ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸಯೋಗಿನೇ
ನಮಃ ಪುರಂದರಾರ್ಯಾಯ ವಿಜಯಾರ್ಯಾಯ ತೇ ನಮಃ

ಪ್ರಕೃತಿಯ ವೈಚಿತ್ಯ್ರಗಳನ್ನು ವೈಪರೀತ್ಯಗಳನ್ನು ಕಂಡ ಮಾನವ ಭಯಭೀತನಾದ. ರಣಗುಡುವ ಬಿಸಿಲು, ಮಿಂಚು ಗುಡುಗು ಸಿಡಿಲುಗಳಿಂದ ಕೂಡಿದ ಕಿವಿಗಡಚಿಕ್ಲಕುವ ಧಾರಾಕಾರಮಳೆ, ಬಿರುಗಾಳಿ, ಪ್ರವಾಹ, ಕಗ್ಗತ್ತಲೆಯ ಭೀಕರತೆ ಎಲ್ಲವೂ ಅವನಿಗೆ ವಿಶಿಷ್ಟಾನುಭವಗಳನ್ನು ತಂದುಕೊಟ್ಟವು. ಅವುಗಳಿಂದ ರಕ್ಷಣೆ ಪಡೆಯುವತ್ತ ಧಾವಿಸತೊಡಗಿದ. ತನ್ನ ಬದುಕಿಗೆ ಅವುಗಳ ಆವಶ್ಯಕತೆಯನ್ನು ಮನಗಂಡಂತೆ ಅವುಗಳನ್ನು ಆಶ್ರಯಿಸಿತೊಡಗಿದ, ಪ್ರೀತಿಸತೊಡಗಿದ, ಆರಾಧಿಸತೊಡಗಿದ. ಅಂದಿನಿಂದ ಮನುಷ್ಯನ ಮನಸ್ಸು ಆಶ್ರಯ ಹಾಗೂ ಭಯಮೂಲವಾದ ಭಕ್ತಿಗೆ ನೆಲೆಯಾಯಿತು. ಪ್ರಕೃತಿ ಪೂಜೆಯೊಂದಿಗೆ ಮೂರ್ತಿಪೂಜೆಯೂ ಸೇರಿಕೊಂಡಿತಲ್ಲದೆ ಶಿವ-ವಿಷ್ಣು-ಬ್ರಹ್ಮ ಇತ್ಯಾದಿ ದೇವತೆಗಳ ಕಲ್ಪನೆಯೂ ಸಾಧ್ಯವಾಯಿತು. ದೈವತ್ವದ ಕಲ್ಪನೆಯ ಜೊತೆಜೊತೆಗೇ ಅದರ ತಾತ್ವಿಕ ಜಿಜ್ಞಾಸೆಯೂ ನಡೆಯತೊಡಗಿತು. ಹರಪ್ಪ ಮೊಹೆಂಜೊದಾರೊ ಸಂಶೋಧನೆಗಳ ಪ್ರಕಾರ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿರುವ ಭಕ್ತಿತತ್ವ, ವೇದಗಳಲ್ಲಿ ಜಿಜ್ಞಾಸೆಗೊಳಗಾಗಿದ್ದು ದೇವತೆಗಳ ಉಪಾಸನೆಯ ಮೂಲಕ ಬದುಕನ್ನು ಉತ್ತಮಪಡಿಸಿಕೊಳ್ಳಬೇಕೆನ್ನುವ ವಿಚಾರವನ್ನು ಅಲ್ಲಿ ಹೇಳಲಾಗಿದೆ. ‘ಏಕಂ ಸದ್ವಿಪ್ರಾ ಬಹುಧಾ ವದಂತೀ’, ‘ಮಹಸ್ತೇ ವಿಷ್ಣೋ ಸುಮತಿಂ ಭಜಾಮಹೇ’ ಇತ್ಯಾದಿ ಮಾತುಗಳನ್ನು ನಾವು ಅಲ್ಲಿ ಕಾಣುತ್ತೇವೆ.[1]

ಮುಂದೆ ಉಪನಿಷತ್ತಿನ ಕಾಲದಲ್ಲಿ ‘ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ’ ಇತ್ಯಾದಿ ಮಾತುಗಳಲ್ಲಿ ಪ್ರಾರ್ಥನಾ ರೂಪವನ್ನು ತಳೆದ ಭಕ್ತಿ ಇತಿಹಾಸ ಪುರಾಣಗಳಲ್ಲಿ ಜನಜೀವನದೊಡನೆ ದೇವತೆಗಳನ್ನೂ ಬೆರೆಸಿ ಹೇಳಿರುವ ಅನೇಕ ಕತೆಗಳ ರೂಪದಲ್ಲಿ ಮೈತಾಳಿದೆ. ಮಹಾಭಾರತ ರಾಮಾಯಣಗಳಲ್ಲಿ ‘ದೇವಾಯತನ’ ‘ಚೈತ್ಯ’ ‘ಆಲಯ’ ಇತ್ಯಾದಿ ಮಾತುಗಳಿರುವುದೂ ಗಮನಾರ್ಹ. ಮುಂದೆ, ಸೂತ್ರಗಳಲ್ಲಿ ಭಕ್ತಿ ಅವತಾರಗಳ ಕಲ್ಪನೆಯಿಂದ ಮತ್ತಷ್ಟು ರೋಚಕತೆಯನ್ನು ಪಡೆಯಿತು. ಶಿವ ಶಾಕ್ತ ವೈಷ್ಣವ ಆಗಮಗಳು ದೇವೋಪಾಸನೆಯ ವಿಧಿವಿಧಾನಗಳನ್ನು ದಾಖಲಿಸಿವೆ. ಭಗವದ್ಗೀತೆಯಂತೂ ಭಕ್ತಿಯನ್ನು ಒಂದು ಯೋಗವೆಂದು ಕರೆದು ಜೀವಾತ್ಮ ತನ್ನ ಮೋಕ್ಷ ಸಾಧನೆಗೆ ಅನುಸರಿಸಬಹುದಾದ ಜ್ಞಾನ ಕರ್ಮ ಭಕ್ತಿಮಾರ್ಗಗಳಲ್ಲಿ ಅತ್ಯಂತ ಸುಲಭವಾದುದೆಂದು ಭಕ್ತಿಮಾರ್ಗವನ್ನು ಎತ್ತಿಹಿಡಿದಿದೆ.

