ಭಕ್ತ – ಭಗವಂತರ ನಡುವೆ ಗೆಳೆತನದ ಸವಿಯನ್ನು, ಸಲಿಗೆಯನ್ನು ಕಲ್ಪಿಸಿಕೊಂಡು ಪರಸ್ಪರ ಸ್ನೇಹಿತರೆಂಬ ಕಲ್ಪನೆಯಿಂದ ಭಕ್ತಿಸಾಧನೆ ಮಾಡುವುದು ‘ಸಖ್ಯಭಕ್ತಿ’ ಅಥವಾ ‘ಸಖ್ಯಭಾವ’. ಶ್ರೀಪಾದರಾಯರಲ್ಲಿ ಸಖ್ಯಭಕ್ತಿಯ ಕೀರ್ತನೆಗಳೂ ವಿಶೇಷಕಾವ್ಯಸೌಂದರ್ಯದಿಂದ ಕೂಡಿವೆ. ಶ್ರೀಹರಿ ತಮ್ಮ ಬಾಲ್ಯದ ಸ್ನೇಹಿತನೆಂದು ಪರಿಭಾವಿಸಿರುವ ಶ್ರೀಪಾದರಾಜರು ಅನೇಕ ವರ್ಷಗಳ ಬಳಿಕ ಅಗಲಿದ್ದ ಆ ಬಾಲ್ಯ ಸ್ನೇಹಿತ ದನಗಾಹಿ ಹರಿಯನ್ನು ಭೇಟಿಯಾದಂತೆ ಕಲ್ಪಿಸಿಕೊಂಡು ಒಂದು ಮೋಹಕ ಕೃತಿಯನ್ನು ರಚಿಸಿರುವರು:

ಮರೆತೆಯೇನೋ ರಂಗ ಮಂಗಳಾಂಗ
ತುರುಕರು ಕಾಯ್ವಲ್ಲಿ ತೊಂಡನಾಗಿದ್ದೆನ್ನ ||ಪ||

ಕೋಲು ಕೈಯಲಿ ಕೊಳಲು ಜೋಲುಗಂಬಳಿ ಹೆಗಲ
ಮ್ಯಾಲೆ ಕಲ್ಲಿಚೀಲ ಕೊಂಕಳಲ್ಲಿ
ಕಾಲಗಡಗವ ನಿಟ್ಟು ಕಾಡೊಳಿಹ ಪಶುಹಿಂಡ
ಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ ||೧||

ಕಲ್ಲುಮಣಿ ಕವಡೆಯನು ಕಾಡೊಳಿಹ ಗುಲಗಂಜಿ
ಸಲ್ಲದೊಡವೆಯ ನೀನು ಸರ್ವಾಂಗಕೆ
ಅಲ್ಲಲ್ಲೆಸೆಯೆ ಧರಿಸಿ ನವಿಲಗರಿಗಳ ಗೊಂಡೆ
ಅಲ್ಲಿ ಗೊಲ್ಲರ ಕೂಡ ಚಲ್ಲಾಡವಾಡುತಲಿ ||೨||

ಸಿರಿದೇವಿ ಬಂದು ಸೇರಿದ ಬಳಿಕ ಲೋಕದಲಿ
ಸಿರಿ ಅರಸನೆಂದು ಸೇವಕರರಿವರೋ
ಶರಣಾಗತರ ಪೊರೆವ ಶ್ರೀರಂಗವಿಠಲಯ್ಯ
ನರಸಿಂಹ ನೀನಿರುವ ಪರಿಯು ಮುಂದಿನ ಸಿರಿಯು ||೩||

– ಎಂದು ಮುಂತಗಿ ಸಿರಿದೇವಿ ಬರುವ ಮುನ್ನ ಅಂದರೆ ಮದುವೆಗೆ ಮೊದಲು ಕೃಷ್ಣ ಕಲ್ಲು ಕವಡೆ ಮಣಿ ನವಿಲುಗರಿಗಳಿಂದಲಂಕರಿಸಿಕೊಂಡು ಗೆಳೆಯರ ಹಿಂಡನ್ನು ಕಟ್ಟಿಕೊಂಡು ಅಡವ್ಯಡವಿ ತಿರುಗುತ್ತಿದ್ದ ಅವನ ಬಾಲ್ಯಾವಸ್ಥೆಯನ್ನು ಅವನಿಗೇ ನೆನಪು ಮಾಡಿಕೊಟ್ಟಿರುವರು. ಚಿತ್ರಕಾರನ ಕುಂಚಕ್ಕೆ ಒಂದು ಸೊಗಸಾದ ಶಬ್ದ ಚಿತ್ರವಿದು. ಇನ್ನೊಂದು ಕೀರ್ತನೆಯಲ್ಲಿ,

ವಾಸುದೇವ ನಿನ್ನ ಮರ್ಮಕರ್ಮಂಗಳ
ದೇಶದೇಶದಲ್ಲಿ ಪ್ರಕಟಿಸಲೊ
ಬೇಸರದೆ ಎನ್ನ ಹೃದಯಕಮಲದಲ್ಲಿ
ವಾಸವಾಗಿ ಸುಮ್ಮನಿದ್ದೀಯೊ

