ಭಾರತದ ಸಾರಸ್ವತ ಸಾಧನೆಯ ಕ್ಷೇತ್ರಕ್ಕೆ ಮಹಾರಾಷ್ಟ್ರ ಪ್ರಾಂತದಿಂದೊದಗಿದ ನವರತ್ನಗಳಲ್ಲಿ ಪಂಡಿತ ಶ್ರೀಪಾದ ದಾಮೋದರ ಸಾತವಲೇಕರ ಗಣ್ಯರು.

ಒಬ್ಬ ಸಾಮಾನ್ಯ ಚಿತ್ರಕಾರರಾಗಿ ಸಾತವಲೇಕರ್ ತಮ್ಮ ಜೀವನಯಾತ್ರೆಯನ್ನು ಆರಂಭಿಸಿದರು. ಆದರೆ ಅವರು ಜಗತ್ತಿನ ನೆನಪಿನಲ್ಲಿ ವೇದವ್ಯಾಖ್ಯಾತರಾಗಿ.

“ಪಂಡಿತ ಸಾತವಲೇಕರ್ ಅವರು ಆಧುನಿಕ ಯುಗದ ವೇದಾಚಾರ್ಯರು. ವೇದೋದ್ಧಾರದ ವ್ರತ ಅವರ ಕೈಯಲ್ಲಿ ಒಂದು ಮಹಾಯಜ್ಞವಾಯಿತು” ಲೋಕನಾಯಕ ಮಾಧವರಾವ್‌ಅಣೇ ಅವರ ಈ ಮಾತುಗಳಲ್ಲಿ ಉತ್ಪ್ರೇಕ್ಷೆಯಿಲ್ಲ.

ಸಾತವಲೇಕರ ವೇದಾಧ್ಯಯನಕ್ಕೂ ವೇದವಾಙ್ಮಯದ ಪ್ರಚಾರೋತ್ಸಾಹಕ್ಕೂ ಪ್ರೇರಣೆಯೊದಗಿಸಿದ ಸಂಗತಿಗಳು ಮೂರು:

೧) ಮಹರ್ಷಿ ದಯಾನಂದರ ವೇದಾರ್ಥ ವಿಚಾರ ರೀತಿ;

೨) ಮಾಕ್ಸ್‌ಮುಲ್ಲರ್ ಪಂಡಿತರ ದೀರ್ಘಶ್ರಮದಿಂದ ಸಾಧಿಸಿದ ಋಗ್ವೇದ ಸಾಯಣ ಭಾಷ್ಯ ಮೊದಲಾದ ಗ್ರಂಥಗಳ ಪ್ರಕಟಣೆ;

೩) ತಮ್ಮ ಮತಪ್ರಚಾರದಲ್ಲಿ ಕ್ರೈಸ್ತ ಮಿಶನರಿಗಳು ತೋರುತ್ತಿದ್ದ ಕಾರ್ಯದಕ್ಷತೆ.

ವೇದಾರ್ಥ ಪ್ರತಿಪಾದನೆ

ನಮ್ಮ ಯುಗದಲ್ಲಿ ವೇದೋದ್ಧಾರಕ್ಕಾಗಿ ಕೆಲಸ ಮಾಡಿದ ಮಹನೀಯರಲ್ಲಿ ಮೂವರು ಅಗ್ರಗಣ್ಯರು; ಮ್ಯಾಕ್ಸ್‌ಮುಲ್ಲರ್, ಸ್ವಾಮಿ ದಯಾನಂದರು, ಪಂಡಿತ ಸಾತವಲೇಕರ್. ಈ ಮೂರೂ ಜನರ ದೃಷ್ಟಿಕೋನಗಳು ಬೇರೆ ಬೇರೆ. ಮ್ಯಾಕ್ಸ್‌ಮುಲ್ಲರ್ ಅಧಿದೈವಿಕ ಪಕ್ಷಕ್ಕೆ – ಎಂದರೆ ವೇದ ಮಂತ್ರಗಳಲ್ಲಿ ವಿವಿಧ ದೇವತೆಗಳನ್ನು ಸಂಬೋಧಿಸಿದವೆಂಬ ವಾದಕ್ಕೆ – ಪ್ರಮುಖ್ಯ ಕೊಟ್ಟರು. ಸ್ವಾಮಿ ದಯಾನಂದರಿಗೆ ಮಂತ್ರಗಳೆಲ್ಲ ಆಧ್ಯಾತ್ಮಿಕ ಸಂಕೇತರೂಪದವೆಂಬ ವಾದ ಪ್ರಮುಖವಾಗಿತ್ತು. ಪಂಡಿತ ಸಾತವಲೇಕರ್ ಅವರು ಅಧಿಭೌತಿಕ ಪಕ್ಷವನ್ನು – ಎಂದರೆ ವೇದಮಂತ್ರಗಳೆಲ್ಲ ಭೌತರಾಷ್ಟ್ರಲೋಕಕ್ಕೆ ಅನ್ವಯಿಸುವುವೆಂಬ ಪಕ್ಷವನ್ನು ಘೋಷಿಸಿದರು.

ಈ ಮೂರು ಅರ್ಥಪ್ರಕ್ರಿಯೆಗಳು ವಿಭಿನ್ನವಾದರೂ ಪರಸ್ಪರ ವಿರುದ್ಧಗಳಲ್ಲ. ಅವನ್ನು ಒಂದಕ್ಕೊಂದು ಪೂರಕವೆಂದು ಭಾವಿಸುವುದು ಯುಕ್ತವಾಗುತ್ತದೆ.

ವೇದಸಾಹಿತ್ಯದ ಪ್ರಚಾರ ಮತ್ತು ಅರ್ಥವನ್ನು ವಿಶದಪಡಿಸುವ ವ್ಯಾಖ್ಯಾನಗಳ ಮೂಲಕ ಭಾರತೀಯ ಸಂಸ್ಕೃತಿಯನ್ನೂ ಸಭ್ಯತೆಯನ್ನು ಪುನರುಜ್ವಲಗೊಳಿಸುವ ಕಾರ್ಯಕ್ಕಾಗಿ ತಮ್ಮ ಜೀವಮಾನವೆಲ್ಲ ಮುಡುಪಾಗಿರಿಸಿದರು, ವೇದಮೂರ್ತಿ ಸಾತವಲೇಕರ್.

ಹಿಂದೂಧರ್ಮವು ನಿವೃತ್ತಿಯನ್ನೂ, ನಿಷ್ಕ್ರಿಯೆಯನ್ನೂ ಬೋಧಿಸುವುದಿಲ್ಲ; ಜೀವನೋಲ್ಲಾಸ, ಭೌತಸಮೃದ್ಧಿ- ಇವೇ ವೈದಿಕ ಆದರ್ಶ ಎಂದು ಹಲವಾರು ದಶಕಗಳ ಪ್ರವಚನಗಳ, ಹತ್ತಾರು ಗ್ರಂಥಗಳ ಹಾಗೂ ಸಂಸ್ಥೆ ಸಂಘಟನೆಗಳ ಮೂಲಕ ಸಾರಿದ ರಾಷ್ಟ್ರನಿಷ್ಠರು ಅವರು.

ವೇದ ವಿದ್ವಾಂಸರಲ್ಲಿ ಬಹು ಮಂದಿ ಮಂತ್ರಗಳ ಮಾತುಗಳ ಅರ್ಥವನ್ನು ಮಾತ್ರ ಗುರುತಿಸುತ್ತಿದ್ದರು. ಸಾಂಪ್ರದಾಯಿಕ ಮೀಮಾಂಸಕರ ಯಜ್ಞಯಾಗಾದಿ ಬಾಹ್ಯ ಕಲಾಪಗಳಿಗೇ ಮಹತ್ತ್ವ ಕೊಟ್ಟಿದ್ದರು. ಈ ಜಾಡಿನ ಅರ್ಥ ಕಲ್ಪನೆ ಅಭಾಸದ್ದೆಂದು ಮಹರ್ಷಿ ದಯಾನಂದರು ಸಿದ್ಧಪಡಿಸಿದರು. ಸಾತವಲೇಕರರು ಅದೇ ವಾದ ರೀತಿಯನ್ನು ಸಮರ್ಥವಾಗಿ ಮುಂದುವರಿಸಿದರು ; ವೇದ ಸಾಹಿತ್ಯವು ವಿಶ್ವ ತತ್ತ್ವದಲ್ಲಿ ತಾತ್ಪರ್ಯವುಳ್ಳದ್ದೆಂದೂ, ಈ ಪರ ವಿರೋಧವಿಲ್ಲದಂತೆ ಅರ್ಥ ಮಾಡಿಕೊಳ್ಳುವುದು ಅಸಾಧ್ಯವೆಂದೂ ಪ್ರತಿಪಾದಿಸಿದರು ; ತಮ್ಮ ವಾದದ ಪೋಷಣೆಗಾಗಿ ನಾಲ್ಕೂ ವೇದಗಳಿಗೆ ವಿಸ್ತಾರ ವ್ಯಾಖ್ಯಾನ ಬರೆದು, ವೇದಮಂತ್ರಗಳ ನೈಜ ಮಹತ್ತ್ವವನ್ನು ಸರಳ ಸುಂದರ ಶೈಲಿಯಲ್ಲಿ ಪ್ರಕಾಶ ಪಡಿಸಿದರು.

ಸಾತವಲೇಕರರ ಸ್ಫೂರ್ತಿದಾಯಕ ಜೀವನದ ಮುಖ್ಯ ಘಟ್ಟಗಳನ್ನು ಈಗ ಸ್ಮರಿಸೋಣ.

ಜನನ, ಬಾಲ್ಯ

ಸಾತವಲೇಕರ್ ಅವರು ಹುಟ್ಟಿದ್ದು ಸಹ್ಯಾದ್ರಿಯಿಂದ ದಕ್ಷಿಣಕ್ಕೆ ಇರುವ ರತ್ನಗಿರಿ ಜಿಲ್ಲೆಯಲ್ಲಿ. ಅಲ್ಲಿ ಸಾವಂತವಾಡಿ ಎಂಬ ತಹಸೀಲು-ಸುಮಾರು ಎರಡು ಲಕ್ಷ ಜನಸಂಖ್ಯೆಯುಳ್ಳದ್ದು. ಸಾತವಲೇಕರ್ ಮನೆತನದವರು ಈ ಪ್ರಾಂತದವರು. ಸಾವಂತವಾಡಿಯಿಂದ ಒಂದೂವರೆ ಮೈಲಿ ದೂರದ ಕೋಲಗಾಂವ ಗ್ರಾಮದಲ್ಲಿ ನೆಲೆಸಿದ್ದ ದಾಮೋದರ ಭಟ್ಟ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ಮಗನಾಗಿ ಹುಟ್ಟಿದರು, ಶ್ರೀಪಾದ ಸಾತವಲೇಕರ್. ಅಂದು ಶಕವರ್ಷ 1789 ಭಾದ್ರಪದ ಬಹುಳ ಷಷ್ಠ, ಗುರುವಾರ ; ಕ್ರಿಸ್ತವರ್ಷ 1867, ಸೆಪ್ಟೆಂಬರ್ 19.

ಮಹಾರಾಷ್ಟ್ರದವರಿಗೆ ಭಾದ್ರಪದ ಬಹುಳ ಷಷ್ಠಿ ಒಂದು ಪವಿತ್ರ ದಿವಸ. ಭಗವತ ಸಂಪ್ರದಾಯದವರು ಅಂದು ಜ್ಞಾನೇಶ್ವರಿ ಜಯಂತಿ ಆಚರಿಸುತ್ತಾರೆ. ಸಂತ ಜ್ಞಾನೇಶ್ವರರ ಗೀತಾವ್ಯಾಖ್ಯೆಯನ್ನು (“ಭಾವಾರ್ಥ ದೀಪಿಕಾ”-ಜ್ಞಾನೇಶ್ವರೀ) ಏಕನಾಥರು ಶುದ್ಧಗೊಳಿಸಿ ಜಗತ್ತಿಗೆ ನೀಡಿದ್ದು ಶಕವರ್ಷ 1506ರ ಭಾದ್ರಪದ ಬಹುಳ ಷಷ್ಠಿಯಂದು.

ಅಂಥ ಪವಿತ್ರ ದಿವಸದಂದು ವೇದಾಚಾರ್ಯ ಶ್ರೀಪಾದ ಸಾತವಲೇಕರರ ಜನನವಾದದ್ದು ಒಂದು ಅಪೂರ್ವ ಶುಭಸಂಯೋಗ.

