ರಾಗ ಸಾಂಗತ್ಯ ರೂಪಕತಾಳ

ಎಲೆ ರಘೂತ್ತಮ ಕೇಳು ಶಿವನ ನೇಮದಿ ನಿಮ್ಮ | ಬಳಿಗೆ ಬಂದಿಹೆನು ನಾನಿಂದು ||
ಕಲಹವು ತಂದೆಮಕ್ಕಳಿಗೆ ಬೇಡೆನುತಲಿ | ತಿಳುಹಿಸಿ ಒಂದುಗೂಡುವರೆ    ||೪೩೪||

ವೀರ ಲಕ್ಷ್ಮಣ ಬಿಟ್ಟು ಪೋದಮೇಲೀಶ್ವರ | ಪ್ರೇರಣೆಯಿಂದಲಾನಯ್ದಿ ||
ನಾರಿ ಸೀತೆಯನೊಡಂಬಡಿಸಿಯಾಶ್ರಮವನ್ನು | ತೋರಿದೆ ವಾಲ್ಮೀಕಿಋಷಿಯ      ||೪೩೫||

ಅಲ್ಲಿರ್ದು ಪಡೆದಳು ಲವನೆಂಬಾತನ ಕೊಂಡು | ನಿಲ್ಲದೆ ಸ್ನಾನಕಯ್ದಿರಲು ||
ತಲ್ಲಣಿಸುತಲಾಗ ಕುಶವ ಮಂತ್ರಿಸಿ ಮುನಿ | ವಲ್ಲಭನಿಂದಾದ ಕುಶನು     ||೪೩೬||

ಆದರು ಸೀತೆಗೆ ಸುತರೀರ್ವರದರಿಂದ | ಲೀ ದುರಾಗ್ರಹ ಬೇಡ ನಿನಗೆ ||
ಆದಿಯೊಳ್ ಸೀತೆಗೆ ದನುಜನ ಪಠವಿತ್ತು | ಪೋದ ರಕ್ಕಸಿ ಮತ್ತೆ ಈಗ    ||೪೩೭||

ಗಾರುಡಿಯಂದದಿ ಬಂದು ನಿಮ್ಮೂರೊಳು | ಸೇರಿ ಮತ್ತೀ ಕುಮಾರರೊಳು ||
ಭಾರಿ ಯುದ್ಧವನು ಗಂಟಿಕ್ಕಿ ತಾ ಮಡಿದಳು | ಘೋರ ರಕ್ಕಸಿ ಶೂರ್ಪನಖೆಯು     ||೪೩೮||

ವಾರ್ಧಕ

ಎನಲೊಪ್ಪಿ ರಾಘವಂ ತಲೆದೂಗುತೆಂದನಿಂ |
ತೆನಗಾಯ್ತು ಕಲಹವಾ ಬಾಲಕರೊಳಿನ್ನೇವೆ |
ನೆನಿತು ಮಾತಾಡಿಸಲ್ ನುಡಿಯರೆನ್ನೊಡನೆ ನೀವಯ್ದಿಯೊಡಬಡಿಸಿರೆನಲು ||
ಮುನಿ ನಾರದಂ ಜಾಂಬವರ್ ಸಹಿತ ಬರಲವರು |
ಘನಯುದ್ಧ ಸಮಯದೊಳಗೀ ಕಪಟರೂಪದಿಂ |
ದಿನಿತಿಲ್ಲಿಗಯ್ತುಂದುದೇಕೆನಲು ನಗುತಲಾ ಯೋಗೀಂದ್ರನಿಂತೆಂದನು     ||೪೩೯||