– ಎಂದು ಕೃಷ್ಣನನ್ನು ಬೆದರಿಸಿರುವರು. ನೀನು ಬೆಣ್ಣೆ ಕದ್ದು ತಿಂದದ್ದು, ತುಂಟತನ ಮಾಡಿ ಒರಳಿಗೆ ಕಟ್ಟಿಸಿಕೊಂಡದ್ದು, ಗೊಲ್ಲರ ಜೊತೆ ಅವರು ಕಲ್ಲಿಚೀಲದಲ್ಲಿ ತಂದಿದದ ಅನ್ನವನ್ನುಂಡದ್ದು – ಎಲ್ಲವನ್ನೂ ಹೇಳಿಬಿಡಲೆ? ಅಷ್ಟೇ ಅಲ್ಲ, ಕಾಳಿಂಗನ ಹೆಡೆತುಳಿದದ್ದು, ಹೆಂಡತಿ ಮಾತು ಕೇಳಿ ಪಾರಿಜಾತ ತಂದುಕೊಟ್ಟದ್ದು, ಗೌರೀವ್ರತ ಮಾಡಲು ಬಂದಿದ್ದ ಮಾನಿನಿಯರ ವ್ರತಭಂಗ ಮಾಡಿದ್ದು, ತೃಣಾವರ್ತ ಜರಾಸಂಧ ಕಾಲಯವನಾದಿ ರಕ್ಕಸರನು ಕೊಂದಿದ್ದು ಎಲ್ಲವನ್ನೂ ಹೇಳಿ ಬಿಡುತ್ತೇನೆಂದು ಬೆದರಿಸುತ್ತಲೇ ಎಲ್ಲವನ್ನೂ ಹೇಳಿಬಿಟ್ಟಿರುವ ತಂತ್ರಗಾರಿಕೆಯಲ್ಲಿ ಸೊಗಸಿದೆ.

‘ಒಲಿದೆ ಯಾತಕಮ್ಮಾ ಲಕ್ಷುಮಿ ವಾಸುದೇವಗೆ’ – ಎನ್ನುವ ಕೀರ್ತನೆಯಲ್ಲಿ ಹರಿಯನ್ನು ಕೈಬಿಟ್ಟು ಲಕ್ಷ್ಮೀದೇವಿಯ ಬೆನ್ನತ್ತಿ ಹೊರಟಿದ್ದಾರೆ, ಶ್ರೀಪಾದರಾಜರು. ಮಾವನನ್ನು ಮಡುಹಿದ, ಹದಿನಾರು ಸಾವಿರ ಗೋಪಿಯರನ್ನು ಮದುವೆಯಾದ, ಗೋಪಿಯರ ಮನೆಗಳಲ್ಲಿ ಹಾಲು ಮೊಸರು ಬೆಣ್ಣೆ ಕದ್ದ ಕಳ್ಳ, ಕರಿಯ ಕೃಷ್ಣನನ್ನು ಯಾತಕ್ಕಾಗಿ ಮೋಹಿಸಿದೆ? ನಿನಗೆ ಅನುರೂಪ;ನಾದ ಸ್ಫುರದ್ರೂಪಿ ವರ ಬೇರೆಲ್ಲೂ ಸಿಗಲಿಲ್ಲವೆ? – ಎಂದು ಲಕ್ಷ್ಮಿಯನ್ನು ಕೇಳುವ ನೆಪದಲ್ಲಿ ಸಲಿಗೆಯಿಂದ ಶ್ರೀಹರಿಯನ್ನು ಆಡಿಕೊಂಡು ನಕ್ಕಿದ್ದಾರೆ.

ಭಕ್ತ-ಭಗವಂತರ ನಡುವೆ ಮನುಷ್ಯ ಸಂಬಂಧದ ಲೇಪವಿಲ್ಲದೆ ಕೇವಲ ಭಕ್ತ – ಭಗವಂತರೆಂಬ ಭಾವನೆಯಿಂದ ಮಾತ್ರ ಹರಿಯ ರೂಪ ಗುಣ ಮಾಹಾತ್ಮ್ಯಾದಿಗಳನ್ನು ಚಿತ್ರಿಸಿರುವುದು ‘ಶಾಂತಭಕ್ತಿ’ ಅಥವಾ ‘ಶಾಂತಭಾವ’ ಎನ್ನಿಸಿಕೊಳ್ಳುತ್ತದೆ. ರಂಗವಿಠಲನನ್ನು ನಂಬಿದವರಿಗೆ ಮುಕ್ತಿ ದೊರೆಯುವುದೆಂಬುದನ್ನು:

ಭಕ್ತಿ ಬೇಕು ವಿರಕ್ತಿ ಬೇಕು ಸರ್ವ
ಶಕ್ತಿ ಬೇಕು ಮುಂದೆ ಮುಕ್ತಿಯ ಬಯಸುವಗೆ ||ಪ||

………….

