಲೆ
ಇಕ್ಕದೇಕೆ ಹೋದ್ಯೋ ವಿಧಿಯೆ
ರೆಕ್ಕೆ ಎರಡುಳ್ಳರೆ ಮಧುರೆಗ್ಹೋಗಿ
ಗಕ್ಕನೆ ಶ್ರೀಹರಿಯೊಡನೆ ಕೂಡುತಿದ್ದೆವಲ್ಲ ……

ಕಂದಿದೆವು ಕುಂದಿದೆವು ನಾವು ಎನ್ನುವರು. ‘ಇನ್ಯಾತಕೆ ರಂಗನಿಲ್ಲಿಗೆ ಬಾಹ ಮಧುರಾ ಪುರಿಯರಸನಾದ| ಅವನ ನೆನಹೆ ನಮಗೆ ಸಾಕು’ ಎಂದು ಸಮಾಧಾನಪಟ್ಟುಕೊಳ್ಳುವರು. ಅಂತೆಯೇ ಆಟದ ಭರದಲ್ಲಿ ಉಂಗುರ ಪದಕಗಳನ್ನು ಕಳೆದುಕೊಂಡು ಬಂದ ಮಗು ಕೃಷ್ಣನನ್ನು:

ಬೆರಳ ಉಂಗುರವೆಲ್ಲಿ ಹೋಗಿದೆ
ಕೊರಳ ಪದಕವನೆಲ್ಲಿ ನೀಗಿದೆ

– ಎಂದು ಪ್ರಶ್ನಿಸುವ ರೀತಿ ಅದೆಷ್ಟು ಸಹಜವಾಗಿದೆ.

ಗೋಪಿಯರು ರಂಗನಾಥನ ಚಿಕ್ಕ ಪಾದಗಳನ್ನು ಕಂಡ ಆನಂದ, ಸಂಭ್ರಮಗಳನ್ನು:

ಬಂಡೆಯ ಬಾಲೆಯ ಮಾಡಿದ ಉದ್ದಂಡ ಪಾದವ
ಬಂಡಿಲಿದ್ದ ಶಕಟಾಸುರನ ಒದ್ದಪಾದವ

– ಎಂದು ಮುಂತಾಗಿ ಆ ಪಾದಗಳ ಮಹಿಮಾತಿಶಯಗಳನ್ನು ಬಣ್ಣಿಸುತ್ತಲೇ ಅವನ ಲೀಲಾ ವಿನೋದಗಳನ್ನೂ ಅನಾವರಣಗೊಳಿಸಿರುವ ತಂತ್ರ ಮೋಹಕವಾಗಿದೆ. ಇಡೀ ಕೀರ್ತನೆಯಲ್ಲಿ ಸಾಗಿರುವ ‘ಪಾದ’ ಪದದ ಪುನರುಕ್ತಿ ಗೋಪಿಯರ ಭಕ್ತಿಭಾವದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ರೀತಿಯ ಪದಗಳ ಪುನರುಕ್ತಿ ಶ್ರೀಪಾದರಾಜರಲ್ಲಿ ಒಂದು ಅಲಂಕಾರವಾಗಿ ಮತ್ತೆ ಮತ್ತೆ ಮೈದೋರಿದೆ:

ಅನ್ನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊ
ಅನ್ನಂತ ಕಾಲದಲ್ಲಿ ನಿನ್ನವನೆನಿಸದೆ ಮೂರುಖನಾದೆನೊ
ಅನ್ನಂತ ಕಾಲದಲ್ಲಿ ನಿನ್ನ ಚರಣರತಿಯಿಲ್ಲದೆ ನೊಂದೆನೊ
ಅನ್ನಂತ ಕಾಲದಲ್ಲಿ ಅದಾವ ಪುಣ್ಯದಿಂದ ಬಂದು ಇಂದು
ನಿನ್ನವನೆನಿಸಿದೆ…

– ಇಲ್ಲಿಯ ಪದಗಳ ಪುನರುಕ್ತಿ ಹೃದಯದ ಆರ್ತತೆಯನ್ನು ಮೊಗೆಮೊಗೆದು ಹೊರತೆಗೆದ ಪರಿಣಾಮವನ್ನುಂಟು ಮಾಡಿದೆ. ಕೃತಿಯಲ್ಲಿ ನಾದಮಯತೆ ಭಾವತೀವ್ರತೆಗಳು ಒಟ್ಟಿಗೇ ಸಾಧಿಸಿವೆ. ಹಲವು ಜನ್ಮಗಳಲ್ಲಿ ತೊಳಲಿ ಬಳಲಿ ಬೆಂದು ನೊಂದು, ಈಗ ಮಾನವ ಜನ್ಮ ಪಡೆದಿರುವ ತಮ್ಮನ್ನು ಸಲಹಬೇಕೆನ್ನುವ ದಾಸರ ಈ ಮೊರೆ ಓದುಗರಲ್ಲೂ ಕೇಳುಗರಲ್ಲೂ ಅನುರಣಿಸುತ್ತದೆ.