ರಾಗ ಕೇದಾರಗೌಳ ಏಕತಾಳ

ತಾತ ತನಯರಿಂಗೆ ಯುದ್ಧ | ವೇತಕೆ ಬೇಡವೆಂದೆನುತ
ಭೂತನಾಥ ಕಳುಹಿದ ಸಂ | ಪ್ರೀತಿಯಿಂದೆನ್ನ
ಮಾತೆ ಜನಕಸುತೆಯು ರಘು | ನಾಥ ನಿಮ್ಮ ಪಿತನು ಪುಸಿಯ
ಮಾತಿದಲ್ಲ ಕೇಳಿರೆಂದ | ನಾ ತಪೋನಿಧಿ     ||೪೪೦||

ಎಲ್ಲಿ ರಾಘವರಾಯನ | ದೆಲ್ಲಿ ಜನಕತನಯೆ ಇಂಥ |
ಸಲ್ಲದ ನಾಡುವರೆ ಮುನಿ | ವಲ್ಲಭ ನೀವು     ||೪೪೧||

ಫುಲ್ಲನೇತ್ರೆ ಸೀತೆ ಮಾತೆ | ಇಲ್ಲಿ ತನಕುದ್ಧಾರ ವನ |
ದೆಲ್ಲ ಗೆಯ್ದಾತ ವಾಲ್ಮೀಕಿ | ಯಲ್ಲದೇನುಂಟು  ||೪೪೨||

ರಾಗ ನಾದನಾಮಕ್ರಿಯೆ ಅಷ್ಟತಾಳ

ಇಂತೆಂದು ಪೇಳುವ ಬಾಲಕರೊಳು ಜಾಂಬ | ವಂತನು ಪೇಳ್ದನಂದು ||
ಅಂತರಂಗದಿ ಚಂದ್ರಮತಿಯನ್ನು ನೀರ ತ | ಹಂತವಳನು ಕರೆದು        ||೪೪೩||

ಮುದ್ರೆಯುಂಗುರವಿತ್ತು ಮರನೇರ್ದ ಕುರುಹದು | ಸಿದ್ಧವೆ ಪೇಳಿ ನೀವು ||
ಬದ್ಧವೆಂದಾಕೆ ಬಂದುಸಿರ್ದರೆ ಪಿತ ರಾಮ | ಭದ್ರನು ನಿಶ್ಚಯವೆ  ||೪೪೪||

ಎಂದು ಸಂಕಲೆಯಿಂದ ಬಿಡಿಸಿ ಜಾಂಬವನಲ್ಲಿ | ಚಂದ್ರಮತಿಯ ಕರೆಸೆ ||
ಬಂದಾಕೆ ನುಡಿದಳು ಲವಕುಶರನು ಕಾಣು | ತಂದು ಸಂಪ್ರೀತಿಯಲಿ      ||೪೪೫||

ಎಲೆ ಬಾಲಕರಿರಯೆನ್ನೊಡತಿ ಜಾನಕಿ ಸೀತೆ | ತಿಳಿಯೆ ನಿಮ್ಮಯ ಮಾತೆಯು ||
ಜಲಜಾಕ್ಷಿ ರಾಮನು ಪಿತನು ನಿಶ್ಚಯವೆನ | ಲೊಲಿದವರೊಡಬಟ್ಟರು      ||೪೪೬||

ನಡೆತಂದೀರ್ವರು ರಾಮನಡಿಗೆ ವಂದಿಸಲಾಗಿ | ಪಿಡಿದಪ್ಪಿ ಮುದ್ದಿಸುತ ||
ತೊಡೆಯಲ್ಲಿ ಸುತರ ಕುಳ್ಳಿರಿಸಿಕೊಂಡಾನಂದ | ಪಡೆದನು ಚಿತ್ತದಲಿ       ||೪೪೭||

ವೀರ ಸೌಮಿತ್ರಿಯ ದೆಸೆಯಿಂದಲಿಂತಾ ಕು | ಮಾರರೆಮ್ಮೀ ರಾಮಗೆ ||
ಸೇರಿದರೆಂದು ಕೌಸಲ್ಯಾದಿ ಜನನಿಯರ್ | ಭೂರಿತೋಷದಿ ಪೇಳ್ದರು      ||೪೪೮||