ಶ್ರೀಪಾದ ಸಾತವಲೇಕರರ ಅಜ್ಜ ಅನಂತರಾವ್‌ತಮ್ಮ ವೇದಶಾಸ್ತ್ರ ಸಂಪತ್ತಿನಿಂದ ಗ್ರಾಮ ಜೀವನಕ್ಕೆ ಶೋಭೆಯಿತ್ತಿದ್ದರು. ಅನಂತರಾವ್‌ಸಾತವಲೇಕರ್ ಅವರಿಗೆ ಮೂವರು ಸುಪುತ್ರರು ; ದಾಮೋದರ ಪಂತ, ಕೃಷ್ಣರಾವ್‌, ಸೀತಾರಾಮ ಪಂತ. ಇವರಲ್ಲಿ ದಾಮೋದರ ಪಂತರು ಶ್ರೀಪಾದ ಸಾತವಲೇಕರರ ತಂದೆ.

ದಾಮೋದರ ಪಂತರ ಮೊದಲ ಹೆಂಡತಿ ಗೋಪಿಕಾಬಾಯಿ. ಆಕೆ ಅವಸಾನ ಹೊಂದಿದ ಮೇಲೆ ಪಂತರು ವಾಲಾವಲ ಗ್ರಾಮದ ಭಟ್ಟ ಮನೆತನದ ಲಕ್ಷ್ಮೀಬಾಯಿಯನ್ನು ವಿವಾಹವಾದರು. ಈಕೆಯೇ ಶ್ರೀಪಾದ ಸಾತವಲೇಕರರ ತಾಯಿ.

ದಾಮೋದರಪಂತ-ಲಕ್ಷ್ಮೀಬಾಯಿ ದಂಪತಿಗಳ ಮಕ್ಕಳೆಲ್ಲ ಏಕೋ ಅಲ್ಪಾಯುಷಿಗಳಾದವು. ಶ್ರೀಪಾದ ಸಾತವಲೇಕರರಿಗೆ ಮುಂಚೆ ಹುಟ್ಟಿದ್ದ ನಾಲ್ಕೈದು ಮಕ್ಕಳು ಎಳೆವಯಸ್ಸಿನಲ್ಲಿಯೇ ಸತ್ತಿದ್ದವು. ಈಗ ಹುಟ್ಟಿದ ಮಗನದೂ ಇದೇ ದಾರಿಯಾಗದಿರಲೆಂದು ಲಕ್ಷ್ಮೀಬಾಯಿ ನರಸೋಬಾ ವಾಡಿಯ ದತ್ತಾತ್ತೇಯನಲ್ಲಿ ಹರಕೆ ಹೊತ್ತಳು. “ಈ ಮಗು ಉಳಿದಲ್ಲಿ ಅವನ ಉಪನಯನವನ್ನು ನಿನ್ನ ಸನ್ನಿಧಿಯಲ್ಲಿಯೇ ನಡೆಸುತ್ತೇನೆ.”

ಮಗನಿಗೆ “ಶ್ರೀಪಾದ” ಎಂದು ಹೆಸರಿಟ್ಟಿದ್ದೂ ಸತತವಾಗಿ ದೇವರ ಆಶೀರ್ವಾದ ಅವನ ಮೇಲಿರಲಿ ಎಂದೇ.

ತಾಯಿಯ ಹರಕೆ ಫಲಿಸಿತು. ಶ್ರೀಪಾದ ಉಳಿದದ್ದು ಮಾತ್ರವಲ್ಲ; ಶತಾಯುಷಿಯಾದ, ಅಮಿತ ಯಶೋವಂತನಾದ. ಪಂಡಿತಜೀ ಅವರ ತರುವಾಯ ಹುಟ್ಟಿದ ಒಬ್ಬ ತಂಗಿ ಆಕಸ್ಮಿಕದಿಂದ ಮನೋರೋಗಕ್ಕೆ ತುತ್ತಾಗಿ ಇದ್ದಕ್ಕಿದ್ದಂತೆ ಕೊನೆಯುಸಿರೆಳೆದಳು. ಪಂಡಿತಜೀ ಅವರ ತಮ್ಮಂದಿರಲ್ಲಿ ಕೃಷ್ಣ (ಸಖಾರಾಮ್‌ಎಂದು ಅವನನ್ನು ಕರೆಯುತ್ತಿದ್ದರು) ಮನೆಯ ಉಸ್ತುವಾರಿಗಾಗಿ ಹಳ್ಳಿಯಲ್ಲೇ ಉಳಿದ. ಇನ್ನೊಬ್ಬ ತಮ್ಮ ಸೀತಾರಾಮ ಪುಣೆಯಲ್ಲಿ ಬಿ.ಎ. ಮುಗಿಸಿ ಅಮೇರಿಕೆಗೆ ಹೋಗಿ ಪ್ರೌಢಶಿಕ್ಷಣ ಪಡೆದು ಒಂದು ದಕ್ಷಿಣ ಹೈದರಾಬಾದಿನ ವಿವೇಕವರ್ಧಿನೀ ಕಾಲೇಜಿನ ಪ್ರಿನ್ಸಿಪಾಲನಾದ.

ಸಮಾಜ-ಪರಿಸರ

ಸಾತವಲೇಕರ್ ಮನೆತನದಲ್ಲಿ ಸಾಂಪ್ರದಾಯಿಕ ವೈದಿಕ ಸಂಸ್ಕೃತಿ ಜಿನುಗುತ್ತಿತ್ತು. ನಾಲ್ಕನೆ ವರ್ಷದಲ್ಲಿ ಮಗು ಶ್ರೀಪಾದನ ಅಕ್ಷರಾಭ್ಯಾಸ ಪ್ರಾರಂಭವಾಯಿತು.

ಐದು ವರ್ಷ ಆಗುವ ವೇಳೆಗೆ ಬೆಳಿಗ್ಗೆ, ಸಂಜೆ ತಂದೆಯವರಿಂದ ಪಾಠ ; ಸೂರ್ಯ ನಮಸ್ಕಾರ, ತೇರೀಜು ಬೇರೀಜು ಲೆಕ್ಕಗಳು, ಪೂಜಾಮಂತ್ರಗಳು, ಪಂಚಾಂಗದ ಪರಿಚಯ; ಶಿವಮಹಿಮ್ನ ಸ್ತೋತ್ರ, ರಾಮರಕ್ಷಾ ಸ್ತೋತ್ರ ಮುಂತಾದವುಗಳ ಬಾಯಿಪಾಠ ; ಇತ್ಯಾದಿ.

ಸಾವಂತವಾಡಿ, ಕೋಲಗಾಂವ, ಕುಣಕೇರಿ ಈ ಮೂರು ಗ್ರಾಮಗಳ ಪೌರೋಹಿತ್ಯ ಈ ವಂಶಿಕರದು. ಮನೆಯಲ್ಲಿ ಹಿರಿಯರು ದಿನದ ಬಹುಭಾಗವನ್ನು ಅಧ್ಯಯನ ಜಪಗಳಲ್ಲಿ ಕಳೆಯುತ್ತಿದ್ದರು. ಹೀಗೆ ವೇದ ಮಂತ್ರಗಳು ಶ್ರೀಪಾದ ಸಾತವಲೇಕರರಿಗೆ ಎಳೆ ವಯಸ್ಸಿನಿಂದಲೇ ನಿತ್ಯವೂ ಕಿವಿಗೆ ಬೀಳುತ್ತಿದ್ದವು. ಅವರದು ಋಗ್ವೇದ ಪರಂಪರೆ. ವೇದ ಕಲಿಯುವ ನಾಲ್ಕಾರು ಮಂದಿಯೂ ಮನೆಯಲ್ಲಿರುತ್ತಿದ್ದರು. ಹೀಗೆ ಸಂಸ್ಕೃತ ಶಬ್ದಗಳ ಸುಷ್ಠುವಾದ ಉಚ್ಚಾರ ಸೌಲಭ್ಯ ಸಾತವಲೇಕರರಿಗೆ ರಕ್ತದಲ್ಲೇ ಬಂದಿತು.

ಕೋಲಗಾಂವದಲ್ಲಿ ಬ್ರಾಹ್ಮಣರ ಮನೆಗಳೇ ಹೆಚ್ಚು. ದೇವಾಲಯಗಳು ಹಲವಾರಿದ್ದವು. ಅವುಗಳಲ್ಲಿ ಕಲೇಶ್ವರ ಅಥವಾ ಕಲೋಬಾ ಮಂದಿರ ಪ್ರಮುಖ. ಊರಿನವರಿಗೆಲ್ಲಾ ಅದು ಪವಿತ್ರ ಶ್ರದ್ಧಾಸ್ಥಾನ. ಸಾವಂತವಾಡಿಯ ಆತ್ಮೇಶ್ವರ ಮಂದಿರದಲ್ಲಿ ಸಾಯಂಕಾಲ ಪೂಜೆ-ಭಜನೆಗಳಿಗಾಗಿ ಎರಡು ಸಾವಿರದಷ್ಟು ಮಂದಿ ಸೇರುತ್ತಿದ್ದರೆಂಬುದರಿಂದ ಆಗಿನ ಧಾರ್ಮಿಕ ವಾತಾವರಣವನ್ನು ಊಹಿಸಬಹುದು.

ಸಾತವಲೇಕರ್ ಅವರ ಬಾಲ್ಯದ ದಿನಗಳು ಭಾರತದ ಇತಿಹಾಸದಲ್ಲಿ ಮಹತ್ವದವು. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಲಾರ್ಡ್‌ಮೆಕಾಲೆ ಮುಂತಾದವರ ಪ್ರಭಾವದಲ್ಲಿ ಶಿಕ್ಷಣ ಪದ್ಧತಿಯ ಆಂಗ್ಲೀಕರಣದಿಂದಾಗಿ ಭಾರತದ ಸನಾತನ ಧರ್ಮಮೌಲ್ಯಗಳಿಗೆ ಗ್ರಹಣ ಹಿಡಿದಂತಾಗಿತ್ತು. ಸಮಾಜವನ್ನು ಆ ಗ್ರಹಣದಿಂದ ಮುಕ್ತಗೊಳಿಸಲು ವಿಷ್ಣುಶಾಸ್ತ್ರಿ ಚಿಪಲೂಣಕರ್, ರಾಜಾ ರಾಮಮೋಹನ್‌ರಾಯ್‌ಮುಂತಾದವರು ಆರಂಭಿಸಿದ ಶಾಂತಿಯುತ ಆಂದೋಲನ ಚರಿತ್ರಾರ್ಹ.

1885ರಲ್ಲಿ ಕಾಂಗ್ರೆಸ್‌ಸ್ಥಾಪನೆಯಾದ ಮೇಲೆ ಲೋಕಮಾನ್ಯ ತಿಲಕ್‌ಮುಂತಾದವರು ರಾಷ್ಟ್ರಕ ಭಾವವನ್ನು ಪ್ರಜ್ವಲಗೊಳಿಸಲು ನಡೆಸಿದ ಪ್ರಯತ್ನಗಳಂತೂ ಪ್ರಸಿದ್ಧವಾದವು. ಸಾತವಲೇಕರ್ ಅವರ ಮನಸ್ಸಿನ ಮೇಲೆ ಈ ವಿವಿಧ ಸಾಮಾಜಿಕ-ರಾಜಕೀಯ ಘಟನೆಗಳು ಪರಿಣಾಮ ಬೀರಿದ್ದು ಸಹಜ. ತಿಲಕರ “ಕೇಸರೀ” ಪತ್ರಿಕೆಯನ್ನು ಓದುವುದೆಂದರೆ ಸಾತವಲೇಕರರ ಪಾಲಿಗೆ ಹಬ್ಬ. ಸಾತವಲೇಕರರ ಪೂರ್ವ ವಯಸ್ಸಿನ ದಿನಗಳಲ್ಲಿ ಭಾರತ ಪರತಂತ್ರವಾಗಿತ್ತು. ಇದರಿಂದಾಗಿ ಸ್ವಾತಂತ್ರ್ಯಕಾಂಕ್ಷೆ ಅವರ ಸ್ವಭಾವದಲ್ಲಿ ಬೇರೂರಿದ್ದು ಸಹಜ. ಹೀಗೆ ತಮ್ಮ ವೇದವ್ಯಾಖ್ಯಾನದಲ್ಲಿ ಪ್ರಸಂಗ ದೊರೆತಾಗಲೆಲ್ಲ ಅವರು ರಾಷ್ಟ್ರಕ ಭಾವನೆಗಳನ್ನು ಜನರ ಅಂತರಂಗದಲ್ಲಿ ರೂಡಿಗೊಳಿಸುತ್ತ ಬಂದರು.