ಶಾಂಡಿಲ್ಯ – ನಾರದ ಭಕ್ತಿ ಸೂತ್ರಗಳು ಮತ್ತು ಭಾಗವತ ಭಕ್ತಿಯ ತಾತ್ವಿಕಜಿಜ್ಞಾಸೆ ಮಾಡಿವೆ; ‘ಸಾಭಕ್ತಿಃಕಸ್ಮೈಚಿತ್ಪರಮ ಪ್ರೇಮರೂಪಾ’ (ನಾ.ಭ.ಸೂ) ‘ಸಾಭಕ್ತಿಃ ಪರಾನುರಕ್ತಿರೀ ಶ್ವರೀ’ (ಶಾಂ. ಭ.ಸೂ) ಭಗವಂತನನ್ನು ಕುರಿತ ನಿಸ್ವಾರ್ಥ ಪ್ರೇಮವೇ ಭಕ್ತಿಯೆಂದು ಅರ್ಥೈಸಿವೆ. ಹೀಗೆ, ಭಕ್ತಿಯ ಹುಟ್ಟು ಬೆಳವಣಿಗೆಗಳು ಸಾಗಿ ಬಂದಂತೆ ಭಗವಂತನ ಸ್ವರೂಪಜಿಜ್ಞಾಸೆಯೂ ನಡೆದಿದೆ. ಅವನಿಗೆ ಮೂರ್ತರೂಪ ಕೊಟ್ಟು ಜ್ಞಾನಬಲ ಐಶ್ವರ್ಯಾದಿ ಗುಣಗಳನ್ನಾರೋಪಿಸಿ ಪೂಜಿಸಿರುವುದು ಸಗುಣ-ಸಾಕಾರಭಕ್ತಿಯೆನ್ನಿಸಿಕೊಂಡರೆ ಭಗವಂತ ರೂಪಗುಣ ರಹಿತನೆಂದೂ ರೂಪಗುಣಾದಿಗಳಿಗೆ ಮೀರಿದವನೆಂದೂ ಭಾವಿಸಿ ಪೂಜಿಸಿರುವುದು ನಿರ್ಗುಣ-ನಿರಾಕಾರ ಭಕ್ತಿಯೆನ್ನಿಸಿಕೊಂಡಿದೆ. ಕ್ರಿ.ಶ.ಐದನೇ ಶತಮಾನಿದಿಂದೀಚೆಗೆ ರಚಿತವಾದ ಶಿವಾಗಮಗಳು ಶೈವಧರ್ಮಕ್ಕೆ ಮೂಲವಾದಂತೆ ವೈಷ್ಣವಾಗಮಗಳು ವೈಷ್ಣವಧರ್ಮಕ್ಕೆ ಮೂಲವಾದವು. ಆಗಮಗಳು ದೇವೋಪಾಸನೆಯ ವಿಧಿವಿಧಾನಗಳನ್ನು ತಿಳಿಸಿಕೊಟ್ಟು ಸಮಾಜದಲ್ಲಿ ಭಕ್ತಿಯ ಮೂಲಕ ಧರ್ಮದ ಆಚರಣೆಯನ್ನು ವ್ಯವಸ್ಥಿತವಾಗಿ ರೂಢಿಸಿವೆ.

ಭಕ್ತಿಸಾಧನೆಯಿಂದ ಭಗವಂತನನ್ನು ತಿಳಿಯಲು ಯತ್ನಿಸುವವನು ಭಕ್ತ. ಭಕ್ತನಾದವನು ಮಾತ್ರ ಮುಕ್ತಿ ಪಡೆಯಬಲ್ಲ; ಮುಕ್ತಿಸಾಧನೆಯೇ ಭಕ್ತನ ಗುರಿ. ಪ್ರತಿಯೊಬ್ಬ ಸಾಧಕನೂ ತಾನು ಕಲ್ಪಿಸಿಕೊಂಡ ದೇವರನ್ನು ತನ್ನ ಅಂತರಂಗದಲ್ಲಿ ದರ್ಶಿಸಿದ್ದಾನೆ. ಅವನ ಆ ದರ್ಶನಾನು ಭವವನ್ನು ‘ದೈವಸಾಕ್ಷಾತ್ಕಾರ’ ಅಥವಾ ‘ಅಪರೋಕ್ಷಾನುಭೂತಿ’ ಎಂದು ಕರೆಯಲಾಗಿದೆ; ಅದೇ ಅವನ ಸಿದ್ಧಿಯ ಹಂತವೂ ಹೌದು. ಯೂರೋಪಿನ ತತ್ವಜ್ಞಾನಿ ಪ್ಲೇಟೋ, ಸೂಫೀ ಪಂಥದ ಉಮರ್ ಖಯಾಂ, ಜರ್ಮನ್‌ ತತ್ವಜ್ಞಾನಿ ಹೆಗೆಲ್‌, ಭಾರತದ ಸಂತರು – ಎಲ್ಲರೂ ತಮ್ಮ ತಮ್ಮ ಈ ಅನುಭವವನ್ನು ವರ್ಣಿಸಿ ದಾಖಲಿಸಿದ್ದಾರೆ. ಸೋಜಿಗವೆಂದರೆ ಪ್ರಪಂಚದಾದ್ಯಂತ ಎಲ್ಲ ಭಕ್ತರ ದರ್ಶನಾನುಭವವೂ ಒಂದೇ ಆಗಿರುವುದು! ದೇಶ ಭಾಷೆ ಕಾಲಗಳು ಬೇರೆ ಬೇರೆ, ಅಷ್ಟೇ.