ವಾರ್ಧಕ

ನಾರದಂ ಬಳಿಕ ರಘುವರನೊಳಪ್ಪಣೆಗೊಂಡು |
ಸಾರಿದಂ ಸುರನಗರಿಗಿತ್ತಲಾ ಲವಕುಶರು |
ವೀರಲಕ್ಷ್ಮಣಭರತಶತ್ರುಘ್ನರಿಂಗೆ ಕೌಸಲ್ಯಾದಿಗಳಿಗೆ ನಮಿಸೆ ||
ಭೂರಿ ಹರುಷದಿ ಪರಸಿ ರಥವೇರೆನಲ್ಕಾ ಕು |
ಮಾರಕರ್ ಜನನಿ ಜಾನಕಿ ಚಿಂತಿಸುವಳೆನುತು |
ದಾರತನದಿಂದೆ ಪೊರಮಡಲೀಕ್ಷಿಸುತ ಹನುಮನೊಡನೆಂದನಾ ರಾಮನು          ||೪೪೯||

ರಾಗ ನಾದನಾಮಕ್ರಿಯೆ ಏಕತಾಳ

ಪೋಗಿ ಬಾ ಹನುಮ ನೀ | ಸೀತೆಯಿರ್ಪೆಡೆಗೆ |
ಈಗಾದುದೆಲ್ಲವ | ಪೇಳುವುದವಳ್ಗೆ   ||೪೫೦||

ತರಳೆರೆಮ್ಮಯ ಕ್ಷೇಮ | ವರುಹಿ ಮುದ್ರೆಯುಂಗುರವ |
ತರುಣಿರನ್ನೆಗೆ ನೀಡಿ | ಮುನಿಪನ ನೋಡಿ     ||೪೫೧||

ಮನ್ನಿಸಿ ಬಾಲರ | ಕರೆದೊಡನೊಯ್ಯುವೆ |
ನೆನ್ನಲು ಬೇಹುದು | ನೀ ಮನವೊಲಿದು       ||೪೫೨||

ಭಾಮಿನಿ

ರಘುವರನೊಳಪ್ಪಣೆಯನಿಂತಾ |
ಸುಗುಣ ಹನುಮನು ಕೊಂಡು ಗಗನಕೆ |
ಚಿಗಿಯಲಿತ್ತಲು ಜನಕಸುತೆ ನಿಜನಂದನರ ಬರವ ||
ಹಗಲು ಹಾರಯ್ಸುತ್ತ ಬಾರದ |
ಬಗೆಯನೀಕ್ಷಿಸಿ ಮುನಿಯೆಡೆಗೆ ಬಂ |
ದೊಗುಮಿಗೆಯ ಶೋಕದಲಿ ಕಳವಳಗೊಂಡು ಮರುಗಿದಳು     ||೪೫೩||

ರಾಗ ಭೈರವಿ ಆದಿತಾಳ

ಅಕ್ಕಟಕ್ಕಟಿನ್ನೇವೆ ಮುನಿಪತಿ | ವಕ್ಕಣಿಸೆನಗೊಂದ ತಿಳಿಯೆನು ||
ಮಕ್ಕಳೇತಕೆ ಬಂದುದಿಲ್ಲಯ್ಯ | ಚಿಕ್ಕ ಹರೆಯದ ಚಿಣ್ಣರೆನ್ನಯ           || ಪಲ್ಲವಿ ||

ಭಾನು ಮುಳುಗದ ಮುನ್ನ ಲವನನು | ತಾನು ತರುವೆನೆಂದು || ಕುಶನನು ||
ಮಾನವಿಲ್ಲದೆ ಪೋಗಿಹನು ಮ | ತ್ತೇನಹುದೊ ಇಂದು || ರಿಪುಗಳು |
ಸೂನುಗಳಿಗೇಂಗೆಯ್ದರೆಂಬುವುದಾನು ತಿಳಿಯದಿಂದು || ಸಲೆ ಕಡು ||
ದೀನೆಯಾದೆ ನಿಧಾನಿಸಲು ಮುಂ | ದೇನು ಗತಿ ನುಡಿ ಮೌನವೇತಕೆ     ||೪೫೪||

