ಶಿವಶರಣರು ತಮ್ಮ ವಚನಗಳಲ್ಲಿ ಕೂಡಲಸಂಗಮದೇವ ಚನ್ನಮಲ್ಲಿಕಾರ್ಜುನ ಇತ್ಯಾದಿ ‘ಅಂಕಿತ’ಗಳನ್ನು ಇಟ್ಟುಕೊಂಡಿರುವಂತೆ ಹರಿದಾಸರೂ ತಮ್ಮ ಕೃತಿಗಳಲ್ಲಿ ಅಂಕಿತಗಳನ್ನಿಟ್ಟಿರುವುದು ಗಮನಾರ್ಹ. ವ್ಯತ್ಯಾಸವೆಂದರೆ ಹರಿದಾಸರಿಗೆ ಈ ಅಂಕಿತ ಗುರುಮುಖೇನ ದೊರೆತಿರುವಂಥದ್ದು; ‘ಶ್ರೀಶನ್ನ ಭಜಿಸುವುದಕ್ಕಧಿಕಾರ’. ‘ಅಂಕಿತ’ವೆಂದರೆ ‘ಇದು ಇಂಥವರ ರಚನೆ’- ಎಂದು ಗುರುತಿಸಲು ಅನುವಾಗುವ ಗುರುತು, ಮುದ್ರಿಕೆ, ಮಾಹಿತಿ ಎನ್ನಬಹುದು. ಸಾಮಾನ್ಯವಾಗಿ ಯತಿಗಳು ತಮ್ಮ ಇಷ್ಟದೈವದ ಹೆಸರನ್ನೇ ಅಂಕಿತವಾಗಿ ಬಳಸಿರುವುದು ಕಂಡುಬರುತ್ತದೆ. ಶ್ರೀಪಾದರಾಜರು ‘ರಂಗವಿಠಲ’, ವ್ಯಾಸರಾಯರು ‘ಶ್ರೀ ಕೃಷ್ಣ’ ವಾದಿರಾಜರು ‘ಹಯವದನ’ ಅಂಕಿತ ಬಳಸಿರುವರು. ಮುಂದೆ ವ್ಯಾಸರಾಯರ ಶಿಷ್ಯರಾಗಿ ಬಂದ ಪುರಂದರಾದಿ ಹರಿದಾಸರ ಅಂಕಿತದಲ್ಲಿ ಸಾಮಾನ್ಯವಾಗಿ ‘ವಿಠಲ’ ಶಬ್ದ ಸೇರಿರುತ್ತದೆ. ‘ಪುರಂದರ ವಿಠಲ’ ‘ವಿಜಯವಿಠಲ’, ‘ಗೋಪಾಲ ವಿಠಲ’, ‘ಜಗನ್ನಾಥ ವಿಠಲ’, ‘ಪ್ರಾಣೇಶ ವಿಠಲ’, ‘ಶ್ರೀದ ವಿಠಲ’, ‘ಶ್ರೀಶ ವಿಠಲ’-ಹೀಗೆ. ಮತ್ತು ಗುರುವಿನಿಂದ ಶಿಷ್ಯನಿಗೆ ಅಂಕಿತಪ್ರದಾನವಾಗುವ ಮೂಲಕ ಹರಿದಾಸರಲ್ಲಿ ಗುರು-ಶಿಷ್ಯರ ಪರಂಪರೆ ಅನೂಚಾನವಾಗಿ ನಡೆದುಬರುತ್ತಿದೆ. ಹಾಗೆ ಗುರುಗಳು ಶಿಷ್ಯರಿಗೆ ಅಂಕಿತಪ್ರದಾನ ಮಾಡುವಗ ಗುರುಗಳ ಅಂಕಿತದೊಂದಿಗೆ ಶಿಷ್ಯನ ಅಂಕಿತವೂ ಸೇರಿದ ಹಾಗೆ ‘ಅಂಕಿತ ಪದ’ ರಚನೆಯಾಗಿರುತ್ತದೆ. ಶ್ರೀನಿಧಿ ವಿಠಲರು ಶ್ರೀವರ ವಿಠಲರಿಗೆ ನೀಡಿದ ಅಂಕಿತಪದ ಹೀಗಿದೆ:

‘ಶ್ರೀವರ ವಿಠಲ’ ಬೇಗ ಸಲಹೋ ಹರಿಯೇ ||ಪ||
ಸಾವಧಾನದಿ ಕೈಪಿಡಿಯೋ ಸತತ ||ಅ.ಪ.||

ಸಿರಿಬೊಮ್ಮ ಹರಮೊದಲು ಸರ್ವದೇವತೆಗಳಿಗೆ
ಸರ್ವಸೌಖ್ಯವ ಕೊಟ್ಟ ಸರ್ವಾದಿವಂದ್ಯ ಹರಿಯೇ
ಗರ್ವರಹಿತನು ನೀನು ಕರುಣಿ ಕರುಣಿಸಿವನ
ನರಹರಿಯೆ ನಾ ನಿನ್ನ ಸ್ಮರಣೆ ಮಾಡುವೆ ನಿತ್ಯ ||೧||

ಜ್ಞಾನಭಕುತಿ ವಿರಕುತಿಯನ್ನು ನೀನೇ ಕೊಡುವುದು ಸ್ವಾಮಿ
ಜ್ಞಾನಿಗಳ ಕೈಯ ಮನ್ನಣೆ ಮಾಡಿಸೋ
ಶ್ರೀನಿವಾಸನೆ ಸಕಲೇಷ್ಟ ಕಾಮವ ಕೊಟ್ಟು
ದಾನ ಧರ್ಮಗಳೆಲ್ಲ ನೀನೆ ಮಾಡಿಸೋ ನಿತ್ಯ |೨||

