ರಾಗ:ಕಾಂಬೋಧಿ         ತಾಳ:ಝಂಪೆ

ಉತ್ತಮರ ಸಂಗಯೆನಗಿತ್ತು ಸಲಹೊ ||ಪ||

ಚಿತ್ತಜಜನಕ ಸರ್ವೋತ್ತಮ ಮುಕುಂದ ||ಅ.ಪ||

ತಿರುತಿರುಗಿ ಪಾಪಗಳ ಮಾಡಲಾರೆ
ಮರಣ ಜನನಗಳೆರಡು ಪರಿಹರವ ಮಾಡಯ್ಯ
ಕರುಣಾಸಮುದ್ರ ಮುರವೈರಿ ಶ್ರೀಕೃಷ್ಣ ||೧||

ಏನ ಪೇಳಲಿ ದೇವ ನಾಮಾಡಿದ ಕರ್ಮ
ನಾನಾ ವಿಚಿತ್ರವೈ ಶ್ರೀನಿವಾಸ
ಹೀನ ಜನರೊಳಗಾಟ ಶ್ವಾನಾದಿಗಳ ಕೂಟ
ಜ್ಞಾನವಂತನ ಮಾಡೊ ಜಾನಕೀ ರಮಣ ||೨||

ನಿನ್ನ ನಂಬಿದ ಮ್ಯಾಲೆ ಇನ್ನು ಭಯವ್ಯಾತಕ್ಕೆ
ಪನ್ನಗಾಧಿಪಶಯನ ಮನ್ನಿಸಯ್ಯ
ಮುನ್ನ ಭಕುತರನೆಲ್ಲ ಚೆನ್ನಾಗಿ ಪಾಲಿಸಿದ
ಎನ್ನೊಡೆಯ ರಂಗವಿಠಲ ಎನ್ನ ದೊರೆಯೆ ||೩||

ರಾಗ: ತೋಡಿ   ತಾಳ: ರೂಪಕ

ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ ||ಪ||
ಜಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ ||ಅ.ಪ||

ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲ್ಲಿ ನಿಂದು
ಚಂದ್ರ ಪುಷ್ಕರಿಣಿ ಸ್ನಾನವ ಮಾಡಿ ಆ
ನಂದದಿಂದಲಿ ರಂಗನ ನೋಡದ ||೧||

ಹರಿಪದೋದಕ ಸಮ ಕಾವೇರಿ
ವಿರಜಾ ನದಿಲಿ ಸ್ನಾನವ ಮಾಡಿ
ಪರಮ ವೈಕುಂಠ ರಂಗಮಂದಿರ
ಪರವಾಸುದೇವನ ನೋಡದ ||೨||

ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರವ ಧರಿಸಿ
ತೇರನೇರಿ ಬೀದಿಲಿ
ಮೆರೆವ ರಂಗವಿಠಲನ ನೋಡದ ||೩||

ರಾಗ : ವಸಂತ ತಾಳ: ತ್ರಿಪುಟರ

ನಾ ನಿನಗೇನು ಬೇಡುವುದಿಲ್ಲ ಎನ್ನ ||ಪ||
ಹೃದಯ ಮಂಟಪದೊಳು ನಿಂದಿರೊ ಕೃಷ್ಣ ||ಅ.ಪ||

ಶಿರ ನಿನ್ನ ಚರಣದಲ್ಲೆರಗಲಿ ಎನ್ನ
ಚಕ್ಷುಗಳು ನಿನ್ನ ನೋಡಲಿ
ಕರ್ಣಗೀತಂಗಳ ಕೇಳಲಿ ಎನ್ನ
ನಾಸಿಕ ನಿರ್ಮಾಲ್ಯಾಘ್ರಾಣಿಸಲಿ ಕೃಷ್ಣ ||೧||

ನಾಲಿಗೆ ನಿನ್ನ ಕೊಂಡಾಡಲಿ ಎನ್ನ
ಕರಗಳೆರಡು ನಿನಗೆ ಮುಗಿಯಲಿ
ಪಾದ ತೀರ್ಥಯಾತ್ರೆ ಮಾಡಲಿ ನಿನ್ನ
ಧ್ಯಾನವೊಂದು ಎನಗೆ ಕೊಡುಕಂಡ್ಯ ಹರಿಯೆ ||೨||