ನಾರಿ ನಿನ್ನ ಕುಮಾರರಿಗೆ ಕಾ | ಮಾರಿದಯದಿಂದ || ಭಯವೇನ್ |
ಬಾರದೇಕವಿಚಾರ ಮನಸಿಗೆ | ತಾರದಿರು ಕಂದ || ರೀ ಕ್ಷಣ |
ಸೇರುವರು ಶುಭ ಸಾರವಾರ್ತೆಯ ತೋರ್ಪೆ ನಿನಗೆಂದಾ || ಸತಿಯನು |
ದಾರ ಮುನಿಪನು ಶೋಕ ಬಿಡಿಸಲು | ಮಾರುತಾತ್ಮಜ ಬಂದನಲ್ಲಿಗೆ      ||೪೫೫||

ಭಾಮಿನಿ

ಶೋಕವಡಗುವ ತೆರದಿ ಸೀತೆಗೆ |
ನಾಕದಿಂದಿಳಿತಂದ ಮಾರುತಿ |
ಯಾಕೆಗುಂಗುರವಿತ್ತು ವಂದಿಸಿ ಮುನಿಪಗಭಿನಮಿಸಿ ||
ಏಕಚಿತ್ತದಿ ಕೈಮುಗಿದುನಿರ್ |
ವ್ಯಾಕುಲದಿ ಸ್ತುತಿಸುತ್ತ ನಿಂದಿರೆ |
ಲೋಕಮಾತೆಯು ನುಡಿಸಿದಳು ಮನವೊಲಿದು ಮಾರುತಿಯಾ  ||೪೫೬||

ರಾಗ ಮಧುಮಾಧವಿ ಅಷ್ಟತಾಳ

ಕ್ಷೇಮವೇ ಹನುಮ | ನಮ್ಮವರಿಗೆ | ಕ್ಷೇಮವೇ ಹನುಮ ||
ನೀ ಮನವೊಲಿದಿಲ್ಲಿ ಬಂದೆ ಯಾಕೈ ತಂದೆ    || ಪಲ್ಲವಿ ||

ಭೂಮಿಪಾಲಕ ರಘುವರಗೆ | ಭರತ ಶತ್ರುಘ್ನರಿಗೆ |
ಪ್ರೇಮದಿಂ ಪ್ರಾಣದಾನವನಿತ್ತ ಪ್ರ | ವೀಣ ಲಕ್ಷ್ಮಣಧೀರಗೆ || ಕೌಸಲ್ಯಾ |

ದ್ಯಾ ಮಹಾಸತಿಯರಿಗೆ | ಬಂದಿರುವೆನ್ನ |
ಕೋಮಲ ತನಯರಿಗೆ | ಪುರದೊಳಿನ್ನು | ಎಲ್ಲವರಿಗೆ   ||೪೫೭||

ರಾಗ ಕೇದಾರಗೌಳ ಅಷ್ಟತಾಳ

ತಾಯೆ ಲಾಲಿಪುದೆನ್ನ ಬಿನ್ನಪವ | ರಾಯ ರಾಘವ ಮುಖ್ಯರ್ ಕುಶಲಿಗಳವ್ವ  || ಪಲ್ಲವಿ ||

ನಿಮ್ಮ ಮಕ್ಕಳು ಲವಕುಶರು ಸುಕ್ಷೇಮಿಗ |
ಳೆಮ್ಮ ರಾಘವನಿವರೊಳ್ ಕಾದಲಾರದೆ ಸೋತು |
ಸುಮ್ಮನಿರ್ಪಾತನನು | ಶರ್ವನ ನೇಮ |
ದಿಂ ಮುನಿ ನಾರದನು | ಬಂದು |
ಸಮ್ಮತಗೆಯ್ಸಿ ಈರ್ವರನೊಂದುಗೂಡಿಸಿ      ||೪೫೮||

