ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಕಾನಲೆ ಗ್ರಾಮದ ಗೌರಮ್ಮನವರು ಹಸೆ ಚಿತ್ತಾರವನ್ನು ಮೈಗೂಡಿಸಿಕೊಂಡವರು. ಪಾರಂಪರಿಕ ಕಲೆಗಳಲ್ಲಿ ರೂಢಿಯಾದ ಇವರು ಮಲೆನಾಡಿನ ದೀವರು ಸಮುದಾಯದ ‘ಹಸೆ ಗೋಡೆ ಚಿತ್ತಾರ, ಭತ್ತದ ತೆನೆಯ ಬಾಗಿಲು ತೋರಣ, ಬುಟ್ಟಿ ಚಿತ್ತಾರಗಳಲ್ಲಿ ಖ್ಯಾತಿ ಪಡೆದವರು. ಚಿತ್ತಾರ ಕಲೆಯನ್ನು ಮಾಧ್ಯಮ ಲೋಕಕ್ಕೆ ಪರಿಚಯಿಸಿದ ಮೊದಲ ಕಲಾವಿದೆ ಇವರು. ಸುತ್ತಮುತ್ತಲ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಚಿತ್ತಾರ ತರಬೇತಿ ಕಾರ್ಯಾಗಾರ ನಡೆಸಿ, ಗ್ರಾಮೀಣ ಮಹಿಳೆಯರಲ್ಲಿ ಹಸಿ ಚಿತ್ತಾರದ ಬಗ್ಗೆ ಅರಿವು ಮೂಡಿಸಿದ್ದಾರೆ. ಕೋಲ್ಕತ್ತ, ದೆಹಲಿ, ಶಿರಸಿ, ಹಂಪಿ, ಮೈಸೂರು ಮತ್ತಿತರೆಡೆಗಳಲ್ಲಿ ಹಸೆ ಕಲೆಯ ಪ್ರದರ್ಶನ ನಡೆಸಿ ಹಸೆ ಚಿತ್ರ ಕಲಾವಿದೆಯರ ಬೃಹತ್ ಸಮಾವೇಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ೨೦೦೬ ಏಪ್ರಿಲ್ ೩ ರಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಹಸೆ ಚಿತ್ತಾರದಲ್ಲಿ ಮಾಡಿದ ಶ್ರೇಷ್ಠ ಸಾಧನೆಯನ್ನು ಗುರುತಿಸಿ ‘ಅಕಾಡೆಮಿ ಪ್ರಶಸ್ತಿ’ಯನ್ನು ನೀಡಿದ್ದಾರೆ. ಸಾಗರ ತಾಲ್ಲೂಕಿನ ಹಲವು ಸಂಘ ಸಂಸ್ಥೆಗಳು ಶ್ರೀಮತಿ ಗೌರಮ್ಮನವರ ಸಾಧನೆಯನ್ನು ಗುರುತಿಸಿ ಗೌರವಿಸಿವೆ.
Categories
ಶ್ರೀಮತಿ ಗೌರಮ್ಮ ಹುಚ್ಚಪ್ಪ ಮಾಸ್ತರ