ಬುದ್ಧಿ ನಿನ್ನೊಳು ಕುಣಿದಾಡಲಿ ಎನ್ನ
ಚಿತ್ತ ನಿನ್ನೊಳು ನಲಿದಾಡಲಿ
ಭಕ್ತಜನರ ಸಂಗ ದೊರಕಲಿ ರಂಗ
ವಿಠಲ ನಿನ್ನ ದಯವಾಗಲಿ ಹರಿಯೆ ||೩||

ರಾಗ: ಧನ್ಯಾಸಿ ತಾಳ: ಆದಿತಾಳ

ಪೋಪು ಹೋಗೋಣ ಬಾರೊ ರಂಗ
ಪೋಪು ಹೋಗೋಣ ಬಾರೋ ||ಪ||

ಜಾಹ್ನವಿಯ ತೀರವಂತೆ ಜನಕರಾಯನ ಕುವರಿಯಂತೆ
ಜಾನಕೀವಿವಾಹವಂತೆ ಜಾಣ ನೀನು ಬರಬೇಕಂತೆ ||೧||

ಕುಂಡನೀಯ ನಗರವಂತೆ ಭೀಷ್ಮಕನ ಕುವರಿಯಂತೆ
ಶಿಶುಪಾಲನ ಒಲ್ಲಳಂತೆ ನಿನಗೆ ವಾಲೆ ಬರೆದಳಂತೆ ||೨||

ಪಾಂಡವರು ಕೌರವರಿಗೆ ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಡಬೇಕಂತೆ ರಂಗವಿಠಲ ಬರಬೇಕಂತೆ ||೩||

ರಾಗ: ಶಂಕರಾಭರಣ ತಾಳ: ಆದಿತಾಳ
ಭಕ್ತಿಬೇಕು ವಿರಕ್ತಿಬೇಕು ಸರ್ವ
ಶಕ್ತಿಬೇಕು ಮುಂದೆ ಮುಕ್ತಿಯ ಬಯಸುವಗೆ ||ಪ||

ಸತಿ ಅನುಕೂಲಬೇಕು ಸುತನಲ್ಲಿ ಗುಣಬೇಕು
ಮತಿವಂತನಾಗಬೇಕು ಮತ ಒಂದಾಗಿರಬೇಕು ||೧||

ಜಪದ ಜಾಣುವೆ ಬೇಕು ತಪದ ನೇಮವೆ ಬೇಕು
ಉಪವಾಸವ್ರತ ಬೇಕು ಉಪಶಾಂತವಿರಬೇಕು ||೨||

ಸುಸಂಗ ಹಿಡಿಯಲಿ ಬೇಕು ದುಸ್ಸಂಗ ಬಿಡಲಿಬೇಕು
ರಂಗವಿಠಲನ್ನ ಬಿಡದೆ ನೆರೆನಂಬಿರಬೇಕು ||೩||

ರಾಗ: ಸಾರಂಗ ತಾಳ: ಝಂಪೆ

ಭೂಷಣಕೆ ಭೂಷಣ ಇದು ಭೂಷಣ
ಶೇಷಗಿರಿವಾಸ ಶ್ರೀವರ ವೆಂಕಟೇಶ ||ಪ||

ನಾಲಿಗ್ಗೆ ಭೂಷಣ ನಾರಾಯಣ ನಾಮ
ಕಾಲಿಗ್ಗೆ ಭೂಷಣ ಹರಿಯಾತ್ರೆಯು
ಆಲಯಕೆ ಭೂಷಣ ತುಲಸಿ ವೃಂದಾವನ ವಿ-
ಶಾಲಕರ್ಣಕೆ ಭೂಷಣ ವಿಷ್ಣು ಕಥೆಯು ||೧||

ದಾನವೆ ಭೂಷಣ ಇರುವ ಹಸ್ತಂಗಳಿಗೆ
ಮಾನವೇ ಭೂಷಣ ಮಾನವರಿಗೆ
ಜ್ಞಾನವೇ ಭೂಷಣ ಮುನಿಯೋಗಿವರರಿಗೆ
ಮಾನಿನಿಗೆ ಭೂಷಣ ಪತಿಭಕ್ತಿಯು ||೨||

