ಕಲಿಯುಗದಲ್ಲಿ ಮಾಯಾವಾದವನ್ನು ಖಂಡಿಸಿ ‘ಸರ್ವೇಶ ಹರಿವಿಶ್ವಸತ್ಯ’ವೆಂದು ಸಾರಲು ವಾಯುದೇವರು ‘ಮಾನನಿಧಿ ಮಧ್ವಾಖ್ಯ’ರಾಗಿ ಅವತರಿಸಿದರು. ವೇದವ್ಯಾಸರಿಂದ ಸಕಲ ಶಾಸ್ತ್ರರಹಸ್ಯಗಳನ್ನೂ ಅರಿತರು. ಜಗತ್ತು ಮಾಯೆಯೆಂಬ ವಾದ ಸರಿಯಲ್ಲವೆಂದು ಸಾರಿ ಜಗತ್ತು ಸತ್ಯವೆಂದು ಸ್ಥಾಪಿಸಿ ಆ ಜ್ಞಾನಸುಧೆಯನ್ನು ಲೋಕದ ಜೀವರಿಗೆ ಹಂಚಿ ಮತ್ತೆ ಬದರಿಕಾಶ್ರಮಕ್ಕೆ ತೆರಳಿ, ವ್ಯಾಸರ ಪಾದಗಳಿಗೆರಗಿ ಅಲ್ಲಿ ಅದೃಶ್ಯರಾದರೆಂದು, ಬ್ರಹ್ಮತ್ವ ಪಡೆದರೆಂದು ಪ್ರತೀತಿ.

ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ
ದುರ್ವಾದಿಗಳ ಮತವ ನೆರೆ ಖಂಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದ

– ಅಂತಹ ಮಧ್ವಾಚಾರ್ಯರಿಗೆ

ಜಯಜಯತು ದುರ್ವಾದಿಮತ ತಿಮಿರ ಮಾರ್ತಾಂಡ
ಜಯಜಯತು ವಾದಿಗಜ ಪಂಚಾನನ
ಜಯಜಯತು ಚಾರ್ವಾಕ ಗರ್ವಪರ್ವತ ಕುಲಿಶ
ಜಯ ಜಯ ಜಗನ್ನಾಥ ಮಧ್ವನಾಥ

– ಎಂದು ಜಯಕಾರ ಹಾಕಿ ನಮಿಸಿದ್ದಾರೆ. ಶ್ರೀಪಾದರಾಜರು ಈ ಅವತಾರತ್ರಯ ಮಧ್ವನಾಮಕ್ಕೆ ಶ್ರೀಜಗನ್ನಾಥದಾಸರು ಮೂರು ನುಡಿಗಳಲ್ಲಿ ‘ಫಲಸ್ತುತಿ’ಯನ್ನು ಹಾಡಿರುವರು. ಈ ಮಧ್ವನಾಮವನ್ನು ಬರೆದು ಓದಿ ಕೇಳಿದವರಿಗೆ ಅತಿಶಯವಾದ ಫಲಪ್ರಾಪ್ತಿಯಾಗುವುದು. ಗ್ರಹಣ ಕಾಲದಲ್ಲಿ ಗಂಗಾನದೀ ತಟದಲ್ಲಿ ಬ್ರಾಹ್ಮಣರಿಗೆ ಸಹಸ್ರಗೋದಾನ ಮಾಡಿದ ಫಲ, ಮಕ್ಕಳಿಲ್ಲದವರಿಗೆ ಮಕ್ಕಳಫಲಗಳುಂಟಾಗುವುವು. ಶತ್ರು ನಿಗ್ರಹವಾಗಿ ಸಮಸ್ತ ದಿಗ್ವಿಜಯ ದೊರಕುವುದು. ಮನದ ಸಂತಾಪ ಕಳೆದು ಸುಖವುಂಟಾಗುವುದು; ಅಷ್ಟೇ ಏಕೆ ಸಾಕ್ಷಾತ್‌ ಶ್ರೀಹರಿಯನ್ನೇ ತೋರಿಸಿ ಈ ಭವಜಲಧಿಯನ್ನು ದಾಟಿಸುವುದು – ಎಂದಿದ್ದಾರೆ, ಜಗನ್ನಾಥ ದಾಸರು.

ಮರುದಂಶರ ಮತ ಪಿಡಿಯದೆ ಇಹಪರದಲ್ಲಿ ಸುಖವಿಲ್ಲ
ಸಾರ ಮಧ್ವಶಾಸ್ತ್ರವೋದದೆ ಗುರುತಾರತಮ್ಯ ಜ್ಞಾನ ಪುಟ್ಟದು

– ಇಂತಹ ಮಾತುಗಳು ಶ್ರೀಪಾದರಾಜರ ಮತನಿಷ್ಠೆ, ತತ್ವಶ್ರದ್ಧೆಗಳನ್ನು ತೋರಿಸುತ್ತವೆ. ಶ್ರೀರಂಗವಿಠಲನನ್ನು ಭಜಿಸಿ ಮುಂದಿನ ಪರಮಗತಿಗೆ ಈಗಿಂದೀಗಲೇ ರಹದಾರಿ ಪಡೆದಿಟ್ಟು ಕೊಳ್ಳಬೇಕೆಂದು ಸೂಚಿಸಿರುವರು. ಇನ್ನೊಂದು ಕೀರ್ತನೆಯಲ್ಲಿ ಪರಮ ವೈಷ್ಣವನಾದವನು ಮಧ್ವಶಾಸ್ತ್ರವನ್ನೋದಿದವನೂ ಭಕುತಿರಸದಲ್ಲಿ ಮುಳುಗಿ ನಾರಾಯಣ ಕೃಷ್ಣ ಶರಣೆಂದು ಗುರುಹಿರಿಯರ ಮಾತು ಮನ್ನಿಸುವಂಥವನಾಗಬೇಕು;