ಕರುಣಾಪಯೋನಿಧೆ ನಮ್ಮ ಗುರುಹೃದಯವಾಸ ಶ್ರೀ
ಕರವೆಂಬ ಶ್ರೀನಿಧಿವಿಠಲನೆ
ಸರ್ವದಾ ನೆರೆನಂಬಿದವನ ದುರಿತವ ಕಳೆದು ಸು-
ಸ್ಥಿರ ಪದವೀವ ಪರಮ ಪುರುಷನೆನೀನು ||೩||

ಎಲ್ಲ ಹರಿದಾಸರ ಅಂಕಿತಪದಗಳೂ ದೊರೆತಿಲ್ಲ. ಇತ್ತೀಚಿನ ಹರಿದಾಸರ ಪೈಕಿ ಶ್ರೀ ಗುರು ಗೋವಿಂದ ವಿಠಲದಾಸರು ತಮ್ಮ ಶಿಷ್ಯರಿಗೆ ಕೊಟ್ಟಿರುವ ಅಂಕಿತ ಪದಗಳೆಲ್ಲವೂ ದೊರೆತಿವೆ. ಹೀಗೆ ಅಂಕಿತ ಪಡೆಯುವ ಮೂಲಕ ಭಕ್ತ ಹರಿದಾಸನಾಗುವ ಅರ್ಹತೆ ಪಡೆಯುತ್ತಾನೆ. ದಾಸಕೂಟದವರಿಗೆ ಮಾತ್ರ ಈ ಅಂಕಿತ ಪ್ರಧಾನವಿಧಿ. ವ್ಯಾಸಕೂಟದ ಯತಿಗಳಾಗಿದ್ದು ಹರಿದಾಸರಾದವರು ತಮ್ಮ ಉಪಾಸ್ಯ ಮೂರುತಿಯ ಹೆಸರನ್ನೇ ತಮ್ಮ ಕನ್ನಡ ಕೃತಿಗಳಲ್ಲಿ ಅಂಕಿತವಾಗಿ ಬಳಸಿರುವುದನ್ನು ಈ ಹಿಂದೆಯೇ ಗಮನಿಸಲಾಗಿದೆ. ದಾಸದೀಕ್ಷೆಯನ್ನು ಪಡೆದ ಭಕ್ತ ಅಂಕಿತಾಂತರ್ಗತ ದೈವವೇ ತನ್ನ ಬಿಂಬ ಮೂರುತಿಯೂ ಹೌದೆನ್ನುವ ಭಾವನೆಯಿಂದ ವ್ಯವಹರಿಸುವನು. ಕೆಲವರಿಗೆ ಸ್ವಪ್ನದ್ವಾರಾ ಗುರುಗಳ ಅಂಕಿತವಾಗಿರುವುದೂ ಉಂಟು. ವಿಜಯ ದಾಸರಿಗೆ ಹಾಗೆ ಸ್ವಪ್ನದಲ್ಲಿ ಪುರಂದರದಾಸರಿಂದ ಅಂಕಿತ ದೊರೆಯಿತೆನ್ನುವ ವಿವರವನ್ನಿಲ್ಲಿ ನೆನೆಯಬಹುದು. ಪುರಂದರದಾಸರಿಗೆ ವ್ಯಾಸರಾಯರಿಂದ ದಾಸದೀಕ್ಷೆ ದೊರೆತ ಸಂಗತಿ ಪುರಂದರದಾಸರ ‘ಗುರುರಾಯಾ… ಶ್ರೀಶನ ಭಜಿಸುವುದಕಧಿಕಾರಿ ನಾನಾದೆ’ … ಇತ್ಯಾದಿ ಮಾತುಗಳಿಂದ ತಿಳಿಯುತ್ತದೆ.

(ಅ) ಸ್ವರೂಪ ವೈವಿಧ್ಯ

. ಕೀರ್ತನೆ: ಶ್ರೀಪಾದರಾಜರು ಶ್ರೀರಂಗದ ರಂಗನಾಥಸ್ವಾಮಿಯ ಅಂತರಂಗ ಭಕ್ತರಾಗಿದ್ದುದರಿಂದ ಮತ್ತು ಬಹುಶಃ ಪಂಢರಾಪುರದ ವಿಠ್ಠಲನ ಭಕ್ತರಾಗಿದ್ದ ವಾರಕರೀ ಪಂಥದ ವಿಠ್ಠಲ ಭಜನೆಯ ಪ್ರಭಾವದಿಂದಲೂ ‘ರಂಗವಿಠ್ಠಲ’ ಅಂಕಿತದಿಂದ ಕೃತಿ ರಚನೆ ಮಾಡಿರುವರು. ಕೀರ್ತನೆ, ಸುಳಾದಿ, ಉಗಾಭೋಗ, ವೃತ್ತನಾಮ, ದಂಡಕ – ಈ ಎಲ್ಲ ಪ್ರಕಾರಗಳಲ್ಲೂ ಕೃತಿರಚನೆ ಮಾಡಿರುವರಾದರೂ ಎಲ್ಲವನ್ನೂ ಒಟ್ಟಾಗಿ ‘ಕೀರ್ತನೆ’, ‘ಪದ’, ‘ದೇವರನಾಮ’ಗಳೆಂದೇ ಕರೆದು ವ್ಯವಹರಿಸುವುದು ರೂಢಿ. ಸಂಖ್ಯಾದೃಷ್ಟಿಯಿಂದ ‘ಕೀರ್ತನೆ’ಗಳಿಗೆ ಮೊದಲಸ್ಥಾನ. ‘ಕೀರ್ತನೆ’ ಒಟ್ಟಾರೆ ಹರಿದಾಸ ಸಾಹಿತ್ಯದ ಪ್ರಮುಖ ಆಕರ್ಷಣೆಯೂ ಹೌದು. ಸ್ಥೂಲವಾಗಿ ಕೀರ್ತನೆಯ ಸ್ವರೂಪ ಹೀಗಿದೆ:

ಪಲ್ಲವಿ ಅನುಪಲ್ಲವಿ ಮತ್ತು ನುಡಿಗಳಿಂದ ಕೂಡಿದ ತ್ರಿಧಾತುಕ ರಚನೆ ಕೀರ್ತನೆ. ರಚನಕಾರರ ಆಶಯ, ಅನುಭವ, ದರ್ಶನ, ಕಾಣ್ಕೆಗಳು ಪಲ್ಲವಿಯಲ್ಲಿ, ಸೂತ್ರದೋಪಾದಿಯ ಅಭಿವ್ಯಕ್ತಿ ಪಡೆದಿರುತ್ತವೆ. ‘ಪಲ್ಲವಿ’ಯ ಆ ಭಾವ ‘ಅನುಪಲ್ಲವಿ’ಯಲ್ಲಿ ಮುಂದುವರಿದು ‘ನುಡಿ’ಗಳಲ್ಲಿ ದೃಷ್ಟಾಂತಗಳ ಮೂಲಕವೋ ಇತರ ಅನುಭವದ ನುಡಿಗಳ ಮೂಲಕವೋ ಸಮರ್ಥನೆ ಪಡೆಯುತ್ತದೆ. ನುಡಿಗಳು ಹೆಚ್ಚಾಗಿ ನಾಲ್ಕು ಸಾಲಿನವು. ಎರಡು ಸಾಲುಗಳ ನುಡಿಗಳೂ ಇವೆ. ನಾಲ್ಕಕ್ಕಿಂತ ಹೆಚ್ಚು ಸಾಲುಗಳು ಬಂದಿರುವ ನಿದರ್ಶನಗಳೂ ಉಂಟು. ಸಾಮಾನ್ಯವಾಗಿ ಇಂತಹ ಮೂರು, ಐದು, ಏಳು- ಹೀಗೆ ನುಡಿಗಳು ಬೆಸಸಂಖ್ಯೆಯಲ್ಲಿರುತ್ತವೆ. ಪ್ರತಿಯೊಂದು ಕೀರ್ತನೆಯ ಕೊನೆಯ ನುಡಿಯಲ್ಲಿ ಆಯಾ ರಚನಕಾರರ ಅಂಕಿತವಿರುತ್ತದೆ. ಶ್ರೀಪಾದರಾಜರ ಕೀರ್ತನೆಗಳಲ್ಲಿ ಮೂರರಿಂದ ಇಪ್ಪತ್ತೇಳರವರೆಗೂ ನುಡಿಗಳಿದ್ದು ಇಪ್ಪತ್ತೇಳು ನುಡಿಗಳಿರುವ ‘ಮಧ್ವನಾಮ’ವೇ ಅವುಗಳಲ್ಲಿ ದೊಡ್ಡದು. ಮೂರರಿಂದ ಐದು ನುಡಿಗಳಿರುವ ಕೀರ್ತನೆಗಳೇ ಹೆಚ್ಚು. ‘ರಂಗವಿಠಲ’ ಎಂಬ ಅವರ ಅಂಕಿತ ಅವರ ಎಲ್ಲ ಕೃತಿಗಳ ಕೊನೆಯಲ್ಲೂ ಬರುತ್ತದೆ. ಶ್ರೀಪಾದರಾಜರ ಒಂದು ಸುಪ್ರಸಿದ್ಧ ಕೀರ್ತನೆ ಹೀಗಿದೆ:

ಕಂಗಳಿದ್ಯಾತಕೋ ಕಾವೇರಿರಂಗನ ನೋಡದ ||ಪ||

ಜಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ ||ಅ.ಪ||

ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲ್ಲಿ ನಿಂದು
ಚಂದ್ರ ಪುಷ್ಕರಿಣಿ ಸ್ನಾನವ ಮಾಡಿ ಆ
ನಂದದಿಂದಲಿ ರಂಗನ ನೋಡದ ||೧||

ಹರಿಪಾದೋದಕ ಸಮ ಕಾವೇರಿ
ವಿರಜಾನದಿ ಸ್ನಾನವ ಮಾಡಿ
ಪರಮ ವೈಕುಂಟ ರಂಗಮಂದಿರ
ಪರವಾಸುದೇವನ ನೋಡದ ||೨||

ಹಾರ ಹೀರ ವೈಜಯಂತಿ
ತೋರ ಮುತ್ತಿನ ಸರವ ಧರಿಸಿ
ತೇರನೇರಿ ಬೀದಿಲಿ
ಮೆರೆವ ರಂಗವಿಠಲನ ನೋಡದ ||೩||

‘ಕೀರ್ತನೆ’ ಎಂದರೆ ‘ಸ್ತುತಿ’, ‘ಹೊಗಳುವಿಕೆ’ ಎಂಬುದು ಶಬ್ದಾರ್ಥ. ನವವಿಧ ಭಕ್ತಿ ಮಾರ್ಗಗಳಲ್ಲಿ ಕೀರ್ತನಭಕ್ತಿಯೂ ಒಂದು. ಅಂದರೆ ಭಗವಂತನನ್ನು ಗಾಯನ ಮುಖೇನ ಸ್ತುತಿಸುವುದು ಎಂದಿಟ್ಟುಕೊಳ್ಳಬಹುದು. ಕನ್ನಡದ ಈ ಪ್ರಕಾರಕ್ಕೆ ಸುಮಾರು ಎಂಟುನೂರು ವರ್ಷಗಳ ಹಳಮೆಯಿದೆ; ಬಸವಾದಿ ಶಿವಶರಣರು ರಚಿಸಿದ ಹಾಡುಗಳು ಈ ಕೀರ್ತನ ಪ್ರಕಾರಕ್ಕೆ ಮೂಲವೂ ಮಾದರಿಯೂ ಆಗಿದ್ದವೆಂಬುದು ಡಾ.ಎಲ್‌. ಬಸವರಾಜುರವರ ಅಭಿಪ್ರಾಯ.[1] ಜೊತೆಗೆ ಸಮಾನಧರ್ಮಿಗಳಾದ, ಶ್ರೀರಂಗದಲ್ಲೇ ಇದ್ದ ಶ್ರೀವೈಷ್ಣವ ಆಳ್ವಾರರ ‘ಪ್ರಬಂಧ’ ಗಳಿಂದಲೂ ಶ್ರೀಪಾದರಾಜರಿಗೆ ಸಾಕಷ್ಟು ಸ್ಫೂರ್ತಿ ಪ್ರೇರಣೆಗಳು ದೊರೆತಿರಬೇಕು. ಬಹುಶಃ ವಿಷ್ಣುದೇವಾಲಯಗಳಲ್ಲಿ ಪ್ರಬಂಧಗಳನ್ನು ನಿತ್ಯಾನುಸಂಧಾನ ಮಾಡುತ್ತಿದ್ದ ರೀತಿಯಲ್ಲೇ ಶ್ರೀಪಾದರಾಜರು ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿ ಪೂಜಾಕಾಲದಲ್ಲಿ ಹಾಡಿದ್ದಿರಬೇಕು.

