ನಾಟಕಗಳ ವಿಭಿನ್ನ ಪಾತ್ರಗಳಲ್ಲಿ ತನ್ಮಯತೆಯಿಂದ ನಟಿಸಿ ಪ್ರೇಕ್ಷಕರ ಅಭಿಮಾನಕ್ಕೆ ಪಾತ್ರರಾದ ಪರಿಶಿಷ್ಟ ಪಂಗಡದ ಅಭಿಜಾತ ರಂಗ ಪ್ರತಿಭೆ ಶ್ರೀಮತಿ ಪಿ. ಪದ್ಮ ಅವರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯವರಾದ ಶ್ರೀಮತಿ ಪದ್ಮ ಅವರು ಬಾಲ್ಯದಿಂದಲೇ ನಾಟಕದ ಕಡೆಗೆ ಆಕರ್ಷಿತರಾದರು. ಕಡು ಬಡತನದಿಂದಾಗಿ ವಿದ್ಯಾಭ್ಯಾಸದಲ್ಲಿ ಹೆಚ್ಚು ಮುಂದೆ ಹೋಗಲಾಗಲಿಲ್ಲ. ಊರಿನಲ್ಲಿ ನಡೆಯುತ್ತಿದ್ದ ನಾಟಕ ಪ್ರದರ್ಶನಕ್ಕೆ ಹೋಗುತ್ತಿದ್ದು ಅದರಲ್ಲಿ ಹೆಚ್ಚು ಆಸಕ್ತಿಯುಂಟಾಗಿ ತಾವೂ ನಾಟಕಗಳಲ್ಲಿ ಪಾತ್ರವಹಿಸಲು ಪ್ರಾರಂಭಿಸಿದರು. ಉತ್ತಮ ಪ್ರೋತ್ಸಾಹ ದೊರೆಯಿತು. ಪ್ರತಿಭೆ ಬಹುಮುಖವಾಗಿ ಹೊರಹೊಮ್ಮತೊಡಗಿತು. ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಪತಿಯ ಮನೆಯಲ್ಲಿಯೂ ಉತ್ತೇಜನ ಸಿಕ್ಕಿತು.
ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳ ವಿಭಿನ್ನ, ವೈವಿಧ್ಯಮಯ ಪಾತ್ರಗಳು ಅವರನ್ನು ಅರಸಿ ಬಂದವು. ಪಾತ್ರಗಳ ಅಂತರಂಗವನ್ನು ಅರಿತು ತನ್ಮಯತೆಯಿಂದ ಅಭಿನಯಿಸುವುದು ಸಿದ್ಧಿಸಿ ಜನಪ್ರಿಯತೆ ಪಡೆದರು.
ಐವತ್ತು ವಸಂತಗಳನ್ನು ಪೂರೈಸಿರುವ ಶ್ರೀಮತಿ ಪದ್ಮ ಅವರು ಈವರೆಗೆ ಅಭಿನಯಿಸಿರುವ ನಾಟಕಗಳು ಸಾವಿರ ಸಂಖ್ಯೆಯನ್ನು ದಾಟಿವೆ. ಇವರಿಗೆ ಹತ್ತಾರು ಸಾವಿರ ಅಭಿಮಾನಿ ಬಳಗವಿದೆ. ಊರಿನ ಅಭಿವೃದ್ಧಿ ಕಾರ್ಯಗಳಿಗೆ ಧನ ಸಂಗ್ರಹಿಸಲು ಸಹಾಯಾರ್ಥ ನಾಟಕ ಪ್ರದರ್ಶನದಲ್ಲಿ ಪಾತ್ರವಹಿಸಿ ಸಮಾಜ ಸೇವೆಯಲ್ಲಿ ತಮ್ಮ ಅಳಿಲು ಸೇವೆ ಸಲ್ಲಿಸಿದ್ದಾರೆ. ಕೂಡ್ಲಿಗಿ ತಾಲ್ಲೂಕು ಕನ್ನಡ ಜಾಗೃತ ಸಮಿತಿ ಸದಸ್ಯರಾಗಿಯೂ ದುಡಿದಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನಾಟಕೋತ್ಸವ ಪ್ರಶಸ್ತಿ, ಕೂಡ್ಲಿಗಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಮತ್ತು ಇತರ ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿ
ಗೌರವಗಳು ಇವರಿಗೆ ಸಂದಾಯವಾಗಿದೆ.
ಹಿಂದುಳಿದ ಜನಾಂಗದಲ್ಲಿ ಜನಿಸಿ ತಮ್ಮ ವೈಯಕ್ತಿಕ ಪರಿಶ್ರಮ ಮತ್ತು ಸಾಧನೆಯಿಂದ ನಾಟಕ ಕಲಾ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿರುವ ಪ್ರತಿಭಾಪೂರ್ಣ ರಂಗತಾರೆ ಶ್ರೀಮತಿ ಪಿ. ಪದ್ಮ ಅವರು.
Categories
ಶ್ರೀಮತಿ ಪಿ. ಪದ್ಮ