ಜಪದ ಜಾಣುವೆ ಬೇಕು ತಪದನೇಮವೆ ಬೇಕು
ಉಪವಾಸ ವ್ರತಬೇಕು ಉಪಶಾಂತವಿರಬೇಕು ||೨||

ಸುಸಂಗ ಹಿಡಿಯಲಿಬೇಕು ದುಸ್ಸಂಗ ಬಿಡಲಿಬೇಕು
ರಂಗವಿಠಲನ್ನು ಬಿಡದೆ ನೆರೆ ನಂಬಿರಲಿಬೇಕು ||೩||

– ಎಂಬುದಾಗಿ ಜಪ, ತಪ, ಉಪವಾಸ ವ್ರತಗಳೆಲ್ಲದರ ಜೊತೆಗೆ ಹರಿಕರುಣೆಯ ಬಯಕೆ ಶ್ರದ್ಧೆ, ನಂಬಿಕೆಗಳು ಮುಖ್ಯವೆಂದಿದ್ದಾರೆ, ಶ್ರೀಪಾದರಾಜರು. ಮುಕ್ತಿಯನ್ನು ಆಶಿಸುವ ವ್ಯಕ್ತಿಗೆ ಎಂತಹ ಶಿಸ್ತಿನ ಜೀವನವಿರಬೇಕೆನ್ನುವ ಬಗ್ಗೆ ಈ ಕೀರ್ತನೆಯಲ್ಲಿ ಮಾರ್ಗದರ್ಶನ ದೊರೆಯುತ್ತದೆ. ಅಂತೆಯೇ ‘ಭೂಷಣಕೆ ಭೂಷಣ ಇದು ಭೂಷಣ| ಶೇಷಗಿರಿವಾಸ ಶ್ರೀವರ ವೆಂಕಟೇಶ’- ಎನ್ನುವ ಕೀರ್ತನೆಯಲ್ಲೂ ಹರಿನಾಮ ಸ್ಮರಣೆ, ಹರಿನಾಮ ಕೀರ್ತನೆ, ಕ್ಷೇತ್ರಗಳ ಶ್ರೇಷ್ಠತೆ, ಅವಯವಗಳ ಸಾರ್ಥಕತೆಗಳ ಬಗ್ಗೆ ಶಾಂತಚಿತ್ತರಾಗಿ ತಿಳಿಸಿಕೊಟ್ಟಿದ್ದಾರೆ. ‘ಸ್ಮರಿಸಿ ದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವ’, ‘ಸರಸಿಜಾಕ್ಷ ಸರಸದಿಂದ ಸರಸಿ ಜೋದ್ಭವಗೊಲಿದು ಬಂದ’, ‘ರಂಗನಾಥನ ನೋಡುವ ಬನ್ನಿ ಶ್ರೀರಂಗನ ದಿವ್ಯವಿಮಾನದಲ್ಲಿಹನ’ ‘ಬರುವುದು ಬುದ್ಧಿಯು ಬಲವು ಕೀರುತಿಯು’, ‘ಕಲಿಕಾಲಕೆ ಸಮಯುಗವಿಲ್ಲವಯ್ಯ’, – ಇತ್ಯಾದಿ ಕೀರ್ತನೆಗಳಲ್ಲಿ ಹರಿಯ ರೂಪ ಗುಣಾದಿಗಳನ್ನು ಮನದುಂಬಿ ಬಣ್ಣಿಸಿರುವರು. ‘ಕಂಗಳಿ ದ್ಯಾತಕೋ ಕಾವೇರಿ ರಂಗನ ನೋಡದ ’ ಎನ್ನುವ ಶ್ರೀಪಾದರಾಜರ ಜನಪ್ರಿಯ ಕೀರ್ತನೆಯಲ್ಲಿ, ಶ್ರೀರಂಗ ಕ್ಷೇತ್ರದಲ್ಲಿರುವ ಚಂದ್ರಪುಷ್ಕರಿಣಿಯಲ್ಲಿ, ವಿರಜಾನದಿಯನ್ನು ಹೋಲುವ ಕಾವೇರಿ ನದಿಯಲ್ಲಿ ಮಿಂದು ಪರವಾಸುದೇವನ ವೈಕುಂಠವನ್ನು ನೆನಪಿಸುವ ಸ್ವಾಮಿಯ ಮೂರ್ತಿ ಹಾಗೂ ದೇವಾಲಯಗಳನ್ನು ಎಂದಿಗಾದರೂ ಒಮ್ಮೆ ಬಂದು ದರ್ಶಿಸಿ ಭಕ್ತಜನರು ತಮ್ಮ ಕಣ್ಣುಗಳನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಆಶಿಸಿರುವರು. ಇನ್ನೊಂದು ಕೀರ್ತನೆಯಲ್ಲಿ ತಮ್ಮ ಆರಾಧ್ಯದೈವವಾದ ಶ್ರೀರಂಗವಿಠಲನನ್ನು ಮುಡಿಯಿಂದ ಅಡಿಯವರೆಗೆ ಬಣ್ಣಿಸಿ, ಕೊನೆಗೆ ‘ರಂಗವಿಠಲನ ಸರ್ವಾಂಗಕೆ ಶರಣು’ – ಎಂದು ಮಣಿದಿರುವರು:

ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು ||ಪ||

ಶಿರದಲೊಪ್ಪುವ ನೀಲ ಕುಂತಳಕೆ ಶರಣು
ಸಿರಿ ಸಹೋದರನರ್ಧದ ವಳಿಗೆ ಶರಣು ||ಅ.ಪ||

ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು
ಸಂಪಿಗೆಯ ಕುಸುಮಸಮ ನಾಸಿಕಕೆ ಶರಣು
ಗುಂಪು ರತ್ನದ ಕರ್ಣಕುಂಡಲಗಳಿಗೆ ಶರಣು
ಇಂಪುದರ್ಪಣ ನಿಭ ಕಪೋಲಗಳಿಗೆ ಶರಣು ||೧||

ಕುಂದಕುಟ್ಮಲ ಪೋಲ್ವ ದಂತ ಪಂಕ್ತಿಗೆ ಶರಣು
ಅಂದವಾಗಿರುವ ಬಿಂಬೋಷ್ಠಕೆ ಶರಣು
ಚಂದ್ರಿಕಾನಿಭ ಮುದ್ದು ಮಂದಹಾಸಕೆ ಶರಣು
ನಂದಗೋಪನ ಮುದ್ದು ಕಂದನಿಗೆ ಶರಣು ||೨||

ಅಬ್ಜನಾಭನ ದಿವ್ಯ ಕಂಬುಕಂಠಕೆ ಶರಣು
ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು
ಕುಬ್ಜೆಯನು ಡೊಂಕ ತಿದ್ದಿದ ಭುಜಗಳಿಗೆ ಶರಣು
ಅಬ್ಜಜಾಸನನ ಪೆತ್ತ ನಾಭಿಗೆ ಶರಣು ||೩||

ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು
ಪೊನ್ನ ಕದಳೀ ಪೋಲ್ವ ತೊಡೆಗಳಿಗೆ ಶರಣು
ಪುನ್ನಾಗಕರಗೆತ್ತ ದ್ವಯ ನಿತಂಬಕೆ ಶರಣು
ಚೆನ್ನಾಗಿ ಕುಣಿವ ಸಮಜಾನುವಿಗೆ ಶರಣು ||೪||

ಮಂಗಳ ವೈಭೋಗಂಗಳ ಅಂಘ್ರಿದ್ವಯಕೆ ಶರಣು
ತುಂಗ ಕುಚಗಳ ಪಿಡಿದ ಕರಗಳಿಗೆ ಶರಣು
ಪೊಂಗೊಳಲೂದುವಾ ಅಂಗುಲಿಗಳಿಗೆ ಶರಣು
ರಂಗವಿಠಲನ ಸರ್ವಾಂಗಕೆ ಶರಣು ||೫||

– ರಂಗವಿಠಲನ ಚೆಲುವು, ವಿಶಿಷ್ಟ ರೂಪ – ಗುಣಗಳ ಶಕ್ತಿ, ಮಹಿಮಾದಿಗಳನ್ನು ಕಂಡು ಭಕ್ತನೊಬ್ಬನ ಮೆಚ್ಚುಗೆ ಸಂತಸ ವಿಸ್ಮಯಾದಿಗಳು ಇಂತಹ ಕೃತಿಗಳಲ್ಲಿ ಹೊರಹೊಮ್ಮಿವೆ.

