. ಆತ್ಮನಿವೇದನೆ:

ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಧನೆ, ಅಗತ್ಯಗಳಿಗನುಗುಣವಾಗಿ ತನ್ನದೇ ಆದ ಅಭಿವ್ಯಕ್ತಿ ಕ್ರಮವನ್ನು ಕಂಡುಕೊಳ್ಳುತ್ತಾನೆ. ಕೆಲವರು ಕಾಷಾಯವಸ್ತ್ರ ಧರಿಸಿ ತಪಸ್ಸು ಮಾಡಬಹುದು, ಕೆಲವರು ಚಿತ್ರ ಬಿಡಿಸಬಹುದು, ಮತ್ತೆ ಕೆಲವರು ಕಾವ್ಯ ರಚಿಸುತ್ತಲೋ, ಸಂಗೀತ ಹಾಡುತ್ತಲೋ ಮೈಮರೆಯಬಹುದು, ಹಾಗೆಯೇ ಶ್ರೀಪಾದರಾಜಾದಿ ಹರಿದಾಸರು ಹರಿಪರವಾದ ಕೀರ್ತನೆಗಳನ್ನು ರಚಿಸಿ ಹಾಡುವ ಮೂಲಕ ತಮ್ಮ ಸಾಧನೆಯ ಮಾರ್ಗವನ್ನು ಕ್ರಮಿಸಿದ್ದಾರೆ. ಅವರ ಭಕ್ತಿ, ನಿಷ್ಠೆ, ಭಕ್ತಿಯ ವೈವಿಧ್ಯ, ಗಹನವಾದ ತತ್ವವಿಚಾರಗಳನ್ನು ಸರಳ ಭಾಷೆಯ ಮೂಲಕ ಹೇಳುವ ರೀತಿ, ಹಾಗೆ ಹೇಳುವ ಸಂದರ್ಭದ ತೀವ್ರತೆ ಒತ್ತಡ ಭಾವಾವೇಶಗಳಿಗೆ ತಕ್ಕ ಭಾಷೆಯ ಬಳಕೆ, ಅದರ ಬೆಡಗು ಬಳುಕು ಬಾಗುಗಳು ಅಂತಹ ರಚನೆಗಳಿಗೆ ಕಾವ್ಯದ ಲೇಪವನ್ನಿತ್ತಿವೆ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರು ಮಾನವ ಸಮುದಾಯದ ಉತ್ತಮಿಕೆಯನ್ನು ಕುರಿತು ಚಿಂತಿಸಿದವರು. ಹಾಗಾಗಿ ಸಮಾಜದ ಬಗೆಗಿನ ಅವರ ಕಳಕಳಿ ಅವರ ಕೃತಿಗಳ ಮೂಲಕ ಹೊರಹೊಮ್ಮಿರುವುದರಿಂದ ಅವುಗಳನ್ನು ಓದಿದ. ಕೇಳಿದ ಎಲ್ಲರಿಗೂ ಅವು ಆಪ್ಯಾಯಮಾನವಾಗುತ್ತವೆ; ಹೆಚ್ಚು ಹೆಚ್ಚು ಆಪ್ತವಾಗುತ್ತಾ ಹೋಗುತ್ತವೆ. ಮತ್ತು ಪ್ರತಿಯೊಬ್ಬರಿಗೂ ತಮ್ಮ ಮನಸ್ಸಿನ ಪದರಗಳನ್ನೇ ಬಿಚ್ಚಿಟ್ಟ ಅನುಭವವಾಗುವುದೂ ದಿಟ. ಸಂತರೆಲ್ಲರೂ ಮೊದಲು ತಮ್ಮ ವೈಯಕ್ತಿಕ ಸಾಧನೆಯಿಂದ ಆತ್ಮೋದ್ಧಾರ ಮಾಡಿಕೊಂಡು ಅನಂತರ ಸಮಾಜದ ಉತ್ತಮಿಕೆಗಾಗಿ ಶ್ರಮಿಸುವುದರಿಂದ ಅವರ ಮಾತಿಗೆ ಅಧಿಕೃತತೆ ತಾನಾಗಿ ಒದಗುತ್ತದೆ. ಅವರು ಭಗವಂತನಲ್ಲಿ ತಮ್ಮ ಅಂತರಂಗವನ್ನು ತೋಡಿಕೊಂಡು ಪಶ್ಚಾತ್ತಾಪದ ಮೂಸೆಯಲ್ಲಿ ಬೆಂದು ಪರಿಶುದ್ಧರಾಗಿ ಆ ಮೂಲಕ ಲೋಕವನ್ನು ತಿದ್ದಲು ಅಧಿಕಾರವನ್ನು ಗಳಿಸುತ್ತಾರೆ. ಈ ಒಂದು ಹಂತದಲ್ಲಿ ಭಕ್ತನ ಮನಸ್ಸಿನ ಹಂಬಲ ಕಳವಳ ಕಳಕಳಿಗಳು ಹೇಗಿದ್ದವು? ಅವನ ಆಂತರಿಕ ಒಳತೋಟಿಯೇನಿತ್ತು?= ಇತ್ಯಾದಿ ವಿಚಾರಗಳು ಆಯಾ ಸಂತರ ಆತ್ಮನಿವೇದನೆಯ ಕೃತಿಗಳ ಅಭ್ಯಾಸದಿಂದ ತಿಳಿಯುತ್ತವೆ. ಅಂತೆಯೇ ಶ್ರೀಪಾದರಾಜರ ಮನದ ತಳಮಳಗಳನ್ನು ಅವರ ಆತ್ಮನಿವೇದನಾತ್ಮಕ ಕೀರ್ತನೆಗಳಿಂದ ಗ್ರಹಿಸಬಹುದು. ಅವರ ಮನಸ್ಸು ಭಗವಂತನತ್ತ ಹರಿದಾಗ, ಆ ಬೆಳಕಿನಲ್ಲಿ ಅದುವರೆಗಿನ ತಮ್ಮ ಬಾಳು ವ್ಯರ್ಥವೆಂಬ ವ್ಯಥೆ ಅವರನ್ನು ಕಾಡಿದೆ:

