ಶ್ರೀಪಾದರಾಜರ ಜೀವನ ವಿಚಾರವನ್ನು ನೇರವಾಗಿ, ಸಮಗ್ರವಾಗಿ ತಿಳಿಸುವ ಯಾವ ಗ್ರಂಥವೂ ದೊರೆಯುವುದಿಲ್ಲ. ಅವರ ಸಮಕಾಲೀನರೂ ನೇರ ಶಿಷ್ಯರೂ ಆದ ವ್ಯಾಸರಾಯರು ರಚಿಸಿರುವ ಕನ್ನಡ ಕೀರ್ತನೆಗಳು ಮತ್ತು ‘ಪಂಚರತ್ನಮಾಲಾಸ್ತುತಿ’; ವಿಜಯದಾಸಾದಿ ಹರಿದಾಸರ ಕೀರ್ತನೆಗಳು; ಶ್ರೀನಿಧಿತೀರ್ಥರು ರಚಿಸಿರುವ ‘ಶ್ರೀಪಾದರಾಜಾಷ್ಟಕಂ’;ಭೀಮಾಚಾರ್ಯ ವಿರಚಿತ ‘ಶ್ರೀ ಪೂರ್ಣಬೋಧ ಗುರುವಂಶ ಕಲ್ಪತರು’ -ಈ ಕೆಲವು ಆಕರಗಳಿಂದ ಶ್ರೀಪಾದರಾಜರ ಜೀವನ ವಿಚಾರವನ್ನು ಗ್ರಹಿಸಬೇಕು. ಮೇಲಿನ ಕೃತಿಗಳಲ್ಲೂ ಅವರು ಯತಿಗಳಾದ ಅನಂತರದ ಜೀವನ ವಿಚಾರಗಳು ಮಾತ್ರ ಚಿತ್ರಿತವಾಗಿದೆ; ಬಾಲ್ಯ ಜೀವನದ ಬಗ್ಗೆ ಖಚಿತ ಮಾಹಿತಿಗಳು ದೊರೆಯುವುದಿಲ್ಲ. ಕೇವಲ ಅಲ್ಲಿ ಇಲ್ಲಿ ಕೇಳಿಬಂದ ಅಷ್ಟಿಷ್ಟು ವಿಚಾರಗಳನ್ನು ಹರಿದಾಸ ಸಾಹಿತ್ಯಾಸಕ್ತರು ದಾಖಲಿಸಿದ್ದಾರೆ ಅಷ್ಟೇ. ಒಟ್ಟಾರೆ ದೊರೆಯುವ ಮಾಹಿತಿಗಳಿಂದ, ವಿದ್ವಾಂಸರ ನಂಬಿಕೆ, ಊಹೆಗಳಿಂದ ಶ್ರೀಪಾದರಾಜರ ಜೀವನ ವಿಚಾರವನ್ನು ಹೀಗೆ ಕ್ರೋಡೀಕರಿಸಬಹುದು.

ಶ್ರೀ ಮಧ್ವಾಚಾರ್ಯರಿಗೆ ನಾಲ್ಕುಮಂದಿ ನೇರಶಿಷ್ಯರು. ಪದ್ಮನಾಭತೀರ್ಥರು, ಮಾಧವತೀರ್ಥರು, ನರಹರಿತೀರ್ಥರು ಮತ್ತು ಅಕ್ಷೋಭ್ಯತೀರ್ಥರು. ಈ ನಾಲ್ವರ ಪೈಕಿ ಪದ್ಮನಾಭ ತೀರ್ಥರ ಪೀಳಿಗೆಯಲ್ಲಿ ಏಳನೆಯ ಪೀಠಾಧಿಪತಿಗಳು ಶ್ರೀ ಸ್ವರ್ಣವರ್ಣತೀರ್ಥರು; ತಮಿಳು ನಾಡಿನ ಶ್ರೀರಂಗದಲ್ಲಿ ಮಾಧ್ವಮಠದ ಪೀಠಾಧಿಪತಿಗಳಾಗಿದ್ದವರು. ಅವರೇ ಶ್ರೀಪಾದರಾಜರ ಗುರುಗಳು. ಒಮ್ಮೆ ಸ್ವರ್ಣವರ್ಣತೀರ್ಥರು ಶ್ರೀರಂಗದಿಂದ ಶ್ರೀರಂಗಪಟ್ಟಣಕ್ಕೆ ಕಾವೇರಿ ಸ್ನಾನದ ಉದ್ದೇಶದಿಂದ ಬಂದವರು ಅಬ್ಬೂರಿನ ಪುರುಷೊತ್ತಮತೀರ್ಥರ ಖ್ಯಾತಿಯನ್ನು ಕೇಳಿ, ಅವರಿಗೆ ಗೌರವ ಸಲ್ಲಿಸಲು ಅಬ್ಬೂರಿಗೆ ಬಂದರಂತೆ. ಬರುವಾಗ ದಾರಿಯಲ್ಲಿ ಚೂಟಿಯಾಗಿ ಓಡಾಡುತ್ತಿದ್ದ ಬಾಲಕ ಲಕ್ಷ್ಮೀನಾರಾಯಣನನ್ನು ನೋಡಿ, ಅವನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಲು ಅಪೇಕ್ಷೆಪಟ್ಟರು. ಅಬ್ಬೂರಿಗೆ ಬಂದವರೇ ಅಲ್ಲಿ ಶ್ರೀ ಪುರುಷೊತ್ತಮ ತೀರ್ಥರ ಸಮೀಪದ್ಲಿ ಸುಳಿದಾಡುತ್ತಿದ್ದ ವರ್ಚಸ್ವೀಬಾಲಕನನ್ನು ಬ್ರಹ್ಮಣ್ಯತೀರ್ಥರನ್ನು ಕಂಡು ಅಂತಹ ಚೂಟಿಯಾದ ಹುಡುಗನೊಬ್ಬ ತಮ್ಮ ಸಂಸ್ಥಾನಕ್ಕೆ ದೊರೆತರೆ ಒಳ್ಳೆಯದೆಂಬ ಆಸೆಯನ್ನು ವ್ಯಕ್ತಪಡಿಸಿದರು. ಮತ್ತು ತಾವು ದಾರಿಯಲ್ಲಿ ಕಂಡ ಬಾಲಕನ ಬಗ್ಗೆ ವಿವರಿಸಿದರು. ಪುರುಷೋತ್ತಮ ತೀರ್ಥರು ಸ್ವರ್ಣವರ್ಣತೀರ್ಥರ ಗಮನದಲ್ಲಿರುವ ಬಾಲಕ ತಮ್ಮ ಶಿಷ್ಯ ಬ್ರಹ್ಮಣ್ಯತೀರ್ಥರ ಪೂರ್ವಾಶ್ರಮದ ಚಿಕ್ಕಮ್ಮನ ಮಗ ಲಕ್ಷ್ಮೀನಾರಾಯಣನೇ ಇರಬೇಕೆಂದು ಊಹಿಸಿ, ಅವನನ್ನು ಈ ಕೂಡಲೇ ತಮ್ಮ ಬಳಿಗೆ ಕರೆತರಬೇಕೆಂದು ಲಕ್ಷ್ಮೀನಾರಾಯಣನ ತಂದೆತಾಯಿಗಳಾದ ಗಿರಿಯಮ್ಮ-ಶೇಷಗಿರಿ ಆಚಾರ್ಯ ದಂಪತಿಗಳಿಗೆ ಆದೇಶವಿತ್ತರು. ಮಗನೊಂದಿಗೆ ಮಠಕ್ಕೆ ಬಂದ ದಂಪತಿಗಳ ಮನವೊಲಿಸಿದ ಪುರುಷೋತ್ತಮ ತೀರ್ಥರು ಬಾಲಕ ಲಕ್ಷ್ಮೀನಾರಾಯಣನನ್ನು ಸ್ವರ್ಣವರ್ಣತೀರ್ಥರಿಗೆ ಒಪ್ಪಿಸಿದರು. ಸಂತುಷ್ಟರಾದ ಸ್ವರ್ಣವರ್ಣತೀರ್ಥರು ಲಕ್ಷ್ಮೀನಾರಾಯಣ ಹಾಗೂ ಅವನ ತಂದೆ ತಾಯಿಗಳೊಂಧಿಗೆ ಶ್ರೀರಂಗದತ್ತ ಪ್ರಯಾಣ ಬೆಳೆಸಿದರು. ಈಗಲೂ ಬೆಂಗಳೂರು ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನಲ್ಲಿರುವ ಅಬ್ಬೂರಿನಲ್ಲಿ, ಕಣ್ವ ನದಿಯ ದಡದಲ್ಲಿ ಪ್ರಶಾಂತ ಪ್ರಕೃತಿಯ ನಡುವೆ ಶ್ರೀ ಬ್ರಹ್ಮಣ್ಯತೀರ್ಥರ ವೃಂದಾವನವಿದೆ. ಪಕ್ಕದ ಗುಡ್ಡದಲ್ಲಿ ಅವರ ಗುರುಗಳಾದ ಶ್ರೀ ಪುರುಷೋತ್ತಮ ತೀರ್ಥರ ಗುಹೆಯಿದೆ. ಬ್ರಹ್ಮಣ್ಯತೀರ್ಥರು ಮತ್ತು ಶ್ರೀಪಾದರಾಜರು ಅಕ್ಕ-ತಂಗಿಯರ ಮಕ್ಕಳಾದುದರಿಂದ ಶ್ರೀಪಾದರಾಜರು ತಮ್ಮ ಬಾಲ್ಯವನ್ನು ಅಬ್ಬೂರಿನಲ್ಲೇ ಕಳೆದಿರಬೇಕೆಂಬ ವಿದ್ವಾಂಸರ ಊಹೆ ಸಾಧುವಾಗಿದೆ.[1]

