Categories
ರಚನಾತ್ಮಕ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ವಿಮಲಾ ರಂಗಾಚಾರ್

ರಂಗಭೂಮಿ, ನೃತ್ಯ ಸಂಗೀತ, ಕರಕುಶಲ ಕಲೆಗಳೊಂದಿಗೆ ದೀರ್ಘಕಾಲದ ನಂಟು ಬೆಳೆಸಿಕೊಂಡಿರುವ ಸಮಾಜ ಸೇವಾಕರ್ತರು ಶ್ರೀಮತಿ ವಿಮಲಾ ರಂಗಾಚಾರ್ ಅವರು.
ಸಿಂಹಳ, ರಷ್ಯಾ, ಇಂಗ್ಲೆಂಡ್, ಅಮೆರಿಕಾ, ಇಂಡೋನೇಷ್ಯಾಗಳಲ್ಲಿ ಸಂಚರಿಸಿ ಗಳಿಸಿಕೊಂಡ ವ್ಯಾಪಕ ಅನುಭವವನ್ನು ಆಸಕ್ತ ಕಲಾ ಪ್ರಕಾರಗಳಿಗೆ ಧಾರೆಯೆರೆದರು. ಪೂನಾದ ಭಾರತೀಯ ಮಹಿಳಾ ವಿಶ್ವವಿದ್ಯಾಲಯದ ಕಲಾ ಪದವಿಯನ್ನು ಪ್ರಥಮ ಬ್ಯಾಂಕ್‌ನೊಂದಿಗೆ ಗಳಿಸಿ ಕುಲಪತಿಗಳ ಬಹುಮಾನವನ್ನು ಪಡೆದರು. ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕದ ಅಧ್ಯಕ್ಷರಾಗಿ, ಎಂ.ಇ.ಎಸ್. ಕಾಲೇಜಿನ ಗೌರವ ಕಾವ್ಯದರ್ಶಿಯಾಗಿ, ನಾಟ್ಯ ಇನ್ಸ್‌ಟಿಟ್ಯೂಟ್ ಆಫ್ ಕಥಕ್ ಅಂಡ್ ಕೋರಿಯೋಗ್ರಫಿಯ ಉಪಾಧ್ಯಕ್ಷರಾಗಿ, ಮಲ್ಲೇಶ್ವರಂ ಮಹಿಳಾ ಸಂಘದ ಅಧ್ಯಕ್ಷರಾಗಿ, ಸೇವಾಸದನದ ಗೌರವ ಕಾರ್ಯದರ್ಶಿಯಾಗಿ ಬಿಡುವಿಲ್ಲದ ಸಮಾಜಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೈಲಾಸಂ, ಶ್ರೀರಂಗ, ಪರ್ವತವಾಣಿಯವರ ನಾಟಕಗಳಲ್ಲಿ ಭಾವಪೂರ್ಣವಾಗಿ ಅಭಿನಯಿಸಿ ಜನ ಮೆಚ್ಚುಗೆಗೆ ಪಾತ್ರರಾದ ಶ್ರೀಮತಿ ವಿಮಲಾ ರಂಗಾಚಾರ್ ಅವರು ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸುವುದರೊಂದಿಗೆ ಅವುಗಳ ವೇಷಭೂಷಣ ವಿನ್ಯಾಸಕರಾಗಿಯೂ ಕಾರ್ ನಿರ್ವಹಿಸಿದವರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಕರಕುಶಲ ಕಲೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ಶಿಶುಕಲ್ಯಾಣ ಮತ್ತು ಮನರಂಜನಾ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ, ಕೆನರಾ ಬ್ಯಾಂಕ್ ನಿರ್ದೆಶಕರಾಗಿ ಭಾರತೀಯ ವಿದ್ಯಾಭವನದ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ, ಭಾರತೀಯ ನಾಟ್ಯ ಸಂಘದ ಸಂಸ್ಥಾಪಕ ಕಾರ್ಯದರ್ಶಿಯಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೀವ್ರ ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಂಡು ಅದರಲ್ಲೇ ಸಂತೃಪ್ತಿಯನ್ನು ಕಂಡಿದ್ದಾರೆ.
ಉದಾತ್ತ ಕನಸುಗಳನ್ನು ಹೊಂದಿರುವ ಮೌಲ್ಯಾಧಾರಿತ ಜೀವನ ಶ್ರದ್ಧೆಯ ಪ್ರತೀಕವಾಗಿರುವವರು ಶ್ರೀಮತಿ ವಿಮಲಾ ರಂಗಾಚಾರ್ ಅವರು.