ಚಿಕ್ಕಚಿಕ್ಕ ಮಾತುಗಳಲ್ಲಿಯೇ ಸೊಗಸಾದ ಶಬ್ದಚಿತ್ರಗಳನ್ನು ಕಟ್ಟಿಕೊಡಬಲ್ಲ ಶಕ್ತರು ಶ್ರೀಪಾದರಾಜರು. ಎಲ್ಲೋ ಆಟವಾಡಿ ಆಯಾಸಗೊಂಡು ಬಂದ ಕೃಷ್ಣ ದಾಸರಿಗೆ ಹೀಗೆ ಕಂಡಿದ್ದಾನೆ :

ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿ
ಹೊಸಪರಿ ಸುದ್ದಿಯು ಹುಟ್ಟಿದೆ
ಪುಸಿಯಲ್ಲ ಈ ಮಾತು ಮುಟ್ಟಿದೆ ನಿನ್ನ
ನಸುನಗೆ ಕೀರ್ತಿ ಹೆಚ್ಚಿದೆ.

– ಒಳ್ಳೆಯ ಚಿತ್ರ ಕಲಾವಿದ ಕೃಷ್ಣನ ಈ ಚಿತ್ರವನ್ನು ಅವನ ತುಂಟ ನಗೆಯೊಂದಿಗೆ ತನ್ನ ಕುಂಚದಲ್ಲಿ ಸೊಗಸಾಗಿ ಸೆರೆಹಿಡಿಯಬಹುದು. ಅಂತೆಯೇ

ಕೋಲು ಕೈಯಲಿ ಕೊಳಲು
ಜೋಲು ಗಂಬಳಿ ಹೆಗಲಮ್ಯಾಲೆ
ಕಲ್ಲಿಚೀಲ ಕೊಂಕಳಲ್ಲಿ
ಕಾಲಗಡಗವನಿಟ್ಟು ಕಾಡೊಳಿಹ ಪಶು ಹಿಂಡ
ಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ-
ಮರೆತೆಯೇನೋ ರಂಗ ಮಂಗಳಾಂಗ
ತುರುಕರು ಕಾಯ್ವಲ್ಲಿ ತೋಡನಾಗಿದ್ದೆನ್ನ?

– ಎಂದು ಕೇಳುವ ಶ್ರೀಪಾದರಾಜರ ಮಾತುಗಳು ಗೋಪಾಲಕನೊಬ್ಬನ ಚಿತ್ರವನ್ನು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿವೆ. ಮತ್ತು ಗೆಳೆಯರಿಬ್ಬರ ಬಹುದಿನಗಳ ಭೇಟಿಯನ್ನು ಅನುಭವಕ್ಕೆ ತಂದು ಕೊಡುವ ಮೂಲಕ ಕೀರ್ತನೆ ಆಪ್ತವಾಗುತ್ತದೆ. ಅವರು ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ಕಳೆದ ದಿನಗಳನ್ನು ಮೆಲುಕು ಹಾಕುವ ಸುಖಾನುಭವವಿಲ್ಲಿದೆ. ಆ ಮೂಲಕ ಸಖ್ಯಭಕ್ತಿಯ ಸೊಗಸು ವ್ಯಕ್ತವಾಗಿದೆ.