ನೀವು ಚಿಂತಿಪಿರೆಂದು ಮುದ್ರೆಯುಂಗುರವಿತ್ತು |
ದೇವ ರಾಘವನು ಕಾರುಣ್ಯಭಾವದಲಿ ರಾ |
ಜೀವದಳಾಕ್ಷಿಯನು | ಸಂತಯಿಸೆನು |
ತೀ ವಿಧದಿಂದೆನ್ನನು | ಕಳುಹಿದ ಚೂ |
ಡಾಮಣಿಯನು ಕರುಣಿಸು ಬೇಗ ತಾಯೆ      ||೪೫೯||

ದ್ವಿಪದಿ

ಎಂದು ಚೂಡಾಮಣಿಯ ಕೊಂಡು ಪವನಜನು |
ಬಂದನಾ ರಾಘವನ ಪೊರೆಗಾಗಿ ತಾನು      ||೪೬೦||

ಧರಣಿಪನ ಕರದಿ ರತ್ನವನೀಯೆ ಕಂಡು |
ವಿರಹತಾಪದಲಿ ಮನಮರುಗಿ ಭ್ರಮೆಗೊಂಡು ||೪೬೧||

ಕರೆದು ಸೌಮಿತ್ರಿಯೊಳು ಪೇಳ್ದನೀ ಮಾತ |
ತೆರಳು ನೀ ವಾಲ್ಮೀಕಿಯಾಶ್ರಮಕೆ ತ್ವರಿತ     ||೪೬೨||

ಸೀತೆಯನು ಮುನಿಗುಸುರಿ ಕರೆದು ತಹುದೆಂದು |
ಪ್ರೀತಿಯಲಿ ನೇಮಿಸಲು ಪೊರಟನವನಂದು  ||೪೬೩||

ಭಾಮಿನಿ

ವರಸುಮಿತ್ರಾನಂದನನು ನಿಜ |
ಪುರವ ಪೊರಟಯ್ತಂದು ಕಂಡಾ |
ಪರಮ ಋಷಿ ವಾಲ್ಮೀಕಿಯನು ಪದಕೆರಗೆ ಹರಸುತಲಿ ||
ಭರದಲಾಸನವಿತ್ತು ಪಿರಿದುಪ |
ಚರಿಸಿ ಮನ್ನಿಸಿ ನೀನು ಬಂದಿಹ |
ಪರಿಯದೇನೆಂದೆನುತ ಬೆಸಗೊಳೆ ಪೇಳ್ದನಾ ಮುನಿಗೆ  ||೪೬೪||

ರಾಗ ಮಾರವಿ ಏಕತಾಳ

ಲಾಲಿಸು ಮುನಿಪಾಲ | ವಿಮಲಗುಣ | ಶೀಲ ಕೃಪಾಜಾಲ  || ಪಲ್ಲವಿ ||

ನಿನ್ನ ರಕ್ಷಣೆಯಿಂದ | ಜನಕಸುತೆ | ಚೆನ್ನಾಗಿರುವಳೆಂದಾ ||
ಧನ್ಯ ರಘೂತ್ತಮನು | ನೀನಿರ್ಪೆಡೆ | ಗೆನ್ನನು ಕಳುಹಿದನು       ||೪೬೫||

ಅರುಹಿ ನಿಮ್ಮೊಡನಿಂದು | ಮೈಥಿಲಿಯ | ಕರೆದು ತಂದಪುದೆಂದು ||
ಧರಣಿಪನುಸಿರಿದನು | ಮುಂದೆನ | ಗಿರುವ ಅಪ್ಪಣೆಯೇನು       ||೪೬೬||