ಅನ್ನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೊ
ಅನ್ನಂತ ಕಾಲದಲ್ಲಿ ನಿನ್ನವನೆನಿಸದೆ ಮೂರುಖನಾದೆನೊ
ಅನ್ನಂತ ಕಾಲದಲ್ಲಿ ನಿನ್ನ ಚರಣರತಿಯಿಲ್ಲದೆ ನೊಂದೆನೊ
ಅನ್ನಂತ ಕಾಲದಲ್ಲಿ ಅದಾವ ಪುಣ್ಯದಿಂದ ಬಂದು ಇಂದು
ನಿನ್ನವನೆನಿಸಿದೆ ಅದಾವ ಪುಣ್ಯದಿಂದಲೆನ್ನಮನ
ನಿನ್ನಲ್ಲೆರಗಿತೊ ನೋಯದಂತೆ
ಎನ್ನ ಪೊರೆದು ಪಾಲಿಸೋ ದೀನನಾಥ ಶ್ರೀ ರಂಗವಿಠಲ ||೧||

……………………….

ನೀ ಕರುಣಿಯೆಂದು ನಿನ್ನ ನಾ ಮರೆಹೊಕ್ಕೆ
ನೀಕರಿಸದೆ ಎನ್ನ ಶ್ರೀಕಾಂತ ಕಾಯಯ್ಯ

……………………………

ಕಂದರ್ಪನೆಂದೆಂದು ಕಾಡದಂತೆ ಮಾಡೋ
…………………………

ಎನ್ನ ಮನವನು ನಿನ್ನ ಚರಣದಲೊಮ್ಮೆ ಎರಗಿಸೋ
………………………….

ಅಮೃತ ಒಸರುವ ಪದಪದುಮದ
ನೆಳಲ ನೆಲೆವನೆಯಲಿ ಎನ್ನನಿರಿಸೊ ರಂಗವಿಠಲ

ಜತೆ

ಬೆಂದ ಸಂಸಾರದಿ ಬಂದು ನೊಂದುಬಳಲಿದೆನಯ್ಯ
ನಂದನಂದನ ಕಾಯೊ ರಂಗವಿಠಲ

-ಎಂದು ಮುಂತಾಗಿ ಆ ರಂಗವಿಠಲನೆದುರು ತಮ್ಮ ದುಗುಡ ದುಮ್ಮಾನಗಳನ್ನು ತೋಡಿಕೊಂಡು ಮಮ್ಮಲ ಮರುಗುವರು. ಇಲ್ಲಿಯ ಪದಗಳ ಪುನರುಕ್ತಿ ಹೃದಯದ ಆರ್ತತೆಯನ್ನು ಮೊಗೆಮೊಗೆದು ತೆಗೆದ ಪರಿಣಾಮವನ್ನು ಬೀರಿರುವುದಲ್ಲದೆ, ಕೀರ್ತನೆಯಲ್ಲಿ ನಾದಮಯತೆ ಭಾವುಕತೆಗಳೂ ಸಾಧಿಸಿವೆ. ಜನ್ಮಜನ್ಮಗಳಲ್ಲಿ ತೊಳಲಿ ಬಳಲಿ ಬೆಂದು ನೊಂದು ಈಗ ಮಾನವಜನ್ಮ ಪಡೆದಿರುವ ತಮ್ಮನ್ನು ಸಲಹಬೇಕೆನ್ನುವ ಶ್ರೀಪಾದರಾಜರ ಈ ಮೊರೆ ಓದುಗರ ಹೃದಯದಲ್ಲೂ ಅನುರಣಿಸುತ್ತದೆ.

ನಾ ನಿನಗೇನು ಬೇಡುವುದಿಲ್ಲ ಎನ್ನ
ಹೃದಯ ಕಮಲದೊಳು ನೆಲೆಸಿರು ಹರಿಯೆ

-ಎಂದು ಶ್ರೀಹರಿಯನ್ನು ಪ್ರಾರ್ಥಿಸುತ್ತಾ, ಶಿರನಿನ್ನಲ್ಲೆರಗಲಿ, ಚಕ್ಷುಗಳು ನಿನ್ನ ನೋಡಲಿ, ಕರ್ಣ ಗೀತಂಗಳ ಕೇಳಲಿ, ನಾಸಿಕ ನಿರ್ಮಾಲ್ಯ ಆಘ್ರಾಣಿಸಲಿ – ಎಂದು ಮುಂತಾಗಿ ತಮ್ಮ ತನುಮನಗಳನ್ನೆಲ್ಲ ಹರಿಯ ಸೇವೆಗೆ ಸಮರ್ಪಿಸಿರುವರು. ಭಗವಂತನ ‘ಚರಣರತಿ’ಯನ್ನು ಹಂಬಲಿಸಿ ಬೇಡುವರು. ನಿನ್ನ ಬಾಗಿಲು ಕಾಯುವ ಭಾಗ್ಯವನ್ನು ಕರುಣಿಸೆನ್ನುವರು. ಹೇಗೆ ತಾಯಿ ತನ್ನ ಮಗುವನ್ನು ಅನಾಥವಾಗಲು ಬಿಡುವುದಿಲ್ಲವೋ ಹಾಗೆ ನೀನು ನನ್ನನ್ನು ವ್ಯರ್ಥ ಹೋಗಲು ಬಿಡಬೇಡವೆಂದು ಹರಿಗೆ ದುಂಬಾಲು ಬೀಳುವರು.