ಅಲಂಕಾರಗಳ ಬಳಕೆ ಶ್ರೀಪಾದರಾಜರಲ್ಲಿ ಸಂದರ್ಭೋಚಿತವಾಗಿ ಬಂದಿದ್ದು ಕೃತಿಗಳ ಕಾವ್ಯಾತ್ಮಕತೆಯನ್ನು ಹೆಚ್ಚಿಸಿವೆ. ‘ಭೂಷಣಕೆ ಭೂಷಣ ಇದು ಭೂಷಣ’ – ಎಂಬ ಕೀರ್ತನೆಯಲ್ಲಿ ಗಾದೆಯಂತಿರುವ ಮಾತುಗಳ ಬಳಕೆಯಿಂದ ದಟ್ಟ ಅನುಭವವನ್ನು ಕಟ್ಟಿಕೊಡುವರು. ‘ಮಾನವೇ ಭೂಷಣ ಮಾನವರಿಗೆ’ – ಹೌದು. ಅಡಿಕೆಗೆ ಹೋದ ಮಾನ ಆನೆಕೊಟ್ಟರೂ ಬರುವುದಿಲ್ಲವೆಂಬುದೆ ನಮ್ಮ, ಭಾರತೀಯರ ಸಂಸ್ಕೃತಿ. ‘ಅರಸು ಮುಟ್ಟಲು ದಾಸಿರಂಭೆಯಾದಳು| ಪುರುಷ ಮುಟ್ಟಲು ಲೋಹ ಸ್ವರ್ಣ’ – ಇಂಥ ಅನೇಕ ಗಾದೆ ಮಾತುಗಳು ಅಲಂಕಾರಗಳಾಗಿಯೂ ಸಾರ್ಥಕತೆ ಪಡೆದಿವೆ. ಹರಿಯ ‘ಚಂದ್ರಿಕಾ ನಿಭ ಮುದ್ದು ಮಂದಹಾಸಕೆ ಶರಣು… ಕುಂದ ಕುಟ್ಮಲಪೋಲ್ವ ದಂತಪಂಕ್ತಿಗೆ ಶರಣು’ ‘ಒಂಟೆಯಂತೆ ಗೋಣ ಮೇಲೆತ್ತುವರು’, ‘ಶುದ್ಧ ಧವಳದಂತೆ ಮಂದಹಾಸ’ – ಇಂತಹ ಉಪಮೆಗಳೂ| ‘ತನ್ನ ನೇಹವೆಂಬೋ ನಾವೆಯನ್ನೇರಿಸಿ ಮೋಸದಿ| ನಡುನೀರೊಳು ತೊರೆದ್ಹೋದನೆ ಹೇ ಕಿತವ’| ‘ನಿನ್ನ ವಿರಹವಾರಾಶಿಯೊಳು ಮುಳುಗಿಹ ನಾರೀನಿಚಯವ ಪಾರಗಾಣಿಸು ಕೃಪಾನಾವೆಯಲಿಂದೆಮ್ಮನು’ – ಇಂತಹ ರೂಪಕಾಲಂಕಾರಗಳೂ ಅಲ್ಲಲ್ಲಿ ಮೆರೆದಿವೆ.

ಆದಿ ಮಧ್ಯಾಂತ ಪ್ರಾಸಗಳು, ವಡಿ ಇವರ ಕೃತಿಗಳಲ್ಲಿ ಹಾಸುಹೊಕ್ಕಾಗಿವೆ. ಶಬ್ದಾರ್ಥಗಳೊಂದಿಗೆ ಅವುಗಳಿಂದ ಹೊರಡುವ, ಭಾವಪೋಷಕವಾದ ನಾದಕ್ಕೂ ಶ್ರೀಪಾದರಾಜರು ಬೆಲೆ ಕೊಟ್ಟಿರುವರು:

ಮಧುಕುಂಜವನದಲ್ಲಿ ಮಧುವೈರಿಕೊಳಲನೂದಲು
ಮಧುರ ನಿಸ್ವನ ಕೇಳಿ ಮದಿರಾಕ್ಷಿಯರೆಲ್ಲ …
…..
ತುರುಗಾಯ ಬಂದ ಗೋಪಿಯ ಕಂದ ಆನಂದದಿಂದ …..
…..
ಕಮಲದಳನೇತ್ರ ಕಮಲಾರಿಸಮವಕ್ತ್ರ
ಕಮಲಾ ವಿರಚಿತ ಸ್ತೋತ್ರ ಕರಧೃತಗೋತ್ರ
ಕಮಲಜನುತಿ ಪಾತ್ರ ಕರಿರಾಜಯಾತ್ರ
ಕಮಲಧರ ಕರಕಮಲಸಮಪದ
ಕಮಲಸಂಭವವಿನುತ ಕಂಧರ
ಕಮಲಸನ್ನಿಭ ಸುಗಾತ್ರ, ಕಮಲಾ ಕಳತ್ರ …
……
ಹಂಗ ವಿಹಂಗ ಭುಜಂಗ ನವಿಲು ಸಾ
ರಂಗ ಗಿಣಿಯು ಮಾತಂಗ ಮರಿಯು ಕು –
ರಂಗ ಮಧ್ಯೆ ಚರಣಂಗಳೆಡೆಗೆ ವೇ
ದಂಗಳೆರಗ ಕಾಮಂಗಳಲುಗೆ…

