Categories
ರಚನಾತ್ಮಕ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಕಲ್ಪನಾಕರ್

ಆಳವಾದ ಸಾಮಾಜಿಕ ಹೊಣೆಗಾರಿಕೆ ಹಾಗೂ ಸಾಧಿಸುವ ಛಲ ಜೊತೆಗೆ ಸೇವಾ ಪ್ರಜ್ಞೆಗಳಿಂದ ಸರ್ಕಾರ ಹಾಗೂ ಸಾರ್ವಜನಿಕ ಹಿತಾಸಕ್ತಿ ಯೋಜನೆಗಳ ನಡುವೆ ಸಾಮರಸ್ಯ ತಂದು ಕೊಟ್ಟ ಸಾಹಿತಿ ಮಹಿಳೆ ಕಲ್ಪನಾಕರ್ ಅವರು.
ಬೆಂಗಳೂರು ಅಜೆಂತಾ ಟಾಸ್ಕ್ ಫೋರ್ (ಬಿಎಟಿಎಫ್) ಎನ್ನುವ ಹೆಸರಿನಲ್ಲಿ ಪರಿಸರ ಹಾಗೂ ಖಾಸಗಿ ಪಾಲುದಾರಿಕೆಯಲ್ಲಿ ಬೆಂಗಳೂರು ನಗರ ಸುಧಾರಣೆಗೆ ಹಗಲಿರುಳು ದುಡಿಯುತ್ತ ಯಶಸ್ಸು ಕಂಡವರು ಕಲ್ಪನಾಕರ್, ಇಂದು ಬೆಂಗಳೂರಿನಲ್ಲಿ ಬಿಎಟಿಎಫ್ ಒಂದು ಪ್ರಧಾನ ಶಕ್ತಿಯಾಗಿರಲು ಕಲ್ಪನಾಕರ್ ಕಾರಣ.
ಮುಂಬೈಯಲ್ಲಿ ಜನಿಸಿ, ನವದೆಹಲಿಯಲ್ಲಿ ಶಿಕ್ಷಣ ಪಡೆದು, ಯು.ಕೆ.ಯ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಇನ್‌ಲಾಕ್ಸ್ ವಿದ್ಯಾರ್ಥಿವೇತನ ಪಡೆದು ಎಂ.ಫಿಲ್. ಪದವಿ ಗಳಿಸಿದ ಕಲ್ಪನಾಕರ್ ಹದಿನೆಂಟು ವರ್ಷಗಳ ವೃತ್ತಿ ಜೀವನದಲ್ಲಿ ವ್ಯವಸ್ಥಾಪನಾ ಸಮಾಲೋಚನೆ, ಮಾರುಕಟ್ಟೆ ಹಾಗೂ ಸಂವಹನೆ, ಯೋಜನಾ ನಿರ್ವಹಣೆ ಮತ್ತು ಈಚೆಗೆ ಸಮುದಾಯ ಅರಿವು ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯಗಳವರೆಗೆ ವಿಸ್ತಾರವಾದ ಆಸಕ್ತಿಯನ್ನು ತೋರಿದ್ದಾರೆ.
ಬಾಬಾ ಆಡಳಿತ ಸೇವೆಗೆ ಸೇರಿ ವೃತ್ತಿಜೀವನವನ್ನು ಪ್ರಾರಂಭಿಸಿದ ಕಲ್ಪನಾಕರ್ ಕ್ಲಿಷ್ಟಕರವಾದ ಹಾಗೂ ದುಸ್ಸಾಧ್ಯವಾದ ಯೋಜನೆಗಳನ್ನು ಕೈಗೆತ್ತಿಕೊಂಡು ಜಯ ಗಳಿಸುವುದರಿಂದ ಸತತವಾಗಿ ಅಭಿವೃದ್ಧಿ ಹೊಂದಿದರು.
ಈ ನಡುವೆ ಕ್ಯಾನ್ಸರ್ ರೋಗಿಗಳಿಗೆ ನೆರವು ಸಂಸ್ಥೆಯನ್ನು ಸ್ಥಾಪಿಸಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗೆ ನೆರವಾದರು.
ಸ್ವಚ್ಛ ಬೆಂಗಳೂರು ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಸರ್ಕಾರದ ಏಜೆನ್ಸಿಗಳು ಹಾಗೂ ಖಾಸಗಿ ಸಂಸ್ಥೆಗಳ ನಡುವೆ ಸಂಪರ್ಕಕೊಂಡಿಯಾಗಿ ವ್ಯವಹರಿಸಿ ಅನೇಕ ಯೋಜನೆಗಳು ಜಾರಿಗೆ ತರಲು ಕಾರಣರಾದರು.
ಬಸ್ ತಂಗುದಾಣ, ನಿರ್ಮಲ ಬೆಂಗಳೂರು ಶೌಚಾಲಯಗಳು, ಬೆಂಗಳೂರು ಸಾರಿಗೆ ನಿರ್ವಹಣಾ ಯೋಜನೆ, ರಸ್ತೆ ಸುರಕ್ಷತಾ ಯೋಜನೆ, ಖಾತಾ ಸರಳೀಕರಣ, ಬೀದಿ ಕುರ್ಚಿ ಕಾರ್ಯಕ್ರಮ ಇತ್ಯಾದಿಗಳು ಕಲ್ಪನಾ ಅವರ ಸಾಧನೆಯ ಸಾಕ್ಷಿಗಳು.
ಬೆಂಗಳೂರಿಗೊಂದು ಹೊಸ ರೂಪ ಕೊಡುವಲ್ಲಿ ಶ್ರಮಿಸಿ ಯಶಸ್ವಿಯಾದ ಮಹಿಳೆ ಕಲ್ಪನಾಕರ್.