ರಾಗ ನೀಲಾಂಬರಿ ರೂಪಕತಾಳ

ಮಾನಿನಿ ಏನಿದು ಹದನ ನಿ | ಧಾನಿಸಿ ಪೇಳೆನಗೆ |
ಆ ನಂದ ಕುಮಾರನು ಕಡೆ | ಗೇನೆಂದನು ನಿನಗೆ   || ಪಲ್ಲವಿ ||

ತರುಣಿಯೆ ನೀನೆನಗಂತ | ಸ್ಕರುಣದವಳೆ ಸರಿ ಎನ್ನುತ |
ನೆರೆನಂಬಿರಲೆಡೆಯೊಳು ಈ | ಪರಿ ಎಸಗುವ ಗುಣವೆ ||
ಗುರುತುಗಳಿದೆ ಪ್ರತ್ಯಕ್ಷದಿ | ಮರೆಮಾಜದು ಆ ರಂಗನು |
ನೆರೆದಿಹ ಭಾವವು ತೋರ್ಪುದು | ತರವೆ ನಿನಗೆ ಜಾರೆ || ಮಾನಿನಿ        ||೭೬||

ಅಂಬುಜದಳ ನೇತ್ರ ನೀ | ರಂಜಿಸಿ ಬರಿಸೆಂದಟ್ಟಲು |
ಸಂಭ್ರಮದೊಳೆಗಾತಾ | ರಂಭಕೆ ಭೋಗಸುಖ ||
ಹಂಬಲಿಸುವದಾಯಿತು ವಿ | ಶ್ವಂಭರನನು ಈ ಕ್ಷಣ ತಹೆ |
ನೆಂಬವರ‍್ಯಾರಿಹರು ಸ | ಯಂಬರದ ಲಿಪಿಯು || ಮಾನಿನಿ       ||೭೭||

ನೀರೆಯೆ ಬಡಿವಾರವ ಬಿಡು | ಸಾರತ್ತಲೆನುತ ರಾಧೆಯು |
ಶ್ರೀ ರಮಾಧವ ನಾರಾಯಣ | ಕ್ಷೀರಾಂಬುಧಿ ಶಯನ ||
ಮಾರಜನಕ ಭಕ್ತರ ಸಂ | ಸಾರಿಕ ರಕ್ಷಿಸೊ ಎಂದಾ |
ನಾರಿಯು ಮನ ಮರುಗುತ ಸಮಯದಿ | ನಾರದ ನಡೆ ತಂದ  ||೭೮||

ರಾಗ ಮೆಚ್ಚು ಏಕತಾಳ

ಹೋ ಹೋ ಸೈರಿಸು ಯಾಕೆ ಮರುಗುವೆ |
ಆ ಹದನವು ಪೇಳ್ ನೀನ್ಯಾಕೆಯೊದರುವೆ || ಹೋ ಹೋ   || ಪಲ್ಲವಿ ||

ಜರೆದನೆ ರಮಣ | ತೊರೆದೆಯೊ ಭುವನಾ |
ವರ ನದಿ ತೀರದೊಳ್ಯಾರದೇಕೆ ಮರುಗುವೆ || ಹೋ ಹೋ       ||೭೯||

ಹಾರ ಪದಕವೂ ಸಾರ | ಸಾರಲಂಕೃತವೂ |
ಸೇರಿಸಿ ಕೆಲಕೆ ನೀನ್ಯಾಕೆ ಮರುಗುವೆ || ಹೋ ಹೋ    ||೮೦||

ಅಳಲದಿರಬಲೆ | ತಿಳಿದುಕೊ ಸುಪಲೆ |
ಒಲಿವ ರಮಾಪತಿ ಯಾಕೆ ಮರುಗುವೆ || ಹೋ ಹೋ   ||೮೧||

ರಾಗ ಮುಖಾರಿ ಏಕತಾಳ

ಏನ ಹೇಳಲಿ ಮುನಿಯೇ | ಸೌಭಾಗ್ಯವು | ಏನ ಹೇಳಲಿ ಮುನಿಯೆ |
ಎನ್ನಭಿಮಾನ | ಏನ ಹೇಳಲಿ ಮುನಿಯೇ   || ಪಲ್ಲವಿ ||

ಸರಸಗಳಾಡಿ ಮುನ್ನ | ಶ್ರೀರಂಗ ಧಾಮಾ |
ಮರುಳು ಮಾಡುತಲಿ ಎನ್ನ ||
ಸ್ಮರನ ಶಸ್ತ್ರಾಗ್ನಿಯ | ನುರಿಯು ಮುದ್ರಿಸುತೀಗ |
ಮರುಕನಲ್ಲೈ ಮೋಹನ || ಆ ಸುಪ್ರಸನ್ನಾ     ||೮೨||

ಕರೆಯಲಟ್ಟಿದರೀಕೆಯ | ಈ ಚದುರೆಯ |
ನೆರೆದನಂತಲ್ಲೊ ಪ್ರಿಯಾ ||
ಪರಮ ಪುರುಷರೊಳು ಜಾ | ಲ್ವರಿದು ಮೇಲ್ವಾಯ್ದುದ |
ಥರವೆ ಈ ಹೆಣ್ಣಿನಾಟಾ | ಎನ್ನ ಲಲಾಟ        ||೮೩||