ಮನುಷ್ಯನ ಹಠಮಾರಿ ಮನಸ್ಸು ತನ್ನ ಚಂಚಲತೆಯನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುತ್ತದೆಯೆ? ಅದರ ದುರ್ಬುದ್ಧಿಯನ್ನು:

ಕಂಡಕಂಡ ಕಡೆಗೆ ಪೋಪ ಚಂಚಲಮನವು
ಪಿಂಡ ತಿಂಬಲ್ಲಿ ಬಹು ನಿಷ್ಠ ತಾನು
ಭಂಡಾಟದವನೆಂದು ಬಯಲಿಗೆ ತಾರದೆ
ಕೊಂಡಾಡುವಂತೆ ಭಕುತಿಯ ಕೊಟ್ಟು ಸಲಹಯ್ಯ

-ಎನ್ನುವಲ್ಲಿ ಬಯಲು ಮಾಡಿರುವರು.

‘ಚಿತ್ತಜನಯ್ಯನ ಚಿಂತಿಸುಮನವೆ’ – ಎಂದು ಮನಸ್ಸಿಗೆ ಉಪದೇಶಿಸಿರುವರು. ‘ಕರುಣದಿ ತನುಮನ ಧನಂಗಳೆಲ್ಲವು ನಿನ್ನ ಚರಣಕೊಪ್ಪಿಸಿದ ಬಳಿಕ ಮರಳಿ ಎನ್ನ ಮರುಳು ಮಾಡುವರೆ’, ‘ಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೇ ದೇವ, ಕರುಣಾಕರ ನಿನ್ನ ಚರಣದಡಿಯೊಳಿಟ್ಟು ಕಾಯೊ ರಂಗವಿಠಲ’-ಎಂದು ತಮ್ಮ ಸಮಸ್ತವನ್ನೂ ಹರಿಗೊಪ್ಪಿಸಿ ಅವನು ತಮ್ಮನ್ನು ಕಾಯಲೇ ಬೇಕೆಂದು ಆಗ್ರಹಿಸುವರು.

ಎನ್ನಮನ ವಿಷಯಂಗಳಲಿ ಮುಣುಗಿತೊ
ಎನ್ನ ತನುವು ವೃದ್ಧಾಪ್ಯ ಐದಿತೊ..
ಅಂತಕರ ಕರೆಬಾಹೊ ಹೊತ್ತಾಯಿತೊ
ಕಾಲವಿಳಂಬವಿನಿತಿಲ್ಲವಯ್ಯಾ
ವ್ಯಾಳೆ ಅರಿತು ಬಿನ್ನಹ ಮಾಡಿದೆ

-ಎಂದು ಮುಂತಾಗಿ, ಇರುವ ಅಲ್ಪ ಕಾಲಾವಧಿಯಲ್ಲಿ ತಮ್ಮನ್ನು ಆ ಸ್ಥಿತಿಯಿಂದ ಮೇಲೆತ್ತಬೇಕೆಂಬುದಾಗಿ ಅನನ್ಯ ಶರಣಾಗತಿಯಿಂದ ಹರಿಯಲ್ಲಿ ಮೊರೆಯಿಡುವರು. ನನಗೆ ನಿನ್ನ ಕಥಾಮೃತ, ನಿನ್ನ ನಾಮದುಚ್ಚರಣೆ, ನಿನ್ನಡಿಗೆರಗುವ ಮನಸ್ಸು, ನಿನ್ನ ಬಾಗಿಲ ಕಾಯುವ ಭಾಗ್ಯ ಇಷ್ಟನ್ನೇ ಕೊಡು ಸಾಕು…. “ಇದನಾದರು ಕೊಡದಿದ್ದರೆ ನಿನ್ನ ಪಾದಕಮಲವ ನಂಬಿ ಭಜಿಸುವುದೆಂತೋ?” – ಎನ್ನುವರು. ಹೊಟ್ಟೆಬಟ್ಟೆಗಳಿಗಿಲ್ಲವೆಂದಾಗಲೀ ಸಾಂಸಾರಿಕ ಜೀವನ ಹಸನಾಗಬೇಕೆಂದಾಗಲೀ ಸಂಬಳ ಸಾಲದು ಒಡವೆ ಒಡ್ಯಾಣಗಳಿಲ್ಲವೆಂದಾಗಲೀ ಅಥವಾ ತಮಗೆ ರಾಜ್ಯಭೋಗಗಳಾಗಬೇಕೆಂದಾಗಲೀ ತಾವು ಹರಿಯನ್ನು ಬೇಡುತ್ತಿಲ್ಲ; ತಮ್ಮ ಅವಗುಣಗಳನ್ನೆಣಿಸದೆ ಅವನ ದಾಸರ ದಾಸರ ದಾಸ್ಯವನ್ನು ದಯಪಾಲಿಸಬೇಕೆಂದು ಮಾತ್ರ ಬೇಡುತ್ತಿರುವುದಾಗಿ ಸ್ಪಷ್ಟಪಡಿಸುವರು-ಇದೇ ಭಕ್ತನ ನೈತಿಕ ಕೆಚ್ಚು.