ಜಗತು ಸತ್ಯವೆಂದು ಪಂಚಭೇದವ ತಿಳಿದು
ಮಿಗೆ ರಾಗದ್ವೇಷಂಗಳನು ವರ್ಜಿಸಿ
ಭಗವಂತನ ಲೀಲೆ ಶ್ರವಣ ಕಥೆಗಳಿಂದ
ನಿಗಮಗೋಚರನೆಂದು

-ಅರಿಯಬೇಕು; ಹರಿದಾಸರ ಸಂಗ ಸುಖವೆಂದು ತಿಳಿಯಬೇಕು ಬೂಟಾಟಿಕೆಯ ವೇಷಧಾರಿಗಳನ್ನು ವೈಷ್ಣವನೆನ್ನಬಾರದೆಂದು ಒತ್ತಿ ಹೇಳಿ ವ್ಯಕ್ತಿಯ ಅಂತರಂಗ ಶುದ್ಧಿಗೆ ಪ್ರಾಮುಖ್ಯವಿತ್ತಿರುವರು. ಒಟ್ಟಾರೆ ನುಡಿದಂತೆ ನಡೆಯಬೇಕು; ಭಕ್ತನ ನಡೆನುಡಿಗಳೊಂದಾಗಿರಬೇಕು- ಎಂಬುದೇ ಶ್ರೀಪಾದರಾಜರ ಆಶಯ.

ಶ್ರೀಪಾದರಾಜರ ಕೀರ್ತನೆಗಳಲ್ಲಿ ಎದ್ದು ಕಾಣುವ ಮತ್ತೊಂದು ಪ್ರಮುಖ ತಾತ್ವಿಕಾಂಶ, ‘ಬಿಂಬೋಪಾಸನೆ’; ಶರೀರಾಂತರ್ಗತ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವಿಕೆ, ‘ತನ್ನೊಳು ಪರಮ ತತ್ವ ತಿಳಿವುದೇ ಬಿಂಬೋಪಾಸನೆ’. ಇದು ಆ ಅಂತರಾತ್ಮನಿಗಾಗಿ ಅಂತರಂಗದಲ್ಲಿ ಮಾಡುವ ಪೂಜೆ, ಮಾನಸ ಪೂಜೆ. ಅಂತರಂಗದಲ್ಲಿ ಭಗವಂತನ ಕುರುಹು ಕಾಣಿಸಿದ ಬಳಿಕ ಭಕ್ತನ ಮಾನಸಿಕ ಸ್ಥಿತಿಯೇ ಬದಲಾಗಿ ಹೋಗುತ್ತದೆ:

ಕಂಡುಕಂಡದ್ದೆಲ್ಲ ಕಮಲನಾಭನ ಮೂರ್ತಿ
ಉಂಡು ಉಟ್ಟದ್ದೆಲ್ಲ ವಿಷ್ಣು ಪೂಜೆ
ತಂಡ ತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ
ಹಿಡಿದ ಹಟ ಪೂರೈಸಲದು ಹರಿ ಸಂಕಲ್ಪ
ನಡೆದಾಡುವುದೆಲ್ಲ ತೀರ್ಥಯಾತ್ರೆ

ಆದುದರಿಂದ ತಮ್ಮ ‘ಹೃದಯಾಬ್ಜಮಂಟಪದಲ್ಲಿ ಬಂದು ನೆಲೆನಿಂದಿರೋ’ – ಎಂದು ಆ ರಂಗವಿಠಲನನ್ನು ಪ್ರಾರ್ಥಿಸಿರುವರು; ‘ಅಂತರಂಗದಲ್ಲಿ ಸಂತತ ನೆನೆವಂತೆ ಚಿಂತನೆ ನಿಲಿಸೋ’ – ಎಂದು ದೈನ್ಯದಿಂದ ಕೇಳಿಕೊಳ್ಳುವರು.

ನಾ ನಿನಗೇನು ಬೇಡುವುದಿಲ್ಲ ಎನ್ನ
ಹೃದಯ ಕಮಲದೊಳು ನೆಲಸಿರು ಹರಿಯೇ

– ಎಂಬುದೇ ಶ್ರೀಪಾದರಾಜರ ಅಂತರಂಗದ ಮೊರೆ. ಈ ಬಿಂಬೋಪಾಸನೆಯ ಮೂಲಕ ಸಾಧನೆ ಮಾಡಿ ಅಪರೋಕ್ಷಾನುಭೂತಿಯ, ದೈವಸಾಕ್ಷಾತ್ಕಾರದ ಸಿದ್ಧಿಪಡೆದವರು ಹರಿದಾಸರು.

ದಶಾವತಾರ ಚಿತ್ರಣ:

ಭಾಗವತದಲ್ಲಿ ಬರುವ ಹರಿಯ ಮತ್ಸ್ಯಕೂರ್ಮಾದಿ ದಶಾವತಾರಗಳ ಸ್ತುತಿಯೂ ಶ್ರೀಪಾದರಾಜರಲ್ಲಿ ಬರುತ್ತದೆ. ಭಗವಂತ ತನ್ನ ಲೀಲಾರ್ಥವಾಗಿ ಎತ್ತಿದನೆನ್ನಲಾಗಿರುವ ಸನತ್ಕುಮಾರಾದಿ ಇಪ್ಪತ್ತೊಂದು ಅವತಾರಗಳಲ್ಲಿ ಈ ಹತ್ತು ಅವತಾರಗಳು ಹೆಚ್ಚಿನ ಪ್ರಾಶಸ್ತ್ಯ ಪಡೆದಿವೆ. ಭಗವದ್ಗೀತೆಯಲ್ಲಿ ಭಗವಾನ್‌ ಕೃಷ್ಣ ಹೇಳಿರುವ –

ಯದಾಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ

– ಎನ್ನುವ ಮಾತುಗಳ ಪ್ರಕಾರ ಕೃಷ್ಣನ ಅವತಾರಗಳ ಅಗತ್ಯವನ್ನು ಫಲ ಪರಿಣಾಮಗಳನ್ನೂ ಗ್ರಹಿಸಬಹುದು. ಮಹಾವಿಷ್ಣುವಿನ ಪ್ರಸಿದ್ಧವಾದ ಹತ್ತು ಅವತಾರಗಳಲ್ಲಿ ಮೊದಲನೆಯದು ‘ಮತ್ಸ್ಯಾವತಾರ’. ಸೋಮಕನೆಂಬ ರಾಕ್ಷಸ ವೇದಗಳನ್ನು ಕದ್ದು ಪ್ರಳಯ ಜಲದಲ್ಲಿ ಅಡಗಿದ್ದಾಗ ವಿಷ್ಣು ಮತ್ಸ್ಯರೂಪವನ್ನು ತಾಳಿ ವೇದಗಳನ್ನೆತ್ತಿ ತರುತ್ತಾನೆ. ಎರಡನೆಯದು ಕೂರ್ಮಾವತಾರ. ದೇವಾಸುರರು ಅಮೃತಕ್ಕಾಗಿ ಮಂದರ ಪರ್ವತವನ್ನು ಕಡಗೋಲಾಗಿ, ವಾಸುಕಿಯನ್ನು ಹಗ್ಗವಾಗಿ ಮಾಡಿಕೊಂಡು ಸಮುದ್ರವನ್ನು ಕಡೆಯುತ್ತಿದ್ದಾಗ ಪರ್ವತ ಭಾರದಿಂದಾಗಿ ಮುಳುಗಲಾರಂಭಿಸಿತು. ಆಗ ವಿಷ್ಣು ಕೂರ್ಮರೂಪಿಯಾಗಿ ಆ ಪರ್ವತವನ್ನು ಬೆನ್ನ ಮೇಲೆ ಹೊತ್ತು ನಿಲ್ಲುತ್ತಾನೆ. ಮೂರನೆಯದು ವರಾಹಾವತಾರ. ಉದ್ದೇಶ ಹಿರಣ್ಯಾಕ್ಷನ ಸಂಹಾರ, ಭೂಮಿಯ ಉದ್ಧಾರ. ಹಿರಣ್ಯಾಕ್ಷನೆಂಬ ರಾಕ್ಷಸ ಭೂಮಿಯನ್ನು ಚಾಪೆಯಂತೆ ಸುತ್ತಿಕೊಂಡು ಸಮುದ್ರ ಪ್ರವೇಶ ಮಾಡಲು ವಿಷ್ಣು ವರಾಹರೂಪಿಯಾಗಿ ತನ್ನ ಕೋರೆವಾಡೆಗಳಿಂದ ಭೂಮಿಯನ್ನೆತ್ತಿ ಹಿಂದಕ್ಕೆ ತರುತ್ತಾನೆ. ನಾಲ್ಕನೆಯದು ನರಸಿಂಹಾವತಾರ . ಅರ್ಧ ನರ, ಮತ್ತರ್ಧ ಸಿಂಹ; ಸಿಂಹ ಮುಖ ಮನುಷ್ಯನ ಮೈ. ಭಯಂಕರ ರಾಕ್ಷಸನಾದ ಹಿರಣ್ಯಕಶಿಪು ವಿಷ್ಣುಭಕ್ತನಾದ ತನ್ನ ಮಗ ಪ್ರಹ್ಲಾದನನ್ನು ಹಿಂಸಿಸುತ್ತಿದ್ದಾಗ ವಿಷ್ಣು ಕಂಬದಲ್ಲಿ ಮೂಡಿಬಂದು ಅವನನ್ನು ಸಂಹರಿಸುವನು. ಐದನೆಯದು ವಾಮನಾವತಾರ. ಕಶ್ಯಪ-ಅದಿತಿಯರ ಹನ್ನೆರಡು ಮಕ್ಕಳಲ್ಲಿ ಚಿಕ್ಕವನು ವಾಮನ. ಬಲ ಹಾಗೂ ಐಶ್ವರ್ಯ ಮದಗಳಿಂದ ಮೆರೆಯುತ್ತಿದದ ಬಲಿಚಕ್ರವರ್ತಿಯ ಸೊಕ್ಕನ್ನು ಅಡಗಿಸುವ ಸಲುವಾಗಿ ವಿಷ್ಣು ವಾಮನಾವತಾರಿಯಾಗಿ ಪ್ರಕಟಗೊಳ್ಳುವನು. ಯಜ್ಞ ಮಾಡುತ್ತಿದ್ದ ಬಲಿಯನ್ನು ವಾಮನ ಮೂರುಹೆಜ್ಜೆ ಭೂಮಿಯನ್ನು ದಾನವಾಗಿ ಬೇಡಿ, ಆಕಾಶ ಭೂಮಿಗಳನ್ನು ಎರಡು ಹೆಜ್ಜೆಗಳಲ್ಲಿ ಅಳೆದು, ಮೂರನೆಯ ಹೆಜ್ಜೆಯಿಡಲು ಜಾಗವನ್ನು ಕೇಳಿದಾಗ ಬಲಿಯು ಮೂರನೆಯ ಹೆಜ್ಜೆಯನ್ನು ತನ್ನ ತಲೆಯ ಮೇಲಿಡಲು ಪ್ರಾರ್ಥಿಸುವನು. ಅಂತೆಯೇ ಬಲಿಯ ತಲೆಯ ಮೇಲೆ ಹೆಜ್ಜೆಯಿರಿಸಿದ ವಾಮನ ಅವನನ್ನು ಪಾತಾಳಕ್ಕೆ ತುಳಿದು ಬಿಡುತ್ತಾನೆ. ಆರನೆಯದು ಪರಶುರಾಮಾವತಾರ. ಉನ್ಮತ್ತರಗಿದ್ದ ಕ್ಷತ್ರಿಯರ ಸೊಕ್ಕು ಮುರಿಯುವ ಉದ್ದೇಶದಿಂದ ವಿಷ್ಣು ಜಮದಗ್ನಿ ರೇಣುಕೆಯರ ಮಗನಾಗಿ ಜನಿಸಿ, ಗಂಡುಗೊಡಲಿಯನ್ನು ಹಿಡಿದು ಸಮಸ್ತಲೋಕವನ್ನು ಸುತ್ತುತ್ತಾ ವೇದಮಾರ್ಗವನ್ನು ಬಿಟ್ಟು ಲೋಕಕಂಟಕರಾಗಿದ್ದ ಕ್ಷತ್ರಿಯರನ್ನು ಕೊಲ್ಲುತ್ತಾ ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿದ. ಭೃಗುವಂಶಜನಾದ ಈ ಜಮದಗ್ನಿಗೆ ಭಾರ್ಗವನೆಂದೂ ಹೆಸರು. ಏಳನೆಯದು ಪ್ರಸಿದ್ಧವಾದ ರಾಮಾವತಾರ. ವಿಷ್ಣು ಸೂರ್ಯವಂಶದ ದಶರಥ-ಕೌಸಲ್ಯೆಯರ ಮಗನಾಗಿ ಜನಿಸಿ, ಸುಬಾಹು ಮಾರೀಚ ಖರದೂಷಣ ತ್ರಿಶಿರಸ್ಸು ಕುಂಭ ನಿಕುಂಭ ಕುಂಭಕರ್ಣ ರಾವಣಾದಿ ಅಸುರರನ್ನು ಕೊಲ್ಲುವ, ದುಷ್ಟ ಶಿಕ್ಷಣ ಕಾರ್ಯಕ್ಕಾಗಿಯೇ ಎತ್ತಿದ ಅವತಾರವಿದು. ಎಂಟನೆಯದು ಕೃಷ್ಣಾವತಾರ. ವಿಷ್ಣು ಯದುವಂಶದ ವಸುದೇವ ದೇವಕಿಯರ ಎಂಟನೆಯ ಮಗನಾಗಿ ಜನಿಸುತ್ತಾನೆ. ಶಿಶುಪಾಲ ದಂತವಕ್ತ್ರ, ಕಂಸ ಪೂತನಿ ವೈಕ ಧೇನುಕ ಚಾಣೂರ ಮುಷ್ಟಿಕಾದಿ ದುಷ್ಟರಾಕ್ಷಸರ ಮರ್ದನಕ್ಕಾಗಿಯೇ ಎತ್ತಿದ ಅವತಾರ. ಒಂಬತ್ತನೆಯದು ಬುದ್ಧಾವತಾರ. ಕಲಿಯುಗದ ಆರಂಭಕಾಲದಲ್ಲಿ ರಾಕ್ಷಸರು ವೈದಿಕಧರ್ಮದಲ್ಲಿ ಹೆಚ್ಚಿನ ಶ್ರದ್ಧೆ ನಂಬಿಕೆಗಳನ್ನಿಟ್ಟು, ಮಯನಿರ್ಮಿತ ತ್ರಿಪುರಗಳಿಂದ ಲೋಕನಾಶನ ಕಾರ್ಯದಲ್ಲಿ ತೊಡಗಿದ್ದಾಗ, ಅವರೆಲ್ಲರಿಗೂ ಪಾಷಂಡ ಧರ್ಮವನ್ನು ಬೋಧಿಸಿ ದಾರಿ ತಪ್ಪಿಸುವ ಸಲುವಾಗಿ ಎತ್ತಿದ ಅವತಾರವಿದು. ಹತ್ತನೆಯದು ಕಲ್ಕ್ಯಾವತಾರ. ತಪಸ್ಸಿನಿಂದ ಶಿವನನ್ನು ಮೆಚ್ಚಿಸಿದ ವಿಷ್ಣು ಅವನಿಂದ ಪಡೆದ ಕುದುರೆಯನ್ನೇರಿ ಕತ್ತಿ ಹಾಗೂ ಗಿಳಿಗಳನ್ನು ಹಿಡಿದು, ಕೊಬ್ಬಿನಿಂದ ಮೆರೆಯುತ್ತಿದ್ದ ಕಲಿಯ ಹುಟ್ಟಡಗಿಸುವ ಸಲುವಾಗಿ ಎತ್ತಿದ ಅವತಾರ.

