ಜನನ : ೧೬-೪-೧೯೧೯ರಂದು ಕುರ್ತುಕೋಟಿಯಲ್ಲಿ

ಮನೆತನ : ವೇದ ವಿದ್ವಾಂಸರು ಹಾಗೂ ಕೀರ್ತನಕಾರರ ಮನೆತನ. ತಂದೆ ನರಸಿಂಹಶಾಸ್ತ್ರಿಗಳು ವೇದ ವಿದ್ವಾಂಸರು. ತಾಯಿ ಸರಸ್ವತೀಬಾಯಿ ಸಂಪ್ರದಾಯಶೀಲೆ. ದೊಡ್ಡಪ್ಪ ನಾರಾಯಣಶಾಸ್ತ್ರಿಗಳು ಕೀರ್ತನಕಾರರು. ತಮ್ಮ ಮಾಧವಶಾಸ್ತ್ರಿ ತಬಲ ವಾದಕರು.

ಶಿಕ್ಷಣ: ದೊಡ್ಡಪ್ಪ ಹಾಗೂ ತಂದೆಯವರಿಂದಲೇ ಇವರಿಗೆ ಕೀರ್ತನ ಶಿಕ್ಷಣ. ಹಾರ್ಮೋನಿಯಂ, ವಾದನದಲ್ಲೂ ಪರಿಣತಿಯಿದ್ದು ಅನೇಕರಿಗೆ ಪಕ್ಯವಾದ್ಯ ಸಾಥಿಯನ್ನು ಮಾಡುವ ಸಾಮರ್ಥ್ಯ ಹೊಂದಿದ್ದರು.

ಕ್ಷೇತ್ರ ಸಾಧನೆ: ಮೊದ ಮೊದಲು ತಂದೆಯವರ ಕೀರ್ತನ ಕಾರ್ಯಕ್ರಮಗಳಿಗೆ ಇವರು, ಇವರ ತಮ್ಮ ಕ್ರಮವಾಗಿ ಹಾರ್ಮೋನಿಯಂ ಹಾಗೂ ತಬಲಾ ವಾದನದಲ್ಲಿ ಸಾಥಿ ಮಾಡುತ್ತಿದ್ದರು. ಅದೇ ಅನುಭವದ ಮೇಲೆ ಸ್ವತಂತ್ರವಾಗಿ ತಾವೇ ಹರಿಕಥೆ ಮಾಡಲು ಆರಂಭಿಸಿದರು. ೧೯೪೨ ರಲ್ಲಿ ಗದುಗಿನ ಶ್ರೀ ದತ್ತಾತ್ರೇಯಸ್ವಾಮಿ ಸನ್ನಿಧಿಯಲ್ಲಿ ಪ್ರಥಮ ಕಾರ್ಯಕ್ರಮ. ಅಲ್ಲಿಂದ ಸಂಚಾರ ಆರಂಭ. ಆಂಧ್ರ ಪ್ರದೇಶದ ಹಲವಾರು ನಗರಗಳಲ್ಲಿ ಕಾರ್ಯಕ್ರಮ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅಲ್ಲಿನ ಪಂಡಿತ ಪರಿಷತ್ತಿನ ವಿದ್ವಾಮಸರ ಮೆಚ್ಚುಗೆಗೂ ಪಾತ್ರರಾದವರು. ಮೈಸೂರು, ಬೆಂಗಳೂರು, ಉತ್ತರ ಕರ್ನಾಟಕದ ಅನೇಕ ಸ್ಥಳಗಳಲ್ಲಿ ಕಥಾ ಕೀರ್ತನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಸಂಸ್ಕೃತ-ಕನ್ನಡ ಭಾಷೆಗಳೆರಡರಲ್ಲೂ ನಿರರ್ಗಳವಾಗಿ ಕಥೆ ಮಾಡಬಲ್ಲ ಸಾಮರ್ಥ್ಯವುಳ್ಳವರು. ಮಹಾರಾಷ್ಟ್ರ -ತಮಿಳುನಾಡುಗಳಲ್ಲೂ ಸಂಚರಿಸಿ ಕೀರ್ತನ ನಡೆಸಿರುತ್ತಾರೆ. ಸುಮಾರು ಆರು ದಶಕಗಳಿಗೂ ಮೀರಿ ಕಥಾ ಕೀರ್ತನ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಆಂಧ್ರ ಪ್ರದೇಶದ ಪಂಡಿತ ಪರಿಷತ್ತಿನಿಂದ ’ಹರಿಕಥಾ ಕುಶಲ’ ಅಲ್ಲದೆ ಕೀರ್ತನ ಕೇಸರಿ, ಕೀರ್ತನ ರತ್ನ ಕೀರ್ತನ ಕಲಾವಿದ, ಹರಿಕಥಾ ವಿದ್ವಾನ್ ಮುಂತಾದ ಬಿರುದುಗಳಿಗೆ ಪಾತ್ರರಾದ ಶ್ರೀಪಾದ ಶಾಸ್ತ್ರಿಗಳನ್ನು ಅಖಿಲ ಕರ್ನಾಟಕ ಕೀರ್ತನಕಾರರ ಸಮ್ಮೇಳನದಲ್ಲಿ ಗೌರವಿಸಿ ಸನ್ಮಾನಿಸಲಾಗಿದೆ. ಶೃಂಗೇರಿ ಜಗದ್ಗುರುಗಳು. ಗದುಗಿನ ತೋಂಟದಾರ್ಯ ಜಗದ್ಗುರುಗಳು ಮುಂತಾದವರಿಂದ ಸನ್ಮಾನಿತರಾಗಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೧-೯೨ರ ಸಾಲಿನ ’ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ನೀಡಿ ಗೌರವಿಸಿದೆ.