ಕೀರ್ತನೆಗಳ ವಸ್ತು ಭಿನ್ನಭಿನ್ನವೆಂಬಂತೆ ಕಂಡರೂ ಎಲ್ಲ ಕೀರ್ತನೆಗಳಲ್ಲಿ ಸೂತ್ರಪ್ರಾಯವಾಗಿರುವ ವಸ್ತು ಹರಿಭಕ್ತಿ. ಸಂಗೀತದ ಹಿನ್ನೆಲೆಯಲ್ಲಿ, ನೀತಿಯ ಚೌಕಟ್ಟಿನಲ್ಲಿ, ಸಾಮಾಜಿಕ ವರ್ತುಲಗಳಲ್ಲಿ ಅಧ್ಯಾತ್ಮವನ್ನು ಬಿತ್ತರಿಸುವ, ಹರಿಭಕ್ತಿ ಹಾಗೂ ಭಕ್ತರ ಹಿರಿಮೆ-ಗರಿಮೆಗಳನ್ನು ಸಾರುವ ಈ ಕೀರ್ತನ ಪ್ರಕಾರ ಪಂಡಿತ ಪಾಮರಿರಿಬ್ಬರನ್ನೂ ರಂಜಿಸಬಲ್ಲದು. ರಾಗ-ತಾಳಗಳೆರಡೂ ಪ್ರಧಾನವಾಗಿರುವ ಕೀರ್ತನೆ ತಾಳಪ್ರಧಾನವಾದ ಸುಳಾದಿಗಿಂತ ಸರಳವಾದ; ರಾಗ ಪ್ರಧಾನವಾದ ಉಗಾಭೋಗಕ್ಕಿಂತ ಬಿಗಿಯಾದ ರಚನೆ. ಪಲ್ಲವಿ, ಅನುಪಲ್ಲವಿ, ನುಡಿಗಳಲ್ಲಿ ದ್ವಿತೀಯ ಪ್ರಾಸವಿರುತ್ತದೆ. ಮತ್ತು ‘ವಡಿ’ ಎದ್ದು ಕಾಣುತ್ತದೆ. ಅಲ್ಲಲ್ಲಿ ಒಳಪ್ರಾಸವಿರುವುದೂ ಉಂಟು. ಉಪಮೆ ರೂಪಕಾದಿ ಅಲಂಕಾರಗಳಿಂದ ಕೂಡಿದ, ಜೀವನಾನುಭವದಿಂದ ತುಂಬಿ ತುಳುಕುತ್ತಿರುವ ಕೀರ್ತನೆಗಳು ಓದುಗರು, ಕೇಳುಗರು ಮತ್ತು ಹಾಡುವವರು-ಎಲ್ಲರಿಗೂ ಆಪ್ಯಾಯಮಾನವಾಗಿರುತ್ತವೆ. ಕೀರ್ತನೆಗಳನ್ನು ಅಲ್ಪಸ್ವಲ್ಪ ಸಂಗೀತಜ್ಞಾನವುಳ್ಳವರೂ ಹಾಡಬಹುದು.

. ಸುಳಾದಿ: ಸುಳಾದಿ ಹರಿದಾಸರು ಬಳಸಿರುವ ಇನ್ನೊಂದು ವಿಶಿಷ್ಟ ಗೇಯರಚನೆ. ತಾಳಪ್ರಧಾನ ರಚನೆಗಳಿವು. ಒಂದೊಂದು ನುಡಿಯೂ ಒಂದೊಂದು ತಾಳದಲ್ಲಿದ್ದು ಅಂತಹ ಐದು ಅಥವಾ ಏಳು ನುಡಿಗಳಿರುತ್ತವೆ. ಧ್ರುವ ಮಠ್ಯ ರೂಪಕ ಝಂಪೆ ತ್ರಿಪುಟ, ಅಟ್ಟ ಮತ್ತು ಏಕ- ಇವುಗಳನ್ನು ಸುಳಾದಿಯ ಸಪ್ತತಾಳಗಳೆಂದೇ ಕರೆಯಲಾಗಿದೆ. ಈ ಏಳುತಾಳಗಳೊಂದಿಗೆ ಆದಿತಾಳವೂ ಬರುವುದು. ಹಾಗಾಗಿ ಕೆಲವೊಮ್ಮೆ ಎಂಟು ನುಡಿಗಳಿರುವುದೂ ಉಂಟು. ನುಡಿಗಳ ಪಾದಗಳಲ್ಲಿ ನಿಯತ ಸಂಖ್ಯಾ ನಿಯಮವಿರುವುದಿಲ್ಲ. ಸುಳಾದಿಯ ಪ್ರತಿ ನುಡಿಯ ಕೊನೆಯಲ್ಲೂ ಆಯಾ ರಚನಕಾರರ ‘ಅಂಕಿತ’ವಿರುತ್ತದೆ. ಮತ್ತು ಸುಳಾದಿಯ ಕಡೆಯಲ್ಲಿ ಎರಡು ಸಾಲುಗಳ ಒಂದು ‘ಜತೆ’ಯಿದ್ದು, ಜತೆಯಲ್ಲೂ ರಚನಕಾರರ ಅಂಕಿತ ನಿಯತವಾಗಿ ಬರುತ್ತದೆ. ಕೀರ್ತನೆಯ ಸಾರ ಪಲ್ಲವಿಯಲ್ಲಿರುವಂತೆ ಸುಳಾದಿಯ ಸಾರ ‘ಜತೆ’ಯಲ್ಲಿರುತ್ತದೆ. ‘ಕನ್ನಡ ದಾಸ ಸಾಹಿತ್ಯದ ವಿನಾ ಈ ಜಾತಿ ಬೇರೆಲ್ಲಿಯೂ ಕಂಡುಬರುವುದಿಲ್ಲ’[2]ವೆಂಬ ಮಾತಿದೆ. ಅಂತೆಯೇ ಸಧ್ಯಕ್ಕೆ, ನಮಗೆ ತಿಳಿದಂತೆ ಶ್ರೀಪಾದರಾಜರೇ ಅಧಿಕೃತವಾಗಿ ಮೊದಲ ಸುಳಾದಿ ರಚನಕಾರರು. ಐದು ತಾಳಗಳಲ್ಲಿರುವ ಅವರ ಒಂದು ಸುಳಾದಿ ಹೀಗಿದೆ:

ಧ್ರುವ ತಾಳ

ನಿನ್ನಾಧೀನ ಶರೀರ ಕರಣ ಚೇಷ್ಟೆಗಳೆಲ್ಲ
ನಿನ್ನಾಧೀನ ಬಂಧ ಮೋಕ್ಷ ನಿರಯಗಳು
ನಿನ್ನಾಧೀನ ಯೋಗ್ಯತೆ ಸಾಧನ ಸಾಧ್ಯಗಳೆಲ್ಲ
ನಿನ್ನಾಧೀನ ಸುಕೃತ ದುಷ್ಕೃತ ಫಲವು
ನಿನ್ನಾಧೀನ ಚರಾಚರವೆಂದು ಶ್ರುತಿಸಾರುತಲಿವೆ
ಇಂತು ಪುಣ್ಯ ಪಾಪವೆಲ್ಲ ನಿನ್ನ ಲೇಪಿತವೊ ದೇವ
ಎಂತು ಜೀವರನು ಪುಣ್ಯ ಪಾಪಂಗಳನುಣಿಸುವೆ
ಅಂತರಾತ್ಮನೆ ನಿನ್ನ ಮಹಿಮೆಗೆ ನಮೋ ಎಂಬೆ
ಎಂತೋ ಚಿತ್ತವಿನ್ನೆಂತೋ ಪಾಲಿಸೋ ರಂಗವಿಠಲ ||೧||

ಮಠ್ಯ ತಾಳ

ಮುನ್ನ ನಿನ್ನ ಚರಣ ಕಮಲವ ನಂಬಿದೆ
ಭವಭವಂಗಳಲಿ ಬಂದೆನೋ
ಪನ್ನಗೇಶ ಶಯನ ಶ್ರೀಹರೇ
ಇನ್ನು ಬಿಡೆನೋ ಬಿಡೆನಯ್ಯಾ ಸಂಪನ್ನ
ಎನ್ನ ಗುಣದೋಷವರಸದೆ
ಇನ್ನು ಕಾಯೋ ರಂಗವಿಠಲ ||೨||

ರೂಪಕತಾಳ

ಕರಣಗಳು ಬಿಡದೆ ತಮ್ಮ ತಮ್ಮ
ವಿಷಯಂಗಳಿಗೆ ಎಳೆವುತಲಿವೆ
ಎನ್ನ ಹರಣ ನಿನ್ನದು ಕರಣಾಕರನೆ
ಈ ಧರೆ ಹವಣ ಮಾಣಿಸೋ ಹರಿಯೇ
ನಿನ್ನ ಚರಣ ಭಕುತರ ಶರಣಾದೆನು
ಹೊರೆವುದು ಎನ್ನ ರಂಗವಿಠಲರೇಯ ||೩||

ಅಟ್ಟ ತಾಳ

ಬಂದು ಬಂದು ನಾನಾಭವದಲಿ ಬೆಂದೆನಯ್ಯ
ನಂದನಂದನ ಇಂದಿರಾನಂದ
ಕುಂದ ಶುದ್ಧ ಧವಳದಂತೆ ಮಂದಹಾಸ
ನಂದನ ಕಂದ ಇಂದಿರಾನಂದ
ಇಂದೆನ್ನ ಸಲಹಯ್ಯ ರಂಗವಿಠಲ ||೪||

ಏಕತಾಳ

ಹರಿಯೇ ನಿನ್ನ ಒಮ್ಮೆ ನೆನೆದವ
ನರಕವ ಹೊಗನಂತೆ
ಆನು ಒಮ್ಮೆ ಇಮ್ಮೆ ನೆನೆವೆನಯ್ಯ
ಆನು ನಿನ್ನ ನಂಬಿದೆ ಕರುಣಿಗಳರಸ
ಹೊರೆದೆನ್ನ ಕಾಯೋ ರಂಗವಿಠಲ ||೫||

ಜತೆ

ಮಂಗಳಮಹಿಮ ಭುಜಂಗಶಯನ ನಮೋ
ಜಂಗುಳಿ ದೈವದ ಗಂಡ ರಂಗವಿಠಲ ||

ಸಂಗೀತದ ಹಿನ್ನೆಲೆಯಲ್ಲಿ, ಸಾಹಿತ್ಯದ ಸ್ವರೂಪದಲ್ಲಿ, ಆಧ್ಯಾತ್ಮಿಕ ಮಹತ್ವದೊಂದಿಗೆ ಮಾಧ್ವತತ್ವಗಳನ್ನು ಬಿತ್ತರಿಸುವ ಸುಳಾದಿಗಳು ನಿಜಕ್ಕೂ ಕನ್ನಡ ಸಾಹಿತ್ಯ, ಧರ್ಮ ಹಾಗೂ ಸಂಗೀತ ವಲಯಗಳಿಗೆ ಹರಿದಾಸರ ಅಮೂಲ್ಯ ಕೊಡುಗೆ.

