ಹರಿದಾಸ ಸಾಹಿತ್ಯ ಪ್ರವರ್ತಕರು-ಶ್ರೀಪಾದರಾಜರು

ಕನ್ನಡ ಹರಿದಾಸ ಸಾಹಿತ್ಯದ ಉಗಮ ಹಾಗೂ ಪ್ರಾಚೀನತೆಗಳನ್ನು ಕುರಿತಂತೆ ವಿದ್ವಾಂಸರಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಆರಂಭ ಕಾಲದಲ್ಲಿ ಈ ವಿಷಯವಾಗಿ ಸಾಕಷ್ಟು ವಿಷಯ ಸಂಗ್ರಹಣೆ ಮಾಡಿ ಚರ್ಚೆಗೆ ಚಾಲನೆ ಕೊಟ್ಟವರು ಬೇಲೂರು ಕೇಶವದಾಸರು; ತಮ್ಮ ‘ಕರ್ಣಾಟಕ ಭಕ್ತ ವಿಜಯ’ದಲ್ಲಿ. ಅವರು ‘ಕಾಶೀತಿಸಂಖ್ಯಾ ಶಕಕಾಲಕಾಬ್ದೇ’-ಎನ್ನುವ ಪದ್ಯವೊಂದನ್ನಾಧರಿಸಿ ಹರಿದಾಸ ಪರಂಪರೆಗೆ ಕ್ರಿ.ಶ.ಒಂಬತ್ತನೆಯ ಶತಮಾನದಲ್ಲಿದ್ದ ಅಚಲಾನಂದದಾಸರೆಂಬುವವರು ಮೊದಲಿಗರೆಂದು ಹೇಳಿರುವರು.[1] ಅಚಲಾನಂದ ವಿಠಲ’ ಅಂಕಿತದಲ್ಲಿ ದೊರೆತಿರುವ ಕೆಲವು ಉಗಾಭೋಗಗಳನ್ನೂ ಅವರು ಉದಾಹರಿಸಿದ್ದಾರೆ.[2] ಆದರೆ ಆ ರಚನೆಗಳ ಭಾಷೆಗೂ ಅಚಲಾ ನಂದರ ಕಾಲವಾದ ಒಂಬತ್ತನೆಯ ಶತಮಾನದ ಭಾಷೆಗೂ ತಾಳೆ ಬರುವುದಿಲ್ಲವಾದದರಿಂದ ಅವು ಆ ಮನೆತನದವರು ಇತ್ತೀಚೆಗೆ ಬರೆದ ರಚನೆಗಳಿರಬಹುದೆಂಬ ಅನುಮಾನವೂ ಅವರಿಗೆ ಬಂದಂತಿದೆ. ಮುಂದೆ ಶ್ರೀ ಹುಲಗೂರು ಕೃಷ್ಣಾಚಾರ್ಯರು ಕೇಶವದಾಸರು ಹೇಳುವ ಅಚಲಾನಂದರ ಕಾಲ ಕ್ರಿ.ಶ.೮೦೧ ಎಂಬುದನ್ನು ಒಪ್ಪದೆ, ಅದೇ ಪದ್ಯದ ಸಂಖ್ಯಾಶಬ್ದವನ್ನಾಧರಿಸಿ, ಅದು ೧೨೮೧ ಶಕ, ವಿಳಂಬಿ ಸಂವತ್ಸರ ಎಂದಾಗುವುದು; ಆದ್ದರಿಂದ ಕ್ರಿ.ವ.೧೩೫೯ ಎಂದು ಗ್ರಹಿಸಬೇಕಾಗುತ್ತದೆನ್ನುವ ಅಭಿಪ್ರಾಯವನ್ನು ಮುಂದಿಟ್ಟರು. ಜೊತೆಗೆ ಅಚಲಾನಂದ ವಿಠಲಾಂಕಿತ ಕೃತಿಯೊಂದರಲ್ಲಿ ‘ಕೇಳೋ ಜೀವವೆ ನೀ ಮಧ್ವ ಮತನನುಸರಿಸಿ ಶ್ರೀಲೋಲನಂಘ್ರಿಗಳ ನೆನೆದು ಸುಖಿಸೋ’-ಎಂದು ಇರುವುದರಿಂಧ ಅವರು ಮಧ್ವಾಚಾರ್ಯರಿಗಿಂತ ಈಚಿನವರೆನ್ನುವ ಅಭಿಪ್ರಾಯವನ್ನು ಮಂಡಿಸಿದರು. ಈ ವಾದವನ್ನು ವಿದ್ವಾಂಸರು ಒಪ್ಪಿದ್ದಾರೆ. ಇತ್ತೀಚೆಗೆ ಡಾ.ಜಿ. ವರದರಾಜರಾಯರು ಅಚಲಾನಂದದಾಸರ ಮನೆತನದವರಲ್ಲಿದ್ದ ಕೆಲವು ಓಲೆಯಗರಿಗಳನ್ನು ಅಭ್ಯಾಸಮಾಡುತ್ತಿದ್ದಾಗ, ಕನ್ನಡದಲ್ಲಿ ರಚಿತವಾದ ಒಂದು ಗ್ರಂಥದ ನಾಲ್ಕು ಓಲೆಗರಿಗಳಲ್ಲಿ ಅಚಲಾನಂದರನ್ನು ಕುರಿತ ಕೆಲವು ವಿಚಾರಗಳು ದೊರೆತವು. ಕೇಶವದಾಸರಿಗೆ ಪದ್ಯದಲ್ಲಿ ದೊರೆತಿದ್ದ ವಿವರಗಳು ಇವರಿಗೆ ಗದ್ಯದಲ್ಲಿ ದೊರೆತಿವೆ:

ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀಮನ್ನೃಪ
ಶಾಲೀವಾಹನ ಶಕವರ್ಷ ೮೦೧ನೆ ವಿಳಂಬಿ
ಸಂವತ್ಸರದ ಚೈತ್ರಶುದ್ಧ ೧೦ಯಲು ಶ್ರೀಮದ…

ನದಿಯಲು ಮಾಧ್ಯಾಹ್ನಿಕಾರ್ಘ್ಯಪ್ರದಾನಕಾಲ
ದಲ್ಲಿ ಪ್ರತ್ಯಕ್ಷರಾಗಿ ಹಸ್ತಗತರಾದ ಶ್ರೀವಿಠಲ
ಮೂರ್ತಿಯ…

-ಎಂದು ಬರೆದಿದೆ. ಅದರೊಂದಿಗೆ ಅಚಲಾನಂದರ ಕಾಲದಿಂದ ಪೂಜೆಗೊಳ್ಳುತ್ತಿರುವ ವಿಗ್ರಹಗಳ ಪಟ್ಟಿಯಲ್ಲಿ ‘ಅಚಲಾನಂದ ದಾಸರಿಗೆ ಪಾಂಡುರಂಗೆಯಲ್ಲೂ ಅರ್ಘ್ಯಕಾಲದಲ್ಲೂ ಪ್ರತ್ಯಕ್ಷವಾದ ವಿಠಲಮೂರ್ತಿ ಎಂಬ ವಿವರ ದಾಖಲಾಗಿದೆ. ಅಚಲಾನಂದರು ಸ್ಥಾಪಿಸಿರುವ ಆರು ಮಠಗಳ ಪಟ್ಟಿ; ಅವರ ಶಿಷ್ಯರ ಪಟ್ಟಿ; ಮಠಕ್ಕೆ ಉಂಬಳಿಯಾಗಿ ಬಿಟ್ಟ ಗ್ರಾಮಗಳ ಪಟ್ಟಿ; ಅವರ ಕಾಲದಿಂದ ಪೂಜೆಗೊಳ್ಳುತ್ತಿರುವ ವಿಗ್ರಹಗಳಪಟ್ಟಿ – ಎಲ್ಲವನ್ನೂ ಹೇಳಿದೆ. ಅಚಲಾನಂದರೇ ತಮ್ಮ ಪೂಜಾದಿಕಾರ್ಯ ನಿಮಿತ್ತ ಒಂದು ಮಠವನ್ನು ನಿರ್ಮಿಸಿದರೆಂದೂ ಗೋಪೀನಾಥದಾಸರು, ಮುದ್ದುವಿಠಲದಾಸರು ಮತ್ತು ಪಾಂಡುರಂಗದಾಸರು ಕಾಲಾನುಕ್ರಮದಲ್ಲಿ ಮಠದ ಆಡಳಿತವನ್ನು ವಹಿಸಿಕೊಂಡು ಪೂಜಾದಿಗಳನ್ನು ಸಾಂಗವಾಗಿ ನೆರವೇರಿಸಿದರೆಂದೂ ದಾಖಲಾಗಿದೆ.[3]

