Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀಮತಿ ಪುಷ್ಪಾ ಗಿರಿಮಾಜಿ

ಪತ್ರಿಕೋದ್ಯಮವನ್ನು ವೃತ್ತಿಯಾಗಿಸಿಕೊಂಡು, ಅದರ ಮೂಲಕವೇ ಸಮಾಜಸೇವೆಯನ್ನು ಅತ್ಯಂತ ಪರಿಣಾಮಕಾರಿಯಾಗಿ

ನಿರ್ವಹಿಸುತ್ತಿರುವ ಸಾಹಸಿ ಶ್ರೀಮತಿ ಪುಷ್ಪಾ ಗಿರಿಮಾಜಿ ಅವರು.

೧೯೫೩ನೇ ಇಸವಿಯಲ್ಲಿ ಜನಿಸಿದ ಗಿರಿಮಾಜಿ ಅವರು, ೧೯೭೬ರಲ್ಲಿ ವರದಿಗಾರ್ತಿಯಾಗಿ ಪತ್ರಿಕಾರಂಗವನ್ನು ಪ್ರವೇಶಿಸಿದರು. ವಿವಿಧ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಅಂಕಣ ಬರಹಗಾರರಾಗಿ ಜನಪ್ರಿಯರಾದರು. ಬಳಕೆದಾರರ ಬವಣೆಗಳನ್ನು ತಳಮಟ್ಟದಿಂದ ಅಭ್ಯಸಿಸಿ, ಅದಕ್ಕೆ ಕಾರಣವಾದ ಮಾಹಿತಿಗಳನ್ನು ಸಮಗ್ರವಾಗಿ ಕಲೆ ಹಾಕಿದರು. ಇವರ ಬರಹಗಳು ಆಡಳಿತಗಾರರಲ್ಲಿ ಪಟ್ಟಭದ್ರರಲ್ಲಿ ಮಿಂಚಿನ ಸಂಚಾರವುಂಟು ಮಾಡಿದವು.

ಭಾರತದ ಅನೇಕ ಜನಪ್ರಿಯ ಪತ್ರಿಕೆಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇವರು ಮಂಡಿಸಿದ ವಿದ್ವತ್‌ ಪೂರ್ಣ ಬರಹಗಳು ರಾಷ್ಟ್ರದಾದ್ಯಂತ ಪ್ರಶಂಸೆಗೆ ಪಾತ್ರವಾಗಿವೆ. ‘ಚೆಕ್‌ಔಟ್’, ‘ಗುಡ್ ಮಾರ್ನಿಂಗ್ ಇಂಡಿಯಾ ಶೋ’ ಮೊದಲಾದವು ಇವರ ಜನಪ್ರಿಯ ಕಾಣಿಕೆಗಳು, ಬಳಕೆದಾರರಿಗೆ ಸಂಬಂಧಪಟ್ಟ ರಾಷ್ಟ್ರಮಟ್ಟದ ಅನೇಕ ಗಣ್ಯ ಸಮಿತಿಗಳಲ್ಲಿ ಇವರು ಸದಸ್ಯರಾಗಿ ನೀಡಿರುವ ಅಮೂಲ್ಯ ಸಲಹೆಗಳು ಈ ಕ್ಷೇತ್ರಕ್ಕೆ ತುಂಬಾ ಪ್ರಯೋಜನಕಾರಿಯಾಗಿ ಪರಿಣಮಿಸಿವೆ.

‘ವಾಟ್, ಎಚ್, ಹೌಮಚ್’ ಎಂಬ ಇವರ ಅಂಕಣ ಬರಹ ಬಳಕೆದಾರರಲ್ಲಿ ನವೀನ ಜಾಗೃತಿಯನ್ನೇ ಉಂಟುಮಾಡಿದೆ. ಇವರ ಈ ಅಪೂರ್ವ ಸಮಾಜಸೇವೆಯ ಪತ್ರಿಕೋದ್ಯಮಕ್ಕೆ ನಾಡಿನ ಹಲವಾರು ಸಂಘಟನೆಗಳು ಸರ್ಕಾರಿ ಸಂಸ್ಥೆಗಳು ವಿಧವಿಧ ಮನ್ನಣೆಯಿತ್ತು ಗೌರವಿಸಿವೆ.

ಪತ್ರಿಕೋದ್ಯಮದಂತಹ ಪರಿಣಾಮಕಾರಿ ಕ್ಷೇತ್ರದಲ್ಲಿ ಜನಸೇವೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿರುವ ಧೀರ ಕನ್ನಡ ಮಹಿಳೆ ಶ್ರೀಮತಿ ಪುಷ್ಪಾ ಗಿರಿಮಾಜಿ.