ಕೃಷ್ಣನ ಮೇಲಣ ಪ್ರೀತಿ ಅತಿಶಯವಾಗಿದ್ದರೂ ಗೋಪಿಯರಿಗೆ ಅವನ ಚೇಷ್ಟೆ ತುಂಟಾಟಗಳನ್ನು ತಡೆಯುವುದು ಕಷ್ಟವಾಗುತ್ತಿತ್ತು. ಎಲ್ಲರೂ ಒಟ್ಟಾಗಿ ಯಶೋದೆಯಲ್ಲಿಗೆ ಹೋಗಿ ‘ಬಾಲಕನೆಂದು ಲಾಲಿಸಿ ಕರೆದರೆ ಮನೆಯೊಳಗೆ ಪೊಕ್ಕು ಪಾಲು ಬೆಣ್ಣೆ ಮೊಸರೆಲ್ಲವ ಮೆದ್ದುದಲ್ಲದೆ ಕೋಲು ತೆಗೆದುಕೊಂಡು ನೀರಿನ ಗಡಿಗೆಗಳನ್ನೆಲ್ಲ ಒಡೆದ; ಸೀರೆಗಳನ್ನೆಲ್ಲ ಎತ್ತಿಕೊಂಡು ಮರವನ್ನೇರಿ ಬೆತ್ತಲೆ ಬಂದು ಕರವೆತ್ತಿ ಮುಗಿದರೆ ಕೊಡುವೆನೆಂದ; ಮೋಸಮಾಡಿ ನಮ್ಮನ್ನು ಅಣಕಿಸಿ ಓಡಿಹೋದ’- ಎಂದು ಮುಂತಾಗಿ ದೂರಿ, ಅವನಿಗೆ ಬುದ್ಧಿಹೇಳುವಂತೆ ಬೇಡುವರು. ಎಲ್ಲವನ್ನೂ ಕೇಳಿದ ತಾಯಿ ಯಶೋದೆ:

ಏಕೆ ದೂರುವಿರೆ ರಂಗಯ್ಯನ ||ಪ||

ಸಾಕು ನಿಮ್ಮ ದೂರ ಬಲ್ಲೆನು
ಈ ಕುವರನಾ ಕೃತ್ಯಮಾಳ್ಪನೆ ||ಅ.ಪ||

ದಟ್ಟಡಿಯಿಡಲರಿಯ ಗೋವತ್ಸವ
ಬಿಟ್ಟು ಚಲಿಸಬಲ್ಲನೆ
ಗಟ್ಟಿಯಾಗಿ ಗೊತ್ತಿನಲ್ಲಿ ಕಟ್ಟಿನೊಳು
ಕಟ್ಟಿದ್ದ ಕರುಗಳ
ಬಿಟ್ಟನೇ ಈ ಕೃಷ್ಣ ಮೇಲೆಷ್ಟು
ಹೊಟ್ಟೆಕಿಚ್ಚೆ ನಿಮಗೆ ||೧||

ಕೆನೆಹಾಲು ಬೆಣ್ಣೆಯನು ಇತ್ತರೆ ಆ
ದಿನವೊಲ್ಲನು ಊಟವ
ಮನೆ ಮನೆ ಮನೆಗಳನು ಪೊಕ್ಕು
ಬೆಣ್ಣೆ ಪಾಲ್ಮೊಸರನ್ನು ತಿನ್ನುತ
ವನಿತೆಯರ ಕೂಡಾಡಿದ ನೆಂ
ದೆನಲು ನಿಮಗೆ ನಾಚಿಕಿಲ್ಲವೆ ||೨||

ಪಾಲು ಮೊಸರು ಬೆಣ್ಣೆಯು ಇಲ್ಲವೆ ನ
ಮ್ಮಾಲಯದೊಳು ನೋಡಿರೆ
ಹೇಳುವರೆ ಈ ಠೌಲಿಗಳ ಗೋಪಾಲ
ಬಾಲನ ನೋಡಿ ಸೈಸದೆ
ಬಾಳುವಿರ ಭವಜಲಧಿಯಿಂದಲಿ
ತೇಲಿಸುವನೆ ರಂಗವಿಠಲ ||೩||

-ಎಂದು ಬೈದು ಯಶೋದೆ ಗೋಪಿಯರ ಬಾಯಿ ಮುಚ್ಚಿಸುವಳು. ಇಲ್ಲಿ ತಾಯಿ ಎಷ್ಟು ಸಹಜವಾಗಿ ತನ್ನ ಮಗುವನ್ನು ಒಪ್ಪಿಟ್ಟುಕೊಂಡಿದ್ದಾಳೆ! ಶ್ರೀಪಾದರಾಜರ ವಾತ್ಸಲ್ಯಭಕ್ತಿಯ ಪರಾಕಾಷ್ಠೆಯನ್ನಿಲ್ಲಿ ಅನುಭವಿಸಬಹುದು. ತನ್ನ ಮೇಲೆ ಇಷ್ಟೆಲ್ಲ ದೂರು ಕೇಳಿದ ಕೃಷ್ಣ. ತನ್ನನ್ನು ತಾನು ಸಮರ್ಥಿಸಿಕೊಳ್ಳುವನು:

ಗೊಲ್ಲತಿಯರೆಲ್ಲ ಕೂಡಿ ಎನ್ನಮೇಲೆ
ಇಲ್ಲದ ಸುದ್ದಿ ಪುಟ್ಟಿಸಿ
ಕಳ್ಳನೆಂದು ದೂರುತಾರೆ ಗೋಪಿ ಎನ್ನ
ಕೊಲ್ಲಬೇಕೆಂಬ ಬಗೆಯ ||ಪ||

ಹರವಿಯ ಹಾಲುಕುಡಿಯಲು ಎನ್ನ ಹೊಟ್ಟೆ
ಕೆರೆಯೇನೆ ಹೇಳಮ್ಮಯ್ಯ
ಕರೆದು ಅಣ್ಣನ ಕೇಳಮ್ಮ ಉಂಟಾದರೆ
ಒರಳಿಗೆ ಕಟ್ಟಮ್ಮಯ್ಯ ||೧||

ಮೀಸಲು ಬೆಣ್ಣೆಯನು ಮೆಲುವುದು ಎನಗೆ
ದೋಷವಲ್ಲವೇನಮ್ಮಯ್ಯ
ಆಸೆ ಮಾಡಿದರೆ ದೇವರು ಕಣ್ಣ
ಮೋಸದಿ ಕುಕ್ಕೋನಮ್ಮಯ್ಯ ||೨||

-ಎಂದು ಮುಂತಾಗಿ ಮುದ್ದು ಮುದ್ದಾಗಿ ಕೈಬಾಯಿ ತಿರುಗಿಸಿಕೊಂಡು ಹೇಳಿದಾಗ ಮುದ್ದು ಉಕ್ಕಿದ ಯಶೋದೆ ‘ತನ್ನ ಶೃಂಗಾರದ ಮಗನನ್ನೆತ್ತಿ ರಂಗವಿಠಲನ ಪಾಡಿ ಉಡುಪಿನ ಉತ್ತುಂಗ ಕೃಷ್ಣನ ತೂಗಿದಳು’- ಎಷ್ಟು ವಾಸ್ತವವಾದ ಮುಕ್ತಾಯ! ಅಷ್ಟೇ ಅಲ್ಲ;

ಏಕೆ ದೂರುವಿರೇ ರಂಗಯ್ಯನ
ಏಕೆ ದೂರುವಿರೇ ||ಪ||
…………….

ದಟ್ಟಡಿಯಿಡಲರಿಯ ಗೋವತ್ಸವ
ಬಿಟ್ಟು ಚಲಿಸಬಲ್ಲನೆ
ಘಟ್ಟಿಯಾಗಿ ಗೊತ್ತಿನಲ್ಲಿ
ಕಟ್ಟಿನೊಳು ಕಟ್ಟಿದ್ದ ಕರುಗಳ
ಬಿಟ್ಟನೇ ಈ ಕೃಷ್ಣನ ಮೇ
ಲೆಷ್ಟು ಹೊಟ್ಟೆಕಿಚ್ಚೆ ನಿಮಗೆ ||೧||

-ಎಂದು ಚಾಡಿ ಹೇಳಲು ಬಂದ ಗೋಪಿಯರನ್ನೇ ಬೈದು ಸುಳ್ಳು ಹೇಳಲು ನಿಮಗೆ ನಾಚಿಕೆಯಿಲ್ಲವೆ ಎಂದು ಜಬರಿಸಿ ಕಳುಹಿಸುವಳು.

ಇಂತಹ ಮಗು ಕೃಷ್ಣನನ್ನು ‘ಭೂಮಿಯ ಚಿನ್ನದ ತೊಟ್ಟಿಲ ಮಾಡಿ, ನಾಲ್ಕು ವೇದಗಳನ್ನೇ ಸರಪಳಿಗಳನ್ನಾಗಿ ಮಾಡಿ, ಆ ಮಹಾ ಆಕಾಶಕ್ಕೆ ಕೊಂಡಿಗಳನ್ನು ಹಾಕಿ, ಅವನ ದಶಾವತರ ಲೀಲೆಗಳನ್ನು ಬಣ್ಣಿಸುತ್ತ ‘ಗೋಪಿಯರು ಅವನಿಗೆ ‘ಜೋ ಜೋ ಜೋ ಜೋ ಜೋ ರಂಗಧಾಮ’ – ಎಂದು ಲಾಲಿ ಹಾಡಿ ತೂಗಿ ಮಲಗಿಸಿದ್ದಾರೆ.

ಭಕ್ತ-ಭಗವಂತರ ನಡುವೆ ಸತಿ-ಪತಿಯರ ಸಂಬಂಧವನ್ನು ಕಲ್ಪಿಸಿ ಆರಾಧಿಸುವುದು ‘ಮಧುರಭಕ್ತಿ’ ಅಥವಾ ‘ಮಧುರಭಾವ’. ಶ್ರೀಪಾದರಾಜರ ವೇಣುಗೀತೆ ಗೋಪೀ ಗೀತೆ ಹಾಗೂ ಭ್ರಮರಗೀತೆಗಳಲ್ಲಿ ಕೃಷ್ಣಗೋಪಿಯರ ದೈವಿಕ ಪ್ರೇಮ, ಮಧುರ ಬಾಂಧವ್ಯಗಳು ಓದುಗರ ಅನುಭವಕ್ಕೆ ಬರುತ್ತವೆ. ಕೃಷ್ಣನ ಮೋಹಕ ಮುರಳೀಗಾನದ ಚಿತ್ರಣವೇ ಸಾಕು. ಎಂಥವರಿಗೂ ಮತ್ತೇರಿಸುತ್ತದೆ. ಪ್ರಕೃತಿಯ ಪ್ರಶಾಂತ ಪರಿಸರದಲ್ಲಿ ಅಲೆಅಲೆಯಾಗಿ ತೇಲಿಬರುವ ವೇಣುಗಾನಕ್ಕೆ ಮನಸೋಲದವರಾರು? ರಂಗ ಕೊಳಲನ್ನೂದುತ್ತ ಬಂದರೆ ‘ಹಂಗ ವಿಹಂಗ ಭುಜಂಗ ನವಿಲು ಸಾರಂಗ ಗಿಣಿಯು ಮಾತಂಗಮರಿಯು ಕುರಂಗ’ವೇ ಮೊದಲಾದ ಪಶುಪಕ್ಷಿಗಳು ಬಂದು ಅವನ ಪಾದಗಳಿಗೆರಗುವುವು. ಗೋಪಿಯರು ಪ್ರೀತಿಯಿಂದ:

ಬಂಗಾರ ಬಟ್ಟಲೊಳಗೆ ಅಂದು ಕ್ಷೀರವ ತಂದು
ರಂಗಗರ್ಪಿಸುವೆವು ನಾವೆಂದು ಹರುಷದೊಳಂದು
ಅಂಗನೆಯರು ಮೈಮರೆತು ನಿಂದು ಒಲಿಯಬೇಕೆಂದು
ಮಂಗಳ ಮಹಿಮನು ನೀನೆಂದು ಅತಿಭಕುತಿಯೊಳಂದು
ತುಂಗವಿಕ್ರಮನ ಪದಂಗಳಿಗೆರಗಲು

-ಅವರ ಅಭಿಮಾನಕ್ಕೆ ಮನಸೋತ ಶ್ರೀಕೃಷ್ಣ ತಲೆತಗ್ಗಿಸಿ ನಿಂತಿದ್ದ. ‘ಮಂದರೋದ್ಧರನಲ್ಲೆ ಮನವಿಟ್ಟ’ ಅವರನ್ನು ಕೈಹಿಡಿದು ಮೇಲೆತ್ತಿದನು. ಕೃಷ್ಣನ ಆ ಸ್ಪರ್ಶ ಪ್ರೀತಿಗಳಿಂದ ಗೋಪಿಯರ ಮನಸ್ಸು ಬೆಳದಿಂಗಳಿನಲ್ಲಿ ಮಿಂದಂತೆ ಹಿತವನ್ನನುಭವಿಸಿತು. ಕೃಷ್ಣ-ಗೋಪಿಯರ ಈ ಮಧುರ ಮಿಲನವನ್ನು ಕಂಡ ದೇವಾನುದೇವತೆಗಳು ಪುಷ್ಪವೃಷ್ಟಿಯನ್ನು ಕರೆದರಂತೆ.

ಮುರಳಿಯ ಗಾನ ಕಿವಿಗೆ ಬಿದ್ದದ್ದೇ ತಡ ಮನೆಗೆಲಸಗಳಲ್ಲಿ ತೊಡಗಿದ್ದ ಗೋಪಿಯರು ಚುರುಕಾದರು. ಕೃಷ್ಣನಲ್ಲಿಗೆ ಧಾವಿಸುವ ಆತುರ ಕಾತರಗಳು ಹೆಚ್ಚಿ ತಬ್ಬಿಬ್ಬುಗೊಂಡರು:

ತಂದೆಯ ಕಂದನೆಂದು ಕೊಂಕುಳೊಳಿಟ್ಟು
ಕಂದನ ಕೆಳಗಿಟ್ಟು
ಅಂದಿಗೆ ಗೆಜ್ಜೆ ಕಿವಿಗಳಿಗಿಟ್ಟು
ಮುತ್ತಿನ ಬಟ್ಟು
ಹೊಂದಿಸಿ ಗಲ್ಲದಲಿ ತಾನಿಟ್ಟು
ಕಸ್ತೂರಿಯಬಟ್ಟು
ಮುಂದಾಗಿ ಮೂಗಿನ ಮೇಲಳವಟ್ಟು
ಮನೆಬಾಗಿಲ ಬಿಟ್ಟು
ಕಂದರ್ಪನ ಶರದಿಂದ ನೊಂದು ಬಹು
ಕಂದಿ ಕುಂದುತಲಿಂದುವದನೆಯರು
ಇಂದಿರೇಶನಾನಂದದ ಗಾನಕೆ
ಚಂದ್ರಮುಖಿಯರೊಂದಾಗುತ ಬರುತಿರೆ ||೧||

– ಗೋಪಿಯರ ಧಾವಂತದ ಜೀವಂತ ಚಿತ್ರಣವಿದು. ಹಾಗೆ ಬಿಟ್ಟದ್ದು ಬಿಟ್ಟಹಾಗೆ ಬಿಸಿಲು ಮಳೆ ಚಳಿಯೆನ್ನದೆ ಧಾವಿಸಿ ತನ್ನಲ್ಲಿಗೆ ಬಂದ ಗೋಪಿಯರಿಗೆ ಕೃಷ್ಣ ‘ಬಾಯಾರಿದಿರಿ ಬದಿಯಲ್ಲಿ ಬಂದು ಕುಳ್ಳಿರಿ ಅಧರಾಮೃತ ಪಾನ ಮಾಡಿರಿ’ – ಎಂದು ಮುಂತಾಗಿ ಪ್ರೀತಿಯಿಂದ ಉಪಚರಿಸಿದ. ಈ ದಿವ್ಯ ಸಮಾಗಮವನ್ನು ಕಂಡ ರಂಭೆ ಊರ್ವಶಿ ಮೇನಕೆಯರು ನಾಟ್ಯವಾಡಿ ನಲಿದರಂತೆ. ಭಗವಂತನ ಈ ಲೀಲೆಯೆಲ್ಲ ಭಕ್ತರನ್ನು ಕಾಯುವುದಕ್ಕೆ, ‘ಭಕ್ತರ ಕಾಯ್ವುದಕೀ ವಿಧದೊಳಗಾಡಿದ ರಂಗವಿಠಲ’ – ಎನ್ನುವ ಕೃತಿಯ ಕೊನೆಯ ಮಾತುಗಳಿಂದ ಇಡೀ ಕೀರ್ತನೆಗೇ ಒಂದು ಹೊಸ ಆಯಾಮ ದಕ್ಕಿದೆ.

ಕೃಷ್ಣ-ಗೋಪಿಯರ ಮಧುರ ಪ್ರೇಮ ವಿರಹದ ನೆಲೆಯಲ್ಲಿ ಮತ್ತಷ್ಟು ಕಳೆಗಟ್ಟಿದೆ. ಶ್ರೀಕೃಷ್ಣ-ಬಲರಾಮರು ಅಕ್ರೂರನೊಡನೆ ಬಿಲ್ಲಹಬ್ಬಕ್ಕೆಂದು ಮಧುರೆಗೆ ಹೊರಡುವ ವಿಚಾರ ಹಿಂದಿನ ದಿನವೇ ಕಿವಿಯಿಂದ ಕಿವಿಗೆ ಮುಟ್ಟಿ, ಗೋಪಿಯರೆಲ್ಲರಿಗೂ ತಿಳಿದುಬಿಡುತ್ತದೆ.

ಕೇಳಿದ್ಯಾ ಕೌತುಕವನ್ನು ಕೇಳಿದ್ಯಾ
ನಾ ಕೇಳಿದೆ ನಿನಗಿಂತ ಮುನ್ನ ಆಹಾ
ಚಾಳಿಕಾರ ಕೃಷ್ಣ ಪೇಳದೆ ಮಧುರೆಗೆ
ಕೋಳಿ ಕೂಗದ ಮುನ್ನ ನಾಳೆ ಪಯಣವಂತೆ

– ಗೋಕುಲದ ತುಂಬ ಈ ಅಂತೆ ಕಂತೆಗಳ ಗುಸುಗುಸು ಪಿಸಪಿಸ. ಗೋಪಿಯರಿಗೆಲ್ಲ ಆತಂಕ, ಕಳವಳ:

ಮಾನನಿಧಿ ಶ್ರೀಕೃಷ್ಣ ಮಧುರೆಗೈದುವನಂತೆ
ಏನು ಪಥವಮ್ಮ ನಮಗೆ ||ಪ||

ಮಾನವೇನಿನ್ನಿದಕೆ ಮಾನಿನಿಯರೆಲ್ಲರು
ಆಣೆಯನು ಕಟ್ಟವನಿಗಡ್ಡ ನಿಲ್ಲುವ ಬನ್ನಿ ||ಅ.ಪ||

……………………..
ವನಜಾಕ್ಷ ಎಲ್ಲಿ ಗೈದಿದರೆ ನಾವಲ್ಲಿಗೈದುವ ಬನ್ನಿ

– ಎಂದು ಎಲ್ಲ ಗೋಪಿಯರೂ ಸೇರಿ ಮರುದಿನದ ಅವನ ಪಯಣವನ್ನು ನಿಲ್ಲಿಸುವ ಉಪಾಯ ಮಾಡುವರು. ಸರಿರಾತ್ರಿಯಲ್ಲಿ ಎಲ್ಲರೂ ಒಟ್ಟಾಗಿ ಕೃಷ್ಣನ ಬಳಿಗೆ ಹೋಗಿ ಪರಿಪರಿಯಾಗಿ ತಮ್ಮ ವಿರಹವನ್ನು ತೋಡಿಕೊಳ್ಳುವರು. ‘ನೀನಿಲ್ಲದ ಗಳಿಗೆಯೊಂದು ಯುಗವಾಗಿ ತೋರುತಿಹುದೋ… ಬ್ಯಾಡ ಮಧುರೆಗೆ ಪೋಗಬ್ಯಾಡೆಲವೊ ಶ್ರೀಕೃಷ್ಣ| ಬೇಡಿ ಕೊಂಬೆವೊ ದೈನ್ಯದಿ’ – ಎಂದು ವಿರಹಾಕುಲೆಯರಾಗಿ ಪ್ರಲಾಪಿಸುವರು. ಎಲ್ಲವನ್ನೂ ಕೇಳಿದ ಕೃಷ್ಣ ‘ಕಿಂಚಿತ್ಕಾಲದೊಳಾನೈದುವೆ ಪಾಲಿಸಿರೆನಗಪ್ಪಣೆಯ… ನಾಳೆ ಉದಯಕೆ ಪೋಗಿ ನಾಲ್ಕೆಂಟು ದಿನದೊಳು ವ್ಯಾಳೆಗಿಲ್ಲಿಗೆ ಬರುವೆ’ – ಎಂದು ಮಾತುಕೊಟ್ಟು ಸಂತೈಸುವನು. ‘ಪಟ್ಟಣದ ನಾರಿಯರು ಬಲು ದಿಟ್ಟೆಯರು; ಕಾಮಶಾಸ್ತ್ರ ನಿಪುಣೆಯರು; ನಿನ್ನ ಮನಸ್ಸನ್ನು ನಿಮಿಷಾರ್ಧದಲ್ಲಿ ಸೆಳೆದುಬಿಡುವರು. ಹಳ್ಳಿಯವರಾದ ನಮ್ಮ ನೆನಪು ಅಲ್ಲಿ ನಿನಗೆಲ್ಲಿ ಬರುತ್ತದೆ … ಬಿಲ್ಲಹಬ್ಬವೇ ಸುಳ್ಳು… ಆ ಹೆಂಗಳೆಯರ ಸಲುವಾಗಿಯೇ ಈ ಕ್ರೂರ ಅಕ್ರೂರನನ್ನು ಕಳುಹಿಸಿ ನಿನ್ನನ್ನು ಕರೆಸಿಕೊಳ್ಳುತ್ತಿದ್ದಾರೆ. ನೀನೋ ಅವರನ್ನು ಸೇರಿ ನಮ್ಮನ್ನು ಮರೆತು ಬಿಡುತ್ತೀಯೆ’ – ಎಂದು ದುಃಖತಪ್ತರಾಗಿ ವಾದಿಸುವರು. ಅದೆಲ್ಲ ಸುಳ್ಳೆಂದೂ ಮಲ್ಲಯುದ್ಧವನ್ನು ನೋಡುವ ಸಲುವಾಗಿ ಮಾವ ಕಂಸ ತನ್ನನ್ನು ಮಧುರೆಗೆ ಕರೆಸುತ್ತಿರುವನೆಂದು ಸರಸಿಜಭವ ಮಾರರಾಣೆಗೂ ತಾನು ಬೇಗ ಹಿಂತಿರುಗುವುದಾಗಿಯೂ ತನ್ನ ಮಕ್ಕಳಾದ ಬ್ರಹ್ಮ-ಮನ್ಮಥರ ಮೇಲೆ ಆಣೆಯಿಟ್ಟು ಹೇಳುವನು, ಕೃಷ್ಣ. ಆ ಮಾತುಗಳನ್ನು ಕೇಳುತ್ತಲೇ ಆ ಜಾಣೆಯರು-

ಮಾರನೆಂಬುವನಂದೆ ಮಡಿದನು ಶಿವನ
ಮೂರನೆ ಕಣ್ಣಲಿ
ನಾರೇರಿಲ್ಲದೆ ನಾಭಿಯಿಂದ ಪಡೆದ
ಆ ಬ್ರಹ್ಮನೆಂಬಾತನ

– ಇಂಥವರ ಮೇಲೆ ಆಣೆಯಿಟ್ಟರೂ ಒಂದೇ ಇಡದಿದ್ದರೂ ಒಂದೇ ಎಂದು ವ್ಯಂಗ್ಯವಾಡುವರು. ಕೊನೆಗೆ ‘ಹಲವು ಮಾತುಗಳ್ಯಾಕೆ … ಒಲುಮೆಯಲ್ಲಿರುತಿಪ್ಪ ಲಲನೆಯರನ್ನು ಸಲಹು ಸಲಹದೆ ಮಾಣು’ – ಎಂದು ಅನನ್ನಯ ಶರಣಾಗತಿಯಿಂದ ಕೃಷ್ಣನಿಗೆ ತಲೆಬಾಗುವರು. ಇಲ್ಲಿಯ ಕೃಷ್ಣ-ಗೋಪಿಯರ ಮಾತಿನ ಸೊಗಡು, ಸಂಭಾಷಣೆಯ ತಂತ್ರ ಕೃತಿಗೆ ನಾಟಕೀಯತೆಯನ್ನು ತಂದುಕೊಟ್ಟಿದೆ. ಸರಳ ಹಾಗೂ ನೇರವಾದ ಆಡುಮಾತುಗಳು, ಪ್ರಾಸಾನುಪ್ರಾಸಗಳು ಕೃತಿಯ ಅಂದವನ್ನು ಹೆಚ್ಚಿಸಿವೆ.