ಈ ಎಲ್ಲ ವಿವರಗಳನ್ನೂ ಪರಿಶೀಲಿಸಿದಾಗ ಕ್ರಿ.ಶ.೯ನೇ ಶತಮಾನದಲ್ಲಿ ಒಬ್ಬರು ಅಚಲಾನಂದರಿದ್ದುದು ಸ್ಪಷ್ಟ. ಅವರು ಮಠಾಧಿಪತಿಗಳಾಗಿದ್ದರೆಂಬುದೂ ಸತ್ಯ. ಆದರೆ ಅಚಲಾನಂದವಿಠಲ ಅಂಕಿತದ ಕೃತಿಗಳ ಭಾಷೆ ಮಾತ್ರ ೯ನೇ ಶತಮಾನದ್ದಲ್ಲ; ಮೊದಲೇ ಅನುಮಾನಿಸಿದ್ದಂತೆ ಅದು ಸು.೧೫-೧೬ನೇ ಶತಮಾನದ ಕನ್ನಡವೆಂಬುದು ವಿದ್ವಾಂಸರ ತೀರ್ಮಾನ. ಅಚಲಾನಂದ ವಿಠಲ ಅಂಕಿತದ ಸುಳಾದಿಯ ಒಂದು ನುಡಿ ಹೀಗಿದೆ:

ರಾಗ:ದೇಶಾಕ್ಷಿ             ಏಕತಾಳ

ಮನ್ನವಚನಕಾಯದಿಂಧ ಅನ್ಯವನರಿಯದ
ಹನುಮಂತನವೊಲು ನಿನ್ನ ದಾಸನೆಂದೆನಿಸಯ್ಯ
ಎನ್ನಂದದ ಕೃಪಣಂಗೆ ಕೃಪಾಕರ ನಿನ್ನ ದಾಸನೆಂದೆನಿಸಯ್ಯ
ಉನ್ನಂತ ಭಕುತಿಯನಿತ್ತೆನಗನುದಿನ
ನಿನ್ನವನೆನಿಸಚಲಾನಂದ ವಿಠಲ

-ಡಾ. ವರದರಾಜರಾಯರು ಈ ಕಾಲ-ಭಾಷೆಗಳ ವೈರುಧ್ಯವನ್ನು ಪರಿಗಣಿಸಿ “ಭಾಷಾ ಸ್ವರೂಪವನ್ನು ಕಡೆಗಣಿಸಿ ಅಚಲಾನಂದವಿಠಲಾಂಕಿತವಾದ ರಚನೆಗಳನ್ನು ಕ್ರಿ.ಶ.೯ನೆಯ ಶತಮಾನಕ್ಕೆ ಸೇರಿದ ಅಚಲಾನಂದ ಸ್ವಾಮಿಗಳು ಬರೆದರೆನ್ನುವುದಾಗಲಿ ಅಥವಾ ಆ ಕೃತಿಗಳ ಸಲುವಾಗಿಯೇ ಅವರನ್ನು ಇತ್ತೀಚಿನ ಕಾಲಕ್ಕೆ ಸರಿಸುವುದಾಗಲಿ ಸರಿಯೆನ್ನಿಸುವುದಿಲ್ಲ. ಆದುದರಿಂದ ಬೇರೆ ಬೇರೆ ಕಾಲಕ್ಕೆ ಸೇರಿದ ಇಬ್ಬರು ಅಚಲಾನಂದರು ಇದ್ದಿರಬೇಕು ಎನ್ನುವುದು ಸೂಕ್ತವಾದುದು” ಎಂದಿದ್ದಾರೆ.[4]

ಡಾ. ಜಿ. ವರದರಾಜರಾಯರ ಈ ಊಹೆಗೆ ಪೂರಕವಾಗಿ ಶ್ರೀರಂಗಪಟ್ಟಣದ ಬಳಿಯಿರುವ ತೊಣ್ಣೂರು ದೇವಾಲಯದ ತಾಮ್ರಶಾಸನವನ್ನು ಪರಿಗಣಿಸಬಹುದು. ೧೫ ಹಲಗೆಗಳಲ್ಲಿ ಲಿಖಿತವಾಗಿರುವ ಶಾಸನವಿದು. ಮೈಸೂರಿನ ದೊರೆ ಮೊದಲನೇ ಕೃಷ್ಣರಾಜನು ತೊಂಡೂರು-ಅತ್ತಿಕುಪ್ಪೆ ಹಳ್ಳಿಗಳನ್ನು ಅಗ್ರಹಾರವನ್ನಾಗಿ ಪರಿವರ್ತಿಸಿ, ಆ ಅಗ್ರಹಾರವನ್ನು ೧೧೨ ವೃತ್ತಿಗಳಾಗಿ ವಿಭಜಿಸಿ, ಹೊರನಾಡುಗಳಿಂದ ಆಹ್ವಾನಿತರಾಗಿ ಬಂದ ಬ್ರಾಹ್ಮಣರಿಗೆ ಅಲ್ಲಿಯೇ ನೆಲೆಸಲೆಂದು ಹಂಚಿಕೊಟ್ಟ ವಿಚಾರ ಅದರಲ್ಲಿದೆ:

…ಅಚಲಾನನ್ದದಾಸಾಖ್ಯ
ವಿಷ್ಣುಭಕ್ತ ಕುಲೋಧ್ಭವಃ ಆಶ್ವಲಾಯನ ವಾಸಿಷ್ಠ
ಋಕ್ಯಾಖ್ಯಪ್ಪಣ ಪುತ್ರಜಃ| ವೃತ್ತಿಂ
ನೃಸಿಂಹಜೋತ್ರೈಕಾಂ ಹರಿದಾಸಸ್ಸಮಶ್ನುತೇ[5]

-ವೃತ್ತಿಗಳನ್ನು ಪಡೆದ ನೂರಾಹನ್ನೆರಡು ಜನರಲ್ಲಿ ವೈಷ್ಣವ ಮನೆತನದಲ್ಲಿ ಹುಟ್ಟಿದ, ನೃಸಿಂಹನ ಮಗನೂ ಅಪ್ಪಣನ ಮೊಮ್ಮಗನೂ ಆದ, ವಾಸಿಷ್ಠಗೋತ್ರ ಆಶ್ವಲಾಯನ ಸೂತ್ರ ಋಕ್‌ ಶಾಖಾಧ್ಯಾಯಿ ಅಚಲಾನಂದದಾಸನೂ ಒಬ್ಬನು. ಈ ಶಾಸನದ ಕಾಲ ಕ್ರಿ.ಶ.೧೭೨೨ ಡಿಸೆಂಬರ್ ೧೧. ಕರ್ನಾಟಕದಲ್ಲಾಗಲೇ ಹರಿದಾಸರಿಂದ ವಿಪುಲವಾಗಿ ಭಕ್ತಿಸಾಹಿತ್ಯ ಕೃಷಿ ನಡೆದಿದ್ದ ಕಾಲ. ಶ್ರೀರಂಗಪಟ್ಟಣದ ರಂಗನಾಥನನ್ನೂ ಹರಿದಾಸರು ಹಾಡಿಹೊಗಳಿದ್ದರು.

ಅಚಲಾನಂದರ ಪ್ರಸ್ತಾಪವಿರುವ ಇನ್ನೊಂದು ಶಾಸನ ಹಾಸನಜಿಲ್ಲೆ ಆಲೂರು ತಾಲೂಕಿನ ನಲ್ಲೂರು ಶಾಸನ.[6] ಒಂದು ಬಯಲಿನಲ್ಲಿ ಹೂತಿರುವ ಕಲ್ಲಿನ ಮೇಲೆ ಅರ್ಧಚಂದ್ರಾಕೃತಿಯಲ್ಲಿ ‘ಶ್ರೀ ಅಚಳಾನಂದ ವಿಠಲ’ – ಎಂಬ ಬರಹವಿದೆ. ಈ ಶಾಸನದ ಕಾಲ ೧೫-೧೬ನೇ ಶತಮಾನ.