ಜಾಣ ಶ್ರೀ ರಮಾಧವನಾ | ಒಂದೇ ಕ್ಷಣ |
ಕಾಣದೆ ನಿಲ್ಲದು ಪ್ರಾಣಾ ||
ಮೀನಕೇತನನು ಬಲ್ ತ್ರಾಣದಿ ಎಸೆವ ಪೂ |
ಬಾಣವಾಯ್ತೆನಗೆ | ಘನ ಸೈರಿಸೆ ನಾ         ||೮೪||

ರಾಗ ಕಾಂಭೋಜಿ ಅಷ್ಟತಾಳ

ಅಳಲಬೇಡ ಎಲೆ ರಾಧೆ | ತಿಳುಹಿ ರಂಗನ ತವ |
ಬಳಿಗೆ ಕಳುಹಿಸುವೆ | ಬಳಲ ಬೇಡ ಎಲೆ ರಾಧೆ   || ಪಲ್ಲವಿ ||

ನೆರದನೆಂದಿವಳನು | ಜರೆಯದಿರು ಸುದತಿ |
ಯ ರೊಳವನಿಗೆ ಹೊಸ | ಪರಿ ವಿಶ್ವಾಸವು || ಅಳಲ    ||೮೫||

ಸುಳ್ಳು ಈ ಸಖಿ ನುಡಿ | ನಲ್ಲೆಯರಾಟವು |
ಒಲ್ಲೆನೆಂಬುದ ತಾ | ನಿಲ್ಲ ಈ ಜನ್ಮಕು || ಅಳಲ         ||೮೬||

ನಂಬಿಕೊಳ್ಳೆ ಸೌ | ರಂಬ ಮಾಧವನೊಳು |
ಇಂಬು ನೋಳ್ಪೆನೆನು | ತಂಬರಕಡರಿದದ || ಅಳಲ    ||೮೭||

ಚೌಪದಿ

ತ್ವರಿತದಿಂ ವೃಂದಾವನಕೆ ಬರುತಲಾಗ |
ಕರುಣಾರ್ಣವನ ಕಾಣುತೆರಗುತತಿ ಬೇಗ ||
ಸ್ಮರಿಸುವದಕಂಡು ಮುನಿಪತಿಗೆ ಕೈಕೊಡುತ |
ಹರುಷದಿಂ ಕುಳ್ಳಿರಿಸುತೆಂದ ಹರಿ ನಗುತ     ||೮೮||

ರಾಗ ತೋಡಿ ಏಕತಾಳ

ಗಮನವೆಲ್ಲಿ ಮೌನಿ ಏನಿದು | ಹಾ ಹಾ | ಗಮನವೆಲ್ಲಿ ಮೌನಿ ಏನಿದು
ಶ್ರಮಿಸಿ ಬಂದೆಯಾ | ಗಮವುಸುರೆನಗದು |   || ಪಲ್ಲವಿ ||

ಧನ್ಯನಾದೆ ನಾ ನಿನ್ನ ದರ್ಶನದಿ |
ಮಾನ್ಯಸಾರಸಸನ್ನಕುಮಾರಕ || ಗಮನ     ||೮೯||

ಯಾರಿಗ್ಯಾರಿಗೆ ಈ | ಸಾರಿ ಗಂಟಿಕ್ಕಲು |
ಭೋರನೆದ್ದಿರೆ | ನಾರದ ಮಹಾಮುನಿ || ಗಮನ        ||೯೦||

ನಗುತ ಪೇಳ್ದ ಮಾ | ತಿಗೆ ತೋಷದಿ ಕೈ |
ಮುಗಿದು ರಮಾಧವ | ನಿಗೆ ಮಗುಳರುಹಿದ || ಗಮನ  ||೯೧||

ರಾಗ ಆನಂದ ಭೈರವಿ ಅಷ್ಟತಾಳ

ಇದ್ಯಾವ ನಡತೆಯೊ ರಂಗ | ಆಹಾ | ನಿನಗಿದ್ಯಾವ ನಡತೆಯೊ ರಂಗ |
ನಿಧಾನಿಸಯ್ಯ ಈ ಪ್ರಸಂಗ    || ಪಲ್ಲವಿ ||
ರಾಧೆಯು ನಿನ್ನ | ಕಾದಿಹಳ್ಮುನ್ನಾ |
ನೀ ದಯ ಮಾಡದಿರು ಆ ಭಾವ     ||೯೨||