ರಂಗನನು ನೋಡುವುದೇ ಕಂಗಳಿಗೆ ಭೂಷಣ
ಮಂಗಳಾಂಗಗೆ ಮಣಿವ ಶಿರಭೂಷಣ
ಶೃಂಗಾರ ತುಲಸಿಮಣಿ ಕೊರಳಿಗೆ ಭೂಷಣ
ರಂಗವಿಠಲ ನಿಮ್ಮ ನಾಮ ಅತಿಭೂಷಣ ||೩||

ಉಗಾಭೋಗ

ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ಧನದಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ವನಿತೆಯಿಂ ಸಂತೋಷ ಕೆಲವರಿಗೆ ಲೋಕದಲ್ಲಿ
ತನಯರಿಂ ಸಂತೋಷ ಕೆಲವರಿಗೆ ಲೋಕದಲ್ಲಿ
ಇನಿತು ಸಂತೋಷ ಅವರವರಿಗಾಗಲಿ ನಿನ್ನ
ನೆನೆವೋ ಸಂತೋಷ ಎನಗಾಗಲಿ ನಮ್ಮ ರಂಗವಿಠಲ

ರಾಗ: ಕಾಂಬೋಧಿ ತಾಳ: ಝಂಪೆ ತಾಳ

ಮರೆತೆಯೇನೋ ರಂಗ ಮಂಗಳಾಂಗ
ತುರುಕರು ಕಾಯ್ವಲ್ಲಿ ತೊಂಡನಾಗಿದ್ದೆನ್ನ ||ಪ||

ಕೋಲು ಕೈಯಲಿ ಕೊಳಲು ಜೋಲುಗಂಬಳಿ ಹೆಗಲ
ಮ್ಯಾಲೆ ಕಲ್ಲಿಚೀಲ ಕೊಂಕಳಲ್ಲಿ
ಕಾಲಗಡಗವನಿಟ್ಟು ಕಾಡೊಳಿಹ ಪಶುಹಿಂಡ
ಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ ||೧||

ಕಲ್ಲುಮಣಿ ಕವಡೆಯನು ಕಾಡೊಳಿಹ ಗುಲಗಂಜಿ
ಸಲ್ಲದೊಡವೆಯ ನೀನು ಸರ್ವಾಂಗಕೆ
ಅಲ್ಲಲ್ಲೆಸೆಯೆ ಧರಿಸಿ ನವಿಲುಗರಿಗಳ ಗೊಂಡೆ
ಅಲ್ಲಿ ಗೊಲ್ಲರ ಕೂಡ ಚೆಲ್ಲಾಟ ಮಾಡುತಲಿ ||೨||

ಸಿರಿದೇವಿ ಬಂದು ಸೇರಿದ ಬಳಿಕ ಲೋಕದಲಿ
ಸಿರಿ ಅರಸನೆಂದು ಸೇವಕರರಿವರೋ
ಶರಣಾಗತರ ಪೊರೆವ ಶ್ರೀರಂಗವಿಠಲಯ್ಯ
ನರಸಿಂಗ ನೀನಿರುವ ಪರಿಯು ಮುಂದಿನ ಸಿರಿಯು ||೩||

ರಾಗ: ನಾಟಿ ತಾಳ: ಖಂಡಛಾಪು

ಶ್ರೀರಂಗವಿಠಲನ ಶ್ರೀಮಕುಟಕೆ ಶರಣು ||ಪ||

ಶಿರದಲ್ಲೊಪ್ಪುವ ನೀಲಕುಂತಳಕೆ ಶರಣು
ಸಿರಿ ಸಹೋದರನರ್ಧದವಳಿಗೆ ಶರಣು ||ಅ.ಪ||

ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು
ಸಂಪಿಗೆಯ ಕುಸುಮಸಮ ನಾಸಿಕಕೆ ಶರಣು
ಗುಂಪು ರತ್ನದ ಕರ್ಣಕುಂಡಲಗಳಿಗೆ ಶರಣು
ಇಂಪು ದರ್ಪಣನಿಭ ಕಪೋಲಗಳಿಗೆ ಶರಣು ||೧||

ಕುಂದಕುಟ್ಮಲ ಪೋಲ್ವ ದಂತಪಂಕ್ತಿಗೆ ಶರಣು
ಅಂದವಾಗಿರುವ ಬಿಂಬೋಷ್ಠಕೆ ಶರಣು
ಚಂದ್ರಿಕಾನಿಭ ಮುದ್ದು ಮಂದಹಾಸಕೆ ಶರಣು
ನಂದಗೋಪನ ಮುದ್ದು ಕಂದನಿಗೆ ಶರಣು ||೨||