ಈ ಶಾಸನಗಳ ದಾಖಲೆಗಳಿಂದ ಇಬ್ಬರು ಅಚಲಾನಂದರಿದ್ದುದು ಸ್ಪಷ್ಟ. ಒಬ್ಬರು ಕ್ರಿ.ಶ.೯ನೇ ಶತಮಾನದಲ್ಲಿದ್ದ ಮಠಾಧಿಪತಿಗಳು. ಪಾಂಡುರಂಗ, ಕಳಸ, ವಿದ್ಯಾನಗರ, ಪೆನುಗೊಂಡೆ, ರಾಮೇಶ್ವರ, ಕಾಶಿ, ಕೆಳದಿ,; ಬಿದುಲೂರುಗಳಲ್ಲಿ ಒಂದೊಂದು, (ಒಟ್ಟು ಏಳು) ಮಠವನ್ನು ಸ್ಥಾಪಿಸಿದ ‘ಅಚಲಾನಂದ ಸ್ವಾಮಿಗಳು’. ಇನ್ನೊಬ್ಬರು ಮೈಸೂರಿನ ದೊರೆ ಮೊದಲನೇ ಕೃಷ್ಣರಾಜನಿಂದ ವೃತ್ತಿಯನ್ನು ಪಡೆದ ‘ಅಚಲಾನಂದದಾಸರು’. ದೊರೆತಿರುವ ಅಚಲಾನಂದ ವಿಠಲಾಂಕಿತ ಕೃತಿಗಳು ಈ ಎರಡನೇ ಅಚಲಾನಂದರಿಂದ ರಚಿತವಾದವುಗಳೇ ಆಗಿರಬೇಕು. ಹೀಗೆ ಭಾಷಾ ದೃಷ್ಟಿ, ಆಂತರಿಕ ಹಾಗೂ ಬಾಹ್ಯ ಪ್ರಮಾಣಗಳು ಹಾಗೂ ಶಾಸನದ ಆಧಾರಗಳಿಂದ ಅಚಲಾನಂದರು ಹರಿದಾಸ ಪರಂಪರೆಗೆ ಮೊದಲಿಗರೆನ್ನುವ ವಾದವನ್ನು ಕೈಬಿಡಬಹುದು.

ಹಾಗೆಯೇ ಶ್ರೀಮಧ್ವಾಚಾರ್ಯರ ಸಮಕಾಲೀನರಾದ ಶ್ರೀ ನರಹರಿತೀರ್ಥರು ಹರಿದಾಸ ಪರಂಪರೆಗೆ ಮೊದಲಿಗರೆನ್ನುವ ಒಂದು ವಾದವೂ ವಿದ್ವಾಂಸರ ಚರ್ಚೆಗೆ ಆಹಾರವಾಗಿದೆ. ಶ್ರೀ ಆರ್.ಎಸ್‌. ಪಂಚಮುಖಿ, ಗೋರಬಾಳ ಹನುಮಂತರಾಯರು, ಡಾ.ಕೆ.ಎಂ.ಕೃಷ್ಣರಾಯರು ಈ” ಬಗ್ಗೆ ಸಾಕಷ್ಟು ವಿಚಾರ ವಿವರಗಳನ್ನು ಕೊಟ್ಟು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ನರಹರಿತೀರ್ಥರೆ ಮೊದಲಿಗರೆಂದು ಭಾವಿಸಬಹುದೆನ್ನುವ ಪಂಚಮುಖಿಯರ ಹಾಗೂ ಗೋರಬಾಳರ ಅಭಿಮತವನ್ನು ಗ್ರಹಿಸಿದ ಡಾ.ಕೆ.ಎಂ.ಕೃಷ್ಣರಾಯರು ನರಹರಿತೀರ್ಥರ ಬಗ್ಗೆ ಕೆಲವು ಆಕ್ಷೇಪಣೆಗಳನ್ನೆತ್ತಿದ್ದಾರೆ:

೧. ನರಹರಿತೀರ್ಥರ ಉಪಲಬ್ಧ ಕೃತಿಗಳು ಮೂರೇ ಮೂರು. ಅವು ಕೂಡ ‘ರಘುಕುಲ ತಿಲಕ’, ‘ರಘುಪತಿ’-ಎನ್ನುವ ಅಂಕಿತಗಳಲ್ಲಿವೆ. ಈ ಅಂಕಿತಗಳೂ ನರಹರಿತೀರ್ಥರವು ಎನ್ನುವ ಊಹೆಯ ಮೇಲೆ ಪರಂಪರೆಗೆ ಅವರು ಮೊದಲಿಗರೆನ್ನುವ ಮಾತು ನಿಂತಿದೆ, ಅಷ್ಟೇ.

೨. ನರಹರಿತೀರ್ಥರ ಬಳಿಕ ಸುಮಾರು ನೂರುವರ್ಷಗಳು ದಾಸಸಾಹಿತ್ಯವನ್ನು ರಚಿಸಿದ. ಅವರ ಶಿಷ್ಯಪರಂಪರೆ ಇಲ್ಲ.

೩. ಹರಿದಾಸ ಪರಂಪರೆಯ ವಂದನಾಶ್ಲೋಕದಲ್ಲಿ ನರಹರಿತೀರ್ಥರ ಹೆಸರಿಲ್ಲ. ಹೀಗೆ ಆದ್ಯರನ್ನು ಬಿಡಲು ಕಾರಣವೇನು?

೪. ಅವರ ಮಾತೃಭಾಷೆ ಕನ್ನಡವಲ್ಲ. ಮತ್ತು ಅವರು ಕನ್ನಡ ನಾಡಿಗೆ ಬಂದದ್ದೇ ತಮ್ಮ ಇಳಿವಯಸ್ಸಿನಲ್ಲಿ. ಅನಂತರ ಕನ್ನಡ ಕಲಿತು ಕೃತಿರಚನೆ ಮಾಡಿದರೇ ಎಂಬುದು ವಿಚಾರಣೀಯ.

೫. ಒಂದು ವೇಳೆ ನರಹರಿತೀರ್ಥರು ಹೀಗೆ ಒಂದು ಹೊಸಮಾರ್ಗವನ್ನು ಹಾಕಿಕೊಟ್ಟಿದ್ದಿದ್ದರೆ ಮಠಾಧಿಪತಿಗಳಾಗಿದ್ದ ಅವರಿಗೆ ಶಿಷ್ಯ ಪ್ರಶಿಷ್ಯರಿದ್ದೇ ಇರುತ್ತಿದ್ದರು. ಅಂತಹ ಪರಂಪರೆ ಯಾವುದೂ ಇದ್ದಂತಿಲ್ಲ.

೬. ಹರಿದಾಸ ಪಂಥದ ಆರಾಧ್ಯಮೂರ್ತಿ ಪಂಢರಾಪುರದ ವಿಠಲನ ಅಂಕಿತ ನರಹರಿ ತೀರ್ಥರವೆನ್ನಲಾಗಿರುವ ಕೃತಿಗಳಲ್ಲಿ ಇಲ್ಲ.