ಮೋಸ, ನ್ಯಾಯಗಳ ಅನುಭವ

ಸಾತವಲೇಕರ ಮನೆತನಕ್ಕೆ ಫಲವತ್ತಾದ ಜಮೀನು ಇತ್ತು. ಅದನ್ನು ಕುಟುಂಬದವರೇ – ವಿಶೇಷವಾಗಿ ದಾಮೋದರಪಂತರೇ-ಕೃಷಿ ಮಾಡಿಕೊಂಡಿದ್ದರು. ಗ್ರಾಮದ ಪೌರೋಹಿತ್ಯ, ದೇವಸ್ಥಾನದ ಉತ್ಪತ್ತಿ, ಜಮೀನಿನಿಂದ ಬಂದ ಬೆಳೆ-ಇಷ್ಟು ಸಾತವಲೇಕರ್ ಅವರ ಗೃಹ ನಿರ್ವಾಹಕ್ಕೆ ಸಾಕಾಗುತ್ತಿತ್ತು. ಮನೆಯಲ್ಲಿ ಯಾವಾಗಲೂ ಇಬ್ಬರು ಮೂವರಾದರೂ ಅತಿಥಿಗಳು ಇರುತ್ತಿದ್ದರು. ಎರಡು ವರ್ಷದಷ್ಟು ದೀರ್ಘಕಾಲ ಮನೆಯಲ್ಲಿ ಠಿಕಾಣಿ ಹಾಕಿದವರೂ ಹಲವರಿದ್ದರು. ಮನೆಯೂ ದೊಡ್ಡದು; ಇಪ್ಪತ್ತನಾಲ್ಕು ಕೋಣೆಗಳಿದ್ದವು. ಕರೆಯುವ ಹಸುಗಳು ಐದಾರಿದ್ದು, ಹಾಲು ಮೊಸರು ಸಮೃದ್ಧವಾಗಿತ್ತು.

ಅಕ್ಕಲಕೋಟೆಯಿಂದ ಕೃಷ್ಣಭಟ್ಟ ಹಳಬೆ ಎಂಬ ಹದಿನಾರು ವರ್ಷದ ತರುಣನೊಬ್ಬ ಆಶ್ರಯ ಬೇಡಿ ಬಂದ. ಹುಡುಗ ಚೂಟಿಯಾಗಿದ್ದುದನ್ನು ಕಂಡ ಸಾತವಲೇಕರರ ಅಜ್ಜ ಅವನನ್ನು ತಮ್ಮಲ್ಲಿಯೇ ಉಳಿಸಿಕೊಂಡು ಕ್ರಮ ಕ್ರಮವಾಗಿ ತಮ್ಮ ಗೃಹಕೃತ್ಯದ ವಹಿವಾಟನ್ನೆಲ್ಲಾ ಅವನಿಗೆ ವಹಿಸಿಕೊಟ್ಟರು. ಜಮೀನು ವ್ಯವಹಾರದಲ್ಲೂ ಕೃಷ್ಣಭಟ್ಟ ಚಾಲಾಕು. ಸಾತವಲೇಕರರ ತಂದೆ ದಾಮೋದರ ಪಂತರು ವೇದಾಧ್ಯಯನದಲ್ಲಿ ಬುದ್ಧಿವಂತರು; ಆದರೆ ಹೆಚ್ಚು ಅಕ್ಷರಜ್ಞಾನ ಇದ್ದವರಲ್ಲ; ಕೃಷ್ಣಭಟ್ಟ “ನೀನು ನಮ್ಮ ಮನೆಯ ವಹಿವಾಟನ್ನೆಲ್ಲಾ ಚೆನ್ನಾಗಿ ನೋಡಿಕೊಂಡಿದ್ದೀ. ಇದಕ್ಕಾಗಿ ಈ ಜಮೀನನ್ನು ನಿನಗೆ ಬಹುಮಾನವಾಗಿ ಕೊಡುತ್ತಿದ್ದೇವೆ” ಎಂಬ ದಾನಪತ್ರ ಬರೆದು ದಾಮೋದರ ಪಂತರ ಸಹಿ ಪಡೆದ.

ಹೀಗೆ ಸಾತವಲೇಕರ್ ಕುಟುಂಬ ಬಡತನಕ್ಕೆ ತುತ್ತಾಯಿತು.

ಒಂದು ಸಣ್ಣ ಸಂದರ್ಭದಿಂದ ಆಗಿನ ಅವರ ಬಡತನವನ್ನು ಊಹಿಸಬಹುದು. ಮರಾಠಿ ಶಾಲೆಯ ಶಿಕ್ಷಣ ಮುಗಿದಿತ್ತು. ಎಂಟಾಣೆ ಶಾಲಾ ಶುಲ್ಕ ಕೊಡುವುದು ಕಷ್ಟವೆನಿಸಿದ್ದರಿಂದ ಸಾತವಲೇಕರರರನ್ನು ಅವರ ತಂದೆ ಇಂಗ್ಲಿಷ್‌ಶಾಲೆಗೆ ಕಳಿಸಲಿಲ್ಲ!

ಕೆಲವು ವರ್ಷಗಳು ಕಳೆದವು. ಕೃಷ್ಣಭಟ್ಟ ಮರಣ ಹೊಂದಿದ. ಅವನ ಪತ್ನಿ ಕೋರ್ಟು ಕಛೇರಿ ಹತ್ತಿ ಒಂದಷ್ಟು ಹಣ ಪೋಲು ಮಾಡಿದಳು. ಕೃಷ್ಣಭಟ್ಟನ ದತ್ತು ಮಗ ವೆಂಕಟೇಶ ಸಜ್ಜನ. ಅವನಿಗೆ ತನ್ನ ತಂದೆ ತಾಯಿಗಳ ಅಪ್ರಾಮಾಣಿಕತೆಯಿಂದ ಅತ್ಯಂತ ಕ್ಲೇಶವಾಗಿತ್ತು; ಅವನು ಕುಟುಂಬದಿಂದ ದೂರವೇ ಉಳಿದಿದ್ದ. ತಂದೆಯ ಅವಸಾನದ ನಂತರ ವೆಂಕಟೇಶ ದಾಮೋದರ ಪಂತರ ಬಳಿಗೆ ಬಂದು ಅವರ ಮನೆ ಜಮೀನುಗಳನ್ನು ಹಿಂದಿರುಗಿಸಿ, ಹಿಂದಿನ ದಾನಪತ್ರಗಳನ್ನು ವಾಪಸ್‌ಮಾಡಿದ. ಧರ್ಮಿಷ್ಠರ ನಡವಳಿಕೆ ಆ ಬಗೆಯದು.

ವ್ಯಾಸಂಗ

ಹರಸಿಕೊಂಡಿದ್ದಂತೆ ಎಂಟನೆಯ ವರ್ಷದಲ್ಲಿ (1875) ಮಗನಿಗೆ ನರಸೋಬಾವಾಡಿಯಲ್ಲಿ ಉಪನಯನ ಮಾಡಿದರು ದಾಮೋದರಪಂತರು. ಕೆಲವು ದಿನಗಳ ನಂತರ ಸಾವಂತವಾಡಿಯ ಮರಾಠಿ ಶಾಲೆಯಲ್ಲಿ ಇವರಿಗೆ ಪ್ರವೇಶ ದೊರೆಯಿತು.

ಹದಿನಾಲ್ಕು ವರ್ಷ ವಯಸ್ಸಾಗಿದ್ದಾಗ ಇಂಗ್ಲಿಷ್‌ಶಾಲೆಗೆ ಸೇರುವ ಮನಸ್ಸಾಯಿತು. ಆದರೆ “ಮಗ ಇಂಗ್ಲಿಷ್‌ಓದಿಗೆ ಬಿದ್ದು ದಾರಿ ಕೆಟ್ಟಾನು” ಎಂದು ದಾಮೋದರ ಪಂತರು ಅದಕ್ಕೆ ಅವಕಾಶ ಕೊಡಲಿಲ್ಲ. ನಿರಾಶೆಗೊಂಡ ಸಾತವಲೇಕರರು ಪಠ್ಯಪುಸ್ತಕಗಳನ್ನು ತಂದು ಮನೆಯಲ್ಲಿಯೇ ಇಂಗ್ಲಿಷ್‌ಅಭ್ಯಾಸಕ್ಕೆ ತೊಡಗಿದರು.

ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಚಿಂತಾಮಣಿ ಕೇಲಕರ್ ಎಂಬ ವಿದ್ವಾಂಸರ ಬಳಿಯಲ್ಲಿ ಸಾತವಲೇಕರರು ಸಿದ್ಧಾಂತಕೌಮುದೀ, ಮನೋರಮಾ ಮುಂತಾದ ಸಂಸ್ಕೃತ ವ್ಯಾಕರಣ ಗ್ರಂಥಗಳನ್ನು ವ್ಯಾಸಂಗ ಮಾಡಿದರು (1884). ಕೆಲ ದಿನಗಳಾದ ಮೇಲೆ ಸಂಸ್ಕೃತಾಭ್ಯಾಸಿಗಳಾಗಿ “ಸಂಸ್ಕೃತ ವ್ಯಾಖ್ಯಾನ ಮಂಡಲ”ವೊಂದನ್ನು ಆರಂಭಿಸಿದರು. ಏಳೆಂಟು ಜನ ಸದಸ್ಯರು ವಾರದಲ್ಲೊಂದು ದಿನ ಸೇರಿ ಸರದಿಯಂತೆ ಸಂಸ್ಕೃತದಲ್ಲಿ ಉಪನ್ಯಾಸ ಮಾಡುತ್ತಿದ್ದರು.

ಶ್ರೀಪಾದ ಸಾತವಲೇಕರರಿಗೆ ಹದಿನೇಳು ವರ್ಷವಾಗಿದ್ದಾಗ ನಡೆದ ಒಂದು ಪ್ರಸಂಗ. ಸಂಕೇತ್ವರಮಠದ ಶಂಕರಾಚಾರ್ಯರು ಸಾವಂತವಾಡಿಗೆ ಬಂದಿದ್ದರು. ಅವರ ಸಮ್ಮುಖದಲ್ಲಿ ಸಾತವಲೇಕರರು “ಧರ್ಮ” ಎಂಬ ವಿಷಯ ಕುರಿತು ಸಂಸ್ಕೃತದಲ್ಲಿ ಉಪನ್ಯಾಸ ಮಾಡಿದರು. ಸಣ್ಣ ವಯಸ್ಸಿನ ಈ ಹುಡುಗನ ವಾಗ್ವೈಖರಿಯನ್ನು ಕೇಳಿ ಶಂಕರಾಚಾರ್ಯರು ಮುಕ್ತ ಕಂಠವಾಗಿ ಪ್ರಶಂಸೆ ಮಾಡಿದರು. ದಾಮೋದರ ಪಂತರಿಗಂತೂ ತಮ್ಮ ಮಗನ ಸಂಸ್ಕೃತ ಜ್ಞಾನ ನೋಡಿ ಹೆಮ್ಮೆಯುಂಟಾದುದು ಸಹಜವೇ ಆಗಿದೆ.

1889ರಲ್ಲಿ ಮಾಣಗಾಂವದ ಸಾಧಲೇ ಮನೆತನದ ಕಾಶೀತಾಯಿಯವರೊಂದಿಗೆ ಸಾತವಲೇಕರರ ವಿವಾಹವಾಯಿತು.

ಅದೇ ದಿನಗಳಲ್ಲಿ ಸಾವಂತವಾಡಿಯಲ್ಲಿ ಚಿತ್ರಕಲಾ ಶಾಲೆಯೊಂದು ಪ್ರಾರಂಭವಾಯಿತು. ಅಲ್ಲಿ ಮೊದಲು ಎರಡು ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಸಾತವಲೇಕರರು 1892ರಲ್ಲಿ ಮುಂಬಯಿಯ ಜೆ.ಜೆ.ಸ್ಕೂಲ್‌ಆಫ್‌ಆರ್ಟ್ಸ್‌ಶಾಲೆಗೆ ತೆರಳಿದರು.

ಮುಂಬಯಿ ವಾಸ

ದಾಮೋದರ ಪಂತರ ಮಿತ್ರರಾದ ಉದಾರಿ ಸಜ್ಜನರೊಬ್ಬರು ಸಾತವಲೇಕರರ ಕಲಾಶಿಕ್ಷಣಕ್ಕಾಗಿ ತಿಂಗಳಿಗೆ ಹತ್ತು ರೂಪಾಯಿ ಸಹಾಯಧನ ಕೊಡಲೊಪ್ಪಿದರು. ಸಾತವಲೇಕರರು ಮುಂಬಯಿ ತಲುಪಿ ಗ್ರಾಂಟ್‌ರೋಡ್ ಭಾಗದ ಸ್ಲೀಟರ್ ರಸ್ತೆಯ ಅಭ್ಯಂಕರ ಚಾಳಿನಲ್ಲಿ ಬಾಬಾ ಚಾಂಭೇಕರ್ ಎಂಬುವರ ಮನೆ ಕೋಣೆಯೊಂದರಲ್ಲಿ ವಾಸ್ತವ್ಯ ಹೂಡಿದರು. ಚಾಂಭೇಕರರು ಸಾತವಲೇಕರರ ತಂದೆಯ ಮಿತ್ರರು; ಹಾಗೂ ಪ್ರಸಿದ್ಧ ಉದ್ಯೋಗಪತಿ ಲಕ್ಷ್ಮಣರಾವ್‌ಕಿರ್ಲೋಸ್ಕರ್ ಅವರ ಬಂಧುಗಳು.