. ಉಗಾಭೋಗ: ಉಗಾಭೋಗವೂ ಹರಿದಾಸರು ಬಳಸಿರುವ ಇನ್ನೊಂದು ಗೇಯ ಪ್ರಕಾರ. ಯಾವುದೇ ರಾಗತಾಳಗಳ ಕಟ್ಟಿಗೆ ಒಳಪಡದ, ಬೇಕೆನಿಸಿದ ರಾಗವನ್ನು ಅಳವಡಿಸಬಹುದಾದ ಸರಳ ಬಂಧವಿದು . ಪಾದಗಳಲ್ಲಿ ನಿಯತ ಸಂಖ್ಯಾನಿಯಮವಿಲ್ಲ. ರಚನೆಯ ಕೊನೆಯಲ್ಲಿ ರಚನಕಾರರ ಅಂಕಿತವಿರುತ್ತದೆ. ಮೇಲ್ನೋಟಕ್ಕೆ ಇವು ವಚನಗಳನ್ನು ಹೋಲುತ್ತವೆಯಾದರೂ ಮೂಲಭೂತವಾಗಿ ಇವು ಸಂಗೀತ ಪ್ರಧಾನ ರಚನೆಗಳು. ನುಡಿಗಳ ತಡೆಯಿಲ್ಲ. ರಾಗ-ತಾಳ ಪ್ರಧಾನ ಕೀರ್ತನೆ ಹಾಗೂ ತಾಳಪ್ರಧಾನ ರಚನೆಯಾದ ಸುಳಾದಿಗಿಂತ ಲಘುವಾದ ರಚನೆ ಘನೀಭೂತವಾದ ಭಾವನೆಗಳ ಅಭಿವ್ಯಕ್ತಿಯನ್ನಿಲ್ಲಿ ಕಾಣುತ್ತೇವೆ. ಶ್ರೀಪಾದರಾಜರ ಒಂದು ಉಗಾಭೋಗ ಹೀಗಿದೆ:

ಧ್ಯಾನವು ಕೃತಯುಗದಿ
ಯಜನಯಜ್ಞವು ತ್ರೇತಾಯುಗದಿ
ದಾನವಾಂತಕನ ದೇವತಾರ್ಚನೆ ದ್ವಾಪರಯುಗದಿ
ಆ ಮಾನವರಿಗೆಷ್ಟು ಫಲವೋ ಅಷ್ಟು ಫಲವು
ಕಲಿಯುಗದಿ ಗಾನದಲಿ ಕೇಶವಯೆನಲು
ಕೈಗೂಡುವನು ರಂಗವಿಠಲ.

-ಶ್ಲೋಕವನ್ನು ಹೋಲುವ ಈ ಪ್ರಕಾರವನ್ನು ಒಂದೇ ರಾಗದಲ್ಲಿ ಅಥವಾ ರಾಗಮಾಲಿಕೆಯಲ್ಲಿ ಹಾಡಿದರೆ ಕೇಳಲು ಸೊಗಸಾಗಿರುತ್ತದೆ. ಬಹುತೇಕ ಉಗಾಭೋಗಗಳು ದ್ವಿತೀಯ ಪ್ರಾಸದಿಂದ ಕೂಡಿವೆ. ವಚನಗಳಲ್ಲಿ ಸಾಮಾನ್ಯವಾಗಿ ದ್ವಿತೀಯ ಪ್ರಾಸವಿರುವುದಿಲ್ಲ. ಕೆಲವು ಉಗಾಭೋಗಗಳಂತೂ ಅಂಕಿತವನ್ನು ಬದಲಿಸಿಬಿಟ್ಟರೆ ವಚನಗಳಾಗಿಬಿಡುತ್ತವೆ. ವಚನಗಳೇ ಉಗಾಭೋಗಗಳಿಗೆ ಮೂಲವೋ ಅಥವಾ ಇವೆರಡಕ್ಕೂ ಬೇರೆ ಒಂದು ಮೂಲವಿರಬಹುದೋ ಎನ್ನುವ ಪ್ರಶ್ನೆಯನ್ನೆತ್ತಿದ್ದಾರೆ, ಡಾ. ಚಿದಾನಂದಮೂರ್ತಿಯವರು.[3] ಉಗಾಭೋಗ ಹಾಗೂ ಶರಣರ ವಚನಗಳೆರಡಕ್ಕೂ ಪ್ರಾಚೀನವಾದ ಉಗಾಭೋಗವೆಂಬ ತಾಳವೃತ್ತವೆ ಮೂಲವೆನ್ನುತ್ತಾರೆ ಆರ್.ಎಸ್‌. ಪಂಚಮುಖಿಯವರು.[4] ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ.

ಜೀವನದ ಹಲವಾರು ಅನುಭವಗಳನ್ನು ಗರ್ಭೀಕರಿಸಿಕೊಂಡಿರುವ ಉಗಾಭೋಗಗಳಿಗೆ ಶುದ್ಧಸಾಹಿತ್ಯದ ದೃಷ್ಟಿಯಿಂದ ವಿಶೇಷ ಮೌಲ್ಯವಿದೆ. ಹರಿನಾಮಮಹಿಮೆ, ಹರಿಭಕ್ತಿ, ಹರಿದಾಸರ ಮನಸ್ಸಿನ ತಳಮಳಗಳೆಲ್ಲ ಈ ಉಗಾಭೋಗಗಳಲ್ಲಿ ದಾಖಲಾಗಿವೆ. ಕೀರ್ತನೆಗಳಿಗಿಂತ ಬಿಗಿಯಾದ ಬಂಧವನ್ನಿಲ್ಲಿ ಕಾಣುತ್ತೇವೆ. ಲಾಲಿತ್ಯ, ರಂಜನೆಗಳು ಹಿತಮಿತವಾಗಿ ಮೇಳೈಸಿರುವ ಉಗಾಭೋಗಗಳು ಓದುಗರ ಮನವನ್ನು ತಟ್ಟನೆ ಸೆರೆಹಿಡಿಯಬಲ್ಲವು.