-ಈ ಎಲ್ಲ ವಾದ-ಪ್ರತಿವಾದಗಳನ್ನೂ ಗಮನಿಸಿದ ಡಾ.ಜಿ.ವರದರಾಜರಾಯರು ನರಹರಿತೀರ್ಥರು ತಮ್ಮ ಇಳಿವಯಸ್ಸಿನಲ್ಲಿ, ತಮ್ಮ ಮಾತೃ ಭಾಷೆಯಲ್ಲದ ಕನ್ನಡದಲ್ಲಿ ಕೃತಿ ರಚನೆ ಮಾಡಿರುವ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ. ‘ವಿಠಲ’ ಎಂಬ ಅಂಕಿತವಿಲ್ಲದಿದ್ದರೂ ಯತಿಗಳೂ ತಮ್ಮ ಆಶ್ರಮನಾಮವನ್ನು ಅಂಕಿತವಾಗಿ ಬಳಸದೆ ಇಷ್ಟದೇವತೆಯ ಹೆಸರನ್ನೇ ಬಳಸಿರುವುದಕ್ಕೆ ನಿದರ್ಶನವಾಗಿ ವ್ಯಾಸರಾಯರ ‘ಶ್ರೀಕೃಷ್ಣ’ ವಾದಿರಾಜರ ‘ಹಯವದನ’ ಅಂಕಿತಗಳನ್ನು ಉದಾಹರಿಸಿರುವರು. ಅದರಿಂದ ಬಾಧಕವೇನೂ ಇಲ್ಲವೆಂದು ಒಪ್ಪಿಕೊಂಡರೂ ನರಹರಿತೀರ್ಥರ ಜೀವನದಲ್ಲಿ ಮೂಲಸೀತಾರಾಮ ದೇವರ ಪ್ರಸಂಗ ಎಲ್ಲಕ್ಕಿಂತ ಮಿಗಿಲಾಗಿದೆ. ಹಾಗಾಗಿ ‘ರಘುಪತಿ’ ಅಂಕಿತವಿದ್ದಿರಬಹುದಾದರೂ ‘ನರಹರಿ’ ಅವರ ಅಂಕಿತವಾಗಲು ಸಾಧ್ಯವಿಲ್ಲವೆನ್ನುವರು. ಅಂತೆಯೇ ನರಹರಿ ತೀರ್ಥರದೆನ್ನಲಾಗಿರುವ ಇನ್ನುಳಿದ ಕೀರ್ತನೆಗಳ ಪಾಠ ಸಮಸ್ಯೆಗಳನ್ನೂ ಎತ್ತಿ ತೋರಿಸಿ ಒಂದೇ ಕೀರ್ತನೆ ವಿವಿಧ ಆಕರಗಳಲ್ಲಿದ್ದರೂ ರಚನೆಯ ಶುದ್ಧ ಪಾಠದ ಬಗ್ಗೆಯೇ ಸಂದೇಹ ವ್ಯಕ್ತಪಡಿಸಿದ್ದಾರೆ . ಮತ್ತು ‘ಅನುಪಲ್ಲವಿ’ ನಿಯತವಾಗಿ ಬರುವ ಆ ರಚನೆಗಳು ಹೇಗೆ ಸಂಗೀತಶಾಸ್ತ್ರದ ದೃಷ್ಟಿಯಿಂದಲೂ ಐತಿಹಾಸಿಕ ಅಸಂಗತವಾಗಿವೆಯೆಂಬುದನ್ನು ಎತ್ತಿತೋರಿಸಿ, ನರಹರಿತೀರ್ಥರನ್ನು ಸ್ತುತಿಸಿರುವ ಪುರಂದರಾದಿ ಹರಿದಾಸರೂ ಕೂಡ ಅವರ ಪಾಂಡಿತ್ಯ ವಿದ್ವತ್ತುಗಳನ್ನೂ ಅವರು ಕಳಿಂಗರಾಜನ ಭಂಡಾರದಲ್ಲಿದ್ದ ಮೂಲ ಸೀತಾರಾಮರ ಮೂರ್ತಿಯನ್ನು ಶ್ರೀಮದಾಚಾರ್ಯರಿಗೆ ನೀಡಿದ ಸಂಗತಿಯನ್ನೂ ಎತ್ತಿಹೇಳಿರುವರೇ ವಿನಾ ಅವರು ಕನ್ನಡ ಕೀರ್ತನೆಗಳನ್ನು ರಚಿಸಿರುವರೆಂದು ಎಲ್ಲಿಯೂ ಸೂಚಿಸಿಲ್ಲವೆನ್ನುವರು. ಪರಿಣಾಮವಾಗಿ “ಸದ್ಯಕ್ಕೆ ದೊರೆತಿರುವ ರಚನೆಗಳನ್ನೇ ಅವಲಂಬಿಸಿ ಅವರನ್ನು ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರೆಂದು ಭಾವಿಸುವುದಾಗಲೀ ಪೂರ್ವಾಪರ ವಿಚಾರಗಳನ್ನು ನಿಷ್ಪಕ್ಷಪಾತವಾಗಿ ವಿಮರ್ಶಿಸದೆ ನಿರಾಕರಿಸುವುದಾಗಲೀ ಸಲ್ಲದು” – ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿರುವರು.[7]

ಮತ್ತೊಂದು ಮುಖ್ಯವಾದ ವಿಚಾರವೆಂದರೆ ಕನ್ನಡ ಹರಿದಾಸ ಪರಂಪರೆಯನ್ನು ಪೌರಾಣಿಕ ವ್ಯಕ್ತಿ ಮಹಿದಾಸನಿಂದ ಗುರುತಿಸುವ ಸಂಪ್ರದಾಯವಿದೆ.[8] ಈ ಸಂಪ್ರದಾಯಕ್ಕೆ ಅರುವತ್ತು ಜನ ಆದ್ಯರು, ಒಂಬತ್ತು ಜನ ಆರಾಧ್ಯರು ಪ್ರಮುಖರೆಂದು ಹೇಳುವುದುಂಟು. ಆದರೆ ಪುರಂದರಾದಿ ಮೊದಲಘಟ್ಟದ ಹರಿದಾಸರು ಆದ್ಯರೆಂದು ಯಾರನ್ನೂ ನೆನೆಯದೆ ಮೌನವಾಗಿರುವುದರಿಂದ ಈ ಅರುತ್ತು ಜನ ಆದ್ಯರ ಕಾಲದ ಬಗ್ಗೆ ನಿರ್ದಿಷ್ಟ ನಿಲುವನ್ನು ತೆಗೆದುಕೊಳ್ಳುವುದು ಕಷ್ಟವಾಗಿದೆ. ಅಂತೆಯೇ ವಿಜಯದಾಸರಿಗೂ ಮುಂಚಿನವರಾದ ಮಹಿಪತಿರಾಯರು ಗುರು ಪರಂಪರೆಯನ್ನು ಸ್ತುತಿಸುತ್ತಾ-

ನೆನೆದು ನಮಿಸುವೆ ವಾರಂ ವಾರ
………..
ಶರಣೆಂದು ಆದ್ಯರ ಸಕಲಪ್ರಸಿದ್ಧರ
ಶ್ರೀ(ಸಿರಿ) ಪಾದಪ್ರೀಯ ಶುಭವ್ಯಾಸರಾಯರ
ವರ ಹಯಗ್ರೀವ ಜಗವರಿತ ವಾದಿರಾಜ
ಪುರಂದರದಾಸರ ಪುನ್ನರವ ಮಾಳವ(?)
ನೆರೆ ತಾಳಪಾಕರ ಸಂತಮತಿ ಕನಕರ
ಹರಿಭಕ್ತಿ ಉಲ್ಲಾಸರ ಬಂಡರಂಗನರಿತಿಹ ನಿಜದಾ
ಸರ ಮಹೀಪತಿ ಗುರುಶರಣರ ತೋಷರ ವಾರಂ ವಾರ

-ಎಂದು ಶ್ರೀಪಾದರಾಜರು ವ್ಯಾಸರಾಯರು ವಾದಿರಾಜರು ಪುರಂದರದಾಸರು ತಾಳ್ಳಪಾಕರು ಕನಕರು-ಇವರುಗಳನ್ನೇ ಆದ್ಯರೆಂದು ಕರೆದಿರುವುದು ಗಮನಾರ್ಹ ಸಂಗತಿ.[9]

ಅದೇ ಪುಸ್ತಕದಲ್ಲಿರುವ ಮೇಲ್ಗಿರಿ ವಿಠಲರ ಒಂದು ಉಗಾಭೋಗದಲ್ಲಿ ಹರಿದಾಸರ ಪರಂಪರೆ ಹೀಗೆ ಉಕ್ತವಾಗಿದೆ:

…. ಶ್ರೀಪಾದ ರಾಜಯತಿ
ಗುರುವ್ಯಾಸ, ವಾದಿರಾಜಾ ಮಾಧವಾಕ್ಷೋಭ್ಯಾ
ಸಿರಿ ವೈಷ್ಣವ ಮತಜ ವೈಕುಂಠದಾಸರು
ಅರವತ್ತು ಆದ್ಯರು ಪುರಂದರ ದಾಸರು ಸುತರಾ
ಮೆರೆಸುವೆ ಈ ಪರಿ ವಿಜಯದಾಸರಿಗೆಂದು
ವರವು ಕೊಟ್ಟನು

ವಿಜಯದಾಸರು ಆದ್ಯರೆಂದು ಕರೆದವರು ಬಹುಶಃ ಪುರಂದರದಾಸರ ಸಮಕಾಲೀನ ಹರಿದಾಸರಿರಬೇಕೆಂದು ‘ಇವರು (ಆದ್ಯರು) ಈ ಪರಿಯಲ್ಲಿ ಅಂಕಿತವನು ಹಾಕಿ ಅವನಿಯೊಳಗೆ ಸಂಚರಿಸುತ್ತಿರಲು ಭವದೂರರಾಗಿ ದಾಸರು ತಮ್ಮ ಸುತರೊಡನೆ ವಿರಚಿಸಿದರು’-ಎಂಬ ವಿಜಯದಾಸರ ಮಾತುಗಳಿಂದಲೇ ಗ್ರಹಿಸಬಹುದಾಗಿದೆ. ಆದ್ಯರೆಂದರೆ ಶ್ರೀಪಾದರಾಜರಿಗಿಂತಲೂ ಹಿಂದಿನವರೆಂದೇ ಗ್ರಹಿಸಿ ತಮ್ಮ ವಾದವನ್ನು ಮಂಡಿಸಿರುವ ವಿದ್ವಾಂಸರಲ್ಲಿ ಶ್ರೀ ಕಪಟರಾಳ ಕೃಷ್ಣರಾಯರೂ ಒಬ್ಬರು.[10] ಈ ಎಲ್ಲ ವಿಚಾರಗಳನ್ನೂ ಗಮನಿಸಿದಾಗ ‘ಒಂದು ವೇಳೆ ಇದೇ ಆದ್ಯಪರಂಪರೆಯನ್ನು ಶ್ರೀಪಾದರಾಜರೋ ಪುರಂದರದಾಸರೋ ಸ್ಮರಿಸಿದ್ದರೆ ಅವರನ್ನು ಪ್ರಾಚೀನರೆಂದು ನಿರ್ಧರಿಸಬಹುದಿತ್ತೆನ್ನುವ ಮತ್ತು ಶ್ರೀ ಗೋರಬಾಳ ಹನುಮಂತರಾಯ ಆದ್ಯರದೆಂದು ನಿರ್ದೇಶಿಸಿ ಉದಾಹರಿಸಿರುವ ಉಗಾಭೋಗ ಹಾಗೂ ಸುಳಾದಿಗಳ ಅಂಕಿತ ವಿಜಯದಾಸರ ಅನಂತರ ಉದಾಹರಿಸಿರುವ ಉಗಾಭೋಗ ಹಾಗೂ ಸುಳಾದಿಗಳ ಅಂಕಿತ ವಿಜಯದಾಸರ ಅನಂತರ ಬೇರಾರಲ್ಲೂ ಕಂಡುಬರದಿದ್ದಲ್ಲಿ ಮಾತ್ರ ಅವುಗಳನ್ನು ಸ್ವೀಕರಿಸಿಬಹುದು’ ಎನ್ನುವ ಡಾ.ವರದರಾಜರಾಯರ ಅಭಿಪ್ರಾಯ ಸಮರ್ಥನೀಯವಾಗಿದೆ.

ಮೇಲಿನ ಎಲ್ಲ ವಾದ-ವಿವಾದಗಳನ್ನೂ ಪರಿಶೀಲಿಸಿ ನೋಡಿದಾಗ ವಿಜಯದಾಸರ ಕಾಲದಲ್ಲೋ ಅಥವಾ ಅನಂತರದಲ್ಲೋ ಹರಿದಾಸ ಪರಂಪರೆಯ ಪ್ರವರ್ತಕರು ಯಾರೆಂಬ ಪ್ರಶ್ನೆ ಹುಟ್ಟಿದ್ದಿರಬಹುದು. ಮತ್ತು ಜಿಜ್ಞಾಸುಗಳು ಆ ಬಗ್ಗೆ ತಮ್ಮ ಅಭಿಪ್ರಾಯವನ್ನು.

ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸಯೋಗಿನೇ
ನಮಃ ಪುರಂದರಾರ್ಯಾಯ ವಿಜಯಾರ್ಯಾಯ ತೇ ನಮಃ –

-ಎಂಬ ಸ್ತುತಿಪದ್ಯದಲ್ಲಿ ಕ್ರೋಡೀಕರಿಸಿ ಹೇಳಿರಬಹುದು. ಅದರಂತೆ ಮೊತ್ತ ಮೊದಲಿಗೆ ತಮ್ಮ ಪೂಜಾ ಕಾಲದಲ್ಲಿ ಚಿಕ್ಕ ಚಿಕ್ಕ ಕನ್ನಡದ ಸ್ತುತಿಗೀತೆಗಳನ್ನು ಹಾಡಿ, ಮಠದ ಪರಿಸರದಲ್ಲಿ ಜನರ ಆಡು ಭಾಷೆಗೆ ಪ್ರಾಶಸ್ತ್ಯವಿತ್ತ ಕೀರ್ತಿ ಶ್ರೀಪಾದರಾಜರದು. ಇಂದು ಕನ್ನಡ ಹರಿದಾಸ ಸಾಹಿತ್ಯದಲ್ಲಿ ಕಾಣಸಿಗುವ ಉಗಾಭೋಗ, ಸುಳಾದಿ, ವೃತ್ತನಾಮ, ದಂಡಕ – ಈ ಎಲ್ಲ ಪ್ರಕಾರಗಳಲ್ಲೂ ಕೃತಿರಚಿಸುವ ಮೂಲಕ ಹರಿದಾಸ ಸಾಹಿತ್ಯಕ್ಕೆ ಒಂದು ನಿರ್ದಿಷ್ಟ ಸ್ವರೂಪವನ್ನು ಕೊಟ್ಟವರು ಶ್ರೀಪಾದರಾಜರು. ಆ ಪರಂಪರೆಯನ್ನು ಸಶಕ್ತವಾಗಿ ಮುಂದುವರಿಸಿದ ಅವರ ಶಿಷ್ಯ ವ್ಯಾಸರಾಯರು ತಮ್ಮ ಶಿಷ್ಯರಾದ ಪುರಂದರ-ಕನಕಾದಿ ಹರಿದಾಸರ ಮೂಲಕ ಕನ್ನಡ ಹರಿದಾಸ ಸಾಹಿತ್ಯವನ್ನು ಇನ್ನಷ್ಟು ಮತ್ತಷ್ಟು ಬೆಳೆಸಿದರು. ಕನಕ-ಪುರಂದರರಂತೂ ಹರಿಭಕ್ತಿಯನ್ನು, ಮಧ್ವಸಿದ್ಧಾಂತವನ್ನು ಸಂಗೀತದ ಮೂಲಕ ಜನಸಾಮಾನ್ಯರ ಮನೆಮನೆಯ ಬಾಗಿಲಿಗೆ ಕೊಂಡೊಯ್ದವರು; ಕನ್ನಡವನ್ನು ಭಕ್ತಿ ಭಾಷೆಯಾಗಿ, ತತ್ವಭಾಷೆಯಾಗಿ ಮೆರೆಸಿದವರು. ಪುರಂದರದಾಸರ ಅನಂತರ ಕಾಖಂಡಕಿಯ ಮಹಿಪತಿರಾಯರು ಮತ್ತು ಅವರ ಮಗ ಕೃಷ್ಣರಾಯರುಗಳಿಂದ ಜೀವಂತವಾಗಿದ್ದ ಕನ್ನಡ ಹರಿದಾಸ ಸಾಹಿತ್ಯವಾಹಿನಿ ವಿಜಯದಾಸರಿಂದ ಪುನರುಜ್ಜೀವನಗೊಂಡಿತೆನ್ನುವ ವಿಚಾರ ಸರ್ವವಿದಿತ. ಮುಂದೆ ಅವರ ಶಿಷ್ಯ ಪ್ರಶಿಷ್ಯರುಗಳಿಂದ ಪುಂಖಾನುಪುಂಖವಾಗಿ ರಚಿತವದ ಕೀರ್ತನೆ ಸುಳಾದಿ ಉಗಾಭೋಗಗಳಿಂದ ಕನ್ನಡ ಹರಿದಾಸ ಸಾಹಿತ್ಯ ಸಮೃದ್ಧವಾಗಿ ಬೆಳೆಯಿತು. ಗೋಪಾಲದಾಸರು, ಹೆಳವನಕಟ್ಟೆ ಗಿರಿಯಮ್ಮ, ಜಗನ್ನಾಥದಾಸರು, ಪ್ರಸನ್ನವೆಂಕಟದಾಸರು, ಹರಪನಹಳ್ಳಿ ಭೀಮವ್ವನೇ ಮೊದಲಾದ ನೂರಾರು ಹರಿದಾಸರು ರಚಿಸಿದ ಸಾವಿರಾರು ಕೃತಿಗಳಿಂದ ಸಂಪನ್ನವಾಯಿತು. ಮೋಹನವಿಠಲ, ಶ್ರೀದವಿಠಲ, ಶ್ರೀಶವಿಠಲ; ವರದೇಂದ್ರ ವಿಠಲ, ಏರಿವೆಂಕಟರು, ಇಂದಿರೇಶ ವಿಠಲರು, ಪ್ರಸನ್ನ ಶ್ರೀನಿವಾಸರೇ ಮೊದಲಾದ ಹರಿದಾಸರಿಂದ ಹರಿದಾಸ ಸಾಹಿತ್ಯ ಸ್ತೋತ್ರ ಇಂದಿಗೂ ಜೀವಂತವಾಗಿದ್ದು ಇಪ್ಪತ್ತನೇ ಶತಮಾನದಲ್ಲಿ ನಿರಂತರಾಗಿ ಕೃತಿರಚೆನೆ ನಡೆದು, ಈ ಇಪ್ಪತ್ತೊಂದನೇ ಶತಮಾನಕ್ಕೂ ಸಾಗಿಬಂದಿದೆ.

ಹೀಗೆ, ಹರಿದಾಸ ಸಾಹಿತ್ಯ ಪ್ರವರ್ತಕರೆಂದು ವಿದ್ವದ್ಮಾನ್ಯರಾಗಿರುವ ಶ್ರೀಪಾದರಾಜರು ಕ್ರಿ.ಶ.ಸು.೧೪೦೬ರಲ್ಲಿ, ಚನ್ನಪಟ್ಟಣದ ಬಳಿಯ ಅಬ್ಬೂರಿನಲ್ಲಿ ಹುಟ್ಟಿದವರು. ಲಕ್ಷ್ಮೀನಾರಾಯಣನೆಂಬ ಹುಟ್ಟು ಹೆಸರಿನ ಬಾಲಕ ಶ್ರೀರಂಗದಲ್ಲಿ ಪದ್ಮನಾಭತೀರ್ಥರ ಪೀಳಿಗೆಯ ಏಳನೆಯ ಮಠಾಧಿಪತಿಗಳಾದ ಸ್ವರ್ಣವರ್ಣತೀರ್ಥರಿಂದ ಸಂನ್ಯಾಸ ಸ್ವೀಕರಿಸಿ ಲಕ್ಷ್ಮೀ ನಾರಾಯಣ ತೀರ್ಥರಾದದ್ದು. ವಿಬುಧೇಂದ್ರ ತೀರ್ಥರ ಶಿಷ್ಯತ್ವವಹಿಸಿ ಉನ್ನತ ವಿದ್ಯಾಭ್ಯಾಸ ಪಡೆದು ವಿದ್ಯಾಪಾರಂಗತರಾಗಿ ಬಳಿಕ ರಘುನಾಥತೀರ್ಥರಿಂದ ವಿದ್ವತ್ಸಭೆಯಲ್ಲಿ ಮೆಚ್ಚುಗೆ ಗಳಿಸಿ ‘ಶ್ರೀಪಾದರಾಜ’ರೆನಿಸಿಕೊಂಡು ತೊಂಬತ್ತೆಂಟು ವರ್ಷಗಳ ತುಂಬುಬಾಳನ್ನು ಬಾಳಿದರು. ಸಂಸ್ಕೃತ-ಕನ್ನಡ ಭಾಷೆಗಳಲ್ಲಿ ಪರಿಣತರಾಗಿದ್ದ ಅವರು ತಮ್ಮ ಕೃತಿಗಳ ಮೂಲಕ ಮಧ್ವ ಮತತತ್ವಗಳನ್ನು ಬಿತ್ತರಿಸಿದ್ದಲ್ಲದೆ ಸಮಾಜದ ಉನ್ನತಿಗಾಗಿ ಶ್ರಮಿಸಿದರು. ತಮ್ಮ ಶಿಷ್ಯರಾದ ಶ್ರೀ ಹಯಗ್ರೀವ ತೀರ್ಥರಿಗೆ ಸಂಸ್ಥಾನವನ್ನು ಒಪ್ಪಿಸಿ ಕ್ರಿ.ಶ. ೧೫೦೪ನೇ ಇಸವಿ ಏಪ್ರಿಲ್‌ ೧೪ರಂದು, ಜೇಷ್ಠಶುದ್ಧ ಚತುರ್ದಶಿಯಂದು, ತಮ್ಮ ಇಹಲೋಕ ವ್ಯಾಪಾರವನ್ನು ಮುಗಿಸಿ ಬೃಂದಾವನಸ್ಥರಾದರು.

ಶ್ರೀಪಾದರಾಜರ ಬೃಂದಾವನವು ಕೋಲಾರ ಜಿಲ್ಲೆಯ ಮುಳುಬಾಗಿಲಿಗೆ ಒಂದೂವರೆ ಮೈಲಿ ದೂರದಲ್ಲಿರುವ ನೃಸಿಂಹತೀರ್ಥದ ಬಳಿಯಿದೆ. ಗುರುಗಳ ಬೃಂದಾವನದ ಸೇವೆಯಿಂದ ಅನನ್ಯ ಫಲ ಪ್ರಾಪ್ತಿಯೆಂಬುದು ಇಂದಿಗೂ ಭಕ್ತರ ನಂಬಿಕೆಯಾಗಿದೆ.

ಯದ್ವೃಂದಾವನಂ ಸೇವಯಾ ಭುವಿಜಃ ಪ್ರಾಪ್ನೋತಿ ಸೌಖ್ಯಂಮಹತ್
ಯದ್ವೃಂದಾವನ ಮೃತ್ತಿಕಾಪಿ ನಿಟಿಲೇ ಭಕ್ತ್ಯಾಧೃತಾ ಸೇವಿತಾ
-ಶ್ರೀಪಾದರಾಜಾಷ್ಟಕ

ಶ್ರೀನಿವಾಸರಾಯರು ತಮ್ಮ ಶ್ರೀಪಾದರಾಜ ಪಂಚರತ್ನ ಮಾಲಿಕೆಯಲ್ಲಿ ಯದ್ವೃಂದಾವನ ಸೇವಯಾ ಸುವಿಮಲಾಂ ವಿದ್ಯಾಂ ಪಶೂನ್‌ ಸಂತತಿಂ| ಜ್ಞಾನ ಧ್ಯಾನ ಮನಲ್ಪ ಕೀತಿ ನಿವಹಂ ಪ್ರಾಪ್ನೋತಿ ಸೌಖ್ಯಂ ಜನಃ’- ಎಂದು ಮುಂತಾಗಿ ಫಲಸ್ತುತಿ ಮಾಡಿದ್ದಾರೆ.