ಕರೆವರೆ ಸತಿಯ | ಕಳುಹಲಿ ಸ್ಥಿತಿಯ |
ನರಿತು ಅವಳ ನೆರದೆಯ ರಂಗಯ್ಯ ||೯೩||

ಲಲನೆಯ ಪ್ರಾಣಾ | ಉಳುಹಿಸೊ ಜಾಣಾ |
ಘಳಿಲನೆ ಪೋಗು ರಮಾಧವ | ಹೇ ದೇವ    ||೯೪||

ಭಾಮಿನಿ

ಮುನಿ ಲಲಾಮನೆ ಕೇಳು ತವ ನೃತ |
ವನು ತಿರಸ್ಕರಿಸುವೆನೆ ನಾ ನೀ |
ಕ್ಷಣದಿ ಪೋಪೆನೆನುತ್ತ ಮನ್ನಿಸಿ ಋಷಿಯ ಬೀಳ್ಕೊಟ್ಟು ||
ಘನ ಸರಾಗದಿ ರಾಧೆ ಎಡೆಗೈ |
ದನುಸರಿಸಿ ಕಾತುರದಿ ಕ್ಷಿತಿಯೊಳು |
ತನು ಮರೆತು ಬಿದ್ದಿಹಳ ನೆಗಹುತ ನಗುತ ಹರಿ ನುಡಿದ          ||೯೫||

ರಾಗ ಕೇದಾರಗೌಳ ಅಷ್ಟತಾಳ

ಕ್ರಮ ಇದೇನೆ ಸಂತಾಪ | ಶ್ರಮಿಸಬೇಡವೆ ನಿನ್ನಾ | ಭ್ರಮಿಸಿ ಬಂದೆನು ನೋಡೆ ರಾಧೆ ||
ಭ್ರಮಿಸುವಾತನೆ ಸೈ ಸೈ | ಎನುತ ಸ್ನೇಹವೆ ಸಾಕು ಪೋಗಯ್ಯ ರಂಗಧಾಮ      ||೯೬||

ಮನದಿ ಬೇಸರವೆ ಎ | ಳ್ಳಿನಿತು ಎನ್ನಪರಾಧವನು ತೋರಿದಡೆ ಮುದ್ದು ರಾಧೆ ||
ಎನಗೆ ಭಾಷೆಯನಿತ್ತ ನಿ | ತನ್ಯಳನು ಭೋಗಿಸುವಂತ | ಘನತೆ ಸಾಕಯ್ಯ ರಂಗಧಾಮ      ||೯೭||

ಕರೆಯಬಂದವಳೆ ಕಾತುರದಿ ಎನ್ನಮರ್ದಪ್ಪಿ | ದರೆ ಏನ ಮಾಡಲಿ ರಾಧೆ ||
ಸರಸವಾಡದಿರು ನೀ | ಸರಿಸವೆನಗೆ ಕೋಪ | ತೆರಳು ಸುಮ್ಮನೆ ರಂಗಧಾಮ      ||೯೮||

ಕರ್ಪೂರಗಂಧಿ ಇ | ನ್ನೀರ್ಪೆ ನಿನ್ನಗಲದೆ | ಸರ್ಪಭೂಷಣನಾಣೆ ರಾಧೆ |
ಒಪ್ಪುವುದೆಂತು ಸ | ಮರ್ಪಿಸಿದೆ ನೀ ಮುನ್ನ ಕಂ | ದರ್ಪನಸ್ತ್ರಕೆ ರಂಗಧಾಮ       ||೯೯||

ಹಲವು ಮಾತೇನು ಏ | ಲಲನೆ ರಕ್ಷಿಸುತೀಗ | ವಲಿದು ರಮಿಪೆ ಮುದ್ದು ರಾಧೆ ||
ಚಲುವ ನೀನೀಸು | ಪೇಳಿದ ಮೇಲೆ ನಾ ನಿನ್ನ | ವಳೆ ಶ್ರೀ ರಮಾಧವ ರಂಗಧಾಮ ||೧೦೦||

ವಾರ್ಧಕ

ಪರಮಪಾವನ ರಾಧೆಗೊರೆದ ಭಾವವನರಿತು |
ಭರದಿ ಬಿಗಿಯಪ್ಪಿ ಮುದ್ದಾಡಿ ಸುರತಾನಂದ |
ಸರಸ ಸುಖದೋರಲಾ ತರುಣಿ ತನ್ಮಯವಾದಳರವಿಂದನಾಭನೊಡನೆ ||
ನೆರದ ನದಿ ಬಳಿಯದುಪವನದಿ ಸಂತೋಷದೊಳ |
ಗಿರಲೀರ್ವರಿತ್ತಲಾ ನಂದಗೋಪನ ಮನೆಯ |
ಮೆರೆವ ರಾಜಾಂಗಣದೊಳಿಳಿದ ನಾರದ ಮುನಿಯು ಹರಿ ಕೃಷ್ಣ ಕೃಷ್ಣ ಎನುತ       ||೧೦೧||

ಸವಾಯಿ

ತಟ್ಟನೆ ಎದ್ದಾಕ್ಷಣದಿ ಮುನಿಯ ಪದ |
ಮುಟ್ಟಿ ಭಕ್ತಿಯೊಳೆರಗುತಾ ನಂದಾ ||
ವಿಷ್ಟರವೇರಿಸಿ ಪೂಜಿಸಿ ನಿಲಲಾ |
ಸೃಷ್ಟಿಗೊಡೆಯನ ಕುವರನೆಂದ      ||೧೦೨||