ರಾಗ ಭೈರವಿ ಅಷ್ಟತಾಳ

ಎನಲು ಲಕ್ಷ್ಮಣಗೆಂದನು | ಏನೆನುತ ಆ | ಜನಪನ ನುಡಿಗೆ ನೀನು ||
ಜನಕಜೆಯನು ಕರೆಯಲು ಬಂದೆ ನಿನ್ನೊಳು | ಮುನಿದೆಂಬುದಲ್ಲ ನಾನು  ||೪೬೭||

ಕೊರಳನು ಕೊಯ್ವುದೆಂದು | ಅರಣ್ಯಕೆ | ತೆರಳಿಸಿದಾತನಂದು ||
ತರುಣಿ ಸೀತೆಯ ಕರೆತಹುದೆನೆ ಮರುಳಾಗಿ | ನೆರೆ ಬಂದೆ ನೀನೇನೆಂದು ||೪೬೮||

ಕಂಡಿರೆ ಮುನಿಗಳೆಲ್ಲ | ಸೀತೆಯ ಕರೆ | ಕೊಂಡು ಬಾರೆಂದನಲ್ಲ ||
ಹೆಂಡತಿ ಬೇಕಾದರಿಲ್ಲಿ ತಾ ಬರುವನು | ಭಂಡಾಟ ಸಲ್ಲವಿನ್ನು    ||೪೬೯||

ಭಾಮಿನಿ

ಎನಲು ಕೇಳುತ ಲಕ್ಷ್ಮಣನು ತಾ |
ಮನದಿ ನಗುತಲಿ ರಾಘವನೆ ಬರ |
ಲೆನಗದೇತಕೆಯೆನುತಲಪ್ಪಣೆಗೊಂಡು ತತ್ ಕ್ಷಣದಿ ||
ಜನಪನಲ್ಲಿಗೆ ಬಂದು ಕೋಪಿಸು |
ವನು ಮುನೀಂದ್ರನು ನಿಮ್ಮಡಿಯದಾ |
ವನಜನೇತ್ರೆಯ ಬಳಿಗೆ ಬಿಜಯಂಗೆಯ್ಯಬೇಕೆಂದ       ||೪೭೦||

ರಾಗ ಸೌರಾಷ್ಟ್ರ ಏಕತಾಳ

ಬಳಿಕಾ ದಿನಮಣಿ | ಕುಲಜನು ಸೀತೆಯ | ಬಳಿಗಯ್ದನು ಸನ್ನಾಹದಲಿ ||
ಬಲಿದಾ ಸೇನಾ | ಜನಧಿ ಸಹಿತ ಕಳ | ಕಳ ಮಿಗೆ ಪೊರಟನದೇನೆನಲಿ    ||೪೭೧||

ನಾನಾ ವಿಧವಹ | ಯಾನವನವರವ | ರಾನಂದದಿ ಮೆರೆಯುವರೆಂದ ||
ಸೂನು ಲವಕುಶರ | ತಾನು ಕರೆದು ನೃಪ | ನಾನೆಯನೇರಲುಬೇಕೆಂದ   ||೪೭೨||

ರಾಗ ನಾದನಾಮಕ್ರಿಯೆ ಅಷ್ಟತಾಳ

ಇಂತೆನೆ ಕೇಳುತ ಬಾಲರು | ರಘು | ಕಾಂತನನೀಕ್ಷಿಸಿ ಪೇಳ್ದರು ||
ದಂತಿಯನೇರ್ವ ಸಂಭ್ರಮವೇಕೈ | ನಮ | ಗೆಂತದಿರುವದಿರ್ಪುದು ಸಾಕೈ          ||೪೭೩||

ಕಿರುಮೊರಡಿಯು ನಮಗಾನೆಯು | ಸಿಂಹ | ಕರಡಿ ಮೃಗಂಗಳು ಸೇನೆಯು ||
ಮರನ ಕೊಂಬೆಗಳೇರ್ವ ವಾಜಿಯು | ನೋಡ | ಲರಮನೆಯದು ವನರಾಜಿಯು    ||೪೭೪||