ದ್ವೈತತತ್ತ್ವ ಪ್ರತಿಪಾದನೆ:

ಶ್ರೀಪಾದರಾಜರ ಕೃತಿಗಳಲ್ಲಿ ಭಾವಾನುಭವಗಳ ರಸಾಸ್ವಾದನೆಯ ಸೊಗಸಿನೊಂದಿಗೆ ದ್ವೈತ ಸಿದ್ಧಾಂತ ತತ್ತ್ವಗಳ ಪ್ರತಿಪಾದನೆಯೂ ಸಾಕಷ್ಟಿದೆ. ಹರಿದಾಸರ ಮೂಲ ಉದ್ದೇಶವೇ ಕನ್ನಡ ಭಾಷೆಯಲ್ಲಿ ದ್ವೈತ ಸಿದ್ಧಾಂತದ ಪ್ರಸಾರ, ಪ್ರಚಾರ, ಹರಿ ಸರ್ವೋತ್ತಮತ್ವ, ತಾರತಮ್ಯ, ಪಂಚಭೇದ, ಗುರುಸ್ತುತಿ, ಮಾಯಾವಾದ ಖಂಡನೆ – ಇತ್ಯಾದಿ ತತ್ತ್ವವಿಚಾರಗಳು ಅವರ ಕೀರ್ತನೆಗಳಲ್ಲಿ ಹಾಸು ಹೊಕ್ಕಾಗಿವೆ. ತತ್ತ್ವ ಪ್ರತಿಪಾ:ದನೆ ಮಾಡುವಲ್ಲಿ ಶ್ರೀಪಾದರಾಜರು ಪುರಾಣಗಳ ಪಾತ್ರ, ಕತೆ, ಸನ್ನಿವೇಶ, ಸಂದರ್ಭಗಳನ್ನು ದೃಷ್ಟಾಂತವಾಗಿ ಬಳಸಿಕೊಂಡು ಹೇಳಿರುವುದರಿಂದ ಅವು ಕೇಳಿದ ಕೂಡಲೇ ಜನಸಾಮಾನ್ಯರ ಗ್ರಹಿಕೆಗೆ ದಕ್ಕುತ್ತವೆ. ಕಾರಣ, ಪುರಾಣಗಳ ಅಲ್ಪ ಸ್ವಲ್ಪ ಪರಿಚಯವಾದರೂ ಇಲ್ಲದ ಭಾರತೀಯರೇ ಇಲ್ಲವೆಂದರೂ ಸಲ್ಲುತ್ತದೆ.

