ಜಾನಪದ ಲೋಕಕ್ಕೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಜಲಧಿಗೆರೆಯ ವಿಶಿಷ್ಟ ಕೊಡುಗೆ ಗಂಗಹುಚ್ಚಮ್ಮ. ಇವರ ದನಿ, ಭಾವದ ಸೊಗಸನ್ನು ಸವಿದವರಷ್ಟೇ ಬಲ್ಲರು. ಮಾತಿಗಿಂತ ಹಾಡೇ ಅನುಗಾಲದ ಅಭಿವ್ಯಕ್ತಿ.
ಸೋಬಾನೆ ಪದ, ರಾಗಿಕಲ್ಲು ಪದ, ಭತ್ತಕುಟ್ಟವ ಪದ, ನಾಟಿ ಹಾಕುವ ಪದ, ಸುಗ್ಗಿಕುಣಿತದ ಪದ, ಕೋಲಾಟದ ಪದ ಮುಂತಾದ ಜನಪದೀಯ ಕಲೆಯ ಬೆಳಕಿನಲ್ಲಿ ಬೆಳಗಿದವರು. ಬಾಲ್ಯದಲ್ಲಿ ಹಿರಿಯರಿಂದ ಕರಗತವಾದ ಈ ಗಾಯನದಲ್ಲಿ ಮೂವತ್ತಾರು ವರ್ಷಗಳ ಅವಿರತ ಯಾನ ಇವರದ್ದು. ನೂರಾರು ಪದಗಳನ್ನು ಸ್ವತಃ ರಚಿಸಿ ಹಾಡಾಗಿಸಿದ ಹಿರಿಮೆ. ೧೯೮೨ರಲ್ಲಿ ಗೆಳತಿಯರೊಡಗೂಡಿ ತಂಡ ಕಟ್ಟಿಕೊಂಡು ನಾಡಿನಾದ್ಯಂತ ಸೋಬಾನೆ ಪದದ ಕಾರ್ಯಕ್ರಮಗಳನ್ನು ನೀಡಿ ಹೆಸರಾದವರು. ಸೋಬಾನೆ ಪದದೊಟ್ಟಿಗೆ ತತ್ವಪದ, ಜನಪದ, ಭಕ್ತಿಗೀತೆ, ಭಜನೆಗಳನ್ನೂ ಹಾಡುವ ಹೆಗ್ಗಳಿಕೆ. ತವರೂರಿನ ಜಲಧಿಗೆರೆಯಮ್ಮನ ಕುರಿತು ೯೦ಕ್ಕೂ ಹೆಚ್ಚು ಹಾಡು ರಚಿಸಿ ಹಾಡಿದ ವೈಶಿಷ್ಟ. ಹಳ್ಳಿಗಾಡಿನ ಹಾಡುಹಕ್ಕಿ ಗಂಗಹುಚ್ಚಮ್ಮರ ಕಲಾಸೇವೆಯನ್ನು ಅನೇಕ ಪ್ರಶಸ್ತಿಗಳು ಸಾರ್ಥಕಗೊಳಿಸಿದರೆ, ಸನ್ಮಾನ-ಗೌರವಗಳೂ ಉತ್ಸಾಹವನ್ನು ಇಮ್ಮಡಿಗೊಳಿಸಿವೆ.
Categories