Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀಮತಿ ವಸುಂಧರಾ ಫಿಲಿಯೋಜಾ

ದೇಶ, ವಿದೇಶಗಳಲ್ಲಿ ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ವೈಭವವನ್ನು ಪರಿಚಯಿಸುತ್ತಿರುವ ಹೆಸರಾಂತ ಇತಿಹಾಸ ತಜ್ಞ ಶ್ರೀಮತಿ ವಸುಂಧರಾ ಫಿಲಿಯೋಜಾ ಅವರು.
ಹಾವೇರಿಯಲ್ಲಿ ಜನಿಸಿ, ಧಾರವಾಡದಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಶ್ರೀಮತಿ ವಸುಂಧರಾ ಅವರು ಇತಿಹಾಸ ಎಂ.ಎ., ಶಾಸನಶಾಸ್ತ್ರ ಡಿಪ್ಲೊಮಾ ಪದವೀಧರರು. ಫ್ರಾನ್ಸ್ ದೇಶದ ವಿದ್ವಾಂಸ ಶ್ರೀ ಪೈರೆ ಸೈಲ್ವೇನ್ ಫಿಲಿಯೋಜಾ ಅವರನ್ನು ವಿವಾಹವಾಗಿ ಅವರೊಡನೆ ಇತಿಹಾಸ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಕೊಂಡರು. ಫ್ರಾನ್ಸ್‌ನ ನ್ಯಾನ್ಸಿ ವಿಶ್ವವಿದ್ಯಾಲಯದಿಂದ ಯುರೋಪಿಯನ್ ಥಿಯೇಟರ್‌ ಬಗೆಗೆ ಡಿಪ್ಲೊಮಾ ಪದವಿ ಗಳಿಸಿದರು.
ಯುನೆಸ್ಕೋದಿಂದ ಆರ್ಥಿಕ ನೆರವು ಪಡೆದು ವಿಜಯನಗರ ಇತಿಹಾಸದ ಬಗೆಗೆ ಸಂಶೋಧನೆಯಲ್ಲಿ ನಿರತರಾಗಿರುವ ಶ್ರೀಮತಿ ವಸುಂಧರಾ ಫಿಲಿಯೋಜಾ ಅವರು ಹತ್ತರಿಂದ ಹದಿನಾಲ್ಕನೇ ಶತಮಾನದಲ್ಲಿ ನಿರ್ಮಿಸಲಾದ ಉತ್ತರ ಕರ್ನಾಟಕದ ಅನೇಕ ದೇವಸ್ಥಾನಗಳ ವ್ಯಾಸಂಗ ನಡೆಸಿ ಅಪಾರ ಮಾಹಿತಿ ಸಂಗ್ರಹಿಸಿದ್ದಾರೆ.
೧೯೮೫ನೆಯ ಇಸವಿಯಲ್ಲಿ, ಫ್ರಾನ್ಸ್‌ನಲ್ಲಿ ನಡೆದ ಭಾರತ ಮಹೋತ್ಸವ ಪ್ರದರ್ಶನದಲ್ಲಿ ಶ್ರೀಮತಿ ವಸುಂಧರ ಅವರು ಪ್ರದರ್ಶಿಸಿದ ರುಯಿನ್ಸ್ ಆಫ್ ವಿಜಯನಗರಕ್ಕೆ ಕೇಂದ್ರ ಸರ್ಕಾರದ ಅನುದಾನ ದೊರೆತಿದೆ. ಇದಲ್ಲದೆ ರಾಷ್ಟ್ರದ ಹಲವಾರು ವಿಚಾರ ಸಂಕಿರಣ ಹಾಗೂ ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಸಹಯೋಗದೊಡನೆ ಡೇಟಾಬೇಸ್ ಆನ್ ಟೆಂಪಲ್ಸ್ ಆಫ್ ಕರ್ನಾಟಕ ಎಂಬ ಗ್ರಂಥ ರಚನೆ ಹಾಗೂ ಸಿ.ಡಿ. ತಯಾರಿಕೆಗಾಗಿ ಹತ್ತು ವರ್ಷಗಳ ಕಾರ್ಯಯೋಜನೆಯಲ್ಲಿ ಪ್ರಸಕ್ತ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕನ್ನಡ, ಇಂಗ್ಲಿಷ್, ಫ್ರೆಂಚ್ ಮೂರು ಭಾಷೆಗಳಲ್ಲಿ ಕರ್ನಾಟಕದ ಇತಿಹಾಸದ ಬಗೆಗೆ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಸಿ.ಡಿ.ಗಳನ್ನು ಹೊರತಂದಿದ್ದಾರೆ. ಸುಮಾರು ಎಪ್ಪತ್ತಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿರುವ ಶ್ರೀಮತಿ ವಸುಂಧರಾ ಅವರು ಕಾದಂಬರಿ, ಸಣ್ಣಕಥೆ, ನಾಟಕ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲೂ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವಿದ್ವತ್ ಪ್ರಬಂಧಗಳನ್ನು ಮಂಡಿಸಿರುವ ಶ್ರೀಮತಿ ವಸುಂಧರಾ ಫ್ರೆಂಚ್‌ಭಾಷೆಯಲ್ಲಿಯೂ ಲೇಖನಗಳನ್ನು ಬರೆದಿದ್ದಾರೆ.
ಕರ್ನಾಟಕದ ಐತಿಹಾಸಿಕ ದೇವಾಲಯಗಳನ್ನು ಕುರಿತು ವಿಶೇಷವಾಗಿ ಹಂಪಿಯ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ವಿದ್ವನ್ಮಣಿ ಶ್ರೀಮತಿ ವಸುಂಧರಾ ಫಿಲಿಯೋಜಾ ಅವರು.