ನಾದನಾಮಕ್ರಿಯೆ ಏಕತಾಳ

ಕ್ಷೇಮವೇನೊ ಗುಣಶೀಲಾ | ನೇಮಿಸು ನಂದನೃಪಾಲಾ |
ಸುಕ್ಷೇಮವೇನೊ    || ಪಲ್ಲವಿ ||

ಆಲಯ ಸತಿಸೋದರ ಬಾಂಧವ ಜನ | ಜಾಲ ಸಹಿತ ಗೋಕುಲದೀ ||
ಬಾಲಕೃಷ್ಣನ ಮಹಾದೂಳಿಗ ಘನವದ | ಕೇಳಲಿಲ್ಲವೆನ್ನುತ ಪೇಳಬಂದೆ ನಿನ್ನೊಳು  ||೧೦೩||

ಸ್ಮರನ ಬಾಧೆಯೊಳು ಹೊರಳುವ ರಾಧೆಯ | ನಿರವ ಕಂಡು ನಾ ಮನದಿ ||
ಕರೆಸಿ ಧೈರ್ಯವಿತ್ತಾ ರಂಗನಿಗರುಹಿ | ತರಳೆ ಎಡೆಗೆ ತೆರಳಿಸಿ ಬಂದೆನು  ||೧೦೪||

ಒರೆದ ಕಂಡುದನು ಪರಸ್ತ್ರೀಯರಲಿ ಈ | ಪರಿಯೆಸಗಿದಡೆ ಉಚಿತವೆ ||
ತರಳಬೇಕೆ ಯಮುನಾ ನದಿ ತೀರದೊ | ಳಿರುವ ರಮಾಧವನ ಕರೆಸು ನೀ ನೀಕ್ಷಣ ||೧೦೫||

ರಾಗ ಮಾಧವಿ ಏಕತಾಳ

ಏನುಸುರಲಿ ಮುನಿಪಾಲ | ಸ್ವಾಮಿ | ಮಾನನಿಧಿಯೆ ಗುಣಶೀಲ  || ಪಲ್ಲವಿ ||

ಬಾಲಕೃಷ್ಣನು ಕ್ಷಣ ಮನೆಯೊಳಗಿಲ್ಲ | ಲೀಲೆ ಸ್ತ್ರೀಯರೊಳಾಯಿತಲ್ಲ       ||೧೦೬||

ಅವರೊಳಗಿಂದು ರಾಧೆಯು ದೊರಕಿದಳೆ || ಚದುರೆಯವಳುತಾನಿನ್ನಿವನ ಬಿಡುವಳೆ          ||೧೦೭||

ಶ್ರೀ ರಮಾಧವನ ಬರಿಸಲು ನಿನ್ನೊಡನೆ | ಚಾರರಟ್ಟಿಸುವೆ ತೋರಿಸು ಋಷಿವರನೆ  ||೧೦೮||

ರಾಗ ಶಂಕರಾಭರಣ ಏಕತಾಳ

ಆಹಾ ಬಲುಚಂದವಾತೈ | ಅಹುದಹುದಿದು ಏನಂದಾ ||
ವಿಹಿತ ಶ್ರೀ ಹರಿಯ ನಾ ತೋರ್ಪುದು ಸತ್ಯ ಆನಂದಾ   || ಪಲ್ಲವಿ ||

ಕಂಡಹದನ ಪೇಳ್ದರಿದನು | ಕಂಡು ಮರೆಯಲಾಯ್ತು |
ಕೊಂಡೆಯಾಡಿ ಚರರಕೂಡಿ | ಕೊಂಡು ಪೋಪಂತಾಯ್ತು         ||೧೦೯||

ಚಿತ್ತದಿ ಬೇಸರಿಸದಿರೈ | ಉತ್ತಮ ಶ್ರೀ ಗುರುವೆ |
ಪ್ರತ್ಯಕ್ಷ ಹರಿ ಈರ್ಪ ಠಾವ | ಭೃತ್ಯರ್ಗೆ ತೋರದುವೇ   ||೧೧೦||

ಚರರು ಶ್ರೀರಮಾಧವನಿ | ಗರುಹಿಕರೆದು ತಾರಯ್ಯ |
ತಹುದೆಂದು ಮುನಿಗೆರಗಿ ಭಟರ್ಗೆ | ನೊರೆದ ನಂದರಾಯ       ||೧೧೧||

ಭಾಮಿನಿ

ನಡೆಯಿರೈ ಹರಿಯೀರ್ಪ ತಾವನು |
ಬಿಡದೆ ತೋರುವರೀ ಮಹಾ ಮುನಿ |
ಯೊಡಗೊಳುತ ಗಮಿಸುತಲಿ ರಂಗನೊಳರುಹಿ ಕರೆತಹುದು ||
ಕಡು ಸರಾಗದೊಳೆಂದು ಭಟರೊಳು |
ನುಡಿದ ಋಷಿಯೊಡಗೂಡಿ ಕಳುಹಲು |
ತಡೆದ ಮಾರ್ಗದೊಳಂದು ಕಮಲಜ ಪಡೆದವಗೆ ಚರರು         ||೧೧೨||