ರಾಗ ಕಾಂಭೋಜಿ ಝಂಪೆತಾಳ

ಎಂದ ಬಾಲಕರ ಮುದ್ದಿಸುತ ರಾಘವನು ಗಜ | ಚಂದದಿಂದೇರಿಸಿದ ಬಳಿಕ ||
ಅಂದಣನ ತಾನಡರಿ ಭರತ ಲಕ್ಷ್ಮಣ ಪವನ | ನಂದನಾದ್ಯಖಿಳ ಜನಸಹಿತ         ||೪೭೫||

ಪರಮ ವೈಭವದಿ ವಾಲ್ಮೀಕಿಯಾಶ್ರಮಕಾಗಿ | ಬರಲು ಕೇಳ್ದನು ಋಷೀಶ್ವರನು ||
ನೆರಹಿದನು ಸಕಲ ಮುನಿಗಳನು ದೇವರ್ಕಳನು | ಸುರನಾರಿಯರನು ಸಂಭ್ರಮದಿ ||೪೭೬||

ಮೇರುವೆಯು ಕುರುಜು ಪಟ್ಟಾವಳಿಯ ಮೇಲ್ಗಟ್ಟು | ತೋರಣದಿ ವನವ ಸಿಂಗರಿಸಿ ||
ಭೂರಿ ಋಷಿಗಳ ವೇದ ಘೋಷದಿಂದಿರುಗೊಳ | ಲೇರಿದುತ್ಸವದಲಯ್ತಂದ ||೪೭೭||

ಕರೆದೊಯ್ದು ಪರ್ಣಶಾಲೆಗೆಯಾಸನದಿ ಕುಳ್ಳಿ | ರ್ವೆರಸಿ ಸತ್ಕಾರಪೂರ್ವದಲಿ ||
ಧರಣಿ ನಂದನೆಯ ಧಾರೆಯನೆರೆದು ಕೊಟ್ಟನತಿ | ಹರುಷ ಮಿಗೆ ಮುನಿಯು ತಾ ನೊಲಿದು   ||೪೭೮||

ನಾರದ ವಸಿಷ್ಠ ವಿಶ್ವಾಮಿತ್ರ ಮುಖ್ಯ ಮುನಿ | ವಾರ ಮಂತ್ರಾಕ್ಷತೆಯ ತಳಿಯೆ ||
ನಾರಿಯರು ಶೋಭಾನೆಗಳನು ಪಾಡುತ ಮಂಗ | ಳಾರತಿಯನೆತ್ತಿದರು ಮುದದಿ  ||೪೭೯||

ರಾಗ ಢವಳಾರ ತ್ರಿವುಡೆತಾಳ

ಸುಳಿಗುರುಳಿನ ನಿಟ್ಟಿಸಳುಗಂ | ಗಳ ಗಿಳಿಮಾತಿನ ಕನ್ನಡಿಕದಪಿನ |
ನಳಿದೋಳುಗಳ ಬಟ್ಟ ಮೊಲೆಗಳ || ಮೊಲೆಗಳ ಬಡನಡುವಿನ ಸೊಬಗಿನ |
ಕೆಳದಿಯರಾರತಿಯ ಬೆಳಗಿರೆ || ಶೋಭಾನೆ   ||೪೮೦||

ಮುನಿಮಾನಸಪಂಕಜ ಹಂಸಗೆ | ಘನದನುಜಕುಲವಿಧ್ವಂಸಗೆ |
ಮನಸಿಜಕೋಟಿರುಚಿರಗೆ || ರುಚಿರಗೆರಘುವಂಶಪ್ರಚುರಗೆ |
ಕನಕದಾರತಿಯ ಬೆಳಗಿರೆ || ಶೋಭಾನೆ      ||೪೮೧||

ರಘುವರನಿಗೆ ಸೀತೆಗೆ ಲಕ್ಷ್ಮಣ | ಗಗಣಿತಗುಣಮಣಿಯಹ ಭರತಗೆ |
ಮಿಗೆ ಶತ್ರುಹರಗೆ ಲವನಿಗೆ || ಲವನಿಗೆ ರಣಕೋವಿದ ಕುಶನಿಗೆ |
ಸುಗುಣೆಯರಾರತಿಯ ಬೆಳಗಿರೆ || ಶೋಭಾನೆ ||೪೮೨||

ವಾರ್ಧಕ

ಬಳಿಕಾ ರಘೂತ್ತಮಂ ನಾಲ್ಕು ದಿನ ಪರಿಯಂತ |
ವೊಲಿದು ಮುನಿಯಾಶ್ರಮದಲಿರ್ದು ತಾ ಮೇಲೆ ಮೈ |
ಥಿಲಿಯು ಲವಕುಶ ಸಹಿತ ವಾಲ್ಮೀಕಿಯಂಘ್ರಿಗಭಿನಮಿಸಿ ನೇಮವನು ಕೊಂಡು ||
ಸಲೆ ಸಕಲಜನರ ನೊಡಗೊಂಡಯೋಧ್ಯಾಪುರಕೆ |
ನಲವಿನಿಂದಯ್ತಂದನೆಂಬುದಂ ಸೂತಮುನಿ |
ಗಳಿಗುಸಿರಿ ನೆನೆದನಾ ಗೋಷ್ಠಪುರಪತಿಲೋಕನಾಥನ ಪದಾಂಬುಜವನು ||೪೮೩||

ಭಾಮಿನಿ

ಆ ಮಹಾ ಮುನಿವರರಿಗಿಂತಾ |
ರೋಮಹರುಷಿಣಿಯುಸಿರ್ದ ಕಥೆಯನು |
ರಾಮಣೀಯಕವೆನಲು ರಚಿಸಿದೆ ಯಕ್ಷಗಾನದಲಿ ||
ಭೂಮಿಯೊಳಗಿದ ಕೇಳ್ಪೆ ಜನರಿಗೆ |
ಕಾಮಿತಾರ್ಥವನೊಲಿದು ವ್ರಜಪುರ |
ಧಾಮಲೋಕಾಧೀಶ್ವರನು ಕರುಣಿಸುವನನವರತ      ||೪೮೪||

ಮಂಗಲ

ಸುರಮನುಮುನಿಜನಸನ್ನುತಗೆ | ಪರಮಾನಂದಗೆ ಶಾಶ್ವತಗೆ ||
ಕರುಣಾಕರನಿಗೆ ಕರುಣಾನ್ವಿತಗೆ | ದುರಿತಾಂಭೋಧರಮಾರುತಗೆ ||
ಮಂಗಲಂ ಜಯ ಮಂಗಲಂ         ||೪೮೫||

ದಕ್ಷಮಹಾಧ್ವರಭಂಜನಗೆ | ಲಕ್ಷ ದಿವಾಕರರಂಜನಗೆ ||
ಉಕ್ಷಾಧೀಶ್ವರವಾಹನನಿಗೆ ಫಾ | ಲಾಕ್ಷಗೆ ಪರತರ ಪಾವನಗೆ ||
ಮಂಗಲಂ ಜಯ ಮಂಗಲಂ         ||೪೮೬||

ಉರಗಾಭರಣಗೆ ಶಂಕರಗೆ | ಗಿರಿಜಾಧವಗೆ ಗಂಗಾಧರಗೆ ||
ಧರಣಿಗಧಿಕವ್ರಜಪುರದಲಿ ವಾಸವಾ | ಗಿರುವ ಮಹಾಸರ್ವೇಶ್ವರಗೆ ||
ಮಂಗಲಂ ಜಯ ಮಂಗಲಂ         ||೪೮೭||

ಯಕ್ಷಗಾನ ಲವಕುಶರ ಕಾಳಗ ಮುಗಿದುದು