ಹೀಗೆ ಪರಿಪರಿಯಾಗಿ ತಮ್ಮ ಮನದ ಕಳವಳವನ್ನು ಆ ಶ್ರೀಹರಿಯಲ್ಲಿ ತೋಡಿಕೊಂಡಾಗ ಶ್ರೀಪಾದರಾಜರ ಮನಸ್ಸು ಸ್ವಲ್ಪ ನೆಮ್ಮದಿಯನ್ನು ಕಾಣುವಂತಾಗಿದೆ. ಜೊತೆಗೆ ಮನುಷ್ಯನ ಇಡೀ ಬದುಕು ಆ ಭಗವಂತನ ಕೃಪೆಯೆಂಬ ಅರಿವು ಅವರಿಗಿದೆ. ಅವನು ಕೊಟ್ಟದ್ದನ್ನು ತಾವು ಅನುಭವಿಸಬೇಕೆನ್ನುವ ಕಟು ಸತ್ಯದ ಹಿನ್ನೆಲೆಯಲ್ಲಿ ಶ್ರೀಪಾದರಾಜರ ಮನಸ್ಸು ಹೀಗೆ ಹಾಡಿದೆ:

ಇಟ್ಟ್ಹಾಂಗೆ ಇರುವೆನೋ ಹರಿಯೆ ಎನ್ನ ದೊರೆಯೇ ||ಪ||

ಸೃಷ್ಟಿವಂದಿತ ಪಾದ ಪದಮ ಶ್ರೀಹರಿಯೇ ||ಅ.ಪ||

ಸಣ್ಣ ಶಾಲ್ಯೋದನ ಬೆಣ್ಣೆಕಾಸಿದ ತುಪ್ಪ
ಚಿನ್ನ ಹರಿವಾಣದಲಿ ಭೋಜನ
ಘನ್ನ ಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ
ದನ್ನ ಕಾಣದೆ ಬಾಯ್ಬಿಡಿಸುವಿ ಹರಿಯೇ ||೧||

ಕೆಂಪಿಲಿ ಹೊಳೆವ ಪೀತಾಂಬರ ಉಡಿಸುವಿ
ಸೊಂಪಿನಂಚಿನ ಶಾಲು ಹೊದಿಸುವಿಯೋ
ಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆ
ಕಪರ್ದಕ ಕೌಪೀನವು ದೊರೆಯದೊ ಹರಿಯೇ ||೨||

ಚಂದ್ರಶಾಲೆಲಿ ಚಂದ್ರಕಿರಣದಂತೊಪ್ಪುವ
ಚಂದದ ಮಂಚದೊಳ್ಮಲಗಿಸುವಿ
ಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮ
ಮಂದಿರದೊಳು ತೋಳ್ತಲಗಿಂಬು ಹರಿಯೇ ||೩||

ನರಯಾನದೊಳು ಕ್ಷಣ ನರವರನೆನಿಸುವಿ
ವರಛತ್ರ ಚಾಮರ ಹಾಕಿಸುವಿ
ಕರುಣಾನಿಧೇ ನನ್ನ ಕರುಣ ತಪ್ಪಿದ ಮ್ಯಾಲೆ
ಚರಣರಕ್ಷೆಯು ದೊರೆಯದು ಶ್ರೀಹರಿಯೇ ||೪||

ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತರ
ಸಂಗವಿರಲಿ ದುಷ್ಟ ಸಂಗ ಬ್ಯಾಡ
ಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿ
ಭಂಗವ ಪಡಲಾರೆ ಶ್ರೀರಂಗವಿಠಲ ಹರಿಯೇ ||೫||

ಜೊತೆಗೆ, ‘ತೇನವಿನಾ ತೃಣಮಪಿ ನಚಲತಿ’, ‘ಶ್ರೀಹರಿ ಸರ್ವಸ್ವತಂತ್ರ ‘ಜೀವಿಗಳಿಗೆ ದತ್ತ ಸ್ವಾತಂತ್ಯ್ರಮಾತ್ರ’- ಇತ್ಯಾದಿ ತತ್ವಗಳು ಈ ಕೀರ್ತನೆಯ ನುಡಿಗಳಲ್ಲಿ ಢಾಳಾಗಿ ಅಭಿವ್ಯಕ್ತವಾಗಿವೆ.

