Categories
ಜಾನಪದ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮಾಸ್ತಮ್ಮ

ಆಧುನಿಕ ಶಿಕ್ಷಣ ಪಡೆದ ವೈದ್ಯರೂ ಅಚ್ಚರಿಪಡುವಂತೆ ಹಳ್ಳಿಗಾಡಿನಲ್ಲಿ ತಮ್ಮ ಅನುಭವದಿಂದಲೇ ಎರಡೂವರೆ ಸಾವಿರ ಹೆರಿಗೆಗಳನ್ನು ಸುಸೂತ್ರವಾಗಿ ಮಾಡಿಸಿರುವ ಹಿರಿಮೆ ಹುಣಸೂರು ತಾಲ್ಲೂಕು ಹೆಬ್ಬಾಳ ಗಿರಿಜನ ಹಾಡಿಯ ಶ್ರೀಮತಿ ಮಾಸ್ತಮ್ಮ ಅವರದು.
ಪರಂಪರಾನುಗತವಾಗಿ ಬಂದಿರುವ ಗಿಡ ಮೂಲಿಕಾ ಉಪಚಾರದಿಂದ ಸುಲಭವಾಗಿ ಹೆರಿಗೆ ಮಾಡಿಸುವ ಶ್ರೀಮತಿ ಮಾಸ್ತಮ್ಮ ಇಸುಬು, ಉಳುಕು, ಮೂಳೆ ಸಂಬಂಧಿ ಕಾಯಿಲೆಗಳನ್ನೂ ಗುಣಪಡಿಸಬಲ್ಲ ದೇಸಿ ವೈದ್ಯೆ.
ತಾಯಿ ಸಿದ್ಧಮ್ಮನಿಂದ ಕಲಿತ ಈ ಜನಪದ ಔಷಧೋಪಚಾರವನ್ನು ಮನಸಾರೆ ಮಾಡಿಕೊಂಡು ಗ್ರಾಮೀಣ ಜನಮನ ಗೆದ್ದಿರುವ ಶ್ರೀ ಮಾಸ್ತಮ್ಮ ಅವರನ್ನು ಸ್ವಯಂಸೇವಾ ಸಂಸ್ಥೆಯೊಂದು ತನ್ನ – ಆರೋಗ್ಯ ಯೋಜನೆಯ ಸಂಪನ್ಮೂಲ ವ್ಯಕ್ತಿಯನ್ನಾಗಿ ಬಳಸಿಕೊಳ್ಳುತ್ತಿದೆ.
ತಮ್ಮ ಅದ್ಭುತ ಕೈಚಳಕದಿಂದ ಸುಲಭವಾಗಿ ಹೆರಿಗೆ ಮಾಡಿಸುವ ಶ್ರೀ ಮಾಸ್ತಮ್ಮ ಅವರನ್ನು ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡಮಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ.