Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಡೊನ್ನಾ ಫರ್ನಾಂಡಿಸ್

ಮಹಿಳಾ ಸಂಘಟನೆ ‘ವಿಮೋಚನಾ’ ದ ಸಂಸ್ಥಾಪಕರಲ್ಲಿ ಒಬ್ಬರಾಗಿ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುತ್ತಿರುವವರು ಶ್ರೀಮತಿ ಡೊನ್ನಾ ಫರ್ನಾಂಡೀಸ್ ಅವರು.
ಬೆಂಗಳೂರು ಜ್ಯೋತಿನಿವಾಸ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾದ ಶ್ರೀಮತಿ ಡೊನ್ನಾ ಫರ್ನಾಂಡೀಸ್ ಅವರು ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ನಿಂದ ಸಮಾಜ ಸೇವೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಂಘಟನಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿದವರು, ಮಹಿಳೆಯರ ಹಕ್ಕುಗಳಿಗಾಗಿ ಸ್ಥಾಪಿತವಾಗಿರುವ ವಿಮೋಚನಾ ಸಂಸ್ಥೆಯ ಸಂಚಾಲಕಿಯಾಗಿರುವ ಶ್ರೀಮತಿ ಡೊನ್ನಾ ಫರ್ನಾಂಡೀಸ್ ಅವರು ಮಾನವ ಹಕ್ಕುಗಳ ಪ್ರಚಾರಕರು.
ರಾಷ್ಟ್ರದ ಮೊದಲ ಮಹಿಳಾ ಪುಸ್ತಕದಂಗಡಿ ‘ಸ್ತ್ರೀಲೇಖ’ ಶ್ರೀಮತಿ ಡೊನ್ನ ಅವರ ಕನಸಿನ ಕೂಸೆ ಆಗಿದೆ. ವಿವಾಹಿತ ಮಹಿಳೆಯರ ಅಸ್ವಾಭಾವಿಕ ಸಾವುಗಳ ಬಗ್ಗೆ ವಸ್ತುನಿಷ್ಟ ಅಧ್ಯಯನ ನಡೆಸುವುದರೊಂದಿಗೆ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧದ ಮಾನವೀಯ ಹೋರಾಟಗಳಲ್ಲಿ ಸದಾ ಕೇಳಿಬರುವ ಹೆಸರು ಶ್ರೀಮತಿ ಡೊನ್ನಾ ಫರ್ನಾಂಡಿಸ್ ಅವರದು.
ಮಹಿಳಾಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ಅವರ ಹಕ್ಕುಗಳನ್ನು ದೊರಕಿಸಿಕೊಡಲು ಶ್ರಮಿಸುತ್ತಿರುವ ಸಮಾಜ ಸೇವಾ ಕಾರ್ಯಕರ್ತೆ ಶ್ರೀಮತಿ ಡೊನ್ನಾ ಫರ್ನಾಂಡೀಸ್ ಅವರು.