‘ಯಾಕೆ ಪುಟ್ಟಿಸಿದಿ ನೀ ಸಾಕಲಾರದೆ ಜಗ
ದೇಶ ಕಾರಣಪುರುಷನೆ ಕೃಷ್ಣ’

-ಎನ್ನುವ ಕೀರ್ತನೆಯಲ್ಲಂತೂ ಶ್ರೀಪಾದರಾಜರ ಮನದ ಹತಾಶೆ, ಆರ್ತತೆಗಳು ಮುಗಿಲು ಮುಟ್ಟಿವೆ. ಹನ್ನೊಂದು ದೀರ್ಘನುಡಿಗಳಲ್ಲಿ ಹರಿಭಕ್ತನೊಬ್ಬನು ತನ್ನ ಆಯಸ್ಸಿನ ಮೂವತ್ತಾರು ವರ್ಷಗಳನ್ನು ವ್ಯರ್ಥವಾಗಿ ಕಳೆದು, ಆ ಬಳಿಕ ಶ್ರೀಹರಿಯನ್ನು ನಂಬಿ ಮರೆಹೊಕ್ಕು ತನ್ನ ಮನಸ್ಸಿನ ವೇದನೆಯನ್ನೆಲ್ಲ ಅವನ ಮುಂದೆ ಬಿಚ್ಚಿಟ್ಟಿರುವ ಚಿತ್ರಣವಿದು.

ಒಡಲಿಗನ್ನವಕಾಣೆ ಉಡಲು ಅರಿವೆಯ ಕಾಣೆ
ಗಡಗಡನೆ ನಡುಗುತಿಹೆನೋ ಕೃಷ್ಣ

…………………….

ಕುಡುತೆ ಕೊಡುವವರಿಲ್ಲ ನುಡಿಯ ಕೇಳುವರಿಲ್ಲ
ಬಡತನವು ಕಂಗೆಡಿಸಿತೋ ಕೃಷ್ಣ
ಕಡೆ ಹಾಯಿಸುವರ ಕಾಣೆ ನಡುಮಡುವಿನೊಳು ಕೈ
ಬಿಡದೆ ದಡವನು ಸೇರಿಸೋ ಕೃಷ್ಣ ||೧|

……………………….

ಸೃಷ್ಟಿಯೊಳಗೆನ್ನಂಥ ಕೆಟ್ಟ ಪಾಪಿಷ್ಠ ಜನ
ಘಟ್ಟಿಸಲಿಲ್ಲವೇನೋ ಕೃಷ್ಣ
…………………

ಆಳುದೇಹವು ಗೇಣುಕೀಳಾಗಿ ಪಲ್ಮೊರೆದು
ಖೂಳಜನರ ಮನೆಗೆ ಕೃಷ್ಣ
ಹಾಳು ಒಡಲಿಗೆ ತುತ್ತುಕೂಳಿಗೆ ಹೋಗಿ ಅವರ
ವಾಲೈಸಲಾರೆನಲ್ಲೋ ಕೃಷ್ಣ ||೨||

ಬಾಳು ಈ ಪರಿಯಾದ ಮ್ಯಾಲೆ ಭೂಮಿಯಲಿ ಬಹು
ಕಾಲ ಕಳೆಯುವುದುಚಿತವೆ ಕೃಷ್ಣ
ಆಲಸ್ಯ ಮಾಡದಲೆ ಈ ವ್ಯಾಳ್ಯದಲಿ ಅರಿತು
ಪಾಲಿಸಲು ಬಹು ಕೀರ್ತಿಯೋ ಕೃಷ್ಣ ||೩||

-ಎಂದು ಮುಂತಾಗಿ ಬಡತನದ ನಗ್ನ ಚಿತ್ರಣವನ್ನು ಕೊಡುವ ಮೂಲಕ, ಅವನ ಅಸಹಾಯಕ ಪರಿಸ್ಥಿತಿಯನ್ನು ಎತ್ತಿತೋರಿಸುವ ಮೂಲಕ, ಹೃದಯವೇ ಬಾಯಿಗೆ ಬಂದಂತೆ ಸಾಗಿದೆ. ಅಸಹಾಯಕನಾದ ಬಡವನ ಮೊರೆ. ‘ಇತ್ತಬಾರೆಂತೆಂದು ಹತ್ತಿಲಿಗೆ ಕರೆದೊಂದು ತುತ್ತು ಕೊಡುವರ ಕಾಣೆನೋ ಕೃಷ್ಣ’- ಎಂಬುದು ಬಳಲಿದ ಮನದ ಅಳಲು. ‘ಈರೇಳು ಲೋಕಕಾಧಾರವಾದವಗೆ ಬಲು ಭಾರವಾದವನೆ ನಾನು’-ಎನ್ನುವ ಅಹವಾಲು! ‘ಹರಿಯಾತ್ರೆ ಮಾಡಲಿಲ್ಲ ಹರಿಮೂರ್ತಿ ನೋಡಲಿಲ್ಲ ಹರಿದಾಸ ಸಂಗವಿಲ್ಲ… ಅರಿತರಿತು ಮನ ವಿಷಯಕೆರಗಿ ಹರುಷವ ತಾಳಿ ಬರಿದಾಯಿತಾಯುವೆಲ್ಲ’ – ಎನ್ನುವ ನಿರಾಶೆ.