ಬಿಡಿ ಬಿಡಿ ಸಂದೇಹವನು ಪೊಡವಿ ಮನುಜರೆಲ್ಲ
ಒಡೆಯನೊಬ್ಬನೆ ಜಗಕೆ ರಂಗವಿಠಲ

– ಎನ್ನುವ ಕೀರ್ತನೆಯಲ್ಲಿ ಹರಿಸರ್ವೋತ್ತಮನೆಂಬ ತತ್ವವನ್ನು ಪ್ರತಿಪಾದಿಸಲು ಭಾಗವತದಲ್ಲಿ ಬರುವ ಭೃಗುಮಹರ್ಷಿಯ ಕತೆಯನ್ನು ಅತ್ಯಂತ ಸರಳವಾಗಿ ಹೇಳಿರುವರು. ಒಮ್ಮೆ ದೇವತೆಗಳಲ್ಲಿ ತ್ರಿಮೂರ್ತಿಗಳ ಪೈಕಿ ಯಾರು ಶ್ರೇಷ್ಠರು ಎನ್ನುವ ಬಗ್ಗೆ ವಾದ ವಿವಾದಗಳಾಗಿ, ಅದನ್ನು ನಿರ್ಧರಿಸಿ ಹೇಳುವ ಕೆಲಸವನ್ನು ಭೃಗುಮಹರ್ಷಿಗಳಿಗೆ ಒಪ್ಪಿಸುವರು. ಭೃಗು ಮಹರ್ಷಿಗಳು ಮೊದಲು ಬ್ರಹ್ಮನ ಬಳಿಗೆ ಹೋಗಿ ಅವನನ್ನು ವಂದಿಸದೆ ಅಸಡ್ಡೆ ಮಾಡಲು ಬ್ರಹ್ಮನಿಗೆ ಕೋಪ ಬಂತು. ಅವರು ಕೂಡಲೇ ಅಲ್ಲಿಂದ ಕೈಲಾಸಕ್ಕೆ, ಈಶ್ವರನ ಬಳಿಗೆ ಹೋದರು. ಈಶ್ವರನು ಋಷಿಗಳೊಡನೆ ಅತಿ ಸಲಿಗೆಯಿಂದ ವರ್ತಿಸಿದಾಗ ಋಷಿಗಳಿಗೇ ಸಿಟ್ಟು ಬಂತು. ಅದನ್ನು ಕಂಡ ಶಂಕರನಿಗೂ ತಾಳ್ಮೆ ತಪ್ಪಿತು. ಬ್ರಹ್ಮ ಈಶ್ವರರಿಬ್ಬರೂ ಶ್ರೇಷ್ಠರಲ್ಲವೆಂದು ನಿರ್ಧರಿಸಿ ವೈಕುಂಠಕ್ಕೆ ಬಂದರು. ಅಲ್ಲಿ ಮಹರ್ಷಿಗಳು ಲಕ್ಷ್ಮೀ ಸಮೇತನಾಗಿದ್ದ ವಿಷ್ಣುವಿನ ಎದೆಗೆ ಒದೆಯಲು, ವಿಷ್ಣು ಕೋಪಗೊಳ್ಳದೆ ‘ನೋವಾಯಿತೆ’? ಎಂದು ಕೇಳಿ ಅವರ ಪಾದಮುಟ್ಟಿ ಪೂಜಿಸಿದನಂತೆ. ವಿಷ್ಣುವಿನ ಈ ನಡವಳಿಕೆಯನ್ನು ಮೆಚ್ಚಿದ ಮಹರ್ಷಿಗಳು ಅವನೇ ಪರತತ್ವ, ಸರ್ವೋತ್ತಮ, ಶ್ರೇಷ್ಠನೆಂದು ತೀರ್ಪಿತ್ತರಂತೆ. ಈ ಕತೆಯನ್ನು ವಿವರವಾಗಿ ಪ್ರಸ್ತಾಪಿಸಿರುವುದರಲ್ಲದೆ ಸಮುದ್ರ ಮಥನ ಕಾಲದಲ್ಲಿ ಅವತರಿಸಿ ಬಂದ ಲಕ್ಷ್ಮೀ ಶ್ರೀಹರಿಯೇ ಶ್ರೇಷ್ಠನೆಂದು, ಉಳಿದ ದೇವಾನುದೇವತೆಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಅವನನ್ನೇ ವರಿಸಿದ್ದು; ಶ್ರೀಹರಿ ನಕ್ರನ ಬಾಯಿಂದ ಗಜೇಂದ್ರನನ್ನು ರಕ್ಷಿಸಿದ್ದು; ರಾಜಸೂಯ ಯಾಗದ ಕಾಲದಲ್ಲಿ ಕೃಷ್ಣನೇ ಅಗ್ರ ಪೂಜೆಗೆ ಅರ್ಹನೆಂದು ಭೀಷ್ಮರು ನುಡಿದದ್ದು – ಈ ಎಲ್ಲ ಪ್ರಸಂಗಗಳನ್ನೂ ಪ್ರಸ್ತಾಪಿಸಿ, ಶ್ರೀಹರಿಯ ಪಾದಸ್ಪರ್ಶದಿಂದ ಗಂಗೆ ಪಾವನಳಾದಳೆಂದೂ ಶಿವನು ಇಂತಹ ಶ್ರೀಹರಿಯ ದಾಸಾನುದಾಸನಾಗಿರುವನೆಂದೂ ಹೇಳುವ ಮೂಲಕ ಹರಿಯೇ ಸರ್ವೋತ್ತಮನೆಂದು ಸಾಧಿಸಿ ತೋರಿಸಿರುವರು. ಜನಸಾಮಾನ್ಯರ ಕತೆಹೇಳುವ ಕುತೂಹಲವನ್ನು ತಣಿಸುವ ತಂತ್ರಗಾರಿಕೆಯಿಂದ ತಮ್ಮ ಉದ್ದಿಶ್ಯ ಪರಿಣಾಮವನ್ನು ಇಲ್ಲಿ ಸಾಧಿಸಿರುವರು.