ಕ್ರಮೇಣ ಈ ಭಕ್ತಿತತ್ವ ಅನೇಕ ಹೊಸಧರ್ಮಗಳ ಹುಟ್ಟಿಗೆ ಕಾರಣವಾಯಿತು. ಚೀನಾದಲ್ಲಿ ಕಾನ್‌ ಫ್ಯೂಷಿಯಸ್‌, ಪರ್ಷಿಯಾದಲ್ಲಿ ಜೊ ರಾಸ್ಟರ್, ಭಾರತದಲ್ಲಿ ವರ್ಧಮಾನ ಮಹಾವೀರ ಮತ್ತು ಗೌತಮಬುದ್ಧ ಹೊಸಧರ್ಮಗಳ ಉದಯಕ್ಕೆ ಕಾರಣರಾದರು. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಕ್ರಿ.ಪೂ. ಆರನೆಯ ಶತಮಾನದಲ್ಲಿ ಈ ಧರ್ಮಗಳು ಹುಟ್ಟಿದ ವೇಳೆಗೆ ಭಾರತದ ಸಂದರ್ಭದಲ್ಲಿ ಸಾವಿರವರ್ಷಗಳ ಹಳಮೆಯಿದ್ದ, ಪರಂಪರೆಯಿದ್ದ ವೈದಿಕಧರ್ಮ ನಿಂತ ನೀರಾಗಿತ್ತು. ತತ್ವ-ಆಚರಣೆಗಳಲ್ಲಿ ಪರಸ್ಪರ ಹೊಂದಾಣಿಕೆ ತಪ್ಪಿಹೋಗಿತ್ತು. ಯಾಗ ಯಜ್ಞಗಳ ಆಚರಣೆಗಳೂ ಸೂಕ್ಷ್ಮಾತಿಸೂಕ್ಷ್ಮವಾಗುತ್ತಿದ್ದವು. ವರ್ಣಾಶ್ರಮ ಪದ್ಧತಿ ಜಾತಿ ಪದ್ಧತಿಯಾಗಿ ಮಾರ್ಪಟ್ಟಿತ್ತು. ಸಮಾಜದಲ್ಲಿ ಉಚ್ಚ-ನೀಚ, ಮೇಲು-ಕೀಳು ಭಾವನೆ ಬಲಿತು, ಧರ್ಮದ ಹೆಸರಿನಲ್ಲಿ ಜನಸಾಮಾನ್ಯರ ಸುಲಿಗೆಯಾಗುತ್ತಿತ್ತು. ಇಂತಹ ಸಂದಿಗ್ಧ ಹಾಗೂ ಸಂಕ್ಷಟಕಾಲದಲ್ಲಿ ಜೈನಧರ್ಮ ಬೌದ್ಧಧರ್ಮಗಳು ಭಾರತಕ್ಕೆ ಬಂದವು. ಸಮಾನತೆ, ಅಹಿಂಸೆಗಳನ್ನು ಎತ್ತಿ ಹಿಡಿ ಜನರ ಆಡುಮಾತಾದ ಪ್ರಾಕೃತದಲ್ಲೇ ಬೋಧಿಸಿದ ಮಹಾವೀರನ ಜೈನಧರ್ಮ ಮತ್ತು ಆಸೆಯೇ ದುಃಖಕ್ಕೆ ಮೂಲ, ಆಸೆಯನ್ನು ಬಿಡಬೇಕು ಎಂದು ಮುಂತಾಗಿ ಸರಳ ಮಾತುಗಳಲ್ಲಿ ಜನರ ಆಡುಮಾತಾದ ಪಾಳಿ ಭಾಷೆಯಲ್ಲಿ ತತ್ವ ಬೋಧಿಸಿದ ಗೌತಮ ಬುದ್ಧನ ಬೌದ್ಧಧರ್ಮಗಳು ಜನರಿಗೆ ನೇರವಾಗಿ ತಟ್ಟಿದವು; ಅರ್ಥವಾದವು; ಆಪ್ಯಾಯ ಮಾನವಾದವು. ಮೂಲಭೂತವಾಗಿ ವೇದಪ್ರಾಮಾಣ್ಯವನ್ನು ಧಿಕ್ಕರಿಸಿ ನಿಂತ ಧರ್ಮಗಳಿವು. ಪರಿಶುದ್ಧ ಜೀವನ, ಉದಾತ್ತ ತತ್ವಗಳಿಗೆ ಒತ್ತುಕೊಟ್ಟ ಈ ಎರಡೂ ಧರ್ಮಗಳು ಭಾರತವನ್ನಾಳಿದ ಚಂದ್ರಗುಪ್ತಮೌರ್ಯ, ಅಶೋಕರ ಕಾಲದಲ್ಲಿ ರಾಜಾಶ್ರಯವನ್ನು ಪಡೆದವು.

ಅನ್ಯಧರ್ಮಗಳ ಈ ಹಠಾತ್‌ ದಾಳಿ ವೈದಿಕಧರ್ಮವನ್ನು ಬಡಿದೆಬ್ಬಿಸಿತು. ಜೈನ ಬೌದ್ಧಧರ್ಮಗಳ ವೈಚಾರಿಕತೆಯನ್ನು ಗ್ರಹಿಸಿ ವೈದಿಕ ಧರ್ಮವನ್ನು ಆ ಹಿನ್ನೆಲೆಯಲ್ಲಿ ಪ್ರತಿಪಾದಿಸುವ ಅಗತ್ಯವನ್ನು ಮನಗಂಡ ತಾತ್ವಿಕರು ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವಮೀಮಾಂಸಾ, ಉತ್ತರ ಮೀಮಾಂಸಾ-ಈ ಷಡ್ದರ್ಶನ ಗ್ರಂಥಗಳನ್ನು ಬರೆದರು. ಬ್ರಹ್ಮಸೂತ್ರಗಳೆಂದೂ ಇವು ಪರಿಚಿತವಾಗಿವೆ.

ಹೀಗೆ, ವೇದಗಳಿಂದ ಆರಂಭವಾದ ಭಾರತದ ಭಕ್ತಿತತ್ವ, ಉಪನಿಷತ್ತು, ಇತಿಹಾಸ, ಪುರಾಣಗಳು, ಭಕ್ತಿಸೂತ್ರಗಳು, ಜೈನಬೌದ್ಧಾದಿ ಹೊಸಧರ್ಮಗಳ ಮೂಸೆಯಲ್ಲಿ ಹಾದು ಬಂದು ಅವುಗಳನ್ನು ಜನರಿಗೆ ಅರ್ಥಮಾಡಿಸುವ ವ್ಯಾಖ್ಯಾನ, ಟೀಕೆ-ಟಿಪ್ಪಣಿಗಳ ರೂಪದಲ್ಲಿ ಬೆಳೆದುನಿಂತಿತು. ಈ ರೀತಿಯಲ್ಲಿ ಉತ್ತುಬಿತ್ತು ಹದಗೊಂಡ ನೆಲದಲ್ಲಿ ಮುಂದೆ ಶಂಕರ ರಾಮಾನುಜ ಮಧ್ವ – ಆಚಾರ್ಯತ್ರಯರು ಉಪನಿಷತ್ತು, ಭಗವದ್ಗೀತೆ, ಬ್ರಹ್ಮ ಸೂತ್ರಗಳೆಂಬ ‘ಪ್ರಸ್ಥಾನತ್ರಯ’ಗಳಿಗೆ ವ್ಯಾಖ್ಯಾನಗಳನ್ನು ಬರೆಯುವ ಮೂಲಕ ಕ್ರಮವಾಗಿ ಅದ್ವೈತ, ವಿಶಿಷ್ಟಾದ್ವೈತ, ದ್ವೈತ ಸಿದ್ಧಾಂತಗಳೆಂಬ ಬೆಳೆ ಬೆಳೆದರು. ಈ ಸಿದ್ಧಾಂತಗಳು ಅವರವರ ಶಿಷ್ಯರು, ಪ್ರಶಿಷ್ಯರುಗಳಿಂದ ಭಾರತದಾದ್ಯಂತ ಪ್ರಚಾರಕ್ಕೆ ಬಂದುವು. ಒಂದೊಂದು ಸಿದ್ಧಾಂತವೂ ದೇಶದಾದ್ಯಂತ ಅನುಯಾಯಿಗಳನ್ನು ಪಡೆಯಿತು.

