Categories
ಯೋಗ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ವನಿತಕ್ಕ

ಭಾರತೀಯ ಸನಾತನ ಯೋಗ ಪದ್ಧತಿಯನ್ನು ಹೊಸ ತಲೆಮಾರಿಗೆ ಪರಿಚಯಿಸಿ ಪ್ರಚುರಪಡಿಸಿದ ಹಿರಿಮೆಯ ಯೋಗಗುರು ವನಿತಕ್ಕ ನಾಲ್ಕೂವರೆ ದಶಕದಿಂದಲೂ ಯೋಗಶಿಕ್ಷಣದಲ್ಲಿ ನಿರತ ಸಾಧಕಿ.
ಶಿವಮೊಗ್ಗ ಜಿಲ್ಲೆ ಹೊಸನಗರ ವನಿತಾ ಅವರ ಹುಟ್ಟೂರು. ಓದು-ಸನಾತನ ಪರಂಪರೆಯ ಅಧ್ಯಯನ ಮತ್ತು ಯೋಗ ಬಾಲ್ಯದಲ್ಲೇ ಮನ ಆವರಿಸಿಕೊಂಡ ಆಸಕ್ತಿಯ ಕ್ಷೇತ್ರಗಳು. ವಾಣಿಜ್ಯ ಪದವೀಧರರು. ಚರಿತ್ರೆ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಶಿಶು ಶಿಕ್ಷಣ ತರಬೇತಿ ಮತ್ತು ಮಕ್ಕಳ ಮನಃಶಾಸ್ತ್ರವನ್ನು ಅಧ್ಯಯನಿಸಿರುವ ವನಿತಾ ಹರೆಯದಲ್ಲೇ ಸಮಾಜಸೇವೆಗೆ ಬದುಕು ಮುಡುಪಿಟ್ಟವರು. ಯೋಗದ ತುಡಿತದಿಂದ ವ್ಯಯಕ್ತಿಕ ಬದುಕಿನ ವ್ಯಾಮೋಹ ತೊರೆದ ವನಿತಕ್ಕ ರಾಘವೇಂದ್ರ ಸ್ವಾಮಿ ಮಲ್ಲಾಡಿಹಳ್ಳಿ, ಅಜಿತ್‌ಕುಮಾರ್, ಸ್ವಾಮಿ ಆತ್ಮಾನಂದಪುರಿ ಹಾಗೂ ಬಿ.ಕೆ.ಎಸ್. ಅಯ್ಯಂಗಾರ್ ಅವರಿಂದ ಯೋಗ ಶಿಕ್ಷಣ ಕಲಿತವರು. ಬೆಂಗಳೂರಿನ ಗಿರಿನಗರದಲ್ಲಿ ಯೋಗಶ್ರೀ ಸಂಸ್ಥೆ ಸ್ಥಾಪನೆ. ಹೊಸ ಪೀಳಿಗೆಗೆ ಯೋಗಶಿಕ್ಷಣ, ವೈಯಕ್ತಿಕ ಸಮಸ್ಯೆಗಳಿಗೆ ಆತ್ಮೀಯ ಸ್ಪಂದನೆಯನ್ನೇ ಸಾಧನಮಾರ್ಗವಾಗಿಸಿಕೊಂಡು ೪೫ ವರ್ಷಗಳಿಂದಲೂ ಸೇವಾನಿರತರು. ಶಿಷ್ಯರು, ಅಭಿಮಾನಿಗಳಿಗೆ ವನಿತಕ್ಕ ಎಂದೇ ಚಿರಪರಿಚಿತರಾಗಿರುವ ವನಿತಾ ಅವರು ಬದುಕು-ಭಾವವೆಲ್ಲವೂ ಯೋಗ ಶಿಕ್ಷಣಕ್ಕೆ ಅಂದಿಗೂ
ಇಂದಿಗೂ ಎಂದೆಂದಿಗೂ ಮೀಸಲು,