ವಿದ್ಯೆಯ ‘ಕೆನೆಯ ಕೆನೆ’ಯಾಗಿರುವ ವಿಶ್ವವಿದ್ಯಾಲಯಗಳು ಜ್ಞಾನದ ಬೋಧನೆ ಸಂಶೋಧನೆ ಹಾಗೂ ಪ್ರಸಾರಕಾರ್ಯಗಳಿಗೆ ಒತ್ತುಕೊಟ್ಟು ಕಾರ್ಯನಿರ್ವಹಿಸುತ್ತಿರುವುದು ಸಂತಸದ ಸಂಗತಿ. ಈಗ ಯಾವುದೇ ಒಂದು ಉನ್ನತಮಟ್ಟದ ಅಧ್ಯಯನ ಕೇವಲ ಆಯಾ ಶಾಸ್ತ್ರದ ಮಿತಿಯಲ್ಲೇ, ಎಲ್ಲೆ ಗಡಿ ಕಟ್ಟುಪಾಡುಗಳಲ್ಲೇ ನಡೆಯುತ್ತಿಲ್ಲ; ನಡೆಯಬೇಕಾಗಿಯೂ ಇಲ್ಲ. ವಿಭಿನ್ನ ಶಾಸ್ತ್ರಗಳ ಹಿನ್ನೆಲೆಯಲ್ಲಿ ಅವುಗಳ ಪರಸ್ಪರ ಸಂಬಂಧ ಪ್ರಭಾವ, ಪ್ರೇರಣೆ, ಪರಿಣಾಮಗಳನ್ನು ಗಮನದಲ್ಲಿರಿಸಿಕೊಂಡು ಒಂದು ಒಟ್ಟುನೋಟ (comprehensive view) ಹಾಗೂ ವಿವಿಧ ಒಳನೋಟಗಳ ಗ್ರಹಿಕೆಯ ಪ್ರಯತ್ನದಲ್ಲಿ ಅಧ್ಯನ ಸಾಗುತ್ತಿದೆ. ಈ ನಿಟ್ಟಿನಲ್ಲಿ ನಡೆದ ಅಧ್ಯಯನ ಮತ್ತು ಸಂಶೋಧನೆಗಳ ಫಲ ವಿಚಾರಸಂಕಿರಣಗಳ, ಮುಕ್ತ ಚರ್ಚೆಗಳ, ವಿವಿಧ ಕಮ್ಮಟ ಶಿಬಿರ ಕಾರ್ಯಾಗಾರಗಳ ಮೂಲಕ ಉನ್ನತವ್ಯಾಸಂಗ ಮಾಡುವವರನ್ನು ತಲುಪಿದರೆ ಜನಸಾಮಾನ್ಯರಿಗೆ ಸರಳ ಸುಲಭ ಪುಸ್ತಕಗಳ ರೂಪದಲ್ಲಿ, ವಿದ್ವಾಂಸರ ತಜ್ಞರ ಉಪನ್ಯಾಸಗಳ ಮೂಲಕ ಪರಿಚಯವಾಗುತ್ತಿದೆ. ಈ ಎರಡೂ ಕೆಲಸಗಳನ್ನು ಶ್ರದ್ಧೆಯಿಂದ ಸಮರ್ಪಕವಾಗಿ ಏಕಕಾಲದಲ್ಲಿ ನಿರ್ವಹಿಸಲು ಶ್ರಮಿಸುತ್ತಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಸಮಸ್ತ ಕನ್ನಡಿಗರ ಕೃತಜ್ಞತೆಗೆ, ಅಭಿನಂದನೆಗೆ ಪಾತ್ರವಾಗಿದೆ.

ಇದೀಗ ಪುರಂದರ ಅಧ್ಯಯನ ಪೀಠದಿಂದ ಕನ್ನಡ ಹರಿದಾಸ ಸಾಹಿತ್ಯದ ಅಧ್ಯಯನಗಳಿಗೆ ಸಂಬಂಧಿಸಿದಂತೆ ಪ್ರಕಟಣೆಗಳು ಹೊರಬರುತ್ತಿರುವುದು ಸಾಹಿತ್ಯಾಸಕ್ತರಿಗೆ ಹೆಮ್ಮೆಯ ವಿಚಾರವಾಗಿದೆ. ಪ್ರಸ್ತುತ ಮಾಲೆಯಲ್ಲಿ ಹರಿದಾಸ ಸಾಹಿತ್ಯದ ಆದ್ಯಪ್ರವರ್ತಕರಾದ ಶ್ರೀಪಾದರಾಜರ ಜೀವನ ಮತ್ತು ಕೃತಿಗಳಿಗೆ ಸಂಬಂಧಿಸಿದಂತೆ ಒಂಧು ಚಿಕ್ಕ ಪರಿಚಯಾತ್ಮಕ ಪುಸ್ತಕವೊಂದನ್ನು ಬರೆದುಕೊಡುವ ಕೆಲಸವನ್ನು ಅಧ್ಯಯನ ಪೀಠದ ಸಂಚಾಲಕರಾಗಿರುವ ಪ್ರೊ. ಎ.ವಿ. ನಾವಡ ಅವರು ನನಗೆ ವಹಿಸಿದರು. ಅವರ ಅಪೇಕ್ಷೆಯ ಮೇರೆಗೆ ಈ ಪುಟ್ಟ ಪುಸ್ತಕವನ್ನು ಸಿದ್ಧಪಡಿಸಿಕೊಟ್ಟಿದ್ದೇವೆ. ಕನ್ನಡದ ರುದ್ದರ (=ರುದ್ರ) ತೇರನ್ನು ಎಳೆಯಲು ಕೈಗೂಡಿಸುವ ಈ ಕಾರ್ಯಗೌರವವನ್ನು ನನಗೆ ಒಪ್ಪಿಸಿದ್ದಕ್ಕಾಗಿ ಅವರಿಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಡಾ. ಟಿ.ಎನ್‌. ನಾಗರತ್ನ