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವಿಶೇಷವಾಗಿ ಪ್ರಚಲಿತವಾಗಿರುವ ಶೈವ ವೈಷ್ಣವ ಧರ್ಮಗಳನ್ನೇ ಈ ಆಚಾರ್ಯತ್ರಯರು ಹಾಗೂ ಅವರ ಶಿಷ್ಯಪರಂಪರೆ ಎತ್ತಿಹಿಡಿದದ್ದು. ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಈ ಧರ್ಮಗಳ ಅನುಯಾಯಿಗಳು ರಚಿಸಿರುವ ಭಕ್ತಿ ಸಾಹಿತ್ಯವನ್ನು ಗಮನಿಸಿದರೆ ಕ್ರಿ.ಶ. ಸುಮಾರು ಏಳನೇ ಶತಮಾನದಷ್ಟು ಹಿಂದೆಯೇ ತಮಿಳು ಭಾಷೆಯಲ್ಲಿ ಹುಟ್ಟಿದ ನಾಯನ್ಮಾರರ ಶೈವ ಸಾಹಿತ್ಯ ಮತ್ತು ಆಳ್ವಾರರ ವೈಷ್ಣವ ಸಾಹಿತ್ಯಗಳೇ ಪ್ರಾಚೀನ ದಾಖಲೆಗಳು. ಆಳ್ವಾರರ ಭಕ್ತಿಸಾಹಿತ್ಯವು ಬಹುಶಃ ಮುಂದೆ ರಾಮಾನುಜರ ಶ್ರೀ ವೈಷ್ಣ ಮತಕ್ಕೆ ಮೂಲ ಪ್ರೇರಣೆಯಗಿ ಪರಿಣಮಿಸಿರಬಹುದು.

ಕನ್ನಡ ಭಾಷೆಯಲ್ಲಿ ಭಕ್ತಿಸಾಹಿತ್ಯ ಮೈತಾಳಲು ಮುಂದೆ ಸುಮಾರು ಐನೂರು ವರ್ಷಗಳೇ ಬೇಕಾದವು. ವೈದಿಕ ಧರ್ಮಾಚರಣೇಗಳಿಂದ ಉಸಿರುಗಟ್ಟಿದಂತಾಗಿದ್ದ ಜನರಿಗೆ ಹನ್ನೆರಡನೆಯ ಶತಮಾನದಲ್ಲಿ ವರ್ಣಭೇದ, ಲಿಂಗಭೇದಗಳಿಲ್ಲದ, ಸರ್ವಸಮಾನತೆಯನ್ನು ಸಾರುವ ವೀರಶೈವಧರ್ಮ ಆಶ್ರಯವನ್ನಿತ್ತಿತು. ಬಸವಣ್ಣ, ಅಲ್ಲಮಪ್ರಭು, ಚನ್ನಬಸವಣ್ಣ, ಅಕ್ಕ ಮಹಾದೇವಿಯರಂಥ ಅನುಭಾವಿಗಳ ಒಂದು ಪಡೆಯೇ ಸೃಷ್ಟಿಯಾಗಿ ಜನರ ಆಡು ಮಾತಿನಲ್ಲೇ ಅವರ ಆಧ್ಯಾತ್ಮಿಕ ಹಸಿವನ್ನು ತಣಿಸಿತು. ಈ ದೃಷ್ಟಿಯಲ್ಲಿ ಮೊತ್ತಮೊದಲಿಗೆ ಧರ್ಮವನ್ನು, ಶಿವಭಕ್ತಿಯನ್ನು ಕನ್ನಡ ಭಾಷೆಯಲ್ಲಿ ಮನೆಮನೆಯ ಬಾಗಿಲಿಗೆ ತೆಗೆದುಕೊಂಡು ಹೋದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ.

ಶೈವಧರ್ಮದಷ್ಟೇ ಪ್ರಾಚೀನವಾದ ವೈಷ್ಣವಧರ್ಮದ ಆರಾಧ್ಯದೈವ ಪಂಢರಾಪುರದ ವಿಠಲ ಕರ್ನಾಟಕದ ಭಾಗವೇ ಆಗಿದ್ದ ಮಳಖೇಡದ ರಾಷ್ಟ್ರಕೂಟರ ಆರಾಧ್ಯದೈವವೂ ಆಗಿದ್ದನೆಂಬುದು ಗಮನಾರ್ಹ ಸಂಗತಿ. ಒಟ್ಟಾರೆ ಕರ್ನಾಟಕದಲ್ಲಿ ವೈಷ್ಣವಧರ್ಮ ಮೂರು ಹಂತಗಳಲ್ಲಿ ಬೆಳೆದುಬಂದಿತೆಂಬುದನ್ನು ವಿದ್ವಾಂಸರು ಗುರುತಿಸಿದ್ದಾರೆ:

೧. ಶ್ರೀ ರಾಮಾನುಜರಿಗಿಂತ ಹಿಂದೆ ಇದ್ದ ಭಾಗವತಧರ್ಮ.
೨. ಶ್ರೀ ರಾಮಾನುಜರ ಶ್ರೀವೈಷ್ಣವ ಮತ.
೩. ಶ್ರೀ ಮಧ್ವಾಚಾರ್ಯರ ದ್ವೈತಮತ.