ರಾಗ ಮಾರವಿ ಏಕತಾಳ

ಎಲ ತಡಿಯೋ | ನಮ್ಮ ಸ್ವಾಮಿ ಹರಿಯ ತೋರಿಸೈ | ಎಲತಡಿಯೋ   || ಪಲ್ಲವಿ ||

ಏನ್ಮೇ ವೀಣಾಧರ ಮೀಟಿ ಬ | ಲ್ವಿನೋದ ದೋರಿ ||
ಸುಳ್ಮಾಡು ಕಲ್ಲಿವರದೆ ನೆ | ಲ್ಮೂರಾರಿ ನಿಲ್ಮ್ಯಾಪಾರ್ವ || ಎಲಾ  ||೧೧೩||

ಸುಮ್ಗೆ ಚಾಡಿಯಾಡಿ ಕಣ್ಣ ಕಣ್ಣ | ಬಿಮ್ಗೆ ಬಿಡುವೆ ಯಾಕೊ ||
ನಮ್ಕೂಡಿ ಗಜಮ್ಕೆ ನಿನಗೆ | ಶಿಮ್ಕಿ ಬಿಡಲೆ ಮುಸುಡಿಗೆ  ||೧೧೪||

ಆಳ್ಕ ಬೇಡ ಸಿಕ್ಕಿದೆ ಎಲಾ | ಪಲ್ಗಿರಿಯಲಿನ್ಯಾಕೊ ||
ಘಲ್ಕನೆ ರಮಾಧವ ಕೇ | ವಲ ಕೃಪಾಬ್ದಿಯನೆ ತೋರೆಲ          ||೧೧೫||

ರಾಗ ಕೇತಾರಗೌಳ ಅಷ್ಟತಾಳ

ಗಲಭೆ ಇದೇನೊ ಸೈರಿಸೆಂದೆನುತ ಮುನಿ | ಕಳುವದೆ ಬರಲು ಮುಂದೆ ||
ಲಲನೆ ರಾಧೆಯು ಅತ್ತ ನಳಿನನೇತ್ರನು ತನ | ಗೊಲಿದನೆಂಬುವ ಗರ್ವದಿ ||೧೧೬||

ಇರಲಿತ್ತಲನಿಬರ ದೂರದಿ ಕಾಣುತ್ತ | ಹರಿಯಿದ ನೆರೆ ಎಣಿಸಿ ||
ಪರಮ ಭಕ್ತರ ಮನದಿರವ ನೀಕ್ಷಿಸಲಾಗಿ | ಸರಿದನದೃಶ್ಯನಾಗಿ   ||೧೧೭||

ಭೋರನೆ ಚರರಗೂಡುತ ಮುನಿ ಯಮುನೆಯ | ತೀರದಿ ಬರಲು ಬೇಗ ||
ಶ್ರೀ ರಮಾಧವನು ಕಾಣದಿರಲ್ಮನದೊಳು | ನಾರದನರಿತನಾಗ  ||೧೧೮||

ಭಾಮಿನಿ

ಅರಿಯದೇ ನಾರದ ಮಹಾ ಮುನಿ |
ಪರಮ ಸುಜ್ಞಾನಿಯು ಕಣಾ ಶ್ರೀ |
ಹರಿಯು ತನ್ನಾಶ್ರಿತೆಯು ರಾಧೆಯ ಗರುವನಪಹರಿಸಿ ||
ತಿರೆಯನುದ್ಧರಿಸುತ ನಿರಂತರ |
ಸರಸದಿಂ ಪಾಲಿಸಲು ಸರಿದುದ |
ನರಿತು ತಾಪಸಕುಲಶಿರೋಮಣಿಯೊರೆದನಬಲೆಯೊಳು         ||೧೧೯||

ರಾಗ ಕಾಂಭೋಜಿ ಏಕತಾಳ

ಏನಮ್ಮಾ | ರಾಧೆ | ಏನಮ್ಮಾ || ಮಾನವಂತೆ ಮೌನದೊಳಿರುವೆ || ಇದೇನಮ್ಮಾ  || ಪ ||
ಚಿತ್ತಜನಸ್ತ್ರನೆದೆ | ಗೊತ್ತಿತೆನುತ ನಿನ್ನ |
ಹತ್ತಿರೆ ಕಳುಹಲಿ | ನ್ನೆತ್ತ ಪೋದ ಹರಿ ||೧೨೦||

ನಂದಗೋಪನೆಡೆ | ಗಿಂದು ಪೋಗಿ ಪೇಳಿದೆ |
ಬಂದರಿದಕೊ ಎನ್ನ | ಹಿಂದೆ ನೋಡು ಚರರು ||೧೨೧||

ಜಾಣರಮಾಧವ ನಾ | ಕಾಣಿಸದನಕರ |
ಮಾಣದೆ ಬಿಡರಿವ | ರೇನ ಮಾಡುವೆನು      ||೧೨೨||

ರಾಗ ದ್ವಿಜಾವಂತಿ ಅಷ್ಟತಾಳ

ಮಾನನಿಧಿಯೆ ಸ್ವಾಮಿ | ಆ ನಂದ ರಾಜನೊ | ಳೇನೆಂದೊರೆದೆ ಮುನಿಪಾಲಕಾ ||
ಮುಚ್ಚುಮರೆಯ ಬಾಲೆ | ಹೆಚ್ಚು ಕುಂದರಿಯೆನು | ನಿಶ್ಚಯನೊರೆದೆ ನಾ ರಾಧೆಯೇ ||೧೨೩||