ಮುಂದಿನ ಹರಿದಾಸರಲ್ಲಿ ಈ ದಶಾವತಾರಗಳ ಚಿತ್ರಣ ಒಂದು ಸಂಪ್ರದಾಯವಾಗಿಯೇ ಬಂದಿರುವುದನ್ನು ಗಮನಿಸಬಹುದು. ಅಂತೆಯೇ ಮಗುವಿಗೆ ತೊಟ್ಟಿಲಿಡುವುದೇ ಮೊದಲಾದ ಸಂಪ್ರದಾಯಗಳನ್ನು ಕುರಿತ ಕೀರ್ತನೆಗಳಲ್ಲಿ ಹರಿಯ ದಶಾವತಾರ ಹಾಸುಹೊಕ್ಕಾಗಿ ಬಂದಿರುವುದೂ ಗಮನಾರ್ಹ.

ಶ್ರೀಪಾದರಾಜರು ‘ಲಾಲಿ ಗೋವಿಂದ ಲಾಲಿ ಕೌಸಲ್ಯಬಾಲ ಶ್ರೀರಾಮ ಲಾಲಿ’ ಎಂದು ಪ್ರಾರಂಭವಾಗುವ ತಮ್ಮ ಒಂದು ಕೀರ್ತನೆಯಲ್ಲಿ ಮುತ್ತೈದೆಯರೆಲ್ಲ ಸಡಗರ ಸಂಭ್ರಮಗಳಿಂದ ಉಯ್ಯಾಲೆ ರಚಿಸಿ ತೂಗಿದರೆಂದಿದ್ದಾರೆ. ಆ ಉಯ್ಯಾಲೆಯ ಕಲ್ಪನೆಯೇ ಭವ್ಯವಾಗಿದೆ.

