Categories
ಕ್ರೀಡೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಜೆ.ಜೆ. ಶೋಭಾ

ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಕನ್ನಡ ನಾಡಿಗೆ, ದೇಶಕ್ಕೆ ಕೀರ್ತಿ ತಂದವರು ಜೆ.ಜೆ.ಶೋಭಾ
ಅವರು.
ಹೆಪ್ಟಫ್ಲಾನ್, ಉದ್ದ ಜಿಗಿತ ಹಾಗೂ ಹರ್ಡಲ್ಸ್ ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸುವ ಶೋಭಾ ಹುಟ್ಟಿದ್ದು ೧೯೭೮ರಲ್ಲಿ. ಬಿ.ಎ. ಪದವೀಧರರು. ಸದ್ಯ ಸಿಕಂದರಾಬಾದ್‌ನಲ್ಲಿ ನೆಲೆಸಿರುವ ಶ್ರೀಯುತರು ಕನ್ನಡದ ಹೆಮ್ಮೆಯ ಕುವರಿ. ಎರಡು ತಿಂಗಳ ಹಿಂದೆ ಚೀನಾದ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಕೆಲವೇ ಅದೃಷ್ಟಶಾಲಿಗಳಲ್ಲಿ ಅವರೂ ಒಬ್ಬರು.
೧೯೯೭ರಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ಷೇತ್ರಕ್ಕೆ ಕಾಲಿರಿಸಿದ ಅವರು ಈವರೆಗೆ ನಿರ್ಮಿಸಿರುವ ದಾಖಲೆಗಳು ಹತ್ತು-ಹಲವು. ಅವುಗಳಲ್ಲಿ ಪ್ರಮುಖವಾದುದು ಹೆಪ್ಟಾನ್ ಕ್ರೀಡೆಯಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವುದು.
ಕಳೆದ ವರ್ಷ ಜೋರ್ಡಾನ್‌ನಲ್ಲಿ ನಡೆದ ೧೭ನೇ ಏಷ್ಯನ್‌ ಅಥ್ಲೆಟಿಕ್ಸ್‌ ಛಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ, ಗುವಾಹತಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕ, ಕತಾರ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಸೇರಿದಂತೆ ಈವರೆಗೆ ೧೫ಕ್ಕೂ ಹೆಚ್ಚಿನ ಚಿನ್ನದ ಪದಕ ಗೆದ್ದ ದಾಖಲೆ ಅವರದು.
ಕ್ರೀಡಾ ಕ್ಷೇತ್ರದ ಸಾಧನೆಗಾಗಿ ೨೦೦೪ರಲ್ಲಿ ಪ್ರತಿಷ್ಠಿತ ಅರ್ಜುನ ಪುರಸ್ಕಾರ ಪಡೆದಿರುವ ಶ್ರೀಮತಿ ಜೆ.ಜೆ. ಶೋಭಾ ಅವರು ಭವಿಷ್ಯದಲ್ಲಿ ಇನ್ನೂ ಹತ್ತಾರು ದಾಖಲೆಗಳನ್ನು ನಿರ್ಮಿಸುವ ಕನಸು ಹೊತ್ತವರು.