ಅಬ್ಜನಾಭನ ದಿವ್ಯ ಕಂಬುಕಂಠಕೆ ಶರಣು
ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು
ಕುಬ್ಜೆಯಾ ಡೊಂಕತಿದ್ದಿದ ಭುಜಗಳಿಗೆ ಶರಣು
ಅಬ್ಜಜಾಸನನ ಪೆತ್ತ ನಾಭಿಗೆ ಶರಣು ||೩||

ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು
ಪೊನ್ನ ಕದಳೀಪೋಲ್ವ ತೊಡೆಗಳಿಗೆ ಶರಣು
ಪುನ್ನಾಗ ಕರಗೆತತ ದ್ವಯನಿತಂಬಕೆ ಶರಣು
ಚೆನ್ನಾಗಿ ಕುಣಿವ ಸಮಜಾನುವಿಗೆ ಶರಣು ||೪||

ಮಂಗಳ ವೈಭೋಗಂಗಳ ಅಂಘ್ರಿದ್ವಯಕೆ ಶರಣು
ತುಂಗಕುಚಗಳ ಪಿಡಿದ ಕರಗಳಿಗೆ ಶರಣು
ಪೊಂಗೊಳಲನೂದುವ ಅಂಗುಲಿಗಳಿಗೆ ಶರಣು
ರಂಗವಿಠಲನ ಸರ್ವಾಂಗಕೆ ಶರಣು ||೫||

ಸುಳಾದಿ

ರಾಗ: ಭೈರವಿ ತಾಳ: ಧ್ರುವತಾಳ

ಈ ವನದೆಡೆಗಳು ಈ ಲತೆವನಗಳು
ಈ ನದಿಪುಳಿನಗಳೀ ಶಶಿ ಶಿಲೆಗಳು
ಈ ಸುರತರುನೆಳಲು ಈ ಶುಕಪಿಕರವ
ಯಾಕೆ ಮಾಧವನ ಮರೆಯಲೀಯದಿವೆ ಕೆಳದಿ
ಆ ಮುಗುಳು ನಗೆಯ ಆ ಸೊಬಗ
ಈ ಸುರತರು ನೆಳಲೀ ರತಿಯ
ಈ ಸುರತವನರಿದ ಬಾಲೆಯರೆಂತೊ
ಈ ಸುಗುಣಮಯ ರಂಗವಿಠಲನೆ ಕೆಳದಿ ||೧||

ಮಠ್ಯತಾಳ

ಇನ್ನು ರಂಗನಂಗಸಂಗವು ಎತ್ತಣದು ಗೋಪಿಯರಿಗೆ
ಮಧುರೆಯ ಮಾನಿನಿಯರ ಬಲೆಯಲ್ಲಿ ಸಿಲುಕಿದನ
ಮಧುರೆಯ ಮಾನಿನಿಯರು ರತಿವಿದಗ್ಧರಾ
ವಧುಗಳು ರಸಿಕ ನಮ್ಮ ರಂಗವಿಠಲ ||೨||

ತ್ರಿಪುಟತಾಳ

ಇನ್ಯಾತಕೆ ರಂಗನಿಲ್ಲಿಗೆ ಬಾಹಾ
ಮಧುರಾಪುರಿಯರಸನಾದ
ಮಲ್ಲರ ಕೊಂದು ಮಾವನ್ನ ಮಡುಹಿದ
ಮಧುರಾಪುರಿಯರಸನಾದ
ಅವನ ನೆನಹೆ ಸಾಕು ರಂಗವಿಠಲನಾ ||೩||

ರೂಪಕತಾಳ

ಬಿಡುವರು ಅಧನರ ಗಣಿಕೆಯರು ನೆರೆ
ಬಿಡುವವು ವಿಫಲ ತರುವ ದ್ವಿಜಗಣ
ಬಿಡುವವು ಮೃಗ ದಳ್ಳುರಿಗೊಂಡಡವಿಯ
ಬಿಡುವನು ಜಾರ ಪರವಧುವನು ನೆರೆದಿನ್ನು
ಇವು ದಿಟವಾಯಿತು ನಮ್ಮ ವಲ್ಲಭನೊಳು
ಅಕಟಕಟಾ ರಂಗವಿಠಲನು ಕರುಣಿಯೆ ||೪||