ಸ್ವಂತ ಊರಿನಿಂದ ಪ್ರತಿತಿಂಗಳು ಬರುತ್ತಿದ್ದ ಹತ್ತು ರೂಪಾಯಿಯ ಜೊತೆಗೆ ಆಗೀಗ ಚಿತ್ರಗಳನ್ನು ದೊಡ್ಡದು ಮಾಡುವ ವೃತ್ತಿಯಿಂದ ಐದು ಹತ್ತು ರೂಪಾಯಿ ಸಂಪಾದಿಸುತ್ತಿದ್ದರು ಸಾತವಲೇಕರ್. ಆ ದಿನಗಳಲ್ಲಿ ಜೀವನ ನಡೆಸಲು ಇಷ್ಟು ಸಂಪಾದನೆ ಸಾಕಾಗುತ್ತಿತ್ತು.

ಎರಡನೆ ಇಯತ್ತೆಗೆ ಬಂದಾಗ ವಿದ್ಯಾರ್ಥಿ ವೇತನ ಲಭಿಸಿತು. ಸ್ವಾಭಿಮಾನಿಯಾದ ಸಾತವಲೇಕರರು ಊರಿನಿಂದ ಬರುತ್ತಿದ್ದ ಹಣವನ್ನು ಕೂಡಲೇ ನಿಲ್ಲಿಸಿ ಸ್ವಾವಲಂಬಿಗಳಾದರು.

ವಿಶ್ವವಿಖ್ಯಾತ ಚಿತ್ರಕಾರ ರಾಜಾ ರವಿವರ್ಮನು ಮುಂಬಯಿಗೆ ಬಂದಾಗ ಅವನು ಚಿತ್ರಗಳನ್ನು ಬಿಡಿಸುತ್ತಿದ್ದ ರೀತಿಯನ್ನು ನೋಡುವ ಅವಕಾಶ ಸಾತವಲೇಕರರಿಗೆ ದೊರೆಯಿತು.

ರಾಜಾ ರವಿವರ್ಮರು ಚಿತ್ರಗಳನ್ನು ಬಿಡಿಸುವುದನ್ನು ಯುವಕ ಸಾತವಲೇಕರರು ನೋಡಿದರು.

ಪ್ರತಿಭೆ ಪರಿಶ್ರಮಗಳಿಂದಾಗಿ ಸಾತವಲೇಕರರು ಕಲಾಭ್ಯಾಸವನ್ನು ಯಶಸ್ಸನ್ನು ಸಂಪಾದಿಸಿದರು. ಅತ್ಯುತ್ತಮ ಸಾಧನೆಗಾಗಿ ಮೀಸಲಾಗಿದ್ದ “ಮೇಯೋ ಪ್ರಶಸ್ತಿ”ಯನ್ನು ಎರಡು ಬಾರಿ ಗೆದ್ದುಕೊಂಡರು. – ವರ್ಣಚಿತ್ರಕ್ಕಾಗಿ ಒಮ್ಮೆ, ಶಿಲ್ಪಕ್ಕಾಗಿ ಇನ್ನೊಮ್ಮೆ. ಅಂತಿಮ ಪರೀಕ್ಷೆಯಲ್ಲಿ ಶಿಷ್ಯ ಕ್ರಮಾಂಕಗಳನ್ನಲ್ಲದೆ ಪದಕಗಳನ್ನೂ ಪಡೆದರು.

ಶಿಕ್ಷಣ ಮುಗಿದ ಮೇಲೆ ಸಾತವಲೇಕರರು 1900ರಲ್ಲಿ ಅದೇ ಶಾಲೆಯಲ್ಲಿ ಶಿಕ್ಷಕರಾಗಿ ನಿಯುಕ್ತರಾದರು.

ಆದರೆ ಸಾತವಲೇಕರರು ಶಿಕ್ಷಕ ಉದ್ಯೋಗ ನಡೆಸಿದ್ದು ಆರು ತಿಂಗಳು ಕಾಲ ಮಾತ್ರ. ಹೈದರಾಬಾದಿನಲ್ಲಿ ನೆಲೆಸಿ ಚಿತ್ರಕಾರ ವೃತ್ತಿ ನಡೆಸಲು ನಿಶ್ಚಯಿಸಿದರು.

ವೇದಯಾತ್ರೆಯ ಆರಂಭ

1900ರಲ್ಲಿ ಸಾತವಲೇಕರರು ದಕ್ಷಿಣ ಹೈದರಾಬಾದಿಗೆ ಬಂದು ನೆಲೆಸಿ ತಮ್ಮ ಸ್ಟುಡಿಯೋ ಆರಂಭಿಸಿದರು. ಆ ವೇಳೆಗೆ ಪುಣೆ, ಮುಂಬಯಿ ಮುಂತಾದ ಕಡೆ ಅವರ ಚಿತ್ರಕೃತಿಗಳ ಪ್ರದರ್ಶನಗಳು ನಡೆದು ಅವರ ಕಲಾಪ್ರತಿಭೆ ಎಲ್ಲರ ಗಮನ ಸೆಳೆದಿತ್ತು. ಹೈದರಾಬಾದಿನ ನಿಜಾಮರು, ಅನೇಕ ನವಾಬರು ಮತ್ತು ಇತರ ಪ್ರತಿಷ್ಠಿತರು ಅವರ ಗಿರಾಕಿಗಳಾದರು.

ಎಡಗಡೆ : "ವೇದಗಳು ಈ ಲೋಕದ ಜೀವನವನ್ನು ಕಡೆಗಣಿಸಬೇಕೆಂದು ಬೋಧಿಸುವುದಿಲ್ಲ." ಬಲಗಡೆ : ತಾಯ್ನಾಡಿನ ಧೀರ ಯೋಧ.

ತಮ್ಮ ವಿರಾಮದ ವೇಳೆಯನ್ನು ಪಂಡಿತಜೀ ಅವರು ವೇದಾಧ್ಯಯನದಲ್ಲಿ ಕಳೆಯುತ್ತಿದ್ದರು. ಕೇಶವರಾವ್‌ಕೋರಟಕರ್ ಎಂಬುವರ ಮೂಲಕ ಅವರಿಗೆ ಆ ವೇಳೆಗೇ ಆರ್ಯ ಸಮಾಜದ ಸಂಪರ್ಕ ಉಂಟಾಗಿತ್ತು. ಅದರ ಸದಸ್ಯರೂ ಆದರು. ಆರ್ಯ ಸಮಾಜದ ಹೈದರಾಬಾದ್‌ಶಾಖೆಯ ಭಂಡಾರದಲ್ಲಿ ಮಹರ್ಷಿ ದಯಾನಂದರ ವೇದ ವ್ಯಾಖ್ಯಾನಗಳನ್ನೂ ಇತರ ಗ್ರಂಥಗಳನ್ನೂ ಗಾಢವಾಗಿ ಅಭ್ಯಾಸ ಮಾಡಿದರು. ಅಲ್ಲಿ ನಡೆಯುತ್ತಿದ್ದ ವೇದ ವಿಷಯಕ ಚರ್ಚೆಗಳಲ್ಲೂ ಪಂಡಿತಜೀ ಭಾಗವಹಿಸತೊಡಗಿದರು.

ಪಂಡಿತಜೀ ಕ್ರಮಕ್ರಮವಾಗಿ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಆರಂಭಿಸಿದರು : “ವಿವೇಕವರ್ಧಿನೀ ವಿದ್ಯಾಲಯ”, ಯುವಕರಿಗಾಗಿ ವ್ಯಾಯಾಮಶಾಲೆ, ಸಾರ್ವಜನಿಕರಿಗಾಗಿ ವ್ಯಾಖ್ಯಾನ ಮಂಡಲ ಇತ್ಯಾದಿ. ವ್ಯಾಯಾಮ ಶಾಲೆಯಲ್ಲಿ ತರಬೇತಿ ಪಡೆಯಲು ಹೈದರಾಬಾದಿನಿಂದ ಮಾತ್ರವಲ್ಲದೆ ಮಧ್ಯಪ್ರಾಂತ, ಬಂಗಳ ಮುಂತಾದ ಪ್ರದೇಶಗಳಿಂದಲೂ ಕ್ರಾಂತಿಕಾರಿಗಳು ಬರುತ್ತಿದ್ದರು. ಒಂದು ಅವಧಿಯಲ್ಲಿ ವ್ಯಾಯಾಮ ಶಿಕ್ಷಣಾರ್ಥಿಗಳ ಸಂಖ್ಯೆ 1,200 ರಷ್ಟು ಅಧಿಕವಾಗಿತ್ತು.

ಆಗಿಂದಾಗ ದೇಶಭಕ್ತಿ ಪ್ರವರ್ತನೆಗಾಗಿ ಪಂಡಿತಜೀ ಪ್ರವಾಸ ಕೈಗೊಳ್ಳುತ್ತಿದ್ದರು. ಅವರ ಉಪನ್ಯಾಸಗಳಿಗೆ ಅಘೋರನಾಥಚಟ್ಟೋಪಾಧ್ಯಾಯ (ಸರೋಜಿನಿ ನಾಯ್ಡು ಅವರ ತಂದೆ) ಮುಂತಾದ ಪ್ರಮುಖರು ಅಧ್ಯಕ್ಷತೆ ವಹಿಸುತ್ತಿದ್ದರು.

ಪಂಡಿತಜೀಯವರ ವೇದಯಾತ್ರೆಗೆ ಹೈದರಾಬಾದು ಪ್ರವೇಶದ್ವಾರವಾಯಿತು. ಹೈದರಾಬಾದಿನ ಪ್ರಾಚೀನವಾದ ಹೆಸರು ಭಾಗ್ಯನಗರ ಎಂದು. ಸಾತವಲೇಕರರ ಪಾಲಿಗೆ ಹಾಗೂ ವೇದಸಾಹಿತ್ಯದ ಪಾಲಿಗೆ ಭಾಗ್ಯನಗರವೆಂಬ ಹೆಸರು ಅನ್ವರ್ಥವಾಯಿತು. ಹೈದರಾಬಾದಿನಲ್ಲಿ ಪಂಡಿತಜೀಯವರ ಚಿತ್ರಕಲೆ ಪ್ರವರ್ಧಮಾನವಾಯಿತು. ಜೊತೆಜೊತೆಗೇ ವೇದಗಳನ್ನು ಕುರಿತ ಪ್ರವಚನಗಳಿಂದಾಗಿ ಅವರ ಪಾಂಡಿತ್ಯವೂ ಪ್ರಸಿದ್ಧಿ ಪಡೆಯಿತು.

ಮಹರ್ಷಿ ದಯಾನಂದರ ಗ್ರಂಥಗಳಲ್ಲಿ “ಸತ್ಯಾರ್ಥ ಪ್ರಕಾಶ”, “ಋಗ್ವೇದ ಭಾಷ್ಯ ಭೂಮಿಕಾ” – ಇವು ಮುಖ್ಯವಾದವು. ಪಂಡಿತಜೀ ಇವೆರಡನ್ನೂ ಮರಾಠಿ ಭಾಷೆಗೆ ಅನುವಾದ ಮಾಡಿದರು. ಆ ಅನುವಾದಗಳು ಸಮರ್ಥವೂ ಆಕರ್ಷಕವೂ ಆಗಿದ್ದವು. ಬರೋಡೆಯ ಸಯ್ಯಾಜಿರಾವ್‌ಗಾಯಕವಾಡ್‌ಮಹಾರಾಜರೂ, ಇತರ ವಿದ್ವಜ್ಜನರೂ ಅವನ್ನು ತುಂಬಾ ಮೆಚ್ಚಿಕೊಂಡರು.

ದಿವ್ಯಜ್ಞಾನ ಸಮಾಜದ (ಥಿಯಸಾಫಿಕಲ್‌ಸೊಸೈಟಿ) ಕಲಾಪಗಳಲ್ಲೂ ಐದಾರು ವರ್ಷ ಕಾಲ ಪಂಡಿತಜೀಯವರು ಭಾಗವಹಿಸಿದರು.