ಕೃಷ್ಣ ಮಧುರೆಗೆ ಹೋದ ಬಳಿಕ ಗೋಕುಲದ ಗೋಪಿಯರ ವಿರಹ ಮುಗಿಲು ಮುಟ್ಟುತ್ತದೆ. ಬೃಂದಾವನದ ಪರಿಸರವೆಲ್ಲವೂ ಅವರಿಗೆ ಕೃಷ್ಣಮಯವಾಗಿ ಕಾಣುತ್ತದೆ. ಅಲ್ಲಿಯ ಎಲ್ಲ ವಸ್ತುಗಳೂ ಅವನ ನೆನಪನ್ನುಂಟು ಮಾಡುತ್ತವೆ:

ಈ ವನದೆಡೆಗಳು ಈ ಲತೆವನಗಳು
ಈ ನದಿ ಪುಳಿನಗಳೀ ಶಶಿ ಶಿಲೆಗಳು
ಈ ಸುರತರು ನೆಳಲು ಶುಕಪಿಕರವ
ಯಾಕೆ ಮಾಧವನ ಮರೆಯಲೀಯದಿವೆ ಕೆಳದಿ

– ಎಂದು ಗೋಪಿಯೊಬ್ಬಳು ತಾನು ಕೃಷ್ಣನೊಂದಿಗೆ ಕಳೆದ ಮಧುರಕ್ಷಣಗಳನ್ನು ನೆನೆಯುತ್ತಾ, ಮಧುರೆಯ ರತಿವಿದಗ್ಧರಾದ ಮಾನಿನಿಯರಿಗೆ ಈ ರಸಿಕ ಸಿಕ್ಕಿಬಿಟ್ಟಿದ್ದಾನೆ; ಅವನು ಮತ್ತೆ ಮರಳುವುದಿಲ್ಲವೆಂದು ತನ್ನ ವ್ಯಥೆಯನ್ನು ಗೆಳತಿಯೊಂದಿಗೆ ಹಂಚಿಕೊಂಡಿರುವಳು. ಕಂದಿದೆವು ಕುಂದಿದೆವು ನಾವು … ಅವನ ನೆನಪೇ ನಮಗೆ ಸಾಕು – ಎಂದು ಸಮಾಧಾನ ಮಾಡಿಕೊಳ್ಳುವಳು. ಕೃಷ್ಣ ಮಧುರೆಯಿಂದ ಗೋಪಿಯರ ಕುಶಲವನ್ನು ಕೇಳಿ ಬರಲು ತನ್ನ ಗೆಳೆಯ ಉದ್ದವನನ್ನು ಗೋಕುಲಕ್ಕೆ ಕಳುಹಿಸುವನು. ಅವನ ರಥವನ್ನು ಕಂಡೊಡನೆಯೇ ‘ಅಂದೆಮ್ಮ ಕೊಂದ ಇಂದ್ಯಾರ ಕೊಲ್ಲಲಿ ಬಂದ, ಈ ಕ್ರೂರ? ಅಥವಾ ನಮ್ಮನ್ನೂ ಅಲ್ಲಿಗೇ ಕರೆದುಕೊಂಡು ಹೋಗಲು ಬಂದನೋ’ – ಎಂದು ಕೋಪ ಕುತೂಹಲಗಳಿಂದ ರಥವನ್ನು ಇದಿರುಗೊಳ್ಳುವರು.

ಅವನ ಹಂಬಲವೆಮಗೆ ಜೀವನವವ್ವಾ
ಭುವನಮೋಹನ ರಂಗವಿಠಲನು ಕರುಣಿಯೇ

-ಎನ್ನುವ ಗೋಪಿಯರ ಮಾತುಗಳಂತೂ ಕರುಳು ಕಿತ್ತು ಬರುವಂತಿವೆ. ಮತ್ತೊಬ್ಬ ಗೋಪಿ ‘ಒಲ್ಲೆನವ್ವಾ ಲಕುಮಿಯನಲ್ಲ ಬಾರದಿದ್ದರೆ ತನು ಹೊರೆಯನೊಲ್ಲೆನವ್ವಾ… ಹಾರ ಕೊರಳಿಗೆ ಭಾರ ಹೂವಿನಭಾರ ಸೈರಿಸಲಾರೆನೆ’ ಎಂದು ಹಲುಬಿದ್ದಾಳೆ ‘ಮಂದಾನಿಲನ ಸಹಿಸಲಾಗದು,… ಶುಕಪಿಕರವಗಳಿಂದ ನೊಂದೆ, ಚಂದ್ರಕಿರಣದಿಂದ ಬೆಂದೆ… ಇನ್ನೀ ವೃಂದಾವನ ವೇಕವನ ನಗಲಿ?’ – ಎಂದು ಹಾಡಿ ಹಾಡಿ ದುಃಖಿಸುವಳು. ಮತ್ತೊಬ್ಬಳು:

ಕೊಂಬುಕೊಳಲನೂದುತ್ತ ನಂಬಿಸಿಪೋದನೆಯವ್ವಾ
ಅಂಬುಜನಾಭಗೆ ಮನ ಹಂಬಲಿಸುತ್ತಿದೆಯವ್ವಾ
ನಡೆಯಲಾರೆನವ್ವಾ ಅಡಿಯಿಡಲೊಶವಿಲ್ಲ
ಬೆಡಗುಗಾರನ ಕೂಡೆ ನುಡಿ ತೆರಳಿತ್ತೆಯವ್ವಾ