ಹರಿಹರರು ಸರಿಯೆಂಬ ಮರುಳು ಜನರು
ಹರಿಹರರ ಚರಿತೆಯನು ತಿಳಿದು ಭಜಿಸುವುದು

– ಎನ್ನುವ, ಹನ್ನೊಂದು ನುಡಿಗಳ ಸುದೀರ್ಘ ಕೀರ್ತನೆಯಲ್ಲಿಯೂ ಪೂರ್ವಕತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿರುವರು. ಕೃತಯುಗದಲ್ಲೊಮ್ಮೆ ದೇವತೆಗಳ ನಡುವೆ ಹರಿಹರರಿಬ್ಬರಲ್ಲಿ ಯಾರು ಅಧಿಕರು? ಎಂಬ ಪ್ರಶ್ನೆ ಬಂದಾಗ, ಹರಿಹರರಿಬ್ಬರೂ ತಮ್ಮ ಬಿಲ್ಲುಗಳನ್ನೆತ್ತಿಕೊಂಡು ಯುದ್ಧ ಮಾಡಿ ತಮ್ಮ ಸಾಮರ್ಥ್ಯವನ್ನು ಪ್ರಕಟಿಸಬೇಕೆಂದು ತೀರ್ಮಾನವಾಯಿತು. ಅಂತೆಯೇ ವಿಷ್ಣು ತನ್ನ ಶಾರ್ಙ್ಗವನ್ನು ಹಿಡಿದು ಯುದ್ಧ ಸನ್ನದ್ಧನಾದ. ಶಿವನಿಗೆ ತನ್ನ ಪಿನಾಕವನ್ನು ಎತ್ತಲೂ ಆಗದೆ ಅವನು ಸುಮ್ಮನೆ ನಿಂತುಬಿಟ್ಟನು. ಆಗ ಮುಖ್ಯ ಪ್ರೇರಕನಾದ ಶ್ರೀಹರಿಯಿಂದ ಪ್ರೇರಣೆ ಬಾರದೆ ತಟಸ್ಥನಾದ ಶಿವ ಸೋತನೆಂದೂ ಶ್ರೀಹರಿಯೇ ಅಧಿಕನೆಂದೂ ದೇವತೆಗಳು ಒಪ್ಪಿಕೊಂಡರು. ಶ್ರೀಪಾದರಾಜರು ಇಲ್ಲಿ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಉಕ್ತವಾಗಿರುವ ಕತೆಯನ್ನೆತ್ತಿ ಬಳಸಿಕೊಂಡಿರುವರು.[1] ಅಂತೆಯೇ ಈಶ್ವರ ಭಸ್ಮಾಸುರನಿಗೆ ವರವಿತ್ತು. ಅದಕ್ಕೆ ತಾನೇ ಬಲಿಯಾಗುವ ಸಂದರ್ಭ ಬಂದಾಗ ಶ್ರೀ ಹರಿ ಮೋಹಿನೀ ರೂಪ ತಾಳಿ, ಭಸ್ಮಾಸುರನನ್ನಾಕರ್ಷಿಸಿ, ಉಪಾಯದಿಂದ ಅಸುರ ಪಡೆದಿದ್ದ ವರಕ್ಕೆ ಅವನೇ ಬಲಿಯಾಗುವಂತೆ ಮಾಡಿ ಈಶ್ವರನನ್ನು ರಕ್ಷಿಸಿದ ಕತೆ; ಅಂಬರೀಶನ ಏಕಾದಶೀ ವ್ರತಭಂಗ ಮಾಡಲು ಪ್ರಯತ್ನಿಸಿದ ದೂರ್ವಾಸರನ್ನು ಚಕ್ರದಿಂದ ನಿಗ್ರಹಿಸಿ, ಅವರು ಬಂದು ಅಂಬರೀಶನನ್ನೇ ಮರೆಹೋಗುವಂತೆ ಮಾಡಿದ ಕತೆ; ಉತ್ತರೆಯ ಗರ್ಭದಲ್ಲಿದ್ದ ಭ್ರೂಣದ ನಾಶಕ್ಕೆಂದು ಅಶ್ವತ್ಥಾಮನು ನಾರಾಯಣಾಸ್ತ್ರವನ್ನು ಬಿಟ್ಟಾಗ ಕೃಷ್ಣ ಆ ಅಸ್ತ್ರವನ್ನು ನಿಗ್ರಹಿಸಿ ಪಾಂಡವರ ವಂಶದ ಕುಡಿಯನ್ನು ರಕ್ಷಿಸಿದ ಮಹಾಭಾರತದಲ್ಲಿಯ ಕತೆ; ಒಮ್ಮೆ ಹರನು ಹರಿಯ ಮೋಹಿನೀ ರೂಪವನ್ನು ನೋಡಲು ಬಯಸಿ, ಕಂಡಾಗ ಅರಿವು ತಪ್ಪಿ ಕಾಮಾತುರನಾಗಿ ಆಕೆಯನ್ನು ಹಿಡಿಯಲು ಹೋದಾಗ ಮೋಹಿನಿಯಾಗಿದ್ದ ವಿಷ್ಣು ಸ್ವಸ್ವರೂಪದಲ್ಲಿ ಪ್ರಕಟಗೊಂಡ ಕತೆ ಇತ್ಯಾದಿಗಳನ್ನು ಹೇಳುವ ಮೂಲಕ ಕಹರಿ ಸರ್ವೋತ್ತಮತ್ವವನ್ನು ಸಾರಿದ್ದಾರೆ. ಗೋವರ್ಧನೋ ದ್ವರಣ, ಅಹಲ್ಯಾ ಶಾಪವಿಮೋಚನೆ, ಕುಚೇಲೋಪಾಖ್ಯಾನ, ಪಾರಿಜಾತಾಪಹರಣ, ಕಾಳಿಂಗಮರ್ದನ- ಇತ್ಯಾದಿ ಭಾಗವತ ಪುರಾಣದ ಕತೆಗಳನ್ನು, ಧ್ರುವ, ವಿಭೀಷಣ, ಶಕಟಾಸುರ, ಅಹಲ್ಯೆ, ಬಲಿ, ಪ್ರಹ್ಲಾದ, ಅಜಾಮಿಳ, ಮುರ, ಅಕ್ರೂರ, ಕಂಸ, ಚಾಣೂರರೇ ಮೊದಲಾದ ಪುರಾಣ ಪಾತ್ರಗಳನ್ನೂ ಧಾರಾಳವಾಗಿ ಮಧ್ವಮತ ತತ್ತ್ವ ಪ್ರಸಾರದ ಸಶಕ್ತ ಮಾಧ್ಯಮಗಳಾಗಿ ಬಳಸಿ ಕೊಂಡಿರುವರು. ಅಜಾಮಿಳ, ದ್ರೌಪದಿಯಂಥ ಪಾತ್ರಗಳು ಶ್ರೀಹರಿ ಕರುಣಾಮಯಿ, ಭಕ್ತ ವತ್ಸಲ ಎಂಬುದನ್ನು ದೃಢೀಕರಿಸಿದರೆ ಶಕಟಾಸುರ ಪೂತನಿ ಕೀಚಕಾದಿ ಪಾತ್ರಗಳು ಶ್ರೀಹರಿ ದುಷ್ಟ ಶಿಕ್ಷಕ-ಶೀಷ್ಟರಕ್ಷಕನೆಂಬುದಕ್ಕೆ ಪ್ರಮಾಣವಾಗಿ ನಿಲ್ಲುತ್ತವೆ. ಮುಂದಿನ ಹರಿದಾಸರಲ್ಲಿ ಪುರಾಣಗಳ ಈ ರೀತಿಯ ಬಳಕೆ ಒಂದು ಸಂಪ್ರದಾಯವಾಗಿಯೇ ಪರಿಣಮಿಸಿರುವುದು ಗಮನಾರ್ಹ ಸಂಗತಿ.