ಈ ಎಲ್ಲ ಚಟುವಟಿಕೆಗಳ, ವ್ಯಾಸಂಗದ ಪರಿಣಾಮವಾಗಿ ಪಂಡಿತಜೀ ವೇದವಿದ್ವಾಂಸರ ಪಂಕ್ತಿಯಲ್ಲಿ ಗಣ್ಯತೆ ಪಡೆದುಕೊಂಡರು.

ಆ ದಿನಗಳಲ್ಲಿ ಥಿಯಸಾಫಿಕಲ್‌ಸೊಸೈಟಿಗೂ ಆರ್ಯ ಸಮಾಜಕ್ಕೂ ತೀಕ್ಷ್ಣ ವಿರಸ ಇತ್ತು. ಸಾತವಲೇಕರರು ಈ ಎರಡೂ ಮಾರ್ಗಗಳ ಗ್ರಂಥಗಳನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿದರು. ಇವರು ಥಿಯಸಾಫಿಕಲ್‌ಸೊಸೈಟಿಯ ಅನುಯಾಯಿಯಾಗಿದ್ದಾರೆಂಬ ಆರೋಪಕ್ಕಾಗಿ ಇವರನ್ನು ಆರ್ಯ ಸಮಾಜದಿಂದ ಉಚ್ಚಾಟನೆ ಮಾಡಬೇಕೆಂದು ಹಲವರು ಆಗ್ರಹಪಡಿಸಿದರು. ಆದರೆ ಪಂಡಿತಜೀ ಅವರ ಧಾರ್ಮಿಕ ವ್ಯಾಖ್ಯಾನಗಳ ಜನಪ್ರಿಯತೆ ಹೆಚ್ಚಿದಂತೆ ಈ ವಿವಾದಗಳೆಲ್ಲ ಅಡಗಿದವು. ಆರ್ಯ ಸಮಾಜದ ಅತ್ಯಂತ ಧೀಮಂತ ಪ್ರಭಾವಶಾಲಿ ಪಂಡಿತರೆಂದು ಸಾತವಲೇಕರ್ ಪರಿಗಣಿತರಾದರು.

ಪಂಡಿತಜೀಯವರ ಜೀವನವಷ್ಟೂ ಶುಭ್ರ, ಸ್ಫುಟಿಕದಂತೆ ನಿರ್ಮಲ. ಆಮೇಲಿನ ವರ್ಷಗಳಲ್ಲಿ ಸಾತವಲೇಕರ್ ಅವರು ನಡೆಸುತ್ತಿದ್ದ ಸ್ವಾಧ್ಯಾಯ ಮಂಡಲ ಯಾವಾಗಲೂ ಸಾಲ ಸಂಕಷ್ಟಗಳಲ್ಲೇ ಇರುತ್ತಿತ್ತು. ಇದನ್ನು ಕಂಡು ಒಬ್ಬ ಆಪ್ತರು ಸದುದ್ದೇಶದಿಂದ ಸಲಹೆ ನೀಡಿದರು: “ಪಂಡಿತಜೀ, ನೀವು ಗಡ್ಡ, ಜಟೆ ಬೆಳೆಸಿ ಜನಕ್ಕೆ ಭಸ್ಮ ಪ್ರಸಾದ ಕೊಡಲು ಆರಂಭಿಸಿ, ಆಗ ಹಣದ ಮಳೆಯೇ ಸುರಿದೀತು.” ಪಂಡಿತಜೀ ನಗುತ್ತಾ ಉತ್ತರಕೊಟ್ಟರು : “ನಾನು ವೈದಿಕ ಮಾರ್ಗದ ಅನುಯಾಯಿ. ವೇದದ ಆದೇಶ ಸತ್ಯಧರ್ಮದ ಪ್ರಚಾರ ಮಾಡಬೇಕೆಂದು. ಅದಕ್ಕೆ ಪೂರ್ತಿ ವಿರುದ್ಧವಾದ ಪಾಖಂಡ ಮಾರ್ಗ ಹಿಡಿಯುವಂತೆ ನೀನು ನನಗೆ ಹೇಳುತ್ತಿದ್ದೀಯಲ್ಲ!”

ಸಾತವಲೇಕರರ ವೇದಾರ್ಥ ಪ್ರತಿಪಾದನೆಗೆ ಪುಷ್ಟಿಯೊದಗಿಸುವ ಒಂದು ಪ್ರಸಂಗ ನಡೆಯಿತು. ರಾಯಚೂರಿನಲ್ಲಿ ಒಂದು ಸೋಮಯಜ್ಞ ಆಚರಿಸಲಾಯಿತು. ಸಾತವಲೇಕರರೂ ಅದನ್ನು ವೀಕ್ಷಿಸಿದರು. ಯಜ್ಞದಲ್ಲಿ ಮೂರು ಕುರಿಗಳನ್ನು ಬಲಿಕೊಡಲಾಯಿತು. ಇದರಿಂದ ಪ್ರಚೋದಿತರಾದ ವಿದ್ವಾಂಸರು “ವೈದಿಕ ಯಜ್ಞದಲ್ಲಿ ಪಶುವಧೆ ವಿಹಿತವೆ? ಎಂಬ ಬಗೆಗೆ ತೀಕ್ಷ್ಣ ಚರ್ಚೆಯನ್ನು ಆರಂಭಿಸಿದರು. ಆರ್ಯ ಸಮಾಜದ ಪರವಾಗಿ ಮಾತನಾಡಿದ ಸಾತವಲೇಕರರು “ನಿರ್ಮಾಂಸ ಯಜ್ಞವೇ ವೇದದಲ್ಲಿ ವಿಧಿಸಿರುವುದು” ಎಂಬ ವಾದವನ್ನು ಸಮರ್ಥಿಸಿದರು. ಕೆಲವು ಸನಾತನ ವಿದ್ವಾಂಸರು ಸಮಾಂಸ ಯಜ್ಞದ ಪರವಾಗಿ ಮಾತನಾಡಿದರು. ದೇಶದ ವಿವಿಧ ಪ್ರಾಂತಗಳ ಪ್ರಮುಖ ವಿದ್ವಾಂಸರೆಲ್ಲ ವಾದದ ಕಣಕ್ಕೆ ಇಳಿದರು. ಒಂದೊಂದು ದಿನವೂ ಐದೈದು ಸಾವಿರಕ್ಕೂ ಮೀರಿ ಸಭಿಕರು ನೆರೆಯತೊಡಗಿದರು. ಕೊನೆಯಲ್ಲಿ ಪಶುವಧೆಗೆ ವಿರುದ್ಧವಾದ ಆರ್ಯಸಮಾಜ ವಾದವೇ ಸರಿಯಾದದ್ದೆಂದು ಜನ ನಿರ್ಣಯಿಸಿದರು.

ವೇದ ಮೀಮಾಂಸೆಯನ್ನು ಕುರಿತ ಗ್ರಂಥ ರಚನೆಯೂ ಇದೇ ಸಂದರ್ಭದಲ್ಲಿ ಆರಂಭವಾಯಿತು. “ವೈದಿಕ ಯಜ್ಞ ಸಂಸ್ಥಾ” ಎಂಬ ಪುಸ್ತಕ ಬರೆದು ಸಾತವಲೇಕರರು ಪ್ರಚುರ ಪಡಿಸಿದರು. ಆನಂತರ ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆ, ಅಸ್ಪೃಶ್ಯತಾ ನಿವಾರಣೆ ಮುಂತಾದ ವಿಷಯಗಳನ್ನೂ ವಿವೇಚಿಸಿ ಪ್ರಬಂಧಗಳನ್ನು ಪ್ರಕಟಿಸಿದರು. ಇವರ “ಸ್ಪರ್ಶಾ ಸ್ಪರ್ಶ” ಎಂಬ ಗ್ರಂಥಕ್ಕೆ ಬರೋಡಾ ಸರಕಾರ ಐನೂರು ರೂಪಾಯಿಗಳ ಪಾರಿತೋಷಕ ನೀಡಿ ಪುರಸ್ಕರಿಸಿತು.

ಅದಮ್ಯ ಉತ್ಸಾಹ, ನಿರಂತರ ಕಾರ್ಯಶೀಲತೆ, ಪ್ರಖರ ವೇದಧರ್ಮನಿಷ್ಠೆ, ಸ್ನೇಹ ಸೌಶೀಲ್ಯಗಳು – ಇವು ಸಾತವಲೇಕರ್ ಅವರ ಸ್ವಭಾವ ಲಕ್ಷಣಗಳು.

1892ರಿಂದಲೇ ತಿಲಕರ ಅನುಯಾಯಿಯಾಗಿದ್ದ ಸಾತವಲೇಕರರು ಕಾಂಗ್ರೆಸ್‌ಕಲಾಪಗಳಲ್ಲೂ ಭಾಗಹಿಸುವುದು ಅನಿವಾರ್ಯವಾಯಿತು.

ಆಂಗ್ಲ ಸರಕಾರದ ಆಗ್ರಹ

ಜನಮನದಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸುತ್ತಿದ್ದ ಪಂಡಿತಜೀ ಅವರ ಭಾಷಣಗಳು ಹೈದರಾಬಾದಿನ ನಿಜಾಮರಿಗೆ ಅಸಮ್ಮತವಾಗಿರಲಿಲ್ಲ. ಆದರೆ ಆಂಗ್ಲ ರೆಸಿಡೆಂಟ ಸುಮ್ಮನಿರಬೇಕಲ್ಲ! ರೆಸಿಡೆಂಟನು ನಿಜಾಮರಿಗೆ ಕಿರುಕುಳ ಕೊಡಲಾರಂಭಿಸಿದ. “ಸಾತವಲೇಕರರನ್ನು ದೇಶಭ್ರಷ್ಟರೆಂದು ಘೋಷಿಸಿ ಹೊರಹಾಕಿ” ಎಂದು ಒತ್ತಾಯ ಪಡಿಸಲಾಂಭಿಸಿದ. ರೆಸಿಡೆಂಟನ ಒತ್ತಡ ತಡೆಯಲಾರದೆ ನಿಜಾಮ ಸರಕಾರ ಸಾತವಲೇಕರರನ್ನು ಪ್ರಚಾರ ಕಾರ್ಯ ತಗ್ಗಿಸುವಂತೆ ಸ್ನೇಹಪೂರ್ವಕವಾಗಿ ಕೇಳಿಕೊಂಡಿತು. ಅದಕ್ಕೆ ಸಾತವಲೇಕರ್ ಹೇಳಿದರು : “ನಾನು ಪ್ರಚಾರ ಮಾಡಹೊರಟಿರುವುದು ಸ್ವದೇಶಪ್ರೇಮವನ್ನು. ಇದರಿಂದ ನಿಜಾಮರ ಪ್ರಜೆಗಳಿಗೆಲ್ಲ ಹಿತವೇ ಆಗುವುದೆಂಬ ಪೂರ್ಣ ವಿಶ್ವಾಸ ನನಗಿದೆ. ಆದ್ದರಿಂದ ಏನೇ ಆದರೂ ಪ್ರಚಾರ ಕಾರ್ಯವನ್ನು ನಾನು ಮುಂದುವರಿಸುವವನು. ಸರಕಾರ ತನಗೆ ಯುಕ್ತವೆನಿಸುವ ಕ್ರಮ ಕೈಗೊಳ್ಳಲಿ.”

1907ರಲ್ಲಿ ಸಾತವಲೇಕರ್ ಅವರ “ವೈದಿಕ ರಾಷ್ಟ್ರೀಗೀತೆ” ಎಂಬ ಪ್ರಬಂಧ ಪ್ರಕಟವಾಯಿತು. ಅಥರ್ವೇದದ ಒಂದು ಸೂಕ್ತದ ವ್ಯಾಖ್ಯಾನ ಅದು. ನಗರ ರಕ್ಷಣೆ, ಅರಾಜಕತೆಯ ನಿವಾರಣೆ, ಶತ್ರುವಿನಾಶ, ವಿಜಯಪ್ರಾಪ್ತಿ ಮೊದಲಾದ ಪ್ರಸಂಗಗಳಲ್ಲಿ ಪ್ರಯೋಗಿಸಬಹುದಾದ ಮಂತ್ರಗಳು ಅದರಲ್ಲಿವೆ. ರಾಷ್ಟ್ರವನ್ನು ತಾಯಿಯಂತೆ ಕಾಣಬೇಕು (“ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ”) – ಎಂಬ ಆಶಯದ ಮಾತುಗಳು ಅದರಲ್ಲಿ ಮೇಲಿಂದ ಮೇಲೆ ಬಂದಿವೆ. ಗತಕಾಲದಲ್ಲಿ ರಾಷ್ಟ್ರಗೀತೆಯಾಗಿ ಮೆರೆದ ಆ ಮಂತ್ರಸಮೂಹದ ವ್ಯಾಖ್ಯಾನರೂಪವಾಗಿ ಬರೆದ ಆ ಪ್ರಬಂಧ ಆಂಗ್ಲ ಸರಕಾರವನ್ನು ಕೆರಳಿಸಿತು. ಸರಕಾರ ಕೂಡಲೇ ಜಫ್ತಿ ಮಾಡಿ, ವಿತರಣೆಯಾಗದೆ ಉಳಿದ ಪ್ರತಿಗಳನ್ನು ವಶಪಡಿಸಿಕೊಂಡು ಸುಟ್ಟು ಹಾಕಿತು.