ಗುರುಗಳಾದ ಸ್ವರ್ಣವರ್ಣತೀರ್ಥರ ನೇತೃತ್ವದಲ್ಲಿ ಬಾಲಕ ಲಕ್ಷ್ಮೀನಾರಾಯಣನಿಗೆ ಬ್ರಹ್ಮೋಪದೇಶವಾಯಿತು; ಕ್ರಮವದ ವಿದ್ಯಾಭ್ಯಾಸ ಲಭ್ಯವಾಯಿತು. ಸಕಾಲದಲ್ಲಿ ಅವನಿಗೆ ಗುರುಗಳಿಂದ ಸಂನ್ಯಾಸದೀಕ್ಷೆಯಾಗಿ ಬಾಲಕ ಲಕ್ಷ್ಮೀನಾರಾಯಣ ‘ಲಕ್ಷ್ಮೀನಾರಾಯಣ ತೀರ್ಥ’ರಾದರು. ಸ್ವರ್ಣವರ್ಣರು ಅವರನ್ನು ತಮ್ಮ ಸಂಸ್ಥಾನದ ಉತ್ತರಾಧಿಕಾರಿಗಳೆಂದು ಘೋಷಿಸಿದರು. ಬಳಿಕ ಉನ್ನತ ವ್ಯಾಸಂಗಕ್ಕಾಗಿ ಅವರನ್ನು ಶ್ರೀ ವಿಭುಧೇಂದ್ರ ತೀರ್ಥರಲ್ಲಿಗೆ ಕಳುಹಿಸಿದರು. ಕಿರಿಯವಯಸ್ಸಿನ ಅತ್ಯುತ್ಸಾಹೀ ಬಾಲಯತಿಗಳಾದ ಲಕ್ಷ್ಮೀನಾರಾಯಣ ತೀರ್ಥರು ವಿಭುಧೇಂದ್ರರಿಂದ ದ್ವೈತಸಿದ್ಧಾಂತವೆಲ್ಲವನ್ನು ಕಲಿತು ಕರತಲಾಮಲಕ ಮಾಡಿಕೊಂಡು ಗುರುಹಿರಿಯರ ವಿಶ್ವಾಸ ಆದರಗಳಿಗೆ ಪಾತ್ರರಾದರು. ಒಮ್ಮೆ ವಿಭುಧೇಂದ್ರರು ತಮ್ಮ ಶಿಷ್ಯರೊಡನೆ ರಾಯಚೂರು ಜಿಲ್ಲೆಯ ದೇವಗಿರಿ ಬಳಿಯ ನೃಸಿಂಹಕ್ಷೇತ್ರವಾದ ಕೊಪ್ರವೆಂಬ ಸ್ಥಳದಲ್ಲಿ ಚಾತುರ್ಮಾಸ್ಯ ಸಂಕಲ್ಪದಲ್ಲಿದ್ದಾಗ, ಅಂದಿನ ಉತ್ತರಾದಿಮಠದ ಗುರುಗಳಾಗಿದ್ದ ಶ್ರೀ ರಘುನಾಥತೀರ್ಥರೂ ಅಲ್ಲಿಗೆ ಬಂದರು. ವಿಭುಧೇಂದ್ರರು ಲಕ್ಷ್ಮೀನಾರಾಯಣರನ್ನು ರಘುನಾಥ ತೀರ್ಥರಿಗೆ ಪರಿಚಯ ಮಾಡಿಕೊಟ್ಟು, ತಮ್ಮ ಶಿಷ್ಯರ ವಿದ್ಯಾಪರಿಶ್ರಮವನ್ನು ಪರಿಶೀಲಿಸಿ ಆಶೀರ್ವದಿಸಲು ಕೋರಿದರು. ಮಾರನೆಯ ಕೊಪ್ರದಲ್ಲಿ ಇಬ್ಬರು ಯತಿಗಳ ಸಮ್ಮುಖದಲ್ಲಿ ವಿದ್ವಾಂಸರ ಸಭೆ ಸೇರಿತು. ಆ ವಿದ್ವತ್ಸಭೆಯಲ್ಲಿ ರಘುನಾಥ ತೀರ್ಥರು ಟೀಕಾಚಾರ್ಯರ ‘ನ್ಯಾಯಸುಧೆ’ಯಲ್ಲಿಯ ಒಂದು ವಾಕ್ಯವನ್ನು ಲಕ್ಷ್ಮೀನಾರಾಯಣ ತೀರ್ಥರ ಮುಂದಿರಿಸಿ ವ್ಯಾಖ್ಯಾನ ಮಾಡುವಂತೆ ಆದೇಶಿಸಿದರು. ಲಕ್ಷ್ಮೀನಾರಾಯಣ ತೀರ್ಥರು ಆ ವಾಕ್ಯಾರ್ಥದ ನೆಪದಲ್ಲಿ ಇಡೀ ಗ್ರಂಥವನ್ನೇ ಹೊಸರೀತಿಯಲ್ಲಿ, ವಿದ್ವತ್ಪೂರ್ಣವಾಗಿ ವ್ಯಾಖ್ಯಾನ ಮಾಡಿ ತಮ್ಮ ವಿದ್ವತ್ತನ್ನು ಸಾಬೀತುಪಡಿಸಿದರು. ಬಾಲಯತಿಗಳ ವಿದ್ವತ್ತಿನ ಪ್ರಖರತೆ ಶ್ರೀ ರಘುನಾಥತೀರ್ಥರಿಗೆ ಅತ್ಯಾನಂದವನ್ನುಂಟು ಮಾಡಿತು; ಅವರನ್ನು ಮನಸಾರ ಹೊಗಳಿದರು. ಲಕ್ಷ್ಮೀನಾರಾಯಣ ತೀರ್ಥರು ವಿನಯಪೂರ್ವಕವಾಗಿ ಅಂತಹ ಶ್ರೀಪಾದರ ಅನುಗ್ರಹ್ಕೆ ಪಾತ್ರರಾದ ತಾವು ಪುಣ್ಯಶಾಲಿಗಳೆಂದು ಬಿನ್ನವಿಸಲು ಶ್ರೀಗಳವರು ‘ನಾವು ಶ್ರೀಪಾದರಾದರೆ ನೀವು ‘ಶ್ರೀಪಾದರಾಜರು’-ಎಂದು ಕೊಂಡಾಡಿದರಂತೆ. ಈ ಘಟನೆ ಭೀಮಾಚಾರ್ಯ ವಿರಚಿತ ‘ಶ್ರೀ ಪೂರ್ಣಬೋಧ ಗುರುವಂಶ ಕಲ್ಪತರು’-ಎಂಬ ಗ್ರಂಥದಲ್ಲಿ ರಘುನಾಥ ತೀರ್ಥರು “ಶ್ರೀಪಾದಾ ಏವಭೋ ವಯಮ್‌ ಯೂಯಂ ಶ್ರೀಪಾದರಾಜಾಸ್ತು ಪಾಂಡಿತ್ಯಾತಿಶಯಾನ್ವಿತಾಃ’- ಎಂಬುದಾಗಿ ಹೇಳಿದರೆಂದು ಉಲ್ಲೇಖಗೊಂಡಿದೆ. ಅಲ್ಲಿಂದ ಮುಂದೆ ಯತಿಗಳು ‘ಶ್ರೀಪಾದರಾಜ’ರೆಂದೇ ಖ್ಯಾತರಾದರು. ಹೀಗೆ ಕೆಲಕಾಲ ಸಂಚಾರಾರ್ಥವಾಗಿ ತಮ್ಮ ವಿದ್ಯಾ ಗುರುಗಳೊಂದಿಗೆ ತೆರಳಿದ್ದ ಶ್ರೀಪಾದರಾಜರು ಸಂಚಾರವನ್ನು ಮುಗಿಸಿ ಪುನಃ ಶ್ರೀರಂಗಕ್ಕೆ, ತಮ್ಮ ಗುರುಗಳಾದ ಸ್ವರ್ಣವರ್ಣತೀರ್ಥರು ವೃಂದಾವನಸ್ಥರಾದ ಬಳಿಕ ಶ್ರೀಪಾದರಾಜರು ಆ ಸಂಸ್ಥಾನದ ಎಂಟನೆಯ ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಅವರು ಶ್ರೀರಂಗದಲ್ಲಿಯೇ ಕೆಲವು ವರ್ಷಗಳನ್ನು ಕಳೆದಿರಬಹುದು. ಶ್ರೀರಂಗದ ರಂಗನಾಥಸ್ವಾಮಿ ಅವರ ಇಷ್ಟದೈವ. ‘ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ’- ಎನ್ನುವ ಸಮರ್ಪಣ ಮನೋಭಾವದಿಂದ ರಂಗವಿಠಲ ಅಂಕಿತದಲ್ಲೇ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸಿ ಹಾಡಿದವರು ಶ್ರೀಪಾದರಾಜರು. ಅಲ್ಲಿಂದ ಸಂಚಾರ ಹೊರಟವರು ಕೋಲಾರದ ಮುಳುಬಾಗಿಲಿಗೆ ಬಂದು ಅಲ್ಲಿಯ ಪ್ರಶಾಂತ ಪ್ರಕೃತಿಯ ಸಿರಿಗೆ ಮಾರುಹೋಗಿ ಅಲ್ಲಿಯ ನೃಸಿಂಹತೀರ್ಥದ ಸನ್ನಿಧಿಯಲ್ಲಿ ತಮ್ಮ ಮಠವನ್ನು ಸ್ಥಾಪಿಸಿದರು. ಮಧ್ವಾಚಾರ್ಯರ ನೇರ ಶಿಷ್ಯರಾದ ಪದ್ಮನಾಭತೀರ್ಥರ ಪೀಳಿಗೆಯ ಮಠವಾದ ಆ ಮುಳುಬಾಗಿಲ ಮಠ ಇಂದಿಗೂ ‘ಶ್ರೀಪಾದರಾಜಮಠ’ವೆಂದೇ ಪ್ರಸಿದ್ಧವಾಗಿದೆ. ವಿಜಯನಗರದ ಅರಸರ ಆಡಳಿತಕ್ಕೆ ಒಳಪಟ್ಟಿದ್ದ ಮುಳುಬಾಗಿಲು ಶ್ರೀ ಮಧ್ವಚಾರ್ಯರ ನೇರಶಿಷ್ಯರಲ್ಲಿ ಮತ್ತೊಬ್ಬರಾದ ಶ್ರೀ ಅಕ್ಷೋಭ್ಯತೀರ್ಥರು ಅಂಗಾರದಿಂದ ಯೋಗಾನರಸಿಂಹನನ್ನು ಬರೆದ ಪವಿತ್ರಕ್ಷೇತ್ರವೆಂದು ಪರಿಗಣಿತವಾಗಿದ್ದುದಲ್ಲದೆ ಅವರು ಶ್ರೀವಿದ್ಯಾರಣ್ಯರೊಂದಿಗೆ ವಾದಮಾಡಿ ಜಯಿಸಿದ್ದ ಪುಣ್ಯಭೂಮಿಯೂ ಆಗಿತ್ತೆಂಬುದು ಗಮನಾರ್ಹ. ಕೌಂಡಿನ್ಯ ಮುನಿಗಳು ತಪಸ್ಸು ಮಾಡಿದ ಪುಣ್ಯಭೂಮಿಯದು. ಪುತ್ರಕಾಮ್ಯಾರ್ಥವಾಗಿ ಅಂಜನಾದೇವಿ ತಪಸ್ಸು ಮಾಡಿದಳೆನ್ನುವ ಅಂಜನಾದ್ರಿಯಿರುವುದೂ ಅಲ್ಲಿಯೇ. ಕಪಿಧ್ವಜನಾದ ಅರ್ಜುನನು ಮಹಾಭಾರತ ಯುದ್ದಾ ನಂತರ ತನ್ನ ರಥಾಗ್ರದಲ್ಲಿದ್ದ ಹನುಮಂತನನ್ನು ಮುಳುಬಾಗಿಲಿನಲ್ಲಿಯೇ ಪ್ರತಿಷ್ಠಾಪಿಸಿದ್ದೆಂದು ಸ್ಥಳಪುರಾಣ ಹೇಳುತ್ತದೆ. ಅಗಸ್ತ್ಯಮುನಿಗಳು ಪ್ರತಿಷ್ಠಾಪಿಸಿದ ಅಗಸ್ತ್ಯೇಶ್ವರನ ದರ್ಶನವೂ ಅಲ್ಲಿ ನಮಗಾಗುತ್ತದೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ಶ್ರೀಪಾದರಾಜರು ನೆಲೆನಿಂತ ಬಳಿಕ ಮುಳುಬಾಗಿಲು ದ್ವೈತದರ್ಶನದ ಮಹಾವಿಶ್ವವಿದ್ಯಾನಿಲಯವೂ ಆಗಿ ಖ್ಯಾತಿಪಡೆಯಿತು. ಅಲ್ಲಿ ಪಾಂಡಿತ್ಯ ವಿದ್ವತ್ತುಗಳ ಗಳಿಕೆಯೊಂದಿಗೇ ಸಮಾಜೋದ್ಧಾರದ ಚಿಂತನೆಯನ್ನು ಮಾಡಿದ ಪರಮ ಗುರುಗಳು, ಅಪೂರ್ವ ಯತಿವರ್ಯರು ಶ್ರೀಪಾದರಾಜರು.