ಕನಕರತ್ನಗಳಲ್ಲಿ ಕಾಲ್ಗಳನೆ ಹೂಡಿ
ನಾಲ್ಕು ವೇದಗಳನ್ನು ಸರಪಣಿಯ ಮಾಡಿ
ಅನೇಕ ಭೂಮಂಡಲವ ಹಲಗೆಯನೆ ಮಾಡಿ
ಶ್ರೀಕಾಂತನುಯ್ಯಾಲೆಯನು ವಿರಚಿಸಿದರು.

– ಶ್ರೀಕಾಂತನ ಆ ಉಯ್ಯಾಲೆಗೆ ಕನಕರತ್ನಗಳಿಂದ ಮಾಡಿದ ಕಾಲುಗಳು, ನಾಲ್ಕು ವೇದಗಳೇ ನಾಲ್ಕು ಸರಪಳಿಗಳು. ಅನೇಕ ಭೂಮಂಡಲಗಳನ್ನು ಸೇರಿಸಿ ಮಾಡಿದ ಹಲಗೆ-ಇಂತಹ ಐಸಿರಿಯ, ಆಶ್ಚರ್ಯಜನಕವಾಗಿ ನಿರ್ಮಿಸಿದ ಉಯ್ಯಾಲೆಯಲ್ಲಿ ಹರಿಯನ್ನು ಮಲಗಿಸಿ ತೂಗಿದ ವೈಖರಿ ಹೀಗಿದೆ:

ಆಶ್ಚರ್ಯ ಜನಕವಾಗಿ ನಿರ್ಮಿಸಿದ ಪಚ್ಚೆಯ ತೊಟ್ಟಿಲಲ್ಲಿ
ಅಚ್ಚತಾನಂತನಿರಲು ತೂಗಿದರು ಮತ್ಸ್ಯಾವತಾರ ಹರಿಯ ||೨||

ಧರ್ಮಸ್ಥಾಪಕನು ಎಂದು ನಿರವಧಿಕ ನಿರ್ಮಲಚರಿತ್ರನೆಂದು
ಮರ್ಮಕರ್ಮಗಳ ಪಾಡಿ ತೂಗಿದರು ಕೂರ್ಮಾವತಾರ ಹರಿಯ ||೩||

ಸರಸಿಜಾಕ್ಷಿಯರೆಲ್ಲರು ಜನವಶೀಕರ ದಿವ್ಯರೂಪನೆಂದು
ಪರಮಹರುಷದಲಿ ಪಾಡಿ ತೂಗಿದರು ವರಾಹಾವತಾರ ಹರಿಯ ||೪||

ಹರಿಕುಂಭಗಳ ಪೋಲುವ ಕುಚದಲ್ಲಿ ಹಾರಪದಕವು ಹೊಳೆಯಲು
ವರವರ್ಣಿನಿಯರು ಪಾಡಿ ತೂಗಿದರು ನರಸಿಂಹಾವತಾರ ಹರಿಯ ||೫||

ಭಾಮಾಮಣಿಯರೆಲ್ಲರು ಯದುವಂಶ ಸೋಮನಿವನೆಂದು ಪೊಗಳಿ
ನೇಮದಿಂದಲಿ ಪಾಡಿ ತೂಗಿದರು ವಾಮನಾವತಾರ ಹರಿಯ ||೬||

ಸಾಮಜವರದನೆಂದು ಅತುಳ ಭೃಗು ರಾಮಾವತಾರನೆಂದು

ಶ್ರೀಮದಾನಂದ ಹರಿಯ ತೂಗಿದರು ಪ್ರೇಮಾತಿರೇಕದಿಂದ ||೭||

ಕಾಮನಿಗೆ ಕಾಮನೆಂದು ಸುರಸಾರ್ವಭೌಮ ಗುಣಧಾಮನೆಂಧು
ವಾಮನೇತ್ರೆಯರು ಪಾಡಿ ತೂಗಿದರು ರಾಮಾವತಾರ ಹರಿಯ ||೮||

ಸೃಷ್ಟಿಯ ಕರ್ತನೆಂದು ಜಗದೊಳಗೆ ಶಿಷ್ಟ ಸಂತುಷ್ಟನೆಂಧು
ದೃಷ್ಟಾಂತ ರಹಿತನೆಂದು ತೂಗಿದರು ಕೃಷ್ಣಾವತಾರ ಹರಿಯ ||೯||

ವೃದ್ಧನಾರಿಯರೆಲ್ಲರು ಜಗದೊಳಗೆ ಪ್ರಸಿದ್ಧನಿವನೆಂದು ಪೊಗಳಿ
ಬದ್ಧಾನುರಾಗದಿಂದ ತೂಗಿದರು ಬೌದ್ಧಾವತಾರ ಹರಿಯ ||೧೦||

ಥಳಥಳಾತ್ಕಾರದಿಂದ ರಂಜಿಸುವ ಮಲಯಜಲೇಪದಿಂದ
ಜಲಗಂಧಿಯರು ಪಾಡಿ ತೂಗಿದರು ಕಲ್ಕ್ಯಾವತಾರ ಹರಿಯ ||೧೧||

– ಹೀಗೆ ಪದ್ಮಿನಿ ಹಸ್ತಿನಿ ಚಿತ್ತಿನಿ ಶಂಕಿನಿಯರು, ಮತ್ತಗಜಗಾಮಿನಿಯು, ಲಿಕುಚಸ್ತನಿಯರು, ಪಲ್ಲವಾಧರೆಯರು ಎಲ್ಲರೂ ಒಟ್ಟಾಗಿ ಕಲ್ಯಾಣಿ, ಆನಂದ ಭೈರವಿ, ದೇವಗಾಂಧಾರ ರಾಗಗಳಿಂದ

ನೀಲ ಘನಲೀಲ ಜೋಜೋ ಕರುಣಾಲ
ವಾಲ ಶ್ರೀಕೃಷ್ಣ ಜೋಜೋ
ಲೀಲಾವತಾರ ಜೋಜೋ ಪರಮಾತ್ಮ
ಬಾಲಗೋಪಾಲ ಜೋಜೋ

– ಎಂದು ಮುಂತಾಗಿ ರಂಗವಿಠಲನಿಗೆ ಜೋಗುಳ ಹಾಡುತ್ತ ತೂಗಿದರಂತೆ! ಮತ್ಸ್ಯಾವತಾರದಿಂದ ಕಲ್ಕ್ಯಾವತಾರದವರೆಗಿನ ಹರಿಯ ದಶಾವತಾರಗಳ ನಿರೂಪಣೆ, ಸ್ತುತಿ ದಾಸರ ಉದ್ದೇಶವಾಗಿದ್ದರೂ ಈ ಭವ್ಯಕಲ್ಪನೆಯ ಹಿನ್ನೆಲೆಯಲ್ಲಿ ಹರಿಯ ದಶಾವತಾರ ನಿರೂಪಣೆಯ ಸೊಗಸು ಇನ್ನಷ್ಟು ಕಳೆಗಟ್ಟಿದೆ.

ನೀತಿಬೋಧನೆ:

ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಮೊದಲಿಗರಾದ ಶ್ರೀಪಾದರಾಜರ ದೃಷ್ಟಿಯೆಲ್ಲ ಹರಿಭಕ್ತಿ ಸಾಧನೆಯ ಕಡೆಗೆ. ತಮ್ಮ ಆತ್ಮಶೋಧನೆಯಲ್ಲಿ ಅಂತರಂಗವನ್ನೇ ತೆರೆದಿಟ್ಟು, ಭಕ್ತಿಸಾಧನೆಯಲ್ಲಿ ಪರಸ್ಪರ ಮಾನವ ಸಂಬಂಧಗಳ ಸೂಕ್ಷ್ಮಾತಿ ಸೂಕ್ಷ್ಮ ಎಳೆಗಳನ್ನೂ ಶ್ರೀಹರಿಯೊಂದಿಗೆ ಕಲ್ಪಿಸಿಕೊಂಡ ಶ್ರೀಪಾದರಾಜರು ಸಾಮಾನ್ಯ ಜನರ ಕಷ್ಟಕೋಟಲೆಗಳಿಗೂ ಸ್ಪಂದಿಸಿದ್ದಾರೆ. ಬಡತನದ ಯಾತನೆ, ಜೊತೆಯವರ ನಿರ್ಲಕ್ಷ್ಯ, ತಿರುಪೆ ಎತ್ತುವ ಅನಿವಾರ್ಯತೆ, ಕಾಡುವ ಋಣದ ಭಾದೆ – ಎಲ್ಲವೂ ಅವರ‍ನ್ನು ತಟ್ಟಿವೆ. ಸಮಾಜದಲ್ಲಿ ಒಂದು ಕಡೆ ಸುಖೋಪಭೋಗಗಳ ಸಮೃದ್ಧಿ ಮತ್ತೊಂದೆಡೆ ಕಿತ್ತು ತಿನ್ನುವ ಬಡತನ – ಎರಡನ್ನೂ ಕಂಡು ನೊಂದಿದ್ದಾರೆ. ಐಹಿಕ ಸುಖವೇ ಶಾಶ್ವತವೆಂದು ಭಾವಿಸಿದವರಿಗೆ ‘ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ, ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ’ ಎಂದು ಬುದ್ಧಿ ಮಾತು ಹೇಳಿ ಮಾರ್ಗದರ್ಶನ ಮಾಡಿರುವರು. ಈ ಹಿಂದೆ ಹಾಗೆ ಬದುಕಿದ ನರಕಾಸುರ, ಕಾರ್ತವೀರ್ಯಾರ್ಜುನ, ಕೌರವ, ನಹುಷಾದಿಗಳು ಏನಾದರು? ಎಂದು ಕೆಲವು ದೃಷ್ಟಾಂತಗಳ ಮೂಲಕ ಹೇಳಬೇಕಾದುದನ್ನು ಶಕ್ತಿಯುತವಾಗಿ ಹೇಳಿರುವರು:

ಮುನ್ನ ನರಕಾಸುರನು ಬಡಿದು ಚಿಂತಾಮಣಿಯ
ತನ್ನ ಮನೆಯಲಿ ತಂದು ನಿಲ್ಲಿಸಿ ನೃಪರ
ಕನ್ನೆಯರ ಷೋಡಶ ಸಹಸ್ರವನೆ ತಂದಾತ
ಹೆಣ್ಣನೊಬ್ಬಳನೊಯ್ದುದಿಲ್ಲವೊ ನೋಡೊ ||

ಸಾವಿರ ಕರ ಪಡೆದ ಕಾರ್ತವೀರ್ಯಾರ್ಜುನನು
ಭೂವಲಯದೊಳಗೊಬ್ಬನೆ ವೀರನೆನಿಸಿ
ರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿ
ಸಾವಾಗ ಏನು ಕೊಂಡೊಯ್ದ ನೋಢೋ ||

ಕೌರವನು ಧರೆಯೆಲ್ಲ ತನಗಾಗಬೇಕೆಂದು
ವೀರ ಪಾಂಡವರೊಡನೆ ಕದನ ಮಾಡಿ
ಮಾರಿಯವಶವೈದಿ ಹೋದಾಗ ತನ್ನೊಡನೆ
ಶ್ಯಾರೆ ಭೂಮಿಯ ಒಯ್ದುದಿಲ್ಲವು ನೋಡೋ||

– ಎಂದು ಮುಂತಾಗಿ ಪುರಾಣಪಾತ್ರಗಳನ್ನು ಅವರ ಸ್ಥಿತಿಗತಿಗಳನ್ನು ಉದಾಹರಿಸುವ ಮೂಲಕ ಜನಸಾಮಾನ್ಯನ ಹಣ ಅಂತಸ್ತು ಅಧಿಕಾರಗಳ ನಶ್ವರತೆಯನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ಅಂತೆಯೇ ಶಾಶ್ವತ ಸುಖವನ್ನು ಪಡೆದ ಧ್ರುವ ವಿಭೀಷಣ ಹನುಮಾದಿಗಳನ್ನು ಹೆಸರಿಸಿ ಅವರಂತೆ ‘ರಂಗವಿಠಲರೇಯನ ನೆರೆ ನಂಬಿರೋ’ ಎನ್ನುವರು.