ಶ್ರೀಪಾದರಾಜರು ಸಂಸ್ಕೃತ-ಕನ್ನಡಗಳೆರಡಲ್ಲೂ ಪಾಂಡಿತ್ಯವಿದ್ದ ಸವ್ಯಸಾಚಿಗಳಾಗಿದ್ದರೂ ಕನ್ನಡದಲ್ಲಿ ಕೃತಿರಚನೆ ಮಾಡಿ ತತ್ವ ಪ್ರಸಾರ ಮಾಡಲು ಮನಸ್ಸು ಮಾಡಿದ್ದು ಆ ಕಾಲದ ಧಾರ್ಮಿಕ ಪರಿಸರದಲ್ಲಿ ಒಂದು ಕ್ರಾಂತಿಕಾರಕ ನಿಲುವೇ ಸರಿ. ಅವರ ಆ ನಿರ್ಧಾರಕ್ಕೆ ಪೂರಕವಾಗಿ ಒದಗಿಬಂದ ಪ್ರೇರಣೆಗಳನ್ನು ಹೀಗೆ ಊಹಿಸಬಹುದು.

೧. ತಾವು ನಂಬಿ ನೆಚ್ಚಿದ ಮತತತ್ವಗಳನ್ನು ಸಾಮಾನ್ಯ ಜನರಿಗೂ ತಿಳಿಸುವ ಅವರ ಅದಮ್ಯ ಬಯಕೆ.

೨. ಶ್ರೀಪಾದರಾಜರು ಶ್ರೀರಂಗದಲ್ಲಿದ್ದಾಗ ಪರಿಚಯವಾಗಿದ್ದ ಅಲ್ಲಿಯ ಆಳ್ವಾರರ ತಮಿಳಿನ ಕೃತಿಗಳು ಸಾಮಾನ್ಯ ಜನರನ್ನು ಮುಟ್ಟಿದ್ದ ತಟ್ಟಿದ್ದ ರೀತಿಯನ್ನು ಕಣ್ಣಾರ ಕಂಡು ಕೇಳಿದ್ದುದು.

೩. ಜೈನ ಬೌದ್ಧ ವೀರಶೈವ ಶ್ರೀವೈಷ್ಣವರುಗಳಿಂದ ರಚಿತವಾದ ಪ್ರಾಕೃತ, ಪಾಳಿ, ಕನ್ನಡ, ತಮಿಳು ಕೃತಿಗಳಿಂದ ಸಾಮಾನ್ಯ ಜನತೆಯ ಮೇಲುಂಟಾದ ಪರಿಣಾಮ ಶ್ರೀಪಾದರಾಜರಿಗೆ ತಿಳಿದಿದ್ದುದರಿಂದ ಧರ್ಮ ಹಾಗೂ ಜನತೆಯ ನಡುವೆ ಮಾತೃಭಾಷೆಯಲ್ಲಿ ಮಾತ್ರ ನೇರ ಸಂಪರ್ಕ ಮತ್ತು ಉದ್ದಿಶ್ಯ ಪರಿಣಾಮ ಸಾಧ್ಯವೆಂಬ ಅವರ ಅನುಭವಜನ್ಯ ತಿಳುವಳಿಕೆ.

೪. ಶ್ರೀವೈಷ್ಣವ ಮತದ ಅನುಯಾಯಿಗಳು ತಮ್ಮ ಮಾತೃಭಾಷೆಯಲ್ಲದ ಕನ್ನಡದಲ್ಲಿ ತತ್ವಪ್ರಚಾರ ಮಾಡದ ಕಾರಣ ಶಂಕರಾಚಾರ್ಯರ ಶೈವಧರ್ಮ, ಬಸವಣ್ಣನವರ ವೀರಶೈವ ಧರ್ಮಗಳೆದುರು ವೈಷ್ಣವಧರ್ಮ ತಲೆಯೆತ್ತಿ ನಿಲ್ಲಬೇಕಾದ ಅನಿವಾರ್ಯತೆ.

೫. ಶ್ರೀ ವೀರಶೈವ ಧರ್ಮದ ವಿಶಾಲ ಮನೋಭಾವದಿಂದಾಗಿ ತತ್ತರಿಸಿದ್ದ ವೈದಿಕರ ಸಾಂತ್ವನ.

೬. ಪರಧರ್ಮೀಯರ ಆಕ್ರಮಣದ ಭಯದಲ್ಲಿ ತತ್ತರಿಸುತ್ತಿದ್ದ ಜನತೆಗೆ ಶ್ರೀರಕ್ಷೆಯಾಗಿ ನಿಲ್ಲಬೇಕಾಗಿ ಬಂದ ತುರ್ತುಪರಿಸ್ಥಿತಿ.

೭. ತತ್ವಗಳನ್ನು ತಿಳಿಯುವ ಜನಸಾಮಾನ್ಯರ ಬಯಕೆಯನ್ನು ಸಂಸ್ಕೃತ ವಿದ್ವಾಂಸರು ಪೂರೈಸಲಾರದ ಪರಿಸ್ಥಿತಿ.

೮. ಆಳರಸರ ಪರಸ್ಪರ ಕಾದಾಟದಿಂದ ಪ್ರಕ್ಷುಬ್ಧಗೊಂಡಿದ್ದ ಜನತೆಯ ಮನಶ್ಶಾಂತಿಯನ್ನು ಹರಿಭಕ್ತಿಯ ಮೂಲಕ ಮರಳಿ ತಂದುಕೊಡುವ ಉದ್ದೇಶ.

೯. ಭಕ್ತಿಪೂರ್ಣ ಭಾವಗೀತೆಯೂ ದ್ವೈತಪರಹರಿಸುತ್ತಿಯೂ ಆಗಿದ್ದ ಮಧ್ವಾಚಾರ್ಯರ ದ್ವಾದಶಸ್ತೋತ್ರದ ಸ್ವರೂಪ, ಪರಿಣಾಮ, ಪ್ರಭಾವಗಳು.

೧೦. ಕನ್ನಡ ಭಾಷೆಯಲ್ಲಿ ರಚಿತವಾಗಿದ್ದ ಮಧ್ಯಕಾಲೀನ ಯುಗದ ಧಾರ್ಮಿಕ ಸಾಹಿತ್ಯ.

೧೧. ಇಸ್ಲಾಂ ಧರ್ಮದ ಎದುರಿನಲ್ಲಿ ವೈಭವ ಪ್ರದರ್ಶನವಿಲ್ಲದ ಭಕ್ತಿ ಪಂಥಕ್ಕೆ ಮಾತ್ರ ಉಳಿಗಾಲವಿದ್ದದ್ದು.

೧೨. ವಿಠಲೋಪಾಸಕರಾಗಿದ್ದ ಮಹಾರಾಷ್ಟ್ರದ ವಾರಕರಿ ಪಂಥದ ಪ್ರಭಾವ.

೧೩. ಇವೆಲ್ಲಕ್ಕೂ ಒಪ್ಪವಿಟ್ಟಂತೆ ಶ್ರೀರಂಗದ ರಂಗನಾಥಸ್ವಾಮಿಯ ದೇವಾಲಯದಲ್ಲಿ ಉತ್ಸವಮೂರ್ತಿಯ ಮೆರವಣಿಗೆಯಲ್ಲಿ ತಮಿಳು ಪ್ರಬಂಧಗಳನ್ನು ಹಾಡುತ್ತಾ ನರ್ತಿಸುತ್ತಾ ಸೇವೆಸಲ್ಲಿಸುತ್ತಿದ್ದ ‘ಇಶೈ’ ಕಾರ್ಯಕ್ರಮ* ಶ್ರೀ ಪಾದರಾಜರ ಮನಸ್ಸನ್ನು ಸೆರೆ ಹಿಡಿದಿದ್ದುದು.