ಗುಪಿತಕಾಮಗಳ ಆ | ನೃಪಗೆ ಪೇಳಬಹುದೇ | ವಿಪರೀತವಾಯ್ತು ಮುನಿಪಾಲಕ ||
ಕಪಟ ನಾಟಕದೊಳು | ಚಪಳೆ ನೀ ನೊಲಿದುದ | ವಿಪರೀತವಲ್ಲವೆ ರಾಧೆಯೇ      ||೧೨೪||

ಗಂಡನುಳ್ಳ ಗರತಿ | ಮಂಡಲದೊಳು ಲಜ್ಜೆ | ಭಂಡೆಯಿನ್ನಾದೆ ಮುನಿಪಾಲಕ |
ಗರತಿಯಾದರೆ ಯದು | ವರನ ಬರಿಸೆನುತ | ಒರದೆ ಎನ್ನೊಳಿನ್ಯಾಕೆ ರಾಧೆಯೆ     ||೧೨೫||

ಕರೆಯಲಟ್ಟಿದವಳ | ನೆರೆದನೆಂದರುಹಲೀ | ಪರಿಯ ಮಾಡಿದೆಮುನಿಪಾಲಕ ||
ಜರೆದು ದೂತಿಯ ಕಡೆ | ಗಿರಿಸಿ ನೀನೆಸಗಿದ | ಸರಸ ಲೇಸವೆ ಭಲೆ ರಾಧೆಯೆ       ||೧೨೬||

ಹರಿಯ ಕಂಡಿದನೆಲ್ಲ | ಮರೆವೆನೆಂದರೆ ಸ್ವಾಮಿ | ಸರಿದನಲ್ಲೋ ಮುನಿಪಾಲಕ ||
ಗುರುವತನವ ಬಿಟ್ಟು | ವರ ರಮಾಧವನ ಬೇಗ | ಸ್ಮರಿಸು ಇನ್ನಾದರೆ ರಾಧೆಯೆ    ||೧೨೭||

ವೃತ್ತ

ವರಗೋಪಾಲ ಸದಾಜ್ಜಭೃಂಗ ಶ್ರೀಶಿತಂ ಪರಿಪೂರ್ಣ ಕೃಪೆದೋರುತ |
ಅರುಹಲ್ ಭಾವಕಿ ರಾಧೆಯಾಗಾನರಿತಳ್ ಸರಿಗರ್ಪಿಸಿದೆ ಎನ್ನುತ |
ಬರಿದೆಹಂಕೃತಿವಿತ್ತೆ ಯಾಕೋ ತನಗೆ ಹರಿಕೃಷ್ಣ ನಾರಾಯಣ
ಕರುಣಾಂಬುಧಿ ಪಾಲಿಸೆಂದು ಮರುಗಲ್ ಚರರೆಂದರ್ ಪರಾಕ್ರಮ         ||೧೨೮||

ರಾಗ ಮಾಂಡ್ ಏಕತಾಳ

ಬೋಲ್ ಬೇಗಿಂ ಬೊಲ್ ಬೇಗಿ ಲಿರೆ ತೆರೆ ಬಲೆಹುವಾ
ಮೇರೆ ಭಗವಾನ್ ಕಾಬೋಲ್ ಬೇಗೀ   || ಪಲ್ಲವಿ ||
ಚೋರಿ ಬಲೆ ತೇರಿವಾಂ ಹವಾಳ್ದಿ ಸ |
ರ್ದಾರ್ ಕಿತೆ ತಾದೆರೆಚಪಾದಿಯೆ    ||೧೨೯||

ಪರಮೆ ಸರಕಿ ಸನುಮೈರ್ದೆದೆಕೆ | ತೆರೆ ಸರಿಯಿಂಜಾನ್ ||
ಮೆರಹ ಜಿರತ್ ಕಿ ಖಾದಾಗ್ | ಮೈತು ಹಜಾತ್ |
ಕರೆ ನಹಿ ತೆರೆದೇಕ್ ಬಲೆ ತಮಸ್ತಾ  ||೧೩೦||

ಮೀಟಾ ಸರಕಿ ಬಾತ್ ಜೂಟೇಯ | ಭಟ್ಕನೆ ಸಚ್ಚಿತು ಬೋಲ್‌ದಿಯೇ |
ಘಟಿವುಟೋದೇಕ ತೆಂತೆ ಲಟಕನಹಿಗೆ | ಮೇರಿ ವಿಜಲ ಸಾಮಿಕಿತ್ತೆ |
ಮೋಟಿಬುವುಲು ಸುನ್ನಾ ಬೋಲ್ ಜೇ        ||೧೩೧||