ಕೀರ್ತನೆ ಸುಳಾದಿ ಉಗಾಭೋಗ-ಮುಖ್ಯವಾದ ಈ ಮೂರು ಪ್ರಕಾರಗಳನ್ನು ಬಿಟ್ಟರೆ ಉಳಿದಂತೆ ವೃತ್ತನಾಮ ಮತ್ತು ದಂಡಕ-ಈ ಎರಡು ಪ್ರಕಾರಗಳು ಶ್ರೀಪಾದರಾಜರಲ್ಲಿ ಕಾಣಿಸಿಕೊಂಡಿವೆ.

. ವೃತ್ತನಾಮ: ವೃತ್ತನಾಮವೆಂಬುದು ಪಲ್ಲವಿ, ಅನುಪಲ್ಲವಿ ಬಳಿಕ ಪದ-ಶ್ಲೋಕ-ಪದ ಶ್ಲೋಕ ಹೀಗೆ ಮುಂದುವರಿಯುವ ಒಂದು ಸಾಹಿತ್ಯ ಪ್ರಕಾರ. ಶ್ರೀಪಾದರಾಜರ ವೃತ್ತನಾಮ ಹೀಗಿದೆ:

ಮಾನನಿಧಿ ಶ್ರೀಕೃಷ್ಣ ಮಧುರೆಗೈದುವನಂತೆ
ಏನು ಪಥವಮ್ಮ ನಮಗೆ ||ಪ||

ಮಾನವೇ ನಿನ್ನಿದಕೆ ಮಾನಿನಿಯರೆಲ್ಲರು
ಆಣೆಯನು ಕಟ್ಟಿವನಿಗಡ್ಡ ನಿಲ್ಲುವ ಬನ್ನಿ ||ಅ.ಪ||

ಕಳ್ಳತನವೇ ನಮ್ಮ ವಲ್ಲಭರು ಈ ಸುಳಿವು
ಎಲ್ಲವನು ಬಲ್ಲರಮ್ಮ
ಒಲ್ಲದಲೆ ನಮ್ಮ ಬಿಟ್ಟರೆ ಒಳಿತು ವನಜಾಕ್ಷ
ಎಲ್ಲಿಗೈದಿದರೆ ನಾವಲ್ಲಿಗೈದುವ ಬನ್ನಿ ||೧||
…………………………………….. ||೨||
……………………………………… ||೩||

ಶ್ಲೋಕ

ಹಲವು ಕಾಲವು ನಿನ್ನ ಸ್ನೇಹಸುಖವ ಹಾರೈಸಿಕೊಂಡಿರುತಿಹ
ಲಲನಾವ್ಯೂಹವ ಬಿಟ್ಟು ಅಕ್ರೂರನೊಡನೆ ನೀ ಮಧುರೆಗೆ ಪೋದರೆ
ಕಳೆಯಲಾಪೆವೇ ಕಾಂತಕೇಳು ದಿನವ ಈ ಕಂತುವಿನ ಬಾಧೆಗೆ
ಘಳಿಗೊಂದು ಯುಗವಾಗಿ ತೋರುತಿಹುದೋ ಜಲಪಾಕ್ಷ ನೀನಿಲ್ಲದೆ

ಪದ

ಬ್ಯಾಡ ಮಧುರಿಗೆ ಪೋಗಬ್ಯಾಡೆಲವೋ ಶ್ರೀಕೃಷ್ಣ
ಬೇಡಿಕೊಂಬೆವೋ ದೈನ್ಯದಿ
ನೋಡು ನಮ್ಮ್ಯಾಲೆ ದಯಮಾಡು ಮದನಂಗೀಡು
ಮಾಡುವುದೇನುಚಿತವೆಲೋ ಮಾಧವ ಕೃಪಾಕರನೆ ||೪||

-ಹೀಗೆ ಹನ್ನೆರಡು ನುಡಿಗಳಲ್ಲಿ ಮುಂದುವರಿಯುವ ಈ ವೃತ್ತನಾಮದಲ್ಲಿ ಸಂಭಾಷಣಾ ತಂತ್ರದ ಸೊಗಸಿದೆ. ಬಿಲ್ಲಹಬ್ಬಕ್ಕೆಂದು ಗೋಕುಲದಿಂದ ಮಧುರೆಗೆ ಹೊರಟು ನಿಂತ ಕೃಷ್ಣನನ್ನು ಗೋಪಿಯರೆಲ್ಲ ಅಡ್ಡಗಟ್ಟಿ ನಿಲ್ಲಿಸುವುದೇ ಇಲ್ಲಿಯ ವಸ್ತು. ಕೃಷ್ಣ-ಗೋಪಿಯರ ಮಾತಿನ ಚಕಮಕಿಯ ಹಿನ್ನೆಲೆಯಲ್ಲಿ ಪರಸ್ಪರರ ವಿಶ್ವಾಸ ಕಳೆಗಟ್ಟಿದೆ. ಈ ಕೃತಿಗೆ ‘ಶೃಂಗಾರ ಪಾರಿಜಾತ’ ವೆಂಬ ಹೆಸರೂ ಇದೆ.