ಮುಳುಬಾಗಿಲಿನ ‘ಶ್ರೀ ಪಾದರಾಜ ಮಠ’ದ ಖ್ಯಾತಿಯನ್ನರಿತ ಶ್ರೀವ್ಯಾಸತೀರ್ಥರು ಹೆಚ್ಚಿನ ವ್ಯಾಸಂಗಕ್ಕಾಗಿ ಅಲ್ಲಿಗೆ ಬಂದರು. ಅಬ್ಬೂರಿನ ಬ್ರಹ್ಮಣ್ಯತೀರ್ಥರಿಂದ ಬಾಲ್ಯದಲ್ಲಿಯೇ ಸನ್ಯಾಸಪಡೆದು ಅವರ ಪೀಠಕ್ಕೆ ಉತ್ತರಾಧಿಕಾರಿಗಳಾಗಿದ್ದವರು ಶ್ರೀವ್ಯಾಸತೀರ್ಥರು. ಕೆಲವು ಕಾಲು ಮುಳುಬಾಗಿಲಿನಲ್ಲಿಯೇ ಇದ್ದು ಶ್ರೀಪಾದರಾಜರಲ್ಲಿ ವಿದ್ಯಾಭ್ಯಾಸ ಮಾಡಿದರು. ಜಗತ್ತು ಕಂಡ ಅಪೂರ್ವ ಗುರು-ಶಿಷ್ಯ ಸಂಬಂಧಗಳಲ್ಲಿ ಇವರದೂ ಒಂದು. ಅವರ ಪರಸ್ಪರ ಪ್ರೀತಿ ವಾತ್ಸಲ್ಯಗಳು ಅಸದೃಶ ಹಾಗೂ ಅನುಕರಣೀಯ. ವ್ಯಾಸರಾಯರು ತಮ್ಮ ಗುರುಗಳಾದ ಶ್ರೀಪಾದರಾಜರನ್ನು ಕುರಿತು ರಚಿಸಿರುವ ಕನ್ನಡದ ಎರಡು ಪ್ರತ್ಯೇಕ ಕೀರ್ತನೆಗಳು ಮತ್ತು ಸಂಸ್ಕೃತದ ‘ಪಂಚರತ್ನ ಮಾಲಿಕೆ’- ಎಂಬ ಸ್ತುತಿಯೂ ಅವರ ಜೀವನ ವಿಚಾರಗಳನ್ನು ತಿಳಿಸುವ ಸಮಕಾಲೀನ ಹಾಗೂ ಮಹತ್ವದ ದಾಖಲೆಗಳಾಗಿವೆ:

ವಾದಿಗಜ ಮಸ್ತಕಾಂಕುಶ ಸುಜನ ಬುಧಗೇಯ
ಮೇದಿನೀಸುರ ವಂದ್ಯ ಶ್ರೀಪಾದರಾಯ           ||ಪ||

ಸಕಲಶಾಸ್ತ್ರಕಲಾಪ ಸಂನ್ಯಾಸಕುಲದೀಪ
ಸಕಲ ಸತ್ಯಸ್ಥಾಪ ಸುಜ್ಞಾನದೀಪ
ಪ್ರಕಟ ಪಾವನರೂಪ ಅರಿಕುಜನಮತ ಲೋಪ
ನಿಕಟ ವರ್ಜಿತ ಪಾಪ ಕೀರ್ತಿಪ್ರತಾಪ    ||೧||

ಹರಿಪಾದಾಂಬುಜ ಭೃಂಗ ಪರಮತಾಹಿ ವಿಹಂಗ
ಪರಮ ಸುಗುಣಾಂರಂಗ ಭವದುರಿತಭಂಗ
ಶರಣ ಕೀರ್ತಿತರಂಗ ಶತ್ರುತಿಮಿರ ಪತಂಗ
ಶರಣು ಶುಭಚರಿತಾಂಗ ಷಟ್ಛಾಸ್ತ್ರ ಸಂಗ         ||೨||

ಸಿರಿಕೃಷ್ಣ ದಿವ್ಯ ಪಾದಾಬ್ಜ ಚಿಂತಾಲೋಲ
ವರ ಹೇಮವರ್ಣ ಮುನಿಪತಿಯ ಸುಕುಮಾರ
ಗುರುಕಲುಲತಿಲಕ ಶ್ರೀಪಾದರಾಯ ಅಮಿತೋದ್ಧಾರ
ಶರಣಜನ ಸುರಧೇನು ಭಕ್ತಮಂದಾರ  ||೩||

ಶ್ರೀಪಾದರಾಜರ ಹರಿಭಕ್ತಿ, ಮಾಧ್ವಮತನಿಷ್ಠೆ, ವಿದ್ವತ್ತು, ಸಜ್ಜನಿಕೆ, ಸೌಜನ್ಯ, ದಯಾಪರತೆ, ಶ್ರೇಷ್ಠೆ-ಎಲ್ಲವೂ ಈ ಕೀರ್ತನೆಯಲ್ಲಿ ಹೆಪ್ಪುಗಟ್ಟಿವೆ. ಶ್ರೀಪಾದರಾಜರು ‘ಹೇಮ’ ವರ್ಣ ತೀರ್ಥರ ‘ಸುಕುಮಾರ’ರೆಂಬ ಹೇಳಿಕೆ ಗಮನಾರ್ಹವಾದುದು. ಸ್ವರ್ಣವರ್ಣತೀರ್ಥರು ಶ್ರೀಪಾದರಾಜರ ದೀಕ್ಷಾಗುರುಗಳೆಂಬ ವಿಚಾರ ವ್ಯಾಸರಾಯರ ಬಾಯಿಂದಲೇ ಬಂದಿದೆ. ಮತ್ತೊಂದು ಕೀರ್ತನೆಯಲ್ಲಿ ಶ್ರೀಪಾದರಾಜರ ಜೀವನದ ಕೆಲವು ಪವಾಡ ಸದೃಶ ಘಟನೆಗಳನ್ನು ಪ್ರಸ್ತಾಪಿಸಲಾಗಿದೆ.

ಮಹಿಮೆ ಸಾಲದೆ ಇಷ್ಟೇ ಮಹಿಮೆ ಸಾಲದೆ      ||ಪ||

ಅಹಿಶಯನನ ಒಲುಮೆಯಿಂದ
ಮಹಿಯೊಳೆಮ್ಮ ಶ್ರೀಪಾದರಾಯರ ||ಅ.ಪ||

ಮುತ್ತಿನಕವಚ ಮೇಲ್ಕುಲಾವಿ
ರತ್ನಕೆತ್ತಿದ ಕರ್ಣಕುಂಡಲ
ಕಸ್ತೂರಿತಿಲಕ ಶ್ರೀಗಂಧಲೇಪನ
ವಿಸ್ತಾರದಿಂದ ಮೆರೆದುಬರುವ          ||೧||

ವಿಪ್ರಹತ್ಯ ದೋಷ ಬರಲು
ಕ್ಷಿಪ್ರ ಶಂಖೋದಕದಿ ಕಳೆಯೆ
ಅಪ್ರಬುದ್ಧರು ದೂಷಿಸೆ ಗೇರೆಣ್ಣೆ
ಕಪ್ಪುವಸನ ಶುಭ್ರಮಾಡಿದ  ||೨||

ಹರಿಗೆ ಸಮರ್ಪಿಸಿದ ನಾನಾ
ಪರಿಯ ಶಾಕಗಳನು ಭುಂಜಿಸೆ
ನರರು ನಗಲು ಶ್ರೀಶ ಕೃಷ್ಣನ
ಕರುಣದಿಂದ ಹಸಿಯ ತೋರಿದ         ||೩||