– ಎಂದು ನೊಂದುಕೊಳ್ಳುತ್ತಾ ತನ್ನ ವಿರಹವೇದನೆಯನ್ನು ತೋಡಿಕೊಳ್ಳುವಳು. ವೇದನೆಯನ್ನನುಭವಿಸಿದ ಮನಸ್ಸುಗಳು ವಿಧಿಯನ್ನೇ ದೂಷಿಸತೊಡಗುತ್ತವೆ. ‘ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ| ಯದುಪತಿಯನಗಲಿಸಿದ ಒಮ್ಮಿಂದಲೊಮ್ಮೆ’ – ಎಂದು ವಿಧಿಯನ್ನು ಬೈಯುತ್ತ, ಕೃಷ್ಣನ ಮುದ್ದುಮುಖ, ಸುಳಿಗುರುಳುಗಳನ್ನು ಮತ್ತೆ ಮತ್ತೆ ನೋಡುವ ಬಯಕೆಯನ್ನು ಹೇಳಿಕೊಳ್ಳುತ್ತಾ ‘ಹಕ್ಕಿಯ ಮೇಲುಳ್ಳ ದಯ ನಮ್ಮ ಮ್ಯಾಲೆ ಇಕ್ಕದೇಕೆ ಹೋದ್ಯೋ ವಿಧಿಯೆ’- ಎಂದು ಅಲವತ್ತುಕೊಳ್ಳುವರು. ನಮಗೂ ಎರಡು ರೆಕ್ಕೆಗಳಿದ್ದಿದ್ದರೆ ಗಕ್ಕನೆ ಹೋಗಿ ಹರಿಯನ್ನು ಕೂಡುತ್ತಿದ್ದೆವಲ್ಲಾ ಎಂದು ತಮ್ಮ ಅಸಹಾಯಕತೆಯನ್ನೂ ವಿರಹ ಯಾತನೆಯನ್ನೂ ತೋಡಿಕೊಂಡು ‘ರಂಗವಿಠ್ಠಲನ, ಅಂಗಸಂಗವಿಲ್ಲದ ಈ ಭಂಗಜೀವನವ ಸುಡುಸುಡು ಸುಡಿನ್ಯಾತಕಕೆ’- ಎಂದು ಮರುಗುವಳು. ಗೋಪಿಯರ ಈ ಒಂದೊಂದು ಮಾತೂ ಓದುಗರ ಅಂತರಂಗವನ್ನೇ ಮಿಡಿಯುವಲ್ಲಿ ಸಫಲವಾಗಿದೆ.

ಶ್ರೀಪಾದರಾಜರ ‘ಭ್ರಮರಗೀತೆ’ಯಲ್ಲಂತೂ ಗೋಪಿಯರ ವಿರಹ ಮಡುಗಟ್ಟಿ ನಿಂತಿದೆ. ಗೋಪಿಯರೆಲ್ಲ ಮಾತನಾಡುತ್ತ ನಿಂತಿರುವಾಗ ಒಂದು ದುಂಬಿ ಝೇಂಕರಿಸುತ್ತ ಬಳಿಗೆ ಬರುತ್ತದೆ. ಅದನ್ನು ಕೃಷ್ಣನ ದೂತನೆಂದು ಭಾವಿಸಿ ಗೋಪಿಯರು ತಮ್ಮ-ಕೃಷ್ಣನ ಅಗಲಿಕೆಯ ನೋವನ್ನು ಅದರ ಮುಂದೆ ಎಳೆ ಎಳೆಯಾಗಿ ರೆ :

ಭೃಂಗಾ ನಿನ್ನಟ್ಟಿದನೇ ಶ್ರೀರಂಗ ಮಧುರೆಲಿ ನಿಂದು
ಅಂಗಜ ಲುಬ್ಧಕ ಪೂಗೋಲಂಗಳ ತಡೆಯನಿಕ್ಕಿ
ಅಂಗನೇರೆಂಬೋ ಹುಲ್ಲೆ ಮೃಗಂಗಳಿಗೆ ಗುರಿಯೆಚ್ಚು
ಹಿಂಗಿಸುತೈದಾನೆ ಅಸುವ ಹೇ ಕಿತವಾ –

-ಎಂದು ಕೇಳುತ್ತಾ, ‘ನಿನ್ನ ನೋಡೆ ನಮ್ಮ ಅಚ್ಚುತನ್ನ ಕಂಡಂತಾಯಿತಯ್ಯ| ಚನ್ನಿಗರರಸ ಕುಶಲೋನ್ನತಿಯೊಳಿಹನೇನೋ’ – ಎಂದು ಅಭಿಮಾನದಿಂದ ಕೃಷ್ಣನ ಕುಶಲವನ್ನು ವಿಚಾರಿಸಿಕೊಂಡರೂ ಮರುಕ್ಷಣವೇ ‘ವಿರಹಾಬ್ಧಿಯನ್ನು ದಾಟಿಸುವುದಾಗಿ ನಂಬಿಸಿ ತನ್ನ ಸ್ನೇಹದ ನಾವೆಯೇರಿಸಿಕೊಂಡು ಹೋದ ಕೃಷ್ಣ ಮೋಸದಿಂದ ನಡು ನೀರಿನಲ್ಲಿ ಕೈಬಿಟ್ಟು ಹೋದ’ನೆಂದು ದೂರುವರು.