– ಇಲ್ಲಿಯ ಪ್ರಾಸಾನುಪ್ರಾಸಗಳ ಮೋಡಿ ಮನಕ್ಕೆ ಮುದಕೊಡುವಂತಹುದು.

ನಾಟಕೀಯತೆ ಶ್ರೀಪಾದರಾಜರ ಕೃತಿಗಳ ಕಾವ್ಯಮಯತೆಯ ಒಳಗುಟ್ಟು. ಸಾಮಾನ್ಯವಾಗಿ ಸಂಭಾಷಣಾ ತಂತ್ರವಿರುವ ಕೀರ್ತನೆಗಳಲ್ಲಿ ನಾಟಕೀಯತೆ ಎದ್ದು ಕಾಣುತ್ತದೆಯಾದರೂ ಅವರ ‘ದಂಡಕ’ದಲ್ಲಿ ಈ ಗುಣವನ್ನು ಸ್ಪಷ್ಟವಾಗಿ ಗುರುತಿಸಬಹುದು. ವಿಷ್ಣು ನರಸಿಂಹಾವತಾರವೆತ್ತಿ ಹಿರಣ್ಯಕಶಿಪುವನ್ನು ಸಂಹರಿಸಿ ಭಕ್ತಪ್ರಹ್ಲಾದನನ್ನು ಅನುಗ್ರಹಿಸಿದ ಕತೆಯನ್ನು ವಸ್ತುವಾಗುಳ್ಳ ದಂಡಕವನ್ನು ಪ್ರಾರಂಭದಿಂದ ಕೊನೆಯವರೆಗೂ ಓದಿದಾಗ ಒಂದು ನಾಟಕವನ್ನು ನೋಡಿದ ಅನುಭವವಾಗುತ್ತದೆ. ದೇವಾನುದೇವತೆಗಳೆಲ್ಲ ನರಸಿಂಹ ದೇವರ ಉಗ್ರರೂಪವನ್ನು ಶಾಂತಗೊಳಿಸಲು ವಿಫಲರಾದಾಗ ಬ್ರಹ್ಮನ ಕೋರಿಕೆಯಂತೆ ಲಕ್ಷ್ಮೀದೇವಿಯೇ ಆ ಕಾರ್ಯ ಮಾಡಲು ಮುಂದಾಗುತ್ತಾಳೆ:

ಆ ಮೇಲೆ ಆ ಬಾಲೆ, ಸಾ
ಕ್ಷಾಜ್ಜಗನ್ಮೋಹಿನೀ, ಲೀಲೆಗಳ್
ಮಿಂಚುತಾ
ಪೊಂಚುತಾ ಬಂದು, ಸಿಂಹಾಸನ ಸ್ಥಾನದಲ್
‌,
ಉಗ್ರನಂತಿಪ್ಪ ನೃಸಿಂಹ ಮೂರ್ತ್ಯುಗ್ರಮಂ,
ಕಂಡತಿ ವ್ಯಗ್ರಳಂತಾಗಿ, ಆ ತಾಯಿ,; ಹಿಂ
ದಕ್ಕೆ ಬಂದಳಮ್ಮಮ್ಮಾ, ಏಂ ಗುಮ್ಮನಂ
ತಿಪ್ಪನೇ ಸ್ವಾಮಿ, ಮುನ್ನಿಂತು ಆಶ್ಚರ್ಯವಂ
ಈಸು ವಿಕ್ರಮ್ಯವಂ, ಎಂದಿಗಾನೆಲ್ಲಿ ಕಂ
ಡಿಲ್ಲವಲ್ಲಾ, ಕಿವಿಲ್ಯಾದರುಂ ಕೇಳಲೇ
ಇಲ್ಲವಲ್ಲಾ, ಇದೇನೋ ವಿಚಿತ್ರಾಕೃತಿ
ಯಂತೆ ತೋರೂವನೆಂದಂಜೀಕೆಗೊಂಡ ರೀ
ತಿಂದ, ತಾ, ಹೆಜ್ಜೆ ಕಾಲ್ಗೆಜ್ಜೆಗಳ್
‌, ಸಪ್ಪುಳಂ
ಮಾಡದೇ, ಮೆಲ್ಲನೇ, ಪಾರ್ಶ್ವದಲ್
‌, ನಿಂತಳು.