ಅಟ್ಟತಾಳ

ಕುಂದ ಕುಸುಮ ಶಶಾಂಕರಂಜಿತ
ವೃಂದಾವನದಲ್ಲಿ ಮಂದಮಾರುತ ಬರಲು ನಲಿದನು ಅರ
ವಿಂದ ನಯನನು ಹಾಹಾ
ಕಂದಿದೆವು ಕುಂದಿದೆವು ನಾವು
ಕಂದರ್ಪನ ಶರದಟ್ಟುಳಿಗೆ ಹಾ
ಇಂದುಮುಖಿಯರ ವೃಂದದೊಳಗೆ ಕೃಷ್ಣಾ
ಅಂದು ನಮ್ಮೊಡನಾಡಿದ ಪರಿಯನು ತಾನು
ಇಂದೊಮ್ಮೆಯಾದರು ನೆನವನೆ ಹಾಹಾ
ಎಂದಿಗಾದರು ರಂಗವಿಠಲನಿಲ್ಲಿಗೆ ಬಹನೆ ||೫||

ಝಂಪೆತಾಳ

ಪೊಂದೇರದೆಲ್ಲಿಯದವ್ವಾ ಬಂದಿದೆ ವ್ರಜದೊಳಗೆ
ಅಂದಿನಕ್ರೂರನೆಂಬ ಕ್ರೂರನು ಮರಳಿಬಂದನೊ
ನಮ್ಮ ಕರೆದೊಯ್ಯಲಿ ಬೇಕೆಂದು
ಅಂದೆಮ್ಮ ಕೊಂದ ಇಂದ್ಯಾರ ಕೊಲ್ಲಲಿ ಬಂದ
ಕೊಂದುಕೊಳ್ಳಲಿ ತಮ್ಮ ಹಿರಿಯರನು ಹರಲಿಗ
ಅಂದೆಮ್ಮನಗಲಿಸಿದ ರಂಗವಿಠಲನಾ ||೬||

ಏಕತಾಳ

ಹೆತ್ತತಾಯಿ ತಂದೆಯರ ನೋಡಲೆಂದು
ಇತ್ತಲಟ್ಟಿದನೆ ಉದ್ಧವ ನಿನ್ನ ಗೋವಳಾ
ಮತ್ತ್ಯಾರುಂಟು ವ್ರಜದಲ್ಲಿ ನೆನೆವರು
ಹತ್ತಿರಕೆ ತನ್ನವರಲ್ಲಿ ತಾ ಬಿಡುವನೆ
ಅರ್ಥಕೃತ ಸ್ನೇಹ ನಮ್ಮೊಡನೆ ಮಾಡಿದ ಕೃಷ್ಣ
ಮತ್ತಳಿಗೆ ಕುಸುಮದ ನೇಹದಂತೆ
ರಕ್ತಿ ಎಮ್ಮೊಳುಂಟು ರಂಗವಿಠಲಗೆ ||೭||

ಝಂಪೆತಾಳ

ಪರಮಸುಖದಾಸೆ ಈತನ ಸೇವೆ ಅಲ್ಲವೆ
ಒರೆದಳೆ ಪಿಂಗಳೆ ಜನರಿಗೆ ಹಿತವನು
ಅರಿದರಿದು ಬಿಡುವ ನಾವು ನರಪಶುಗಳಲ್ಲವೆ
ಸಿರಿರಮಣಿ ಬಿಡಳು ನಮ್ಮ ರಂಗವಿಠಲನ್ನ ||೮||

ಏಕತಾಳ

ಎಮ್ಮ ತನುಮನ ತನ್ನಧೀನವಲ್ಲೆ
ಅನ್ಯವರಿಯೆವು ತನ್ನರಿದಂತೆ ಮಾಡಲಿ
ಎಮ್ಮಸುವು ತನ್ನಧೀನವಲ್ಲೆ
ಅನ್ಯವರಿಯೆವು ತನ್ನರಿದಂತೆ ಮಾಡಲಿ
ನಮ್ಮ ರಂಗವಿಠಲರೇಯ
ಇನ್ನು ಸಲೆ ಮಾರುಹೋದೆ ಗೆಳತಿ ||೯||

ಜತೆ

ಅವನ ಹಂಬಲವೆಮಗೆ ಜೀವನವವ್ವಾ
ಭುವನ ಮೋಹನ ರಂಗವಿಠಲನು ಕರುಣಿಯೆ