ಉರಿಯೊಳಗೆ ಬಿದ್ದು ಶರೀರವನು ಕಳೆಯಲೊ
ಪರುವತವನೇರುರುಳ್ಯಲೋ
ಗರಳ ಮಡುವನೆ ಧುಮುಕಿ ಉರಗಫಣ ತುಳಿಯಲೊ
ಎರಡೊಂದು ಶೂಲಕ್ಹಾಯಲೋ ಕೃಷ್ಣ
ಕೊರಳಿಗ್ಹಗ್ಗವ ಹಾಕಿ ಮರವೇರಿ ಕರಬಿಡಲೊ
ಕರಗಸದಿ ಶಿರಗೊಯ್ಯಲೋ ಕೃಷ್ಣ

-ಎನ್ನುವ ಚಡಪಡಿಕೆ. ಭಗವಂತ ತನ್ನ ಮೊರೆ ಕೇಳಲಿಲ್ಲವೆಂದು ಭಕ್ತ ತನ್ನ ಪ್ರಾಣತ್ಯಾಗ ಮಾಡಲೂ ಸಿದ್ಧ! ‘ಕಷ್ಟಪಟ್ಟ ಮಗನೆಂದು ದೃಷ್ಟಿನೀರೊರೆಸೆನ್ನ ಪೊಟ್ಟೆಯೋಳ್ಪಿಡಿವರಾರೋ ಕೃಷ್ಣ’ – ಎನ್ನುವ ದಟ್ಟವಾದ ಅನಾಥ ಪ್ರಜ್ಞೆ. ಇದಕ್ಕೆಲ್ಲ ಪರಿಹಾರವಾಗಿ ಕೃಷ್ಣ ಥಟ್ಟನೆ ಬಂದು ಇಷ್ಟವನು ಸಲಿಸಿ ಕಾಯುವನೆಂಬ ನಿರೀಕ್ಷೆ ಹಾಗೂ ಬಯಕೆ. ಈ ಇಡೀ ಕೀರ್ತನೆ ಮನುಷ್ಯ ಮಾತ್ರರ ಕಿತ್ತು ತಿನ್ನುವ ಬಡತನ. ಕೀಳರಿಮೆ, ಅಸಹಾಯಕತೆ, ಅನಾಥ ಪ್ರಜ್ಞೆ, ಇತರರು ತನ್ನನ್ನಾಧರಿಸಿ ಸಂತೈಸಬೇಕೆನ್ನುವ ಮನದಾಸೆ, ಆಗಿಹೋದುದಕ್ಕೆ ವಿಷಾದ, ಪಶ್ಚಾತ್ತಾಪ, ಭಗವಂತ ಬಂದು ಸಂತೈಸುವನೆಂಬ ತುಂಬು ನಂಬುಗೆ – ಅವೆಲ್ಲವುಗಳಿಂದುಂಟಾದ ಚಿತ್ತ ವಿಹ್ವಲತೆ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಡುತ್ತದೆ. ಶ್ರೀಪಾದರಾಜರ ವೈಯಕ್ತಿಕ ಮೊರೆಯಾಗಿ ಹೊರಟ ಭಾವನೆಗಳು ದೀನದಲಿತರೆಲ್ಲರ ಮನದ ಮಾತಾಗಿ ಮೈದುಂಬಿ ಸಾರ್ವತ್ರಿಕತೆಯನ್ನು ಪಡೆದುಕೊಂಡಿದೆ.

ದೈವಭಕ್ತಿ ನಿರೂಪಣೆ: ಸಾಮಾನ್ಯವಾಗಿ ಭಕ್ತರು-ಮನುಷ್ಯರ ನಡುವಿನ ಪರಸ್ಪರ ಸಂಬಂಧಗಳನ್ನು ಭಕ್ತ-ಭಗವಂತರ ನಡುವೆಯೂ ಕಲ್ಪಿಸಿಕೊಂಡು ಭಗವಂತನನ್ನು ಆರಾಧಿಸುವುದು, ಆ ಮೂಲಕ ಭಕ್ತಿಸಾಧನೆ ಮಾಡುವುದು ಕಂಡುಬರುತ್ತದೆ. ಶ್ರೀಪಾದರಾಜರ ಆತ್ಮನಿವೇದಕ ಕೀರ್ತನೆಗಳೆಲ್ಲ ಭಗವಂತನನ್ನು ಒಡೆಯನೆಂದೂ ತಾವು ಅವನ ಸೇವಕರೆಂದೂ ಭಾವಿಸಿ ಹಾಡಿರುವಂಥವೇ ಆಗಿವೆ. ಈ ಭಾವನೆಯಿಂದ ಭಕ್ತಿಸಾಧನೆ ಮಾಡುವುದನ್ನು ಭಕ್ತಿಯ ಪರಿಭಾಷೆಯಲ್ಲಿ ‘ದಾಸ್ಯ ಭಕ್ತಿ’ ಅಥವಾ ‘ದಾಸ್ಯಭಾವ’ವೆಂದು ಕರೆಯುವುದು ರೂಢಿ. ಹರಿದಾಸರೆಂದು ತಮ್ಮನ್ನು ಕರೆದು ಕೊಳ್ಳುವಲ್ಲಿಯೇ ಅವರ ದಾಸ್ಯಭಾವ ಪ್ರಕಟವಾಗಿದೆ. ‘ವಾಸುದೇವನೆ ನಿನ್ನ ದಾಸರ ದಾಸರ ದಾಸರ ದಾಸ್ಯವ ಕೊಡು’ – ಎಂದು ಶ್ರೀಪಾದರಾಜರು ತಮ್ಮ ಇಷ್ಟದೈವವಾದ ರಂಗವಿಠಲನನ್ನು ಬೇಡಿಕೊಂಡಿರುವರು. ‘ಒಡೆಯ ನಿನ್ನಡಿಗೆರಗುವ ಮನವನ್ನು ಕೊಡು; ನಿನ್ನ ಬಾಗಿಲಕಾಯುವ ಭಾಗ್ಯವನ್ನು ಕೊಡು’ – ಎಂಬುದೇ ದಾಸರ ಪ್ರಾರ್ಥನೆ. ಹರಿಯ ದಾಸರಾಗುವುದಕ್ಕಿಂತ ಅವನ ದಾಸರ ದಾಸರಾಗುವುದು ಹೆಚ್ಚಿನದು ಅವರ ದೃಷ್ಟಿಯಲ್ಲಿ.