ತಮ್ಮನ್ನು ಗಡೀಪಾರು ಮಾಡದೆ ನಿಜಾಮ ಸರಕಾರಕ್ಕೆ ಗತ್ಯಂತರವಿಲ್ಲವೆಂದು ಸಾತವಲೇಕರ್ ಮನಗಂಡರು. ನಿಜಾಮರು ಪೇಚಿಗೆ ಸಿಕ್ಕುವುದನ್ನು ತಪ್ಪಿಸಲು ಪಂಡಿತಜೀ ಸರಕಾರದ ಹುಕುಂ ಹೊರಡುವ ಮೊದಲೇ ಹೈದರಾಬಾದನ್ನು ಬಿಟ್ಟು ಹೊರಟರು (1907).

ಕಾಂಗಡೀ ಗುರುಕುಲಕ್ಕೆ

ಹೈದರಾಬಾದಿನಿಂದ ಹೊರಟ ನಂತರ ಸಾತವಲೇಕರರು ಹರಿದ್ವಾರದ ಕಾಂಗಡೀ ಗುರುಕುಲದಲ್ಲಿರಬೇಕೆಂದು ಯೋಚಿಸಿದರು.

ಸಾತವಲೇಕರರ ನಿರಂತರ ಜ್ಞಾನಾನ್ವೇಷಣೆ, ಚಿಂತನಶೀಲತೆ, ನಿಯಮನಿಷ್ಠೆ, ಧರ್ಮ ಪ್ರಚಾರೋತ್ಸಾಹ-ಇವು ದಯಾನಂದರ ಶಿಷ್ಯರಾದ ಮಹಾತ್ಮ ಮುನ್ಶೀರಾಮ್‌ಅವರ (ಸ್ವಾಮಿ ಶದ್ಧಾನಂದರು) ಗಮನ ಸೆಳೆಯಿತು. ತಮ್ಮ ಕಾಂಗಡೀ ಗುರುಕುಲದ ಚಿತ್ರಕಲಾ ಶಿಕ್ಷಕರಾಗಿ ಹಾಗೂ ವೇದಾಧ್ಯಾಪಕರಾಗಿ ಸಾತವಲೇಕರರನ್ನು ಕರೆಸಬೇಕೆಂದು ಅವರು ನಿಶ್ಚಯಿಸಿದರು.

ಕಾಂಗಡೀ ಗುರುಕುಲದಲ್ಲಿ ಬ್ರಹ್ಮಚಾರಿಗಳಿಗೆ ಪಂಡಿತಜೀಯವರಿಂದ ಕಲಾಶಿಕ್ಷಣ, ಜ್ಞಾನ ಪ್ರಬೋಧನೆ, ಅವರ ಸ್ವಂತ ಚಿತ್ರಕಲೆ, ಗ್ರಂಥರಚನಾದಿ ಹವ್ಯಾಸ – ಎಲ್ಲವೂ ಸಮರ್ಪಕವಾಗಿ ನಡೆದವು. ಸ್ವಂತ ಉದ್ಯೋಗ ಸಾಧನೆಗೂ ಅವಕಾಶವಾಯಿತು. ಆದರೆ ಈ ನೆಮ್ಮದಿ ಬಹಳ ದಿನ ಉಳಿಯಲಿಲ್ಲ.

ಕೊಲ್ಹಾಪುರದ “ವಿಶ್ವವೃತ್ತ” ಮಾಸಪತ್ರಿಕೆಯಲ್ಲಿ 1908ರಲ್ಲಿ ಪ್ರಕಟವಾದ ಪಂಡಿತಜೀ ಅವರ “ವೈದಿಕ ಪ್ರಾರ್ಥನೆಗಳ ತೇಜಸ್ವಿತೆ” ಎಂಬ ಪ್ರಬಂಧ ಸರಕಾರದ ಕೋಪಕ್ಕೆ ತುತ್ತಾಯಿತು. “ವೈದಿಕ ರಾಷ್ಟ್ರಗೀತೆ” ಪ್ರಬಂಧದ ಕಾರಣ ಆ ಮುಂಚೆಯೆ ಸಾತವಲೇಕರರು ದೇಶದ್ರೋಹಿಗಳ ಪಟ್ಟಿಯಲ್ಲಿ ದಾಖಲಾಗಿದ್ದರಷ್ಟೆ! “ಆತಂಕಗಳು ಎದುರಾದಾಗ ತೆಪ್ಪಗೆ ಕೂಡುವುದು ಪಾಪ; ಸ್ವರಕ್ಷಣೆಗಾಗಿ ಶ್ರಮಿಸುವುದು ಎಲ್ಲರ ಕರ್ತವ್ಯ. ಇದೇ ವೈದಿಕ ಪ್ರಾರ್ಥನೆಗಳ ಆಶಯ.” ಇದು ಸಾತವಲೇಕರರು ಬರೆದಿದ್ದ ಪ್ರಬಂಧದ ತಾತ್ಪರ್ಯ.

ಪಂಡಿತಜೀಯವರ ಮೇಲೆ ಮೊಕದ್ದಮೆ ಹೂಡುವಂತೆ ಕೊಲ್ಹಾಪುರದ ಶಾಹೂ ಮಹಾರಾಜರನ್ನು ಆಂಗ್ಲ ಸರಕಾರ ಒತ್ತಾಯಪಡಿಸಿತು. ಆ ಮಹಾರಾಜ ವಿದೇಶಿ ಸರಕಾರದ ಮೆಚ್ಚಿಗೆಗಾಗಿ ಹಾತೊರೆಯುತ್ತಿದ್ದವನು. ಮಹಾರಾಜನ ಮೂಲಕ ಸರಕಾರ “ವಿಶ್ವವೃತ್ತ” ಪತ್ರಿಕೆಯ ಸಂಪಾದಕ ಬಿಜಾಪುರಕರ್, ಮುದ್ರಕ ವಿನಾಯಕ ನಾರಾಯಣ ಜೋಶೀರಾವ್, ಪ್ರಕಾಶಕ ವಾಮನ ಮಲ್ಹಾರ ಜೋಶಿ, ಲೇಖಕ ಸಾತವಲೇಕರ್ _ ಈ ನಾಲ್ವರ ಬಂಧನಕ್ಕಾಗಿ ವಾರಂಟ್‌ಹೊರಡಿಸಿತು.

ಪಂಡಿತಜೀ ಅವರಿಗೆ ಹೇಗೋ ಈ ಸುದ್ದಿ ಮುಂಚಿತವಾಗಿ ತಿಳಿಯಿತು. ತಮ್ಮಿಂದಾಗಿ ಗುರುಕುಲಕ್ಕೆ ತೊಂದರೆಯಾಗದಿರಲೆಂದು ಗುರುಕುಲ ಬಿಟ್ಟು ಹೊರಟರು. ತಮ್ಮ ಕಾರಣ “ವಿಶ್ವವೃತ್ತ” ಸಂಪಾದಕ, ಪ್ರಕಾಶಕ, ಮುದ್ರಕರಿಗೆ ತೊಂದರೆಯಾಗದಿರಲೆಂದು ಕ್ರಮ ಯೋಚಿಸಲು ಬೆಳಗಾವಿಗೆ ಹೋಗಿ ತಮ್ಮ ಆಪ್ತಮಿತ್ರ ಮೋರೋಪಂತ ಮರಾಠೆ ಎಂಬ ಜಮೀನ್ದಾರರನ್ನು ಕಂಡರು.

ಪಂಡಿತಜೀ ಅವರ ಮಿತ್ರರೆಲ್ಲ ಕೊಟ್ಟ ಸೂಚನೆ ಇದು; “ನೀವಾಗಿ ಹೋಗಿ ಸೆರೆ ಸೇರಬೇಕಾದದ್ದಿಲ್ಲ. ಸರಕಾರ ನಿಮ್ಮನ್ನು ಪತ್ತೆ ಹಚ್ಚಿ ಕರೆದಾಗ ಹೋಗಿ, ಅಷ್ಟೆ” ಅದರಂತೆ ನಡೆದರು. ಈ “ವಿರಾಮ”ದ ಅವಧಿಯನ್ನು ರಾಮಾಯಣ ಮಹಾಭಾರತಗಳ ವಿಶೇಷ ಅಧ್ಯಯನಕ್ಕಾಗಿ ಬಳಸಿಕೊಂಡರು.

ಬಂಧನ, ಬಿಡುಗಡೆ

ಸರಕಾರದ ಕಣ್ಣು ತಪ್ಪಿಸಿ ಊರಿಂದೂರಿಗೆ ಪಯಣಿಸಿ ಪಂಡಿತಜೀ ಮತ್ತೆ ಹರಿದ್ವಾರಕ್ಕೆ ಮರಳಿ ಅಲ್ಲಿ ಅಜ್ಞಾತ ವಾಸವನ್ನಾರಂಭಿಸಿದರು. ಆದರೆ ಅಲ್ಲಿಗೆ ಬುರುತ್ತಿದ್ದ ಅಂಚೆಯವನು ಕಲೆಕ್ಟರಿಗೆ ಸುದ್ದಿ ಮುಟ್ಟಿಸಿದ. ಎರಡೇ ದಿನದಲ್ಲಿ ಪೊಲೀಸ್‌ಪಡೆ ಬಂದಿತು. ಖೂನಿ, ರಾಜದ್ರೋಹ ಈ ಎರಡು ಆರೋಪಗಳನ್ನು ಹೊರಿಸಿ ಪಂಡಿತಜೀ ಅವರನ್ನು ಬಂಧಿಸಲಾಯಿತು ಬಿಜನೌರಿನ ಕಾರಾಗೃಹದಲ್ಲಿ ಒಂದು ತಿಂಗಳ ವಾಸವಾಯಿತು.

ಮೊಕದ್ದಮೆಗಾಗಿ ಸಾತವಲೇಕರರನ್ನು ಕೊಲ್ಹಾಪುರಕ್ಕೆ ಸಾಗಿಸಲಾಯಿತು. ಪ್ರತಿಯೊಂದು ರೈಲು ನಿಲ್ದಾಣದಲ್ಲೂ ಅಧಿಕ ಸಂಖ್ಯೆಯಲ್ಲಿ ಜನ ನೆರೆದು ಈ ಕೃಶಶರೀರದ ವ್ಯಕ್ತಿಯನ್ನು ಅಭಿನಂದಿಸುತ್ತಿದ್ದುದು ಸರಕಾರಕ್ಕೆ ಆಶ್ಚರ್ಯವುಂಟುಮಾಡಿತು.

ಮೊಕದ್ದಮೆ ಸುದೀರ್ಘವಾಗಿಯೇ ನಡೆಯಿತು. ಸಾತವಲೇಕರರ ಮೇಲಿನ ಎರಡು ಆಪಾದನೆಗಳೂ ಪೂರ್ಣ ನಿರಾಧಾರವೆಂದು ಸಾಬೀತಾಯಿತು. ವಿಚಾರಣೆಯಲ್ಲಿ ಸಾತವಲೇಕರ್ ತೋರಿದ ದಿಟ್ಟ ನಿಲುವನ್ನೂ ಅವಿಚಲಿತ ರಾಷ್ಟ್ರನಿಷ್ಠೆಯನ್ನೂ ಇಡೀ ದೇಶವೇ ಕೊಂಡಾಡಿತು. ಪಂಡಿತಜೀ ಹೇಳಿದರು :

“ನಾನು ವೇದಪುರುಷನ ಅರ್ಚಕ. ದೇಶವು ಪಾರತಂತ್ರ್ಯಕ್ಕೆ ಸಿಕ್ಕಿರುವಾಗ ದೇಶದ ಕ್ಷಾತ್ರ ತೇಜಸ್ಸನ್ನು ಪ್ರಚೋದಿಸುವುದು ನಿಜವಾದ ಬ್ರಾಹ್ಮಣನ ಕರ್ತವ್ಯವೆಂದು ವೇದಗಳ ಆಜ್ಞೆಯಿದೆ. ನಾನು ಬ್ರಾಹ್ಮಣ. ನಾನು ಬರೆದು ಪ್ರಕಟಿಸಿದೆನೆಂದು ತಾವು ಹೇಳುವ ಎಲ್ಲವೂ ನನ್ನಿಂದಾದದ್ದೆಂದು ನಾನು ಒಪ್ಪಿಕೊಳ್ಳುತ್ತೇನೆ. ಅದನ್ನು ಬರೆದುದಕ್ಕಾಗಿ ನನಗೆ ರವೆಯಷ್ಟೂ ಪಶ್ಚಾತ್ತಾಪವಿಲ್ಲ. ಹಿಂದೆ ಪಶ್ಚಾತ್ತಾಪವಿರಲಿಲ್ಲ. ಮುಂದೆಯೂ ಇರದು. ನನ್ನ ಬಗೆಗೆ ತಾವು ಯಾವ ನಿರ್ಣಯಬೇಕಾದರೂ ಕೈಗೊಳ್ಳಲು ಸ್ವತಂತ್ರರು.”