-ಶ್ರೀಪಾದರಾಜರ ಹಿರಿಯ ವ್ಯಕ್ತಿತ್ವವನ್ನು ಸಾರುವ ಕೀರ್ತನೆಯಿದು, ಅವರು ಸಿದ್ಧಪುರುಷರೆಂಬುದನ್ನು ಇಲ್ಲಿ ಸಮರ್ಥಿಸಿದೆ. ಅವರ ಮಹಿಮೆಯನ್ನು ತಿಳಿಯದೆ ಅವರನ್ನು ಹಂಗಿಸಿ, ಆಡಿಕೊಂಡ ಜನರಿಗೆ ವ್ಯಾಸರಾಯರು ಉತ್ತರಿಸಿದ ರೀತಿಯಿಂದಾಗಿರಬಹುದು. ಇದರ ಹಿಂದೆ ಪ್ರಚಲಿತವಿರುವ ಕಥೆಯೊಂದುಂಟು. ವ್ಯಕ್ತಿಯೊಬ್ಬನಿಗೆ ಒದಗಿದ್ದ ಬ್ರಹ್ಮಹತ್ಯಾದೋಷವ್ನು ಶ್ರೀಪಾದರಾಜರು ತಮ್ಮ ಶಂಖೋದಕ ಪ್ರೋಕ್ಷಣೆಯ ಮೂಲಕ ಹೋಗಲಾಡಿಸಿದ್ದರಂತೆ. ಅದನ್ನು ಕಂಡು ಕುಹಕಿಗಳು ಆಡಿಕೊಂಡು ನಕ್ಕಾಗ ಶ್ರೀಪಾದರಾಜರು ಅವರ ಎದುರಿನಲ್ಲೇ ಬಿಳಿಬಟ್ಟೆಯೊಂದನ್ನು ಗೇರೆಣ್ಣೆಯಲ್ಲಿ ಅದ್ದಿ ಅನಂತರ ಅದರ ಕಪ್ಪನ್ನು ಶಂಖೋದಕದ ಮೂಲಕ ಹೋಗಲಾಡಿಸಿದರಂಎ. ಈ ವಿಚಾರ ಕರ್ಣಾಕರ್ಣಿಕೆಯಾಗಿ ಹಬ್ಬಿ ಅಂದಿನ ವಿಜಯನಗರದ ರಾಜಪ್ರತಿನಿಧಿಯಾಗಿದ್ದ ಸಾಳುವ ನರಸಿಂಹನ ಕಿವಿಗೂ ಬಿದ್ದು, ಅವನು ಶ್ರೀಪಾದರಾಜರನ್ನು ಕಂಡು, ಅವರಿಗೆ ರಾಜಮನ್ನಣೆಯಿತ್ತು ಗೌರವಿಸಿದನಂತೆ. ಕಾರಣ ಸಾಳುವ ನರಸಿಂಹನೂ ಬ್ರಹ್ಮಹತ್ಯಾದೋಷದಿಂದ ಪರಿತಪಿಸುತ್ತಿದ್ದುದು. ತಿರುಪತಿ ದೇವಸ್ಥಾನದ ಅರ್ಚಕನು ದೇವಸ್ಥಾನದ ಪರಿಶುದ್ಧತೆಗೆ ಭಂಗ ಬರುವ ರೀತಿಯಲ್ಲಿ ವರ್ತಿಸುತ್ತಾ ಹಲವು ದುಷ್ಕಾರ್ಯಗಳನ್ನು ಮಾಡುತ್ತಿದ್ದನು. ತಿರುಪತಿ ತಿಮ್ಮಪ್ಪನ ಭಕ್ತನಾಗಿದ್ದ ನರಸಿಂಹನಿಗೆ ಅದನ್ನು ನೋಡಿ ಸಹಿಸಲಾಗಲಿಲ್ಲ. ಅವನು ಆ ಅರ್ಚಕನನ್ನೂ ಅವನ ಸಂತತಿಯನ್ನೂ ನಿರ್ನಾಮಗೊಳಿಸಿದನೆಂದು ಪ್ರತೀತಿ. ಅದೆ ವೇಳೆಗೆ ಯತಿಗಳಾದ ಶ್ರೀಪಾದರಾಜರ ಮಹಿಮೆ ನರಸಿಂಹನ ಕಿವಿಗೆ ಬಿದ್ದು, ಅವನು ತನ್ನ ಬ್ರಹ್ಮ ಹತ್ಯಾದೋಷವನ್ನು ಪರಿಹರಿಸಿಕೊಳ್ಳುವ ಯೋಚನೆ ಮಾಡಿದ್ದಿರಬೇಕು. ನರಸಿಂಹನು ಯತಿಗಳನ್ನು ಕಂಡು ತನ್ನ ಅಳಲನ್ನು ಅವರ ಮುಂದೆ ತೋಡಿಕೊಂಡಾಗ ಭವದುರಿತ ಭಂಗರೂ ಪರಮಕರುಣಾಂತರಂಗರೂ ಆದ ಅವರು ಅವನಿತಗೆ ಧರ್ಮಸೂಕ್ಷ್ಮ ಬೋಧಿಸಿ ಸಮಾಧಾನಪಡಿಸಿದರೆಂದು ಕಾಣುತ್ತದೆ. ಬಳಿಕ ಆ ಮಂಡಲಾಧಿಪತಿ ಶ್ರೀಪಾದರಾಜರನ್ನು ತನ್ನ ಸಿಂಹಾಸನದಲ್ಲಿ ಕೂಡಿಸಿ, ರಾಜಗುರುಗಳೆಂದು ಕರೆದು ರಾಜ ಮರ್ಯಾದೆಯಿತ್ತು ಗೌರವಿಸಿ ಮನ್ನಣೆಯಿತ್ತನು. ಮತ್ತು ಕೊನೆಯವರೆಗೂ ತನ್ನ ಬಳಿಯಲ್ಲೇ ಇದ್ದುಬಿಡುವಂತೆ ಬಿನ್ನವಿಸಿದನು. ಆದರೆ ಮುಳುಬಾಗಿಲಿನ ವಿದ್ಯಾಕೇಂದ್ರದ ಕರ್ತವ್ಯದ ಕರೆ ಅವರನ್ನು ಕೈಬೀಸಿ ಕರೆಯುತ್ತಿತ್ತು. ಉತ್ತರ ಭಾರತದ ಪ್ರವಾಸದಿಂದ ಹಿಂತಿರುಗಿದ್ದ ತಮ್ಮ ಶಿಷ್ಯ ವ್ಯಾಸರಾಯರನ್ನು ಒಪ್ಪಿಸಿ, ಸಾಳುವ ನರಸಿಂಹನ ಹಿತವನ್ನೂ ವಿಜಯನಗರದ ಭವಿಷ್ಯವನ್ನೂ ಅವರ ಕೈಗೆ ಒಪ್ಪಿಸಿದ ಶ್ರೀಪಾದರಾಜರು ಮತ್ತೆ ಮುಳುಬಾಗಿಲಿಗೆ ಹಿಂತಿರುಗಿದರು. ತಮ್ಮ ಗುರುಗಳ ಜೀವನದಲ್ಲಿ ನಡೆದ ಈ ಸಂಗತಿಗಳನ್ನು ತಮ್ಮ, ಪೂರ್ವೋಕ್ತ ಕೀರ್ತನೆಯ ಮೊದಲ ಎರಡು ನುಡಿಗಳಲ್ಲಿ ಹೇಳಿ ಉಪಕರಿಸಿದ್ದಾರೆ. ವ್ಯಾಸರಾಯರು, ತಮ್ಮ ಪಂಚರತ್ನ ಮಾಲಿಕೆಯಲ್ಲಿಯೂ:

ಬಿಭ್ರಾಣಂ ಕ್ಷೌಮವಾಸಃ ಕರಧೃತವಲಯಂ ಹಾರಕೇಯೂರ ಕಾಂಚೀ
ಗ್ರೈವೇಯ ಸ್ವರ್ಣಮಾಲಾ ಮಣಿಗಣ ಖಚಿತಾನೇಕ ಭೂಷಾ ಪ್ರಕರ್ಷಮ್

ಭುಂಜಾನಂ ಷಷ್ಟಿಶಾಕಂ ಹಯಗಜ ಶಿಬಿಕಾನರ್ಘ್ಯ ಶಯ್ಯಾರಥಾಢ್ಯರ್ಯ
ವಂದೇ ಶ್ರೀಪಾದರಾಜಂ ತ್ರಿಭುವನ ವಿದಿತಂ ಘೋರದಾರಿದ್ಯ್ರ ಶಾಂತ್ಯೈ||

-ಎಂದು ಮುಂತಾಗಿ ಸುಖಪ್ರಾರಬ್ಧಿಗಳೆನ್ನಿಸಿಕೊಂಡಿರುವ ಶ್ರೀಪಾದರಾಜರ ರಾಜ ವೈಭವವನ್ನು ವರ್ಣಿಸಿದ್ದಾರೆ. ಶ್ರೀಪಾದರಾಜರು ಎಲ್ಲೇ ಇರಲಿ ಪ್ರತಿದಿನ ಅಭ್ಯಂಗನ ಮಾಡಿ, ಅರುವತ್ತು ಬಗೆಯ ಶಾಕಾಹಾರವನ್ನು ಶ್ರೀಹರಿಗೆ ನೈವೇದ್ಯ ಮಾಡಿ, ಪ್ರಸಾದರೂಪವಾಗಿ ಅವುಗಳನ್ನು ತಾವು ಸ್ವೀಕರಿಸುತ್ತಿದ್ದರಂತೆ. ಶ್ರೀಪಾದರಾಜಮಠದ ಯತಿಪರಂಪರೆಗೆ ಸೇರಿದ ಶ್ರೀನಿಧಿತೀರ್ಥರು ತಮ್ಮ ‘ಶ್ರೀಪಾದರಾಜಾಷ್ಟಕ’ದಲ್ಲಿ, ದೊರೆ ನರಸಿಂಹನು ಶ್ರೀಪಾದರಾಜರನ್ನು ಗೌರವಿಸಿದ ಪರಿಯನ್ನು ಹೀಗೆ ವರ್ಣಿಸುತ್ತಾರೆ:

ಶ್ರೀಮದ್ವೀರ ನೃಸಿಂಹನಾಮ ನೃಪತೇರ್ಭೂದೇವಹತ್ಯಾ ವ್ಯಥಾಂ
ದೂರೀಕೃತ್ಯ ತದರ್ಪಿಕೋಜ್ವಲ ಮಹಾ ಸಿಂಹಾಸನೇ ಸಂಸ್ಥಿತಃ

ವ್ಯಾಸರಾಯರು ತಮ್ಮ ಗುರುಗಳಿಗೆ ಹೀಗೆ ಗೌರವಾದರಗಳನ್ನು ಸಮರ್ಪಿಸಿದ್ದರೆ ಗುರುಗಳಾದ ಶ್ರೀಪಾದರಾಜರು ತಮ್ಮ ಶಿಷ್ಯ ವ್ಯಾಸರಾಯರನ್ನು, ಅವರ ಸಂನ್ಯಾಸದ ರೀತಿಯನ್ನು

‘ಸಾಸಿರೆ ಜಿಹ್ವೆಗಳುಳ್ಳ ಶೇಷನೇ ಕೊಂಡಾಡಬೇಕು
ವ್ಯಾಸಮುನಿರಾಯರ ಸಂನ್ಯಾಸದಿರವ ||ಪ||

……

ಕೆರೆ ಬಾವಿ ಪುರ ಅಗ್ರಹಾರಂಗಳ ಮಾಡಿ ಭೂ
ಸುರರೊಂದು ಲಕ್ಷ ಕುಟುಂಬಗಳ
ಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸರಾ
ಯರ ಗುಣಗಣ ಗಾಂಭೀರ್ಯಾದಿಗಳ  ||೨||

ಹಗಲಿರುಳೆನ್ನದೆ ಆವಾಗ ಶ್ರೀಹರಿ ಪದಪದ್ಮ
ಯುಗಳವನರ್ಚಿಸಿ ಭಕುತಿಯಿಂದ
ರಘುಪತಿ ಭಜಕ ಬ್ರಹ್ಮಣ್ಯತೀರ್ಥರ ಕುವರ
ರಂಗವಿಠಲನನ್ನು ಬಿಡೆಬಿಡೆನು ಎಂಬ   ||೩||