ಈ ಸಂಸಾರಸುಖವನ್ನು ನೆಚ್ಚಿ ಕೆಡಬ್ಯಾಡಿ. ಕಾಳಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು. ಇಲ್ಲಿ ಸುಖದುಃಖಗಳೆರಡೂ ಇವೆ. ಜೀವನದಲ್ಲಿ ಸುಖದುಃಖಗಳ ಪಾತ್ರ ರಾತ್ರಿ ಹಗಲುಗಳಂತೆ, ಕತ್ತಲೆ ಬೆಳದಿಂಗಳುಗಳಂತೆ. ಇವು ಸತ್ಯಸಂಧರಾದ ಧರ್ಮರಾಯ, ಹರಿಶ್ಚಂದ್ರರನ್ನೇ ಬಿಟ್ಟಿಲ್ಲ. ರಾಜೋಚಿತ ವೈಭೋಗದಲ್ಲಿ ಮೆರೆಯುತ್ತಿದ್ದ ಅವರನ್ನು ಕಷ್ಟಗಳು ಅಟ್ಟಾಡಿ ಬಂದವು. ರಾಜಕುಮಾರಿಯಾದ, ಪಂಚಪಾಂಡವರ ಧರ್ಮಪತ್ನಿಯಾದ ದ್ರೌಪದಿ ವಿರಾಟನ ಅರಮನೆಯಲ್ಲಿ ತೊತ್ತಾಗಿ ದುಡಿಯಬೇಕಾಯಿತು. ಸಾಕ್ಷಾತ್‌ ಶ್ರೀಕೃಷ್ಣನೇ ಅರ್ಜುನನ ಬಂಡಿಗೆ ಸಾರಧಿಯಾದನೆಂದ ಮೇಲೆ ಉಳಿದವರ ಪಾಡೇನು? ಎಂದು ಅಂತಹ ಮಹಾನ್‌ ವ್ಯಕ್ತಿಗಳು ಎದುರಿಸಿದ ಕಷ್ಟ ಪರಂಪರೆಗಳನ್ನು ವಿವರಿಸುವ ಮೂಲಕ ಜನರು ತಮ್ಮ ಕಷ್ಟವನ್ನು ಸಹಿಸಿಕೊಳ್ಳುವ ಹಾಗೆ, ನುಂಗಿಕೊಳ್ಳುವ ಹಾಗೆ ಅವರ ಮನಸ್ಸನ್ನು ಹದಗೊಳಿಸಿರುವುದಲ್ಲದೆ, ಈ ನಶ್ವರ ಸಂಸಾರದ ಬಗ್ಗೆ ಹೆಚ್ಚಿನ ವ್ಯಾಮೋಹ ಬೇಡವೆಂದು ಎಚ್ಚರಿಸಿರುವರು.

ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಾಗಿಲ ಕಾಯ್ವರು
ಉಂಟಾದತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಗೋಣ ಮೇಲೆತ್ತುವರು

ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ
ಬೆಂಬಲದಲಿ ನಲಿಯುತಿಹರು
ಬೆಂಬಲತನ ತಪ್ಪಿ ಬಡತನ ಬಂದರೆ
ಇಂಬುನಿನಗಿಲ್ಲ ನಡೆಯೆಂಬರು

– ಇದು ಲೋಕ ನೀತಿ. ತುಂಬಿದ ಜೇಬಿನವರ ಹಿಂದೆ ಉಳಿದವರು; ಖಾಲಿ ಜೇಬಿನವರನ್ನು ಕೇಳುವವರಾರು? ಮೂರು ದಿನದ ಈ ಭಾಗ್ಯ ಶಾಶ್ವತವಲ್ಲ, ಕಷ್ಟನಷ್ಟಗಳ ಪೆಟ್ಟು ಬಿದ್ದು ಸಾಕಷ್ಟು ಹೈರಾಣವಾದ ಮೇಲೆಯೇ ಮನುಷ್ಯನಿಗೆ ದೇವರತತ ಮನಸ್ಸು ತವಕಿಸುವುದು, ಅವನೇ ಸರಿಯಾದವನೆನಿಸುವುದು. ಆದರೆ ತನ್ನ ಹಾಗೂ ಇತರರ ಅನುಭವಗಳಿಂದ ಸಾಕಷ್ಟು ಪೆಟ್ಟು ಬೀಳುವ ಮುನ್ನವೇ ಅದನ್ನರಿತುಕೊಂಡು ವಿವೇಕದಿಂದ ಬಾಳುವುದು ವಿಹಿತವೆಂಬುದು ಲೋಕಕ್ಕೆ ಶ್ರೀಪಾದರಾಜರ ಕಿವಿಮಾತು. ಬದುಕನ್ನು ವ್ಯರ್ಥಹೋಗಗೊಡದೆ ಅತ್ತಿತ್ತ ಹರಿಹಾಯುವ ಚಂಚಲಚಿತ್ತವನ್ನು ಭಗವಂತನ ಸ್ಮರಣೆಯಲ್ಲಿ ತೊಡಗಿಸಬೇಕು:

ಚಿತ್ತಜನಯ್ಯನ ಚಿಂತಿಸು ಮನವೇ
ಹೊತ್ತು ಕಳೆಯದೆ ಸರ್ವೋತ್ತಮನ ನೆನೆಮನವೇ.

ಕಾಲನದೂತರು ನೂಲುಹಗ್ಗವ ತಂದು
ಕಾಲುಕೈಗಳ ಕಟ್ಟಿ ಮ್ಯಾಲೆಕುಟ್ಟಿ
ಕಾಲಪಾಶದೊಳಿಟ್ಟು ಶೂಲದಿಂದಿರಿವಾಗ
ಪಾಲಿಸುವರುಂಟೆ?…….