. ದಂಡಕ: ‘ಶ್ರೀ ಲಕ್ಷ್ಮೀನೃಸಿಂಹ ಪ್ರಾದುರ್ಭಾವ ದಂಡಕ’ವೆಂಬ ಹೆಸರಿನ ದಂಡಕ ಶ್ರೀಪಾದರಾಜರ ಮತ್ತೊಂದು ವಿಶಿಷ್ಟರಚನೆ. ಹಿರಣ್ಯ ಕಶಿಪುವಿನ ಸಂಹಾರಾರ್ಥವಾಗಿ ವಿಷ್ಣು ನರಸಿಂಹಾವತಾರಿಯಾಗಿ ಬರುವುದೇ ಕೃತಿಯ ವಸ್ತು. ಭಾಗವತ ಸಪ್ತಮಸ್ಕಂಧದ ಅಷ್ಟಮ ಅಧ್ಯಾಯದಲ್ಲಿ ಬರುವ ಹರಿಯ ನರಸಿಂಹಾವತಾರದ ಕತೆಯ ಅನುವಾದದಂತಿದೆ, ಈ ದಂಡಕ:

ಶ್ರೀರಮಾ ಮಾನಿನೀ ಮಾನಸೇಂದಿವರೋ
ತ್ಫುಲ್ಲ ಸಂಪುಲ್ಲ ಚಂದ್ರಾ ಚಿದಾನಂದ ಸಾಂ
ದ್ರಾ ಸದಾ ಸನ್ನತೇಂದ್ರಾ ನಮೋಪೇಂದ್ರ ನಿ
ಸ್ತಂದ್ರ ನೀ ಕೇಳು …..

-ಹೀಗೆ ಪ್ರಾರಂಭವಾಗಿ ೫೪೬ ಸಾಲುಗಳಲ್ಲಿ ಮುಂದುವರಿಯುವ ಈ ಕೃತಿಯಲ್ಲಿ ಪ್ರತಿಸಾಲಿನಲ್ಲೂ ಐದೈದು ಮಾತ್ರೆಗಳ ಐದೈದು ಗಣಗಳು ಬರುತ್ತವೆ. ನರಸಿಂಹಾವತಾರಿ ಹರಿಭಕ್ತ ಪ್ರಹ್ಲಾದನಿಗೆ ಅನುಗ್ರಹಿಸಿದ ಕತೆಯಿದು. ರಗಳೆಯನ್ನು ನೆನಪಿಸುವ ನಿರರ್ಗಳ ಓಟ ಈ ಪ್ರಕಾರದ ವೈಶಿಷ್ಟ್ಯ. ಇದುವರೆಗೆ ಹರಿದಾಸಸಾಹಿತ್ಯದಲ್ಲಿ ಸಿಕ್ಕಿರುವ ದಂಡಕ ಇದೊಂದೇ.

. ಪ್ರಮುಖ ವಿಭಾಗಗಳು: ಶ್ರೀಪಾದರಾಜರ ಇಂತಹ ಎಲ್ಲ ಉಪಲಬ್ಧ ಕೃತಿಗಳನ್ನೂ ಸಂಗ್ರಹಿಸಿ ಡಾ.ಜಿ. ವರದರಾಜರಾಯರು ಶಾಸ್ತ್ರೀಯವಾಗಿ ಸಂಪಾದಿಸಿಕೊಟ್ಟಿದ್ದಾರೆ. ಒಟ್ಟು ೧೦೧ ಕೃತಿಗಳಿವೆ. .ಆ ಪೈಕಿ ೬೫ ಕೃತಿಗಳು ಖಚಿತವಾಗಿ ಇವರವೇ ಎಂದೂ ೨೮ ಕೃತಿಗಳು ಒಂದೊಂದೇ ಆಕರದಲ್ಲಿ ದೊರೆತಿರುವುದರಿಂದ ಅಷ್ಟು ಖಚಿತವಾಗಿ ‘ಅವು ಶ್ರೀಪಾದರಾಜರ ಕೃತಿಗಳೇ’ ಎಂದು ಹೇಳಲು ಬರುವುದಿಲ್ಲವೆಂಬ ಅಭಿಪ್ರಾಯ ಸಂಪಾದಕರದು. ೨ ಕೃತಿಗಳನ್ನು ಪಾಠಪ್ರಭೇದಗಳೆಂದು ಗುರುತಿಸಿದ್ದರೆ ಉಳಿದ ೬ ಕೃತಿಗಳು ಅಂಕಿತ ಸಂದಿ‌ಗ್ಧವಾಗಿದ್ದು ಅವುಗಳನ್ನೂ ‘ಇವು ಶ್ರೀಪಾದರಾಜರ ಕೃತಿಗಳೇ’ ಎಂದು ಹೇಳಲು ಸಾಧ್ಯವಾಗಿಲ್ಲ. ಅವುಗಳಲ್ಲಿ ಮೂರು ಸುಳಾದಿಗಳು; ಹದಿಮೂರು ಉಗಾಭೋಗಗಳು; ಒಂದು ವೃತ್ತನಾಮ; ಒಂದು ದಂಡಕ. ಉಳಿದ ಎಂಬತ್ಮೂರು ಕೀರ್ತನೆಗಳು. ಈ ಕೃತಿ ಸಮುದಾಯವನ್ನು ಅಭ್ಯಾಸದ ಅನುಕೂಲಕ್ಕಾಗಿ ನಾಲ್ಕು ಮುಖ್ಯಭಾಗಗಳಾಗಿ ವಿಂಗಡಿಸಿಕೊಳ್ಳಬಹುದು:

ಅ. ಆತ್ಮನಿವೇದನೆ
ಆ.ದೈವಭಕ್ತಿ ನಿರೂಪಣೆ
ಇ. ದ್ವೈತ ತತ್ವ ಪ್ರತಿಪಾದನೆ
ಈ. ನೀತಿಬೋಧನೆ.

 

[1]ಶಿವದಾಸ ಗೀತಾಂಜಲಿ, ಪುಟ-೭೭

[2]ಕರ್ನಾಟಕ ಸಂಗೀತವೂ ದಾಸಕೂಟವೂ

[3]ಸಂಶೋಧನ ತರಂಗ, ಪುಟ. ೪೭

[4]ಕರ್ಣಾಟಕದ ಹರಿದಾಸ ಸಾಹಿತ್ಯ, ಪುಟ.೨೩೨