-ಸಾರ್ವಜನಿಕರಿಗಾಗಿ ಕೆರೆ ಬಾವಿ ಪುರ ಅಗ್ರಹಾರಗಳನ್ನು ಕಟ್ಟಿಸಿ, ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿ ನಿಂತ ವ್ಯಾಸರಾಯರ ಸಾಮಾಜಿಕ ಕಾರ್ಯಕ್ಷಮತೆಯೊಂದಿಗೆ ಆಧ್ಯಾತ್ಮಸಾಧನೆಯ ರೀತಿಯನ್ನೂ ಪ್ರೀತಿಯಿಂದ ಬಣ್ಣಿಸುತ್ತಾರೆ. ಪ್ರಪಂಚಕ್ಕೆ ಅಂಟಿಯೂ ಅಂಟದಂತೆ ಇರುವ ಅವರ ಸಂನ್ಯಾಸದ ರೀತಿಯನ್ನು ವರ್ಣಿಸಲು ನರನಾಲಿಗೆಗಳಿಗೆ ಸಾಧ್ಯವಿಲ್ಲ; ಸಾವಿರ ನಾಲಿಗೆಗಳನ್ನುಳ್ಳ ಆದಿಶೇಷನೇ ಕೊಂಡಾಡಬೇಕು ಎಂದಿರುವರು. ಇನ್ನೊಂದು ಕೀರ್ತನೆಯಲ್ಲಿ ಶಿಷ್ಯನ ಪಾಂಡಿತ್ಯ, ಪ್ರೌಢಿಮೆಗಳನ್ನು ಕುರಿತು:

ಇದಿರದಾವನು ನಿನಗೀ ಧರೆಯೊಳು
ಪದುಮನಾಭವ ದಾಸ ಪರಮೋಲ್ಲಾಸಾ        ||ಪ||

ವಾದಿತಿಮಿರ ಮಾರ್ತಾಡನೆಂದೆನಿಸಿದ
ವಾದಿಶರಭ ಭೇರುಂಡ ವ್ಯಾಸರಾಯಾ||೧||

ಯತಿಗಳೊಳಗೆ ಮಾರ್ತಾಂಡನೆಂದೆನಿಸಿದೆ
ಪ್ರತಿಗಾಣೆನು ಈ ಕ್ಷಿತಿಯೊಳು ಯತಿರಾಯಾ      ||೨||

-ಎಂದು ಮುಂತಾಗಿ ಹಾಡಿರುವರು. ಶಿಷ್ಯನನ್ನು ಕುರಿತ ಶ್ರೀಪಾದರಾಜರ ಇಂಥ ಮಾತುಗಳು ಅವರ ಹೃದಯವೈಶಾಲ್ಯವನ್ನು, ಮುಕ್ತಮನಸ್ಸನ್ನು, ಔದಾರ್ಯಗುಣವನ್ನು, ಶಿಷ್ಯ ವಾತ್ಸಲ್ಯವನ್ನು, ಪರಿಶುದ್ಧ ಹೃದಯವಂತಿಕೆಯನ್ನೂ ಬಿಂಬಿಸುತ್ತವೆ. ನಿಜಕ್ಕೂ ಇದು ಬಹಳ ದೊಡ್ಡ ಗುಣ; ಅಪರೂಪದ ಅಪೂರ್ವಮನಸ್ಸು.

ಶ್ರೀಪಾದರಾಜರು ತಮ್ಮ ಸಂಸ್ಥಾನದ ಪೂಜಾಕಾರ್ಯವನ್ನು ಕೂಡಾ ಶಿಷ್ಯ ವ್ಯಾಸರಾಯರಿಗೆ ವಹಿಸುತ್ತಿದ್ದರಂತೆ. ಒಮ್ಮೆ ಹಾಗೆ ಒಪ್ಪಿಸಿದ್ದಾಗ ವ್ಯಾಸರಾಯರು ಪೂಜೆಗೆ ಕುಳಿತರು. ಅಲ್ಲಿದ್ದ ಸಂಪುಟಗಳನ್ನೆಲ್ಲ ಒಂದೊಂದಾಗಿ ತೆರೆದು ಅವುಗಳೊಳಗಿದ್ದ ಮೂರ್ತಿಗಳನ್ನು ಪೂಜೆಗೆ ಅಣಿಗೊಳಿಸಿ ಇಟ್ಟುಕೊಂಡರು. ವಿಶೇಷವೆಂದರೆ ಅಲ್ಲಿದ್ದ ಒಂದು ಸಂಪುಟದ ಮುಚ್ಚಳವನ್ನು ಅಂದಿನವರೆಗೆ ಯಾರೂ ತೆರೆದಿರಲಿಲ್ಲವಂತೆ. ವ್ಯಾಸರಾಯರು ಆ ವಿಶಿಷ್ಟ ಸಂಪುಟದ ಮುಚ್ಚಳವನ್ನು ತೆರೆಯುತ್ತಲೇ ಒಳಗಿದ್ದ ವೇಣುಗೋಪಾಲನ ಮೂರ್ತಿ ಕೊಳಲನ್ನೂದುತ್ತಾ ಕುಣಿಯಲಾರಂಭಿಸಲು ಆನಂದಪರವಶರಾದ ವ್ಯಾಸರಾಯರು ಅಲ್ಲಿದ್ದ ಸಾಲಿಗ್ರಾಮಗಳನ್ನೆತ್ತಿಒಂಡು ತಾಳಗಳಂತೆ ಬಡಿಯುತ್ತಾ ತಾವೂ ನರ್ತಿಸಲಾರಂಭಿಸಿದರು. ವ್ಯಾಸರಾಯರ ಪೂಜೆಯ ಪರಿಯನ್ನು ಕಂಡು ಮಠದವರೆಲ್ಲ ಶ್ರೀಪಾದರಾಜರಲ್ಲಿಗೆ ಹೋಗಿ ನಿವೇದಿಸಿಕೊಳ್ಳಲು ಅವರು ಸ್ವತಃ ಪೂಜೆ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಕುಣಿಯುತ್ತಿದ್ದ ವೇಣುಗೋಪಾಲನನ್ನೂ ಶಿಷ್ಯ ವ್ಯಾಸರಾಯರನ್ನೂ ಕಂಡು ಮೂಕವಿಸ್ಮಿತರಾದರು. ಗುರುಗಳ ದೃಷ್ಟಿ ಬೀಳುತ್ತಿದ್ದಂತೆಯೇ ವೇಣುಗೋಪಾಲ ತಟಸ್ಥನಾಗಿ ನಿಂತು ಬಿಟ್ಟನು; ಆ ಸಮಯದಲ್ಲಿ ಬಲಗಾಲಿನ ಮೇಲೆ ಎಡಗಾಲನ್ನಿಟ್ಟು ನರ್ತಿಸುತ್ತಿದ್ದ ಗೋಪಾಲ ಅದೇ ಭಂಗಿಯಲ್ಲಿ ನಿಂತುಬಿಟ್ಟನೆಂಬುದು ಭಕ್ತರ ಬಲವಾದ ನಂಬಿಕೆ. ಸಾಮಾನ್ಯವಾಗಿ ಈ ಭಂಗಿಯ ವೇಣುಗೋಪಾಲಮೂರ್ತಿ ಇರುವುದಿಲ್ಲ; ಎಡಗಾಲ ಮೇಲೆ ಬಲಗಾಲನ್ನಿಟ್ಟು ಕೊಳಲೂದುತ್ತಿರುವ ಭಂಗಿಯನ್ನೇ ಎಲ್ಲೆಡೆ ಕಾಣುವುದು. ಅಪರೂಪದ ಭಂಗಿಯಲ್ಲಿ ನರ್ತಿಸುತ್ತಿರುವ ಗೋಪಾಲಕೃಷ್ಣನನ್ನು ಗುರುಶಿಷ್ಯರ ಭಕ್ತಿಭರಿತ ಭಾವುಕ ಕಣ್ಣುಗಳು ಕಂಡಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಭಕ್ತಿಯೆಂಬುದು ಅಂತಹ ವಿಶಿಷ್ಟ ಮನೋವ್ಯಾಪಾರವೇ ಅಲ್ಲವೆ? ಶಿಷ್ಯನ ಸೌಭಾಗ್ಯವನ್ನು ಕಂಡು ಶ್ರೀಪಾದರಾಜರು ತಮಗೆ ಭೀಮಾನದಿಯ ತಟದಲ್ಲಿ ಎರಡು ಸಂಪುಟಗಳು ದೊರೆತದ್ದನ್ನೂ, ಒಂದರಲ್ಲಿದ್ದ ರಂಗವಿಠಲನು ತಮಗೆ ಅನುಗ್ರಹಿಸಿ ಪೂಜೆಗೊಳ್ಳುತ್ತಿದ್ದುದನ್ನೂ ತಿಳಿಸುವರು. ಇದುವರೆಗೂ ಯಾರಿಗೂ ಅನುಗ್ರಹಿಸದ ಎರಡನೆಯ ಸಂಪುಟದಲ್ಲಿದ್ದ ವೇಣುಗೋಪಾಲ ಆ ದಿನ ವ್ಯಾಸರಾಯರಿಗೆ ಅನುಗ್ರಹಿಸಿದನೆಂದು ಹೇಳಿ ಆ ಮೂರ್ತಿಯನ್ನು ಅವರಿಗೇ ಕೊಟ್ಟುಬಿಟ್ಟರಂತೆ! ರಂಗವಿಠಲನನ್ನೂ ಅವನ ಅಂದಚೆಂದವನ್ನೂ ಕಂಡು ತಮಗಾದ ಆನಂದವನ್ನು ಶ್ರೀಪಾದರಾಜರು ತಮ್ಮ ಒಂದು ಕೀರ್ತನೆಯಲ್ಲಿ ಹಾಡಿ ರಂಗವಿಠಲನನ್ನು ನೆತ್ತಿಯಿಂದ ಉಂಗುಷ್ಠದವರೆಗೆ ವರ್ಣಿಸಿ ತಣಿದಿರುವರು:

ಶ್ರೀರಂಗವಿಠಲನ ಶ್ರೀ ಮುಕುಟಕೆ ಶರಣ ||ಪ||
ಶಿರದಲೊಪ್ಪುವ ನೀಲಕುಂತಳಕೆ ಶರಣು
ಸಿರಿಸಹೋದರನರ್ಧದ ವಳಿಗೆ ಶರಣು ||ಅ.ಪ.||

ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು
ಸಂಪಿಗೆಯ ಕುಸುಮ ಸಮ ನಾಸಿಕಕೆ ಶರಣು
ಗುಂಪುರತ್ನದ ಕರ್ಣಕುಂಡಲಗಳಿಗೆ ಶರಣು
ಇಂಪು ದರ್ಪಣ ನಿಭ ಕಪೋಲಗಳಿಗೆ ಶರಣು ||೧||

ಕುಂದಕುಟ್ಮ ಲಪೋಲ್ವ ದಂತಪಂಕ್ತಿಗೆ ಶರಣು
ಅಂದವಾಗಿರುವ ಬಿಂಬೋಷ್ಠಕೆ ಶರಣು
ಚಂದ್ರಿಕಾನಿಭ ಮುದ್ದು ಮಂದಹಾಸಕೆ ಶರಣು
ನಂದಗೋಪನ ಮುದ್ದು ಕಂದನಿಗೆ ಶರಣು ||೨||

ಅಬ್ಜನಾಭನ ಕಂಬುಕಂಠಕೆ ಶರಣು
ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು
ಕುಬ್ಜೆಯನು ಡೊಂಕ ತಿದ್ದಿದ ಭುಜಗಳಿಗೆ ಶರಣು
ಅಬ್ಜಜಾಸನನ ಪೆತ್ತ ನಾಭಿಗೆ ಶರಣು ||೩||

ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು
ಪೊನ್ನ ಕದಳೀ ಪೋಲ್ವ ತೊಡೆಗಳಿಗೆ ಶರಣು
ಪುನ್ನಾಗಕರಗೆತ್ತ ದ್ವಯ ನಿತಂಬಕೆ ಶರಣು
ಚೆನ್ನಾಗಿ ಕುಣಿವ ಸಮಜಾನುವಿಗೆ ಶರಣು ||೪||

ಮಂಗಳ ವೈಭೋಗಂಗಳ ಅಂಘ್ರಿದ್ವಯಕೆ ಶರಣು
ತುಂಗ ಕುಚಗಳ ಪಿಡಿದ ಕರಂಗಳಿಗೆ ಶರಣು
ಪೊಂಗೊಳಲನೂದುವಾ ಅಂಗುಲಿಗಳಿಗೆ ಶರಣು
ರಂಗವಿಠಲನ ಸರ್ವಾಂಗಕೆ ಶರಣು ||೫||

-ಎಂದು ಆ ರಂಗವಿಠ್ಠಲನಿಗೆ ಶರಣಾಗಿರುವರು..

ಶ್ರೀಪಾದರಾಜರಿಗೆ ದೊರೆ ಸಾಳುವ ನರಸಿಂಹನ ನೆರವಿನೊಂದಿಗೆ ಉತ್ತರದ ಕಾಶೀ ವಿಶ್ವೇಶ್ವರನ ದರ್ಶನ ಮಾಡುವ ಅವಕಾಶ ಒದಗಿಬಂದಾಗ ಅವರು ಶಾಸ್ತ್ರವಾಕಾರ್ಥದಲ್ಲಿ ಕಾಶಿಯ ಮಹಾಮಹಾ ಪಂಡಿತರುಗಳನ್ನು ಸೋಲಿಸಿ ಸೋತ ಪಂಡಿತರು ಸಂನ್ಯಾಸ ಸ್ವೀಕರಿಸುವಂತೆ ಮಾಡಿದರೆಂಬ ಮಾತಿದೆ. ಅಂತಹ ತರ್ಕ ಮೀಮಾಂಸಾದಿ ತತ್ವಪಂಡಿತೋತ್ತಮರಾಗಿದ್ದ ಶ್ರೀಪಾದರಾಜರ ಪೂಜಾಸಮಯಕ್ಕೆ ಸರಿಯಾಗಿ ಒಮ್ಮೆ ಮ್ಲೇಚ್ಛ ಸರದಾರನೊಬ್ಬನು ಹರಿವಾಣವೊಂದರಲ್ಲಿ ಅನೇಕ ಬಗೆಯ ಹಸಿಮಾಂಸವನ್ನಿರಿಸಿಕೊಂಡು, ಅದು ಸ್ವಲ್ಪವೂ” ಕಾಣದಂತೆ ಮುಚ್ಚಿತಂದು ಶ್ರೀಗಳೆದುರಿನಲ್ಲಿಡಲು ಅವರು ತಮ್ಮ ಶಂಖೋದಕವನ್ನು ಪ್ರೋಕ್ಷಿಸಿ ಶ್ರೀಹರಿಗೆ ಸಮರ್ಪಿಸಿ ಮುಚ್ಚಳ ತೆಗೆದಾಗ ಅವು ಹಣ್ಣು ಹೂವುಗಳಾಗಿದ್ದುದು; ಮತ್ತೊಮ್ಮೆ ಶ್ರೀಪಾದರಾಜರು ಪರಿವಾರಸಹಿತರಾಗಿ ಸಂಚರಿಸುತ್ತಿದ್ದಾಗ ದಾರಿತಪ್ಪಿ ಅರಣ್ಯವನ್ನು ಸೇರುವಂತಾಯಿತು. ಎಲ್ಲರಿಗೂ ಊಟ ವಸತಿಗಳ ಚಿಂತೆ ಬಲವಾಗತೊಡಗಿತು. ತಡೆಯಲಾಗದ ಹಸಿವೆಯಿಂದ ಅವರುಗಳೆಲ್ಲರೂ ಸಂಕಟಪಡುತ್ತಿದ್ದ ಸಮಯದಲ್ಲಿ ವ್ಯಾಪಾರಿಯೊಬ್ಬನು ಯತಿಗಳಲ್ಲಿಗೆ ಬಂದು ಬಂಡಿಗಟ್ಟಲೆ ಆಹಾರ ಪದಾರ್ಥಗಳನ್ನು ಸಮರ್ಪಿಸಿ ಹೋದದ್ದು; ನೃಸಿಂಹತೀರ್ಥದ ಈಶಾನ್ಯ ಮೂಲೆಯಲ್ಲಿ ಗಂಗೆ ಅವತರಿಸಿ ಬಂದದ್ದು – ಇತ್ಯಾದಿ ಪವಾಡ ಸದೃಶ ಘಟನೆಗಳು ಶ್ರೀಪಾದ ರಾಜರ ಜೀವನದಲ್ಲಿ ನಡೆದುವೆಂಬುದು ಆಸ್ತಿಕರಲ್ಲಿ ಜನಜನಿತವಾಗಿರುವ ವಿಚಾರ. ಇಂಥವು ಶ್ರೀಪಾದರಾಜರಲ್ಲಿ ಜನರಿಗಿದ್ದ ನಂಬಿಕೆ, ವಿಶ್ವಾಸ, ಭಕ್ತಿ, ಗೌರವಗಳಿಗೆ ಸಾಕ್ಷಿಯಾಗಿವೆ.

