Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಮೋಹಿನಿ ಎ. ನಾಯಕ್

ಅಂಗವಿಕಲ ಬಡ ಮಕ್ಕಳು ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿಯಬಾರದೆಂದು ಅವರಿಗೆ ಉಚಿತ ಶಿಕ್ಷಣ, ವೃತ್ತಿ ತರಬೇತಿ ನೀಡಿ ಜೀವನೋಪಾಯ ಕಲ್ಪಿಸುತ್ತಿರುವವರು ಶ್ರೀಮತಿ ಮೋಹಿನಿ ಎ. ನಾಯಕ್ ಅವರು.
೧೯೪೩ರಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದ ಶ್ರೀಮತಿ ಮೋಹಿನಿ ಅವರು ಪ್ರಾರಂಭದಿಂದಲೂ ಸಮಾಜಸೇವೆಗೆ ಒಲಿದವರು. ವಿವಿಧ ಸೇವಾ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದ ನಂತರ ೧೯೮೧ರಲ್ಲಿ ಅಂಗವಿಕಲ ಬಡ ಮಕ್ಕಳ ದುಸ್ಥಿತಿಗೆ ಮನಕರಗಿ ಮಂಗಳೂರು ಬಳಿಯ ವಾಮಂಜೂರಿನಲ್ಲಿ ಮಂಗಳಜ್ಯೋತಿ ಶಾಲೆಯನ್ನು ಸ್ಥಾಪಿಸಿದರು. ಮೊದಲಿಗೆ ಕೇವಲ ಆರು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ಶಾಲೆ ಇಂದು ೫೬೬ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಉಚಿತ ಶಿಕ್ಷಣ, ಸಮವಸ್ತ್ರ, ಪುಸ್ತಕ ಹಾಗೂ ಆಹಾರ ಈ ಶಾಲೆಗೆ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತದೆ. ಅಂಗವಿಕಲರಿಗೆ ಅಗತ್ಯವಾದ ಸಹಾಯ ಸಾಧನಗಳನ್ನೂ ನೀಡಲಾಗುತ್ತಿದೆ. ಅದರಿಂದ ಅಂಗವಿಕಲರ ದಿನ ನಿತ್ಯದ ಬದುಕು ಸರಾಗವಾಗುತ್ತಿದೆ. ಹತ್ತನೇ ತರಗತಿಯವರೆಗೆ ಕಲಿತ ನಂತರ ಅವರಿಗೆ ಬೆರಳಚ್ಚು, ಮರಗೆಲಸ, ಕಂಪ್ಯೂಟರ್, ಕುಶಲ ಕಲೆ ಇತ್ಯಾದಿಗಳಲ್ಲಿ ವೃತ್ತಿ ತರಬೇತಿ ನೀಡಲಾಗುತ್ತಿದೆ. ಇಲ್ಲಿ ಕಲಿತ ಮಕ್ಕಳು ಇಂದು ದೊಡ್ಡವರಾಗಿ ಸ್ವಂತ ಉದ್ಯೋಗ ನಡೆಸುತ್ತ, ಉತ್ತಮ ಹುದ್ದೆ ಅಲಂಕರಿಸಿ ಸ್ವಾವಲಂಬಿಗಳಾಗಿದ್ದಾರೆ.
ಶ್ರೀಮತಿ ಮೋಹಿನಿ ನಾಯಕ್ ಅವರ ನಿಸ್ವಾರ್ಥ ಸೇವೆಗೆ ಪ್ರತಿಫಲವಾಗಿ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಬಂಟರ ಸಂಘದ ಅತ್ಯುತ್ತಮ ಸಮಾಜ ಸೇವಾಕರ್ತೆ ಪ್ರಶಸ್ತಿ, ಮಾನವ ಹೊಣೆಗಾರಿಕೆಯ ಮೌಲ್ಯವರಿತ ಮಹಿಳೆ ಎಂದು ಅಮೆರಿಕದ ಟೆಕ್ಸಾಸ್‌ನ ಅಂತರರಾಷ್ಟ್ರೀಯ ಓರಿಯಂಟೇಶನ್ ಸೆಂಟರ್‌ನ ಪ್ರಶಸ್ತಿ, ಅಂತರರಾಷ್ಟ್ರೀಯ ಬಂಟ ಮಹಿಳೆಯರ ಸಮಾವೇಶದ ಮಿಲೇನಿಯಂ ಶ್ರೀ ೨೦೦೦ ಪ್ರಶಸ್ತಿಗಳು ಇವರನ್ನು ಅಲಂಕರಿಸಿವೆ.
ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಾಕರ್ತೆ ಶ್ರೀಮತಿ ಮೋಹಿನಿ ಎ. ನಾಯಕ್ ಅವರು.