Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀಮತಿ ವಿಜಯಾ ದಬ್ಬೆ

ಸ್ತ್ರೀವಾದಿ ದೃಷ್ಟಿಕೋನ ಒಂದು ಮಾನಸಿಕ ಸ್ಥಿತಿ, ತಾತ್ವಿಕ ನೆಲೆ. ಈ ನೆಲೆಯನ್ನು ಯಾರಾದರೂ ಹೊಂದಿರಬಹುದು ಎಂದು ಸ್ತ್ರೀವಾದಕ್ಕೆ ನವೀನ ಆಯಾಮ ನೀಡಿದವರು ಲೇಖಕಿ, ವಿಮರ್ಶಕಿ ವಿಜಯಾ ದಬ್ಬೆ.
ಕಿರಿಯರ ಬದುಕಿನಲ್ಲಿ ಅವರು ಹಚ್ಚಿದ ವಿಚಾರ, ವಿಮರ್ಶೆ, ಸ್ತ್ರೀವಾದದ ಹಣತೆ ಸರ್ವಕಾಲಕ್ಕೂ ಪ್ರಕಾಶಮಾನವಾಗಿ ಬೆಳಗುವಂಥದ್ದು.
೧೯೫೩ರಲ್ಲಿ ಹಾಸನ ಜಿಲ್ಲೆಯ ದಬ್ಬೆ ಎಂಬ ಪುಟ್ಟ ಗ್ರಾಮದಲ್ಲಿ ಜನನ. ತಂದೆ ಕೃಷ್ಣಮೂರ್ತಿ, ತಾಯಿ ಸೀತಾಲಕ್ಷ್ಮಿ ಪದವಿವರೆಗೆ ಹಾಸನದಲ್ಲಿ ಕಲಿಕೆ, ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ. ನಾಗಚಂದ್ರ ಒಂದು ಅಧ್ಯಯನ” ಅವರ ಸಂಶೋಧನಾ ಕೃತಿ.
ಸಮಾಜದ ಅಸಂಖ್ಯಾತ ಅನಾಥ ಮಹಿಳೆಯರಿಗೆ ‘ಸಮತಾ ವೇದಿಕೆ’ ಮೂಲಕ ಬದುಕಿನ ಶಕ್ತಿಯಾದವರು. ‘ಇರುತ್ತವೆ’ ಅವರ ಪ್ರಥಮ ಕವನ ಸಂಕಲನ. ಆ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರ ಪ್ರವೇಶ. ವಿಜಯಾ ಅವರು ನೀಡಿದ ಮೌಲ್ಯಯುತ ಸಾಹಿತ್ಯ ಅನೇಕ ಕಿರಿಯ ಲೇಖಕಿಯರನ್ನು ರೂಪಿಸುವಲ್ಲಿ ಸಹಾಯಕ.
ಅವರ ವಿಚಾರಲಹರಿ ಮತ್ತು ಜೀವನ ದೃಷ್ಟಿ ‘ಮಹಿಳೆ ಸಾಹಿತ್ಯ ಸಮಾಜ’ ಹಾಗೂ ‘ನಾರಿ: ದಾರಿ ದಿಗಂತ’ ಮೊದಲಾದ ಕೃತಿಗಳಲ್ಲಿ ಬಿಂಬಿತ. ಇವರ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಲೇಖಕಿ ಪ್ರಶಸ್ತಿ, ರತ್ನಮ್ಮ ಹೆಗಡೆ ಬಹುಮಾನ ಹಾಗೂ ಅನುಪಮಾ ಪ್ರಶಸ್ತಿ ಸಂದಿವೆ. ಲಿಂಗ ಭೇದವಿಲ್ಲದ ಸಮಾಜ ವ್ಯವಸ್ಥೆಗಾಗಿ ಹೋರಾಟ ಮಾಡುತ್ತ ಚಳವಳಿಯಲ್ಲಿ ತೊಡಗಿಸಿಕೊಂಡ ಲೇಖಕಿ ಶ್ರೀಮತಿ ವಿಜಯಾ ದಬ್ಬೆ ಅವರು.