"ಅದನ್ನು ಬರದುದಕ್ಕಾಗಿ ನನಗೆ ರವೆಯಷ್ಟೂ ಪಶ್ಚಾತ್ತಾಪವಿಲ್ಲ"

ಬಿಡಗಡೆಯಾದ ಮೇಲೆ (1909) ಸಾತವಲೇಕರ್ ಲಾಹೋರಿಗೆ ಹೋಗಿ ನೆಲೆಸಿದರು. ರಾಷ್ಟ್ರಭಕ್ತಿ ಪ್ರಚೋದನೆ, ವೇದ ಸಂದೇಶ ಪ್ರಚಾರ-ಎರಡೂ ಕಾರ್ಯಗಳನ್ನು ಮುಂದುವರಿಸಿದರು. ಜಯಪುರ, ಪಟಿಯಾಲಾ, ಕಾಶ್ಮೀರ, ಪೆಶಾವರ್-ಎಲ್ಲೆಡೆ ಸಂಚರಿಸಿದರು. ಲಾಲಾ ಲಜಪತರಾಯ್, ಡಾಕ್ಟರ್ ಸತ್ಯಪಾಲ್, ಡಾಕ್ಟರ್ ಕಿಚ್‌ಲು ಮುಂತಾದವರ ದೇಶಹಿತ ಕಾರ್ಯಗಳಲ್ಲಿ ನೆರವಾದರು (1910-1917).

ಚಿತ್ರಗಾರಿಕೆಯಿಂದ ತಮಗೆ ಬರುತ್ತಿದ್ದ ಸಾವಿರಾರು ರೂಪಾಯಿ ಹಣವನ್ನು ವೇದಸಾಹಿತ್ಯ ಪ್ರಚಾರಕ್ಕಾಗಿ ವ್ಯಯ ಮಾಡಿದರು.

1916ರ ಲಖ್ನೋ ಕಾಂಗ್ರೆಸ್‌ಅಧಿವೇಶನದಲ್ಲಿ ಸಾತವಲೇಕರ್ ಅವರು ತಿಲಕ್‌ಮತ್ತು ಗಾಂಧಿಯವರ ಬಲಗೈ ಬಂಟರಾಗಿ ದುಡಿದರು. ಹೋಂರೋಲ್‌ಚಳವಳಿಗೂ ತುಂಬ ನೆರವಿತ್ತರು.

ಸ್ವಾಧ್ಯಾಯ ಮಂಡಲ

ಸದಾ ಕಾರಾಗೃಹದ ನೆರಳಿನಲ್ಲಿದ್ದರೆ ತಮ್ಮ ವೇದ ಪ್ರಚಾರ ಕಾರ್ಯ ಸಾಗದೆಂದು ಪಂಡಿತಜೀಯವರಿಗೆ ಅನ್ನಿಸಿತು. ತಮ್ಮ ಚಿತ್ರಕಲಾ ಸಂಸ್ಥೆಯನ್ನು ಶಿಷ್ಯನೊಬ್ಬನಿಗೆ ಬಿಟ್ಟುಕೊಟ್ಟು, 1918ರ ಮೇ ತಿಂಗಳಲ್ಲಿ ಔಂಧ ಪ್ರಾಂತಕ್ಕೆ ಹೋಗಿ ನೆಲೆಸಿದರು. ಅಲ್ಲಿಯ ಮಹಾರಾಜ ಬಾಲಾಸಾಹೇಬ್‌ಪಂತ್‌ಸಾತವಲೇಕರರ ಬಾಲ್ಯದ ಮಿತ್ರ. ವೇದ ಘೋಷಣೆಗಾಗಿಯೇ ಮೀಸಲಾದ “ಸ್ವಾಧ್ಯಾಯ ಮಂಡಲ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ವೇದಗಳ ಅನುವಾದವೂ ಪ್ರಕಾಶನ ಕಾರ್ಯವೂ ಭರದಿಂದ ಸಾಗಿತು. 1919ರಲ್ಲಿ ಅವರು ಆರಂಭಿಸಿದ “ವೈದಿಕ ಧರ್ಮ” ಮಾಸಪತ್ರಿಕೆ ಈಗಲೂ ನಡೆಯುತ್ತ ಆಸ್ತಿಕರ ಮೆಚ್ಚುಗೆ ಗಳಿಸಿಕೊಂಡಿದೆ.

ಆದರೆ ರಾಜಕೀಯ ಕಾರ್ಯವನ್ನು ಪಂಡಿತಜೀ ಕೈ ಬಿಡಲಿಲ್ಲ. ಸತಾರಾ ಪ್ರಾಂತೀಯ ಕಾಂಗ್ರೆಸ್ ಅಧ್ಯಕ್ಷರಾಗಿ (1920) ಆ ಜಿಲ್ಲೆಯಲ್ಲೆಲ್ಲಾ ಗಾಂಧಿಯವರ ಚಿಂತನೆಯನ್ನು ಹರಡಿದರು. ಪ್ರಜಾ ಸಮ್ಮೇಳನಗಳನ್ನು ನಡೆಸಿದರು. ಔಂಧ್ ಮಹಾರಾಜರ ಆಸ್ಥಾನದ ವಿದ್ವಾಂಸರಾಗಿ ಹಾಗೂ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಪ್ರಾಂತದ ಪ್ರಗತಿಗೂ ನಾಲ್ಕಾರು ಸುಧಾರಣೆಗಳಿಗೂ ಕಾರಣರಾದರು.

1924ರಲ್ಲಿ ಧಾರ್ಮಿಕ ಪ್ರಚಾರಕ್ಕಾಗಿ “ಪುರುಷಾರ್ಥ” ಮರಾಠಿ ಮಾಸಿಕವನ್ನು ಆರಂಭಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂದೇಶ ನಿಷ್ಠೆಯನ್ನು ಮನಸಾರೆ ಮೆಚ್ಚಿ 1936 ರಿಂದ ಅದರ ಸದಸ್ಯರಾಗಿದ್ದ ಸಾತವಲೇಕರ ಔಂಧ್‌ಪ್ರಾಂತ ಸಂಚಾಲಕರೂ ಆದರು. ಭಾರತದ ವಿವಿಧ ಭಾಗಗಳಲ್ಲಿ ಆ ಸಂಸ್ಥೆಯ ಕಾರ್ಯ ವಿಸ್ತಾರವನ್ನು ನೋಡಿ ಸಂತೋಷಿಸಿದರು. ಹದಿನಾರು ವರ್ಷ ಕಾಲ ಆ ಸಂಸ್ಥೆಯ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.

“ಕ್ವಿಟ್‌ಇಂಡಿಯಾ” ಆಂದೋಲನದ ಹಲವಾರು ಭೂಗತ ಕಾರ್ಯಕರ್ತರಿಗೆ ಪಂಡಿತಜೀ ಆಶ್ರಯವಿತ್ತರು.

1948ರ ವೇಳೆಗೆ ಜಾತಿ ವಿದ್ವೇಷ ಗಲಭೆಗಳು ಮಹಾರಾಷ್ಟ್ರದಲ್ಲೆಲ್ಲಾ ಹರಡಿದವು. ಆ ಗದ್ದಲದ ಪರಿಸರದಿಂದ ದೂರವಿರಬಯಸಿ ಸಾತವಲೇಕರ್ 1948ರ ಜುಲೈ ತಿಂಗಳಲ್ಲಿ ಸ್ವಾಧ್ಯಾಯ ಮಂಡಲವನ್ನು ಬಲಸಾಡ್‌ಜಿಲ್ಲೆಯ ಪಾರಡಿಗೆ ವರ್ಗಾಯಿಸಿದರು. ಗುಜರಾತಿ ಭಾಷೆಯಲ್ಲೂ ಮಾಸಪತ್ರಿಕೆಯೊಂದನ್ನು (“ವೇದ ಸಂದೇಶ”) ಪ್ರಕಟಿಸತೊಡಗಿದರು. ಸ್ವಾಧ್ಯಾಯ ಮಂಡಲ ಸಂಸ್ಥೆಯೂ, ಪಂಡಿತ ಸಾತವಲೇಕರರು ಆರಂಭಿಸಿದ “ವೈದಿಕ ಧರ್ಮ” ಮುಂತಾದ ಪತ್ರಿಕೆಗಳೂ, ನಾಲ್ಕಾರು ಗ್ರಂಥಮಾಲೆಗಳೂ, ವೇದ ಸಂಹಿತೆಗಳೇ ಮೊದಲಾದವುಗಳ ಪ್ರಕಟಣೆಯೂ ಇಂದಿಗೂ ನಡೆಯುತ್ತಿವೆ.

1954ರಲ್ಲಿ ಸ್ವಾಧ್ಯಾಯ ಮಂಡಲದ ರಜತ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಆರು ದಶಕಗಳ ಅವಧಿಯಲ್ಲಿ ಸಾತವಲೇಕರರಿಂದ ನಡೆದಷ್ಟು ವೇದ ಧರ್ಮ ಪ್ರಚಾರ ಕಾರ್ಯ ಬೇರೆ ಯಾವ ವ್ಯಕ್ತಿಯಿಂದಲೂ ನಡೆದಿಲ್ಲವೆನ್ನಬಹುದು.

ಮುಖ್ಯ ಸಂದೇಶ

ಹಿಂದೂ ಧರ್ಮವು ನಿವೃತ್ತಪರ ಎಂಬ ಭ್ರಾಂತಿಗೊಳಗಾಗಿ ಅನೇಕ ಶತಮಾನಗಳಿಂದ ಭಾರತೀಯರು ಜಡತೆಯನ್ನು ಆಶ್ರಯಿಸಿ ಭೌತ ಜೀವನವನ್ನು ಕಡೆಗಣಿಸಿದುದರ ಫಲಿತಾಂಶವೇ ಇಂದು ನಾವು ಅನುಭವಿಸುತ್ತಿರು ಬಡತನ, ಪಾರತಂತ್ರ್ಯ, ವೇದಗಳು ಬೋಧಿಸುತ್ತಿರುವುದು ನಿಷ್ಕ್ರಿಯೆಯನ್ನಲ್ಲ; ಒರತತ್ತ್ವ ಸಾಧನೆಗೆ ಬಾಧಕವಾಗದಂಥ ಜೀವನ ಸೌಷ್ಠವವನ್ನು ಸಾತವಲೇಕರರು ಸಾವಿರಾರು ಪುಟಗಳ ತಮ್ಮ ಬರಹದಲ್ಲೂ, ಸಾವಿರಾರು ಪ್ರವಚನಗಳಲ್ಲಿಯೂ ಸಾರಿದ್ದು ಇದೇ ಸಂದೇಶವನ್ನೇ. ಈ ಹೊತ್ತು ಇದಕ್ಕಿಂತ ಮುಖ್ಯ ಸಂದೇಶ ಬೇರೆ ಇರಲಾರದು.

