ನಾಲ್ಕು ದಶಕಗಳಿಗೂ ಮೀರಿ, ನಾಲ್ಕು ಭಾಷೆಗಳ ಚಿತ್ರರಂಗದಲ್ಲಿ ಅಭಿನಯಿಸಿ ಕಲಾಪ್ರೇಮಿಗಳ ಅಚ್ಚು ಮೆಚ್ಚಿನ ಕಲಾವಿದೆ ಬಿ. ವಿ. ರಾಧಾ ಅವರು.
೧೯೪೮ ರಲ್ಲಿ ಹಿಂದುಳಿದ ಕುಟುಂಬದಲ್ಲಿ ಜನಿಸಿ ರಾಜಲಕ್ಷ್ಮಿ ಎನ್ನುವ ಜನ್ಮನಾಮವನ್ನು ಬದಲಿಸಿಕೊಂಡು ಬಿ.ವಿ. ರಾಧಾ ಆಗಿ ಬೆಳ್ಳಿ ತೆರೆಗೆ ಕಾಲಿಟ್ಟರು. ಬಾಲ್ಯದಿಂದಲೂ ಸಿನಿಮಾ ನಾಟಕಗಳ ಆಕರ್ಷಣೆ ತೀವ್ರವಾಗಿ ಪ್ರಸಿದ್ಧ ನೃತ್ಯ ನಿರ್ದೇಶಕ ರಾಜ್‌ಕುಮಾರ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡಿದರು. ೧೯೬೮ರಲ್ಲಿ ತಮಿಳಿನ ಪ್ರಸಿದ್ದ ಕಲಾವಿದೆ ದೇವಿಕಾ ಜೊತೆ ದೇಶ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದರು. ಎಂ.ಜಿ.ಆರ್., ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ಎನ್‌ಟಿಆರ್, ಪ್ರೇಮ್‌ನಜೀರ್ ಹಾಗೂ ಕನ್ನಡದಲ್ಲಿ ಡಾ|| ರಾಜ್‌ಕುಮಾರ್, ಉದಯಕುಮಾರ್, ಕಲ್ಯಾಣ್‌ಕುಮಾರ್, ವಿಷ್ಣುವರ್ಧನ್, ಶ್ರೀನಾಥ್ ಹೀಗೆ ದಕ್ಷಿಣ ಭಾರತದ ಎಲ್ಲ ಪ್ರತಿಷ್ಠಿತ ನಟರೊಂದಿಗೆ ನಾಯಕಿ, ಸಹಕಲಾವಿದೆ, ಪೋಷಕಿ ಪಾತ್ರಧಾರಿಯಾಗಿ ಹಾಗೂ ನವ ಪೀಳಿಗೆಯ ಕಲಾವಿದರಾದ ರವಿಚಂದ್ರನ್, ಶಿವರಾಜ್‌ಕುಮಾರ್, ರಮೇಶ್ ಮೊದಲಾದವರೊಂದಿಗೆ ಅಭಿನಯಿಸಿದ್ದಾರೆ.
ಜೊತೆಗೆ ಕಿರುತೆರೆಯಲ್ಲಿಯೂ ಜನಪ್ರಿಯರಾಗಿರುವ ಶ್ರೀಮತಿ ಬಿ.ವಿ. ರಾಧಾ ಅವರು ತಮ್ಮದೇ ನಾಟಕ ಸಂಸ್ಥೆ ಕಟ್ಟಿ ವೃತ್ತಿ ನಾಟಕಗಳಲ್ಲಿ ಅಭಿನಯಿಸಿ ಕರ್ನಾಟಕದಾದ್ಯಂತ ಪ್ರವಾಸಮಾಡಿದ್ದಾರೆ. ಬಿ.ವಿ. ರಾಧಾ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ ‘ಗಂಗಾ ತುಂಗಾ’ ನಾಟಕ ಐದು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.
ತಮ್ಮ ಪತಿ ನಿರ್ಮಾಪಕ ನಿರ್ದೇಶಕ ಕೆ.ಎಸ್.ಎನ್. ಸ್ವಾಮಿ (ರವಿ) ಅವರ ಜೊತೆಗೂಡಿ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ನಿರ್ಮಾಣದ ‘ಜಂಬೂಸವಾರಿ’ಗೆ ಸ್ವರ್ಣಕಮಲ, ‘ಹರಕೆಯ ಕುರಿ’ಗೆ ರಜತ ಕಮಲ ಪ್ರಶಸ್ತಿಗಳು ದೊರಕಿವೆ.
* ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶಕ್ತ ಕಲಾವಿದರ ಕಲ್ಯಾಣ ಸಮಿತಿ ಹಾಗೂ ‘ಅಭಿನೇತ್ರಿ’ ಸಂಘದ ಪದಾಧಿಕಾರಿಯಾಗಿದ್ದಾರೆ.
ಚಲನ ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಭಿನಯದಿಂದ ಕಲಾಪ್ರೇಮಿಗಳ ಮನಸ್ಸಿಗೆ ಮುದ ನೀಡುತ್ತಿರುವ ಅಪರೂಪದ ಕಲಾವಿದೆ ಶ್ರೀಮತಿ ಬಿ.ವಿ. ರಾಧಾ ಅವರು.
Categories
ಶ್ರೀಮತಿ ಬಿ.ವಿ. ರಾಧಾ