ನಮ್ಮ ಹಂಬಲಿನ್ನೇನವಗೆ ಹೊಮ್ಮೇಲಟ್ಟದಲಂಚೆಯ
ಗಮ್ಮ ನೇರ ಕುಚದ ಕುಂಕುಮ್ಮ ಕಸ್ತುರಿಯ ಕರ
ದಿಮ್ಮನದಿ ಸಿಲುಕಿದಂಗೆ

– ಎಂದು ಮಮ್ಮಲ ಮರುಗುವರು. ಅವನ ಕೊಳಲಿನ ನಾದದ ಸಮ್ಮೋಹನಕ್ಕೊಳಗಾದ ನಾವು ಮನೆಮಠ ಬಿಟ್ಟು ಹಾರಿ ಅವನಲ್ಲಿಗೆ ಹೋದಾಗ ನಮ್ಮನ್ನು ಅಪ್ಪಿ ಅಧರಾಮೃತವುಣಿಸಿದ ಅವನು ಈಗ ಹೇಗೆ ಕಲ್ಲೆದಯವನಾದನೋ ಕಿತವ… ಹೆತ್ತ ತಂದೆತಾಯಿ ಆಪ್ತಬಂಧು ಗತಿಗೋತ್ರ ಎಲ್ಲವೂ ನೀನೆಂದ ನಮಗೆ ಬೇಗಬರುವೆನೆಂದು ಹೇಳಿ ಅಕ್ರೂರನೊಡನೆ ಹೊರಟೇ ಹೋದನೆಂದು ನೊಂದುಕೊಳ್ಳುವರು. ಲಕ್ಷ್ಮೀರಮಣನೂ ಕುಕ್ಷಿಯೊಳಗೆ ಬ್ರಹ್ಮಾಂಡವನ್ನಿಟ್ಟ ಮೋಕ್ಷದರಸನೂ ಆದ ಅವನಿಗೆ ಕೇವಲ ಗೊಲ್ಲತಿಯರೂ ಗೋಕ್ಷೀರದಿಂದ ತೃಪ್ತರಾಗುವ ನೊಣಗಳಂತಿರುವ ನಾವು ಸಾಟಿಯೆ? ಹಾಗೆ ಭಾವಿಸುವುದು ಅಪರಾಧ’ – ಎಂದು ತಾರತಮ್ಯ ಭಾವದಿಂದ ಪರಿತಪಿಸಿ ಕೊನೆಗೆ ಎಲ್ಲರೂ ಒಂದಗಿ ‘ರಂಗವಿಠಲ ತುಂಗಮಹಿಮ ನಮೋ’- ಎಂದು ಆ ದಶಾವತಾರಿ ಹರಿಗೆ ನಿರ್ಮಲ ಪ್ರೇಮದಿಂದ ಶರಣಾಗುವರು. ಒಂಬತ್ತು ನುಡಿಗಳ ಈ ಕೃತಿಯ ಉದ್ದಕ್ಕೂ ಗೋಪಿಯರ ಮೊರೆ ತೊರೆಯಾಗಿ ಹರಿದಿರುವುದು ಅನುಭವಕ್ಕೆ ಬರುತ್ತದೆ. ‘ವನಜಯನನ ಮನವ ಮಧುಪನಂಬುವರೆ ಮನದೆಗೆದ ಮದನಪಿತ’ – ಎನ್ನುವ ಕೀರ್ತನೆಯಲ್ಲೂ ಇದೇ ಭಾವ ವ್ಯಕ್ತವಾಗಿರುವುದನ್ನು ನೋಡಬಹುದು. ‘ಕೃಷ್ಣನನ್ನು ತೊರೆದು ಬದುಕುವುದೆಂತೋ …. ವಿರಹದುರಿತಾನಳವಡರಿ ಸುಡುತಿಹುದು’ – ಎಂದು ಮುಂತಾಗಿ ಗೋಪಿರು ದುಂಬಿಯೊಡನೆ ತಮ್ಮ ವಿರಹದ ತೀವ್ರತೆಯನ್ನು ತೋಡಿಕೊಳ್ಳುವರು. ‘ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿ| ಇರುಳು ಹಗಲು ಜರಿಜರಿದಳಲುವೆವು| ಸಿರಿಯ ವನ ಉಂಗುಟದ ಉಗುರುಗುಣ ಕಾಣಳೆಲೋ| ಹರಿ ನಮ್ಮ ನೆನೆವುದಚ್ಚರಿಯಲ್ಲವೇ’ – ಎಂದು ತಮಗೆ ತಾವೇ ಸಮಾಧಾನ ತಂದುಕೊಂಡು, ಕೊನೆಗೆ ‘ಎಲೈಭೃಂಗವೇ ಮಧುರೆಗೆ ಹೋಗಿ ರಂಗವಿಠಲನನ್ನು ಕರೆತಂದು ನಮ್ಮನುಳುಹುವುದೋ’ – ಎಂದು ಕಳಕಳಿಯಿಂದ ಕೈಮುಗಿದು ದುಂಬಿಯನ್ನು ಬೇಡಿಕೊಳ್ಳುವ ಅವರ ಮುಗ್ಧತೆ ಸಹೃದಯರ ಹೃದಯವನ್ನು ಕರಗಿಸಿಬಿಡುತ್ತದೆ. ಭಾಗವತದಲ್ಲಿ ಬರುವ ಭ್ರಮರಗೀತೆಯೇ ಈ ಕೃತಿಗೆ ಪ್ರೇರಣೆ. ಹೀಗೆ ಗೋಪಿ – ಕೃಷ್ಣರ ನಡುವಣ ಬಾಂಧವ್ಯ ಶ್ರೀಪಾದರಾಜರಲ್ಲಿ ವಾತ್ಸಲ್ಯದ ಝರಿಯಾಗಿ ಮಧುರಭಾವದ ತೊರೆಯಾಗಿ ಪ್ರವಹಿಸಿದೆ.