“ಸುಬೋಧ ಭಾಷ್ಯ” ಎಂಬ ಹೆಸರಿನಲ್ಲಿ ಋಗ್ವೇದದ ಮೇಲಣ ವಿಸ್ತಾರವಾದ ನವೀನ ವ್ಯಾಖ್ಯಾನ, ಉಳಿದ ಮೂರು ವೇದಗಳ ಸರಳ ಅನುವಾದ, ಉಪನಿಷದ್ವಿವರಣೆ ಮಾತ್ರವಲ್ಲದೆ ಸಾತವಲೇಕರರು ವೇದಸಾಹಿತ್ಯದ ನಾನಾ ವಿವರಾಂಶಗಳ ಸ್ಪಷ್ಟೀಕರಣಕ್ಕಾಗಿ “ವೈದಿಕ ವ್ಯಾಖ್ಯಾನ ಮಾಲಾ” ಎಂಬ ಶ್ರೇಣಿಯಲ್ಲಿ ನೂರಾರು ಪ್ರಬಂಧಗಳನ್ನು ಬರೆದು ಪ್ರಕಟಿಸಿದರು. ನಾಲ್ಕು ವೇದಗಳ ಸಂಹಿತೆಗಳ ಪರಿಷ್ಕೃತ ಹಾಗೂ ಆಕರ್ಷಕ ಮುದ್ರಣಗಳನ್ನು ಪ್ರಕಟ ಪಡಿಸಿದ್ದು ಮಾತ್ರವಲ್ಲದೆ ವೇದಾಭ್ಯಾಸಿಗಳಿಗೆ ಉಪಯುಕ್ತವಾದ ಸಹಾಯಕ ಸಾಮಗ್ರಿಗಳನ್ನೂ ಸಾತವಲೇಕರರು ನೀಡಿದ್ದಾರೆ; ಪ್ರತಿಯೊಂದು ಮಂತ್ರದ ಸಂದರ್ಭ ಸೂಚನೆ, ಅದು ಯಾವ ದೇವತೆಯನ್ನು ಕುರಿತದ್ದು, ಯಾವ ಸಂದರ್ಭದಲ್ಲಿ ಪ್ರಯೋಗವಾಗುತ್ತದೆ- ಮೊದಲಾದ ವಿವರಗಳ ಮಾಹಿತಿಯನ್ನೂ ತುಂಬ ಶ್ರಮದಿಂದ ಸಂಗ್ರಹಿಸಿ ಸೇರಿಸಿದ್ದಾರೆ. ಇದಲ್ಲದೆ “ಅಗ್ನಿದೇವತಾ ಮಂತ್ರಸಂಗ್ರಹ”, “ಇಂದ್ರದೇವತಾ ಮಂತ್ರಸಂಗ್ರಹ” ಮೊದಲಾದ ಪ್ರತ್ಯೇಕ ಸಂಗ್ರಹಗಳನ್ನೂ ಪ್ರಕಟಿಸಿದ್ದಾರೆ. “ಆಗಮ ನಿಬಂಧ ಮಾಲಾ”, “ಯೋಗಸಾಧನಾ ಗ್ರಂಥಮಾಲಾ”, ಸಂಸ್ಕೃತ ಭಾಷೆಯನ್ನು ಕಲಿಯುವವರಿಗಾಗಿ “ಸಂಸ್ಕೃತ ಪಾಠಮಾಲಾ”, “ಪುರುಷಾರ್ಥ”, “ವೈದಿಕಧರ್ಮ”, “ಅಮೃತಲತಾ” ಮೊದಲಾದ ನಿಯತಕಾಲಿಕ ಪತ್ರಿಕೆಗಳು – ಹೀಗೆ ವಿವಿಧ ಪ್ರಕಾರಗಳಲ್ಲಿ ಸಾತವಲೇಕರರ ವಿದ್ವತ್ಪೂರ್ಣ ಬರಹಗಳು ಪ್ರಕಟವಾಗಿ ಜಿಜ್ಞಾಸುಗಳ ಕೃತಜ್ಞತೆಯನ್ನು ಸಂಪಾದಿಸಿಕೊಂಡವು. ಪಂಡಿತಜೀ ಅವರು ಬರೆದ ಗ್ರಂಥಗಳ ಒಟ್ಟು ಸಂಖ್ಯೆ ನಾಲ್ಕು ನೂರಕ್ಕೂ ಹೆಚ್ಚು.

1955ರಲ್ಲಿ ಪಂಡಿತಜೀ ಅವರ ನೇತೃತ್ವದಲ್ಲಿ “ಗಾಯತ್ರೀ ಮಹಾಯಜ್ಞ” ನಡೆಯಿತು.

ಭಗವದ್ಗೀತೆಯ ಮೇಲೆ ಸಾತವಲೇಕರರು ಬರೆದ ಸ್ವತಂತ್ರ ವ್ಯಾಖ್ಯಾನ “ಪುರುಷಾರ್ಥ ಬೋಧಿನಿ”ಯನ್ನು ಮೇರುಕೃತಿಯೆಂದೂ ಸಮಕಾಲೀನ ಭಾರತಕ್ಕೆ ಅತ್ಯಂತ ಸಂಗತವಾದ್ದೆಂದೂ ಮಹಾತ್ಮಾ ಗಾಂಧಿಯವರು ಪ್ರಶಂಸೆ ಮಾಡಿದರು. ಭಾರತದ ಶ್ರುತಿ-ಸ್ಮೃತಿಗಳೆಲ್ಲ ನಿರಂತರ ಕ್ರಿಯಾಶೀಲತೆಯನ್ನು ಬೋಧಿಸಿವೆಯೆಂಬ ತಮ್ಮ ವಾದವನ್ನೇ ಈ ಗೀತಾವ್ಯಾಖೆಯಲ್ಲಿ ಸಾತವಲೇಕರರು ಮತ್ತಷ್ಟು ಸ್ಫುಟಗೊಳಿಸಿದರು.

ಇವಲ್ಲದೆ ರಾಮಾಯಣ, ಮಹಾಭಾರತಗಳನ್ನು ಕುರಿತು ವಿಸ್ತಾರವಾದ ಸಮಾಲೋಕನ ಗ್ರಂಥಗಳನ್ನೂ ಬರೆದಿದ್ದಾರೆ.

ಸಾತವಲೇಕರರ ಪ್ರಮುಖ ಗ್ರಂಥಗಳು ಹಿಂದಿ, ಮರಾಠಿ, ಗುಜರಾತಿ, ಇಂಗ್ಲಿಷ್‌- ಈ ನಾಲ್ಕೂ ಭಾಷೆಗಳಲ್ಲಿ ಪ್ರಕಟವಾಗಿವೆ. ಪುಣೆಯ ಭಾಂಡಾರಕರ್ ಪ್ರಾಚ್ಯಾ ವಿದ್ಯಾಸಂಶೋಧನ ಸಂಸ್ಥೆಯ ಐವತ್ತು ವರ್ಷಗಳ ಶ್ರಮದ ಫಲವಾಗಿ ಸಿದ್ಧವಾದ ಮಹಾಭಾರತದ ಪರಿಷ್ಕೃತ ಪಾಠವನ್ನು ಹಿಂದೀ ಭಾಷೆಗೆ ಅನುವಾದಿಸಿದ ಕೆಲಸವನ್ನು ಕೇಂದ್ರ ಸರ್ಕಾರ ಸಾತವಲೇಕರರಿಗೆ ವಹಿಸಿತು.

ಧನ್ಯಜೀವಿ

ಹೀಗೆ ನಿರಂತರ ಜ್ಞಾನಸಾಧನೆಯಲ್ಲಿಯೇ ತಮ್ಮ ಶಕ್ತಿಯನ್ನೆಲ್ಲ ವ್ಯಯಿಸಿದ ತಪಸ್ವಿ ಶ್ರೀಪಾದ ದಾಮೋದರ ಸಾತವಲೇಕರರು ನೂರೆಂದು ವರ್ಷಗಳ ಸಾರ್ಥಕ ಜೀವನ ನಡೆಸಿ 1968ರ ಜುಲೈ 31ರಂದು ಸ್ವರ್ಗವಾಸಿಗಳಾದರು.

ಪ್ರಸಿದ್ಧಿಯ ಬಯಕೆ ಪಂಡಿತಜೀಯವರಿಗೆ ಸುತರಾಂ ಇರಲಿಲ್ಲ. ಒಮ್ಮೆ ಒಬ್ಬ ಭಕ್ತ ಅವರಿಗೆ ಸೂಚಿಸಿದ: “ಪಂಡಿತಜೀ, ನೀವು ನಿಮ್ಮ ಆತ್ಮಕಥೆ ಬರೆದು ಪ್ರಕಟಿಸಿದರೆ ಚೆನ್ನಾಗಿರುತ್ತದೆ.” ಅದಕ್ಕೆ ಪಂಡಿತಜೀ ಉತ್ತರಿಸಿದರು : “ನನಗೆ ನನ್ನ ಕಥೆ ಬರೆಯುವುದಕ್ಕಿಂತ ಮರುದ್ಗಣಗಳ, ದೇವತೆಗಳ ಕಥೆ ಬರೆಯುವುದೇ ಹೆಚ್ಚು ಇಷ್ಟ.”

ಪಂಡಿತಜೀ ಅವರ ಅಗಾಧ ಸಾಧನೆಗಾಗಿ ಜನತೆ ಅವರ ಮೇಲೆ ಸನ್ಮಾನಗಳ ಮಳೆಗೆರೆಯಿತು. 1962 ರಲ್ಲಿ ಉತ್ತರ ಭಾರತದ ನಾಲ್ಕೂವರೆ ಲಕ್ಷ ನಾಗರಿಕ ಸಮೂಹ ಸೇರಿ ಅವರಿಗಿತ್ತ ಅನ್ವರ್ಥ. ಆ ಸಮಾರಂಭ ಏರ್ಪಡಿಸಿದ್ದವರು ಮಹಾನ್‌ಸಂತ ಶ್ರೀ ದೇವರಹವಾ ಬಾಬಾ ಅವರು. ಅಮೃತಸರದ ಗೀತಾ ಮಂಡಲದಿಂದ “ಗೀತಾಲಂಕಾರ”  (934), ಹಿಂದೀ ಸಾಹಿತ್ಯ ಸಮ್ಮೇಳನದಿಂದ “ಸಾಹಿತ್ಯವಾಚಸ್ಪತಿ” (1948), ಪುರೀ ಶಂಕರಾಚಾರ್ಯರಿಂದ “ಮಹಾ ಮಹೋಪಾಧ್ಯಾಯ” (1954), ಕಾಂಗಡೀ ಗುರುಕುಲದಿಂದ “ವಿದ್ಯಾಮಾರ್ತಾಂಡ” (1960), ಮುಜಫರ‍್ಪುರದ ಭಾರತೀಯ ವಿದ್ಯಾ ಪ್ರಸಾರ ಸಂಸ್ಥೆಯಿಂದ “ವೇದಮಾರ್ತಂಡ” (1960), ಮುಂಬಯಿಯ ಭಾರತೀಯ ವಿದ್ಯಾಭವನದಿಂದ “ವೇದವಾಚಸ್ಪತಿ” (1966), ಪುಣೆಯ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್‌(1966), ಭಾರತ ರಾಷ್ಟ್ರಪತಿಗಳಿಂದ “ಪದ್ಮಭೂಷಣ” (1968), – ಇವು ಸಾತವಲೇಕರರಿಗೆ ಸಂದ ಪ್ರಶಸ್ತಿಗಳಲ್ಲಿ ಕೆಲವು.

1966ರಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಾತವಲೇಕರರ ಅಸಂಖ್ಯ ಅಭಿಮಾನಿಗಳು ಅವರ ಜನ್ಮಶತಾಬ್ದಿಯನ್ನು ಸಂಭ್ರಮದಿಂದ ಆಚರಿಸಿದರು.

ಪಂಡಿತ ಸಾತವಲೇಕರರು ಆಗಿಂದಾಗ ಸ್ಮರಿಸುತ್ತಿದ್ದ ಈ ಅಥರ್ವವೇದ ಮಂತ್ರವನ್ನು ಮಾನವ ಜನತೆಗೆ ಅವರ ಹರಕೆಯೆನ್ನಬಹುದು;

ಸಂಶಿತಂ ಮೇ ಇದಂ ಬ್ರಹ್ಮ
ಸಂಶಿತಂ ವೀರ್ಯಂ ಬಲಮ್‌|
ಸಂಶಿತಂ ಕ್ಷತ್ರಂ ಅಜರಂ ಅಸ್ತು ಜಿಷ್ಣುಃ
ಯೇಷಾಮಸ್ಮಿ ಪುರೋಹಿತಃ||

“ನನ್ನ ಈ ಜ್ಞಾನವು ತೇಜೋವಂತವಾಗಲಿ. ನನ್ನ ವೀರ್ಯವೂ ಬಲವೂ ಹೆಚ್ಚಲಿ, ಸಾರ್ಥಕವಾಗಲಿ. ಕ್ಷಾತ್ರ ಶೌರ್ಯವು ನಾಶವಿಲ್ಲದ್ದಾಗಲಿ, ನಾನು ಯಾವ ಜನರ ನೇತಾರ (“ಪುರೋ-ಹಿತ”) ನಾಗಿರುವೆನೋ ಆ ಜನರ ತೇಜಸ್ಸು ಸದಾ ವರ್ಧಿಸುತ್ತಿರಲಿ.”