ಮಾಧ್ವ ಸಂಪ್ರದಾಯದ ಪ್ರಕಾರ ಈಶ್ವರ ಮನೋಭಿಮಾನಿ ದೇವತೆಯೆನ್ನಿಸಿಕೊಂಡು ರುದ್ರನಾಮದಿಂದ ಹರಿಯ ಮೊಮ್ಮಗನೆನಿಸಿಕೊಂಡಿರುವನು. ತಮ್ಮ ಒಂದು ಕೀರ್ತನೆಯಲ್ಲಿ ‘ವೃಷಭನೇರಿದ ವಿಷಧರನ್ಮಾರೆ ಪೇಳಮ್ಮಯ್ಯ’- ಎಂದು ಒಬ್ಬ ಸಖಿ ತನ್ನ ಗೆಳತಿಯನ್ನು ಕೇಳಲು ಆಕೆ ‘ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದ ಜಟಾಮಂಡಲಧಾರಿ ಕಣಮ್ಮ’-ಎಂದುತ್ತರ ಕೊಡುವ ಹಾಗೆ ಸಂಭಾಷಣಾತಂತ್ರವನ್ನನುಸರಿಸಿದ್ದಾರೆ ಶ್ರೀಪಾದರಾಜರು ಕೈಲಾಸದ ಒಡೆಯನಾದರೂ ಸ್ಮಶಾನವಾಸಿ; ಸಾವಿರ ನಾಲಿಗೆಯ ಆದಿಶೇಷ ಅವನಿಗೆ ಆಭರಣ; ದಾಕ್ಷಾಯಣಿಯ ಪತಿಯಾದ ಇವನು ಸಮುದ್ರಮಥನ ಕಾಲದಲ್ಲಿ ಹುಟ್ಟಿದ ವಿಷವನ್ನು ಕುಡಿದು ವಿಷಕಂಟನಾದವನು – ಇತ್ಯಾದಿಯಾಗಿ ಶಿವನ ಲೀಲೆಗಳನ್ನು ಸೊಗಸಾಗಿ ಬಣ್ಣಿಸಿರುವರು. ಶಿವ ಹರಿಯ ಮೋಹಿನೀ ರೂಪವನ್ನು ನೋಡ ಬಯಸಿದಾಗ ಹರಿ ಒಪ್ಪಿ ಹದಿನಾರು ವರ್ಷದ ಬಾಲೆಯಾಗಿ ‘ಚರಣನಖಾಗ್ರದಿ ಧರಣೀ ಬರೆಯುತ್ತ ನಿಂತಿರಲು’, ಶಿವ ಆ ಲಾವಣ್ಯವತಿಯ ‘ಸೆರಗಪಿಡಿಯಲು’ ಬಂದಾಗ ಕೈಯಲ್ಲಿ ಶಂಖ ಗದೆ ಚಕ್ರಗಳನ್ನು ನೋಡಿ, ಹರಿಯೆಂದರಿತು ಹರ ನಾಚಿನಿಂತನಂತೆ!- ಹೀಗೆ ಒಂದು ಸೊಗಸಾದ ಚಿತ್ರವನ್ನು ಕಟ್ಟಿಕೊಡುತ್ತಾರೆ, ಶ್ರೀಪಾದರಾಜರು. ಕೊನೆಯಲ್ಲಿ –

ಮಂಗಳಾಂಗನೆ ಮಾರಜನಕ ನಾ ಮಾಡಿದ ತಪ್ಪು
ಹಿಂಗದೆ ಕ್ಷಮಿಸೊ ಯದುಕುಲ ತಿಲಕ ವಕ್ಷದಲೊಪ್ಪುವ ನಿ
ನ್ನಂಗನೆ ಅರಿಯಳು ನಖಮಹಿಮಾಂಕ ಹೀಗೆನುತಲಿ ತವಕ
ರಂಗ ವಿಠಲನ ಪದಂಗಳ ಪಿಡಿದು ಸಾ
ಷ್ಟಾಂಗವೆರಗಿ ಕೈಲಾಸಕೆ ನಡೆದ

– ಎಂದು ಕೀರ್ತನೆಗೆ ಒಂದು ನಾಟಕೀಯ ಮುಕ್ತಾಯವನ್ನು ತಂದಿರುವುದಲ್ಲದೆ ಹರಿ ಸರ್ವೋತ್ತಮತ್ವವನ್ನೂ ಸಾಧಿಸಿದ್ದಾರೆ.

ಶ್ರೀಪಾದರಾಜರ ‘ಮಧ್ವನಾಮ’ ಆಚಾರ್ಯ ಮಧ್ವರನ್ನು ಕುರಿತ ಕೀರ್ತನೆ. ಹರಿದಸ ಸಾಹಿತ್ಯದಲ್ಲಿ ತುಂಬ ಪ್ರಸಿದ್ಧವಾದ ಕೀರ್ತನೆಯೂ ಹೌದು. ಮಾಧ್ವಮತದ ಪ್ರಮುಖ ನಂಬಿಕೆಗಳಲ್ಲಿ ಒಂದಾದ ಆಚಾರ್ಯಮಧ್ವರ ಹನುಮ, ಭೀಮ, ಮಧ್ವ – ಈ ಅವತಾರತ್ರಯವನ್ನು ಚಿತ್ರಿಸುತ್ತದೆ. ಮಧ್ವಾಚಾರ್ಯರು ವಾಯುವಿನ ಅವತಾರ, ತ್ರೇತಾಯುಗದಲ್ಲಿ ಹನುಮಂತನಾಗಿ, ದ್ವಾಪರಯುಗದಲ್ಲಿ ಭೀಮಸೇನನಾಗಿ ಹಾಗೂ ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಅವತಾರವೆತ್ತಿ ಬಂದರೆಂಬುದು ಮಾಧ್ವರ ನಂಬಿಕೆ.

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ
ಅಖಿಳ ಗುಣ ಸದ್ಧಾಮ ಮಧ್ವನಾಮ ||ಪ||

………………

ಆವವನು ದೇಹದೊಳಗಿರಲು ಹರಿ ನೆಲಸಿಹನು
ಅವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದಾ ಒಳಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು
……………. ||೨||

ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ವಾತಸುತ ಹನುಂತನೆಂದೆನಿಸಿದ
ಪೋತಭಾವದಿ ತರಣಿ ಬಿಂಬಕ್ಕೆ ಲಂಘಿಸಿದ
ಈತಗೆಣೆ ಯಾರು ಮೂಲೋಕದೊಳಗೆ

……………………. ||೫||

ಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದು
ಮುಖ್ಯಪ್ರಾಣನನು ರಾಮನನುಕರಿಸಿದ ||೭||

………………..

ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥನೊಡನೆ
ಭೀಮವಿಕ್ರಮ ರಕ್ಕಸರ ಮುರಿದೊಟ್ಟಿದ
ಆ ಮಹಿಮ ನಮ್ಮ ಕುಲಗುರುರಾಯನು ||೧೨||

ಕರದಿಂದ ಶಿಶುಭಾವನಾದ ಭೀಮನ ಬಿಡಲು
ಗಿರಿವಡದು ಶತಶೃಂಗವೆಂದೆನಿಸಿತು
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ
ಅರೆವ ವೀರನಿಗೆ ನರ ಸುರರು ಸರಿಯೇ ||೧೩||

…………….