ಕೋಪದಿಂದುರಿಯುತ್ತಿರುವ ನರಸಿಂಹಾವತಾರಿ ಹರಿ, ಹೆದರಿಕೆಯಿಂದ ಇಡೀ ದೇಹವನ್ನು ಒಂದು ಹಿಡಿಯಾಗಿ ಮಾಡಿನಿಂತ ಲಕ್ಷ್ಮೀದೇವಿ. ಈ ಇಡೀ ಸನ್ನಿವೇಶವನ್ನೇ ಒಂದು ಚಿತ್ರವಾಗಿ ಚಿತ್ರಿಸಬಹುದು; ನಾಟಕವಾಗಿ ಅಭಿನಯಿಸಬಹುದು. ಇಡೀ ದಂಡಕ ಇಂತಹ ಹಲವಾರು ರಸಮಯ ಸನ್ನಿವೇಶಗಳಿಂದ ಕೂಡಿ ಸೊಗಸಾದ ಖಂಡಕಾವ್ಯವಾಗಿ ಪರಿಮಳಿಸಿದೆ. ಇಲ್ಲಿಯ ವಸ್ತುವಿನ ಗಾಂಭೀರ್ಯ, ಸನ್ನಿವೇಶದ ಭಯಂಕರತೆಗಳಿಗೆ ತಕ್ಕ ಭಾಷೆ; ಭಾಷೆಗೆ ತಕ್ಕ ಬಂಧ ಕುತೂಹಲವನ್ನು ಕೆರಳಿಸುತ್ತಾ ತಣಿಸುತ್ತಾ ಓದಿಸಿಕೊಂಡು ಹೋಗುತ್ತದೆ. ಇಲ್ಲಿಯ ಸರಳವಾದ ಭಾಷೆ, ಲಯಬದ್ಧನಡೆ, ಸಹಜ ನಿರೂಪಣೆ, ವರ್ಣನಾಕುಶಲತೆಗಳು ಗಮನಾರ್ಹ.

ಭಾವತೀವ್ರವಾದಾಗ ಶ್ರೀಪಾದರಾಜರ ಕನ್ನಡ ಭಾಷೆಯೂ ನಿರರ್ಗಳವಾಗಿ ಹರಿದಿದೆ:

ಪೃಥಿವಿಯೊಳಗುದಿಸಿ ಮುವ್ವತ್ತಾರು ವತ್ಸರ ಈ
ರೀತಿ ಕಾಳಕಳೆದೆನೊ ಕೃಷ್ಣ
ವ್ಯರ್ಥವಾಯಿತು ಜನುಮ ಸಾರ್ಥಕಾಗದು ಕಣ್ಣು
ಕತ್ತಲೆಗವಿಸಿತಲ್ಲೋ ಕೃಷ್ಣ

ಇತ್ತಬಾರೆಂತೆಂದು ಹತ್ತಿಲಿಗೆ ಕರೆದೊಂದು
ತುತ್ತು ಕೊಡುವರ ಕಾಣೆನೊ ಕೃಷ್ಣ
ವಿಸ್ತರಿಸಲಾರೆ ಇನ್ನೆತ್ತ ಪೋಗಲೋ ನಿನ್ನ
ಚಿತ್ತವ್ಯಾತಕೆ ಕರಗದೊ ಕೃಷ್ಣ-

