Categories
ಜಾನಪದ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಚೂಡಾಮಣಿ ರಾಮಚಂದ್ರ

ಶಿವಮೊಗ್ಗ ಜಿಲ್ಲೆಯ ಸಾಗರದ ವಿಶಿಷ್ಟ ಜಾನಪದ ಪ್ರತಿಭೆ ಶ್ರೀಮತಿ ಚೂಡಾಮಣಿ ರಾಮಚಂದ್ರ ಗಂಡುಕಲೆ ಡೊಳ್ಳುಕುಣಿತದಲ್ಲಿ ವಿಶೇಷ ಸಾಧನೆಗೈದವರು, ವೀರಗಾಸೆ, ಲಂಬಾಣಿ ನೃತ್ಯ, ಜಾನಪದ ಹಾಡು, ಭಜನೆ ಮತ್ತು ಕೋಲಾಟಗಳಲ್ಲೂ ಪರಿಣಿತರು. ರಾಜ್ಯದ ಪ್ರಪ್ರಥಮ ಮಹಿಳಾ ಡೊಳ್ಳುಕುಣಿತ ತಂಡ ರಚಿಸಿದ ಹೆಮ್ಮೆಯ ಹೆಜ್ಜೆಗುರುತು ಇವರದ್ದು. ರಾಜ್ಯ, ದೇಶದೆಲ್ಲೆಡೆ ಮಾತ್ರವಲ್ಲದೆ, ಲಂಡನ್, ಜರ್ಮನಿ, ಇಟಲಿ, ಫ್ರಾನ್ಸ್ ಸೇರಿದಂತೆ ೨೦ಕ್ಕೂ ಹೆಚ್ಚು ವಿದೇಶಗಳಲ್ಲಿ, ಚಲನಚಿತ್ರ-ದೂರದರ್ಶನಗಳಲ್ಲಿ ಡೊಳ್ಳುಕುಣಿತದ ಸದ್ದು ಮೊಳಗಿಸಿ ಕರುನಾಡಿನ ಜನಪದ ಸಿರಿಯ ವೈಭವವನ್ನು ದರ್ಶಿಸಿದವರು.
ಸಮಾಜಸೇವೆ, ಮಹಿಳಾ ಸಂಘಟನೆ, ತಳಸಮುದಾಯದ ಅಶಕ್ತ ಹೆಣ್ಣುಮಕ್ಕಳು ಹಾಗೂ ಹೊಸ ಪೀಳಿಗೆಗೆ ಜಾನಪದ ಕಲೆಗಳ ತರಬೇತಿ, ಬಡಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರ ನಡೆಸುವಿಕೆ, ಮುಂತಾದ ಸಮಾಜಮುಖಿ ಚಟುವಟಿಕೆಗಳಲ್ಲಿ ನಾಲ್ಕೂವರೆ ದಶಕಗಳಿಂದ ತೊಡಗಿಕೊಂಡಿರುವ ಕ್ರಿಯಾಶೀಲರು. ೧ ಕಥಾಸಂಕಲನ, ೪ ಕವನಸಂಕಲನ, ೨ ಮಕ್ಕಳ ಕಥೆ- ಪ್ರವಾಸಕಥನವನ್ನೂ ಹೊರತಂದಿರುವ ಚೂಡಾಮಣಿ ಅವರು ಸಾಹಿತಿಯೂ ಸಹ. ಅಪರೂಪದ ಸಾಧನೆ-ಸೇವೆಗಾಗಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನೊಳಗೊಂಡಂತೆ ಹತ್ತಾರು ಪ್ರಶಸ್ತಿ-ಗೌರವಗಳಿಗೆ ಭಾಜನರು.