Categories
ಜಾನಪದ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಚೌಡಿಕೆ ಉಚ್ಚಂಗೆಮ್ಮ

ಮೋಡಿ ಮಾಡುವ ಕಂಠಸಿರಿ, ಮಾಧುರ್ಯ ತುಂಬಿದ ಧ್ವನಿ, ವಿಶಿಷ್ಟ ರೀತಿಯ ಚೌಡಿಕೆ ಹಾಡುಗಾರಿಕೆಯನ್ನು ಕರಗತ ಮಾಡಿಕೊಂಡಿರುವ ಅಪರೂಪದ ಜಾನಪದ ಹಾಡುಗಾರ್ತಿ ಶ್ರೀಮತಿ ಚೌಡಿಕೆ ಉಚ್ಚಂಗೆಮ್ಮ.
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ನಿಬಗೂರು ಗ್ರಾಮದ ಕಾಲಗೆರೆಯ ಶ್ರೀಮತಿ ಉಚ್ಚಂಗೆಮ್ಮ ಅವರಿಗೆ ಈಗ ೬೦ರ ಹರೆಯ. ಕೃಷದೇಹ, ಕಟ್ಟಿಕೊಂಡ ಜಡೆ, ಹಣೆಯಲ್ಲಿ ಕಾಸಗಲದ ಕುಂಕುಮ. ಹಾಡಲು ನಿಂತರೆ ಚೌಡಿಕೆ ರಾಣಿ ! ದೈವದತ್ತ ಇಂಪಾದಕಂಠ, ನಿರಂತರ ಸಾಧನೆಯ ಹಿನ್ನೆಲೆಯಲ್ಲಿ ಚೌಡಿಕೆ ಹಾಡುಗಳನ್ನು ಏರಿಸಿ, ಇಳಿಸಿ, ಹಿಗ್ಗಿಸಿ, ಕುಗ್ಗಿಸಿ, ವಿಸ್ತರಿಸಿ ಹಾಡುವ ಪರಿಯಂತೂ ಅನನ್ಯ. ಚೌಡಿಕೆ ಕಲೆಯೇ ಇವರಿಗೆ ಜೀವನೋಪಾಯ.
೧೯೮೭ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಏರ್ಪಡಿಸಿದ ಕರ್ನಾಟಕ ಜಾನಪದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯು ೨೦೦೦ನೆಯ ಸಾಲಿನ ಜಾನಪದ ಪ್ರಶಸ್ತಿ ನೀಡಿ ಗೌರವಿಸಿದೆ.
ಜಾನಪದ ಜಾತ್ರೆ ಸೇರಿದಂತೆ ನಾಡಿನ ಸಂಘ ಸಂಸ್ಥೆಗಳು ಏರ್ಪಡಿಸುವ ಸಾಂಸ್ಕೃತಿಕ ಕಾರಕ್ರಮಗಳಲ್ಲಿ ಪಾಲ್ಗೊಂಡು ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಕಲಾಭಿಮಾನಿಗಳಿಗೆ ಉಣಿಸುತ್ತಿರುವ ನಾಡಿನ ಹೆಮ್ಮೆಯ ಕಲಾವಿದೆ ಶ್ರೀಮತಿ ಚೌಡಿಕೆ ಉಚ್ಚಂಗೆಮ್ಮ ಅವರು.