ಭಕ್ತನ ಮನದ ಅಳಲು ಯಾತನೆ ಹೊಯ್ದಾಟಗಳ ನೇರ ಹಾಗೂ ಶಕ್ತಿಯುತ ಚಿತ್ರಣವಿದು. ಸಂಗೀತಗುಣ, ನಾದಮಾಧುರ್ಯಗಳು ಶ್ರೀಪಾದರಾಜರ ಕೃತಿಗಳಲ್ಲಿ ಹಾಸುಹೊಕ್ಕಾಗಿವೆ. ‘ಇಕ್ಕೋನೋಡೆ ರಂಗನಾಥನ ದಿವ್ಯಪಾದವ’, ‘ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ’, ‘ಪೋಪು ಹೋಗೋಣ ಬಾರೊ ರಂಗ’, ‘ಇಟ್ಟ್ಹಾಂಗೆ ಇರುವೆನೊ ಹರಿಯೆ’, ‘ಎಲ್ಲ್ಯಾಡಿ ಬಂದ್ಯೋ ಎನ್ನ ರಂಗಯ್ಯ’, ‘ನಾ ನಿನಗೇನು ಬೇಡುವುದಿಲ್ಲ ರಂಗ’, ‘ಸಾಸಿರಜಿಹ್ವೆಗಳುಳ್ಳ ಶೇಷನೇ ಕೊಂಡಾಡಬೇಕು ವ್ಯಾಸಮುನಿರಾಯರ ಸನ್ಯಾಸದಿರವ’ – ಇಂತಹ ಕೀರ್ತನೆಗಳು ಈ ಮಾತಿಗೆ ಸಾಕ್ಷಿ.

ಶ್ರೀಪಾದರಾಜರ ಕೃತಿಗಳ ಛಂದಸ್ಸನ್ನು ಕುರಿತು ಹೇಳುವುದಾದರೆ ಅವು ಅಂಶಲಯದತ್ತ ವಾಲುವುವಾದರೂ ಯಾವುದೇ ಒಂದು ಕೃತಿಯಲ್ಲೂ ಖಚಿತವಾಗಿ ಅಂಶಲಯವನ್ನು ಗುರುತಿಸುವುದು ಸಾಧ್ಯವಿಲ್ಲ. ಹಾಗೆಯೇ ಅಲ್ಲಲ್ಲಿ ಮಾತ್ರ ಲಯದ ನಡೆ ಅನುಭವಕ್ಕೆ ಬಂದರೂ ಯಾವುದೇ ಒಂದು ಕೀರ್ತನೆ ಪೂರ್ಣವಾಗಿ ಮಾತ್ರಾಲಯದಲ್ಲಿಲ್ಲ. ಎಲ್ಲ ಕೃತಿಗಳೂ ಸಂಗೀತ ಲಯಾನುಸಾರಿಗಳೇ ಆಗಿವೆ.

ಒಳ್ಳೆಯ ಮಾತುಗಳನ್ನು ಕೇಳುವುದೇ ಹಿತ; ಅವು ಸಾಹಿತ್ಯ ರೂಪದಲ್ಲಿ ಬಂದರೆ ವಿಹಿತ; ಸಂಗೀತವೂ ಬೆರೆತಲ್ಲಿ ಪರಿಣಾಮ ಅದ್ಭುತ. ಶ್ರೀಪಾದರಾಜರ ಕೃತಿಗಳು ಭಾಷೆ ಅರ್ಥಗಳನ್ನು ಮೀರಿದ ಒಂದು ಅನುಭವವನ್ನು ಕೊಡುವುದಕ್ಕೆ ಇದೇ ಕಾರಣ. ಅಷ್ಟಾದಶ ವರ್ಣನೆಗಳಿಲ್ಲದ, ಧ್ವನಿ ಸಂಕೇತಗಳ ಉದ್ದಿಶ್ಯವನ್ನು ಕಾಣದ ಶ್ರೀಪಾದರಾಜರ ಅಂತರಂಗದ ನುಡಿಗಳು ಅನುಭವದ ಮೂಸೆಯಲ್ಲಿ ಮಿಡಿದಿವೆ; ಕೀರ್ತನೆಗಳಾಗಿ ಹೊರಹೊಮ್ಮಿವೆ. ಅವು ಜನಸಾಮಾನ್ಯರ ಅನುಭವಗಳೂ ಆಗಿರುವುದರಿಂದ ಹಾಡುಗ ಕೇಳುಗರ ಮನಸ್ಸಿನ ತರಂಗಾಂತರಗಳು ಒಂದೇ ಆಗಿದ್ದು, ಪ್ರತಿಯೊಬ್ಬರಿಗೂ ತಮ್ಮ ಹೃದಯವೇ ತಮ್ಮೊಡನೆ ಮಾತಾಡುತ್ತಿರುವ ಅನುಭವವಾಗಿ, ಮನಸ್ಸು ರಸಾರ್ದ್ರವಾಗಿ, ಶಾಂತಭಾವದಲ್ಲಿ ವಿರಮಿಸುತ್ತದೆ.