ಆರ್ಯಸವಾಯಿ

ಇಂತುಸುರಿದ ಚಾರರ್ಗೊರೆದು ಮುನಿ | ಶಾಂತದಿ ರಾಧೆಗೊರೆವುತಲಿಂತೆಂದ ||
ಚಿಂತೆಯ ಬಿಡು ವೈಕುಂಠಾಧಿಪ ಶ್ರೀ | ಕಾಂತನ ನೆನೆ ಬೇಗದೊಳೆಂದ    ||೧೩೨||
ಯಾಕಿನಿತೆಸಗಿದಹಂಕೃತಿಯನು ನಿ | ರಾಕರಿಸೆಲೆ ಭಾವಕಿ ಬೇಗ ||
ಏಕೋಭಾವದಿ ಸ್ಮರಿಸಲು ಶ್ರೀಹರಿ | ತಾ ಕರುಣಿಸದೆ ಬಿಡನು ಬೇಗ       ||೧೩೩||

ಯಮಿ ಎಂದುದ ಕೇಳ್ದಾಕ್ಷಣ ರಾಧೆಯು | ನಮಿಸಿ ಧ್ಯಾನಿಸಿದಳು ಮಾಧವನ ||
ಅಮಿತ ಸಹಸ್ರಾಪರಾಧಗಳೆನ್ನದು | ಕ್ಷಮಿಸಿ ಮೈದೋರೆಂದಳು ಲಲನೆ    ||೧೩೪||

ರಾಗ ಮೋಹನ ಅಷ್ಟತಾಳ

ಬಾರೊ ಶ್ರೀಹರಿಯೆ ಬೇಗ | ಬಾರೋ ಬಾರೋ ಬೇಗ |
ಮೈದೋರೊ ದಯಾನಿಧಿ || ಬಾರೊ   || ಪಲ್ಲವಿ ||
ಅರಿಯದಾದೆ ತವ | ಕರುಣದಳಕೆ ಎನ್ನ |
ಗರುವಿಕೆ ಕ್ಷಮಿಸಯ್ಯ | ಶರಣ ರಕ್ಷಾಮಣಿ || ಬಾರೊ     ||೧೩೫||

ರೂಢಿಯೊಳಗೆ ನಗೆ | ಗೇಡ ಮಾಡದಿರು |
ಗಾಢ ಈ ಜನರನು | ಓಡಿಸು ತ್ವರಿತದಿ       ||೧೩೬||

ವೇದವೈದ್ಯ ಸನ | ಕಾದಿ ವಿನುತ ಶ್ರೀ ರ |
ಮಾಧವ ಎನ್ನ ಮರಿ | ಯಾದೆಯು ನಿನ್ನದೈ   ||೧೩೭||

ರಾಗ ಕಾಂಭೋಜಿ ಅಷ್ಟತಾಳ

ಮೈ ದೋರಿದನು ಮುರಾರಿ | ಚಾರು  ಸುದರ್ಶನಧಾರಿ |
ಮೈದೋರಿದನು ಮುರಾರಿ   || ಪಲ್ಲವಿ ||
ಅಜಭವ ಸುರನರ | ಭುಜಗಾದಿ ಭಜಕ |
ವ್ರಜನುತ ಕುಜನ ಕುಠಾರಿ || ಹರಿ ಮೈ        ||೧೩೮||

ಇದಕೊ ನಾ ಬಹೆ | ಬೆದರದಿರೆನುತ |
ರಾಧೆಯ ಬದಿ | ಗೊದಗಿದನು ಕಂಸಾರಿ       ||೧೩೯||

ತರಳೆ ಮರುಗದಿ | ರೆನುತ ಮಾಧವ ಮುನಿ |
ಗೊರೆದ ಗೋವರ್ಧನೋದ್ಧಾರಿಗೆ     ||೧೪೦||

ಚೌಪದಿ

ಏನಿದೇನಿದು ಹದನವೆಂದು |
ಶ್ರೀನಾಥ ಕೇಳುತಿರಲಂದು ||
ಮೌನಿವರ ನಗುತಲಾಕ್ಷಣದಿ |
ತಾನೊರದ ಹರ್ಷಿಸುತ ಮನದಿ     ||೧೪೧||

ರಾಗ ಆನಂದ ಭೈರವಿ ಅಷ್ಟತಾಳ

ಏನುಸುರಲಿ ದೇವ | ಮಹಾನುಭಾವ | ಏನುಸುರಲಿ ದೇವ  || ಪಲ್ಲವಿ ||
ಏನುಸುರಲಿ ನಂದನಿಳೆಯದಿ | ನೀನೂಳಿಗಲಿರುಹಲಿ |
ಕಾನಂದವದಾಯಿತೇನುಸುರಲಿ     ||೪೨||
ಎಷ್ಟಿವಳೊಡನೆ ವಿ | ಶೇಷ ಸ್ನೇಹ ಹರಿ |
ಕೃಷ್ಣ ಈ ವಾರಕೆ | ಸೃಷ್ಟಿಯೊಳಾತಿನ್ನೇನುಸುರಲಿ       ||೧೪೩||