ಕನ್ನಡದ ಮೊದಲ ಉಪಲಬ್ಧಶಾಸನ ಕ್ರಿ.ಶ.೪೫೦ರ ಹಲ್ಮಿಡಿಶಾಸನದಲ್ಲೇ ಅಚ್ಯುತನ ಸ್ತುತಿಯಿದೆ. ಆರನೇ ಶತಮಾನದ ಬಾದಾಮಿ ಚಾಲುಕ್ಯರ ಅರಸು ಮಂಗಲೇಶ ತನ್ನನ್ನು ‘ಮಹಾಭಾಗವತ’ನೆಂದು ಕರೆದುಕೊಂಡಿರುವುದಲ್ಲದೆ ವೈಷ್ಣ ಗುಹಾಲಯವನ್ನು ಕಟ್ಟಿಸಿದ್ದಾನೆ. ಅತ್ತಿಮಬ್ಬೆಯ ಲಕ್ಕುಂಡಿಶಾಸನ ‘ವೈಷ್ಣವಗೀತಿ ಮನೋಹರ’ರ ಪ್ರಸ್ತಾಪಮಾಡಿದೆ. ಈ ಎಲ್ಲ ಮಾಹಿತಿಗಳನ್ನೂ ಗಮನಿಸಿದಾಗ ಕರ್ನಾಟಕದಲ್ಲಿ ಹರಿದಾಸಪಂಥಕ್ಕೆ ಹಿನ್ನೆಲೆಯಾಗಿ ಶ್ರೀ ರಾಮಾನುಜರಿಗಿಂತ ಹಿಂದಿನ ವೈಷ್ಣವಧರ್ಮದ ಇತಿಹಾಸ ಸ್ಪಷ್ಟವಾಗುತ್ತಾ ಹೋಗುತ್ತದೆ. ಶ್ರೀ ರಾಮಾನುಜರ ಶ್ರೀವೈಷ್ಣವ ಮತ ತಮಿಳುನಾಡಿನ ಕೊಡುಗೆಯಾದರೂ ಅದರ ಅನುಯಾಯಿಗಳ ಮಾತೃಭಾಷೆ ತಮಿಳಾದ್ದರಿಂದ ಅವರು ಕನ್ನಡದಲ್ಲಿ ಭಕ್ತಿಸಾಹಿತ್ಯ ರಚನೆ ಮಾಡಿದಂತಿಲ್ಲ. ಮುಂದೆ ಹದಿಮೂರನೆಯ ಶತಮಾನದ ಅನಂತರ ಶ್ರೀ ಮಧ್ವಾಚಾರ್ಯರ ಶಿಷ್ಯಪರಂಪರೆಯಿಂದ ಕನ್ನಡದಲ್ಲಿ ವೈಷ್ಣವ ಭಕ್ತಿಸಾಹಿತ್ಯ ರಚನೆ ವಿಪುಲವಾಗಿ ಆಯಿತು. ಅದಕ್ಕೆ ಅನುಕೂಲಕರವಾದ ಮತ್ತು ಅನಿವಾರ್ಯವಾದ ಪರಿಸ್ಥಿತಿ ನಾಡಿನಲ್ಲಿತ್ತು. ಆಶ್ಚರ್ಯವೆಂದರೆ ಭಾರತದಲ್ಲೇ ಭಕ್ತಿಯ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಆಚಾರ್ಯ ತ್ರಯರೆಂದು ಪ್ರಸಿದ್ಧರಾದ ಶಂಕರ ರಾಮಾನುಜ ಮಧ್ವರ ಕಾರ್ಯಕ್ಷೇತ್ರ ಕರ್ನಾಟಕವೇ ಆಗಿದ್ದುದು. ಇಂದಿಗೂ ಆಯಾ ಪೀಠಾಧಿಪತಿಗಳ ಹೆಸರಿನಲ್ಲೇ ಖ್ಯಾತವಾಗಿದ್ದು, ಧಾರ್ಮಿಕ ಕ್ಷೇತ್ರಗಳೆನಿಸಿರುವ ಶೃಂಗೇರಿಯ ಶೈವಪೀಠ, ಮೇಲುಕೋಟೆಯ ಶ್ರೀವೈಷ್ಣವ ಕೇಂದ್ರ ಹಾಗೂ ಉಡುಪಿಯ ಮಾಧ್ವಮಠಗಳು ಈ ಮಾತಿಗೆ ಸಾಕ್ಷಿ.

ಶ್ರೀಮಧ್ವಾಚಾರ್ಯರು ಹುಟ್ಟಿದ್ದೇ ಕರ್ನಾಟಕದ ಉಡುಪಿಯ ಸಮೀಪದ ಪಾಜಕಕ್ಷೇತ್ರದಲ್ಲಿ ಬೌದ್ಧ, ಜೈನ, ಶೈವ, ವೀರಶೈವ ಹಾಗೂ ಇಸ್ಲಾಂ ಧರ್ಮಗಳಿಂದ ಸಾಕಷ್ಟು ಮೂಲೆಗುಂಪಾಗಿದ್ದ ಸಮಯವದು. ಆಂತರಿಕವಾಗಿ ಕರ್ನಾಟಕದಲ್ಲೇ ಹುಟ್ಟಿಕೊಂಡಿದ್ದ ವೀರಶೈವಧರ್ಮ ತನ್ನ ವಿಶಾಲ ಹಾಗೂ ಸ್ವತಂತ್ರ ಮನೋಭಾವಗಳಿಂದಾಗಿ ಜನರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಿತ್ತು. ಆದರೆ ವೀರಶೈವಧರ್ಮ ವೇದಪ್ರಾಮಾಣ್ಯವನ್ನು ನಿರಾಕರಿಸಿದ್ದರಿಂದ ವೈದಿಕರಿಗೆ ಮುಕ್ತವಾಗಿ ಅದನ್ನು ಆತುಕೊಳ್ಳಲು ಸಾಧ್ಯವಾಗಿರಲಿಕ್ಕಿಲ್ಲ. ಪರಧರ್ಮವೇ ಆದ ಇಸ್ಲಾಂ ಧರ್ಮದ ಆಕ್ರಮಣವೂ ಸಾಕಷ್ಟು ಪ್ರಬಲವಾಗಿದ್ದ ಸಮಯವದು. ಉತ್ತರ ಭಾರತದಲ್ಲಿ ಇದ್ದಂತಹ ಮುಸ್ಲಿಂ ಆಡಳಿತ ದಕ್ಷಿಣ ಭಾರತಕ್ಕೂ ಹಬ್ಬತೊಡಗಿ ಹಿಂದುಗಳು ಬಲವಂತ ಮತಾಂತರಕ್ಕೆ ಗುರಿಯಾಗಿದ್ದರು. ಸುಮಾರು ನಾಲ್ಕು ಸಾವಿರ ವರ್ಷಗಳಿಂದ ಜನರ ಆಲಂಬನ ಶಕ್ತಿಯಾಗಿ ಬೆಳೆದು ಬೇರು ಬಿಟ್ಟಿದ್ದ ಧರ್ಮ, ದೇವರು, ದೇವಾಲಯಗಳ ಮೇಲಿನ ಆಕ್ರಮಣ, ಅತ್ಯಾಚಾರ, ಅಪವಿತ್ರತೆಗಳಿಂದ ಮಾನಸಿಕವಾಗಿ ಅತಂತ್ರರಾಗಿದ್ದ ಹಿಂದುಗಳು ಯುದ್ಧ ಕೊಲೆ ಸುಲಿಗೆಗಳ ಭೀತಿಯಿಂದಲೂ ತತ್ತರಿಸುವಂತಾಗಿದ್ದರು. ಅಂತಹ ಅಸಹಾಯಕ ಸ್ಥಿತಿಯಲ್ಲಿ ಭಕ್ತಿಮಾರ್ಗ ಪುನಃ ಜನರ ಸಹಾಯಕ್ಕೆ ಆಲಂಬನೆಯಾಗಿ ಬಂದಿತು. ಭಾರತದಾದ್ಯಂತ ವಿವಿಧ ಪ್ರಾಂತ್ಯಗಳಲ್ಲಿ ಭಕ್ತಕವಿಗಳು ತಂಡೋಪತಂಡವಾಗಿ ಹುಟ್ಟಿಕೊಂಡು ಜನಜೀವನಕ್ಕೆ ಹತ್ತಿರವಾದ ಅನುಭವಗಳಿಂದ ತುಂಬಿದ ಜನಪ್ರಿಯ ಭಕ್ತಿಸಾಹಿತ್ಯ ಸೃಷ್ಟಿಮಾಡಿದರು. ಕೇರಳದ ಚೆರುಶ್ಯೇರಿ; ಆಂಧ್ರದ ಅನ್ನಮ-ಪೋತನರು; ಮಹಾರಾಷ್ಟ್ರದ ಜ್ಞಾನದೇವ-ನಾಮದೇವರು; ಉತ್ತರ ಭಾರತದ ಕಬೀರ್; ಗುಜರಾತಿನ ನರಸೀ ಮೆಹತಾ;ಪಂಜಾಬಿನ ಗುರು ನಾನಕ್‌; ರಾಜಾಸ್ಥಾನದ ಮೀರಾ, ಕರ್ನಾಟಕದ ಶ್ರೀಪಾದರಾಜರು – ಹೀಗೆ ಅನೇಕ ಮಂದಿ ಸಂತರು ತಮ್ಮ ತಮ್ಮ ಮಾತೃಭಾಷೆಯಲ್ಲಿ ಕೃತಿರಚನೆ ಮಾಡಿದರು. ಸಂಸ್ಕೃತ ಕವಿ ಜಯದೇವ, ಬಂಗಾಲದ ಚಂಡೀದಾಸ, ಅಸ್ಸಾಮಿನ ಶಂಕರದೇವ-ಎಲ್ಲರೂ ಈ ಭಕ್ತಿವಾಹಿನಿಯಲ್ಲಿ ಮಿಂದು ಪುನೀತರಾದವರೇ. ಒಂದು ಕಡೆ ಪರಕೀಯರಾದ ಮುಸ್ಲಿಂ ದೊರೆಗಳ ದಾಳಿ, ಮತ್ತೊಂದು ಕಡೆ ಚಿಕ್ಕಪುಟ್ಟ ರಾಜರುಗಳ ಅಧಿಕಾರಲಾಲಸೆಯಿಂದ, ರಾಜ್ಯಗಳ ಅಂತಃಕಲಹಗಳಿಂದ ಬೇಸತ್ತಿದ್ದ ಜನತೆಯನ್ನು ಶಾಂತಿ ಸಮಾಧಾನಗಳತ್ತ ಕರೆದೊಯ್ಯಲು ಈ ಭಕ್ತಿ ಪಂಥಗಳು ಅನುವಾದವು. ಭಕ್ತಿ ವೃದ್ಧಿಸಿದ್ದೇ ಕರ್ನಾಟಕದಲ್ಲಿ, ಜೈನ, ಬೌದ್ಧ, ಶೈವ, ವೀರಶೈವ ಹಾಗೂ ವೈಷ್ಣವಧರ್ಮಗಳೇ ಕರ್ನಾಟಕದ ಪ್ರಮುಖಧರ್ಮಗಳೂ ಹೌದು. ಕರ್ನಾಟಕದ ಶ್ರವಣಬೆಳಗೊಳ, ಕೊಪಣತೀರ್ಥಗಳಲ್ಲಿ ನೆಲೆನಿಂತ ಜೈನಧರ್ಮ ರಾಷ್ಟ್ರಕೂಟರ ಕಾಲದಲ್ಲಿ ರಾಜಾಶ್ರಯ ಪಡೆಯಿತು. ಹತ್ತನೇ ಶತಮಾನದಲ್ಲಿ ಜನಮನ್ನಣೆಗಳಿಸಿ ಪಂಪ ರನ್ನರಂತಹ ಕವಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ತನ್ನ ಅಮೂಲ್ಯ ಕೊಡುಗೆಯನ್ನಿತ್ತು ವಿರಮಿಸಿತು. ಬೌದ್ಧಧರ್ಮ ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಮೌರ್ಯರ ಅಶೋಕ ಕಳುಹಿಸಿದ ಮಹಾದೇವ ಮತ್ತು ರಖ್ಖಿತರಿಂದ ಮಹಿಷಮಂಡಲ ಹಾಗೂ ಬನವಾಸಿಗೆ ಕಾಲಿರಿಸಿದರೂ ಯಾವ ಕಾಲದಲ್ಲೂ ಅದು ಕರ್ನಾಟಕದಲ್ಲಿ ಪ್ರಬಲ ಧರ್ಮವಾಗಿ ನಿಲ್ಲಲಿಲ್ಲ. ಮಾಸ್ಕಿ, ಜಟಿಂಗರಾಮೇಶ್ವರ, ಬ್ರಹ್ಮಗಿರಿಗಳಲ್ಲಿ ಸಿಕ್ಕಿರುವ ಶಾಸನಗಳು ಬೌದ್ಧಧರ್ಮದ ಪ್ರಾಚೀನ ಉಲ್ಲೇಖಗಳು; ಹದಿನಾರನೆಯ ಶತಮಾನದ ಒಂದು ಶಾಸನದ ಉಲ್ಲೇಖವೇ ಈಚಿನದು.