-ಈ ಎಲ್ಲ ಪ್ರೇರಣೆ – ಪ್ರಭಾವಗಳ ಹಿನ್ನೆಲೆಯಲ್ಲಿ ಮಧ್ವಾಚಾರ್ಯರ ಮಾಧ್ವತತ್ವಗಳ ಪ್ರಸಾರದ ಉದ್ದೇಶದಿಂದ ಶ್ರೀಪಾದರಾಜರು ೧೫ನೇ ಶತಮಾನದಲ್ಲಿ ಕೀರ್ತನೆ ಸುಳಾದಿ ಉಗಾಭೋಗ ವೃತ್ತನಾಮ, ದಂಡಕ – ಇತ್ಯಾದಿ ಸಾಹಿತ್ಯ ಪ್ರಕಾರಗಳನ್ನು ಮೊತ್ತಮೊದಲಿಗೆ ಕನ್ನಡಭಾಷೆಯಲ್ಲಿ ತಂದ ಕೀರ್ತಿಗೆ ಭಾಜನರಾದರು. ಮತ್ತು ಹರಿದಾಸ ಸಾಹಿತ್ಯ ಪರಂಪರೆಗೇ ಮೊದಲಿಗರೆನ್ನಿಸಿಕೊಂರು. ದ್ವೈತಸಿದ್ಧಾಂತ, ಸಾಹಿತ್ಯ, ಸಂಗೀತ ಹಾಗೂ ಜೀವನ ಮೌಲ್ಯಗಳನ್ನು ಕನ್ನಡ ಭಾಷೆಯಲ್ಲಿ ಬಿತ್ತರಿಸಿದ ಕೀರ್ತಿ ಶ್ರೀಪಾದರಾಜರದು. ಆ ಹಿಂದೆಯೇ ಇದ್ದುವೆನ್ನಲಾದ ಶಿವದಾಸರ ಕೀರ್ತನೆಗಳು, ಕನ್ನಡ ಜನತೆಯ ಪುರಾಣ ಪ್ರಜ್ಞೆ, ಜನಸಾಮಾನ್ಯರಲ್ಲಿ ನೆಲೆಗೊಂಡಿದ್ದ ಭಕ್ತಿ ಭಾವನೆ, ಧರ್ಮಜಾಗೃತಿಗಳು ಶ್ರೀಪಾದರಾಜರಿಗೆ ದೊರೆತ ಸಹಾಯಕ ಅಂಶಗಳೆಂದು ಗುರುತಿಸಬಹುದು. ಶ್ರೀಪಾದರಾಜರ ಲಕ್ಷ್ಮೀನೃಸಿಂಹ ಪ್ರಾದುರ್ಭಾವ ದಂಡಕವನ್ನು ತಮಿಳಿನ ‘ಇಯಲ್‌’ ಪ್ರಕಾರಕ್ಕೂ ಅದರ ಇನ್ನುಳಿದ ಗೇಯ ರಚನೆಗಳನ್ನು ತಮಿಳಿನ ಗೇಯ ರೂಪವಾದ ‘ಇಶೈ’ ಪ್ರಕಾರಕ್ಕೂ ಹೋಲಿಸುವ ಮೂಲಕ ಪ್ರೊ.ಎಸ್‌.ಕೆ. ರಾಮಚಂದ್ರರಾಯರು ಶ್ರೀಪಾದ ರಾಜರಿಗೆ ತಮಿಳು ಭಕ್ತಿ ಸಾಹಿತ್ಯದ ಪ್ರೇರಣೆ ಪ್ರಭಾವಗಳು ಎಷ್ಟರಮಟ್ಟಿಗಿದ್ದುವೆಂಬುದನ್ನು ಸ್ಪಷ್ಟವಾಗಿ ಗುರುತಿಸಿಕೊಟ್ಟಿದ್ದಾರೆ.[11]

ಸಂಸ್ಕೃತ ಭಾಷೆಯಲ್ಲಿ ಖಂಡನ – ಮಂಡನ ಗ್ರಂಥಗಳ ಮೂಲಕ ಮಾಧ್ವಮತ ತತ್ವ ಬೋಧನೆ ಮಾಡುತ್ತಿದ್ದ ವಿದ್ವಾಂಸರನ್ನು ‘ವ್ಯಾಸಕೂಟ’ದವರೆಂದೂ ಅವೇ ಮತತತ್ವಗಳನ್ನು ಕನ್ನಡ ಭಾಷೆಯ ಕೀರ್ತನೆ ಸುಳಾದಿ ಉಗಾಭೋಗಾದಿ ಕೃತಿಗಳ ಮೂಲಕ ಪ್ರಸಾರ ಮಾಡುತ್ತಿದ್ದ ಪುರಂದರಾದಿ ಹರಿದಾಸರನ್ನು ‘ದಾಸಕೂಟ’ದವರೆಂದೂ ಕರೆಯುವುದು ರೂಢಿ. ವ್ಯಾಸಕೂಟದವರ ದೃಷ್ಟಿ ತತ್ವ, ಪಾಂಡಿತ್ಯ, ವಾಕ್ಯಾರ್ಥ ಖಂಡನೆ-ಮಂಡನೆಗಳತ್ತ ಕೇಂದ್ರೀಕೃತವಾಗಿದ್ದರೆ ದಾಸ ಕೂಟದವರ ಗಮನ ಆತ್ಮಾವಲೋಕನ, ಆತ್ಮೋದ್ಧಾರ, ಲೋಕನೀತಿ, ಲೋಕೋದ್ಧಾರಗಳತ್ತ. ಈ ಎರಡೂ ದೃಷ್ಟಿಗಳನ್ನು ಇರಿಸಿಕೊಂಡಿರುವ ಶ್ರೀಪಾದರಾಜರು, ವ್ಯಾಸರಾಯರು, ವಾದಿರಾಜರು – ಈ ಯತಿತ್ರಯರು ವ್ಯಾಸ-ದಾಸಕೂಟಗಳಿಗೆ ಸೇತುವೆಯಾಗಿ ಪರಿಣಮಿಸಿದ್ದಾರೆ.

 

[1]ಕರ್ಣಾಟಕ ಭಕ್ತ ವಿಜಯ, ಪು.೯, ಭಾಗ.೧, ೧೯೩೩.

[2]ಹರಿದಾಸ ಸಾಹಿತ್ಯ, ಪು.೭೭-೭೯ಮ ೧೯೪೪

[3]ನೋಡಿ, ಶ್ರೀಪಾದರಾಜರ ಕೃತಿಗಳು, ಪೀಠಿಕೆ, ಪುಟ-V

[4]ಶ್ರೀಪಾದರಾಜರ ಕೃತಿಗಳು, ಪೀಠಿಕೆ ಪುಟ-VII.

[5]ಎಫಿಗ್ರಾಫಿಯಾ ಕರ್ನಾಟಿಕಾ, Vol.VI, ಪು.೧೮೨, ೯೯ (ಶ್ರೀರಂಗಪಟ್ಟಣ ೬೪) ಕನ್ನಡ ಅಧ್ಯನ ಸಂಸ್ಥೆ, ಮೈಸೂರು.

[6]ಎಫಿಗ್ರಾಫಿಯಾ ಕರ್ನಾಟಿಕಾ, Vol.VIII, ಪು.೪೫೬-೫೮

[7]ಶ್ರೀಪಾದರಾಜರ ಕೃತಿಗಳು, ಪೀಠಿಕೆ, XIV

[8]ಕರ್ನಾಟಕ ಹರಿದಾಸರ ಉಗಮ ಮತ್ತು ಶ್ರೀ ಪುರಂದರದಾಸರ ಸುಳಾದಿಗಳು, ಪು.೯೭-೧೦೩, ೧೯೫೭.

[9]ಶ್ರೀಜಗನ್ನಾಥ ದಾಸರು ತತೆಶಿಷ್ಯ ಪ್ರಶಿಷ್ಯರ ಸುಳಾದಿಗಳು, ಉಗಾಭೋಗಗಳು, ಪು.೫, ಶ್ರೀ ಗೋರಬಾಳ ಹನುಮಂತರಾಯರು, ೧೯೫೮.

[10]ಹರಿದಾಸ ಪರಂಪರೆ, ಕರ್ನಾಟಕ ಸಂಸ್ಕೃತಿಯ ಸಂಶೋಧನೆ, ಪು.೨೭೧-೨೯೧, ೧೯೭೦.

*ಪುರಂದರ ಸಾಹಿತ್ಯ ದರ್ಶನ, ಸಂಪುಟ-೪, ಪು.೫, ಸಂ. ಪ್ರೊ.ಎಸ್‌.ಕೆ. ರಾಮಚಂದ್ರರಾವ್‌.)

[11]ಅದೇ