ದಂಡಧರನ ಭಟರು ಚಂಡಕೋಪದಿ ಬಂದು
ಕೆಂಡದ ನದಿಯ ತಟಿಗೆ ಕೊಂಡೊಯ್ದು
ಖಂಡ ಖಂಡವ ಕಿತ್ತು ಕೆಂಡದೊಳಿಡುವಾಗ
ಹೆಂಡಿರುಮಕ್ಕಳು ಬಂದು ಬಿಡಿಸಬಲ್ಲರೆ||

ಅಂಗಳಿಗೆ ದಬ್ಬಣಂಗಳ ಸೇರಿಸಿ ಎರಡು
ಕಂಗಳಿಗೆ ಸೀಸವ ಕಾಸಿ ಪೊಯ್ಯಲು
ತಂಗಿ ಅಕ್ಕ ಬಂದು ಭಂಗವ ಬಿಡಿಸುವರೆ?
‘ಅಂಗವು ಸ್ಥಿರವಲ್ಲ’ ಎಂದು ಹೇಳಿ

– ಎಂದು ಮುಂತಾಗಿ ಕೇಳುತ್ತ ಕೇಳುತ್ತಲೇ ಮನುಷ್ಯನ ಅಶಾಶ್ವತ ಬದುಕನ್ನು ಪದರ ಪದರವಾಗಿ ಬಿಚ್ಚಿಟ್ಟಿರುವರು. ಕೊನೆಯ ಗಳಿಗೆಯಲ್ಲಿ ಭಗವಂತನನ್ನು ನೆನೆಯುವ ಪರಿಪಾಟಲಿಗಿಂತ ಗಟ್ಟಿಮುಟ್ಟಾಗಿದ್ದಾಗಲೇ ಅತ್ತ ಗಮನ ಹರಿಸಿ, ಚಿತ್ತವಿಟ್ಟು ಭಗವಂತನನ್ನು ಸ್ಮರಿಸಿ, ಕೊನೆಗಾಲಕ್ಕೆ ಪರದ ‘ಬುತ್ತಿ’ಯನ್ನು ಸಿದ್ಧಮಾಡಿಕೊಳ್ಳಬೇಕೆನ್ನುವರು. ಅದಕ್ಕೆ ಬೇಕಾದ ಪರಿಕರ ‘ಭಕ್ತಿ’. ಮುಕ್ತಿಯನ್ನು ಬಯಸುವ ಪ್ರತಿಯೊಬ್ಬನಿಗೂ ‘ಭಕ್ತಿಬೇಕು ವಿರಕ್ತಿಬೇಕು| ಸರ್ವಶಕ್ತಿ ಬೇಕು ಮುಂದೆ ಮುಕ್ತಿಯ ಬಯಸುವಗೆ:

ಸತಿ ಅನುಕೂಲ ಬೇಕು
ಸುತನಲ್ಲಿ ಗುಣಬೇಕು
ಮತಿವಂತನಾಗಬೇಕು
……….

ಸುಸಂಗ ಹಿಡಿಯಲಿ ಬೇಕು
ದುಸ್ಸಂಗ ಬಿಡಲಿಬೇಕು

– ಎಲ್ಲಕ್ಕಿಂತ ಹೆಚ್ಚಾಗಿ ‘ರಂಗವಿಠಲನ್ನ ಬಿಡದೆ ನೆರೆನಂಬಿರಬೇಕು’. ಆಗ ಮಾತ್ರ ಅವನ ಮನಸ್ಸು ಸಮಾಧಾನ ಸ್ಥಿತಿಯಲ್ಲಿದ್ದು ಆಧ್ಯಾತ್ಮ ಚಿಂತನೆಯಲ್ಲಿ ತೊಡಗಿ ಮುಕ್ತಿ ಪಡೆಯುವಲ್ಲಿ ಸಫಲವಾಗುತ್ತದೆ.

ಅಂತೆಯೇ ಶ್ರೀಪಾದರಾಜರ ‘ಭೂಷಣಕೆ ಭೂಷಣ ಇದು ಭೂಷಣ’ ಎನ್ನುವ ಕೀರ್ತನೆ ಕೂಡ ಸಾತ್ವಿಕ ಬದುಕಿನ ರೂಪುರೇಷೆಗಳನ್ನು ಕಟ್ಟಿಕೊಡುತ್ತದೆ:

ನಾಲಿಗ್ಗೆ ಭೂಷಣ ನಾರಾಯಣನ ನಾಮ
ಕಾಲಿಗೆ ಭೂಷಣ ಹರಿಯಾತ್ರೆಯು
ಆಲಯಕೆ ಭೂಷಣ ತುಲಸಿ ವೃಂದಾವನ ವಿ-
ಶಾಲ ಕರ್ಣಕೆ ಭೂಷಣ ವಿಷ್ಣು ಕಥೆಯು ||
ದಾನವೇ ಭೂಷಣ ಇರುವ ಹಸ್ತಂಗಳಿಗೆ
ಮಾನವೇ ಭೂಷಣ ಮಾನವರಿಗೆ

– ಇತ್ಯಾದಿ ಮಾತುಗಳಲ್ಲಿ ಜನಸಾಮಾನ್ಯರಿಗೆ ಆದರ್ಶಬದುಕಿನ ರೀತಿಯನ್ನು ತೋರಿಕೊಡುತ್ತಾರೆ. ಒಟ್ಟಾರೆ ಇಂತಹ ಕೀರ್ತನೆಗಳಲ್ಲಿ ಶ್ರೀಪಾದರಾಜರು ಸತ್ಸಂಗ ಸನ್ನಡತೆ ಸದಾಲೋಚನೆಗಳಿಂದ ಮಾತ್ರ ಬಾಳು ಹಸನಾಗಬಲ್ಲುದೆಂಬ ತುಂಬುನಂಬುಗೆಯನ್ನು ವ್ಯಕ್ತಗೊಳಿಸಿರುವರು.