Categories
ರಂಗಭೂಮಿ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪ್ರೇಮಾ ಕಾರಂತ

ನಾಟಕ ನಿರ್ದೇಶನ, ಚಲನಚಿತ್ರ ನಿರ್ದೇಶನ, ರಂಗಭೂಮಿ ವಸ್ತ್ರ ವಿನ್ಯಾಸ — ಮಕ್ಕಳ ರಂಗಭೂಮಿ ಈ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿರುವವರು ಶ್ರೀಮತಿ ಪ್ರೇಮಾ ಕಾರಂತ್.
ಬಿ. ವಿ. ಕಾರಂತರಂಥ ದೈತ್ಯ ಪ್ರತಿಭೆಯ ಸಂಗಾತಿಯಾಗಿದ್ದೂ ಆ ಪ್ರಭಾವಳಿಯಿಂದ ಬಿಡಿಸಿಕೊಂಡು ಸ್ವಂತ ಪ್ರತಿಭೆಯ ಛಾಪನ್ನು ತಾವು ಪ್ರವೇಶಿಸಿದ ಎಲ್ಲ ಕ್ಷೇತ್ರಗಳಲ್ಲೂ ಮೂಡಿಸುವಲ್ಲಿ ಯಶ ಕಂಡ ಪ್ರೇಮಾ ಕಾರಂತ್ ಜನಿಸಿದ್ದು ೧೫ ಆಗಸ್ಟ್ ೧೯೩೬ರಲ್ಲಿ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಎಫ್.ಎ. ಪದವೀಧರರಾದ ಪ್ರೇಮಾ ಕಾರಂತ್ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಡಿಪ್ಲೊಮಾ ಪಡೆದವರು. ರಾಷ್ಟ್ರೀಯ ಪುಸ್ತಕ ಟ್ರಸ್ಟ್‌ನಿಂದ ಭಾಷಾಂತರಕಾರರಾಗಿ ಅಂಗೀಕೃತರಾದ ಪ್ರೇಮಾ ‘ಕುರುಡು ಕಾಂಚಾಣ’, ‘ಹಕ್ಕಿ ಹಾರುತಿದೆ ನೋಡಿದಿರಾ’, ‘ಕುಣಿಯೋ ಕತ್ತೆ’, ‘ನಾವೂ ನಾಟಕ ಆಡೋಣ ಬನ್ನಿ’ ಮುಂತಾದ ಕೃತಿಗಳನ್ನು ಭಾಷಾಂತರಿಸಿ ಕನ್ನಡದ ಸತ್ವವನ್ನು ಅನ್ಯ ಭಾಷೆಗಳಿಗೂ, ಅನ್ಯ ಭಾಷೆಗಳ ಸತ್ವವನ್ನು ಕನ್ನಡಕ್ಕೂ ತುಂಬಿ ಕೊಟ್ಟವರು.
ನಾಟಕ ನಿರ್ಮಾಣ ಮತ್ತು ನಿರ್ದೇಶನದಲ್ಲಿ ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡು ಲಂಕೇಶರ `ಪೊಲೀಸರಿದ್ದಾರೆ ಎಚ್ಚರಿಕೆ’, ‘ತೆರೆಗಳು’; ಶ್ರೀರಂಗರ ‘ಸ್ವಗತ ಸಂಭಾಷಣೆ’, ‘ಕತ್ತಲೆ ಬೆಳಕು’; ಬೇಂದ್ರೆಯವರ ‘ಸಾಯೋ ಆಟ’; ಗಿರೀಶ್ ಕಾರ್ನಾಡರ ‘ಹಿಟ್ಟಿನ ಹುಂಜ’ ಮುಂತಾದವುಗಳ ಪ್ರಯೋಗಗಳು ಪ್ರೇಕ್ಷಕರ ಮನದಲ್ಲಿ ಬಹುಕಾಲ ಅಚೊತ್ತಿ ನಿಲ್ಲುವಂತೆ ಮಾಡಿವೆ. ಮಕ್ಕಳ ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ತೋರಿದ ಪ್ರೇಮಾ ಕಾರಂತ್ ‘ಹೆಡ್ಡಾಯಣ’, ‘ಅಲಿಬಾಬ’, ‘ನಕ್ಕಳಾ ರಾಜಕುಮಾರಿ’, ‘ಅಜ್ಜಿಕಥೆ, ‘ಇಸ್ಪೀಟ್ ರಾಜ್ಯ’, ‘ಪಂಟರ ಶಾಲೆ’, ‘ಸಿಂದ್‌ಬಾದ್’ ಮುಂತಾದ ನಾಟಕಗಳಲ್ಲಿ ತಮ್ಮ ವಿಶಿಷ್ಟ ಪ್ರತಿಭೆಯನ್ನು ಎರಕ ಹೊಯ್ದಿದ್ದಾರೆ. ‘ಜೋಕುಮಾರಸ್ವಾಮಿ’, ‘ಈಡಿಪಸ್’, ‘ಸಂಕ್ರಾಂತಿ’, ‘ಒಥೆಲೋ’, ‘ಕಿಂಗ್ ಲಿಯರ್’, ‘ಮ್ಯಾಕ್‌ಬೆತ್’ ಮುಂತಾದ ಕನ್ನಡ ನಾಟಕಗಳು ಮಾತ್ರವಲ್ಲದೇ ಕೆಲವು ಹಿಂದಿ, ಪಂಜಾಬಿ ನಾಟಕಗಳಲ್ಲೂ ದುಡಿದಿದ್ದಾರೆ. ಹಂಸಗೀತೆ, ಫಣಿಯಮ್ಮ, ಕುದುರೆ ಮೊಟ್ಟೆ, ಲಕ್ಷ್ಮೀಕಟಾಕ್ಷ ಮುಂತಾದ ಸಿನೆಮಾಗಳಿಗೂ ವಸ್ತ್ರವಿನ್ಯಾಸ ರೂಪಿಸಿ ಅಲ್ಲೂ ಸೊಬಗು, ಅರ್ಥವಂತಿಕೆಗಳನ್ನು ಸಾಕಾರಗೊಳಿಸಿದ್ದಾರೆ.
‘ಫಣಿಯಮ್ಮ’, ‘ನಕ್ಕಳಾ ರಾಜಕುಮಾರಿ’, ‘ಬಂದ್ ಝರೋಂಖೆ’ ಚಿತ್ರಗಳನ್ನು ನಿರ್ದೇಶಿಸಿರುವ ಪ್ರೇಮಾ ಅವರನ್ನು ಮ್ಯಾನ್ ಹ್ಯಾಂ ಪ್ರಶಸ್ತಿ, ಪ್ಯಾರಿಸ್ ಚಲನಚಿತ್ರೋತ್ಸವದ ಪ್ರೇಕ್ಷಕರ ಪ್ರಶಸ್ತಿ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ, ಉತ್ತಮ ಚಲನಚಿತ್ರ, ಅತ್ಯುತ್ತಮ ಕಥೆ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿಗಳು ಇವರನ್ನರಸಿ ಬಂದಿವೆ.
ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದ ಕ್ರಿಯಾಶೀಲ ಪ್ರತಿಭೆ ಶ್ರೀಮತಿ ಪ್ರೇಮಾ ಕಾರಂತ್ ಅವರು.