ಹರಿಕಥಾ ಲೋಕದಲ್ಲಿ ಮಹಿಳೆಯರೇ ವಿರಳವಾಗಿರುವಾಗ ಬೆಳೆವ ಪೈರು ಮೊಳಕೆಯಲ್ಲಿ ಎಂಬಂತೆ ಬಾಲ್ಯದಿಂದಲೆ ಹರಿಕಥೆಗೆ ಒಲಿದ ಭರವಸೆಯ ಕಲಾವಿದೆ ಶ್ರೀಮತಿ ಜಿ.ಶೋಭಾ ನಾಯ್ಡು.
ಕನ್ನಡ ನಾಡಿನ ಹರಿಕಥಾ ಲೋಕದಲ್ಲಿ ಬಹುದೊಡ್ಡ ಹೆಸರಾದ ಗುರುರಾಜುಲು ನಾಯ್ಡು ಅವರ ಮಗಳಾಗಿ ೧೯೬೩ರಲ್ಲಿ ಹುಟ್ಟಿದ ಶೋಭಾ ಅವರು ಚಿಕ್ಕಂದಿನಿಂದಲೆ ತಂದೆಯ ಕಲಾನೈಪುಣ್ಯಕ್ಕೆ ಮಾರುಹೋಗಿ ಹರಿಕಥಾ ಕಲೆಗೆ ಒಲಿದವರು. ಬಿ.ಎಸ್ಸಿ., ಪದವೀಧರೆಯಾದರೂ ಕಲೆಗೆ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡು ಆಕಾಶವಾಣಿಯ ಎ ಗ್ರೇಡ್ ಮಟ್ಟಕ್ಕೆ ಏರಿದ ಕಿರಿಯ ಪ್ರತಿಭೆ ಶೋಭಾ ಅವರದು. ಈಗಾಗಲೇ ಅವರು ಈ ನಾಡಿನ ಎಲ್ಲ ಜಿಲ್ಲೆಗಳ ಎಲ್ಲ ತಾಲ್ಲೂಕುಗಳಲ್ಲಿ ತಮ್ಮ ಹರಿಕಥೆಯನ್ನು ನಡೆಸಿಕೊಟ್ಟು ನಾಡಿನಾಚೆಗೂ ತಮ್ಮ ಕಲೆಯ ಪ್ರಭೆಯನ್ನು ಹರಡಿದ ಅದ್ವಿತೀಯ ಮಹಿಳಾ ಹರಿಕಥೆಗಾರರು. ಇಪ್ಪತ್ತಕ್ಕೂ ಹೆಚ್ಚು ಹರಿಕಥಾ ಧ್ವನಿಸುರುಳಿಗಳನ್ನು ಹೊರತಂದಿರುವ ಇವರು ಹೈದರಾಬಾದಿನಲ್ಲಿ ನಡೆದ ಫೋಕ್ ಟ್ರೆಡಿಷನಲ್ ಆಫ್ ಇಂಡಿಯನ್ ಕಲ್ಟರ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.
ಯಾವುದೇ ಕ್ಷೇತ್ರದಲ್ಲಿ ಮಹಿಳೆ ಪುರುಷ ಸಮಾನವಾದ ಪ್ರತಿಭೆಯನ್ನು ತೋರಬಲ್ಲಳು ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನ ಕಲಾವಿದೆ ಶ್ರೀಮತಿ ಜಿ. ಶೋಭಾ ನಾಯ್ಡು ಅವರು.
Categories
ಶ್ರೀಮತಿ ಶೋಭಾನಾಯ್ಡು