ಶೈವಧರ್ಮ ವೈಷ್ಣವಧರ್ಮಗಳು ಜೊತೆ ಜೊತೆಯಾಗಿ ಮುನ್ನಡೆದಿದ್ದರೂ ಶೈವಧರ್ಮ ಕ್ರಮೇಣ ಲಕುಲೀಶ, ಪಾಶುಪತ, ಕಾಳಾಮುಖ ಎಂಬುದಾಗಿ ಬೇರೆ ಬೇರೆ ಪಂಥಗಳಾಗಿ ಒಡೆದುಹೋಯಿತು. ೧೨ನೇ ಶತಮಾನದಲ್ಲಿ ಈ ಶೈವಧರ್ಮವೇ ಬಸವಣ್ಣನವರ ನೇತೃತ್ವದಲ್ಲಿ ವೀರಶೈವಧರ್ಮವಾಗಿ ಕವಲೊಡೆಯಿತು. ವೈಷ್ಣವಧರ್ಮ ಈ ಮೊದಲೇ ತಿಳಿಸಿದಂತೆ ಮೂರು ಮಜಲುಗಳಲ್ಲಿ ಬೆಳವಣಿಗೆಯನ್ನು ಹೊಂದಿ ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ, ಜಾತಿ ಮತ ವೈಷಮ್ಯ ಹೊತ್ತಿ ಉರಿಯುತ್ತಿದ್ದ, ನೀತಿಯ ನೆಲೆಗಟ್ಟು ಸಡಿಲಗೊಂಡಿದ್ದ ಕಾಲದಲ್ಲಿ ಮಾನವತೆಯ ಶಾಶ್ವತ ಮೌಲ್ಯಗಳನ್ನು ಎತ್ತಿಹಿಡಿಯುವ ಸಲುವಾಗಿ ಶ್ರೀ ಮಧ್ವಾಚಾರ್ಯರು ಪ್ರಸ್ಥಾನತ್ರಯಗಳಾದ ಉಪನಿಷತ್ತು ಭಗವದ್ಗೀತೆ ಬ್ರಹ್ಮಸೂತ್ರಗಳಿಗೆ ದ್ವೈತಪರ ವ್ಯಾಖ್ಯಾನ ಮಾಡಿ ತಮ್ಮ ದ್ವೈತಸಿದ್ಧಾಂತವನ್ನು ಮಂಡಿಸಿದರು. ಸಂಸ್ಕೃತದಲ್ಲಿ ಸರ್ವಮೂಲವೆಂದೇ ಖ್ಯಾತವಾಗಿರುವ ಮೂವತ್ತೇಳು ಗ್ರಂಥಗಳನ್ನು ರಚಿಸಿದರು. ಆಚಾರ್ಯರ ಈ ಗ್ರಂಥಗಳಿಗೆ ಸಂಸ್ಕೃತದಲ್ಲಿ ಟೀಕುಗಳು ಬಂದುವು. ಆ ಟೀಕುಗಳಿಗೆ ಟೀಕುಗಳೂ ಬಂದು ಹೋದುವು.

ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಆಚಾರ್ಯರು ಅವನ ಪೂಜೆ ಹಾಗೂ ದ್ವೈತಸಿದ್ಧಾಂತ ಪ್ರಸಾರಕ್ಕಾಗಿ ಅಷ್ಟಮಠಗಳನ್ನು ಸ್ಥಾಪಿಸಿ ಎಂಟು ಮಂದಿ ಬಾಲಯತಿಗಳನ್ನು ನೇಮಿಸಿದರು. ಫಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ, ಕಾಣಿಯೂರು ಮತ್ತು ಪೇಜಾವರ – ಇವೇ ಆ ಅಷ್ಟಮಠಗಳಲು; ಹೃಷಿಕೇಶ ತೀರ್ಥ, ನರಸಿಂಹ, ಜನಾರ್ದನ, ಉಪೇಂದ್ರ, ವಾಮನ, ವಿಷ್ಣು, ರಾಮ ಮತ್ತು ಅಧೋಕ್ಷಜ ತೀರ್ಥರುಗಳೇ ಆ ಎಂಟು ಮಂದಿ ಯತಿಗಳು. ಈ ಎಂಟುಮಂದಿ ಯತಿಗಳೂ ಎರಡೆರಡು ತಿಂಗಳಿಗೆ ಒಬ್ಬೊಬ್ಬರಂತೆ ಕೃಷ್ಣನ ಪೂಜೆ ಮಾಡುವ ಸರದಿಯನ್ನು ಪಡೆಯುತ್ತಿದ್ದರು. ಮುಂದೆ ವಾದಿರಾಜರ ಕಾಲಕ್ಕೆ ಈ ಪರ್ಯಯದ ಅವಧಿ ಎರಡು ವರ್ಷಗಳಿಗೆ ಒಮ್ಮೆ ಬದಲಾಗುವಂತಾಯಿತು. ಆ ಎಂಟೂ ಮಠಗಳ ಶಿಷ್ಯ ಪರಂಪರೆ ಮಧ್ವಮತದ ತತ್ವಗಳನ್ನು ಅನೂಚಾನವಾಗಿ ಪ್ರಸಾರ ಮಾಡುತ್ತ ಬಂದಿದ್ದಾರೆ. ಸ್ವತಃ ಮಧ್ವಾಚಾರ್ಯರೇ ದಕ್ಷಿಣದ ಉಡುಪಿಯಿಂದ ಉತ್ತರದ ಬದರಿ ಕ್ಷೇತ್ರದವರೆಗೂ ಸಂಚರಿಸಿ ತತ್ವಪ್ರಸಾರ ಮಾಡಿದರು. ಇಷ್ಟೆಲ್ಲ ಏರ್ಪಾಡುಗಳಾದರೂ ದ್ವೈತತತ್ತ್ವ ಬಹುಶಃ ಭಾಷಾಮಾಧ್ಯಮದ ತೊಡಕಿನಿಂದಾಗಿ ಜನಸಾಮಾನ್ಯರನ್ನು ಮುಟ್ಟಲೇ ಇಲ್ಲ. ಅವು ಜನಮನದಲ್ಲಿ ಬೇರೂರಬೇಕಾದರೆ ಮುಂದೆ ಸುಮಾರು ಇನ್ನೂರು ವರ್ಷಗಳೇ ಕಾಯಬೇಕಾದವು.