ಮಾನನಿಧಿಯೆ ಅವ | ಮಾನದೊಡೆಯ
ನಮ್ಮನು ಉಳುಹಿ ಸಮ್ಮಾನಿಸೊ ಮಾಧವ || ಏನು    ||೧೪೪||

ವಾರ್ಧಕ

ಚಂದವಾತಿದುವೆ ಮುನಿಯೆಂದರುಹಿ ಮಗುಳೆ ಗೋ |
ವಿಂದ ಚರರನು ಕರೆದು ಮುಂದೆನಡಿರೆಂದಟ್ಟಿ |
ಚಂದ್ರಮುಖಿ ರಾಧೆಯಾನನ ವೀಕ್ಷಿಸುತಲಿ ಆನಂದದಿಂ ಬಿಗಿದಪ್ಪುತ ||
ಸೌಂದರಾಂಗಿಯೆ ನಿನ್ನ ವಂದೇ ಕ್ಷಣಕೆ ಅಗಲಿ |
ನಿಂದಿರೆನೆನುತ ಭಾಷೆಯಿತ್ತು ತೆರಳಿಸಿ ಪುರಕೆ |
ಪಿಂದಣಿಂದಮರ ಮುನಿಗೊಲಿದು ಕೈವಿಡಿದು ಹರಿನಂದಗೋಕುಲ ಪೊಕ್ಕನು        ||೧೪೫||

ಚೌಪದಿ

ಅರರೆ ಹರಿದರ್ಶನಂಗಸ್ಪರುಷವೆನಗೆ |
ದೊರಕಿತೆಂದುಲ್ಲಾಸ ಪೇರ್ಚಿ ಮನದೊಳಗೆ ||
ಅರಿತು ಪುಣ್ಯಾತ್ಮರೆಂದೆನುತಲಾಘಳಿಗೆ |
ವರಮುನಿಯು ಪೇಳ್ದ ನಂದ ಯಶೋದೆಯರಿಗೆ        ||೧೪೬||

ರಾಗ ಮಧ್ಯಮಾವತಿ ಅಷ್ಟತಾಳ

ಧನ್ಯರಹುದು ಭಲೆ | ಧನ್ಯರಹುದು ಭಲೆ ||
ಧನ್ಯರು ನೀವು ನಂದ ಯಶೋದ |
ಮಾನ್ಯರಖಿಳ ಬ್ರಹ್ಮಾಂಡಧರನ ಮಗುವೆನ್ನುತ ಮುದ್ದಾಡುವಿರಿ ಸದಾ  || ಪಲ್ಲವಿ ||

ಸತ್ವರಜತಮೋಗುಣಕಾಧಾರನು | ಪುತ್ರ ನಿಮಗೆ ಇವನೆ ಅಮಮ ||
ಸೂತ್ರಧರನ ಬಾಗೊತ್ತುತ ಮೊಲೆಯ | ಉಣಿಸುತ್ತ ನೋಡುವಿರಿ ಚಿತ್ರವಲೆ          ||೧೪೭||

ಜನನಿ ಜನಕರೆಂದೆನುತ ಕಣ್ಮನ | ದಣಿಯೆ ನೋಡುತ ಕುಣಿಸ್ಯಾಡುವಿರಿ ||
ಇನಿತು ಪುಣ್ಯೋದಯ ಕಾರಣ | ಸನಕಾದಿಗಳಿಗಸಾಧ್ಯವಿದನು || ಭಲೆ    ||೧೪೮||

ಸಂದುದೆ ನುಡಿ ಮಾಧವನು ಮನೆಗೆ ಇಕೊ | ಬಂದನೆ ನೋಡು ಎನುತಲಿ ಮುನಿಪನು ||
ಮಂದರಧರ ಮುಚುಕುಂದ ವರದ ಗೋ | ವಿಂದಗೆರಗಿ ನಭಕಡರಿದನು   ||೧೪೯||

ವಾರ್ಧಕ

ಸುರಮುನಿಯು ತೆರಳಲಿತ್ತಲು ನಂದಗೋಕುಲದಿ |
ಸರಸ ಲೀಲಾ ವಿನೋದವುದೋರಿ ಶ್ರೀಹರಿಯು |
ಪರಮ ಸೌಖ್ಯದಿ ರಾಧೆಗೊರೆದು ಅನವರತದಿಂದಿರ್ದ ತವ ಸತ್ಕೃತಿಯನು ||
ಬರೆದೋದಿ ಕೇಳ್ವ ಮಾನವರ ದಾರಿದ್ರ್ಯ ಪರಿ |
ಹರಿಸಿ ಸುಖಸರ್ವ ಸೌಭಾಗ್ಯಗಳನೀವ ಶ್ರೀ |
ಕರ ನಮ್ಮ ಕುಲದೇವತಾ ದೇವಕೀ ಕೃಷ್ಣ ಕರುಣದಿ ರಮಾಕಾಂತನು      ||೧೫೦||

ಮಂಗಲಚರಣ

ಮಂಗಲಂ ಭಗವಾನ್ ವಿಷ್ಣುಂ | ಮಂಗಲಂ ಮಧುಸೂದನ |
ಮಂಗಲಂ ದೇವಕೀಪುತ್ರೋ | ಮಂಗಲಂ ಗರುಡಧ್ವಜ  ||೧೫೧||

ಯಕ್ಷಗಾನ ರಾಧಾವಿಲಾಸ ಮುಗಿದುದು