ಹೀಗೆ, ಸುಮಾರು ಆರುನೂರು ವರ್ಷಗಳ ಹಿಂದೆ ಕರ್ನಾಟಕದ ಒಂದು ಸಣ್ಣ ಊರಾದ ಅಬ್ಬೂರಿನಲ್ಲಿ ಹುಟ್ಟಿ, ಶ್ರೀರಂಗಕ್ಷೇತ್ರದ ಸ್ವರ್ಣವರ್ಣತೀರ್ಥರಿಂದ ಸಂನ್ಯಾಸ ಸ್ವೀಕರಿಸಿ, ದ್ವೈತ ಸಿದ್ಧಾಂತ ಸಾಮ್ರಾಜ್ಯದ ರಾಜರಾಗಿ, ರಾಜಗುರುಗಳಾಗಿ ಪ್ರಸಿದ್ಧರಾದ ಶ್ರೀಪಾದರಾಜರು, ಮುಳುಬಾಗಿಲಿಗೆ ಬಂದು ಅಲ್ಲಿ ಕೊನೆಯವರೆಗೂ ನೆಲೆಯಾಗಿ ನಿಂತರು. ಸುಮಾರು ತೊಂಬತ್ತೆಂಟು ವರ್ಷಗಳ ಕಾಲ ಜೀವಿಸಿದ್ದ ಅವರದು ತುಂಬುಜೀವನ. ಇಂತಹ ಮಹನೀಯರು ತಾವು ನಂಬಿ ನೆಚ್ಚಿದ ದ್ವೈತಸಿದ್ಧಾಂತದ ಸಾರವನ್ನು ಕನ್ನಡ ಭಾಷೆಯಲ್ಲಿ ತಂದು ಕನ್ನಡ ಜನತೆಗೆ ಮುಟ್ಟಿಸುವ ಮನಸ್ಸು ಮಾಡಿದ್ದು ನಾಡಿನ ಪುಣ್ಯ. ಭಕ್ತಮಂದಾರರು, ಷಟ್ಛಾಸ್ತ್ರ ಸಂಪನ್ನರು, ಸಕಲಶಾಸ್ತ್ರಕಲಾಪರು, ವಾದಿಭಯಂಕರರು ಎಂದು ಮುಂತಾಗಿ ಕೀರ್ತಿಪಡೆದಿದ್ದ ಅವರು ಕನ್ನಡ ಭಾಷೆಯಲ್ಲಿ ದ್ವೈತಸಿದ್ಧಾಂತವನ್ನು ಹೇಳಿದ್ದು ಅನೇಕ ಆಕಸ್ಮಿಕ ಹಾಗೂ ಆಶ್ಚರ್ಯಕರ ಸಂಗತಿಗಳಲ್ಲಿ ಒಂದು. ಮಠಾಧಿಪತಿಗಳಾಗಿದ್ದ ಅವರು ಸಂಸ್ಕೃತ ಭಾಷೆಯ, ದ್ವೈತಸಿದ್ಧಾಂತದ ಹರಿಕಾರರಾಗಿದ್ದವರು, ಆ ಕಾಲದಲ್ಲಿ ಆಡಿದರೆ ಮೈಲಿಗೆಯೆಂದು ಭಾವಿಸಿದ್ದ ಕನ್ನಡ ಭಾಷೆಯಲ್ಲಿ, ಅದರಲ್ಲೂ ಮಠದ ಪರಿಸರದಲ್ಲಿ ಕನ್ನಡದಲ್ಲಿ ಚಿಕ್ಕ ಚಿಕ್ಕ ಸ್ತುತಿಗೀತೆಗಳನ್ನು ರಚಿಸಿ ತಮ್ಮ ಪೂಜಾಕಾಲದಲ್ಲಿ ಹರಿಗೆ ನಿವೇದಿಸಿದ್ದಂತೂ ನಿಜಕ್ಕೂ ಕ್ರಾಂತಿಕಾರೀ ವಿಚಾರವೇ ಸರಿ. ಶ್ರೀಪಾದರಾಜರು ಬೃಂದಾವನಸ್ಥರಾಗಲು ಎರಡು ವರ್ಷ ಆರುತಿಂಗಳ ಅವಧಿಯಿದದಾಗಲೇ ಅವರ ವಿದ್ವತ್ತನ್ನು ಮೆಚ್ಚಿ ಅವರನ್ನು ‘ಶ್ರೀಪಾದರಾಜರೆಂದು ಕರೆದು ಆಶೀರ್ವದಿಸಿದ್ದ ಶ್ರೀರಘುನಾಥತೀರ್ಥರು ಹರಿಸಾನ್ನಿಧ್ಯವನ್ನು ಸೇರಿದರು. ಅವರು ತಮ್ಮ ವೈಕುಂಠಯಾತ್ರೆಯ ಗಗನ ಮಾರ್ಗದಲ್ಲಿದ್ದಾಗ ಕೆಳಗೆ ಅಂಗಳದಲ್ಲಿ ಶಿಷ್ಯರಿಗೆ ಪಾಠ ಹೇಳುತ್ತಾ ಕುಳಿತಿದ್ದ ಶ್ರೀಪಾದರಾಜರ ಮೇಲೆ ಕುಸುಮವನ್ನೆಸೆದರಂತೆ. ಕತ್ತೆತ್ತಿ ನೋಡಿದ ಶ್ರೀಪಾದರಾಜರಿಗೆ ಶ್ರೀ ರಘುನಾಥತೀರ್ಥರ ದರ್ಶನವಾಯಿತೆಂದೂ ಹೇಳುವುದುಂಟು. ಹಾಗೆ ಹೂವು ಬಿದ್ದಿತೆಂದು ಹೇಳುವ ಸ್ಥಳದಲ್ಲಿ ಇಂದಿಗೂ ಒಂದು ವೃಂದಾನವನವಿದೆ; ಪ್ರತಿದಿನವೂ ಮಠದಲ್ಲಿ ಪೂಜೆಯಾದ ಬಳಿಕ ಆ ವೃಂದಾವನಕ್ಕೆ ದೇವರ ತೀರ್ಥ, ತುಳಸಿ, ಹೂವು, ಅಂಗಾರಗಳನ್ನು ಹಾಕುವ ಪದ್ಧತಿಯಿದೆಯೆಂದು ತಿಳಿದುಬರುತ್ತದೆ. ಶ್ರೀ ಶ್ರೀನಿಧಿಯತಿವರೇಣ್ಯರ ನವಪದ್ಯ ಸುರತ್ನಮಾಲೆಯಲ್ಲಿ ಮೇಲಿನ ಘಟನೆಯ ಪ್ರಸ್ತಾಪ ಹೀಗಿದೆ:

ಶ್ರೀ ಮದ್ಯತೀಶ ರಘುನಾಥ ಮುನೇರ್ವಿಮಾನಾತ್
ಪುಷ್ಪೇ ಸ್ವಮೂರ್ಧ್ನಿ ಪ್ರತತಿ ಪ್ರಶಮೀಕ್ಷಚೋಸ್ತ್ವಾ
ಸಂಪ್ರೇರಿತೋರು ರಘುನಾಥಮುನೀಶ್ವರಾಯ
ಶ್ರೀಪಾದರಾಜ ಗುರವೇಸ್ತು ನಮಶ್ಯುಭಾಯ

ಶ್ರೀಪಾದರಾಜರನ್ನು ಗುರುಗಳೆಂದು ಗೌರವಿಸಿ ಸ್ತುತಿಸುವ ರೂಢಿ ಹರಿದಾಸ ಪರಂಪರೆಯಲ್ಲಿ ಬೆಳೆದುಬಂದಿದೆ. ಅವರ ಶಿಷ್ಯರಾದ ವ್ಯಾಸರಾಯರಿಂದ ಹಿಡಿದು ಇತ್ತೀಚಿನ ಹರಿದಾಸರ ಕೃತಿಗಳಲ್ಲೂ” ಈ ಗುರುವಂದನೆಯನ್ನು ಕಾಣಬಹುದು. ಇವರ ಕರುಣೆಯುಂಟಾದರೆ ವ್ಯಾಸರಾಯರು, ಪುರಂದರದಾಸರೇ ಮೊದಲಾದವರ ಕರುಣೆ ತಾನಾಗಿ ಸಿದ್ಧಿಸುವುದೆಂಬ ನಂಬಿಕೆ ಭಕ್ತರದು.

 

[1] ಶ್ರೀ ಪಾದರಾಜರ ಕೃತಿಗಳು, ಸಂ. ಡಾ. ವರದರಾಜ ರಾವ್‌, ಪೀಠಿಕೆ, ಪು-XXII, ೧೯೭೩, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು.