Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್

ಸಂಗೀತ ಕ್ಷೇತ್ರದ ಹಿರಿಯ ಕಲಾವಿದೆ ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್ ಅವರು.

೧೯೨೬ರಲ್ಲಿ ತಿರುವನಂತಪುರದಲ್ಲಿ ಜನನ, ಪಾಲಘಾಟ್ ವೈದ್ಯನಾಥ ಐಯ್ಯರ್, ಕೆ ಎಸ್ ನಾರಾಯಣಸ್ವಾಮಿ, ತಂಜಾವೂರು ವಿ ಶಂಕರನ್, ಶೆಮ್ಮಂಗುಡಿ ಶ್ರೀನಿವಾಸ ಐಯ್ಯರ್‌ರಂಥ ಹಿರಿಯ ವಿದ್ವಾಂಸರಿಂದ ಸಂಗೀತ ಶಿಕ್ಷಣ.

ಸದ್ದುಗದ್ದಲವಿಲ್ಲದೆ ಶ್ರದ್ಧೆಯಿಂದ ಸಂಗೀತ ಸಾಧನೆ ಮಾಡುತ್ತಿರುವ ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್ ನಾಡಿನ ಹಲವು ಪ್ರತಿಷ್ಠಿತ ಸಂಘ-ಸಂಸ್ಥೆಗಳಲ್ಲಿ ಹಾಗೂ ಹೊರನಾಡಿನಲ್ಲಿಯೂ ಸಂಗೀತ ಕಚೇರಿ ನೀಡಿದ್ದಾರೆ. ಶ್ರೀ ರಾಮರಾವ್ ನಾಯಕ್ ಅವರಲ್ಲಿ ಹಿಂದೂಸ್ತಾನಿ ಸಂಗೀತವನ್ನು ಕಲಿತಿರುವ ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್ ಹಿಂದೂಸ್ತಾನಿ ಶೈಲಿಯಲ್ಲಿ ಭಜನ್‌ಗಳನ್ನು ಸುಶ್ರಾವ್ಯವಾಗಿ ಹಾಡುವುದರಲ್ಲಿ ನಿಸ್ಸಿಮರು.

ಮದ್ರಾಸ್ ಮ್ಯೂಸಿಕ್‌ ಅಕಾಡೆಮಿಯ ಸ್ವರ್ಣಪದಕ, ಅತ್ಯುತ್ತಮ ಕಿರಿಯ ಕಲಾವಿದೆ ಪ್ರಶಸ್ತಿ ಅತ್ಯುತ್ತಮ ಸಬ್ ಸೀನಿಯರ್ ಪ್ರಶಸ್ತಿ ತಿರುಮಲ ತಿರುಪತಿ ದೇವಾಲಯದ ‘ಗಾನಸರಸ್ವತಿ’ ಬರುದು, ಹಂಸಧ್ವನಿ ಸಭೆಯ ‘ಗಾನಕಲಾ ಪ್ರಪೂರ್ಣೆ’ ಬಿರುದು ಇವರ ಸಾಧನೆಗೆ ಸಂದ ಗೌರವಗಳು. ಅನಂತಪುರ, ಪಾಲ್‌ಘಾಟ್, ಎರ್ನಾಕುಲಂ, ಮಧುರೆ, ಮುಂಬೈ ಮುಂತಾದ ನಗರಗಳಲ್ಲಿ ನಡೆದ ಉತ್ಸವಗಳಲ್ಲಿ ಕಚೇರಿ ನೀಡಿರುವ ಇವರು ‘ಸದ್ಗುರು ಸಂಗೀತ ಸಮಿತಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಸಂಗೀತ ಕಲೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿ ಇಟ್ಟಿರುವ ಶ್ರೀಮತಿ ಸೀತಾಲಕ್ಷ್ಮಿ ವೆಂಕಟೇಶನ್ ಅವರು ಕರ್ನಾಟಕ ಗಾನಕಲಾ ಪರಿಷತ್ತಿನಿಂದ ಸನ್ಮಾನಿತರಾಗಿದ್ದಾರೆ.