ನೀನೆ ಬಲ್ಲಿದನೋ ರಂಗಾ
ನಿನ್ನ ದಾಸರು ಬಲ್ಲಿದರೋ ||ಪ||

ನಾನಾತೆರದಿ ನಿಧಾನಿಸಿ ನೋಡಲು
ನೀನೇ ಭಕ್ತರಾಧೀನನಾದ ಮ್ಯಾಲೆ ||ಅ.ಪ||

-ಎಂದು ಹರಿಯನ್ನೇ ಕೇಳುತ್ತಾ ಧರ್ಮರಾಯ ಕರೆದಲ್ಲಿಗೆ ಹೋಗುವ, ನರನ ಸಾರಥಿಯಾದ, ಬಲಿಯ ಬಾಗಿಲನ್ನು ಕಾಯ್ದ, ತನ್ನನ್ನು ಬಾಣದಿಂದ ಹೊಡೆದ ಭೀಷ್ಗಮನಿಗೆ ಅಭಯವಿತ್ತ, ಭಕ್ತಬಾಲಕ ಪ್ರಹ್ಲಾದನಿಗಾಗಿ ಅವತಾರವನ್ನೇ ಎತ್ತಿ ಬರುವ ಶ್ರೀಹರಿಯ ಭಕ್ತವತ್ಸಲತೆ ಕಾರುಣ್ಯಗಳನ್ನು ಗುರುತಿಸುತ್ತಲೇ ಅವನು ಭಕ್ತಪರಾಧೀನನೆಂಬುದನ್ನೂ ಸಾಧಿಸಿ, ಹರಿಗಿಂತ ಅವನ ದಾಸರೇ ಶ್ರೇಷ್ಠರೆಂದು ಸಾಧಿಸಿಬಿಟ್ಟಿದ್ದಾರೆ.

ಭಕ್ತ-ಭಗವಂತರ ನಡುವೆ ತಾಯಿ-ಮಗುವಿನ ಸಂಬಂಧವನ್ನು ಕಲ್ಪಿಸಿಕೊಂಡು ಆರಾಧಿಸುವುದು. ‘ವಾತ್ಸಲ್ಯಭಕ್ತಿ’ ಅಥವಾ ‘ವಾತ್ಸಲ್ಯಭಾವ’, ಕೃಷ್ಣನನ್ನು ಮಗುವಾಗಿ ಕಲ್ಪಿಸಿಕೊಂಡು ತಾವು ಯಶೋದೆಯಾಗಿ, ಒಬ್ಬ ಗೋಪಿಯಾಗಿ ಮಗು ಕೃಷ್ಣನನ್ನು ಅಪ್ಪಿ ಮುದ್ದಾಡಿ ಹಾಡಿ ಊಡಿ ಅಲಂಕರಿಸಿ ಸಂಭ್ರಮಪಟ್ಟಿದ್ದಾರೆ, ಶ್ರೀಪಾದರಾಜರು, ಭಾಗವತದ ದಶಮಸ್ಕಂಧದಲ್ಲಿ ಬರುವ ಕೃಷ್ಣನ ಬಾಲ್ಯದ ವರ್ಣನೆ ಹರಿಭಕ್ತರೆಲ್ಲರಿಗೂ ರಸಗವಳ. ಹರಿದಾಸರೂ ಇದಕ್ಕೆ ಹೊರತಲ್ಲ. ಹರಿದಾಸರಲ್ಲಿ ಆದ್ಯಪ್ರವರ್ತಕರೆನಿಸಿರುವ ಶ್ರೀಪಾದರಾಜರಲ್ಲೇ ಈ ವಾತ್ಸಲ್ಯಭಾವದ ವಾಹಿನಿ ಧುಮ್ಮಿಕ್ಕಿ ಹರಿದಿದೆ. ಮಗು ಕೃಷ್ಣನನ್ನು ‘ಪೋಪು ಹೋಗೋಣ ಬಾರೋ ರಂಗ | ಪೋಪು ಹೋಗೋಣ ಬಾರೋ ಕೃಷ್ಣ’- ಎಂದು ಕರೆಯುವಲ್ಲಿ ಶ್ರೀಪಾದರಾಜರು ತಾವು ಯಶೋದೆಯೇ ಆಗಿಬಿಟ್ಟಿದ್ದಾರೆ. ಮಗು ಕೃಷ್ಣ ಸ್ವಲ್ಪಕಾಲ ಮರೆಯಾದರೂ ತಾಯಿಯ ಆತಂಕ ಅಷ್ಟಿಷ್ಟಲ್ಲ. ಆಟವಾಡಿ ಮನೆಗೆ ಬಂದ ಮಗುವನ್ನು:

ಎಲ್ಲ್ಯಾಡಿ ಬಂದ್ಯೋ ಎನ್ನ ರಂಗಯ್ಯ ನೀ
ಎಲ್ಯಾಡಿ ಬಂದ್ಯೋ ಎನ್ನ ಕಣ್ಣಮುಂದಾಡದೆ

-ಎಂದು ತುಂಬು ವಾತ್ಸಲ್ಯದಿಂದ ಅಪ್ಪಿ ಆಕ್ಷೇಪಿಸುವಳು. ‘ಹಾಲು ಸಕ್ಕರೆ ಕೊಟ್ಟರೆ ಒಲ್ಲದೆ ಜೊತೆಗಾರರನ್ನೂ ಬಿಟ್ಟು ಎಲ್ಲಿಗೆ ಹೋಗಿದ್ದೆ? ಅಷ್ಟ ದಿಕ್ಕಿಲಿ ಅರಸಿ ಕಾಣದೆ ಬಹಳ ದೃಷ್ಟಿಗಟ್ಟೆನು’ – ಎಂದು ತನ್ನ ಆತಂಕ ತಳಮಳಗಳನ್ನು ತೋಡಿಕೊಳ್ಳುವಳು. ‘ನೊಸಲಲ್ಲಿ ಕಿರು ಬೆವರಿಟ್ಟಿದೆ…. ಬೆರಳ ಉಂಗುರವೆಲ್ಲಿ ಹೋಗಿದೆ ನಿನ್ನ ಕೊರಳ ಪದಕವೆಲ್ಲಿ ನೀಗಿದೆ’- ಎಂದು ತನ್ನ ಸೆರಗಿನಿಂದ ಮಗುವಿನ ಮೋರೆಯೊರೆಸುತ್ತಾ ತನಿಖೆ ನಡೆಸುತ್ತಿರುವ ಗೋಪಿಯ ಚಿತ್ರ ಮನಸ್ಸಿಗೆ ಮುದನೀಡುವಂಥದು.

ಕೃಷ್ಣ ಚೆನ್ನಾರ ಚೆಲುವ. ಚಿಗುರು ಬೆರಳು; ಎಳೆ ಮಾವಿನ ಸೊಬಗಿನ ತಳಿರುಪೋಲುವ ಕೆಂದುಟಿ; ಸುಳಿಪಲ್ಲು; ಮಂದಹಾಸವು; ನಳಿನದಳಾಕ್ಷ; ಥಳಥಳಿಪ ಕುಂಡಲ; ಪೊಳೆವ ನಾಸಿಕ; ಲಲಾಟ; ಚೆಲುವ ಪುಬ್ಬು; ಕಸ್ತುರಿಯ ತಿಲಕವೊಪ್ಪುವ ಮುಖ; ಕೋಟಿಹೊನ್ನು ಬಾಳುವ ಕಿರೀಟ; ಬಗೆಬಗೆಯ ರತುನಗಳ ನಗಗಳನ್ನಿಟ್ಟಿದ್ದಾನೆ. ಅಂಥವನು ಬೀದಿಯಲ್ಲಿ ಹೊರಟರೆ ಎಲ್ಲರ ಕಣ್ಣೂ ಅವನ ಮೇಲೆಯೇ. ಅವರೆಲ್ಲರ ದೃಷ್ಟಿ ತನ್ನ ಮಗುವಿಗೆಲ್ಲಿ ತಾಕುವುದೋ ಎಂಬ ಆತಂಕ, ಕಳವಳ ತಾಯಿಗೆ. “ದೃಷ್ಟಿ ತಾಕೀತೋ ಬೀದಿ ಮೆಟ್ಟಬ್ಯಾಡವೋ”- ಎಂದು ಮಗುವಿಗೆ ಬುದ್ದಿಹೇಳಿ ತಡೆಯುತ್ತಾಳೆ. ಅತ್ತ ಗೋಪಿಯರಿಗೆ ಕೃಷ್ಣ ಬಂದನೆಂದರೆ ಸಾಕು, ಮೈಮರೆತು ಅವನ ಸುತ್ತ ಮುತ್ತಿಕೊಳ್ಳುವರು. ಅವನ ಸುಂದರ ಚಿಗುರುಪಾದಗಳನ್ನು ಕಂಡು ಅವರ ಮೈನವಿರೇಳುವುದು:

ಇಕ್ಕೋ ನೋಡೆ ರಂಗನಾಥನ ಚಿಕ್ಕಪಾದವ
ಸಿಕ್ಕಿತೆ ಶ್ರೀ ಲಕ್ಷ್ಮೀಪತಿಯ ದಿವ್ಯಪಾದವ

-ಎಂದು ಹಾಡತೊಡಗುವರು. ಕಂಸಾಸುರನನ್ನು ಕೊಂದು ಬಲಿಯನ್ನು ಮೆಟ್ಟಿ ಭಾಗೀರಥಿಯನ್ನು ಪಡೆದ ಪಾದವದು. ಬಂಡೆಯಾಗಿದ್ದ ಅಹಲ್ಯೆಯನ್ನುದ್ಧರಿಸಿದ ಪಾದ. ಶಕಟಾಸುರನನ್ನು ಒದ್ದು ಕೆಡವಿದ ಪಾದ. ಅಂತಹ ಪಾದಗಳ ದರ್ಶನವೇ ತಮ್ಮ ಮಹಾಸುಕೃತವೆಂಬ ಭಾವನೆ ಗೋಪಿಯರದು. ‘ಕಂಡೆವೆ ಶ್ರೀರಂಗವಿಠಲನ ದಿವ್ಯಪಾದವ” ಎಂದು ಕೃತಾರ್ಥರಾಗಿದ್ದಾರೆ.