Categories
ಚಲನಚಿತ್ರ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಜಯಮಾಲಾ

ಚಲನಚಿತ್ರರಂಗದ ಕ್ರಿಯಾಶೀಲ ವ್ಯಕ್ತಿತ್ವದ ಸುಪ್ರಸಿದ್ದ ಕಲಾವಿದೆ ಶ್ರೀಮತಿ ಜಯಮಾಲಾ ಅವರು.

ಮಂಗಳೂರಿನಲ್ಲಿ ೧೯೫೯ರಲ್ಲಿ ಜನನ. ತಮ್ಮ ೧೩ನೆಯ ವಯಸ್ಸಿನಲ್ಲೇ ತುಳು ಚಿತ್ರ ‘ಕಾಸ್‌ದಾಯೆಕಂಡನೆ’ ಮೂಲಕ ಚಿತ್ರರಂಗ ಪ್ರವೇಶ ಹಾಗೂ ಅದೇ ಪ್ರಥಮ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ, ದಕ್ಷಿಣ ಭಾರತದ ಐದು ಭಾಷೆಗಳು ಸೇರಿದಂತೆ ಒಟ್ಟು ೭೫ ಚಲನಚಿತ್ರಗಳಲ್ಲಿ ಅಭಿನಯ, ಚಲನಚಿತ್ರ ನಿರ್ಮಾಣಕ್ಕೂ ಪ್ರವೇಶ, ನಾಲ್ಕು ಚಿತ್ರಗಳ ನಿರ್ಮಾಣ. ಇವರು ನಿರ್ಮಿಸಿದ ‘ತಾಯಿ ಸಾಹೇಬ’ಕ್ಕೆ ಸ್ವರ್ಣಕಮಲ ಸೇರಿದಂತೆ ಒಟ್ಟು ೨೨ ಪ್ರಶಸ್ತಿಗಳ ದಾಖಲೆ.

ಶ್ರೀಮತಿ ಜಯಮಾಲಾರ ಕಾರಶೀಲತೆಗಾಗಿ ಇವರನ್ನು ಹುಡುಕಿ ಬಂದ ಪದವಿಗಳು ಹಲವಾರು. ಕರ್ನಾಟಕ ಚಲನಚಿತ್ರ ಮಂಡಳಿಯ ಗೌರವ ಖಜಾಂಚಿ ಹಾಗೂ ಉಪಾಧ್ಯಕ್ಷೆ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷೆ. ಮೈಸೂರಿನ ಶಕ್ತಿಧಾಮ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಭಾರತೀಯ ಪನೋರಮಾ – ೨೦೦೦ದ ಆಯ್ಕೆ ಸಮಿತಿಯ ಸದಸ್ಯೆ. ಕರ್ನಾಟಕ ರಾಜ್ಯ ಫಿಲಂ ಪ್ರಶಸ್ತಿಗಳ ಆಯ್ಕೆ ಸಮಿತಿ ಅಧ್ಯಕ್ಷೆ ಮುಂತಾದವು. ಶ್ರೀಮತಿ ಜಯಮಾಲಾ ಅವರನ್ನು ಅರಸಿ ಬಂದ ಪ್ರಶಸ್ತಿ ಗೌರವಗಳು ಹಲವು. ಅತ್ಯುತ್ತಮ ನಟಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸ್ವರ್ಣಕಮಲ ಪ್ರಶಸ್ತಿ ಫಿಲಂಫೇರ್ ಪ್ರಶಸ್ತಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮುಂತಾದವು. ಕನ್ನಡ, ತಮಿಳು, ತೆಲುಗು, ತುಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಬಲ್ಲ ಶ್ರೀಮತಿ ಜಯಮಾಲಾ ಅವರಿಗೆ ತೋಟಗಾರಿಕೆ, ಒಳಾಂಗಣ ಅಲಂಕರಣ, ಅಧ್ಯಯನ ಮುಂತಾದವುಗಳು ಆಸಕ್ತಿಯ ವಿಷಯಗಳು.

ಅಂತರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಹಾಗೂ ರಾಜೀವ್ ಗಾಂಧಿ ರಾಷ್ಟ್ರೀಯ ಐಕ್ಯತಾ ಪ್ರಶಸ್ತಿಗಳನ್ನು ಗಳಿಸಿರುವ ನಾಡಿನ ಹೆಮ್ಮೆಯ ಕಲಾವಿದೆ ಶ್ರೀಮತಿ ಜಯಮಾಲಾ ಅವರು.