ಮಧ್ವಾಚಾರ್ಯರ ತರುವಾಯ ಸು.೧೪-೧೫ನೆಯ ಶತಮಾನದ ಹೊತ್ತಿಗೆ ಪುನಃ ಮುಸ್ಲಿಮರ ಚಟುವಟಿಕೆಗಳು ತೀವ್ರವಾದವು. ದಕ್ಷಿಣಭಾರತದಲ್ಲಿ ಪರಸ್ಪರ ಒಳಜಗಳದಲ್ಲಿ ತೊಡಗಿದ್ದ ಸೇವುಣರು ಕಾಕತೀಯರು ಹೊಯ್ಸಳರು ಪಾಂಡ್ಯರೇ ಮೊದಲಾದ ದೊರೆಗಳು ಹೊರಗಿನ ದಾಳಿಯನ್ನು ಸಹಿಸಲಾರದೆ ತತ್ತರಿಸತೊಡಗಿದ್ದರು. ಅವರ ಈ ಅಸಹಾಯಕತೆಯನ್ನು ಮಲ್ಲಿಕಾಫರ್ ಸದುಪಯೋಗಪಡಿಸಿಕೊಂಡ. ದೇವಗಿರಿಯನ್ನು ವಶಪಡಿಸಿಕೊಂಡು ಕಾಕತೀಯರ ಪ್ರತಾಪ ರುದ್ರನನ್ನು ಗೆದ್ದುದಲ್ಲದೆ ದ್ವಾರಸಮುದ್ರವನ್ನು ಮುತ್ತಿ ಹೊಯ್ಸಳರನ್ನು ಬಗ್ಗು ಬಡಿದ. ಶ್ರೀರಂಗ, ಮಧುರೆಗಳನ್ನು ಮುತ್ತಿ ಅಲ್ಲಿಯ ದೇವಾಲಯಗಳನ್ನು ನಾಶಪಡಿಸಿ ಸಂಪತ್ತನನ್ನೆಲ್ಲ ದೋಚಿಕೊಂಡು ಪುನಃ ದೆಹಲಿಗೆ ಹಿಂತಿರುಗಿದ. ಪಂಜಾಬಿನಿಂದ ಮಧುರೆಯವರೆಗೂ ಗುಜರಾತಿನಿಂದ ಬಂಗಾಳದವರೆಗೂ ತನ್ನ ರಾಜ್ಯವನ್ನು ವಿಸ್ತರಿಸಿದ. ಮುಂದೆ ದೆಹಲಿಯನ್ನಾಳಿದ ಮಹಮ್ಮದ್‌ ಬಿನ್‌ ತುಘಲಕ್, ಬಹಮನಿ ರಾಜ್ಯದ ಸುಲ್ತಾನರುಗಳು ಹಿಂದುಗಳನ್ನು ನಿರ್ದಾಕ್ಷಿಣ್ಯವಾಗಿ ದೋಚಿದರು. ಮತಾಂತರಗಳು, ತೆರಿಗೆಯ ಹೊರೆ, ಕಠಿಣಶಿಕ್ಷೆಗಳು ಜನರನ್ನು ಜರ್ಝರಿತರನ್ನಾಗಿ ಮಾಡಿದ್ದವು. ಈ ಎಲ್ಲ ಹಿಂಸೆ ಕಷ್ಟ ನಷ್ಟಗಳಿಗೆ ಪ್ರತಿಯಾಗಿ ಹಿಂದೂ ದೊರೆಗಳು ವಿದ್ಯಾರಣ್ಯರ ನೇತೃತ್ವದಲ್ಲಿ ಸಂಗಮವಂಶದ ಛತ್ರದಡಿಯಲ್ಲಿ ವಿಜಯನಗರ ಸ್ಥಾಪನೆ ಮಾಡಿದರು. ಕನ್ನಡ ನಾಡಿನಲ್ಲಿ ಹಾಗಿರಲಿ, ಇಡೀ ಭರತಖಂಡದಲ್ಲೇ ಆ ಕಾಲಕ್ಕೆ ಅದೊಂದು ಅಸಾಮಾನ್ಯ ಹಾಗೂ ಮಹತ್ವಪೂರ್ಣ ಘಟನೆ. ಹಾಗೆ ಸ್ಥಾಪಿತವಾದ ಕನ್ನಡನಾಡು ಮುಂದೆ ಎದುರೇ ಇಲ್ಲದಿದ್ದ ಮುಸ್ಲಿಮರನ್ನು ಎದುರಿಸಿ ಹಿಂದೂ ಧರ್ಮವನ್ನು ರಕ್ಷಿಸುವತ್ತ ಪರಿಣಾಮಕಾರೀ ಸಂಘಟನಾ ಶಕ್ತಿಯಾಗಿ ಕೆಲಸ ಮಾಡಿತು. ನಾಡು ನೆಮ್ಮದಿ ಕಂಡಿತು. ಮುಂದೆ ನಾಡಿನ ದೊರೆ ಕೃಷ್ಣದೇವರಾಯನ ಕಾಲದಲ್ಲಿ ವೈಷ್ಣವಯತಿಗಳಾದ ವ್ಯಾಸರಾಯರ ನೇತೃತ್ವದಲ್ಲಿ ವೈಷ್ಣವಧರ್ಮದ ಏಳಿಗೆಯೂ ಸಮಗ್ರ ಭಾರತದಲ್ಲಿ ಮಾಧ್ವಮತ ಪ್ರಸಾರವೂ ಆಯಿತು. ಕರ್ನಾಟಕದ ಹರಿದಾಸ ಪಂಥ ಆ ಮಾಧ್ವಮತ ತತ್ವಗಳ ಹಿನ್ನೆಲೆಯಲ್ಲಿ ವೈಷ್ಣವ ಭಕ್ತಿಪಂಥವಾಗಿ ಅರಳಿತು. ವಿಜಯನಗರದ ದೊರೆ ನರಸಿಂಹನ ಆಳ್ವಿಕೆಯಲ್ಲಿ ರಾಜಗುರುಗಳೆಂದು ಅಭಿಷಿಕ್ತರಾಗಿದ್ದ ಶ್ರೀಪಾದರಾಜರು ಆ ಕಾಲದಲ್ಲಿ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸುವ ಮೂಲಕ ಹೇಗೆ ಕನ್ನಡ ಹರಿದಾಸ ಸಾಹಿತ್ಯ ಪಂಥದ ಪ್ರವರ್ತಕರೆನ್ನಿಸಿಕೊಂಡರೆಂಬುದನ್ನು ಮುಂದೆ ವಿವರವಾಗಿ ಪ್ರಸ್ತಾಪಿಸಲಾಗುತ್ತದೆ. ಮಧ್ವಾಚಾರ್ಯರ ದ್ವೈತಸಿದ್ಧಾಂತವನ್ನು ಕನ್ನಡದಲ್ಲಿ ಪರಿಣಾಮಕಾರಿಯಾಗಿ ಪ್ರಸಾರ ಮಾಡಿದ ಯತಿತ್ರಯರಲ್ಲಿ ಶ್ರೀಪಾದರಾಜರೇ ಮೊದಲಿಗರು; ಎರಡನೆಯವರು ಕೃಷ್ಣದೇವರಾಯನ ಆಸ್ಥಾನದಲ್ಲಿ ರಾಜಗುರುಗಳಾಗಿದ್ದ ವ್ಯಾಸರಾಯರು; ಅನಂತರದವರು ವ್ಯಾಸರಾಯರ ಶಿಷ್ಯರಾದ ವಾದಿರಾಜರು.

 

[1] ಋಗ್ವೇದ೧-೧೬೪: ೧೦-೧೫೬.