ದಾನವರು ಕಲಿಯುಗದೊಳವತರಿಸಿ ವಿಬುಧರೊಳು
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಖ್ಯನೆಂದೆನಿಸಿದ

…………………. ||೨೨||

ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಳ ವೇದಾರ್ಥಗಳನು
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ
ಯ್ಯೆದಿದ ಮದ್ವಮುನಿರಾಯಗಭಿವಂದಿಪೆ ||೨೫||

ಆಚಾರ್ಯರ ಮೂರು ಅವತಾರಗಳ ಹಿರಿಮೆಯನ್ನು ಶ್ರೀಪಾದರಾಜರು ಇಪ್ಪತ್ತೇಳು ನುಡಿಗಳಲ್ಲಿ ಶ್ರದ್ಧಾಭಕ್ತಿಗಳಿಂದ ಹಾಡಿದ್ದಾರೆ. ಶ್ರೀರಾಮರ ಸೇವೆಗೆಂದೆ ಹುಟ್ಟಿದ ಹನುಮಂತ ಹುಟ್ಟಿದ ಕೂಡಲೇ ಕೆಂಪಗೆ ಹೊಳೆಯುತ್ತಿದ್ದ ಸೂರ್ಯನನ್ನು ನೋಡಿ ಹಣ್ಣೆಂದು ಭಾವಿಸಿ, ಹಿಡಿದುಕೊಳ್ಳಲು ಆಕಾಶಕ್ಕೇ ಹಾರಿದ ಧೀರ. ತರ್ಕ ವ್ಯಾಕರಣಶಾಸ್ತ್ರ ಪಂಡಿತನಾದ ಅವನ ಬಾಯಲ್ಲಿ ‘ಕಿಂಚಿದಪಶಬ್ದ’ವಿಲ್ಲ. ಅವನ ಸೇವೆಗೆ ಮೆಚ್ಚಿರಾಮ ಬ್ರಹ್ಮಪದವಿಯನ್ನೇ ಕೊಡುವೆನೆಂದರೂ ಒಲ್ಲದೆ, ಭಕ್ತಿಯೊಂದನ್ನೇ ಬೇಡಿದ ಹನುಮಂತನ ಸ್ವಾಮಿನಿಷ್ಠೆ, ಕಾರ್ಯತತ್ಪರತೆ, ಮಹೋನ್ನತ ದಾಸ್ಯಭಾವಗಳನ್ನು ಶ್ರೀಪಾದರಾಜರು ಎತ್ತಿಹಿಡಿದಿರುವರು.

ದ್ವಾಪರ ಯುಗದಲ್ಲಿ ಹನುಮ ಭೀಮನಾಗಿ ಅವತರಿಸಿದ, ಮಗು ಭೀಮನನ್ನೆತ್ತಿ ಹೆಬ್ಬಂಡೆಯೊಂದರ ಮೇಲೆ ಕೂಡಿಸಿದಾಗ ಆ ಬಂಡೆ ನೂರು ಚೂರಾಗಿ ‘ಶತಶೃಂಗ’ವೆನ್ನಿಸಿಕೊಂಡಿತಂತೆ. ಭೀಮ ದುಯೋಧನ ಹಾಕಿಸಿದ ವಿಷವನ್ನುಂಡು ಅರಗಿಸಿಕೊಂಡದ್ದು, ಕೌರವ ಅರಗಿನ ಮನೆಯನ್ನು ಸುಟ್ಟ ಸಂದರ್ಭದಲ್ಲಿ ತನ್ನ ತಾಯಿ ಹಾಗೂ ಅಣ್ಣತಮ್ಮಂದಿರನ್ನು ಭುಜದಲ್ಲಿ ಹೊತ್ತು ನಡೆದು ರಕ್ಷಿಸಿದ್ದು – ಇವೇ ಮೊದಲಾದ ಭೀಮನ ಪರಾಕ್ರಮಗಳನ್ನು ಹಾಡಿ ಹೊಗಳಿರುವರು. ಬಕಹಿಡಿಂಬಕರನ್ನು ಕೊಂದು, ಮಾಗಧನನ್ನು ಸೀಳಿ, ಕಿಮ್ಮೀರಾದಿಗಳನ್ನು ಒರೆಸಿ ದ್ರೌಪದಿಯ ಇಂಗಿತವನ್ನರಿತು ಸೌಗಂಧಿಕಾ ಪುಷ್ಪವನ್ನು ತಂದಿತ್ತದ್ದು – ಈ ಎಲ್ಲ ಘಟನಾವಳಿಗಳನ್ನೂ ಒಂದರನಂಥರ ಒಂದರಂತೆ ಕಣ್ಣಿಗೆ ಕಟ್ಟುವ ಹಾಗೆ ಹೇಳುತ್ತಾ ಹೋಗುವರು. ಕೀಚಕನೇ ಮೊದಲಾದ ದುಷ್ಟಶಕ್ತಿಗಳನ್ನು ಸವರಿ ಕೌರವನ ತೊಡೆ ಮುರಿದು ದುಶ್ಯಾಸನನನ್ನು ಸದೆಬಡಿದು ಶಕ್ತಿಸಾಹಸಗಳನ್ನು ಮೆರೆದ ವೀರ, ಬಲಭೀಮಸೇನ ವಾಯುದೇವರ ದ್ವಿತೀಯಾವತಾರ.

 

[1]ಅ.IV. ಪು. ೪೪-೪೭, ಆನಂದತೀರ್ಥರು, ಶ್ರೀಮಧ್ವಮುನಿ ಸೇವಾಸಂಘ, ಉಡುಪಿ, ಶ್ರೀಅಗ್ರಹಾರ ನಾರಾಯಣ ತಂತ್ರಿಗಳು, ೧೯೩೯.